Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ‘ಸುದ್ಧ’ ಚಲನಚಿತ್ರ ಹಾಗೂ ಅದರ ಕಾಲದ...

‘ಸುದ್ಧ’ ಚಲನಚಿತ್ರ ಹಾಗೂ ಅದರ ಕಾಲದ ಸುತ್ತ ಒಂದು ಅವಲೋಕನ

ರಾಮಚಂದ್ರ ಪಿ.ಎನ್.ರಾಮಚಂದ್ರ ಪಿ.ಎನ್.7 May 2025 12:28 PM IST
share
‘ಸುದ್ಧ’ ಚಲನಚಿತ್ರ ಹಾಗೂ ಅದರ ಕಾಲದ ಸುತ್ತ ಒಂದು ಅವಲೋಕನ
ನಾನು ‘ಸುದ್ಧ’ ಚಿತ್ರವನ್ನು ಮಾಡಿದ 20 ವರ್ಷಗಳಲ್ಲಿ ಹಲವಾರು ದಿಕ್ಕು ಬದಲಿಸುವ ವಿದ್ಯಮಾನಗಳು ನಡೆದಿವೆ. ಇವುಗಳಲ್ಲಿ ಕೆಲವನ್ನಾದರೂ ನಾವು ನಮ್ಮ ಮುಂದಿನ ಚಲನಚಿತ್ರಗಳಲ್ಲಿ ಬಿಂಬಿಸದಿದ್ದರೆ, ಈ ಅನಪೇಕ್ಷಿತ ಹಾಗೂ ಅಪಾಯಕಾರಿ ಪ್ರಕ್ರಿಯೆಗಳಿಗೆ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಇವುಗಳಿಂದ ಉಂಟಾದ ರಕ್ತಪಾತದ ಕಲೆ ಉಜ್ಜಿಹೋಗದ ರೀತಿಯಲ್ಲಿ ನಮ್ಮ ಕೈಗೂ ಸೇರಲಿದೆ. ಇದನ್ನು ಆಶಯದ ಹೇಳಿಕೆ (statement of intent) ಅಥವಾ ಪ್ರಣಾಳಿಕೆ ಅಂತ ಯಾರಾದರೂ ಗುರುತಿಸಿದರೆ, ಅದು ತಪ್ಪಾಗಲಾರದು.

‘ಸುದ್ಧ’ ತುಳು ಚಲನಚಿತ್ರವು 20 ವರ್ಷಗಳ ಹಿಂದೆ ಮೊದಲ ಬಾರಿಗೆ ಪ್ರದರ್ಶನಗೊಂಡಿತು. ಇದು ನಾನು ನಿರ್ದೇಶಿಸಿದ ಮೊದಲ ಪೂರ್ಣ ಪ್ರಮಾಣದ ಕಥಾಚಿತ್ರ. ಈ ಚಿತ್ರ ಮುಂಬೈಯಲ್ಲಿ ನೆಲೆಸಿರುವ ನಾರಾಯಣ ನಂದಳಿಕೆಯವರ ‘ಬೊಜ್ಜ’ ತುಳು ನಾಟಕದ ರೂಪಾಂತರ. ನಂದಳಿಕೆಯವರ ನಾಟಕ ಆಂಟನ್ ಚೆಖವ್‌ನ ‘ಚೆರಿ ಆರ್ಚರ್ಡ್’ನಿಂದ ಪ್ರೇರಿತವಾಗಿದೆ. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡದ ಗುತ್ತಿನವರು ಗ್ರಾಮೀಣ ಆಡಳಿತ ಮತ್ತು ನ್ಯಾಯ ವ್ಯವಸ್ಥೆಯ ಪ್ರತೀಕವಾಗಿದ್ದರು. ಸ್ವಾತಂತ್ರ್ಯಾನಂತರ ಪ್ರಜಾಪ್ರಭುತ್ವದ ಆಶಯಗಳಿಗೆ ಪೂರಕವಾದ ಕಾನೂನುಗಳಿಂದಾಗಿ ಈ ವಂಶಪಾರಂಪರಿಕ ಮನೆತನಗಳು ಅಧಿಕಾರ ಕಳೆದುಕೊಂಡವು. ಹೀಗಿದ್ದೂ, ಆಧುನೀಕರಣದ ಅಲೆಯ ಹೊರತಾಗಿಯೂ, ಅವುಗಳಿಗೆ ಅನುಕೂಲವಾಗಿರುವ ಊಳಿಗಮಾನ್ಯ ಪದ್ಧತಿಯನ್ನು ಅವರು ಕೈ ಬಿಡಲಿಲ್ಲ. ಕರಾವಳಿ ಕರ್ನಾಟಕದ ಒಂದು ಗುತ್ತಿನ ಮನೆಯ ಅವನತಿಯೇ ‘ಸುದ್ಧ’ ಚಿತ್ರದ ಕಥಾವಸ್ತು.

