ಐದು ತಲೆಮಾರುಗಳನ್ನು ಒಗ್ಗೂಡಿಸಿದ ‘ಪುನರ್ಮಿಲನ’!
ಕುಂದಾಪುರದ ಸುಣ್ಣಾರಿಯಲ್ಲಿ ಅಪರೂಪದ ಕಾರ್ಯಕ್ರಮ: 200 ಮಂದಿ ಭಾಗಿ

ಕುಂದಾಪುರ: ತಂದೆಯ ಒಂಬತ್ತು ಮಕ್ಕಳ ಪೈಕಿ ಬದುಕುಳಿದ ಇಬ್ಬರು ಇಳಿ ವಯಸ್ಸಿನವರ ಆಸೆಯಂತೆ ತಮ್ಮ ಇಡೀ ಕುಟುಂಬವನ್ನು ಒಂದೆಡೆ ಸೇರಿಸುವ ಪರಿಕಲ್ಪನೆ ಯಶಸ್ವಿಯಾಗಿದ್ದು, ಈ ಮೂಲಕ ಐದು ತಲೆಮಾರುಗಳನ್ನು ಒಂದೇ ಸೂರಿನಡಿ ಒಗ್ಗೂಡಿಸಿ ಮಾದರಿ ಎನಿಸಿದ್ದಾರೆ.
ಕುಂದಾಪುರ ತಾಲೂಕಿನ ಕೋಟೇಶ್ವರದಿಂದ ಹಾಲಾಡಿ ಮಾರ್ಗದಲ್ಲಿ ಸಿಗುವ ಸುಣ್ಣಾರಿ ಎಂಬಲ್ಲಿ ಮೇ 17ರಂದು ಈ ವಿಶಿಷ್ಟ ಕಾರ್ಯಕ್ರಮ ನಡೆದಿದೆ. ಮೂಲತಃ ಬೇಳೂರು ಸಮೀಪದ ಮೊಗೆಬೆಟ್ಟುವಿನ ದಿ.ಮೊಗೆಬೆಟ್ಟು ಸುಬ್ಬಣ್ಣ ಶ್ಯಾನುಭಾಗ್ ಸುಣ್ಣಾರಿಯ ನಿವಾಸದಲ್ಲಿ ಕೌಟುಂಬಿಕ ಪರಿಕಲ್ಪನೆಯಲ್ಲಿ ಊರು-ಪರವೂರು, ರಾಜ್ಯ-ದೇಶದ ವಿವಿಧೆಡೆ ಇದ್ದ ಅವರ ಐದು ತಲೆಮಾರಿನ ಸುಮಾರು 200 ಮಂದಿಯನ್ನು ಸೇರಿಸಲಾಗಿತ್ತು.
ಹಿರಿಯರಿಬ್ಬರ ಮಹದಾಸೆ: ನೂರಾರು ವರ್ಷಗಳ ಹಿಂದೆ ವ್ಯವಸಾಯ ಚಟುವಟಿಕೆ ಹಾಗೂ ಸಣ್ಣಪುಟ್ಟ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಮೊಗೆಬೆಟ್ಟು ಸುಬ್ಬಣ್ಣ ಶ್ಯಾನುಭಾಗ್‌ರಿಗೆ 9 ಮಕ್ಕಳು. ಅವರ ಪೈಕಿ ವಯೋಸಹಜವಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಪುತ್ರಿ ಯರಾದ 96 ವರ್ಷದ ನನ್ಯಕ್ಕ (ಶಾಂತಾದೇವಿ) ಹಾಗೂ 94 ವರ್ಷದ ಗುಲಾಬಿಯವರು ಕುಟುಂಬಿಕರೊಂದಿಗೆ ವಾಸವಿದ್ದಾರೆ. ತಮ್ಮ ಕುಟುಂಬದ ಎಲ್ಲರನ್ನೂ ನೋಡಬೇಕು ಮತ್ತು ಬೆರೆಯಬೇಕು ಎಂಬ ಹಿರಿಯರಿಬ್ಬರ ಬಯಕೆಯಂತೆ ಹುಟ್ಟಿಕೊಂಡ ಕಲ್ಪನೆಗೆ ಕುಟುಂಬದವರು ಜೊತೆಯಾದರು. ಸುಣ್ಣಾರಿ ಎಂಬಲ್ಲಿನ ಈಗಿನ ಮನೆಯ ಗೃಹಪ್ರವೇಶ 3 ವರ್ಷದ ಹಿಂದೆ ನಡೆದಿದ್ದು, ಹಿಂದಿನ ವರ್ಷ ಯಕ್ಷಗಾನ ನಡೆಸಲಾಗಿತ್ತು. ಮನೆಯಲ್ಲಿ 3 ವರ್ಷದ ಕಾರ್ಯಕ್ರಮವನ್ನು ವಿಶಿಷ್ಟವಾಗಿ ನೆರವೇರಿಸಬೇಕೆಂಬ ಚಿಂತನೆಯಡಿ ಕಳೆದ ನಾಲ್ಕಾರು ತಿಂಗಳಿನಿಂದ ರೂಪುರೇಷೆ ಸಿದ್ಧಪಡಿಸಲಾಗಿತ್ತು.
