ಪಕ್ಷ ಒಡೆಯುವ ಬಿಜೆಪಿಯ ಆಟಕ್ಕೆ ಎಎಪಿಯ ಮುಂದಿನ ನಡೆಯೇನು?

ಕೇಜ್ರಿವಾಲ್ ಅವರ ದೊಡ್ಡ ತಪ್ಪು ಎಂದರೆ, ಹಣಕ್ಕಾಗಿ ಉದ್ಯಮಿಗಳಿಗೆ ರಾಜ್ಯಸಭಾ ಸ್ಥಾನ ನೀಡಿದ್ದುದು. ಅದೇ ಈಗ ಅವರಿಗೆ ತಿರುಗಿ ಕಚ್ಚತೊಡಗಿದೆ.
ಪಕ್ಷ ಅಥವಾ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧವಿಲ್ಲದವರು ಒಳಗಿದ್ದಾಗ, ಒಡೆಯುವವರ ದಾರಿ ಸುಲಭವಾಗುತ್ತದೆ ಎಂಬುದು ಸಾಬೀತಾಗಿದೆ.
ರಾಘವ್ ಚಡ್ಡಾ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ.
ವರ್ಷಗಳಿಂದ ಬಿಜೆಪಿಗೆ ಮಾಡಲು ಸಾಧ್ಯವಾಗದ ಕೆಲಸವನ್ನು ಎಎಪಿ ವಿರುದ್ಧ ಈಗ ರಾಘವ್ ಚಡ್ಡಾ ಮಾಡಿಬಿಟ್ಟಿರುವ ಹಾಗಿದೆ ಅಥವಾ ಇದು ಎಎಪಿಯನ್ನು ಒಡೆಯುವ ಬಿಜೆಪಿಯದ್ದೇ ಪ್ಲ್ಯಾನ್‌ನ ಭಾಗವಾಗಿ ನಡೆದಿರುವಂತಿದೆ. ಯಾಕೆಂದರೆ, ಎಎಪಿ ತೊರೆದು ಹೋಗಿರುವುದು ಚಡ್ಡಾ ಮಾತ್ರವಲ್ಲ ಮತ್ತು ಅಷ್ಟು ಮಂದಿ ಒಟ್ಟಿಗೇ ಇಲ್ಲಿಂದ ಅಲ್ಲಿಗೆ ಹೊರಟರೆಂಬುದು ಇದ್ದಕ್ಕಿದ್ದಂತೆ ಆದದ್ದೂ ಅಲ್ಲ.
ಹಾಗೆ ನೋಡಿದರೆ, ರಾಘವ್ ಚಡ್ಡಾ ಎಎಪಿಯಿಂದ ಬಿಜೆಪಿಗೆ ಹಾರಲಿದ್ದಾರೆ ಎಂಬುದು ರಹಸ್ಯವಾಗಿಯೇನೂ ಉಳಿದಿರಲಿಲ್ಲ. ಇಡೀ ದೇಶಕ್ಕೇ ಅದು ತಿಳಿದಿತ್ತು.
ಇಲ್ಲಿ ದಿಲ್ಲಿ ಅಬಕಾರಿ ನೀತಿ ಪ್ರಕರಣದಲ್ಲಿ ತನಿಖಾ ಏಜೆನ್ಸಿಗಳು ಕೇಜ್ರಿವಾಲ್ ಸೇರಿದಂತೆ ಎಎಪಿ ನಾಯಕರ ಹಿಂದೆ ಬಿದ್ದಿದ್ದಾಗ, ಚಡ್ಡಾ ಲಂಡನ್‌ನಲ್ಲಿದ್ದರು. ಅಲ್ಲಿಂದ ಬಂದ ಬಳಿಕವೂ ಅವರು ತಮ್ಮ ನಾಯಕರಿಗೆ ಅನ್ಯಾಯವಾಯಿತೆಂದೇನೂ ಚಕಾರ ಎತ್ತಿರಲಿಲ್ಲ. ಅವರು ಹೆಚ್ಚುಕಡಿಮೆ ಪಕ್ಷದಿಂದ ಹೊರಗಿದ್ದಾರೆ ಎನ್ನುವಾಗಲೇ, ಪಕ್ಷ ಅವರನ್ನು ರಾಜ್ಯಸಭೆ ಉಪನಾಯಕ ಹುದ್ದೆಯಿಂದ ತೆಗೆದುಹಾಕಿತು. ಅಂತಿಮವಾಗಿ, ಎಪ್ರಿಲ್ 24ರಂದು ಚಡ್ಡಾ ಪಕ್ಷ ತೊರೆದು ಬಿಜೆಪಿಗೆ ಹೋಗುವ ಮಾತಾಡಿದಾಗ, ಎಲ್ಲರಿಗೂ ಗೊತ್ತೇ ಇದ್ದ ವಿಷಯ ಅಧಿಕೃತವಾಯಿತು, ಅಷ್ಟೆ.