1990ರಲ್ಲಿ ಪುಣೆ ಫಿಲ್ಮ್ ಮತ್ತು ಟಿವಿ ಸಂಸ್ಥೆಯಲ್ಲಿ ಕಲಿಕೆ ಮುಗಿಸಿ 15 ವರ್ಷಗಳ ಬಳಿಕ ‘ಸುದ್ಧ’ ಚಿತ್ರವನ್ನು ರೂಪಿಸಿದೆ. ಈ ಅವಧಿಯಲ್ಲಿ ದೇಶದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದವು; ಇವು ಬಹುತೇಕ ಅಲ್ಲೋಲ ಕಲ್ಲೋಲದ ವಾತಾವರಣವನ್ನೇ ಸೃಷ್ಟಿ ಮಾಡಿದವು. 1990ರಲ್ಲಿ ಮನಮೋಹನ್ ಸಿಂಗ್ ಬಜೆಟ್ ಮಂಡನೆಯಲ್ಲಿ ಜಾಗತೀಕರಣ ಮತ್ತು ಖಾಸಗೀಕರಣದ ನೀತಿಯ ಮೂಲಕ ಭಾರತವನ್ನು ಮುನ್ನಡೆಸಲು ನಾಂದಿ ಹಾಡಿದರು. ಜಾಗತಿಕ ಬಂಡವಾಳದ ಮುಕ್ತ ಹರಿವಿಗೆ ಅವಕಾಶ ಕಲ್ಪಿಸಿದರು. ಸರಕಾರದ ನೀತಿಗಳು ಈ ಹರಿವಿಗೆ ಪೂರಕವಾದವು. ನಿಯೋ-ಕ್ಯಾಪಿಟಲಿಸಂ ಸಿದ್ಧಾಂತಗಳು ಭಾರತದಲ್ಲಿ ಬೇರೂರಿದವು. ಅಗ್ಗದ ಕಾರ್ಮಿಕ ವೇತನಕ್ಕೋಸ್ಕರ ಬಂದ ಜಾಗತಿಕ ಬಂಡವಾಳಕ್ಕೆ ಅನುಕೂಲವಾಗುವಂತೆ ಕಾರ್ಮಿಕ ಕಾನೂನುಗಳು ಸಡಿಲಗೊಂಡವು. ಬಹುರಾಷ್ಟ್ರೀಯ ಕಂಪೆನಿಗಳ ಆಗಮನದಿಂದ ಸಣ್ಣ ಉತ್ಪಾದನೆ ಮತ್ತು ಕೃಷಿ ಕ್ಷೇತ್ರಕ್ಕೆ ಸರಕಾರದ ಬೆಂಬಲ ಕಡಿಮೆಯಾಯಿತು. ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಖರ್ಚು ಮಾಡುತ್ತಿದ್ದ ಸರಕಾರ, ಈಗ ಜಾಗತಿಕ ಬಂಡವಾಳಕ್ಕೆ ಆರ್ಥಿಕ ಪ್ರೋತ್ಸಾಹ ನೀಡಿತು. (ಪ್ರಭಾತ ಪಟ್ನಾಯಕ್ -https://www.networkideas.org/news-analysis/2017/10/neo-liberal-capitalism/)

