ಜಿಬನ್ ಘೋಷಲ್ ಎಂಬ ಮಿಂಚು: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಭಾಗ - 15
ಸ್ವಾತಂತ್ರ್ಯ ಹೋರಾಟದ ನೆತ್ತರ ನದಿಯ ತೊರೆಗಳಾಗಿ ನೂರಾರು ಮಂದಿ ಹುತಾತ್ಮರಾಗಿದ್ದಾರೆ. ಇವರ ಬಗ್ಗೆ ಕನಿಷ್ಠ ಮಾಹಿತಿಯೂ ನಮಗಿಲ್ಲ ಅನ್ನುವುದು ನಮ್ಮ ಅವಜ್ಞೆಯ ಸಂಕೇತ. ನಮಗೇ ಈ ಇತಿಹಾಸದ ರಕ್ತಸಿಕ್ತ ಪಾದಗಳ ಹೆಜ್ಜೆಗುರುತು ಅರಿವಿಲ್ಲವೆಂದರೆ ಈಗಿನ ವಾಟ್ಸ್‌ಆ್ಯಪ್ ಮಾಯಾಜಾಲಕ್ಕೆ ಒಳಗಾದವರ ಬಗ್ಗೆ ಆಕ್ಷೇಪಿಸುವುದೂ ಆತ್ಮವಂಚನೆ.
ಸರಕಾರ ಈ ಬಗ್ಗೆ ಏನು ಮಾಡಬೇಕಿತ್ತೋ ಅಷ್ಟು ಮಾಡಿದ ಪುರಾವೆಗಳಿವೆ. ಆದರೆ ಸಮಾಜ ಸಂಘಟನೆಗಳು ಈ ನೆನಪನ್ನು ನಮ್ಮಲ್ಲಿ ಊರಿಸಬೇಕು.
‘‘ಆರಸ್ಸೆಸ್ ಬಗ್ಗೆ ಯಾಕೆ ಸಾರ್ ಆಕ್ಷೇಪ?’’ ಎಂದು ಕೆಲವರು ನನ್ನಲ್ಲಿ ಕೇಳುತ್ತಿದ್ದಾರೆ. ನೂರು ವರ್ಷದ ಇತಿಹಾಸದಲ್ಲಿ ತನ್ನ ಸಿದ್ಧಾಂತದ ಪ್ರತಿನಿಧಿಗಳನ್ನು ಮಾತ್ರ ವೈಭವೀಕರಿಸುತ್ತಾ ಉಳಿದವರು ಇರಲೇ ಇಲ್ಲ ಎಂಬಂತೆ ಆರೆಸ್ಸೆಸ್ ಮಾಹಿತಿ ಹಂಚಿದೆ. ಉದಾ: ಸಾವರ್ಕರ್. ನನ್ನ ಹದಿಹರೆಯದಲ್ಲೇ ಅದಮ್ಯ ಓದಿ ಮಂತ್ರಮುಗ್ಧನಾದವನು ನಾನು. ಅಲ್ಲಿಂದಾಚೆಗೆ ಈ ವೈಭವೀಕರಣ ಎಷ್ಟಾಗಿದೆ ಎಂಬುದು ನಾವೆಲ್ಲರೂ ಬಲ್ಲೆವು. ಸಾವರ್ಕರ್ ಅವರ ಕುರಿತಾದ ಸತ್ಯಗಳನ್ನು ಮರೆಮಾಚಿದ್ದು ಒಂದಾದರೆ ಅವರಿಗಿಂತ ಎಷ್ಟೋ ಪಟ್ಟು ಧೀರೋದಾತ್ತ ಕ್ರಾಂತಿಯ ಕೆಲಸ ಮಾಡಿದವರನ್ನೆಲ್ಲಾ ಅಂಚಿಗೆ ಸರಿಸಿದ ದುಷ್ಟತನವನ್ನು ನಾವು ಅನಾವರಣಗೊಳಿಸಬೇಕಿದೆ. ಭಗತ್ ಸಿಂಗ್ ಉಗ್ರ ಎಡಪಂಥೀಯನಾಗಿದ್ದ ಎಂಬುದನ್ನು ಅಳಿಸಿ ಭಗತ್ ಫೋಟೊವನ್ನು ಆರೆಸ್ಸೆಸ್ ಪ್ರದರ್ಶಿಸುತ್ತಿತ್ತು. ಅಂಡಮಾನ್‌ನಲ್ಲಿ ಸಾವರ್ಕರ್ ಅವರಿಗಿಂತಲೂ ಘೋರ ಹಿಂಸೆ ಅನುಭವಿಸಿದವರೆಲ್ಲಾ ಎಡಪಂಥಕ್ಕೊಲಿದ ಕ್ರಾಂತಿಕಾರಿಗಳು ಎನ್ನುವುದೇ ಆರೆಸ್ಸೆಸ್‌ಗೆ ಅರಗಿಸಿಕೊಳ್ಳಲಾರದ ಸತ್ಯ.
