ಗಣಿಗಾರಿಕೆಯ ಗದ್ದಲದಲ್ಲಿ ಮರೆಯಾದ 50 ಸಾವಿರ ವರ್ಷಗಳ ನಾಗರಿಕತೆ

ಸಂಡೂರಿನ ಇತಿಹಾಸ ಭಾಗ-2
ಸಂಡೂರಿನ ಬೆಟ್ಟಗಳು ಕೇವಲ ಪ್ರಕೃತಿ ಸೌಂದರ್ಯಕ್ಕಷ್ಟೇ ಪ್ರಸಿದ್ಧವಾಗಿರಲಿಲ್ಲ. ಕಬ್ಬಿಣದ ಅದಿರು, ತಾಮ್ರ, ಮ್ಯಾಂಗನೀಸ್, ದಟ್ಟ ಅರಣ್ಯ ಮತ್ತು ಸ್ವಾಭಾವಿಕ ಕೋಟೆಯಂತಿದ್ದ ಭೌಗೋಳಿಕ ವಿನ್ಯಾಸದಿಂದಾಗಿ ಅನೇಕ ರಾಜವಂಶಗಳು ಈ ಪ್ರದೇಶವನ್ನು ತಮ್ಮ ಆಡಳಿತ ವ್ಯಾಪ್ತಿಗೆ ಸೇರಿಸಿಕೊಂಡವು.
ಮೌರ್ಯರ ಪ್ರಭಾವದ ನಂತರ ಗಂಗರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಸಿಂಧರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯ, ನಂತರ ಪಾಳೆಯಗಾರರು ಹಾಗೂ ಘೋರ್ಪಡೆ ಸಂಸ್ಥಾನಿಕರು ಈ ಭಾಗವನ್ನು ಆಳಿದರು. ಪ್ರತಿಯೊಂದು ರಾಜವಂಶವೂ ದೇವಾಲಯಗಳು, ಶಾಸನಗಳು, ದಾನಪತ್ರಗಳು ಹಾಗೂ ಆಡಳಿತದ ದಾಖಲೆಗಳ ಮೂಲಕ ಸಂಡೂರಿನ ಇತಿಹಾಸದಲ್ಲಿ ತನ್ನ ಗುರುತನ್ನು ಬಿಟ್ಟಿದೆ.
ಕುಮಾರಸ್ವಾಮಿ ಕ್ಷೇತ್ರ: ಸಾವಿರ ವರ್ಷಗಳ ಇತಿಹಾಸದ ಜೀವಂತ ದಾಖಲೆ
ಇಲ್ಲಿನ ಶಾಸನಗಳು ಕ್ರಿ.ಶ. 11ನೇ ಶತಮಾನದಿಂದ 13ನೇ ಶತಮಾನದವರೆಗೆ ವಿವಿಧ ರಾಜವಂಶಗಳು ಕುಮಾರಸ್ವಾಮಿ ಕ್ಷೇತ್ರಕ್ಕೆ ನೀಡಿದ ದಾನಗಳು, ದೇವಾಲಯಗಳ ಜೀರ್ಣೋದ್ಧಾರ ಮತ್ತು ಆಡಳಿತದ ಮಾಹಿತಿಯನ್ನು ದಾಖಲಿಸಿವೆ.
ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ಹಾಗೂ ಹೊಯ್ಸಳರು ಈ ಕ್ಷೇತ್ರಕ್ಕೆ ವಿಶೇಷ ಪ್ರೋತ್ಸಾಹ ನೀಡಿದ್ದರು. ಹೊಯ್ಸಳ ರಾಜ ವೀರ ಬಲ್ಲಾಳನ ಕಾಲದ ಶಾಸನಗಳು ಇಂದಿಗೂ ಈ ಭಾಗದ ಐತಿಹಾಸಿಕ ಮಹತ್ವವನ್ನು ಸಾರುತ್ತಿವೆ.
