ದುರಸ್ತಿ ಕಾಣದ ರಸ್ತೆ; ಲಾರಿ ಸಿಲುಕಿ ಸಂಚಾರ ಅಸ್ತವ್ಯಸ್ತ

ಹಟ್ಟಿ, ಮೇ 15: ಪಟ್ಟಣದಲ್ಲಿ ಜಲಧಾರೆ ಯೋಜನೆಗಾಗಿ ಅಗೆದು ಬಿಟ್ಟಿದ್ದ ಮುಖ್ಯ ರಸ್ತೆ ಸಾರ್ವಜನಿಕರ ಪಾಲಿಗೆ ಅಪಾಯದ ಗುಂಡಿಯಾಗಿ ಪರಿಣಮಿಸಿದೆ. ಸುಮಾರು ಒಂದು ವರ್ಷದ ಹಿಂದೆ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ರಸ್ತೆ ಇದುವರೆಗೂ ಸಮರ್ಪಕವಾಗಿ ದುರಸ್ತಿ ಮಾಡದೇ ಬಿಟ್ಟ ಪರಿಣಾಮ, ಉಳ್ಳಾಗಡ್ಡಿ ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ಸೋಮವಾರ ರಸ್ತೆ ಮಧ್ಯೆಯೇ ಕುಸಿದು ಸಿಲುಕಿದ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆದ ಈ ಘಟನೆ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಳಿಸಿತು. ರಸ್ತೆ ಕುಸಿತದಿಂದ ಲಾರಿಯ ಹಿಂಭಾಗ ಸಂಪೂರ್ಣವಾಗಿ ಹೊಂಡದಲ್ಲಿ ಸಿಲುಕಿಕೊಂಡಿದ್ದು, ನಂತರ ಜೆಸಿಬಿ ಮತ್ತು ಇತರ ವಾಹನಗಳ ಸಹಾಯದಿಂದ ಹೊರತೆಗೆದರು. ಈ ಘಟನೆ ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಸ್ಥಳೀಯರ ಪ್ರಕಾರ, ಜಲಧಾರೆ ಯೋಜನೆಯ ಹೆಸರಿನಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸಿದ ಬಳಿಕ ತಾತ್ಕಾಲಿಕವಾಗಿ ಮಣ್ಣು ತುಂಬಿ ಬಿಟ್ಟು ಹೋಗಲಾಗಿದೆ. ನಿಯಮಾನುಸಾರ ಜಿಎಸ್‌ಬಿ, ಡಬ್ಲ್ಯೂಎಂಎಂ ಹಾಗೂ ಗುಣಮಟ್ಟದ ಡಾಂಬರ್ ಬಳಸಿ ರಸ್ತೆ ಪುನರ್ ನಿರ್ಮಾಣ ಮಾಡಬೇಕಿದ್ದರೂ ಅದನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
‘‘ಈ ರಸ್ತೆಯಲ್ಲಿ ವಾಹನಗಳು ಸಿಲುಕುವುದು ಸಾಮಾನ್ಯ ಸಂಗತಿಯಾಗಿದೆ. ಮಳೆ ಬಂದರೆ ರಸ್ತೆ ಕೆಸರುಗದ್ದೆಯಾಗುತ್ತದೆ. ಭಾರೀ ವಾಹನಗಳು ಕುಸಿಯುತ್ತವೆ. ದ್ವಿಚಕ್ರ ವಾಹನ ಸವಾರರು ಪ್ರಾಣಪಣವಾಗಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’’ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಜನರ ತೆರಿಗೆ ಹಣದಲ್ಲಿ ನಡೆಯುವ ಕಾಮಗಾರಿಗಳನ್ನು ಅರ್ಧದಲ್ಲೇ ಬಿಟ್ಟು ಸಾರ್ವಜನಿಕರ ಸುರಕ್ಷತೆಯನ್ನು ಪಣಕ್ಕಿಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. ಒಂದು ವರ್ಷ ಕಳೆದರೂ ರಸ್ತೆ ಪುನರ್ ನಿರ್ಮಾಣ ಮಾಡದಿರುವುದು ಪಟ್ಟಣ ಪಂಚಾಯಿತಿ ಮತ್ತು ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ನಿರ್ಲಕ್ಷ್ಯಕ್ಕೆ ಉದಾಹರಣೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಮಾಡುವ ಹೊಣೆ ಯಾರದ್ದು ಎಂಬ ಪ್ರಶ್ನೆಗೆ ಯಾವುದೇ ಇಲಾಖೆ ಸ್ಪಷ್ಟ ಉತ್ತರ ನೀಡದಿರುವುದು ಅನುಮಾನಕ್ಕೆ ಕಾರಣವಾಗಿದೆ. ರಸ್ತೆ ಸಂಪೂರ್ಣ ಹಾಳಾಗಿದ್ದರೂ ಸ್ಥಳೀಯ ಆಡಳಿತ ಮತ್ತು ಸಂಬಂಧಿಸಿದ ಅಧಿಕಾರಿಗಳು ಮೌನ ವಹಿಸಿರುವುದು ಅಸಮಾಧಾನ ಹೆಚ್ಚಿಸಿದೆ.