ಈ ಕ್ರಾಂತಿಕಾರಿಗಳು ಮತ್ತೆ ಮತ್ತೆ ಹೋರಾಟದ ಅಗ್ನಿಕುಂಡಕ್ಕೆ ಧುಮುಕಿ ಸಾವಿನ ಕದ ತಟ್ಟಿದಾಗಲೂ ತಮ್ಮ ಸೈದ್ಧಾಂತಿಕ ನಿಷ್ಠೆಯನ್ನು ಮರೆಮಾಚಲಿಲ್ಲ. ಸ್ವಾತಂತ್ರ್ಯ ಬಂದ ಬಳಿಕವೂ ಇವರೆಲ್ಲಾ ಎಡ ಪಂಥದ ಕಾರ್ಯಕರ್ತರಾಗಿಯೇ ಮುಂದುವರಿದರು.
ಈ ಕಾಲದಲ್ಲೇ ಗೋಳ್ವಾಲ್ಕರ್ ಕಮ್ಯುನಿಸಂ ನಮ್ಮ ಮೊದಲ ಶತ್ರು ಎಂದು ಘೋಷಿಸಿದ್ದರು. ಅಂದರೆ ಈ ಎಲ್ಲಾ ಕ್ರಾಂತಿಕಾರಿಗಳನ್ನು ಅವರು ನಿರಾಕರಿಸಿದ್ದರೆಂದೇ ಅರ್ಥ. ಆರೆಸ್ಸೆಸ್ ಈ ಸೈದ್ಧಾಂತಿಕ ಆದೇಶವನ್ನು ಪಾಲಿಸಿ ಮುಂದುವರಿಸಿದೆ; ಅಷ್ಟೆ.
ಬಂಗಾಲಿಯಲ್ಲಿ ಈ ಧೀರೋದಾತ್ತ ಹುತಾತ್ಮರ ಬಗ್ಗೆ ಒಂದಷ್ಟು ಮಾಹಿತಿ ಇದೆಯಂತೆ. ಅವನ್ನೆಲ್ಲಾ ಹುಡುಕಿ ಅವರನ್ನು ಮರು ಸ್ಥಾಪಿಸಬೇಕಾಗಿದೆ.
ಕೇವಲ ಒಂದು ಪುಟದಷ್ಟು ವಿವರ ಇರುವ ಈ ಜಿಬನ್ ಘೋಷಲ್ ಎಂಬ ಹುತಾತ್ಮನ ವಿವರ ನೋಡಿ. ತನ್ನ 18ನೇ ವಯಸ್ಸಿಗೇ ಈತ ಹುತಾತ್ಮನಾಗಿದ್ದ.
ಜಿಬನ್ ಘೋಷಲ್ ಎಂಬ ಅಂಚಿಗೆ ಸರಿದ ಹುತಾತ್ಮ ಜಿಬನ್ ಘೋಷಲ್ ಬಂಗಾಳದ ಇನ್ನೊಬ್ಬ ಕ್ರಾಂತಿಕಾರಿ. ಜೂನ್, 26 1912ರಂದು ಚಿತ್ತಗಾಂಗ್‌ನ ಶ್ರೀಮಂತ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದ ಘೋಷಲ್ ಅವರು ಮಕನ್ ಲಾಲ್ ಎಂಬ ಹೆಸರಿನಿಂದಲೇ ಜನಪ್ರಿಯವಾಗಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಘೋಷಲ್ ಸ್ವಾತಂತ್ರ್ಯ ಸಮರಕ್ಕೆ ಧುಮುಕಿದ್ದರು. ಚಿತ್ತಗಾಂಗ್‌ನ ಕ್ರಾಂತಿಕಾರಿ ಸಂಘಟನೆ ಸೇರಿದ ಅವರು ಹೋರಾಟಕ್ಕೆ ಬೇಕಾದ ಹಣಕಾಸು ಹೊಂದಿಸಲು ಅಪ್ಪನ ಖಾತೆಯಿಂದಲೇ ನಕಲಿ ಸಹಿ ಮಾಡಿ ರೂ.1,600 ಪಡೆದು ಸಂಘಟನೆಗೆ ನೀಡಿದ್ದರು. ಛಟ್‌ಗ್ರಾಮ್ ಪೊಲೀಸ್ ಶಸ್ತ್ರಾಸ್ರ ಕೋಠಿ ಮೇಲೆ ನಡೆದ ದಾಳಿಯಲ್ಲೂ ಘೋಷಲ್ ಭಾಗಿಯಾಗಿದ್ದರು.