ವಿಜಯನಗರ ಸಾಮ್ರಾಜ್ಯ ಮತ್ತು ಸಂಡೂರು
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸಂಡೂರು ಕೇವಲ ಗಡಿಭಾಗವಾಗಿರಲಿಲ್ಲ. ಇದು ಯುದ್ಧೋಪಕರಣಗಳ ತಯಾರಿಕೆ, ಕಬ್ಬಿಣದ ಉತ್ಪಾದನೆ ಹಾಗೂ ವ್ಯಾಪಾರದ ಪ್ರಮುಖ ಕೇಂದ್ರವಾಗಿತ್ತು ಎಂಬ ಅಭಿಪ್ರಾಯವನ್ನು ಅನೇಕ ಇತಿಹಾಸಕಾರರು ವ್ಯಕ್ತಪಡಿಸಿದ್ದಾರೆ.
ಅಪಾರ ಪ್ರಮಾಣದ ಕಬ್ಬಿಣದ ಅದಿರು ಮತ್ತು ಕುದುರೆಗಳಿಗೆ ಸೂಕ್ತವಾದ ಹುಲ್ಲುಗಾವಲುಗಳು ಇದ್ದ ಕಾರಣ ವಿಜಯನಗರ ಆಡಳಿತದಲ್ಲಿ ಸಂಡೂರಿಗೆ ಕಾರ್ಯತಂತ್ರದ ಮಹತ್ವ ದೊರೆತಿತ್ತು.
ತಾರಕೇಶ್ವರ ದೇವಾಲಯ, ಅಂತಾಪುರ ಹಾಗೂ ಕುರೇಕುಪ್ಪೆ ಪ್ರದೇಶಗಳ ಶಾಸನಗಳು ವಿಜಯನಗರ ಸಾಮ್ರಾಜ್ಯದ ಆಡಳಿತದ ಕುರುಹುಗಳನ್ನು ಇಂದಿಗೂ ಉಳಿಸಿಕೊಂಡಿವೆ.
ಸಂಡೂರಿನ 10 ಮಹತ್ವದ ಪುರಾತತ್ವ ನೆಲೆಗಳು
ನವಲೂಟಿ (ರಶೀದ್ ಗವಿ): ಸುಮಾರು 850 ಮೀಟರ್ ಎತ್ತರದಲ್ಲಿರುವ ಈ ಗುಹೆಯಲ್ಲಿ ಸೂಕ್ಷ್ಮ ಶಿಲಾಯುಗದ ಆಯುಧಗಳು, ಪ್ರಾಣಿಗಳ ಮೂಳೆಗಳು ಹಾಗೂ ಹಲ್ಲುಗಳ ಪಳೆಯುಳಿಕೆಗಳು ಪತ್ತೆಯಾಗಿವೆ. ಭಾರತದಲ್ಲೇ ಇಷ್ಟು ಎತ್ತರದಲ್ಲಿ ಆದಿಮಾನವನ ವಾಸ್ತವ್ಯದ ಸ್ಪಷ್ಟ ಕುರುಹುಗಳು ದೊರೆತಿರುವುದು ಅಪರೂಪ.
ಕುಮಾರಸ್ವಾಮಿ ಬೆಟ್ಟ: ಪ್ರಾಗೈತಿಹಾಸಿಕ ನೆಲೆ ಮತ್ತು ಐತಿಹಾಸಿಕ ಕ್ಷೇತ್ರ ಎರಡೂ ಆಗಿರುವ ಅಪರೂಪದ ಸ್ಥಳ. ಶಿಲಾಯುಗದ ಅವಶೇಷಗಳ ಜೊತೆಗೆ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಹಾಗೂ ವಿಜಯನಗರ ಕಾಲದ ಶಾಸನಗಳು ಮತ್ತು ದೇವಾಲಯಗಳು ಇಲ್ಲಿವೆ.
