ಕೇರಳದಲ್ಲಿ ಸಹೋದರನ ಪೊಲೀಸ್ ಕಸ್ಟಡಿ ಹತ್ಯೆ ಆರೋಪ : ಶ್ರೀಜಿತ್ 11 ವರ್ಷಗಳ ನಿರಂತರ ಹೋರಾಟ

ಸಕಲೇಶಪುರ : ಸಹೋದರ ಶ್ರೀಜೀವ್‌ರ ಸಾವಿಗೆ ಕಾರಣವಾದ ಕೇರಳ ಪೊಲೀಸ್ ಹಿಂಸೆ ಮತ್ತು ಕೊಲೆಯ ವಿರುದ್ಧ 11 ವರ್ಷಗಳಿಂದ ವ್ಯಕ್ತಿಯೊಬ್ಬ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು, ಕೊಚ್ಚಿ-ಮಂಗಳೂರು-ಬೆಂಗಳೂರು ಮಾರ್ಗವಾಗಿ ದಿಲ್ಲಿಗೆ ಮತ್ತೊಂದು ಪಾದಯಾತ್ರೆ ನಡೆಸುತ್ತಿದ್ದಾರೆ.
ಸಕಲೇಶಪುರ ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕೇರಳದ ಎರ್ನಾಕುಲಂ ಜಿಲ್ಲೆಯ ವರಪುಝ ಗ್ರಾಮದ ಶ್ರೀಜಿತ್, ತನ್ನ ಸಹೋದರ ಶ್ರೀಜೀವ್‌ರ ಸಾವಿನ ಪ್ರಕರಣವನ್ನು ದಿಲ್ಲಿಯಲ್ಲಿರುವ ಸುಪ್ರೀಂ ಕೋರ್ಟ್‌ಗೆ ತಲುಪುವಂತೆ ಮಾಡಿ ನ್ಯಾಯ ಪಡೆಯುವುದು ಹೋರಾಟದ ಗುರಿಯಾಗಿದೆ ಎಂದು ಹೇಳಿದರು.
ಈ ಹೋರಾಟ ಕೇವಲ ನನ್ನ ಒಂದು ಕುಟುಂಬದ ನ್ಯಾಯಕ್ಕಾಗಿಮಾತ್ರವಲ್ಲ, ಭಾರತದಲ್ಲಿ ಪೊಲೀಸ್ ಕಸ್ಟಡಿ ಸಾವುಗಳ ವಿರುದ್ಧದ ದೊಡ್ಡ ಸಾಮಾಜಿಕ ಚಳವಳಿಯಾಗಿದೆ ಎಂದರು.
ನಿರಂತರ ಚಳವಳಿಯ ಹಿನ್ನೆಲೆ :
2014ರ ಮೇ 19ರಂದು ನಡೆದ ಘಟನೆಯಲ್ಲಿ, ಕೇರಳದ ಎರ್ನಾಕುಲಂ ಜಿಲ್ಲೆಯ ವರಪುಝ ಗ್ರಾಮದ 28 ವರ್ಷದ ಶ್ರೀಜೀವ್ ಮೃತಪಟ್ಟರು. ಮೊಬೈಲ್ ಕಳ್ಳತನದ ವಿಚಾರವಾಗಿ ನೆರೆಹೊರೆಯವರು ಪೋಲಿಸರಿಗೆ ದೂರು ನೀಡಿದ್ದರು.
2014ರ ಮೇ 19ರಂದು ಶ್ರೀಜೀವ್ ಅವರನ್ನು ಬಂಧಿಸಲಾಯಿತು, ಎರಡು ದಿನಗಳ ನಂತರ ಮೇ 21ರಂದು ಮೃತಪಟ್ಟರು. ಈ ಸಾವಿಗೆ ಪೊಲೀಸರ ಹಿಂಸೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದರು, ಆದರೆ ಪೊಲೀಸ್ ಇಲಾಖೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳತೊಡಗಿದರು.
ಕೇರಳ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ಗೋಪಾಕುಮಾರ್ ಹಾಗೂ ಉಪನಿರೀಕ್ಷಕ ಫಿಲಿಪೋಸ್ ಅವರು ಪೊಲೀಸ್ ವಶದಲ್ಲಿದ್ದ ಶ್ರೀಜೀವ್ ಮೇಲೆ ಕ್ರೂರ ದೈಹಿಕ ಹಿಂಸೆ ನಡೆಸಿರುವುದಾಗಿ ವರದಿ ನೀಡಿತ್ತು. ಆದರೆ, ಕೇರಳ ಪೊಲೀಸರು ಫೊರೆನ್ಸಿಕ್ ಸಾಕ್ಷ್ಯಗಳ ಆಧಾರದ ಮೇಲೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ, ಕಸ್ಟಡಿ ಹಿಂಸಾಚಾರದ ಯಾವುದೇ ದೃಢವಾದ ಸಾಕ್ಷಿ ದೊರಕಲಿಲ್ಲವೆಂದು ಹೇಳಿತು.
