‘ಆವರಣ’ ಎಂಬ (ವಿ)ಕೃತಿ | ದ್ವೇಷದ ಅನಾವರಣ, ಸತ್ಯದ ವಿಕ್ಷೇಪ

ಹಾಗೆ ನೋಡಿದಲ್ಲಿ 270 ಪುಟಗಳಲ್ಲಿ 200ಕ್ಕೂ ಹೆಚ್ಚು ಪುಟಗಳಲ್ಲಿ ಇರುವುದು ಕಥೆಯಲ್ಲ. ಅಲ್ಲಿರುವುದು ಉನ್ಮತ್ತ ಹಿಂದುತ್ವವಾದಿಯ ಭಾಷಣ, ಸ್ವಗತ, ವಾದ... ಇದೇ ಕಾದಂಬರಿ ಪ್ರಕಾರವಾಗಿ ಅದರ ವೈಫಲ್ಯವನ್ನು ಸೂಚಿಸುತ್ತದೆ. ಹೀಗಾಗಿ ಸಂಘಪರಿವಾರದ ದ್ವೇಷದ ಸಿದ್ಧಾಂತವನ್ನು ಒಪ್ಪದವರು ಈ ಪುಸ್ತಕವನ್ನು ಓದಿ ಮುಗಿಸಲು ಅತ್ಯಂತ ತಾಳ್ಮೆ ಬೇಕಾಗುತ್ತದೆ ಮತ್ತು ಇದನ್ನು ಸಂಘಪರಿವಾರದ ಸಿದ್ಧಾಂತದಿಂದ ಹೊರತುಪಡಿಸಿ ಕೇವಲ ಒಂದು ಕಾದಂಬರಿಯಾಗಿ ವಿಮರ್ಶಿಸಲೂ ಸಾಧ್ಯವಿಲ್ಲ. ಏಕೆಂದರೆ ಈ ಪುಸ್ತಕ ಸಂಘಪರಿವಾರದ ಒಂದು ಪ್ರಚಾರಸಾಹಿತ್ಯ ಅಷ್ಟೆ. ಹೀಗಾಗಿ ಒಂದು ಪ್ರಚಾರ ಸಾಹಿತ್ಯವನ್ನು ಅದರ ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚಿ ತಾನೆ ವಿಮರ್ಶಿಸಬೇಕು?
ಆದರೆ ಮುಸ್ಲಿಮ್ ದೊರೆಗಳ ಆಳ್ವಿಕೆ ಬಗ್ಗೆ ಟಿಪ್ಪು ಸುಲ್ತಾನರ ಆಳ್ವಿಕೆ ಬಗ್ಗೆ ಸಂಘಪರಿವಾರದ ವಾದಗಳೇನು ಮತ್ತು ಅವೆಷ್ಟು ಸತ್ಯಕ್ಕೆ ದೂರವಾದ ಪೂರ್ವಾಗ್ರಹಗಳಿಂದ ಹುಟ್ಟಿದೆ ಎಂಬುದು ಈಗಾಗಲೇ ಬಹುಚರ್ಚಿತವಾಗಿರುವ ವಿಷಯ. ಹೀಗಾಗಿ ಮತ್ತೆ ಅದನ್ನು ಚರ್ಚಿಸುವ ಅಗತ್ಯವಿಲ್ಲವಾದರೂ ಈ ಪುಸ್ತಕದಲ್ಲಿ ಭೈರಪ್ಪನವರು ಎಂತಹ ಉನ್ಮತ್ತ ಮತ್ತು ದ್ವೇಷಪೂರಿತ ಮತ್ತು ವಿದ್ವತ್ತೇ ಇಲ್ಲದ ಹಸಿಹಸಿ ವಾದಗಳನ್ನು ಮಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ನೋಡಬಹುದು:
‘‘ಮೊಗಲ್ ಬಾದಶಾ ಜಹಂಗೀರ್, ಅವನ ಮಗ ಷಹಜಹಾನ್ ಇವರೆಲ್ಲರೂ ಹಿಂದೂ ತಾಯಂದಿರ ಹೊಟ್ಟೆಯಲ್ಲಿ ಹುಟ್ಟಿದವರು. ಅಧಿಕಾರಕ್ಕೆ ಬಂದ ಮೇಲೆ ದೇವಸ್ಥಾನಗಳನ್ನು ಒಡೆಸಿದವರು. ಒಡೆಯಬೇಕು ಅಂಥ ಅವರ ಧರ್ಮವೇ ಹೇಳುವಾಗ ಅವರು ಅದರಂತೆ ನಡೆಯಲೇಬೇಕಲ್ಲವೇ? ಆ ಧರ್ಮ ಇವತ್ತಿಗೂ ಬದಲಾಗಿಲ್ಲ. ಪ್ರಾಯದ ಉದ್ವೇಗದಲ್ಲಿ ಇದು ನಿನಗೆ ಅರ್ಥವಾಗೊಲ್ಲ..’’ (ಪು.19, ಗಾಂಧಿವಾದಿ ಅಪ್ಪ ಮಗಳು ಮುಸ್ಲಿಮನನ್ನು ಮದುವೆ ಆಗುತ್ತೇನೆಂದಾಗ ಕೊಡುವ ಉಪದೇಶ!)