ರಾಜಾಪುರ: ಸೂಕ್ಷ್ಮ ಶಿಲಾಯುಗದ ಆಯುಧಗಳು, ನವಶಿಲಾಯುಗದ ಶಿಲಾಚಿತ್ರಗಳು, ಶಿಲಾತಾಮ್ರಯುಗದ ಕುರುಹುಗಳು ಹಾಗೂ ಬೃಹತ್ ಶಿಲಾಯುಗದ ಸಮಾಧಿಗಳು ಒಂದೇ ಪ್ರದೇಶದಲ್ಲಿ ದೊರೆತಿರುವುದು ವಿಶೇಷ.
ದರೋಜಿ: ಹಳೆ ಶಿಲಾಯುಗದಿಂದ ನವಶಿಲಾಯುಗದವರೆಗೆ ಮಾನವ ನೆಲೆಸಿದ್ದ ಪ್ರಮುಖ ತಾಣ. ಕಲ್ಲಿನ ಕೊಡಲಿಗಳು, ಉಜ್ಜಿದ ಆಯುಧಗಳು ಮತ್ತು ನವಶಿಲಾಯುಗದ ಅವಶೇಷಗಳು ಇಲ್ಲಿ ಪತ್ತೆಯಾಗಿವೆ.
ಕುರೇಕುಪ್ಪೆ ಬೆಟ್ಟ: ಹಳೆ ಶಿಲಾಯುಗ ಮತ್ತು ಮಧ್ಯಶಿಲಾಯುಗದ ಆಯುಧಗಳ ಉತ್ಪಾದನಾ ಕೇಂದ್ರವಾಗಿರಬಹುದೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಇಲ್ಲಿ ಕೈಕೊಡಲಿಗಳು, ಬ್ಲೇಡ್‌ಗಳು ಮತ್ತು ವಿವಿಧ ಶಿಲಾಯುಧಗಳು ದೊರೆತಿವೆ.
ಇಂಗಳಿಗಿ: ದಕ್ಷಿಣ ಭಾರತದ ಪ್ರಸಿದ್ಧ ಬೂದಿದಿಬ್ಬ ಸಂಸ್ಕೃತಿಗೆ ಸೇರಿದ ಪ್ರಮುಖ ನೆಲೆ. ಇಲ್ಲಿನ ಪುರಾವೆಗಳು ನವಶಿಲಾಯುಗದ ಪಶುಪಾಲನೆ ಮತ್ತು ಗ್ರಾಮೀಣ ಜೀವನದ ಅಧ್ಯಯನಕ್ಕೆ ಅತ್ಯಂತ ಮಹತ್ವದ್ದಾಗಿವೆ.
ಭೈರನಾಯಕನಹಳ್ಳಿ: ಬೃಹತ್ ಶಿಲಾಯುಗದ ವಿವಿಧ ಮಾದರಿಯ ಕಲ್ಲಿನ ಸಮಾಧಿಗಳು ಹಾಗೂ ಶಿಲಾರಚನೆಗಳು ಇಲ್ಲಿ ಪತ್ತೆಯಾಗಿವೆ. ಇದು ಕಬ್ಬಿಣಯುಗದ ಮಾನವನ ಶವಸಂಸ್ಕಾರದ ಅಧ್ಯಯನಕ್ಕೆ ಪ್ರಮುಖ ತಾಣವಾಗಿದೆ.
ಯಶವಂತನಗರ: ಸೂಕ್ಷ್ಮ ಶಿಲಾಯುಗದ ಬ್ಲೇಡ್‌ಗಳು, ಪಾಯಿಂಟ್‌ಗಳು ಹಾಗೂ ಕಬ್ಬಿಣ ಕರಗಿಸುವ ಕುಲುಮೆಗಳ ಕುರುಹುಗಳು ದೊರೆತಿರುವ ವಿಶಿಷ್ಟ ಪ್ರದೇಶ.