40-45 ವರ್ಷಗಳಿಂದ ಸರಕಾರ ನಡೆಸುತ್ತಿದ್ದ ಸಾರ್ವಜನಿಕ ವಲಯದ ಸಂಸ್ಥೆಗಳನ್ನು (ಪಿಎಸ್‌ಯು) ಕಡೆಗಣಿಸಲಾಯಿತು ಅಥವಾ ಖಾಸಗೀಕರಣಗೊಳಿಸಲಾಯಿತು. ‘ಸರಕಾರದ ವ್ಯಾಪಾರವು ವ್ಯಾಪಾರವಾಗಿರಬಾರದು’ ಎಂಬ ನೀತಿಯನ್ನು ಅನುಸರಿಸಿ ದೇಶದ ಸಂಪತ್ತಿನ ವಹಿವಾಟನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸಲಾಯಿತು. ಸಾರ್ವಜನಿಕ ಅಭಿವೃದ್ಧಿಗಾಗಿ ಉತ್ಪಾದನೆಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಸರಕಾರ ಅದರಿಂದ ವಿಮುಖವಾಗತೊಡಗಿತು. ಖಾಸಗೀಕರಣಗೊಂಡ ಕಂಪೆನಿಗಳು ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ವಜಾ ಮಾಡಿದವು. ಸರಕಾರಿ ನೌಕರಿಗಳು ಕಡಿಮಯಾಗ ತೊಡಗಿದವು. ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಬೆಳೆಯಿತು. ಉತ್ಪಾದನೆ ಮತ್ತು ಮಾರುಕಟ್ಟೆಯ ಮೇಲಿನ ಸರಕಾರದ ಹಿಡಿತ ಕಡಿಮೆಯಾಗಿ, ಜಾಗತಿಕ ಬಂಡವಾಳಕ್ಕೆ ಚುಕ್ಕಾಣಿ ಕೊಡಲಾಯಿತು. ಖನಿಜ ಸಂಪತ್ತಿನ ಗಣಿಗಾರಿಕೆಯನ್ನು ದೊಡ್ಡ ಉದ್ಯಮಿಗಳಿಗೆ ವಹಿಸಲಾಯಿತು, ಮೂಲನಿವಾಸಿಗಳನ್ನು ಕಡೆಗಣಿಸಿ, ಹತ್ತಿಕ್ಕಲಾಯಿತು. ಇದರಿಂದ ನಕ್ಸಲ್ ಚಳವಳಿಗೆ ಮತ್ತೆ ಉತ್ತೇಜನ ಸಿಕ್ಕಿತು, ಶಸ್ತ್ರಾಸ್ತ್ರ ಹೋರಾಟಗಳು ಉಲ್ಬಣಗೊಂಡವು.

ಇತ್ತ, 1980-90ರ ದಶಕದಲ್ಲಿ ಸಕ್ರಿಯವಾಗಿದ್ದ ‘ಮಂಡಲ್ ರಾಜಕೀಯ’ ಶತಮಾನದ ಕೊನೆಯಲ್ಲಿ ಕುಸಿದು ಕಾಣೆಯಾಯಿತು. ವಿ.ಪಿ.ಸಿಂಗ್ ಸರಕಾರ ಒಬಿಸಿಗೆ (ಇತರ ಹಿಂದುಳಿದ ವರ್ಗ) ಶೇ. 49 ಮೀಸಲಾತಿ ಕೊಡಲು ಮುಂದಾದಾಗ, ಮೇಲ್ವರ್ಗದವರು ಹಿಂಸಾತ್ಮಕವಾಗಿ ವಿರೋಧಿಸಿದರು. ಕೆಲವರು ಆತ್ಮಾಹುತಿ ಮಾಡಿಕೊಂಡರು. ಮೀಸಲಾತಿ ನೀತಿಯ ‘ಮಂಡಲ್ ರಾಜಕೀಯ’ ಕ್ಕೆ ಪ್ರತಿಕ್ರಿಯೆಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಮತ್ತು ಸಂಬಂಧಿತ ಸಂಸ್ಥೆಗಳು ‘ಕಮಂಡಲ ರಾಜಕೀಯ’ ವನ್ನು ಬೆಳೆಸಿದವು. ಮೇಲ್ವರ್ಗದವರಿಂದಲೇ ಕೂಡಿದ ಆರೆಸ್ಸೆಸ್ ಮುಖಂಡರು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸಲು ಈಗ ಶತ ಪ್ರಯತ್ನ ಮಾಡ ಹೊರಟರು. ರಾಮ ಮಂದಿರ ಚಳವಳಿ ಇದರ ಮುಖ್ಯ ಭಾಗವಾಗಿತ್ತು. ಅಯೋಧ್ಯೆಯ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮನ ಜನ್ಮವಾಯಿತೆಂದು, ಮೊದಲು ಮಂದಿರವಿತ್ತೆಂದು, ಗತಕಾಲದ ಮುಸ್ಲಿಮರು ಅದನ್ನು ಕೆಡವಿದರೆಂದು ಸಂಘ ಪರಿವಾರವು ಪ್ರತಿಪಾದಿಸಿತು. 1992ರಲ್ಲಿ ಕರಸೇವಕರು ಮಸೀದಿಯನ್ನು ಕೆಡವಿದರು. ಲಾಲ್ ಕೃಷ್ಣ ಅಡ್ವಾಣಿಯ ನೇತೃತ್ವದ ಸೋಮನಾಥ-ಅಯೋಧ್ಯೆ ರಥಯಾತ್ರೆ ಇದಕ್ಕೆ ಮುನ್ನುಡಿಯಾಯಿತು. ರಾಮ ಭಕ್ತರು ಇಟ್ಟಿಗೆ, ತ್ರಿಶೂಲಗಳೊಂದಿಗೆ ಚಳವಳಿಯಲ್ಲಿ ಭಾಗಿಯಾಗಿದ್ದರು. ‘ಮಂಡಲ್ ರಾಜಕೀಯ’ವನ್ನು ಮರೆತ ಒಬಿಸಿ ಸಮುದಾಯವೂ ಸಂಘದ ವಿಪ್ರರ ಸಂಯೋಜನೆಯ ಕೆಡಹುವ ಆಟಕ್ಕೆ ಇಂಬು ಕೊಡುವಂತೆ ‘ಕಮಂಡಲ ರಾಜಕೀಯ’ ಮತ್ತು ‘ಹಿಂದುತ್ವ’ ವನ್ನು ಅಳವಡಿಸಿಕೊಂಡಿತು.

