483 ರಸ್ತೆ ಕಾಮಗಾರಿಗಳಲ್ಲಿ 72.01 ಕೋಟಿ ರೂ. ಹೆಚ್ಚುವರಿ ವೆಚ್ಚ
ಲೆಕ್ಕ ಪರಿಶೋಧನೆ ವರದಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.21: ರಸ್ತೆ ಕಾಮಗಾರಿಗಳಲ್ಲಿ ಸಬ್ ಬೇಸ್ ದಪ್ಪವನ್ನು ಕಡಿಮೆ ಮಾಡದಿರುವುದು ಸೇರಿದಂತೆ ಇನ್ನಿತರ ಲೋಪಗಳಿಂದಾಗಿ 483 ಕಾಮಗಾರಿಗಳಲ್ಲಿ 72.01 ಕೋಟಿ ರೂ.ನಷ್ಟು ಹೆಚ್ಚುವರಿ ವೆಚ್ಚವಾಗಿರುವ ಹಲವು ಪ್ರಕರಣಗಳನ್ನು ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ಬಯಲು ಮಾಡಿದ್ದಾರೆ.
ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯು ತಯಾರಿಸಿರುವ ಅಂದಾಜಿನ ಕುರಿತು ಅನಸರಣಾ ಲೆಕ್ಕ ಪರಿಶೋಧನೆ ವರದಿಯನ್ನು ವಿಧಾನಮಂಡಲಕ್ಕೆ ಸಲ್ಲಿಸಿದೆ. ಇದರ ಪ್ರತಿಯು ‘the-file.in‘ಗೆ ಲಭ್ಯವಾಗಿದೆ.
ಮಾರ್ಚ್ 2024ಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ರಸ್ತೆ ನಿರ್ಮಾಣ ಕಾಮಗಾರಿಗಳ ಅಂದಾಜುಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು ನೀಡಿರುವ ವರದಿಯು ಅಂದಾಜುಗಳ ತಯಾರಿಕೆಯ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ.
ಈ ಸಂಬಂಧ ಸಿಎಜಿಯು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿ ಲೋಕೋಪಯೋಗಿ ಇಲಾಖೆಗೆ ಅನುಸರಣೆ ಬಯಸಿತ್ತು. ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದರು. ಈ ಚರ್ಚೆಯ ನಂತರ ಸಿಎಜಿಗೆ ಅನುಸರಣೆ ಸಲ್ಲಿಸಿತ್ತು. ಆದರೆ ಈ ಅನುಸರಣೆ ನೀಡಿದ ನಂತರವೂ ಸಿಎಜಿಯು ಪಿಡಬ್ಲ್ಯೂಡಿಯ ಕಾರ್ಯವೈಖರಿಯನ್ನು ಅನಾವರಣಗೊಳಿಸಿದೆ.
ಭಾರತೀಯ ರಸ್ತೆ ಕಾಂಗ್ರೆಸ್, ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ಮತ್ತು ಕರ್ನಾಟಕ ಪಿಡಬ್ಲ್ಯೂಡಿ ಸಂಹಿತೆ ಸೂಚಿಸಿದ ಯಾವುದೇ ಮಾನದಂಡಗಳನ್ನೂ ಲೋಕೋಪಯೋಗಿ ಇಲಾಖೆಯು ಅನುಸರಿಸಿಲ್ಲ. ಈ ಅಂಶವನ್ನು ಗಮನಿಸಿರುವ ಸಿಎಜಿಯು 2019-290ರಿಂದ 2023-24ರವರೆಗೆ ಲೆಕ್ಕ ಪರಿಶೋಧನೆ ನಡೆಸಿರುವುದು ಗೊತ್ತಾಗಿದೆ.