ಲಕ್ಕಿಹಳ್ಳಿ-ಅಂತಾಪುರ: ಶಿಲಾಚಿತ್ರಗಳು, ಕುಟ್ಟಚಿತ್ರಗಳು ಹಾಗೂ ಮಾನವ ಮತ್ತು ಪ್ರಾಣಿಗಳ ಆಕೃತಿಗಳನ್ನು ಹೊಂದಿರುವ ಪ್ರಾಚೀನ ಕಲಾತಾಣ. ಇಲ್ಲಿನ ಶಿಲಾಕಲೆಗಳು ಆದಿಮಾನವನ ಸಾಂಸ್ಕೃತಿಕ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತವೆ.
ತಾರನಗರ-ಅಂಕಮನಾಳೆ ಪ್ರದೇಶ: ಬೃಹತ್ ಶಿಲಾಯುಗದ ಕಲ್ಲಿನ ಸಮಾಧಿಗಳು, ಕಬ್ಬಿಣ ಕರಗಿಸುವ ಅವಶೇಷಗಳು ಹಾಗೂ ನಂತರದ ಐತಿಹಾಸಿಕ ಕುರುಹುಗಳು ಈ ಪ್ರದೇಶವನ್ನು ಬಹುಪದರದ ಪುರಾತತ್ವ ನೆಲೆಯನ್ನಾಗಿ ಮಾಡಿವೆ.
ಸಂಡೂರಿಗೆ ವಿಶ್ವ ಪಾರಂಪರಿಕ ತಾಣವಾಗುವ ಅರ್ಹತೆ ಇದೆಯೇ?
ಪುರಾತತ್ವ ತಜ್ಞರ ಅಭಿಪ್ರಾಯದಂತೆ, ಹಳೆ ಶಿಲಾಯುಗದಿಂದ ಐತಿಹಾಸಿಕ ಕಾಲದವರೆಗೆ ನಿರಂತರ ಮಾನವ ವಾಸದ ಸಾಕ್ಷ್ಯಗಳು ಒಂದೇ ಭೌಗೋಳಿಕ ಪ್ರದೇಶದಲ್ಲಿ ಲಭ್ಯವಾಗಿರುವುದು ಅತ್ಯಂತ ಅಪರೂಪ. ಈ ಹಿನ್ನೆಲೆಯಲ್ಲಿ ಸಂಡೂರಿನಲ್ಲಿ ವೈಜ್ಞಾನಿಕ ಉತ್ಖನನ, ಡಿಜಿಟಲ್ ದಾಖಲಾತಿ, ಸಂರಕ್ಷಣೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಧ್ಯಯನಗಳು ನಡೆದರೆ, ಈ ಪ್ರದೇಶವು ಭವಿಷ್ಯದಲ್ಲಿ ವಿಶ್ವದ ಪ್ರಮುಖ ಪ್ರಾಗೈತಿಹಾಸಿಕ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ಬೆಳೆಯುವ ಸಾಧ್ಯತೆ ಇದೆ.
ರಶೀದ್ ಗವಿ ಸಂಶೋಧನೆ, ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಸಂಡೂರಿನ ಭವಿಷ್ಯ
ಸಂಡೂರಿನ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ ನೀಡಿರುವುದು ನವಲೂಟಿ (ರಶೀದ್ ಗವಿ) ಗುಹೆಯಲ್ಲಿ ನಡೆದ ಇತ್ತೀಚಿನ ಸಂಶೋಧನೆ. ಸುಮಾರು ಒಂದೂವರೆ ಶತಮಾನಗಳ ಹಿಂದೆ ರಾಬರ್ಟ್ ಬ್ರೂಸ್ ಫುಟ್ ಅವರು ಬಳ್ಳಾರಿ-ಸಂಡೂರು ಪ್ರದೇಶದ ಶಿಲಾಯುಗದ ನೆಲೆಗಳನ್ನು ಗುರುತಿಸಿ ದಕ್ಷಿಣ ಭಾರತದ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಈಗ ರಶೀದ್ ಗವಿಯಲ್ಲಿ ದೊರೆತ ಹೊಸ ಪುರಾವೆಗಳು ಆ ಅಧ್ಯಯನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆಯನ್ನು ತೆರೆದಿವೆ.