ಚಡ್ಡಾ ಪಕ್ಷ ಬದಲಾಯಿಸಿದ್ದು ಆಘಾತಕಾರಿ ಸಂಗತಿಯಲ್ಲ. ಆದರೆ ಇಲ್ಲಿ ಒಂದು ದೊಡ್ಡ ನಾಟಕವೂ ಇದೆ. ಚಡ್ಡಾ ತಮ್ಮೊಂದಿಗೆ ಆರು ರಾಜ್ಯಸಭಾ ಸಂಸದರನ್ನು ಕೂಡ ಬಿಜೆಪಿಗೆ ಕರೆದೊಯ್ಯುತ್ತಾರೆಂದು ಅರವಿಂದ ಕೇಜ್ರಿವಾಲ್‌ಗೆ ತಿಳಿದಿರಲಿಲ್ಲ.
ಈಗ, ಶಿವಸೇನೆ ಮತ್ತು ಎನ್‌ಸಿಪಿಯನ್ನು ಒಡೆದಂತೆ, ಮೂರನೇ ಎರಡರಷ್ಟು ಬಹುಮತವನ್ನು ಉಲ್ಲೇಖಿಸಿ ಎಎಪಿಯನ್ನೂ ಒಡೆಯಲಾಗುತ್ತದೆಯೆ? ರಾಘವ್ ಚಡ್ಡಾ ಮತ್ತು ಬಿಜೆಪಿ ಎಎಪಿಯನ್ನು ಒಡೆಯಲು ಪ್ರಯತ್ನಿಸುತ್ತಾರೆಯೇ? ಅದರಲ್ಲೂ ವಿಶೇಷವಾಗಿ ಪಂಜಾಬ್‌ನಲ್ಲಿ ಎಎಪಿ ಸರಕಾರ ಉರುಳಿಸುವ ಪ್ಲ್ಯಾನ್ ರೆಡಿ ಆಗಿದೆಯೇ? ಅರವಿಂದ ಕೇಜ್ರಿವಾಲ್ ಅವರ ಪಕ್ಷವೂ ಚುನಾವಣಾ ಚಿಹ್ನೆ ಕಳೆದುಕೊಳ್ಳುತ್ತದೆಯೆ?
ಮುಂಬರುವ ಪಂಜಾಬ್ ಚುನಾವಣೆಗಳನ್ನು ಗಮನಕ್ಕೆ ತೆಗೆದುಕೊಂಡರೆ, ಈಗಿನ ಬೆಳವಣಿಗೆ ಎಎಪಿಗೆ ಕೆಟ್ಟ ಸುದ್ದಿಯಾಗಬಹುದೆ?
ಪಂಜಾಬ್‌ನ 45 ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಎಂದು ಚಡ್ಡಾ ಹೇಳುತ್ತಿದ್ದಾರೆ. ಪಕ್ಷಾಂತರ ಕಾಯ್ದೆ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಬಿಜೆಪಿ ಈಗ ತನ್ನ ಮತ್ತೊಂದು ಬಹುದೊಡ್ಡ ಎದುರಾಳಿಯನ್ನು ಮುಗಿಸಲು ನಿಂತಿದೆಯೆ?
ಹಾಗೆ ನೋಡಿದರೆ, ಎಎಪಿಯನ್ನು ಒಡೆಯುವ ಬಿಜೆಪಿ ಆಟ ಈಗ ಶುರುವಾದದ್ದೇನೂ ಅಲ್ಲ. 2022ರಿಂದಲೂ ಬಿಜೆಪಿ ಎಎಪಿ ನಾಯಕರಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸಿದೆ.
ಮೊದಲು, ದಿಲ್ಲಿಯ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿಸ ಲಾಯಿತು. ನಂತರ ಫೆಬ್ರವರಿ 2023ರಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಪ್ರಕರಣದಲ್ಲಿ ಬಂಧಿಸಲಾಯಿತು.