2002ರಲ್ಲಿ, ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರ ರೈಲಿನ ಬೋಗಿಗೆ ಗುಜರಾತಿನ ಗೋಧ್ರಾದಲ್ಲಿ ಬೆಂಕಿ ಹೊತ್ತಿಸಲಾಯಿತು. ಇದರಿಂದ ಹಲವರು ಸುಟ್ಟು ಸತ್ತರು. ಪ್ರತಿಕ್ರಿಯೆಯಾಗಿ ರಾಜ್ಯದಾದ್ಯಂತ ಕೋಮು ಗಲಭೆಗಳು ಭುಗಿಲೆದ್ದವು. ಗರ್ಭಿಣಿಯೊಬ್ಬಳು ಕೊಲೆಯಾದಾಗ ಸಂಘ ಪರಿವಾರದ ಸದಸ್ಯ ಬಾಬು ಬಜರಂಗಿ, ‘‘ಆಕೆಯ ಹೊಟ್ಟೆಯನ್ನು ಸೀಳಲಾಯಿತು’’ ಎಂದು ಹೆಮ್ಮೆ ಪಟ್ಟದ್ದಾಯಿತು. ನರೇಂದ್ರ ಮೋದಿಯ ರಾಜ್ಯ ಸರಕಾರ, ಸಜ್ಜಾಗಿ ನಿಂತಿದ್ದ ಸೈನ್ಯವನ್ನು ಇಚ್ಛಾಪೂರ್ವಕವಾಗಿಯೋ ಎಂಬಂತೆ ಮೂರು ದಿನ ತಡವಾಗಿ ಕರೆಸಿತು. ಈ ಮಧ್ಯೆ ಪೊಲೀಸರು ನಡೆಯತ್ತಿದ್ದ ನರಹತ್ಯೆಯನ್ನು ಪ್ರೋತ್ಸಾಹಿಸಲೆಂಬಂತೆ ಹಲವೆಡೆ ನಿಷ್ಕ್ರಿಯವಾಗಿ ನಿಂತಂತಿದ್ದರು. ಸತ್ಯವನ್ನು ಬಹಿರಂಗಪಡಿಸುವವರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪುತ್ತಾರೆ ಅಥವಾ ಜೈಲು ಶಿಕ್ಷೆಗೊಳಗಾಗುತ್ತಾರೆ ಎಂಬಂತಾಯಿತು. 2005ರ ವೇಳೆಗೆ, ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾದ ಧಾರ್ಮಿಕ ‘ಹಿಂದುತ್ವ’ ರಾಷ್ಟ್ರೀಯತೆ ಭಾರತದಲ್ಲಿ ಬಲಗೊಂಡಿತು.