ಕೇರಳ ಮಾನವ ಹಕ್ಕುಗಳ ಆಯೋಗ (ಎಸ್‌ಎಚ್‌ಆರ್‌ಸಿ) 2018ರಲ್ಲಿ ನಡೆಸಿದ ತನಿಖೆಯಲ್ಲಿ, ಶ್ರೀಜೀವ್‌ಗೆ ಕಸ್ಟಡಿಯಲ್ಲೇ ಗಾಯಗಳುಂಟಾಗಿವೆ ಎಂದು ದೃಢಪಡಿಸಿತು. ಜನರ ಒತ್ತಾಯಕ್ಕೆ ತತ್ತರಿಸಿದ ಕೇರಳ ಸರಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆದೇಶಿತ್ತು. ಸಿಬಿಐ 2019ರಲ್ಲಿ ತನಿಖೆ ನಡೆಸಿ, ಹಿಂಸೆಯನ್ನು ನಿರಾಕರಿಸಿ ಆತ್ಮಹತ್ಯೆ ಎಂದು ವರದಿ ಸಲ್ಲಿಸಿತು.
ಶ್ರೀಜಿತ್ ಅವರು 2016ರಲ್ಲಿ 782 ದಿನಗಳಕಾಲ ನ್ಯಾಯಕ್ಕಾಗಿ ಧರಣಿ ನಡೆಸಿದರು. 2018ರಲ್ಲಿ ಸಿಬಿಐ ತನಿಖೆ ಆರಂಭವಾಗುವವರೆಗೆ ಈ ಧರಣಿ ಮುಂದುವರಿಯಿತು. ನಿರ್ದಿಷ್ಟ ಸಾಕ್ಷ್ಯಾಧಾರಗಳು ಇಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ತಿಳಿಸಿತ್ತು ಎಂದು ಹೇಳಲಾಗುತ್ತದೆ.
ಈ ಪ್ರತಿಭಟನೆಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಯುವಕರಿಂದ ಬೆಂಬಲ ಪಡೆಯಿತು ನಂತರದಲ್ಲಿ, ಅವರು ದಿಲ್ಲಿಗೆ ಪಾದಯಾತ್ರೆ ನಡೆಸಿ, ಸುಪ್ರೀಂ ಕೋರ್ಟ್ ಮುಂದೆ ಬೇಡಿಕೆಗಳನ್ನು ಇಟ್ಟಿದ್ದರು. ಆದರೆ, ಭಾಷಾ ಸಮಸ್ಯೆಯಿಂದ ಶ್ರೀಜಿತ್ ಹಿಂದಿರುಗಬೇಕಾಯಿತು.
2024ರಲ್ಲಿ ಈ ಹೋರಾಟ ಹೊಸ ತಿರುವು ಪಡೆಯಿತು. ಮಾರ್ಚ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೇಲೆ ನಿರಾಧಾರ ಆರೋಪ ಮಾಡಿದ್ದಕ್ಕೆ ಶೀಜಿತ್ ವಿರುದ್ಧ ಪ್ರಕರಣ ದಾಖಲಾಯಿತು. ಅಕ್ಟೋಬರ್‌ನಲ್ಲಿ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಯುವಕನೊಬ್ಬನನ್ನು ಹಲ್ಲೆನಡೆಸಿದ ಆರೋಪದಲ್ಲಿ ಶ್ರೀಜಿತ್‌ರನ್ನು ಬಂಧಿಸಲಾಯಿತು.
ಮತ್ತೊಮ್ಮೆ ದಿಲ್ಲಿ ಯಾತ್ರೆ :
ಈ ಘಟನೆಗಳಿಂದ ಶ್ರೀಜಿತ್ ಅವರ ಹೋರಾಟದ ತೀವ್ರತೆ ಕಡಿಮೆಯಾಗಲಿಲ್ಲ. ಕೇರಳ ರಾಜ್ಯ ಪೊಲೀಸರು ಯಾವುದೇ ಗಂಭೀರ ತನಿಖೆ ನಡೆಸದೆ, ನನ್ನ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ನನ್ನ ಮೇಲೆಯೇ ಹಿಂಸೆ ಮಾಡಿದ್ದಾರೆ. ತಿರುವನಂತಪುರಂನಲ್ಲಿ ಹಲವು ದಿನಗಳ ಪ್ರತಿಭಟನೆಯ ದಾರಿ ತಪ್ಪಿಸಿ ಮುಚ್ಚಿಹಾಕಿದ್ದಾರೆ ಎಂದು ಶ್ರೀಜಿತ್ ಆರೋಪಿಸಿದರು.