ಅಕ್ಟೋಬರ್ 2023ರಲ್ಲಿ ಸಂಜಯ್ ಸಿಂಗ್ ಅವರ ಸರದಿ ಬಂತು ಮತ್ತು ಮಾರ್ಚ್ 2024ರಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನೇ ಜೈಲಿಗೆ ಹಾಕಲಾಯಿತು.
ಆದರೆ, ಈ ನಾಯಕರ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಅವರಿಗೆ ಜಾಮೀನು ಸಿಕ್ಕಿತು.
ಆದರೆ ಎಎಪಿಯನ್ನು ಒಡೆಯಲು ತನಿಖಾ ಏಜೆನ್ಸಿಗಳನ್ನು ಬೇಕಾಬಿಟ್ಟಿ ಬಳಸಲಾಯಿತು.
2024ರಲ್ಲಿ ಕೇಜ್ರಿವಾಲ್ ಬಂಧನದ ನಂತರ ಎಎಪಿ ಹಿರಿಯ ನಾಯಕಿ ಅತಿಶಿ, ತಮಗೆ ಬಿಜೆಪಿ ಸೇರುವಂತೆ ಒತ್ತಡವಿದೆ, ಇಲ್ಲದೆ ಹೋದರೆ ಈ.ಡಿ. ದಾಳಿ ಬೆದರಿಕೆ ಹಾಕಲಾಗಿದೆ ಎಂದರು.
ಆದರೆ ಅತಿಶಿ ಬಿಜೆಪಿಗೆ ಸೇರಲಿಲ್ಲ. ಸಿಸೋಡಿಯಾ ಸೇರಲಿಲ್ಲ. ಸಂಜಯ್ ಸಿಂಗ್ ಜೈಲಿನಲ್ಲಿದ್ದರು. ಇಷ್ಟೆಲ್ಲದರ ನಂತರವೂ ಎಎಪಿ ನಾಯಕರು ಪಕ್ಷ ಒಡೆಯದಂತೆ ಕಾಯ್ದುಕೊಂಡರು.
ಉನ್ನತ ನಾಯಕರಲ್ಲಿ ಒಡಕು ಮೂಡಿಸಲು ಸಾಧ್ಯವಾಗದೇ ಹೋದಾಗ, ಸೈದ್ಧಾಂತಿಕವಾಗಿ ದುರ್ಬಲ ನಾಯಕರನ್ನು ಗುರಿ ಮಾಡಲಾಯಿತು.
ಈಗ ಆಪರೇಷನ್ ಕಮಲ ಕೆಲಸ ಮಾಡಿದೆ. ಎಎಪಿಯ ಏಳು ಸಂಸದರು ಬಿಜೆಪಿ ಸೇರಿದ್ದಾರೆ.
ಎಎಪಿಯಲ್ಲಿ ಚಡ್ಡಾ, ಭ್ರಷ್ಟಾಚಾರ ವಿರೋಧಿ ಭಾರತ ಚಳವಳಿಯ ಆರಂಭಿಕ ದಿನಗಳಿಂದಲೂ ಕೇಜ್ರಿವಾಲ್‌ಗೆ ಹತ್ತಿರವಾಗಿದ್ದರು. ಎಎಪಿಯ ಆರಂಭಿಕ ದಿಲ್ಲಿ ಬಜೆಟ್‌ಗಳ ರಚನೆಯಲ್ಲಿ ಚಡ್ಡಾ ನೆರವೂ ಇತ್ತೆನ್ನಲಾಗುತ್ತದೆ.
ಅವರು 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರ ಅವರು ಶಾಸಕರಾಗಿ ಗೆದ್ದರು ಮತ್ತು ಅವಧಿ ಮುಗಿಯುವ ಮೊದಲು, ಅವರನ್ನು ಕೇಜ್ರಿವಾಲ್ 2022ರಲ್ಲಿ ಪಂಜಾಬ್‌ನಿಂದ ರಾಜ್ಯಸಭೆಗೆ ಕಳುಹಿಸಿದರು.
ಪಂಜಾಬ್‌ನಲ್ಲಂತೂ ಚಡ್ಡಾ ಸೂಪರ್ ಸಿಎಂ ಎಂಬಷ್ಟು ಪ್ರಭಾವಿಯಾಗಿದ್ದರು. ಹೇಳಲಾಗುವ ಪ್ರಕಾರ, ಸಮಸ್ಯೆ ಇಲ್ಲಿಂದ ಪ್ರಾರಂಭವಾಗುತ್ತದೆ.
