ದಲಿತ ಚಳವಳಿಯ ಗೈರು, NDA ಕಾರುಬಾರು

ಬಿಹಾರದಲ್ಲಿ 22 ದಲಿತ ಜಾತಿಗಳಿವೆ. ರಾಜ್ಯದ ಶೇ.20 ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತವೆ. ಚಮ್ಮಾರ್ (ಶೇ. 31.3), ಪಾಸ್ವಾನ್ (ಶೇ. 30.9) ಮತ್ತು ಮುಸಾಹರ್ (ಶೇ. 13.9) ಈ ಮೂರು ಜಾತಿಗಳ ದಲಿತರು ಬಹುಸಂಖ್ಯೆಯಲ್ಲಿದ್ದು, ಚುನಾವಣಾ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 1970ರ ದಶಕದ ತುರ್ತುಪರಿಸ್ಥಿತಿಯ ನಂತರವೂ ಕಾಂಗ್ರೆಸ್ ಪಕ್ಷದೊಂದಿಗೆ ಹೆಚ್ಚಾಗಿ ಗುರುತಿಸಿಕೊಂಡಿದ್ದ ದಲಿತರು, ಯಾದವರ ಔಃಅ ರಾಜಕಾರಣದ ಪರವಾಗಿ ಗುರುತಿಸಿಕೊಂಡಿದ್ದು ಕಡಿಮೆಯೇ. ಉತ್ತರಪ್ರದೇಶ, ಮಹಾರಾಷ್ಟ್ರ, ಕರ್ನಾಟಕದಂತೆ ದಲಿತ ಚಳವಳಿಯು ಗಟ್ಟಿಯಾಗಿ ನೆಲೆಯೂರದ ಪರಿಣಾಮ ಬಿಹಾರದ ದಲಿತರು 1990ರ ನಂತರ ಐಕ್ಯಗೊಂಡ ಉದಾಹರಣೆಗಳೇ ಇಲ್ಲ. ಆದರೂ ಎಡಪಂಥೀಯ ಚಳವಳಿಯನ್ನು ಕೆಲವು ದಶಕಗಳ ಕಾಲ ಆಸರೆಗಣ್ಣಿನಿಂದ ನೋಡಿದ್ದು ನಿಜ.
2015ರಲ್ಲಿ ನಿತೀಶ್‌ಕುಮಾರ್ ನೇತೃತ್ವದ ಸರಕಾರ 21 ದಲಿತ ಜಾತಿಗಳನ್ನು ‘ಮಹಾ ದಲಿತ’ ಎಂದು ಪಾಸ್ವಾನರಿಂದ ಪ್ರತ್ಯೇಕಿಸಿ ಒಳಮೀಸಲಾತಿ ನೀಡಲು ಹೊರಟಾಗ ರಾಮ್ ವಿಲಾಸ್ ಪಾಸ್ವಾನ್ ವಿರೋಧ ಕಟ್ಟಿಕೊಂಡರು. ಇದು ನಿತೀಶರಿಗೆ ಪಾಸ್ವಾನೇತರ ದಲಿತ ಮತಗಳ ಭಾರೀ ವರ್ಗಾವಣೆಯನ್ನು ಉಂಟುಮಾಡಿತು. ಅದೇ ಸಮಯದಲ್ಲಿ ಜಿತನ್ ರಾಮ್ ಮಾಂಝಿ ಎಂಬ ದಲಿತ ನಾಯಕನನ್ನು ಪಾಸ್ವಾನ್ ವಿರುದ್ಧ ನಿಲ್ಲಿಸಿ ದಲಿತರನ್ನು ಮತ್ತಷ್ಟು ಒಡೆಯಲಾಯಿತು. ಆದರೆ ಈ ಸನ್ನಿವೇಶದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಬಲವಾದ ಮರುಪ್ರವೇಶದಿಂದ ಕಾಂಗ್ರೆಸಿನ ಸುಭದ್ರ ಮತಗಳೆಲ್ಲ ಬಿಜೆಪಿಯ ಪಾಲಾದವು. ಅದರಲ್ಲಿ ದಲಿತರದ್ದೂ ಇತ್ತು.
