ರಶ್ಯನ್ ಪ್ರಜೆಯ ಕನ್ನಡ ಪ್ರೇಮ : ಆಯುರ್ವೇದ ಕಲಿತು ಕನ್ನಡ ಕರಗತ ಮಾಡಿಕೊಂಡ ಡಾ.ಪವೆಲ್

ಉಡುಪಿ: ಕನ್ನಡ ಭಾಷೆಯ ಸೌಂದರ್ಯಕ್ಕೆ ಮನಸೋತು ಆ ಭಾಷೆಯನ್ನು ಕರಗತ ಮಾಡಿಕೊಂಡ ಸಾಕಷ್ಟು ವಿದೇಶಿಗರನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬರು ರಶ್ಯ ಪ್ರಜೆ ಆಯುರ್ವೇದ ಕಲಿಯಲು ಕರ್ನಾಟಕಕ್ಕೆ ಬಂದು, ಕನ್ನಡ ಮಾತನಾಡಲು ಮಾತ್ರವಲ್ಲ, ಬರೆಯಲು-ಓದಲು ಕಲಿತಿರುವುದು ವಿಶೇಷ. ಅವರ ಈ ಕನ್ನಡ ಪ್ರೇಮ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಸಂದರ್ಭ ಗಮನ ಸೆಳೆಯುತ್ತದೆ.
ಇದು ರಶ್ಯದ ಪ್ರಜೆ ಡಾ.ಪವೆಲ್ ಅವರ ಕನ್ನಡ ಭಾಷೆ ಬಗೆಗಿನ ಅಪಾರ ಪ್ರೀತಿಯ ಕಥೆ. ಇದೇ ಪ್ರೀತಿಯಿಂದ ಅವರು ಕನ್ನಡವನ್ನು ಸಲೀಸಾಗಿ ಮಾತನಾಡುವುದಷ್ಟೇ ಅಲ್ಲದೆ, ಓದುವ ಮತ್ತು ಬರೆಯುವ ಕೌಶಲ್ಯವನ್ನೂ ಬೆಳೆಸಿಕೊಂಡಿದ್ದಾರೆ. ಕನ್ನಡ ಭಾಷೆಯ ಸೌಂದರ್ಯಕ್ಕೆ ಅವರು ಮನ ಸೋತಿದ್ದಾರೆ. ಕನ್ನಡದ ಮೇಲಿನ ಅವರ ಅಭಿಮಾನ ಸ್ಫೂರ್ತಿದಾಯಕ.
ಎಂ.ಡಿ. ವ್ಯಾಸಂಗ: ರಶ್ಯದಲ್ಲಿದ್ದ ಸಂದರ್ಭ ಡಾ.ಪವೆಲ್‌ರಿಗೆ ಅನಾರೋಗ್ಯ ಕಾಡಿತು. ಅದಕ್ಕಾಗಿ ಅವರು ಆಯುರ್ವೇದ ಕಲಿತು ರಶ್ಯದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಅಲ್ಲಿನ ವೈದ್ಯರ ಬಳಿ ಹೋಗಿದ್ದರು. ಆಗ ಅವರು ಭಾರತಕ್ಕೆ ತೆರಳಿ ಆಯುರ್ವೇದ ಚಿಕಿತ್ಸೆ ಮಾಡುವಂತೆ ಸೂಚಿಸಿದ್ದಾರೆ.
ಅಲ್ಲಿನ ವೈದ್ಯರ ಅನುಭವ ಪವೆಲ್ ಅವರನ್ನು ಈ ಆಯುರ್ವೇದ ವೈದ್ಯಕೀಯ ಪದ್ಧತಿಯತ್ತ ಆಕರ್ಷಿಸಿತು. ಹೀಗಾಗಿ ಆಯುರ್ವೇದದ ಕುರಿತು ಅಧ್ಯಯನಕ್ಕಾಗಿ ಅವರು ಭಾರತಕ್ಕೆ ಆಗಮಿಸಿದರು. ಕರ್ನಾಟಕದ ಹಾಸನದಲ್ಲಿ ಬಿಎಎಂಎಸ್ ಪದವಿ ಪೂರ್ಣಗೊಳಿಸಿದ ಡಾ.ಪವೆಲ್, ಎರಡು ವರ್ಷಗಳಿಂದ ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಎಂ.ಡಿ. ವ್ಯಾಸಂಗ ಮಾಡುತ್ತಿದ್ದಾರೆ.