2005ರಲ್ಲಿ ಪ್ರದರ್ಶನಗೊಂಡ ನನ್ನ ಮೊದಲ ಪೂರ್ಣ ಪ್ರಮಾಣದ ಕಥಾಚಿತ್ರ ‘ಸುದ್ಧ’ದಲ್ಲಿ ಈ ಘಟನೆಗಳು ಕಾಣ ಸಿಗುವುದಿಲ್ಲ. ಆದರೂ 2006ರಲ್ಲಿ ‘ಓಶಿಯನ್ ಸಿನಿಫಾನ್ ಫೆಸ್ಟಿವಲ್ ಆಫ್ ಏಶಿಯನ್ ಆಂಡ್ ಅರಬ್’ ಚಿತ್ರೋತ್ಸವದಲ್ಲಿ ಅತ್ಯುತ್ತಮ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆಯಿತು. ನೆದರ್‌ಲ್ಯಾಂಡ್ಸ್‌ನ ‘ಹ್ಯುಬರ್ಟ್ ಬಾಲ್ಸ್’ ಗ್ರಾಂಟ್ ಪಡೆದು ಕರಾವಳಿ ಕರ್ನಾಟಕದ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರದರ್ಶನಗೊಂಡಿತು. ಹಲವು ಅಂತರ್‌ರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿತು. ಇಷ್ಟೆಲ್ಲಾ ಮೇಲೆ ಹೇಳಿದ ನಮ್ಮ ದೇಶ ಹಾಗೂ ಸಮಾಜದ ದಿಕ್ಕನ್ನೇ ಬದಲಿಸುವಂತೆ ಮಾಡಿದ ಯಾವುದೇ ಪ್ರಭಾವಿ ಘಟನೆಗಳ ವ್ಯಾಖ್ಯಾನಗಳು ಇಲ್ಲದಿದ್ದರೂ ಕೂಡಾ! ನಿಜ, ‘ಸುದ್ಧ’ ಸ್ವಾತಂತ್ರ್ಯದ ನಂತರವೂ ಜಾತಿ ವ್ಯವಸ್ಥೆಗೆ ಅಂಟಿಕೊಂಡ ಗುತ್ತಿನ ಮನೆಯೊಂದರ ಕ್ಷೀಣತೆಯನ್ನು ತೋರಿಸುತ್ತದೆ. ಗುತ್ತಿನ ಪ್ರಭಾವ ಕಡಿಮೆಯಾದುದನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.

ಆದರೆ, ದಕ್ಷಿಣ ಕನ್ನಡ ಮೂಲದ, ಮುಂಬೈಯಲ್ಲಿ ನೆಲೆಸಿರುವ ಗುತ್ತಿನ ಮನೆಯೊಂದರ ಬಹಳ ದೊಡ್ಡ ನಿರ್ಮಾಪಕರಿಗೆ ಚಿತ್ರ ತೋರಿಸಿದಾಗ, ‘‘ನಮ್ಮ ಸ್ಥಿತಿ ಈಗ ಹೀಗಿಲ್ಲ. ಭೂ ಸುಧಾರಣೆ ಕಾನೂನಿನಿಂದ ಕಳೆದುಕೊಂಡ ನಮ್ಮ ಜಮೀನನ್ನು ಮರಳಿ ಖರೀದಿಸಿ ನಮ್ಮ ಸ್ಥಿತಿಗತಿಯನ್ನು ಉತ್ತಮಗೊಳಿಸಿದ್ದೇವೆ’’ ಎಂದು ವಿತರಣೆಯನ್ನು ನಿರಾಕರಿಸಿದರು. ಬೆಂಗಳೂರಿನಲ್ಲಿ ಕೆಲವರು, ‘‘ಯಾರಿವನು? ಕಡಿಮೆ ಖರ್ಚಿನಲ್ಲಿ, ಕೃತಕ ಬೆಳಕಿಲ್ಲದೆ ಚಿತ್ರ ಮಾಡಿ ಪ್ರಶಸ್ತಿ ಪಡೆದಿದ್ದಾನೆ’’ ಎಂದು ‘ಸುದ್ಧ’ ಚಿತ್ರದ ಒಂದು ಪ್ರದರ್ಶನವನ್ನು ಆಯೋಜಿಸಿದರು. ಕರಾವಳಿಯನ್ನು ಹತ್ತಿರದಿಂದ ತಿಳಿದ ಬರಹಗಾರರೊಬ್ಬರು ಈ ಸಂದರ್ಭದಲ್ಲಿ ‘‘ಚಿತ್ರ ಚೆನ್ನಾಗಿದೆ. ಆದರೆ ನೀವು ಮುಂಬೈಯವರು. ದಕ್ಷಿಣ ಕನ್ನಡ ಈಗ ಕೋಮುವಾದದತ್ತ ತಿರುಗಿದೆ’’ ಎಂದರು. ಸಮಾಜ-ಚಿಂತಕರೊಬ್ಬರು ಇತ್ತೀಚೆಗೆ ‘‘ಸುದ್ಧ ಕರಾವಳಿಯ ಕೋಮು-ಪೀಡಿತ ಸ್ಥಿತಿಯನ್ನು ಮುನ್ಸೂಚಿಸುತ್ತದೆ’’ ಎಂದು ಅದೇ ವಿಷಯವನ್ನು ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರು. ಸಿನೆಮಾ ವಿಮರ್ಶಕರು ಕೂಡ ಆಗಿರುವ ಅವರು ಈ ಚಿತ್ರದಲ್ಲಿ ಬರುವ ಶಿಕ್ಷಣ ಮುಗಿಸದೆ, ಗೊತ್ತುಗುರಿಯಿಲ್ಲದೆ ಜಾತಿಪದ್ಧತಿಗೆ ಅಂಟಿಕೊಂಡಿರುವ ಗುತ್ತಿನ ಮನೆಯ ಮೂರನೇ ಪೀಳಿಗೆಯ ಯುವಕನನ್ನು ಉಲ್ಲೇಖಿಸಿದರು.

