ಐರ್‌ಲ್ಯಾಂಡ್‌ನ ಕಾನೂನು, ವೈದ್ಯಕೀಯ ವ್ಯವಸ್ಥೆ ಮತ್ತು ಜಗತ್ತಿನ ಗಮನ ಸೆಳೆದ ಒಂದು ದುರಂತ

ಕೆಲವು ಕಥೆಗಳು ಗಡಿಗಳನ್ನು ಮೀರಿ ಬೆಳೆಯುತ್ತವೆ. ಅವು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಸಂಭವಿಸಿದ ಘಟನೆಯಾದರೂ ಜಾಗತಿಕ ಚರ್ಚೆಯಾಗಿ ಪರಿವರ್ತಿಸುತ್ತವೆ.
ಲಂಡನ್‌ನಿಂದ ಸುಮಾರು 400 ಮೈಲು ದೂರವಿರುವ ದೇಶ ಸೌಥೆರ್ನ್ ಐರ್‌ಲ್ಯಾಂಡ್. ಇದನ್ನು ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್ ಎಂದು ಕರೆಯಲಾಗುತ್ತದೆ. ಇಲ್ಲಿ ನಡೆದ ಒಂದು ದುರಂತ ಕರ್ನಾಟಕದವರೆಗೂ ಪ್ರತಿಧ್ವನಿಸಿತ್ತು ಮತ್ತು ಒಂದು ದೇಶದ ವೈದ್ಯಕೀಯ ಕಾನೂನು ತಿದ್ದುಪಡಿಗೂ ಕಾರಣವಾಯಿತು.
ಕರ್ನಾಟಕದ ಬಾಗಲಕೋಟೆ ಮೂಲದ ದಂತವೈದ್ಯೆ ಸವಿತಾ, ಐಟಿ ಇಂಜಿನಿಯರ್ ಆದ ತಮ್ಮ ಪತಿಯೊಂದಿಗೆ ಐರ್‌ಲ್ಯಾಂಡ್‌ನ ಗಾಲ್ವೆ ನಗರದಲ್ಲಿ ಕೆಲವು ವರ್ಷಗಳಿಂದ ನೆಲೆಸಿದ್ದರು. ಹೊಸ ಬದುಕಿನ ಕನಸುಗಳನ್ನು ಹೊತ್ತ ಈ ಯುವ ಜೋಡಿಯ ಬದುಕಿನಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ವಿಧಿ ಬೇರೆಯೇ ಕಥೆಯನ್ನು ಬರೆದಿಟ್ಟಿತ್ತು
2012ರಲ್ಲಿ ಗರ್ಭಧಾರಣೆಯ 17ನೇ ವಾರದಲ್ಲಿ ಸವಿತಾಗೆ ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡು ಗಾಲ್ವೇ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಸವಿತಾ ಮತ್ತು ಅವರ ಪತಿ ಗರ್ಭಧಾರಣೆಯನ್ನು ಅಂತ್ಯಗೊಳಿಸುವಂತೆ ವೈದ್ಯರಲ್ಲಿ ಮನವಿ ಮಾಡಿಕೊಂಡರು. ಆದರೆ ಆ ಸಮಯದಲ್ಲಿ ಜಾರಿಯಲ್ಲಿದ್ದ ಐರಿಷ್ ಕಾನೂನಿನ ಪ್ರಕಾರ ತಾಯಿಯ ಜೀವಕ್ಕೆ ಸ್ಪಷ್ಟ ಮತ್ತು ಗಂಭೀರ ಅಪಾಯವಿದೆ ಎಂದು ವೈದ್ಯಕೀಯವಾಗಿ ನಿರ್ಧರಿಸದ ಹೊರತು ಗರ್ಭಪಾತ ಮಾಡುವುದು ಕಾನೂನುಬದ್ಧವಾಗಿರಲಿಲ್ಲ. ವೈದ್ಯಕೀಯ ತಂಡದ ಮುಂದೆ ಕಾನೂನಿನ ಮಿತಿಗಳು ದೊಡ್ಡ ಅಡ್ಡಿಯಾಗಿದ್ದವು. ಸವಿತಾ ಅವರ ಸಂದರ್ಭದಲ್ಲಿ ಗರ್ಭಪಾತ ಅನಿವಾರ್ಯವಾಗಿರುವುದು ಸ್ಪಷ್ಟವಾಗಿದ್ದರೂ, ಭ್ರೂಣದ ಹೃದಯ ಬಡಿತ ಇನ್ನೂ ಇತ್ತು. ಈ ಕಾನೂನು ಪರಿಸ್ಥಿತಿಯೇ ಸವಿತಾ ಪ್ರಕರಣದ ಅತ್ಯಂತ ನೋವಿನ ಭಾಗಗಳಲ್ಲಿ ಒಂದಾಯಿತು. ಜೊತೆಗೆ ಆ ದಿನಗಳಲ್ಲಿ ಐರ್‌ಲ್ಯಾಂಡ್ ಅತ್ಯಂತ ಕಠಿಣ ಗರ್ಭಪಾತ ನಿರ್ಬಂಧಗಳನ್ನು ಹೊಂದಿದ್ದ, ಕೆಥೊಲಿಕ್ ಸಾಮಾಜಿಕ ಪ್ರಭಾವ ಗಟ್ಟಿಯಾಗಿದ್ದ ದೇಶವಾಗಿತ್ತು.