‘‘ರಾತ್ರಿ ಜೊತೆಯಲ್ಲಿ ಮಲಗಿದಾಗ ಈ ಆಹಾರದ ವ್ಯತ್ಯಾಸವು ನಮ್ಮಿಬ್ಬರ ನಡುವೆ ಏಕಭಾವವನ್ನು ಕಡಿಮೆ ಮಾಡಿದೆ ಎನ್ನಿಸಿತು..’’ (ಪು. 65.. ಲಕ್ಷ್ಮೀ ಅಮೀರ್‌ನೊಂದಿಗೆ ಇಸ್ಲಾಮ್ ಕಟ್ಟುಪಾಡುಗಳ ವಿರುದ್ಧ ಮಾತಾಡಲು ಪ್ರಾರಂಭಿಸಿದಾಗ)
‘‘..ವಲ್ಗಾರಿಟಿಯಲ್ಲ, ವೆಜಿಟೇರಿಯನ್ ಆದೋಳಿಗೆ ಮಾತ್ರ ಹೀಗೆ ಗಂಡನಿಂದ ತಿಂಗಳುಗಟ್ಟಲೆ ದೂರವಿರಲು ಸಾಧ್ಯ...’’ (ಪು. 66. ಅಮೀರ್ ಹೇಳುವುದು ಲಕ್ಷ್ಮೀಯನ್ನು ದೂರ ಮಾಡುತ್ತಾ..)
‘‘..ಪ್ರೊಫೆಸರ್ ನೀವು ಗಿಳಿಯ ಉಚ್ಚಾರಣೆ ಮಾಡ್ತಿರೋದು ತಪ್ಪು. ಅಮೀರ-ಗುಲಾಮರೆಂಬ ವ್ಯತ್ಯಾಸವೇ ಇಸ್ಲಾಮ್ ಸಮಾಜದ ಮೂಲ ಲಕ್ಷಣ..’’ (ಪು.156)
‘‘ಮಾತಾಜಿ, ಅಲ್ಲಾ..ಅಂದು ನಿಲ್ಲಿಸಿದರಲ್ಲ.. ಬಡತನವನ್ನಪ್ಪಿ ಬದುಕಬೇಕು ಅನ್ನೋದೇ ಬ್ರಾಹ್ಮಣ ಜಾತಿಯ ಧರ್ಮವಲ್ಲವೇ? ಮೊದಲಿನಿಂದ ಕಾಡಿನಲ್ಲಿ ಪರ್ಣಕುಟಿ ಕಟ್ಟಿಕೊಂಡು ವಿದ್ಯೆ ಕಲಿತು ವಿದ್ಯಾದಾನ ಮಾಡಿಕೊಂಡಿದ್ದ ಜಾತಿಯಲ್ಲವೇ ಇದು? ಈ ಜಾತಿಯನ್ನು ನಾಶ ಮಾಡಿದರೆ ಮಾತ್ರ ಹಿಂದೂಗಳನ್ನು ಸಂಪೂರ್ಣವಾಗಿ ಮುಸಲ್ಮಾನರನ್ನಾಗಿ ಪರಿವರ್ತಿಸಬಹುದು ಅಂಥಾ ನವಾಬರು, ಸುಲ್ತಾನರು, ಸುಬೇದಾರರು, ಬಾದಶಾರು ನಮ್ಮನ್ನು ಸೆರೆ ಹಿಡಿಸಿದರು. ಇಕ್ಕಳದಲ್ಲಿ ಬಾಯಿ ಅಗಲಿಸಿ ಅದ್ರೊಳಕ್ಕೆ ಕ್ಯಾಕರಿಸಿ ಉಗಿದು ಜಾತಿ ಕೆಡಿಸಿದರು. ಕತ್ತಿಯಿಂದ ಕುತ್ತಿಗೆ ಕತ್ತರಿಸಿ ಕೊಂದರು. ನಮ್ಮ ಪೂರ್ವಿಕರು ಹಳ್ಳಿಗಳಿಗೆ ಓಡಿ ಹೋಗಿ ಪುರಾಣ ಪುಣ್ಯ ಕಥೆಗಳ ಪ್ರವಚನ ಮಾಡಿ ನಮ್ಮ ಧರ್ಮ ಉಳಿಸಿದೆವು. ಅಂಗ್ರೇಜಿಗಳು ಬಂದ ಮೇಲೆ ಈ ಜಾತಿಯನ್ನು ಮುರಿದರೆ ಹಿಂದೂಸ್ಥಾನಿಯರನ್ನು ಕಿರಿಸ್ಥಾನಿಯರನ್ನಾಗಿ ಮಾಡಬಹುದಾದಂಥ ಹಿಕೃತ್ ಮಾಡಿದರು. ಅಂಗ್ರೇಜಿಗಳು ಹೋದ ಮೇಲೆ ಹಿಂದೂಸ್ಥಾನಿ ರಾಜಕಾರಣಿಗಳೇ ನಮ್ಮ ಮೇಲೆ ದ್ವೇಷದ ಉರಿ ಹಚ್ಚುತ್ತಾ ವೋಟು ಕಮಾಯಿಸುತ್ತಿದ್ದಾರೆ...’’ (ಪು. 181.. ಕಾಶಿಯಲ್ಲಿ ಟಾಂಗ ಓಡಿಸುವ ಬ್ರಾಹ್ಮಣನ ಪಾತ್ರದ ಮಾತು)
‘‘ಅವನು ಹೇಳಿದುದರಲ್ಲಿ ಅವಳಿಗೆ ಇತಿಹಾಸ ಕಾಣತೊಡಗಿತು. ದೇವಸ್ಥಾನಗಳೆಲ್ಲಾ ನಾಶಗೊಂಡ ಮೇಲೆ, ಅರ್ಚಕ ವರ್ಗವನ್ನು ಕೊಚ್ಚಿ ಕೊಂದ ಮೇಲೆ ಅಥವಾ ಪೂಜಿಸಲು ಮೂರ್ತಿ ಮಂದಿರಗಳೇ ಇಲ್ಲವಾಗಿ ಅವರೆಲ್ಲಾ ಹಳ್ಳಿ ಕಾಡುಗಳನ್ನು ಸೇರಿದ ಮೇಲೆ ಹಿಂದೂ ಧರ್ಮವು ಊರೂರು ತಿರುಗುವ ಕಥಾನಕದ ಮೂಲಕ ಬದುಕುಳಿಯಿತು..... ಅದು ಮತ್ತೊಂದು ವಿಧದಲ್ಲಿ ಶಕ್ತಿಶಾಲಿಯಾಯಿತು. ಇಡೀ ಭಾರತದಲ್ಲಿ ಭಕ್ತಿ ಮಾರ್ಗ ಉಕ್ಕಿ ಹರಿಯಿತು. ಎಂದು ಅವಳು ಮೆಲುಕು ಹಾಕುತ್ತಿರುವಾಗ ರಿಕ್ಷಾ ಮುಂದೆ ಸಾಗುತ್ತಿತ್ತು’’ ( ಪು. 182)
‘‘..ಮೂಲ ವಿಶ್ವನಾಥ ಮಂದಿರವನ್ನು ಔರಂಗಜೇಬ ಬಾದಶಾ ಒಡೆಸಿ ಅದೇ ಗೋಡೆ, ತೊಲೆ ಬೋದಿಗೆಗಳಿಗೆ ಗುಂಬಜ್ ಹಾಕಿಸಿ ಕಟ್ಟಿಸಿದ್ದು 1669ರಲ್ಲಿ..’’ (ಪು. 182)
ಇದು ಭೈರಪ್ಪನವರು ಕಲ್ಪನೆ ಮತ್ತು ಇತಿಹಾಸವನ್ನು ಬೆರೆಸುವ ರೀತಿ. ಯಾವುದಕ್ಕೆ ಸತ್ಯದ ಮತ್ತು ಇತಿಹಾಸದ ಪುರಾವೆಯಿಲ್ಲವೋ ಅವನ್ನು ಸ್ವಗತವಾಗಿಸಿ ಮತ್ತೊಂದು ಸಂದರ್ಭದಲ್ಲಿ ಅದನ್ನು ಅರೆಸತ್ಯದೊಂದಿಗೆ ಬೆರೆಸುವ ಕುತಂತ್ರವಿದು ಅಥವಾ ಅದನ್ನು ಪ್ರತಿಪಾದಿಸುವ ಹಿಂದುತ್ವವಾದಿ ಇತಿಹಾಸಕಾರರು ತೋರುವ ಪುರಾವೆಯನ್ನು ಮಾತ್ರ ಎತ್ತಿಹಿಡಿಯುವುದು ಮತ್ತು ಅದಕ್ಕೆ ಪ್ರತಿಯಾಗಿ ಇತರ ಇತಿಹಾಸಕಾರರು ತೋರುವ ಸತ್ಯವನ್ನು ಆವರಣಗೊಳಿಸಿಬಿಡುವುದು ಅಥವಾ ವಿಕ್ಷೇಪಿಸಿಬಿಡುವುದು..!!
