ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಆರೋಗ್ಯ ಕೇಂದ್ರ!

ಸಂಡೂರು: ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಸರಕಾರಿ ಕಟ್ಟಡಗಳು ಜನರ ಉಪಯೋಗಕ್ಕೆ ಬಾರದಿದ್ದರೆ ಅದು ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುವುದೇ ಅಧಿಕ. ಅದೇ ಪರಿಸ್ಥಿತಿ ಇದೀಗ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯರ್ರಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾಮಿಹಳ್ಳಿ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಎದುರಾಗಿದೆ.
ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತ (ಕೆಎಂಇಆರ್‌ಸಿ) ಯೋಜನೆಯಡಿ 2020-21ನೇ ಸಾಲಿನ 3ನೇ ಕ್ರಿಯಾಯೋಜನೆಯ ಅನ್ವಯ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಾಲ್ಕು ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಕಟ್ಟಡ ನಿರ್ಮಾಣಗೊಂಡು ವರ್ಷಗಳು ಕಳೆದರೂ ಸಾರ್ವಜನಿಕರ ಸೇವೆಗೆ ಲಭ್ಯವಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆಯ ಅನುಮತಿ ಹಾಗೂ ಅಗತ್ಯ ಪರವಾನಿಗೆಗಳಿಲ್ಲದೆ ಕಟ್ಟಡ ನಿರ್ಮಿಸಲಾಗಿದೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದ್ದು, ಈ ಕಾರಣಕ್ಕಾಗಿ, ಉದ್ಘಾಟನೆಗೆ ಮೀನಾ ಮೇಷ ಎಣಿಸಲಾಗುತ್ತಿದೆ ಎನ್ನಲಾಗಿದೆ. ಹೀಗಿರುವಾಗ ಆರೋಗ್ಯ ಇಲಾಖೆಯ ಅನುಮೋದನೆ ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಮುಂದಾದವರು ಯಾರು? ಯಾವ ಅಧಿಕಾರಿಗಳ ಆದೇಶದ ಮೇರೆಗೆ ನಿರ್ಮಿತಿ ಕೇಂದ್ರ ಕಾಮಗಾರಿ ಕೈಗೊಂಡಿತು? ಜನರ ಆರೋಗ್ಯ ಹಿತಾಸಕ್ತಿಗಾಗಿ ಕಟ್ಟಡ ನಿರ್ಮಿಸಲಾಯಿತೇ ಅಥವಾ ಕೇವಲ ಅನುದಾನ ವೆಚ್ಚ ಮಾಡಲು ಮಾತ್ರವೇ ಈ ಯೋಜನೆ ಜಾರಿಯಾಯಿತೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಜನರ ನಿರೀಕ್ಷೆ ನುಂಗಿದ ನಿರ್ಲಕ್ಷ್ಯ
ಸ್ವಾಮಿಹಳ್ಳಿ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳ ಜನರು ಈ ಆರೋಗ್ಯ ಕೇಂದ್ರ ಆರಂಭವಾದರೆ ತುರ್ತು ಚಿಕಿತ್ಸೆ ಸೇರಿದಂತೆ ಮೂಲಭೂತ ಆರೋಗ್ಯ ಸೇವೆಗಳು ಸುಲಭವಾಗಿ ದೊರೆಯುತ್ತವೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಆಸ್ಪತ್ರೆ ಆರಂಭವಾಗದೆ ವರ್ಷಗಳೇ ಕಳೆದಿದ್ದು ಜನರ ಕನಸು ಇನ್ನೂ ನನಸಾಗಿಲ್ಲ.
ಈ ಭಾಗದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗಿದ್ದು, ನೂರಾರು ಲಾರಿಗಳು ಮತ್ತು ಭಾರೀ ವಾಹನಗಳು ನಿರಂತರ ಸಂಚರಿಸುತ್ತವೆ. ಪರಿಣಾಮವಾಗಿ ಧೂಳು ಮಾಲಿನ್ಯದಿಂದ ಕೆಮ್ಮು, ಅಸ್ತಮಾ ಸೇರಿದಂತೆ ಹಲವು ಉಸಿರಾಟ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿವೆ. ಜೊತೆಗೆ ವಾಹನಗಳ ಹೆಚ್ಚಿದ ಓಡಾಟದಿಂದ ಅಪಘಾತಗಳೂ ಆಗಾಗ ಸಂಭವಿಸುತ್ತಿವೆ. ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ನಿಯಮಿತದ ಯೋಜನೆ ಅಡಿಯಲ್ಲಿ ಆಸ್ಪತ್ರೆ ನಿರ್ಮಾಣವಾದರೂ, ಗಣಿ ಭಾದಿತ ಜನತೆಗೆ ಅದರ ಪ್ರಯೋಜನ ಲಭ್ಯವಾಗುತ್ತಿಲ್ಲ ಎನ್ನುವುದು ವಿಪರ್ಯಾಸ.
ಅಕ್ರಮ ಚಟುವಟಿಕೆಗಳಿಗೆ ಆಸ್ಪದ: ಉದ್ಘಾಟನೆಗೊಳ್ಳದೆ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಆಸ್ಪತ್ರೆ ಕಟ್ಟಡ ಇದೀಗ ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬರುತ್ತಿದೆ. ಆಸ್ಪತ್ರೆಯಗಾಜಿನ ಕಿಟಕಿಗಳನ್ನು ಒಡೆದು ಹಾನಿಗೊಳಿಸಲಾಗಿದೆ. ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತ ಮದ್ಯಪಾನ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಕಟ್ಟಡದ ಸುತ್ತಮುತ್ತ ಪೊದೆಗಳು, ಕಳೆ ಗಿಡಗಳು ಬೆಳೆದು ಪರಿಸರ ಅಸುರಕ್ಷಿತವಾಗಿ ಮಾರ್ಪಟ್ಟಿದೆ. ಕೋಟ್ಯಾಂತರ ರೂಪಾಯಿ ಸಾರ್ವಜನಿಕ ಹಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡ ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಯಾರ ಹಿತಕ್ಕಾಗಿ ಆಸ್ಪತ್ರೆ ಉದ್ಘಾಟನೆ ವಿಳಂಬ?