ಲಾರಿ ಸಿಲುಕಿದ ಘಟನೆ ಬಳಿಕವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ. ಶಾಲಾ ಮಕ್ಕಳು, ವೃದ್ಧರು ಮತ್ತು ದ್ವಿಚಕ್ರ ವಾಹನ ಸವಾರರು ಹೆಚ್ಚಾಗಿ ಸಂಚರಿಸುವ ಈ ರಸ್ತೆಯನ್ನು ತಕ್ಷಣ ತಾಂತ್ರಿಕ ಮಾನದಂಡಗಳಂತೆ ಪುನರ್ ನಿರ್ಮಾಣ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಒಂದು ವರ್ಷವಾದರೂ ರಸ್ತೆ ದುರಸ್ತಿ ಆಗಿಲ್ಲ
ಜಲಧಾರೆ ಕಾಮಗಾರಿಯ ಹೆಸರಿನಲ್ಲಿ ಮುಖ್ಯ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದಾರೆ. ಭಾರೀ ವಾಹನಗಳು ಹೋದಾಗ ರಸ್ತೆ ಕುಸಿಯುತ್ತಿದೆ. ಇದೀಗ ಉಳ್ಳಾಗಡ್ಡಿ ತುಂಬಿದ್ದ ಲಾರಿ ಸಿಲುಕಿರುವ ಘಟನೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇನ್ನೂ ಎಷ್ಟು ಅಪಘಾತಗಳು ನಡೆದ ಬಳಿಕ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು. ಜಲಧಾರೆ ಕಾಮಗಾರಿಗಾಗಿ ರಸ್ತೆ ಅಗೆದು ಒಂದು ವರ್ಷವಾದರೂ ಸಮರ್ಪಕ ದುರಸ್ತಿ ಮಾಡದೇ ಬಿಟ್ಟಿರುವುದು ಅಧಿಕಾರಿಗಳ ವೈಫಲ್ಯವಾಗಿದೆ. ಇದೀಗ ಲಾರಿಗಳು ರಸ್ತೆ ಕುಸಿದು ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರ ಜೀವಕ್ಕೆ ಅಪಾಯ ಉಂಟುಮಾಡುತ್ತಿರುವ ಸಂಬಂಧಿಸಿದ ಗುತ್ತಿಗೆದಾರರು, ಪಪಂ ಅಧಿಕಾರಿಗಳು ಮತ್ತು ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ತಕ್ಷಣ ಗುಣಮಟ್ಟದ ರಸ್ತೆ ನಿರ್ಮಾಣ ಮಾಡದಿದ್ದರೆ ಸಾರ್ವಜನಿಕ ಹೋರಾಟ ಅನಿವಾರ್ಯವಾಗಲಿದೆ ಎಂದು ಎಸ್‌ಎಫ್‌ಐ, ಡಿವೈಎಫ್‌ಐ, ಜೆಎಂಎಸ್ ಮುಖಂಡರಾದ ರಿಯಾಜ್ ಖುರೇಷಿ, ರಮೇಶ ಜೆ., ಸಾಹೀರಾ, ಶಾಂತಕುಮಾರಿ, ವನಜಾಕ್ಷಿ, ಇಮ್ರಾನ್, ಶುಂಶುದ್ದೀನ್ ಆಗ್ರಹಿಸಿದ್ದಾರೆ.






