ನೂರು ತುಂಬಿದಾಗ ಗುರುತಿಸಲೇಬೇಕಾದ ಸಾಧನೆಗಳು

ಆರೆಸ್ಸೆಸ್ ತನ್ನ ಇತಿಹಾಸದುದ್ದಕ್ಕೂ ಕಳಂಕಗಳ ಮೂಟೆಯೊಂದನ್ನು ತನ್ನ ಬೆನ್ನ ಮೇಲೆ ಹೊತ್ತು ನಡೆದಿದೆ. ವಯಸ್ಸು ಹೆಚ್ಚಿದಂತೆ ಆ ಮೂಟೆಯ ಗಾತ್ರವೂ ಬೆಳೆಯುತ್ತಲೇ ಇದೆ. ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಸಂಘಕ್ಕೆ ಆಗಿರುವ ಆಘಾತವೇನೆಂದರೆ, ಆ ಬೃಹತ್ ಮೂಟೆಯೊಳಗೆ ಅದು ಅಡಗಿಸಿಟ್ಟಿದ್ದ ಒಂದೊಂದೇ ಕಳಂಕವು ಸಾರ್ವಜನಿಕ ರಂಗದಲ್ಲಿ ಚರ್ಚೆಗೆ ಬರತೊಡಗಿದೆ. ಜನರು ಆ ಕಳಂಕಗಳ ಕಡೆಗೆ ಗಮನ ಹರಿಸತೊಡಗಿದ್ದಾರೆ.
ಶತಮಾನೋತ್ಸವವು ಆರೆಸ್ಸೆಸ್ ಪಾಲಿಗೆ ವರದಾನಕ್ಕಿಂತ ಹೆಚ್ಚಾಗಿ ಶಾಪವಾಗಿ ಪರಿಣಮಿಸಿದೆ. ಗುಟ್ಕಾ ಅಥವಾ ಮದ್ಯದಂತಹ ಮಾರಕ ವಸ್ತುಗಳ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಜನಪ್ರಿಯಗೊಳಿಸಲು ಸಿನೆಮಾ ನಟರನ್ನು ಮಾಡೆಲ್‌ಗಳಾಗಿ ಬಳಸುವುದುಂಟು. ಆದರೆ ಆರೆಸ್ಸೆಸ್ ಥರದ ಒಂದು ಸೈದ್ಧಾಂತಿಕ ಸಂಘಟನೆಯು ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ತನ್ನ ಪರ ಜನಾಭಿಪ್ರಾಯ ಮೂಡಿಸಲಿಕ್ಕಾಗಿ ಸಿನೆಮಾ ತಾರೆಯರನ್ನು ಅವಲಂಬಿಸಿದ್ದೇಕೆ? ಹಲವು ಕುಖ್ಯಾತ ಸಿನೆಮಾ ನಟರಿಗೆ ದುಡ್ಡುಕೊಟ್ಟು ಅವರಿಂದ ತನ್ನ ಬಗ್ಗೆ ಪ್ರಶಂಸೆಯ ಹೇಳಿಕೆಗಳನ್ನು ಕೊಡಿಸಲು ಸಂಘವು ನಿರ್ಬಂಧಿತವಾದದ್ದೇಕೆ? ವಯಸ್ಸು ನೂರಾದರೂ ಭಾರತೀಯ ಸಮಾಜದಲ್ಲಿ ಸ್ವಾಭಾವಿಕ ಜನಮನ್ನಣೆ ಪಡೆಯುವಲ್ಲಿ ಸಂಘವು ಎಷ್ಟೊಂದು ಹೀನಾಯ ಸೋಲು ಅನುಭವಿಸಿದೆ ಎಂಬುದಕ್ಕೆ ಅದರ ಈ ದಯನೀಯ ಅವಲಂಬನೆಯೇ ಸಾಕ್ಷಿಯಾಗಿ ಬಿಟ್ಟಿದೆ.