ರೋಗಿಗಳಿಗಾಗಿ ಕಲಿತರು: 2015ರಲ್ಲಿ ಆಯುರ್ವೇದ ಕಲಿಯಲು ಕರ್ನಾಟಕಕ್ಕೆ ಆಗಮಿಸಿರುವ ಪವೆಲ್, ಬಿಎಎಂಎಸ್‌ಗೆ ಅರ್ಜಿ ಹಾಕಿದಾಗ ಅವರಿಗೆ ಹಾಸನ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಸೀಟು ದೊರೆಯಿತು.
‘ಹಾಸನದಲ್ಲಿ ವಿದ್ಯಾರ್ಥಿಯಾಗಿದ್ದಾಗ ಆಸ್ಪತ್ರೆಯಲ್ಲಿ ಪ್ರಾಯೋಗಿಕ ತರಬೇತಿ ಪಡೆಯುವ ಸಂದರ್ಭ ಕನ್ನಡ ಮಾತನಾಡುವ ರೋಗಿಗಳೊಂದಿಗೆ ಸಂವಹನ ನಡೆಸಬೇಕಾಗಿತ್ತು. ಹೀಗಾಗಿ ಕನ್ನಡ ಕಲಿಯಲು ಆರಂಭಿಸಿದೆ. ಬಳಿಕ ಕನ್ನಡ ಭಾಷೆಯ ಮೇಲಿನ ಆಸಕ್ತಿ ಹೆಚ್ಚಾಯಿತು. ಕನ್ನಡ ಒಂದು ಉತ್ತಮ ಭಾಷೆ. ಅದರ ಲಿಪಿ ತುಂಬಾ ಚಂದ’ ಎನ್ನುತ್ತಾರೆ ಡಾ.ಪವೆಲ್.
ಯೂಟ್ಯೂಬ್ ನೆರವು: ಕನ್ನಡ ಮಾತನಾಡುವುದು ಮಾತ್ರವಲ್ಲ ಓದಲು, ಬರೆಯುವ ಆಸಕ್ತಿ ಕೂಡ ಡಾ.ಪವೆಲ್ ಅವರಲ್ಲಿ ಹೆಚ್ಚಾಯಿತು. ಅದಕ್ಕೆ ಅವರು ಯೂಟ್ಯೂಬ್ ನೆರವು ಪಡೆದುಕೊಂಡು ಇನ್ನಷ್ಟು ಆಳವಾಗಿ ಭಾಷೆಯನ್ನು ಕಲಿತು ಕರಗತ ಮಾಡಿಕೊಂಡರು.
‘ಕನ್ನಡ ಸಂಗೀತ ನನೆಗೆ ತುಂಬಾ ಇಷ್ಟ. ಕನ್ನಡ ಸಿನೆಮಾ ಕೂಡ ನೋಡುತ್ತೇನೆ. ಕನ್ನಡ ಮಾತನಾಡಲು ನನ್ನ ಗೆಳೆಯರಿಂದ ತುಂಬಾ ಸಹಕಾರ ದೊರೆಯಿತು. ಕನ್ನಡ ಕಲಿಸುವ ಯೂಟ್ಯೂಬ್ ಚಾನೆಲ್‌ನ್ನು ವಾರದಲ್ಲಿ ನಾಲ್ಕೈದು ಬಾರಿ ನೋಡಿ ಹೆಚ್ಚಿನ ಕನ್ನಡವನ್ನು ಕಲಿತುಕೊಂಡೆ. ಯೂಟ್ಯೂಬ್ ನನಗೆ ತುಂಬಾ ಸಹಾಯ ಮಾಡಿತು ಎಂದು ಪವೆಲ್ ತಿಳಿಸಿದರು. ಹೀಗೆ ಅವರು ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನೂ ಬೆಳೆಸಿಕೊಂಡರು. ಈಗಾಗಲೇ ಹಲವು ಕನ್ನಡ ಪುಸ್ತಕಗಳನ್ನು ಓದಿರುವ ಅವರು, ಕನ್ನಡ ಸಾಹಿತ್ಯದ ಪರಿಚಯವನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಕೇವಲ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬಂದ ಅವರು, ಕನ್ನಡ ಭಾಷೆ, ಸಂಗೀತ, ಸಿನೆಮಾ ಮತ್ತು ಸಾಹಿತ್ಯದ ಮೇಲೂ ಪ್ರೀತಿ ಬೆಳೆಸಿಕೊಂಡಿರುವುದು ವಿಶೇಷ.
