ಮನೆ ಬಿದ್ದು ವರ್ಷ ಕಳೆದರೂ ಪರಿಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬ

ಬೀದರ್: ಮನೆ ಬಿದ್ದು ವರ್ಷ ಕಳೆದರೂ ಪರಿಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬ ಬೇರೆಯವರ ಮನೆಯಲ್ಲಿ ಆತಂಕದಲ್ಲಿ ಜೀವನ ನಡೆಸುವ ಪರಿಸ್ಥಿತಿ ಬೀದರ್ ತಾಲೂಕಿನ ಔರಾದ್ (ಎಸ್) ಗ್ರಾಮದ ಲಕ್ಷ್ಮೀ ಎಂಬವರ ಕುಟುಂಬಕ್ಕೆ ಎದುರಾಗಿದೆ.
ಎರಡು ಕೋಣೆಗಳಿದ್ದ ಹಳೆಯ ಮನೆ ಹೋದ ವರ್ಷದ ಮಳೆಗಾಲದಲ್ಲಿ ಕುಸಿದುಬಿದ್ದು ಕುಟುಂಬಕ್ಕೆ ಬೇರೆ ಯಾವುದೇ ಆಧಾರವಿಲ್ಲದೆ ಬೇರೆಯವರ ಮನೆಯಲ್ಲಿ ವಾಸವಿತ್ತು. ಮನೆ ಬಿದ್ದಾಗ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿ, ಸಿಬ್ಬಂದಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯ ಫೊಟೊ ತೆಗೆದುಕೊಂಡು ಹೋಗಿದ್ದರು. ಇದರಿಂದಾಗಿ ನಾವು ಇಂದೊ, ನಾಳೆಯೋ ಪರಿಹಾರ ಸಿಗಬಹುದು ಎಂದು ಕಾಯುತ್ತಿದ್ದೇವೆ ಆದರೆ ನಮಗೆ ಸರಕಾರದಿಂದ ಇಲ್ಲಿವರೆಗೆ ಯಾವುದೇ ರೀತಿಯ ಪರಿಹಾರ ದೊರಕಲಿಲ್ಲ. ನಮ್ಮ ಕುಟುಂಬ ಬೀದಿ ಪಾಲಾಗಿದೆ ಎಂದು ಸಂತ್ರಸ್ತೆ ಲಕ್ಷ್ಮೀ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈ ಬಗ್ಗೆ ಕೆಲ ದಿನಗಳ ಹಿಂದೆ ತಹಶೀಲ್ದಾರ್ ಕಚೇರಿಗೆ ಹೋಗಿ ಪತ್ರ ನೀಡಿದ್ದೇನೆ. ಆದರೆ ಅಲ್ಲಿ ಅನುದಾನ ಬಂದಿಲ್ಲ, ಗ್ರಾಮ ಲೆಕ್ಕಾಧಿಕಾರಿಗೆ ತಿಳಿಸಿ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳು ನಮ್ಮನ್ನು ತುಂಬಾ ಸತಾಯಿಸುತ್ತಿದ್ದಾರೆ. ನಾವು ಸದ್ಯಕ್ಕೆ ಬೇರೆಯವರ ಮನೆಯಲ್ಲಿದ್ದೇವೆ. ಆ ಮನೆಯವರು ಕೂಡ ನಮ್ಮನ್ನು ಹೊರಹಾಕುವುದಕ್ಕೆ ತಯಾರಾಗಿದ್ದಾರೆ ಎಂದು ಲಕ್ಷ್ಮೀ ಅವರ ಮಗ ಬೇಸರ ವ್ಯಕ್ತಪಡಿಸಿದ್ದಾರೆ.
ಮನೆಗೆ ಆಧಾರ ಸ್ಥಂಬವಾಗುರುವ ಲಕ್ಷ್ಮೀ ಅವರ ಪತಿ ನಿಧನರಾಗಿದದು, ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುಟುಂಬಕ್ಕೆ ಸರಕಾರದಿಂದ ಪರಿಹಾರವು ಇಲ್ಲ, ಮನೆಯೂ ಇಲ್ಲದಾಗಿದೆ. ಪರಿಹಾರ ಮತ್ತು ಮನೆ ಮಂಜೂರಾತಿಗಾಗಿ ಕಾಯುತ್ತಾ ಕುಳಿತಿರುವ ಈ ಕುಟುಂಬ ಸದ್ಯಕ್ಕೆ ಬೇರೆಯವರ ಮನೆಯಲ್ಲಿ ವಾಸವಿದೆ.
ಲಕ್ಷ್ಮೀ ಅವರ ಓರ್ವ ಮಗ ಓದುತ್ತಿದ್ದು, ಇನ್ನೊಬ್ಬ ಮಗ ಕೂಲಿ ಕೆಲಸ ಮಾಡಿಕೊಂಡು ಇದ್ದಾರೆ. ಲಕ್ಷ್ಮೀ ಅವರಿಗೆ ವಯಸ್ಸಾಗಿದ್ದು, ಅವರಿಗೆ ಕೆಲಸ ಮಾಡಲು ಆಗುತ್ತಿಲ್ಲ. ಇಂಥ ಒಂದು ಪರಿಸ್ಥಿತಿಯಲ್ಲಿರುವ ಅವರು ಮನೆ ಕಟ್ಟಿಕೊಳ್ಳುವಷ್ಟು ಶಕ್ತರಲ್ಲ. ಹಾಗಾಗಿ ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನ ಹರಿಸಿ ಆ ಕುಟುಂಬಕ್ಕೆ ಆಸರೆ ನೀಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
ಕಳೆದ ವರ್ಷದ ಮಳೆಯಲ್ಲಿ ನಮ್ಮ ಮನೆ ಕುಸಿದು ಬಿದ್ದಿದೆ. ಇಲ್ಲಿವರೆಗೆ ಯಾವುದೇ ಪರಿಹಾರ ನಮಗೆ ದೊರಕಲಿಲ್ಲ. ಊರಲ್ಲಿರುವ ಬೇರೆಯವರ ಮನೆಯಲ್ಲಿ ನಾವು ದಿನ ದೂಡುತ್ತಿದ್ದೇವೆ. ನಾವು ಕಡು ಬಡವರಾಗಿದ್ದು, ನಮ್ಮಿಂದ ಮನೆ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸರಕಾರದವರು ನಮಗೆ ಮನೆ ಕಟ್ಟಿಕೊಟ್ಟರೆ ಉಪಕಾರವಾಗುತ್ತದೆ.
-ಲಕ್ಷ್ಮೀ, ಸಂತ್ರಸ್ತೆ
ನಾವು ಎಲ್ಲ ಅಧಿಕಾರಿ ಮತ್ತು ಶಾಸಕರನ್ನು ಭೇಟಿಯಾಗಿದ್ದೇವೆ. ಮೀನುಗಾರಿಕೆ ಇಲಾಖೆಯಲ್ಲಿ ಮನೆ ಸಿಗುತ್ತದೆ ಎಂದು ಯಾರೋ ಹೇಳಿದ್ದರಿಂದ ಅಲ್ಲಿಯೂ ಹೋಗಿದ್ದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಸರಕಾರ ನಮಗೆ ಪರಿಹಾರಧನ ಮತ್ತು ಒಂದು ಮನೆ ಕಟ್ಟಿಕೊಡಬೇಕು.
-ಅನಿರುದ್ಧ್, ಲಕ್ಷ್ಮೀ ಅವರ ಪುತ್ರ