ಕೇಜ್ರಿವಾಲ್ ನಿಕಟತೆಯಿಂದಾಗಿ, ಚಡ್ಡಾ ಪಕ್ಷದ ಪಂಜಾಬ್ ಘಟಕದ ಮೇಲೆ ತನ್ನ ಪ್ರಭಾವ ಹೇರಲು ಶುರುಮಾಡುತ್ತಾರೆ.
ಇದರ ನಡುವೆಯೇ ಮದ್ಯ ಹಗರಣದಲ್ಲಿ ಎಎಪಿ ನಾಯಕರ ಬಂಧನಗಳು ನಡೆಯುತ್ತವೆ. ಚಡ್ಡಾ ಅವರ ಮೌನ, ಅವರು ವರ್ತಿಸಿದ ರೀತಿ ಅವರ ಬಗ್ಗೆ ಅನುಮಾನಗಳು ಹುಟ್ಟಲು ಕಾರಣವಾಗುತ್ತದೆ.
ಸಂದೀಪ್ ಪಾಠಕ್ ಐಐಟಿ ದಿಲ್ಲಿಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಕೇಂಬ್ರಿಡ್ಜ್ ವಿವಿ ಪಿಎಚ್‌ಡಿ ಪಡೆದವರು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಮತ್ತು ಎಂಐಟಿಯಲ್ಲಿ ಸಂಶೋಧನಾ ಸಹವರ್ತಿಯಾಗಿದ್ದವರು. ಅವರು ಕೇಜ್ರಿವಾಲ್ ಪಾಲಿಗೆ ಬಹಳ ಆಪ್ತರಾದರು. ದಿಲ್ಲಿ 2020 ಮತ್ತು ಪಂಜಾಬ್ 2022ರ ಗೆಲುವಿನಲ್ಲಿ ಅವರ ಪಾತ್ರ ದೊಡ್ಡದಿತ್ತು ಎನ್ನಲಾಗುತ್ತದೆ. ಎಎಪಿಯ ಕೋರ್ ಟೀಮ್‌ನ ಪ್ರಮುಖ ಸದಸ್ಯ ಅವರು. ಆದರೆ ಅದರ ನಂತರ, ಅವರು ಸತತ ಸೋಲು ಎದುರಿಸಿದರು. ಪಕ್ಷದೊಳಗೇ ಅವರ ಬಗ್ಗೆ ಲೇವಡಿ ಮಾಡುವುದು ಶುರುವಾಗಿತ್ತು. ಈ ಪಾಠಕ್ ಅವರ ತಂದೆ ಛತ್ತೀಸ್ ಗಡದಲ್ಲಿ ಬಿಜೆಪಿ ಪದಾಧಿಕಾರಿ. ಈಗ ಪಾಠಕ್ ಕೂಡ ಬಿಜೆಪಿ ಮಡಿಲು ಸೇರಿದ್ದಾರೆ.
ಸ್ವಾತಿ ಮಲಿವಾಲ್ ವರ್ಷಗಳಿಂದ ಕೇಜ್ರಿವಾಲ್ ಜೊತೆ ಕೆಲಸ ಮಾಡುತ್ತಿದ್ದರು.
2015ರಲ್ಲಿ ಅವರನ್ನು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸ ಲಾಯಿತು. ಆಮೇಲೆ ರಾಜ್ಯಸಭಾ ಸದಸ್ಯರಾಗಿ ನೇಮಕ ಮಾಡಲಾಯಿತು. ಆದರೆ ಅಕ್ರಮ ನೇಮಕಾತಿಗಳ ಬಗ್ಗೆ ಅವರ ವಿರುದ್ಧ ಆರೋಪಗಳು ಬಂದವು. ಎಎಪಿ ನಾಯಕರ ಜೊತೆ ಅವರ ಸಂಬಂಧ ಹದಗೆಡಲು ಶುರುವಾಯಿತು. ಕೇಜ್ರಿವಾಲ್ ಅವರ ಸಿಬ್ಬಂದಿ ಮತ್ತು ಆಪ್ತರ ವಿರುದ್ಧ ದೈಹಿಕ ಹಲ್ಲೆ ಆರೋಪವನ್ನೂ ಸ್ವಾತಿ ಮಾಡಿದರು. ದಿಲ್ಲಿ ಚುನಾವಣೆಗೆ ಸ್ವಲ್ಪ ಮೊದಲು ಈ ವಿಷಯ ದೊಡ್ಡ ರಂಪ ಎಬ್ಬಿಸಿತ್ತು.