2024ರ ಅಂತ್ಯದಲ್ಲಿ ತಿರುವನಂತಪುರಂನಿಂದ ಕೊಚ್ಚಿಯ ಹೈಕೋರ್ಟ್, ನಂತರ ದಿಲ್ಲಿಯ ಸುಪ್ರೀಂ ಕೋರ್ಟ್ ವರಗೆ ತಲುಪಿ ಬೇಡಿಕೆಗಳನ್ನು ಸಾರ್ವಜನಿಕರ ಮುಂದು ಇಟ್ಟ ಶ್ರೀಜಿತ್ ಈಗ ಮತ್ತೊಮ್ಮೆ ದಿಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ. ಕರ್ನಾಟಕದ ಜನ ಇವರಿಗೆ ಬೆಂಬಲ ನೀಡಬಹುದು ಎಂಬ ಆಸೆ ಇದೆ. ನಮಗೆ ಕಾನೂನುಬದ್ಧ ನ್ಯಾಯ ಸಿಗಲೇಬೇಕು. ಇದು ಕೇವಲ ನಮ್ಮ ಕುಟುಂಬದ ಹೋರಾಟವಲ್ಲ, ಪೊಲೀಸರ ಕ್ರೂರತೆ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟವಾಗಿದೆ ಎಂದು ಅವರು ಹೇಳುತ್ತಾರೆ.
ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದರೆ, ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎನ್ನುತ್ತಾರೆ.
ಭಾರತದಲ್ಲಿ ಪೊಲೀಸ್ ಕಸ್ಟಡಿ ಸಾವುಗಳು ದೊಡ್ಡ ಸಮಸ್ಯೆಯಾಗಿವೆ. ಹ್ಯೂಮನ್ ರೈಟ್ಸ್ ವಾಚ್‌ರ 2016ರ ವರದಿಯ ಪ್ರಕಾರ, ದೇಶದಲ್ಲಿ ವಾರಕ್ಕೊಮ್ಮೆ ಕಸ್ಟಡಿ ಸಾವುಗಳು ನಡೆಯುತ್ತಿವೆ, ಮತ್ತು ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಶ್ರೀಜಿತ್‌ರ ಹೋರಾಟ ಇಂತಹ ಘಟನೆಗಳ ವಿರುದ್ಧ ಜಾಗೃತಿ ಮೂಡಿಸುತ್ತಿದೆ.
ಮಧ್ಯಮ ವರ್ಗದ ಕುಟುಂಬದ ಶ್ರೀಜಿತ್ ಅವರು ಕಾಲು ನಡಿಗೆಯಲ್ಲಿ ದಿಲ್ಲಿ ಕಡೆಗೆ ಸಾಗುತ್ತಿದ್ದಾರೆೆ. ಕೈಯಲ್ಲಿ ಹಣವಿಲ್ಲ ಯಾರ ಬೆಂಬಲ ಇವರಿಗಿಲ್ಲ. ತಳ್ಳುವ ಗಾಡಿಯಲ್ಲಿ ಭಿತ್ತಿ ಪತ್ರಗಳನ್ನು ಅಂಟಿಸಿಕೊಂಡು ನಾಲ್ಕು ಚಕ್ರದ ತಳ್ಳುವ ಗಾಡಿಯಲ್ಲಿ ಅಗತ್ಯ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಸಾಗುತ್ತಿದ್ದಾರೆ. ಜೇಬಿನಲ್ಲಿ ಕಾಸಿಲ್ಲ ಮನಸ್ಸಿನಲ್ಲಿ ಸಹೋದರ ಸಾವಿನ ಆಕ್ರೋಶದ ಜ್ವಾಲೆ ಅಬ್ಬರಿಸುತ್ತಿದೆ.ರಸ್ತೆ ಬದಿಯಲ್ಲಿ ಮಲಗುತ್ತಾನೆ ಯಾರೋ ಕೊಟ್ಟಿದ್ದನ್ನು ತಿನ್ನುತ್ತಾರೆ. ಮಳೆ ಚಳಿ ಬಿಸಿಲು ಲೆಕ್ಕಿಸದೆ ನಡೆಯುತ್ತಲೇ ಇದ್ದಾರೆ ಗಾಂಧಿಯ ಮಾರ್ಗದಲ್ಲಿ...
ಸಂವಹನಕ್ಕೆ ಇವರಿಗೆ ಭಾಷೆ ಬಹಳ ಕಾಡುತ್ತಿದೆ. ಮಲಯಾಳಂ ಸ್ವಷ್ಟವಾಗಿ ಮಾತನಾಡುತ್ತಾರೆೆ. ಹಿಂದಿ ಸಾಕಷ್ಟು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ಅಲ್ಪಸ್ವಲ್ಪ ಮಾತನಾಡುತ್ತಾರೆೆ. ಬಿಟ್ಟರೆ ಬೇರೆ ಭಾಷೆಯೂ ಬರುವುದಿಲ್ಲ ಜನರಿಗೆ ಇವರ ಭಾಷೆ ಅರ್ಥವಾಗುವುದಿಲ್ಲ. ಭಾಷೆಯ ಗೊಂದಲ ಕಾಡಿದರೂ ಸಹ ತನ್ನ ಹೋರಾಟದ ಛಲ ಬಿಡದೆ ಭಾಷೆಗಳ ಗಡಿದಾಟಿ ಚಲಿಸುತ್ತಲೇ ಇದ್ದಾರೆ.