ಜಲಾಲಾಬಾದ್ ಬೆಟ್ಟದಲ್ಲಿ ಪೊಲೀಸರೊಂದಿಗೆ ನಡೆದ ಚಕಮಕಿಯಲ್ಲಿ ಹಲವಾರು ಕ್ರಾಂತಿಕಾರಿಗಳು ಗಾಯಗೊಂಡಿದ್ದರು. ಕೆಲವರು ಹುತಾತ್ಮರಾಗಿದ್ದರು. ಅಂಬಿಕಾ ಚಕ್ರವರ್ತಿ ಮುಂತಾದವರು ಗಂಭೀರವಾಗಿ ಗಾಯಗೊಂಡರೆ ಸೂರ್ಯ ಸೆನ್, ಗಣೇಶ್ ಘೋಷ್ ಮತ್ತಿತರರು ಸೆರೆ ಸಿಕ್ಕದೆ ಭೂಗತರಾಗಿದ್ದರು.
ಚಿತ್ತಗಾಂಗ್ ದಾಳಿಯ ಬಳಿಕ ಚಲ್ಲಾಪಿಲ್ಲಿಯಾದ ಕ್ರಾಂತಿಕಾರಿಗಳ ಪೈಕಿ ಘೋಷಲ್, ಗಣೇಶ್ ಘೋಷ್ ಸಹಿತ ನಾಲ್ವರು ಕೋಲ್ಕತಾದ ರೈಲು ಹತ್ತಿದರು. ಈ ನಾಲ್ವರ ಬಗ್ಗೆ ಸಂಶಯಗೊಂಡ ರೈಲ್ವೆ ಸ್ಟೇಶನ್ ಮಾಸ್ಟರ್ ಪೊಲೀಸರಿಗೆ ಮಾಹಿತಿ ನೀಡಿದರು. ಫೆನಿ ಸ್ಟೇಶನ್ ಬಳಿ ಬಂದಾಗ ಪೊಲೀಸರು ಇವರನ್ನು ತನಿಖೆ ಮಾಡುವಷ್ಟರಲ್ಲಿ ಅನಂತ್ ಸಿಂಗ್ ಮತ್ತು ಘೋಷಲ್ ರಿವಾಲ್ವರ್ ನಿಂದ ಗುಂಡು ಹಾರಿಸಿ ಕತ್ತಲಲ್ಲಿ ತಪ್ಪಿಸಿಕೊಂಡರು. ಅಲ್ಲಿಂದ ಅವರು ಕೋಲ್ಕತಾ ತಲುಪಿ ಭೂಪೇಂದ್ರನಾಥ ದತ್ತ ಅವರ ಮನೆಯಲ್ಲಿ ಆಶ್ರಯ ಪಡೆದರು.
ಅಲ್ಲಿಂದ ಜಿಬನ್ ಮತ್ತು ಇತರರು ಮತ್ತೆ ಹೊರಟು ಚಂದ್ರನಾಗೋರ್ ಬಳಿ ಆಶ್ರಯ ಪಡೆದರು. ಆದರೆ ಸೆಪ್ಟಂಬರ್ 1, 1930ರಂದು ಪೊಲೀಸರು ಈ ಮನೆಗೂ ದಾಳಿ ಮಾಡಿದರು. ಈ ಮುಖಾಮುಖಿಯಲ್ಲಿ ಜಿಬನ್ ಪೊಲೀಸ್ ಗುಂಡೇಟಿಗೆ ಬಲಿಯಾದರು. ಅವರ ಜನಪ್ರಿಯತೆ ಎಷ್ಟಿತ್ತೆಂದರೆ ಚಂದನ್ ನಗರ್‌ನ ಮೇಯರ್ ಚಾರು ಚಂದ್ರ ರಾಯ್ ಅವರು ಜಿಬನ್ ಅವರ ಅಂತಿಮ ಯಾತ್ರೆಯಲ್ಲಿ ಪೊಲೀಸ್ ಬೆದರಿಕೆಯ ಹೊರತಾಗಿಯೂ ಪಾಲ್ಗೊಂಡಿದ್ದರು.
ಹೀಗೆ ಒಬ್ಬ ಧೀರೋದಾತ್ತ ಕ್ರಾಂತಿಕಾರಿ ಅಮರರಾದರು.