ಬಿಜೆಪಿಯ ‘ಔಃಅ’ ಮತ್ತು ದಲಿತರನ್ನು ಒಡೆದು ಆಳುವ ‘ಚಾಣಕ್ಯ’ ನೀತಿಯು ಉತ್ತರಪ್ರದೇಶದಲ್ಲಿ ಪ್ರಯೋಗವಾದಂತೆ ಬಿಹಾರದಲ್ಲಿಯೂ ಪ್ರಯೋಗವಾಯಿತು. ಯಾದವೇತರರು ಹಾಗೂ ಪಾಸ್ವಾನೇತರರು ಎಂಬ ಅಸ್ಮಿತೆಯನ್ನು ಹುಟ್ಟುಹಾಕಿ ಮತಬ್ಯಾಂಕ್ ಹೆಚ್ಚಿಸಿಕೊಂಡಿತು. ಅದರೆ 2020ರ ಚುನಾವಣೆಯಲ್ಲಿ ಒಟ್ಟು 38 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ NDA ಒಕ್ಕೂಟ ಗೆದ್ದದ್ದು 21ನ್ನು ಮಾತ್ರ. ಕಾಂಗ್ರೆಸ್- ಆರ್‌ಜೆಡಿ ಮಹಾಘಟಬಂಧನ್ 17 ಸ್ಥಾನ ಗೆದ್ದಿತ್ತು. ಇದಕ್ಕೆ ಕಾರಣ ಮಾಂಝಿ ಮತ್ತು ಪಾಸ್ವಾನರ ಪಕ್ಷ NDA ಒಕ್ಕೂಟದ ಹೊರಗಿತ್ತು.
2025ರ ಚುನಾವಣೆ ಈ ಹಿಂದಿನಂತಿರಲಿಲ್ಲ. ಈ ಬಾರಿ ಮಾಂಜಿ ಮತ್ತು ಪಾಸ್ವಾನರ ಪಕ್ಷವು NDA ಒಕ್ಕೂಟದ ಜೊತೆಗೆ ಇತ್ತು. ಅಂದರೆ ಬಹುತೇಕ ಎಲ್ಲಾ ದಲಿತ ಜಾತಿಗಳು NDA ಪರವಾಗಿದ್ದವು. ಘಟಬಂಧನ್ ಪರವಾಗಿ ಒಬ್ಬರೂ ದಲಿತ ನಾಯಕ/ನಾಯಕಿ ಇರಲಿಲ್ಲ. ಒಬ್ಬರನ್ನೂ ಘಟಬಂಧನ್ ಬೆಳೆಸಲಿಲ್ಲ ಅಥವಾ ಉಳಿಸಿಕೊಳ್ಳಲಿಲ್ಲ. ಬದಲಾಗಿ ಯಾದವರನ್ನು ಮತ್ತೆ ಹೆಚ್ಚು ನೆಚ್ಚಿಕೊಂಡು ದಲಿತರಿಗೆ ಮತ್ತಷ್ಟು ಭಯ ಹುಟ್ಟಿಸಿತು. ಹಾಗಾಗಿ ಎಂದಿನಂತೆ ಅತ್ತ ದರಿ ಇತ್ತ ಪುಲಿಯ ನಡುವೆ ದಲಿತರು ಪ್ರಪಾತವನ್ನೇ ಆಯ್ಕೆ ಮಾಡಿಕೊಂಡು ಧುಮುಕಿದ್ದಾರೆ.
ಒಟ್ಟು 38 ಮೀಸಲು ಕ್ಷೇತ್ರಗಳಲ್ಲಿ 34 NDA ಒಕ್ಕೂಟದ ಪಾಲಾಗಿದೆ. ತಕ್ಷಣದ ಪರಿಣಾಮವಾಗಿ ಮಹಿಳೆಯರ ಖಾತೆಗೆ ಹತ್ತು ಸಾವಿರ ರೂ. ಹಾಗೂ ವಿಕಾಸ್ ಮಿತ್ರ ನೇಮಕಾತಿ ಮೂಲಕ ದಲಿತ ಕೇರಿಗಳಿಗೆ ಮೂಲಸೌಕರ್ಯ ಒದಗಿಸುವ ಕಾರ್ಯವು ಪ್ರಭಾವ ಬೀರಿದೆಯಾದರೂ ಬಿಹಾರದ ದಲಿತರ ಅನೈಕ್ಯತೆಯೇ ಅವರನ್ನು ಸಂದಿಗ್ಧ ಪರಿಸ್ಥಿತಿಗೆ ತಳ್ಳಿದೆ. ಬಹುಶಃ ಮತಚಲಾಯಿಸಿದ ಮಾರನೇ ದಿನವೇ ಬಿಹಾರದ ದಲಿತರು ಬೆಂಗಳೂರಿನಂತಹ ನಗರಗಳಿಗೆ ವಲಸೆ ಬಂದಿದ್ದಾರೆ. 2028 ಮತ್ತು 2030ಕ್ಕೆ ಮತ್ತೆ ಬಿಹಾರಕ್ಕೆ ಹೋಗುತ್ತಾರೆ. ಗೆದ್ದೆತ್ತಿನ ಬಾಲ ಹಿಡಿದು ಪಾಸ್ವಾನ್ ಮತ್ತು ಮಾಂಝಿ ಪಕ್ಷ ಸಂವಿಧಾನ ವಿರೋಧಿ ಮನುವಾದಿಗಳ ಚಕ್ರವ್ಯೆಹದಲ್ಲಿ ಸ್ವರ್ಗದ ಕನಸು ಕಾಣುತ್ತಲೇ ಇರುತ್ತದೆ.