ಅಶೋಕ್ ಮಿತ್ತಲ್ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾನಿಲಯದ ಮಾಲಕ. ಇದು 35 ಸಾವಿರ ವಿದ್ಯಾರ್ಥಿಗಳನ್ನು ಹೊಂದಿರುವ ದೇಶದ ಅತಿದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದು.
ಕೆಲವೇ ದಿನಗಳ ಹಿಂದೆ ಈಡಿ ಅವರ ಮನೆ ಮೇಲೆ ದಾಳಿ ಮಾಡಿತು ಮತ್ತು ಅದರ ಬೆನ್ನಲ್ಲೇ ಅವರೀಗ ಬಿಜೆಪಿಗೆ ಸೇರಿದರು.
ತಮಾಷೆಯೆಂದರೆ, ಕೇಜ್ರಿವಾಲ್ ಚಡ್ಡಾ ಅವರನ್ನು ರಾಜ್ಯಸಭೆ ಉಪಸಭಾಪತಿ ಹುದ್ದೆಯಿಂದ ತೆಗೆದುಹಾಕಿದಾಗ, ಇದೇ ಮಿತ್ತಲ್ ಆ ಜಾಗಕ್ಕೆ ಬದಲಿಯಾಗಿದ್ದರು.
ರಾಜಿಂದರ್ ಗುಪ್ತಾ 10,000 ಕೋಟಿ ರೂ. ಮೌಲ್ಯದ ಆಸ್ತಿಯಿರುವ ಪಂಜಾಬ್‌ನ ಅತ್ಯಂತ ಶ್ರೀಮಂತ ನಾಯಕ ಎಂದು ಹೇಳಲಾಗುತ್ತದೆ. ಎಎಪಿ ವಿರೋಧಿಸುತ್ತಿದ್ದ ಭಾರತ-ಯುಎಸ್ ಒಪ್ಪಂದವನ್ನು ರಾಜಿಂದರ್ ಗುಪ್ತಾ ಬೆಂಬಲಿಸುತ್ತಿದ್ದರು.
ಇನ್ನು, ಹರ್ಭಜನ್ ಸಿಂಗ್ ಅಂತೂ ತಮ್ಮನ್ನು ತಾವು ಎಎಪಿ ಭಾಗವೆಂದು ಯಾವತ್ತೂ ಭಾವಿಸಿದ್ದವರಲ್ಲ ಎನ್ನಲಾಗುತ್ತದೆ. ಆದರೆ ಅಂಥವರನ್ನು ಕೇಜ್ರಿವಾಲ್ ರಾಜ್ಯಸಭಾ ಸದಸ್ಯರನ್ನಾಗಿ ಕೂರಿಸಿದ್ದರು.
ಈ ಹಿಂದೆ, ಸೈದ್ಧಾಂತಿಕ ಕಾರಣಗಳಿಂದಾಗಿ ಎಎಪಿ ತೊರೆದವರಿದ್ಧಾರೆ. ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ಮತ್ತು ಅಶುತೋಷ್ ಕೂಡ ತೊರೆದಿದ್ದಾರೆ. ಆದರೆ ಅವರು ಬಿಜೆಪಿಗೆ ಸೇರಲಿಲ್ಲ.
ಈಗ ಒಟ್ಟಾಗಿ ಪಕ್ಷ ಬಿಟ್ಟಿರುವವರ ವಿರುದ್ಧ ಸಿಕ್ಕಾಪಟ್ಟೆ ಟೀಕೆಗಳು ಬರುತ್ತಿವೆ. ರಾಘವ್ ಚಡ್ಡಾ ಲಕ್ಷಾಂತರ ಫಾಲೋವರ್‌ಗಳನ್ನು ಕಳೆದುಕೊಂಡಿದ್ದಾರೆ.
ಹಾಗಾದರೆ, ಎಎಪಿಗೆ ಇವತ್ತು ಬಂದಿರುವ ಸ್ಥಿತಿಯಲ್ಲಿ ಕೇಜ್ರಿವಾಲ್ ಪಾತ್ರ ಏನೂ ಇಲ್ಲವೆ?