ಅಷ್ಟು ಮಾತ್ರವಲ್ಲ, ಇಲ್ಲಿ ಇರುವುದು ಕೇವಲ ಮುಸ್ಲಿಮ್ ಭಂಜನೆ ಮಾತ್ರವಲ್ಲ, ಬ್ರಾಹ್ಮಣ್ಯದ ವಿಜೃಂಭಣೆ ಸಹ ಜೊತೆಜೊತೆಗಿದೆ. ಬ್ರಾಹ್ಮಣ್ಯದ ವಿರುದ್ಧ ಹುಟ್ಟಿಬಂದ ಭಕ್ತಿಪಂಥವನ್ನು ಬ್ರಾಹ್ಮಣ್ಯದ ಪುನರುತ್ಥಾನ ಭಜನೆಯಲ್ಲಿ ಸೇರಿಸಿಕೊಂಡುಬಿಡುವ ನವ ಬ್ರಾಹ್ಮಣ್ಯವೂ ಇದೆ.
‘‘ಮರಾಠರ ಉದಯವಾಗದೇ ಭರತ ಖಂಡವು ನೇರವಾಗಿ ಮುಸ್ಲಿಮರಿಂದ ಬ್ರಿಟಿಷರಿಗೆ ಹಸ್ತಾಂತರವಾಗಿದ್ದರೆ ಕಾಶಿ ಉಳಿಯುತ್ತಿತ್ತೇ? ಹಿಂದೂಗಳಿಗೆ ಪುನಃ ಜೀವ ಬರುತ್ತಿತ್ತೇ?..’’ (ಪು. 183)
ಈ ರೀತಿ ಭೈರಪ್ಪನವರ ಸತ್ಯದ ವಿಕ್ಷೇಪ ಮತ್ತು ದ್ವೇಷದ ಅನಾವರಣ 270 ಪುಟಗಳುದ್ದಕ್ಕೂ ಸಾಗುತ್ತದೆ. ಸಂಘಪರಿವಾರದ ಇತಿಹಾಸ ಪಠ್ಯದಂತೆ ಗೋಚರಿಸುವ ಈ ತಥಾಕಥಿತ ಕಾದಂಬರಿಯಲ್ಲಿ ಹಲವಾರು ದ್ವಂದ್ವಗಳು ಇವೆ. ಮೇಲಿನ ಉದಾಹರಣೆಯಲ್ಲಿ ಸ್ಪಷ್ಟವಾಗುವಂತೆ ಹಿಂದೂ ಧರ್ಮವನ್ನು ಅದರ ಲಾಂಛನ, ನಂಬಿಕೆಗಳನ್ನು ವೈಜ್ಞಾನಿಕ ಪರಿಶೋಧನೆಗೆ ಕಿಂಚಿತ್ತೂ ಒಡ್ಡದ ಭೈರಪ್ಪ ಇಸ್ಲಾಮ್ ಧರ್ಮವನ್ನು ಮತ್ತು ಮುಸ್ಲಿಮರನ್ನು ಹೀಗಳೆಯಲು ತನ್ನ ಧರ್ಮಕ್ಕೆ ಅನ್ವಯಿಸದ ವೈಜ್ಞಾನಿಕತೆಯನ್ನೂ ಬಳಸುವ ಹಿಪೋಕ್ರಸಿಯನ್ನು ತೋರುತ್ತಾರೆ. ಉದಾಹರಣೆಗೆ ತನ್ನ ಗಂಡ ಅಮೀರ್ ಮತ್ತು ಮಗನೊಂದಿಗೆ ವಾದ ಮಾಡುವಾಗ ಲಕ್ಷ್ಮೀ ಉದ್ದಕ್ಕೂ ವಿಜ್ಞಾನವನ್ನು, ಮಾತ್ರವಲ್ಲ ಸಮಾಜವಾದವನ್ನು ಬಳಸುವುದು ಕುಚೋದ್ಯದಂತೆ ತೋರುತ್ತದೆ..