ರಶೀದ್ ಗವಿ: ಭಾರತದಲ್ಲೇ ಅಪರೂಪದ ಆದಿಮಾನವನ ಆಶ್ರಯಸ್ಥಾನ
ಸಮುದ್ರಮಟ್ಟದಿಂದ ಸುಮಾರು 850 ಮೀಟರ್ ಎತ್ತರದಲ್ಲಿರುವ ರಶೀದ್ ಗವಿ, ದಟ್ಟ ಅರಣ್ಯದಿಂದ ಆವೃತವಾಗಿದೆ. ಗುಹೆಯ ನೆಲವು ಭೂಮಿಯಿಂದ ಸುಮಾರು 100 ಅಡಿ ಎತ್ತರದಲ್ಲಿದ್ದು, ಸುಮಾರು 45 ಅಡಿ ಅಗಲ ಹೊಂದಿದೆ. ಗುಹೆಯೊಳಗೆ 9-10 ಅಡಿ ದಪ್ಪದ ಸಾಂಸ್ಕೃತಿಕ ಪದರಗಳು ಕಂಡುಬಂದಿವೆ. ಇದೇ ಪದರಗಳಲ್ಲಿ ಸೂಕ್ಷ್ಮ ಶಿಲಾಯುಗದ ಉಪಕರಣಗಳು ಮತ್ತು ಪ್ರಾಣಿಗಳ ಪಳೆಯುಳಿಕೆಗಳು ಪತ್ತೆಯಾಗಿರುವುದು ಈ ಸಂಶೋಧನೆಯ ಮಹತ್ವವನ್ನು ಹೆಚ್ಚಿಸಿದೆ
ಸೂಕ್ಷ್ಮ ಶಿಲಾಯುಧಗಳು ಹೇಳುವ 20,000-30,000 ವರ್ಷಗಳ ಕಥೆ
ಗುಹೆಯ ನೆಲದಲ್ಲಿ ನೂರಾರು ಸೂಕ್ಷ್ಮ ಶಿಲಾಯುಗದ ಉಪಕರಣಗಳು ಪತ್ತೆಯಾಗಿವೆ. ಬ್ಲೇಡ್‌ಗಳು, ಚೂಪಾದ ತುದಿಯ ಆಯುಧಗಳು ಮತ್ತು ಸಣ್ಣ ಕಲ್ಲಿನ ಉಪಕರಣಗಳು ಮಧ್ಯಶಿಲಾಯುಗದ ತಂತ್ರಜ್ಞಾನವನ್ನು ಹೋಲುತ್ತವೆ.
ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ, ಈ ಉಪಕರಣಗಳು ಸುಮಾರು 20 ಸಾವಿರದಿಂದ 30 ಸಾವಿರ ವರ್ಷಗಳ ಹಿಂದಿನವುಗಳಾಗಿರಬಹುದು. ಆದರೆ ಇದು ಅಂತಿಮ ನಿರ್ಧಾರವಲ್ಲ. ನಿಖರ ಕಾಲನಿರ್ಣಯಕ್ಕಾಗಿ ವೈಜ್ಞಾನಿಕ ಪರೀಕ್ಷೆಗಳು ಅಗತ್ಯವೆಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಾಣಿಗಳ ಮೂಳೆಗಳು ಮತ್ತು ಹಲ್ಲುಗಳು ಏನು ಹೇಳುತ್ತವೆ?