ಕಡೆಗೆ ಭ್ರೂಣದ ಹೃದಯ ಬಡಿತ ನಿಂತ ಮೇಲೆ ಸವಿತಾ ಅವರರಿಗೆ ಗರ್ಭಪಾತ ಮಾಡಿಸಲಾಯಿತು. ಆದರೆ ಅಷ್ಟುಹೊತ್ತಿಗೆ ಸವಿತಾ ಅವರ ಆರೋಗ್ಯ ತೀವ್ರವಾಗಿ ಹದೆಗೆಟ್ಟಿತ್ತು ಗರ್ಭಪಾತದ ಸೋಂಕಿನಿಂದ ಬಳಲುತ್ತಿದ್ದ 31ರ ಹರೆಯದ ಸವಿತಾ ಅಕ್ಟೋಬರ್ 12, 2012ರಂದು ಸೆಪ್ಟಿಸೀಮಿಯಾದಿಂದ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.
ಅವರ ಸಾವಿನ ನಂತರ ನಡೆದ ವಿಚಾರಣೆಯಲ್ಲಿ ಆಸ್ಪತ್ರೆಯ ವ್ಯವಸ್ಥೆಯಲ್ಲಿಯೂ ಹಲವು ವೈಫಲ್ಯಗಳು ಬೆಳಕಿಗೆ ಬಂದವು. ರಕ್ತ ಪರೀಕ್ಷೆಯ ಫಲಿತಾಂಶಗಳನ್ನು ಸರಿಯಾಗಿ ಅನುಸರಿಸದಿರುವುದು, ಮೇಲ್ವಿಚಾರಣೆಯಲ್ಲಿ ಕೊರತೆ ಮತ್ತು ಸೋಂಕಿನ ಅಪಾಯವನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಮುಂತಾದವುಗಳು. ವಿಚಾರಣೆಯ ತೀರ್ಪು ಸಾವನ್ನು ‘medical misadventure’ ಎಂದು ದಾಖಲಿಸಿತು.
ಊSಇ ತನಿಖೆಯು ಐರ್‌ಲ್ಯಾಂಡ್‌ನ ಕಾನೂನಿನ ವ್ಯಾಖ್ಯಾನ, ಸ್ಪಷ್ಟ ವೈದ್ಯಕೀಯ ಮಾರ್ಗಸೂಚಿಗಳ ಕೊರತೆ ಮತ್ತು ತರಬೇತಿಯ ಕೊರತೆಯನ್ನು ಗರ್ಭಪಾತವನ್ನು ಮುಂಚಿತವಾಗಿ ಮಾಡದಿರುವಲ್ಲಿ ‘ಪ್ರಮುಖ ಕೊಡುಗೆ ನೀಡಿದ ಅಂಶ’ ಎಂದು ಗುರುತಿಸಿತು.
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯ ಜೀವವೇ ಮೊದಲ ಆದ್ಯತೆಯಾಗಬೇಕಲ್ಲವೇ?
ಈ ಪ್ರಶ್ನೆ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಯಿತು. ಸವಿತಾ ಅವರ ಸಾವು ಜಾಗತಿಕ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಯಿತು. ಒಂದು ವೈಯಕ್ತಿಕ ದುರಂತ ಭಾರೀ ಸಾರ್ವಜನಿಕ ಪ್ರಶ್ನೆಯಾಗಿ ಬದಲಾಯಿತು.
ಮುಂದಿನ ವರ್ಷಗಳಲ್ಲಿ ಐರ್‌ಲ್ಯಾಂಡ್‌ನ ಗರ್ಭಪಾತ ಕಾನೂನಿನಲ್ಲೂ ಮಹತ್ವದ ಬದಲಾವಣೆಗಳು ನಡೆದವು. 2018ರ ಜನಮತ ಸಂಗ್ರಹದ ನಂತರ ಕಾನೂನು ಬದಲಾವಣೆಯಾಯಿತು ಮತ್ತು 2019ರಿಂದ ಐರ್‌ಲ್ಯಾಂಡ್‌ನಲ್ಲಿ ಕಾನೂನುಬದ್ಧ ಗರ್ಭಪಾತ ಸೇವೆಗಳು ಆರಂಭವಾದವು. 2026ರ HSE ವರದಿ ಪ್ರಕಾರ, ಈಗ ದೇಶದ ಎಲ್ಲಾ ಮೆಟರ್ನಿಟಿ ಯೂನಿಟ್‌ಗಳಲ್ಲಿ termination services ಲಭ್ಯವಿವೆ.