ಐದು ತಲೆಮಾರುಗಳ ಸಮ್ಮಿಲನ: ಮೊಗೆಬೆಟ್ಟು ಸುಬ್ಬಣ್ಣ ಶ್ಯಾನುಭಾಗ್‌ರಿಗೆ ಇಬ್ಬರು ಗಂಡು, 7 ಮಂದಿ ಪುತ್ರಿಯರ ಸಹಿತ 9 ಮಂದಿ ಮಕ್ಕಳು (ಮೊದಲನೇ ತಲೆಮಾರು). ಮುಂದಿನ 2ನೇ ತಲೆಮಾರಿನಲ್ಲಿ 36 ಮಂದಿ. ಮೂರನೇ ತಲೆಮಾರಿನಲ್ಲಿ 125. ನಾಲ್ಕನೇ ತಲೆಮಾರಿನಲ್ಲಿ 106. ಹಾಗೆಯೇ 5ನೇ ತಲೆಮಾರಿನಲ್ಲಿ 20 ಮಂದಿ ಇದ್ದಾರೆ.
ಇವರಲ್ಲಿ ದೇಶ-ಹೊರದೇಶಗಳಲ್ಲಿ ನೆಲೆಸಿದ ವರಿದ್ದು, ಬೇರೆಬೇರೆ ವೃತ್ತಿ, ವ್ಯವಹಾರದಲ್ಲಿ ತೊಡಗಿಸಿಕೊಂಡವರಿದ್ದಾರೆ. ಕುಟುಂಬ ಸಮ್ಮಿಲ ನಕ್ಕಾಗಿ ಇವರನ್ನು ಹುಡುಕಿ, ಸಂಪರ್ಕಿಸಿದ್ದು ಮೊದಲ ಹಂತವಾಗಿದ್ದು, ಬಳಿಕ ಸಂಪರ್ಕಕ್ಕೆ ಸಿಕ್ಕವರ ಸೋಶಿಯಲ್ ಮಿಡಿಯಾ ಗ್ರೂಫ್ ರಚಿಸಿಕೊಂಡು ಕಾರ್ಯಕ್ರಮದ ಎಲ್ಲಾ ಮಾಹಿ ತಿಗಳನ್ನು ಹಂಚಿಕೊಳ್ಳಲಾಗಿತ್ತು. ಇದೆಲ್ಲದರ ಫಲವಾಗಿ ಮೊಗೆಬೆಟ್ಟು ಸುಬ್ಬಣ್ಣ ಶ್ಯಾನುಭಾಗ್‌ರ
ವಂಶವೃಕ್ಷದಲ್ಲಿನ ಇರುವತ್ತ್ತೂರು, ಶತಬೆಟ್ಟು, ಕಂಡ್ಲೂರು, ಮೊಗೆಬೆಟ್ಟು, ಕಲ್ಮರ್ಗಿ, ಶಿರಿಯಾರ, ಕೋಟ, ಧಾರವಾಡ, ಸುಣ್ಣಾರಿ, ಮೊಗೆಬೆಟ್ಟು-ಸುಣ್ಣಾರಿ ಒಟ್ಟು 9 ಫ್ಯಾಮಿಲಿಗಳಲ್ಲಿ 200ಕ್ಕೂ ಅಧಿಕ ಸದಸ್ಯರು ‘ಪುನರ್ಮಿಲನ’ದಲ್ಲಿ ಭಾಗವಹಿಸಿದರು.