ಗುಹೆಯಲ್ಲಿ ಪತ್ತೆಯಾದ ಮೂಳೆಗಳು ಹಾಗೂ ಹಲ್ಲುಗಳ ಪಳೆಯುಳಿಕೆಗಳಲ್ಲಿ ಕೆಲವು ದನ ಮತ್ತು ಮೇಕೆ ವರ್ಗದ ಪ್ರಾಣಿಗಳದ್ದಾಗಿರಬಹುದು ಎಂಬ ಪ್ರಾಥಮಿಕ ಅಭಿಪ್ರಾಯ ವ್ಯಕ್ತವಾಗಿದೆ. ಜೊತೆಗೆ ಕೆಲವು ಕಾಡುಪ್ರಾಣಿಗಳ ಅವಶೇಷಗಳೂ ದೊರೆತಿವೆ.
ಈ ಪಳೆಯುಳಿಕೆಗಳನ್ನು ಕಾರ್ಬನ್-14 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದರ ಮೂಲಕ ಅವುಗಳ ನಿಖರ ಕಾಲ, ಆಹಾರ ಪದ್ಧತಿ, ಪರಿಸರ ಹಾಗೂ ಆ ಕಾಲದ ಜೀವವೈವಿಧ್ಯದ ಬಗ್ಗೆ ಮಹತ್ವದ ಮಾಹಿತಿ ದೊರೆಯುವ ನಿರೀಕ್ಷೆಯಿದೆ.
ರೇಡಿಯೋಮೆಟ್ರಿಕ್ ಕಾಲನಿರ್ಣಯ ಏಕೆ ಅಗತ್ಯ?
ಪ್ರಾಗೈತಿಹಾಸಿಕ ಅಧ್ಯಯನದಲ್ಲಿ ಕಲ್ಲಿನ ಆಯುಧಗಳನ್ನು ಮಾತ್ರ ನೋಡಿ ಅವುಗಳ ವಯಸ್ಸು ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ವೈಜ್ಞಾನಿಕ ಕಾಲನಿರ್ಣಯ ಅತ್ಯಗತ್ಯ.
ಶ್ರೀಲಂಕಾದ ಗುಹೆಗಳೊಂದಿಗೆ ಹೋಲಿಕೆ
ಪ್ರೊ. ರವಿ ಕೊರಿಸೆಟ್ಟರ್ ಅವರ ಅಭಿಪ್ರಾಯದಂತೆ, ಶ್ರೀಲಂಕಾದ ಮಳೆಕಾಡು ಪ್ರದೇಶಗಳಲ್ಲಿರುವ ಕೆಲವು ಗುಹೆಗಳಲ್ಲಿ ಸುಮಾರು 50 ಸಾವಿರ ವರ್ಷಗಳ ಹಿಂದಿನ ಮಾನವ ವಾಸ್ತವ್ಯದ ಪುರಾವೆಗಳು ದೊರೆತಿವೆ. ಆ ಗುಹೆಗಳು ಸಮುದ್ರಮಟ್ಟದಿಂದ ಸುಮಾರು 450 ಮೀಟರ್ ಎತ್ತರದಲ್ಲಿವೆ.
ಆದರೆ ರಶೀದ್ ಗವಿ ಸುಮಾರು 850 ಮೀಟರ್ ಎತ್ತರದಲ್ಲಿರುವುದರಿಂದ, ಇಂತಹ ಎತ್ತರದ ಪ್ರದೇಶದಲ್ಲಿ ಆದಿಮಾನವ ವಾಸ್ತವ್ಯ ನಡೆಸಿದ್ದ ಸಾಧ್ಯತೆಯನ್ನು ಇದು ಹೊಸದಾಗಿ ಚರ್ಚೆಗೆ ತರುತ್ತದೆ. ಈ ಕಾರಣದಿಂದ ರಶೀದ್ ಗವಿ ದಕ್ಷಿಣ ಏಷ್ಯಾದ ಪ್ರಾಗೈತಿಹಾಸಿಕ ಅಧ್ಯಯನದಲ್ಲಿ ವಿಶೇಷ ಮಹತ್ವ ಪಡೆಯುವ ಸಾಧ್ಯತೆ ಇದೆ.
