ಅಬ್ದುಲ್ ಅಲ್ ಸಯ್ಯದ್ ಗೆಲುವು ನಮ್ಮ ಕುಟುಂಬದ ಹೆಮ್ಮೆ: ಬೀಬಿ ಹುಸ್ನಾ ಜುಕಾಕು

ಭಟ್ಕಳ : ಮುಸ್ಲಿಮರ ವಿರುದ್ಧದ ದ್ವೇಷ, ಅಪಪ್ರಚಾರ ಮತ್ತು ರಾಜಕೀಯ ಒತ್ತಡಗಳ ನಡುವೆಯೂ ಅಮೆರಿಕದ ಸೆನೆಟ್ ಚುನಾವಣೆಯಲ್ಲಿ ಡಾ. ಅಬ್ದುಲ್ ಅಲ್ ಸಯ್ಯದ್ ಅವರು ಗೆಲುವು ಸಾಧಿಸಿರುವುದು ಸಂತಸದ ಸಂಗತಿ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ. ಭ್ರಷ್ಟಾಚಾರ ಮತ್ತು ಅಧಿಕಾರದ ದರ್ಪದ ವಿರುದ್ಧದ ಗೆಲುವು ಎಂದು ಭಟ್ಕಳದಲ್ಲಿರುವ ಅಬ್ದುಲ್ ಅಲ್ ಸಯ್ಯದ್ ಪತ್ನಿ ಸಾರಾ ಸೋದರ ಸಂಬಂಧಿ ಬೀಬಿ ಹುಸ್ನಾ ಜುಕಾಕು ‘ವಾರ್ತಾಭಾರತಿ’ ಜೊತೆ ಪ್ರತಿಕ್ರಿಯಿಸಿದ್ದಾರೆ.
ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದಾಗ ನಮಗೆಲ್ಲ ಆತಂಕವಿತ್ತು. ಕೊನೆಗೂ ದೇವರ ಕೃಪೆಯಿಂದ ಅಬ್ದುಲ್ ಅಲ್ ಸಯ್ಯದ್ ಅವರಿಗೆ ಅದ್ಭುತ ಗೆಲುವು ಸಿಕ್ಕಿದೆ. ಅವರು ತುಂಬಾ ಸರಳ ವ್ಯಕ್ತಿ. ಅಪಾರ ಜ್ಞಾನವಿದ್ದರೂ ಯಾರನ್ನೂ ಕೀಳಾಗಿ ಕಾಣುವುದಿಲ್ಲ. ಎಲ್ಲರೊಂದಿಗೂ ಗೌರವದಿಂದ ನಡೆದುಕೊಳ್ಳುತ್ತಾರೆ. ಅವರ ಈ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಮೆರಿಕದಲ್ಲಿರುವ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದನ್ನು ನೆನಪಿಸಿಕೊಂಡಿರುವ ಬೀಬಿ ಹುಸ್ನಾ ಅವರು, ಫಲಿತಾಂಶ ಪ್ರಕಟವಾದ ಬಳಿಕ ಕರೆ ಮಾಡಿದಾಗ ಅಬ್ದುಲ್ ಅವರ ಮನೆಯಲ್ಲಿಯೂ ಕುಟುಂಬದವರು ಮತ್ತು ಅತಿಥಿಗಳು ಸೇರಿ ಸಂಭ್ರಮಿಸುತ್ತಿದ್ದರು ಎಂದು ತಿಳಿಸಿದ್ದಾರೆ.