‘‘ಬೇಟಾ, ನೀನು ಅಮೆರಿಕದಲ್ಲಿ ಪೆಟ್ರೋಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಎಂ.ಎಸ್. ಮಾಡಿದವನು. ಭೂಮಿಯ ಒಳಗೆ ಪೆಟ್ರೋಲ್ ಹ್ಯಾಗೆ ಉತ್ಪತ್ತಿಯಾಯಿತು ಹೇಳು?.... ಭೂಗೋಳಶಾಸ್ತ್ರವು ವಿವರಿಸುವ ಸತ್ಯವನ್ನು ನೀನು ಅಲ್ಲಾಹುವಿನ ಕೃಪೆಗೆ ಇಳಿಸಿ ಅರೇಬಿಯದ ಮುಲ್ಲಾಗಳಂತೆ ಮಾತಾಡ್ತಿದೀಯಲ್ಲ.’’ (ಪು. 140)
‘‘ತನ್ನ ಮಗ ನಝೀರ್‌ನಲ್ಲಿ... ವೈಜ್ಞಾನಿಕ ಉದಾರ ಭಾವನೆಯನ್ನು ತರಲು ಒಂದೆರಡು ದಿನ ಸಾಲುವುದಿಲ್ಲ... ಮತಧರ್ಮದ ನಂಬಿಕೆಗಾಗಿ ತಂದೆ ತಾಯಿಯನ್ನು ಬಲಿಕೊಡು ಎಂದು ಪ್ರವಾದಿಗಳೇ ಹೇಳಿರುವ ಧರ್ಮ ಇದು ಎಂದು ನೆನಪು ಬಂತು..’’ (ಪು. 141)
ಎಲ್ಲಕ್ಕಿಂತ ಹೆಚ್ಚಾಗಿ ದೇಶದೆಲ್ಲೆಡೆ ಇದೇ ಸಂಘಪರಿವಾರದವರೇ ಜಜ್ಜೆರಾ, ಖೈರ್ಲಾಂಜಿ ಇನ್ನಿತ್ಯಾದಿ ಕಡೆಗಳಲ್ಲಿ ಸ್ವಾಭಿಮಾನಿ ದಲಿತರನ್ನು ಕೊಚ್ಚಿ ಕೊಂದು ಹಾಕುತ್ತಾ ಅತ್ಯಂತ ಅಸಹ್ಯಕರ ರೀತಿಯಲ್ಲಿ ಮನುವಾದವನ್ನು, ಅಸ್ಪಶ್ಯತೆ ಮತ್ತು ಜಾತಿವಾದವನ್ನು ಆಚರಿಸುತ್ತಿರುವಾಗ ಶ್ರೀಮಾನ್ ಭೈರಪ್ಪನವರು ಯಾವ ಎಗ್ಗೂಸಿಗ್ಗೂ ಇಲ್ಲದೆ ‘‘ಮನುವು ಮಾಡಿದ ತಪ್ಪನ್ನು ಹಿಂದೂ ಸಮಾಜವು ಅರಿತುಕೊಂಡು ಹಿಂದೂ ಸಮಾಜವು ನೂರು ವರ್ಷಗಳಿಂದ ತಿದ್ದಿಕೊಳ್ಳುತ್ತಿಲ್ಲವೇ? ದಲಿತರಿಗೆ ಮತ್ತು ಹಿಂದುಳಿದವರಿಗೆ ರಕ್ಷಣೆ ನೀಡಿ ಅವರನ್ನು ಅಗೌರವದಿಂದ ಕಾಣುವವರಿಗೆ ಕಠಿಣ ಶಿಕ್ಷೆ ವಿಧಿಸಿ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ನೇಮಿಸುವ ಅವಕಾಶ ಕಲ್ಪಿಸುವ ಮೂಲಕ..?’’ (ಪು. 247) ಎಂದು ಕೇಳುವ ದಾರ್ಷ್ಟ್ಯವನ್ನು ತೋರುತ್ತಾರೆ.