ಆಸ್ಪತ್ರೆ ನಿರ್ಮಾಣಗೊಂಡು ನಾಲ್ಕು ವರ್ಷಗಳಾದರೂ ಉದ್ಘಾಟನೆಗೊಳ್ಳ ದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯವೇ? ರಾಜಕೀಯ ಕಾರಣಗಳೇ? ಅಥವಾ ಇಲಾಖೆಗಳ ನಡುವಿನ ಸಮನ್ವಯ ಕೊರತೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಸತತವಾಗಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಜನಪ್ರತಿನಿಧಿಗಳು ಈ ಕುರಿತು ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ ಕ್ಷೇತ್ರದ ಶಾಸಕರಾಗಿರುವ ಅನ್ನಪೂರ್ಣ ಇ. ತುಕಾರಾಂ ಅವರು ವೈಯಕ್ತಿಕ ಆಸಕ್ತಿ ವಹಿಸಿ ಆರೋಗ್ಯ ಕೇಂದ್ರವನ್ನು ಶೀಘ್ರವಾಗಿ ಉದ್ಘಾಟನೆ ಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ವಾಮಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಗೊಂಡಿದ್ದರೂ, ಅಗತ್ಯ ಪರವಾನಿಗೆ ಮತ್ತು ಸ್ವಾಧೀನ ಪ್ರಕ್ರಿಯೆಗಳು ಪೂರ್ಣಗೊಳ್ಳದ ಕಾರಣ ಅದು ಇನ್ನೂ ಆರೋಗ್ಯ ಇಲಾಖೆಯ ಅಧಿಕೃತ ವ್ಯಾಪ್ತಿಗೆ ಬಂದಿಲ್ಲ. ಈ ವಿಷಯವನ್ನು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಅನುಮತಿಗಳನ್ನು ಶೀಘ್ರದಲ್ಲೇ ಪಡೆಯಲು ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ. ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಂಡ ತಕ್ಷಣ ಆಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಇಲಾಖೆ ಬದ್ಧವಾಗಿದೆ.
-ವೀರೇಂದ್ರ ಕುಮಾರ್,
ಪ್ರಭಾರ ತಾಲೂಕು ವೈದ್ಯಾಧಿಕಾರಿ, ಸಂಡೂರು
ಜನರ ಆರೋಗ್ಯಕ್ಕಾಗಿ ನಿರ್ಮಿಸಿದ ಆಸ್ಪತ್ರೆ ನಾಲ್ಕು ವರ್ಷಗಳಿಂದ ಬಾಗಿಲು ತೆರೆಯದೇ ನಿಂತಿರುವುದು ಅಭಿವೃದ್ಧಿಯ ವಿಫಲತೆಯ ಸಂಕೇತವಾಗಿದೆ. ಸಾರ್ವಜನಿಕರ ಜೀವ ಉಳಿಸಬೇಕಾದ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.
-ವಿಜಯ್ ಕುಮಾರ್, ಸ್ಥಳೀಯ ನಿವಾಸಿ
ಸ್ಥಳೀಯರ ಆಗ್ರಹ
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆಸ್ಪತ್ರೆ ಜನರ ಆರೋಗ್ಯ ಸೇವೆಗೆ ಬಳಕೆಯಾಗಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪರಸ್ಪರ ಜವಾಬ್ದಾರಿ ಹೊತ್ತು ಆಸ್ಪತ್ರೆಯನ್ನು ಶೀಘ್ರ ಕಾರ್ಯಾರಂಭಗೊಳಿಸಬೇಕು. ಇಲ್ಲದಿದ್ದರೆ ಸಾರ್ವಜನಿಕ ಹಣ ದುರುಪಯೋಗವಾದಂತೆಯೇ ಆಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸ್ವಾಮಿಹಳ್ಳಿಯ ಆರೋಗ್ಯ ಕೇಂದ್ರ ಯಾವ ಕಾರಣಕ್ಕೆ ಇನ್ನೂ ಕಾರ್ಯಾರಂಭಗೊಂಡಿಲ್ಲ? ಆರೋಗ್ಯ ಇಲಾಖೆಯ ಅನುಮತಿ ಪಡೆದಿದೆಯೇ? ಅನುಮತಿ ಪಡೆದಿದ್ದರೆ, ಕಾರ್ಯಾರಂಭ ವಿಳಂಬಕ್ಕೆ ಅಸಲಿ ಕಾರಣ ಏನು? ಸಿಬ್ಬಂದಿ ನೇಮಕಾತಿ ಏಕೆ ಆಗಿಲ್ಲ? ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳು ಏನು ಹೇಳುತ್ತವೆ? ಎಂಬ ಪ್ರಶ್ನೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ನಿರ್ಮಿಸಲಾದ ಈ ಪ್ರಾಥಮಿಕ ಆರೋಗ್ಯ ಕೇಂದ್ರ ಶೀಘ್ರದಲ್ಲೇ ಉದ್ಘಾಟನೆಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿ ಎಂಬುದು ಸ್ವಾಮಿಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರ ಬಹುಕಾಲದ ನಿರೀಕ್ಷೆಯಾಗಿದೆ.