ಕೇಜ್ರಿವಾಲ್ ಅವರ ದೊಡ್ಡ ತಪ್ಪು ಎಂದರೆ, ಹಣಕ್ಕಾಗಿ ಉದ್ಯಮಿಗಳಿಗೆ ರಾಜ್ಯಸಭಾ ಸ್ಥಾನ ನೀಡಿದ್ದುದು. ಅದೇ ಈಗ ಅವರಿಗೆ ತಿರುಗಿ ಕಚ್ಚತೊಡಗಿದೆ.
ಪಕ್ಷ ಅಥವಾ ಸಿದ್ಧಾಂತದೊಂದಿಗೆ ಯಾವುದೇ ಸಂಬಂಧವಿಲ್ಲದವರು ಒಳಗಿದ್ದಾಗ, ಒಡೆಯುವವರ ದಾರಿ ಸುಲಭವಾಗುತ್ತದೆ ಎಂಬುದು ಸಾಬೀತಾಗಿದೆ.
ಈಗ ಎಎಪಿ ತೊರೆದವರಲ್ಲಿ ಹೆಚ್ಚು ಟೀಕೆಗೆ ತುತ್ತಾಗುತ್ತಿರುವುದು ರಾಘವ್ ಚಡ್ಡಾ. ಪಕ್ಷ ತೊರೆದ ಒಂದೇ ದಿನದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅವರು 17 ಲಕ್ಷ ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ.
ಆದರೆ ಇದು ಫಾಲೋವರ್ಸ್‌ಗಳ ವಿಷಯವಲ್ಲ.
ಚಡ್ಡಾ ಮತ್ತು ಸಂಗಡಿಗರು ಹೊರನಡೆದಿರುವ ಈ ಬೆಳವಣಿಗೆ ಎಎಪಿಯನ್ನು ನಿರ್ನಾಮ ಮಾಡುವ ಯೋಜನೆಯ ಭಾಗವೆನ್ನಲಾಗಿದೆ.
ಪಕ್ಷಾಂತರ ವಿರೋಧಿ ಕಾಯ್ದೆಯಲ್ಲಿ ಸಂವಿಧಾನದ 10ನೇ ಶೆಡ್ಯೂಲ್‌ನಂತೆ, ಒಂದು ಪಕ್ಷದ ಮೂರನೇ ಎರಡರಷ್ಟು ಸಂಸದರು ಒಟ್ಟಾಗಿ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡರೆ, ಅದು ಪಕ್ಷಾಂತರವಾಗದೆ, ವಿಲೀನ ಎಂದು ಪರಿಗಣಿಸಲಾಗುತ್ತದೆ. ಆಗ ಅವರು ಹೊಂದಿದ್ದ ಸ್ಥಾನಗಳು ಹಾಗೆಯೇ ಉಳಿಯುತ್ತವೆ.
10 ಸಂಸದರನ್ನು ಹೊಂದಿದ್ದ ಎಎಪಿಯಲ್ಲಿ ಈಗ ಈ 7 ಸಂಸದರು ಅದೇ ಆಟ ಆಡಿದ್ದಾರೆ.
ಅಂದರೆ, ಇದು ಚೆನ್ನಾಗಿ ಯೋಚಿಸಿದ ತಂತ್ರವಾಗಿತ್ತು ಮತ್ತು ತಿಂಗಳುಗಳಿಂದ ಇದರ ತಯಾರಿ ನಡೆದಿತ್ತು ಎಂಬುದು ಸ್ಪಷ್ಟ.
ಚಡ್ಡಾ ಏನೋ ನಡೆಸಿದ್ದಾರೆ ಎಂಬುದು ತಿಳಿದಿದ್ದರೆ, ಎಎಪಿ ಏಕೆ ಅವರನ್ನು ಹೊರಹಾಕಲಿಲ್ಲ ಎಂಬ ಪ್ರಶ್ನೆಯೂ ಬರುತ್ತದೆ.ಆದರೆ, ಒಂದು ಪಕ್ಷ ಸಂಸದರನ್ನು ಹೊರಹಾಕಿದರೆ, ಅವರು ಸ್ಥಾನ ಕಳೆದುಕೊಳ್ಳುವುದಿಲ್ಲ ಎಂದು ಕಾನೂನು ಹೇಳುತ್ತದೆ.