ಮೆರಗು ತುಂಬಿದ ವಿಶಿಷ್ಟ ಕಾರ್ಯಕ್ರಮ
ಸುಣ್ಣಾರಿಯ ನಿವಾಸದಲ್ಲಿ ಮೊಗೆಬೆಟ್ಟು ಸುಬ್ಬಣ್ಣ ಶ್ಯಾನುಬಾಗ್ ಟ್ರಸ್ಟ್ ವತಿಯಿಂದ ನಡೆದ ಕುಟುಂಬ ಸಮ್ಮಿಲನ ವೈಭವೋಪೇತವಾಗಿತ್ತು. ವಂಶವೃಕ್ಷವನ್ನು ಒಗ್ಗೂಡಿಸಲು ಪ್ರೇರಣೆಯಾದ ಇಳಿವಯ ಸ್ಸಿನ ಅಕ್ಕ-ತಂಗಿಯನ್ನು ವೇದಿಕೆಯಲ್ಲಿ ಕೂರಿಸಿದ್ದು, ಅವರೆದುರು ಶ್ಯಾನುಬಾಗ್‌ರ
ಎಲ್ಲಾ ಕುಟುಂಬದ ಮಂದಿ ಸ್ವಪರಿಚಯ ಮಾಡಿಕೊಂಡರು.
ಆಟೋಟ, ಹಾಡು, ಕುಣಿತದ ಜೊತೆಗೆ ಅಭಿಪ್ರಾಯ ಹಂಚಿಕೆಯೂ ನಡೆಯಿತು. ಸ್ಥಳೀಯವಾದ ಆಹಾರ- ಪದಾರ್ಥಗಳು (ಜಿಎಸ್‌ಬಿ ಶೈಲಿ), ಬಾಲ್ಯದ ನೆನಪು ಮಾಡುವ ಸಲುವಾಗಿ ಈ ಸಮಯದಲ್ಲಿ ಬೆಳೆಯುವ ಹಣ್ಣುಗಳನ್ನು ಪರಿಚಯಿಸಲಾ ಗಿತ್ತು. ಸಾಂಪ್ರದಾಯಿಕ ಉಡುಗೆಗಳು ಗಮನ ಸೆಳೆದವು.
ಟ್ರಸ್ಟ್ ಮೂಲಕ ಕುಟುಂಬದವರ ಶಿಕ್ಷಣ ಹಾಗೂ ಆರೋಗ್ಯ ಸಂಬಂಧಿ ವಿಚಾರಗಳಿಗೆ ಸಹಕಾರ ಮಾಡುವ ಚಿಂತನೆಯಿದೆ. ಕಾರ್ಯ ಕ್ರಮಕ್ಕೂ ಪೂರ್ವಭಾವಿಯಾಗಿ ಶ್ಯಾನುಭಾಗ್ ರ ಕುಟುಂಬದ ಕುರಿತಾದ
ಸಂಗ್ರಹ ಪೋಟೊಗಳು, ಹಿರಿಯ ಜೀವಗ ಳಿಂದ ಪುನರ್ಮಿಲನ ಆಹ್ವಾನಕ್ಕೆ ವೀಡಿಯೊ ತುಣುಕುಗಳನ್ನು ತಯಾರಿಸಲಾಗಿದ್ದು,
ಸಾಮಾಜಿಕ ಜಾಲತಾಣವನ್ನು ಯಶಸ್ವಿ ಯಾಗಿ ಬಳಸಿಕೊಳ್ಳಲಾಗಿತ್ತು ಎಂದು ಕುಟುಂಬಿಕರು ತಿಳಿಸಿದ್ದಾರೆ.