ಲೋಕೋಪಯೋಗಿ ಇಲಾಖೆಯು ದರಗಳ ವೇಳಾಪಟ್ಟಿಯಲ್ಲಿಯೇ ಇಲಾಖೆಯು ಕೆಲವು ಹೆಚ್ಚುವರಿ ದರಗಳನ್ನು ನಿಗದಿಪಡಿಸಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ. ಉದಾಹರಣೆಗೆ ಬಿಟುಮಿನಸ್ ವಸ್ತುಗಳ ದರಗಳನ್ನು ತಲುಪುವಾಗ ರಸ್ತೆ ಲೋಹಕ್ಕೆ ಪ್ರತೀ ಘನ ಮೀಟರ್ಗೆ 1.8 ಟನ್ಗಳ ಬದಲಿಗೆ 1.5 ಟನ್ಗಳ ಸಾಂದ್ರತೆಯನ್ನು ತಪ್ಪಾಗಿ ಬಳಸಿದ್ದರಿಂದ ಆ ವಸ್ತುಗಳಿಗೆ ಉಬ್ಬಿಕೊಂಡಿರುವ ದರಕ್ಕೆ ಕಾರಣವಾಯಿತು. ಇದು 239 ಕಾಮಗಾರಿಗಳಲ್ಲಿ 24.07 ಕೋಟಿ ರೂ.ನಷ್ಟು ಹೆಚ್ಚುವರಿ ಹೊರೆಗೆ ಕಾರಣವಾಯಿತು ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಪಿಕ್ಯೂಸಿ ಎಂ 40 ಕಾಂಕ್ರಿಟ್ಗೆ ಸರಿಯಾದ ರಸ್ತೆ ಕಲಸದ ದರದ ಬದಲು ಇಲಾಖೆಯು ಹೆಚ್ಚಿನ ಕಟ್ಟಡ ಕೆಲಸದ ದರವನ್ನು ಅಳವಡಿಸಿಕೊಂಡಿರುವುದನ್ನು ಸಹ ಸಿಎಜಿಯ ಲೆಕ್ಕ ಪರಿಶೋಧನೆಯು ಬಯಲು ಮಾಡಿದೆ. ಇದ ದರಗಳನ್ನು ಹೆಚ್ಚಿಸಿತು ಅಲ್ಲದೇ 18 ಕಾಮಗಾರಿಗಳಿಗೆ 3.74 ಕೋಟಿ ರೂ.ನಷ್ಟು ಹೆಚ್ಚುವರಿ ವೆಚ್ಚಕ್ಕೆ ದಾರಿ ಮಾಡಿಕೊಟ್ಟಿರುವುದನ್ನು ವಿವರಿಸಿದೆ.
ಹಾಗೆಯೇ ದರಗಳ ವೇಳಾಪಟ್ಟಿಯಲ್ಲಿ ಅಗೆದ ಮಣ್ಣನ್ನು ಬಳಸಿ ಸಬ್ ಗ್ರೇಡ್ ಅಥವಾ ಶೋಲ್ಡರ್ ನಿರ್ಮಿಸಲು ಯಾವುದೇ ಅಂಶವನ್ನು ಸೇರಿಸಿಲ್ಲದೇ ಇರುವುದನ್ನೂ ಸಹ ಸಿಎಜಿಯು ಗಮನಿಸಿದೆ. ಒಂದು ವಿಭಾಗವು ಪ್ರತೀ ಘನ ಮೀಟರ್ಗೆ 126.56 ಡೇಟಾ ದರವನ್ನು ಪರಿಣಾಮಕಾರಿಯಾಗಿ ಬಳಸಿದರೇ ಇತರೆ ವಿಭಾಗಗಳು ಹಾಗೆ ಮಾಡಲಿಲ್ಲ. ಬದಲಿಗೆ ದುಬಾರಿ ಎರವಲು ಪಡೆದ ಮಣ್ಣನ್ನು ಆರಿಸಿಕೊಂಡವು. ಇದರಿಂದಾಗಿ 33 ಕಾಮಗಾರಿಗಳಲ್ಲಿ 3.69 ಕೋಟಿ ಹೆಚ್ಚುವರಿ ವೆಚ್ಚವಾಯಿತು ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
186 ಕಾಮಗಾರಿಗಳಲ್ಲಿ ತಪ್ಪಾದ ಐಟಂಗಳು ಅಥವಾ ದರಗಳನ್ನು ಒಳಗೊಂಡಿದ್ದವು. ಅಂದಾಜುಗಳನ್ನು 34.93 ಕೋಟಿ ರೂ. ಗಳಷ್ಟು ಹೆಚ್ಚಿಸಿವೆ. 6 ವಿಭಾಗಗಳಲ್ಲಿನ 7 ಕಾಮಗಾರಿಗಳಲ್ಲಿ ಎಸ್ಒಆರ್ ಪರಿಷ್ಕರಣೆ ಹೊರತಾಗಿಯೂ ಪರಿಷ್ಕೃತ ವಿತರಣೆ ದರಗಳನ್ನು ಅಳವಡಿಸಿಕೊಂಡಿಲ್ಲ. ಇದರಿಂದಾಗಿ 1.36 ಕೋಟಿ ರೂ.ಹೆಚ್ಚುವರಿಯಾ
ಗಿದೆ. ನಿಗದಿತಕ್ಕಿಂತ ಹೆಚ್ಚಿನ ವಿಶೇಷಣಗಳ ಬಳಕೆಯು 8.65 ಕೋಟಿ ರೂ.ಗಳಷ್ಟು ಹೆಚ್ಚುವರಿ ಅಂದಾಜುಗಳಿಗೆ ಕಾರಣವಾಗಿರುವುದನ್ನು ಸಿಎಜಿಯು ಬಹಿರಂಗಪಡಿಸಿದೆ.