ಎಎಪಿ ಅವರನ್ನು ಹೊರಹಾಕಿದ್ದರೂ ಅವರು ಸಂಸದರಾಗಿ ತಮ್ಮ ಅವಧಿ ಮುಗಿಯುವವರೆಗೂ ಇರುತ್ತಿದ್ದರು. ಅದು ಎಎಪಿ ಪಾಲಿಗೆ ಇನ್ನೂ ಮುಜುಗರದ ವಿಷಯವಾಗುತ್ತಿತ್ತು.
2024ರಿಂದಲೂ ಎಎಪಿ ಜೊತೆ ಬಹಿರಂಗವಾಗಿಯೇ ಸಂಘರ್ಷದಲ್ಲಿದ್ದ ಸ್ವಾತಿ ಮಲಿವಾಲ್ ಕೂಡ ರಾಜೀನಾಮೆ ನೀಡದೆ, ರಾಜ್ಯಸಭೆಯಲ್ಲಿಯೇ ಇದ್ದರು ಮತ್ತು ಏಕೆ ಎಂಬುದು ಈಗ ಸ್ಪಷ್ಟವಾಗಿದೆ.
ಈಗ ಎಎಪಿ ಪಾಲಿಗೆ ಏನಾಗಬಹುದು, ಅದು ಚುನಾವಣಾ ಚಿಹ್ನೆಯನ್ನೂ ಕಳೆದುಕೊಳ್ಳುವ ಸ್ಥಿತಿ ಬರಬಹುದೇ ಎಂಬುದು ಈಗಿನ ಪ್ರಶ್ನೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆ ನಂತರ ಏನಾಯಿತು ಎಂಬುದು ಗೊತ್ತೇ ಇದೆ. ಆದರೆ, ಅವೆರಡೂ ಪಕ್ಷಗಳ ಸಂದರ್ಭದಲ್ಲಿ, ಹೊರಹೋದ ಬಣದ ನಾಯಕರು ಪ್ರತಿಬಣವನ್ನು ರಚಿಸಿ ಮೂಲ ಬಣಕ್ಕೆ ಸೆಡ್ಡುಹೊಡೆದಿದ್ದರು.
ಎಎಪಿಯನ್ನು ನೋಡಿದರೆ, ರಾಘವ್ ಚಡ್ಡಾ ಪ್ರತಿಸ್ಪರ್ಧಿ ಎಎಪಿ ಬಣವನ್ನು ರಚಿಸಲಿಲ್ಲ. ಅವರು ಬಿಜೆಪಿಯೊಂದಿಗೆ ವಿಲೀನಗೊಂಡರು. ಆದ್ದರಿಂದ ಇಲ್ಲಿ ಪ್ರತ್ಯೇಕ ಬಣದ ಹಕ್ಕು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ.
ಆದರೆ ಪಕ್ಷ ತೊರೆಯುವ ಇದೇ ಆಟವನ್ನು ಎಎಪಿಯ ಪಂಜಾಬ್ ಮತ್ತು ದಿಲ್ಲಿ ಶಾಸಕರು ಅಥವಾ ಇತರ ಸಂಸದರು ಕೂಡ ಆಡಿದರೆ ಏನು ಎಂಬುದು ಪ್ರಶ್ನೆ.
ಹೆಚ್ಚಿನ ಜನರು ಬಂಡಾಯವೆದ್ದರೆ, ಚಿತ್ರಣ ಬದಲಾಗಬಹುದು. ಆಗ ಎಎಪಿ ಚಿಹ್ನೆಗಾಗಿ ಹಕ್ಕು ಚಲಾಯಿಸಬಹುದು.
ಪಂಜಾಬ್‌ನ ಎಎಪಿ ಶಾಸಕ ಸ್ಥಾನಗಳು ಕೂಡ ಸಿದ್ಧಾಂತದ ಆಧಾರದ ಮೇಲಲ್ಲದೆ, ಹಣ ಮತ್ತು ಅಧಿಕಾರದ ಆಧಾರದ ಮೇಲೆ ಇದ್ದರೆ ಬಿಕ್ಕಟ್ಟು ತಲೆದೋರಬಹುದು ಮತ್ತು ಇದು ನಿಜವಾಗಿದ್ದರೆ, ಎಎಪಿಯನ್ನು ಒಡೆಯುವುದು ಬಿಜೆಪಿಗೆ ಸುಲಭವಾಗಬಹುದು.
ಆಪರೇಷನ್ ಕಮಲವನ್ನು ಕಳೆದ ಹಲವಾರು ವರ್ಷಗಳಿಂದ ಅನೇಕ ರಾಜ್ಯಗಳಲ್ಲಿ ಅನೇಕ ಪಕ್ಷಗಳ ವಿರುದ್ಧ ಬಳಸಲಾಗುತ್ತಿದೆ.