‘ಅಬ್ದುಲ್ ಅವರಿಗೆ ಭಟ್ಕಳದ ನಂಟು ಹಲವು ವರ್ಷಗಳ ಹಿಂದಿನದ್ದು. ಸಾರಾ ಅವರ ತಂದೆ ಡಾ.ತಯ್ಯಬ್ ಜುಕಾಕು ಅವರು ಮಕ್ಕಳಿಗೆ ಕುಟುಂಬದ ಬೇರುಗಳ ಪರಿಚಯ ಇರಬೇಕೆಂಬ ಉದ್ದೇಶದಿಂದ ಆಗಾಗ ಭಟ್ಕಳಕ್ಕೆ ಕರೆ ತರುತ್ತಿದ್ದರು. ಒಂದು ದಶಕಕ್ಕೂ ಹಿಂದೆ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಬ್ದುಲ್ ಮತ್ತು ಸಾರಾ ನಾಲ್ಕು ದಿನ ಭಟ್ಕಳದಲ್ಲಿ ತಂಗಿದ್ದರು. ಆಗ ಕುಟುಂಬದವರೊಂದಿಗೆ ಆತ್ಮೀಯವಾಗಿ ಬೆರೆತಿದ್ದರು’ ಎಂದು ಬೀಬಿ ಹುಸ್ನಾ ಜುಕಾಕು ಸ್ಮರಿಸಿದ್ದಾರೆ.
ಅಬ್ದುಲ್ ಅವರು ಚುನಾವಣೆಯಲ್ಲಿ ಎಲ್ಲರಿಗೂ ಆರೋಗ್ಯ ಸೇವೆ ಹಾಗೂ ರಾಜಕೀಯದಲ್ಲಿ ಹಣದ ಪ್ರಭಾವ ಕಡಿಮೆ ಮಾಡುವ ಭರವಸೆ ನೀಡಿದ್ದರು. ಅವುಗಳನ್ನು ಈಡೇರಿಸುವಂತಾಗಲಿ ಎಂಬುದು ಕುಟುಂಬದ ಆಶಯವಾಗಿದೆ ಎಂದು ಹುಸ್ನಾ ತಿಳಿಸಿದ್ದಾರೆ.
ಭಟ್ಕಳದ ಕುಟುಂಬವೊಂದರ ಸದಸ್ಯರು ಅಮೆರಿಕದ ರಾಜಕೀಯದಲ್ಲಿ ಮಹತ್ವದ ಸ್ಥಾನ ಗಳಿಸಿರುವುದರಿಂದ ಭಟ್ಕಳದ ಮನೆಮನೆಯಲ್ಲೂ ಸಂತಸ ಮೂಡಿದೆ. ಅಲ್ಲದೆ ಕರಾವಳಿಯ ಪುಟ್ಟ ಊರಿನ ಹೆಸರೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿಯೂ ಸುದ್ದಿಯಾಗಿದೆ.
ಭಟ್ಕಳದಲ್ಲಿ ಸಂಭ್ರಮ
ಅಮೆರಿಕದ ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿರುವ ಅಬ್ದುಲ್ ಅಲ್ ಸಯ್ಯದ್ ಅವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾದ ಮೊದಲ ಮುಸ್ಲಿಮ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಪತ್ನಿ ಡಾ. ಸಾರಾ ಜುಕಾಕು ಭಟ್ಕಳದ ಪ್ರಸಿದ್ಧ ಜುಕಾಕು ಕುಟುಂಬದವರು. ಮಾಜಿ ಸಚಿವ ದಿವಂಗತ ಜೆ.ಎಚ್.ಶಂಸುದ್ದೀನ್ ಜುಕಾಕು ಅವರ ಮೊಮ್ಮಗಳು. ಹೀಗಾಗಿ ಸಾವಿರಾರು ಮೈಲಿ ದೂರದಲ್ಲಿ ನಡೆದ ಚುನಾವಣೆಯ ಫಲಿತಾಂಶ ಭಟ್ಕಳದ ಕುಟುಂಬದಲ್ಲಿಯೂ ಸಂಭ್ರಮ ಮೂಡಿಸಿದೆ. ಅಬ್ದುಲ್ ಅವರ ಮುಂದಿನ ರಾಜಕೀಯ ಪಯಣ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ದಿಕ್ಕಿನಲ್ಲಿ ಸಾಗಲಿ ಎಂಬ ಆಶಯದೊಂದಿಗೆ ಜುಕಾಕು ಕುಟುಂಬದವರು ಅವರ ಸಾಧನೆಯನ್ನು ಹೆಮ್ಮೆಯಿಂದ ಸಂಭ್ರಮಿಸುತ್ತಿದ್ದಾರೆ.