ನಾವೆಲ್ಲರೂ ಜೀವನದಲ್ಲಿ, ನಮ್ಮ ಕೃತಿಗಳಲ್ಲಿ ಕೆಲವು ಆಯ್ಕೆಗಳನ್ನು ಮಾಡುತ್ತೇವೆ. ಅವುಗಳಲ್ಲಿ ಕೆಲವು ನಮ್ಮ ಕೆಲಸದ ಸ್ವರೂಪವನ್ನೇ ವಿವರಿಸುತ್ತವೆ, ಕೆಲವೊಮ್ಮೆ ಅವು ನಮ್ಮ ಜೀವನ ದೃಷ್ಟಿಕೋನದತ್ತ ನೇರವಾಗಿ ಬೊಟ್ಟು ಮಾಡುತ್ತವೆ. ‘ಬೊಜ್ಜ’ ನಾಟಕ 1980ರ ದಶಕದ್ದೆಂದು ನಂದಳಿಕೆ ಹೇಳಿದ್ದರು. ಆದರೆ, ನಿರ್ಮಾಣ ಸಮಸ್ಯೆಗಳಿಂದ ‘ಸುದ್ಧ’ ಚಿತ್ರದ ಕಾಲವನ್ನು ಒಂದೂವರೆ-ಎರಡು ದಶಕಗಳಿಗೆ ಮುಂದೂಡಲಾಯಿತು. ಕೊಂಕಣ ರೈಲ್ವೆ, ಕಾರ್ಕಳದ ನಕ್ಸಲೀಯ ಕಾರ್ಯಾಚರಣೆಯ ಆಕಾಶವಾಣಿ ವಾರ್ತೆಗಳಂತಹ ಮೃದು ಉಲ್ಲೇಖಗಳನ್ನು ಚಿತ್ರಕಥೆಯಲ್ಲಿ ಸೇರಿಸಲಾದರೂ, ಪರಿಣಾಮದಲ್ಲಿ ಇದರ ಕಾಲಘಟ್ಟ 1990ರ ಮೊದಲಿನದ್ದಾಗಿತ್ತು. ಅಂದರೆ ಭಾರತ ಜಾಗತೀಕರಣ ಹಾಗೂ ಉದಾರೀಕರಣಗೊಂಡ ಪೂರ್ವದ್ದಾಗಿತ್ತು. ಪ್ರಾಯಶಃ ನಿಯೋ-ಕ್ಯಾಪಿಟಲಿಸಂನ ಪರಿಣಾಮಗಳನ್ನು ಮತ್ತು ಸಮಾಜ ಮತಾಂಧತೆಯತ್ತ ಸಾಗುವುದನ್ನು ದೃಢವಾಗಿ ನಿರೂಪಣೆಯೊಳಗೆ ಬೆಸೆಯಬೇಕಿತ್ತೇನೋ.