ವಿರೋಧ ಪಕ್ಷ ಆಕಸ್ಮಿಕವಾಗಿ ಒಂದು ರಾಜ್ಯವನ್ನು ಗೆದ್ದರೂ, ಬಿಜೆಪಿ ಆಡಳಿತ ಪಕ್ಷಗಳ ಅತೃಪ್ತ ಶಾಸಕರನ್ನು ಹುಡುಕಿ ಗುರಿಯಾಗಿಸುತ್ತದೆ.
ನಗದು ಮತ್ತು ಕ್ಯಾಬಿನೆಟ್ ಸ್ಥಾನಗಳ ಆಮಿಷ ಒಡ್ಡುತ್ತದೆ. ಮಣಿಯದಿದ್ದರೆ ಈ.ಡಿ. ಮತ್ತು ಸಿಬಿಐ ಅಸ್ತ್ರ ತೆಗೆಯಲಾಗುತ್ತದೆ.
2014ರ ಅರುಣಾಚಲ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ 42 ಸ್ಥಾನಗಳನ್ನು ಗೆದ್ದು, 60 ಸದಸ್ಯರ ವಿಧಾನಸಭೆಯಲ್ಲಿ ಸರಳ ಬಹುಮತ ಹೊಂದಿತ್ತು. ಬಿಜೆಪಿ ಕೇವಲ 11 ಸ್ಥಾನಗಳನ್ನು ಹೊಂದಿತ್ತು. ಆದರೆ 2016ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಪೆಮಾ ಖಂಡು ಮೊದಲು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲಕ್ಕೆ ಸೇರಿದರು. ನಂತರ ಬಿಜೆಪಿ ನೇರವಾಗಿ 32 ಶಾಸಕರನ್ನು ಪಡೆದುಕೊಂಡು ಚುನಾವಣೆಯಲ್ಲಿ ಗೆಲ್ಲದೆಯೂ ಸರಕಾರ ರಚಿಸಿತು.
2016ರಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಶಾಸಕರು ಉತ್ತರಾಖಂಡದಲ್ಲಿ ದಂಗೆ ಪ್ರಾರಂಭಿಸಿದರು. ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು.
2019ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿತ್ತು. ಆದರೆ ಇದ್ದಕ್ಕಿದ್ದಂತೆ 17 ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು. ಸರಕಾರ ಪತನವಾಯಿತು.
2020ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ತೊರೆದು 22 ಶಾಸಕರನ್ನು ತಮ್ಮೊಂದಿಗೆ ಕರೆದೊಯ್ದರು.ಕಮಲ್‌ನಾಥ್ ಅವರ ಚುನಾಯಿತ ಕಾಂಗ್ರೆಸ್ ಸರಕಾರ ಪತನಗೊಂಡಿತು.
2022ರಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ 55 ಶಿವಸೇನಾ ಶಾಸಕರಲ್ಲಿ 40 ಜನರನ್ನು ತಮ್ಮೊಂದಿಗೆ ಕರೆದೊಯ್ದರು. ಶಿವಸೇನೆ ಕಾಂಗ್ರೆಸ್ ಸರಕಾರ ಪತನವಾಯಿತು.
ಉದ್ಧವ್ ಠಾಕ್ರೆ ತಮ್ಮದೇ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ಕಳೆದುಕೊಂಡರು.
ಈಗಿನ ಸ್ಥಿತಿಯಲ್ಲಿ ಎಎಪಿ ಮುಂದಿರುವ ಸವಾಲೆಂದರೆ, ಉಳಿದಿರುವವರು ಪಕ್ಷವನ್ನು ಬಿಡದಂತೆ ಅದು ಏನು ಮಾಡುತ್ತದೆ ಎಂಬುದು. ಏಕೆಂದರೆ, ಇದೇ ಆಟ ಮುಂದುವರಿದರೆ ಎಎಪಿ ಬಹಳಷ್ಟನ್ನು ಕಳೆದುಕೊಳ್ಳಬಹುದು.
ಕಡೆಗೂ ಇದೆಲ್ಲದರ ನಡುವೆ ಅಪಹಾಸ್ಯಕ್ಕೆ ತುತ್ತಾಗುವುದು ಪ್ರಜಾಪ್ರಭುತ್ವ ಮಾತ್ರ.