ಇವೆಲ್ಲವನ್ನೂ ಅವರು ದ್ವೇಷವಲ್ಲ ಸತ್ಯದ ದರ್ಶನ ಎಂದು ಹೇಳುತ್ತಾರೆ. ಕೊನೆಗೆ ತಮ್ಮ ವಾದದ ಸಮರ್ಥನೆಗೆ ಸ್ವಾಮಿ ವಿವೇಕಾನಂದರ ಭಾಷಣವೊಂದನ್ನೂ ಬಳಸುತ್ತಾರೆ. ಆದರೆ ಅದೇ ಭಾಷಣದ ಕೊನೆಯಲ್ಲಿ ವಿವೇಕಾನಂದ ಆಡಿರುವ ಮತ್ತೊಂದು ನುಡಿಯನ್ನು ಆವರಣ ಮಾಡಿಬಿಟ್ಟಿದ್ದಾರೆ.
‘‘...ಅಪ್ರಜ್ಞೆ, ಪ್ರಜ್ಞೆ ಮತ್ತು ಪ್ರಜ್ಞಾತೀತ ಸ್ಥಿತಿಗಳು ಒಂದು ಸ್ಥಿತಿಯು ಮೇಲಿನ ಸ್ಥಿತಿಗೆ ಬೆಳೆಯುವ ಒಂದೇ ಮನಸ್ಸಿನ ಮೂರು ಸ್ಥಿತಿಗಳು... ಸಹಜ ಪ್ರವೃತ್ತಿಯು ವಿಚಾರವಾಗಿ ವಿಕಾಸವಾಗುತ್ತದೆ. ವಿಚಾರವು ಅತೀತಪ್ರಜ್ಞೆಯಾಗಿ ಬೆಳೆಯುತ್ತದೆ. ಯಾವ ಒಂದು ಸ್ಥಿತಿಯೂ ಮತ್ತೊಂದು ಸ್ಥಿತಿಯನ್ನು ವಿರೋಧಿಸುವುದಿಲ್ಲ. ಅತೀತ ಪ್ರಜ್ಞೆ ವಿಚಾರವನ್ನೆಂದೂ ವಿರೋಧಿಸುವುದಿಲ್ಲ. ಅದನ್ನು ಪೂರ್ಣಗೊಳಿಸುತ್ತದೆ..ಅದರೊಡನೆ ಸಮರಸವಾಗುತ್ತದೆ..’’
ಆದರೆ ಭೈರಪ್ಪನವರ ಅಪ್ರಜ್ಞೆ ವಿಚಾರದ ಮೆಟ್ಟಿಲನ್ನೇ ಹತ್ತದೆ ಪ್ರಜ್ಞೆಯ ಮಜಲನ್ನು ತಲುಪಿರುವುದರಿಂದ ಅದು ಇನ್ನೊಂದು ಹೆಜ್ಜೆ ಬೆಳೆದು ಪ್ರಜ್ಞಾತೀತವಾಗುವ ಬದಲು ದ್ವೇಷವಾಗಿ ಪಾತಾಳಕ್ಕೆ ಮುಟ್ಟಿದೆ. ಲೋಕಕ್ಕೆ, ಮನುಷ್ಯ ಸಹಜ ಅಂತಃಕರಣಕ್ಕೆ ಕಿಚ್ಚು ಹಚ್ಚಿ ಫ್ಯಾಶಿಸ್ಟ್ ನರಕವನ್ನು ಸೃಷ್ಟಿಸುವ ಮನುಷ್ಯದ್ವೇಷಿ ಪಡೆಯ ಸೈದ್ಧಾಂತಿಕ ನಾಯಕನನ್ನಾಗಿಸಿದೆ. ಕನ್ನಡದ ಸಾರಸ್ವತ ವಲಯ ಇದನ್ನು ಧಿಕ್ಕರಿಸಿದರೆ ಕನ್ನಡದ ಹಿರಿಮೆ ಹೆಚ್ಚುತ್ತದೆ.