ಇದು ಕೇವಲ ಒಂದು ಗುಹೆಯ ಆವಿಷ್ಕಾರವಲ್ಲ
ಸಂಡೂರಿನ ಪ್ರಾಚೀನ ಇತಿಹಾಸವನ್ನು ವೈಜ್ಞಾನಿಕವಾಗಿ ಮರುಬರೆಯುವ ಅವಕಾಶವಾಗಿದೆ. ಬಹುಶಾಸ್ತ್ರೀಯ ಸಂಶೋಧನೆ ಮತ್ತು ರೇಡಿಯೋಮೆಟ್ರಿಕ್ ಪರೀಕ್ಷೆಗಳ ಮೂಲಕ ಈ ಪ್ರದೇಶದ ನಿಖರ ಕಾಲಮಾನವನ್ನು ನಿರ್ಧರಿಸಬೇಕು. ಇಂತಹ ಅಧ್ಯಯನಗಳು ಜಗತ್ತಿನ ಪ್ರಾಗೈತಿಹಾಸಿಕ ತಜ್ಞರನ್ನು ಸಂಡೂರಿನತ್ತ ಸೆಳೆಯುವ ಸಾಮರ್ಥ್ಯ ಹೊಂದಿವೆ.
-ನಾಗೇಂದ್ರ ಪ್ರಸಾದ್,
ಜಿಲ್ಲಾಧಿಕಾರಿ
ಭಾರತದಲ್ಲಿ ಸಮುದ್ರಮಟ್ಟದಿಂದ ಇಷ್ಟು ಎತ್ತರದಲ್ಲಿ ಆದಿಮಾನವ ವಾಸ್ತವ್ಯ ನಡೆಸಿದ್ದಕ್ಕೆ ಇಷ್ಟೊಂದು ಸ್ಪಷ್ಟ ಪುರಾವೆಗಳು ದೊರೆತಿರುವ ಇನ್ನೊಂದು ಸ್ಥಳ ನಮಗೆ ತಿಳಿದಿಲ್ಲ. ರಶೀದ್ ಗವಿ ಭಾರತದ ಪ್ರಾಗೈತಿಹಾಸಿಕ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನ ಪಡೆಯುವ ಸಾಮರ್ಥ್ಯ ಹೊಂದಿದೆ.
-ಪ್ರೊ. ರವಿ ಕೋರಿಶೆಟ್ಟರ್,
ಪ್ರಾಗೈತಿಹಾಸಿಕ ತಜ್ಞ
ಸಂಶೋಧನಾ ತಂಡದ ಪಾತ್ರ
ರಶೀದ್ ಗವಿಯ ಅಧ್ಯಯನದಲ್ಲಿ ಪ್ರಾಗೈತಿಹಾಸಿಕ ತಜ್ಞರು, ಭೂವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಆಡಳಿತಾಧಿಕಾರಿಗಳು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಮಹಮ್ಮದ್ ಹ್ಯಾರಿಸ್ ಸುಮೇರ್ ಭಾಗವಹಿಸಿದ್ದರು. ಈ ತಂಡದಲ್ಲಿ ಪ್ರೊ. ರವಿ ಕೊರಿಸೆಟ್ಟರ್, ಡಾ. ಸಮದ್ ಕೊಟ್ಟೂರ್, ಸಂತೋಷ್ ಮಾರ್ಟಿನ್, ಅಹಿರಾಜ್ ಎಂ., ವಿವಿಧ ಸಂಶೋಧಕರು ಹಾಗೂ ಜಿಲ್ಲಾ ಆಡಳಿತದ ಅಧಿಕಾರಿಗಳು ಸೇರಿದ್ದರು.