‘ಉಡುಪಿಯ ಜನ, ಆಹಾರ, ಪರಿಸರ ಇಷ್ಟ’
ಬಿಎಎಂಎಸ್ ಕಲಿಯಲು ಅರ್ಜಿ ಹಾಕಿದಾಗ ಹಾಸನ ಎಸ್‌ಡಿಎಂ ಕಾಲೇಜಿನಲ್ಲಿ ಸೀಟು ಸಿಕ್ಕ ಡಾ.ಪವೆಲ್‌ಗೆ ಎಂ.ಡಿ. ವ್ಯಾಸಂಗಕ್ಕೆ ಅರ್ಜಿ ಹಾಕಿದಾಗ ಉಡುಪಿ ಎಸ್‌ಡಿಎಂನಲ್ಲಿ ಸೀಟು ದೊರೆಯಿತು. ಇದರಿಂದ ಅವರು ಉಡುಪಿ ಜನರ ಆಚಾರ ವಿಚಾರ, ಆಹಾರ ಸಂಸ್ಕೃತಿ ಬಗ್ಗೆ ಆಕರ್ಷಿತರಾದರು.
‘‘ಉಡುಪಿ ಜನ ತುಂಬಾ ಒಳ್ಳೆಯವರು. ಇಲ್ಲಿನ ಕೋರಿ ರೊಟ್ಟಿ, ನೀರ್ದೋಸೆ, ಕುಚ್ಚಿಗೆ ಅಕ್ಕಿ ತುಂಬಾ ಇಷ್ಟ. ಇಲ್ಲಿನ ಬಿಸಿಲು, ಮಳೆ ಜಾಸ್ತಿ ಇರುವ ಹಾವಮಾನ ಆರಂಭದಲ್ಲಿ ತುಂಬಾ ಕಷ್ಟ ಆಯಿತು. ಈಗ ಅದಕ್ಕೆ ಹೊಂದಿಕೊಂಡಿದ್ದೇನೆ. ಒಟ್ಟಾರೆ ಇಲ್ಲಿನ ಜನ, ಆಹಾರ, ಪರಿಸರ ತುಂಬಾ ಇಷ್ಟವಾಗಿದೆ’’ ಎಂದು ಡಾ.ಪವೆಲ್ ಹೇಳುತ್ತಾರೆ.
‘‘ಕರ್ನಾಟಕದಲ್ಲಿ ಇದ್ದು ಸುಮಾರು 10 ವರ್ಷ ಗಳಾಯಿತು. ನನಗೆ ಇಲ್ಲೇ ಇರುವುದು ಅಂದರೆ ಇಷ್ಟ. ಆದರೆ ಮುಂದೆ ನೋಡಬೇಕು. ಕನ್ನಡದ ಜೊತೆ ನನ್ನ ಗೆಳೆಯರಿಂದ ಹಿಂದಿ ಮಾತನಾಡುವುದನ್ನು ಕಲಿತಿದ್ದೇನೆ. ಇಲ್ಲಿನ ಎಲ್ಲ ಭಾಷೆಗಳು ತುಂಬಾ ಚೆಂದ’’ ಎಂದು ಅವರು ಹೇಳುತ್ತಾರೆ.