ನಮಗೆ ಕೆಟ್ಟ ಮೇಲೆಯೇ ಬುದ್ಧಿ ಬರುವುದು ಸಾಮಾನ್ಯವಾದರೂ ನಾವು ಒಂದಿಷ್ಟು ಕಲಿಕೆಗಳನ್ನು ನಮ್ಮದಾಗಿಸಿಕೊಳ್ಳುತ್ತೇವೆ, ಸಾಧ್ಯತೆಗಳನ್ನು ಜೀವಂತಗೊಳಿಸುತ್ತೇವೆ ಎನ್ನುವುದು ನಮ್ಮ ಅನುಭವವೇ.

1990ರ ಘಟನೆಗಳ ದುಷ್ಪರಿಣಾಮಗಳು ಇಂದು ಎಷ್ಟರ ಮಟ್ಟಿಗೆ ಸಾಮಾನ್ಯೀಕರಿಸಲಾಗಿದೆ ಅಂದರೆ, ಅವುಗಳೇ ಸಹಜ ಅಂತ ನಾವು ಒಪ್ಪಿಕೊಂಡಂತಾಗಿದೆ. 2002ರ ಗುಜರಾತ್ ಗಲಭೆಯಲ್ಲಿ ಜನರ ಆಕ್ರೋಶಕ್ಕೆ ಅವಕಾಶ ಕೊಟ್ಟ ನರೇಂದ್ರ ಮೋದಿ, 2014ರಿಂದ ಅದೇ ರೀತಿಯಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅಲ್ಪಸಂಖ್ಯಾತರಿಗೆ ಎರಡನೇ ದರ್ಜೆಯ ಭಾವನೆ ಮೂಡಿಸುವ ಕಾನೂನುಗಳು ಬಂದಿವೆ. ಬಾಬರಿ ಮಸೀದಿಯ ಧ್ವಂಸ ತಪ್ಪೆಂದರೂ, ಸುಪ್ರೀಂ ಕೋರ್ಟ್ ಅದೇ ಸ್ಥಳದಲ್ಲಿ ಮಂದಿರ ಕಟ್ಟಲು ಆದೇಶಿಸಿತು. ಸಂಘ ಪರಿವಾರವು ರಾಮ ಮಂದಿರವನ್ನು ನಿರ್ಮಿಸಿ, ಅದನ್ನು ಜಾತ್ಯತೀತ ಸಂವಿಧಾನದ ಚುನಾಯಿತ ಅಧಿಕಾರಿಗಳಿಂದ ವೈದಿಕ ಕರ್ಮಕಾಂಡದ ಮೂಲಕ ಉದ್ಘಾಟಿಸಿತು. ಭಾರತದ ಪ್ರೆಸಿಡೆಂಟರನ್ನು, ಅವರು ಬುಡಕಟ್ಟು ಜನಾಂಗದವರಾಗಿದ್ದರಿಂದಲೋ ಏನೋ, ಈ ಸಂದರ್ಭದಲ್ಲಿ ಆಹ್ವಾನಿಸದೇ ಸಂಘ ಪರಿವಾರ ತೋರಿಕೆಗಷ್ಟೇ ದಲಿತ/ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ವಹಿಸುವುದು ಅಂತ ಮತ್ತೊಮ್ಮೆ ತೋರಿಸಿ ಕೊಟ್ಟಿತು.

ಪ್ರಜಾಪ್ರಭುತ್ವದ ಸಂವಿಧಾನವನ್ನು ಬದಲಾಯಿಸಿ, ಭಾರತವನ್ನು ಧಾರ್ಮಿಕ ರಾಷ್ಟ್ರವಾಗಿಸುವ ಯತ್ನ ನಡೆಯುತ್ತಿದೆ, ಥೇಟ್ ಪಾಕಿಸ್ತಾನದಲ್ಲಿರುವ ಹಾಗೆ. ವಿರೋಧದ ಧ್ವನಿಗಳನ್ನು ಕ್ರೂರವಾಗಿ ಹತ್ತಿಕ್ಕಲಾಗುತ್ತಿದೆ. ವಿರೋಧ ಪಕ್ಷದವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ. ವಿಪಕ್ಷೀಯ ರಾಜ್ಯ ಸರಕಾರಗಳ ಆಡಳಿತವನ್ನು ಗವರ್ನರ್, ಹಣಕಾಸು ಹಾಗೂ ಇತರ ಕಾರಣಗಳಿಂದ ನಿಷ್ಕ್ರಿಯಗೊಳಿಸಲಾಗುತ್ತಿದೆ. ಸಾಂವಿಧಾನಿಕವಾಗಿ ಚುನಾಯಿತರಾದ ಪದಾಧಿಕಾರಿಗಳನ್ನು ಖರೀದಿಸಿ, ಸಂಘ ಪರಿವಾರವು ತಮ್ಮದೇ ಸರಕಾರಗಳನ್ನು ರಚಿಸುತ್ತಿದೆ. ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ವಿಭಾಗ, ಚುನಾವಣಾ ಆಯೋಗದಂತಹ ಸಂಸ್ಥೆಗಳ ಧರ್ಮನಿರಪೇಕ್ಷತೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಸಂಘ ಪರಿವಾರದ ‘ಹಿಂದುತ್ವ’ ಲೇಪಿತ ರಾಷ್ಟ್ರೀಯತೆಯ ಸರ್ವಾಧಿಕಾರ ರಾರಾಜಿಸುತ್ತಿದೆ.