ಇವೆಲ್ಲವನ್ನೂ ಸವಿತಾ ಅವರ ಸಾವಿನ ಪರಿಣಾಮವಾಗಿ ನೋಡುವುದು ಸಾಧ್ಯವಿಲ್ಲ. ಆದರೆ ಅವರ ಪ್ರಕರಣ ವೈದ್ಯಕೀಯ ಕಾನೂನು, ಮಹಿಳೆಯರ ಆರೋಗ್ಯ ಮತ್ತು ಗರ್ಭಪಾತದ ಕುರಿತು ನಡೆದ ಅಂತರ್‌ರಾಷ್ಟ್ರೀಯ ಚರ್ಚೆಯ ಪ್ರಮುಖ ತಿರುವುಗಳಲ್ಲಿ ಒಂದಾಯಿತು. ಕಾನೂನು, ವೈದ್ಯಕೀಯ ನಿರ್ಧಾರ ಆಸ್ಪತ್ರೆಯ ವ್ಯವಸ್ಥೆ ಮತ್ತು ಮಾನವೀಯತೆ ಎಲ್ಲವೂ ಜಟಿಲಗೊಂಡಾಗ ಅದರ ಬೆಲೆ ಮನುಷ್ಯನ ಜೀವವಾಗಬಹುದು ಎಂಬ ಸತ್ಯವನ್ನು ಈ ಪ್ರಕರಣ ನೆನಪಿಸುತ್ತದೆ.
ಶಿಕ್ಷಣ, ಉದ್ಯೋಗ ಮತ್ತು ಉತ್ತಮ ಭವಿಷ್ಯ ಅರಸುತ್ತ ಕರ್ನಾಟಕದ ಅನೇಕ ಯುವಕರು ಮತ್ತು ಯುವತಿಯರು ವಿಶ್ವದ ಅನೇಕ ದೇಶಗಳಿಗೆ ತೆರಳಿದ್ದಾರೆ. ಸವಿತಾ ಕೂಡ ಅಂತಹ ವಲಸಿಗ ಭಾರತೀಯರು. ಆದರೆ ಅವರ ಹೆಸರು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಐರ್‌ಲ್ಯಾಂಡ್‌ನ ವೈದ್ಯಕೀಯ ಇತಿಹಾಸದಲ್ಲೂ, ವಿಶ್ವದಾದ್ಯಂತ ಮಹಿಳೆಯರ ಆರೋಗ್ಯದ ಕುರಿತ ಚರ್ಚೆಯಲ್ಲೂ ಬೆರೆತುಹೋಗಿದೆ.
ಒಬ್ಬ ಕರ್ನಾಟಕದ ಯುವತಿಯ ಬದುಕು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬದಲಾವಣೆಯ ಚರ್ಚೆಗೆ ಕಾರಣವಾದದ್ದು ನಮ್ಮ ಕಾಲದ ಅತ್ಯಂತ ದುಃಖದ, ಆದರೆ ಮಹತ್ವದ ಇತಿಹಾಸವಾಗಿದೆ.
ಸವಿತಾ ಹಲಪ್ಪನವರ್ ಒಂದು ಹೆಸರು ಮಾತ್ರವಲ್ಲ; ಕರ್ನಾಟಕದಿಂದ ಜಗತ್ತಿಗೆ ತಲುಪಿದ, ಮರೆಯಲಾಗದ ಒಂದು ಅಧ್ಯಾಯ.
ಸವಿತಾ ಹಾಲಪ್ಪನವರನ್ನು ಕೇವಲ ರಾಜಕೀಯ ಅಥವಾ ಕಾನೂನಿನ ಚರ್ಚೆಯಾಗಿ ನೆನಪಿಸುಕೊಳ್ಳುವುದಕ್ಕಿಂತ, ಒಂದು ಜೀವನ ಮತ್ತು ಆಕಸ್ಮಿಕವಾಗಿ ಕಳೆದುಹೋದ ಕರ್ನಾಟಕದ ಒಂದು ಕುಟುಂಬದ ಕನಸುಗಳಾಗಿ ಗ್ರಹಿಸುವುದು ಬಹುಶಃ ಹೆಚ್ಚು ಸಮಂಜಸವೆನಿಸುತ್ತದೆ.
(ಅಂಕಣಕಾರರು ಸಿನೆಮಾ, ಧಾರಾವಾಹಿ, ಸಾಕ್ಷ್ಯಚಿತ್ರಗಳ ನಿರ್ಮಾಣ, ನಿರ್ದೇಶನ, ನಟನೆ, ಬರವಣಿಗೆ ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವವರು)