ಒಟ್ಟಾರೆಯಾಗಿ ನಿಗದಿತ ಮಾನದಂಡಗಳಿಂದ ವಿಚಲನಗಳು ಮತ್ತು ಅಸಮರ್ಥ ಅಂದಾಜು ಪದ್ಧತಿಗಳು ಗಮನಾರ್ಹ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ. ಮತ್ತು ಸರಕಾರದ ಮೇಲೆ ತಪ್ಪಿಸಬಹುದಾದ ಆರ್ಥಿಕ ಹೊರೆಯನ್ನು ಉಂಟು ಮಾಡಿವೆ ಎಂದು ಸಿಎಜಿಯು ವರದಿಯಲ್ಲಿ ವಿವರಿಸಿದೆ.
ರಸ್ತೆ ಕಾಮಗಾರಿಗಳಲ್ಲಿ ಸಬ್ ಬೇಸ್ ದಪ್ಪವನ್ನು ಕಡಿಮೆ ಮಾಡದಿರುವುದು ಸಹ 31.86 ಕೋಟಿ ರೂ. ಹೆಚ್ಚುವರಿ ಅಂದಾಜಿಗೆ ಕಾರಣವಾಗಿರುವ ಪ್ರಕರಣವನ್ನೂ ಸಿಎಜಿಯು ಹೊರಗೆಳೆದಿದೆ. 10 ಕಾಮಗಾರಿಗಳಲ್ಲಿ ಲಭ್ಯವಿರುವ ಮಣ್ಣನ್ನು ಬಳಸಿಲ್ಲ. ಇದು 0.63 ಕೋಟಿ ರೂ. ಹೆಚ್ಚು ವೆಚ್ಚವಾಗಲು ಕಾರಣವಾಗಿದೆ. ಸಿಮೆಂಟ್ ಸಂಸ್ಕರಿಸಿದ ಸಬ್ ಬೇಸ್ ಮತ್ತು ಮರು ಪಡೆಯಲಾದ ಡಾಂಬರು ಪಾದಚಾರಿ ಮಾರ್ಗದಂತಹ ಆರ್ಥಿಕ ಪರ್ಯಾಯಗಳನ್ನು 13 ಕಾಮಗಾರಿಗಳಲ್ಲಿ ಅಳವಡಿಸಿಕೊಂಡಿಲ್ಲ. ಇದು ಹೆಚ್ಚುವರಿಯಾಗಿ 8.80 ಕೋಟಿ ರೂ. ವೆಚ್ಚಕ್ಕೆ ಕಾರಣವಾಯಿತು.
ಇದಲ್ಲದೇ 7 ಪ್ರಕರಣಗಳಲ್ಲಿನ ಅಂಕಗಣಿತದ ದೋಷಗಳು ವೆಚ್ಚಕ್ಕೆ ಮತ್ತೊಂದು 1.77 ಕೋಟಿ ರೂ. ಸೇರಿಸಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.