ಅತ್ತ, ಮನಮೋಹನ್ ಸಿಂಗ್‌ರ ‘ನಿಯೋ-ಕ್ಯಾಪಿಟಲಿಸಂ’ ಈಗ ‘ಕ್ರೋನಿ ಕ್ಯಾಪಿಟಲಿಸಂ’ ಆಗಿ ಬಿಟ್ಟಿದೆ. ಸರಕಾರದ ನೀತಿಗಳು ಬಂಡವಾಳಶಾಹಿಗಳಿಗಾಗಿಯೇ ಇವೆಯೇ ಎಂಬ ಸಂಶಯ ಮೂಡುತ್ತಿದೆ. ಚುನಾಯಿತ ಸರಕಾರದ ಬದಲು ಕೆಲವೇ ಉದ್ಯಮಿಗಳು ದೇಶವನ್ನು ನಿಯಂತ್ರಿಸುತ್ತಾರೆಯೇ ಎಂಬ ಭಾವನೆ ಬಲಗೊಳ್ಳುತ್ತಿದೆ. 70 ವರ್ಷಗಳಿಂದ ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ‘ಹಣದ ಕೊರತೆ’ ಎಂದು ಮಾರಾಟ ಮಾಡಲಾಗುತ್ತಿದೆ. ಗಣಿಗಾರಿಕೆ ಪ್ರದೇಶಗಳಲ್ಲಿ ಮೂಲನಿವಾಸಿಗಳನ್ನು ಹುಸಿ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಗುತ್ತಿದೆ. ಶೇ. 1 ಶ್ರೀಮಂತರು ದೇಶದ ಶೇ. 58 ಸಂಪತ್ತನ್ನು ಹೊಂದಿದ್ದಾರೆ. (Oxfam)

ನಾನು ‘ಸುದ್ಧ’ ಚಿತ್ರವನ್ನು ಮಾಡಿದ 20 ವರ್ಷಗಳಲ್ಲಿ ಹಲವಾರು ಇಂತಹ ದಿಕ್ಕು ಬದಲಿಸುವ ವಿದ್ಯಮಾನಗಳು ನಡೆದಿವೆ. ಇವುಗಳಲ್ಲಿ ಕೆಲವನ್ನಾದರೂ ನಾವು ನಮ್ಮ ಮುಂದಿನ ಚಲನಚಿತ್ರಗಳಲ್ಲಿ ಬಿಂಬಿಸದಿದ್ದರೆ, ಈ ಅನಪೇಕ್ಷಿತ ಹಾಗೂ ಅಪಾಯಕಾರಿ ಪ್ರಕ್ರಿಯೆಗಳಿಗೆ ಸಮರ್ಥನೆ ಕೊಟ್ಟಂತೆ ಆಗುತ್ತದೆ. ಇವುಗಳಿಂದ ಉಂಟಾದ ರಕ್ತಪಾತದ ಕಲೆ ಉಜ್ಜಿಹೋಗದ ರೀತಿಯಲ್ಲಿ ನಮ್ಮ ಕೈಗೂ ಸೇರಲಿದೆ. ಇದನ್ನು ಆಶಯದ ಹೇಳಿಕೆ (statement of intent) ಅಥವಾ ಪ್ರಣಾಳಿಕೆ ಅಂತ ಯಾರಾದರೂ ಗುರುತಿಸಿದರೆ, ಅದು ತಪ್ಪಾಗಲಾರದು.

share
ರಾಮಚಂದ್ರ ಪಿ.ಎನ್.
ರಾಮಚಂದ್ರ ಪಿ.ಎನ್.
Next Story
X