ಆರೆಸ್ಸೆಸ್ ತನ್ನ ಇತಿಹಾಸದುದ್ದಕ್ಕೂ ಕಳಂಕಗಳ ಮೂಟೆಯೊಂದನ್ನು ತನ್ನ ಬೆನ್ನ ಮೇಲೆ ಹೊತ್ತು ನಡೆದಿದೆ. ವಯಸ್ಸು ಹೆಚ್ಚಿದಂತೆ ಆ ಮೂಟೆಯ ಗಾತ್ರವೂ ಬೆಳೆಯುತ್ತಲೇ ಇದೆ. ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಸಂಘಕ್ಕೆ ಆಗಿರುವ ಆಘಾತವೇನೆಂದರೆ, ಆ ಬೃಹತ್ ಮೂಟೆಯೊಳಗೆ ಅದು ಅಡಗಿಸಿಟ್ಟಿದ್ದ ಒಂದೊಂದೇ ಕಳಂಕವು ಸಾರ್ವಜನಿಕ ರಂಗದಲ್ಲಿ ಚರ್ಚೆಗೆ ಬರತೊಡಗಿದೆ. ಜನರು ಆ ಕಳಂಕಗಳ ಕಡೆಗೆ ಗಮನ ಹರಿಸತೊಡಗಿದ್ದಾರೆ. ಬ್ರಿಟಿಷರ ಕಾಲದಲ್ಲಿ ಬ್ರಿಟಿಷರ ಪರನಿಂತು ಸ್ವಾತಂತ್ರ್ಯ ಹೋರಾಟವನ್ನು ಬಹಿಷ್ಕರಿಸಿ, ವಿರೋಧಿಸಿದ ಕಳಂಕ, ರಾಷ್ಟ್ರಪಿತನ ಹತ್ಯೆಯ ಕಳಂಕ, ರಾಷ್ಟ್ರಗೀತೆಯನ್ನು ಆಕ್ಷೇಪಿಸಿದ ಮತ್ತು ರಾಷ್ಟ್ರಧ್ವಜವನ್ನು ಬಹುಕಾಲ ತಿರಸ್ಕರಿಸಿದ ಕಳಂಕ, ರಾಷ್ಟ್ರವಾದದ ಹೆಸರಲ್ಲಿ ಜನಾಂಗವಾದವನ್ನು ಪೋಷಿಸಿದ ಕಳಂಕ, ದೇಶದ ಸಂವಿಧಾನವನ್ನು ಪದೇ ಪದೇ ಖಂಡಿಸಿ, ಮನುಸ್ಮತಿ ಮಾತ್ರವೇ ಭಾರತದ ಸಂವಿಧಾನವಾಗಬೇಕೆಂದು ವಾದಿಸುತ್ತಾ ಬಂದ ಕಳಂಕ, ಮೀಸಲಾತಿಯನ್ನು ವಿರೋಧಿಸಿದ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಎಲ್ಲ ಹೋರಾಟಗಳಿಗೆ ಅಡ್ಡಗಾಲಿಟ್ಟ ಕಳಂಕ, ದಲಿತರು ಹಾಗೂ ಶೂದ್ರರು ತಮ್ಮ ನೈಜ ಹಿತಾಸಕ್ತಿಗಳನ್ನು ಮರೆತು ತಮಗೆ ಸಂಬಂಧವೇ ಇಲ್ಲದ ವಿಷಯಗಳಲ್ಲಿ ಮೈಮರೆಯುವಂತೆ ಮಾಡಿದ ಕಳಂಕ, ಪರಂಪರಾಗತ ವಂಚಿತ ವರ್ಗಗಳಿಗೆ ಆಧುನಿಕ ಭಾರತದಲ್ಲೂ ನ್ಯಾಯ ಸಿಗದಂತೆ ಸಂಚು ಹೂಡಿದ ಕಳಂಕ, ದೇಶದ ಹಲವೆಡೆ ಗಲಭೆ, ಹಿಂಸೆ ಮತ್ತು ರಕ್ತಪಾತವನ್ನು ಆಯೋಜಿಸಿದ ಕಳಂಕ, ನೇರ ಹಾಗೂ ಪರೋಕ್ಷವಾಗಿ ಸಾಮೂಹಿಕ ಹತ್ಯೆ ಹಾಗೂ ಭಯೋತ್ಪಾದಕ ಚಟುವಟಿಕೆಗಳನ್ನೂ ಪ್ರಾಯೋಜಿಸಿದ ಕಳಂಕ, ಪ್ರಾಂತೀಯ ಭಾಷೆಗಳನ್ನು ಕೊಂದು ಸಂಸ್ಕೃತ ಹಾಗೂ ಸಂಸ್ಕೃತಮಯ ಹಿಂದಿಯನ್ನು ಹೇರುವ ಹುನ್ನಾರ ನಡೆಸಿದ ಕಳಂಕ, ಮಾಂಸಾಹಾರಿಗಳಾದ ಬಹುಜನರ ಮೇಲೆ ಸಸ್ಯಾಹಾರವನ್ನು ಹೇರಲು ಹೆಣಗಿದ ಕಳಂಕ, ಹಲವು ಬಾರಿ ನಿಷೇಧಕ್ಕೊಳಗಾದರೂ ತನ್ನ ವಕ್ರದಾರಿಯನ್ನು ಬಿಡದ ಕಳಂಕ - ಹೀಗೆ ಕಳಂಕಗಳ ಒಂದು ದೊಡ್ಡ ಹೊರೆಯೇ ಈ ನಿಗೂಢ ಸಂಘದ ಮೇಲಿದೆ. ಈವರೆಗೆ ಸುಳ್ಳುಗಳ ಹಾಗೂ ವಿವಿಧ ಉನ್ಮಾದಗಳ ತೆರೆಮರೆಯಲ್ಲಿ ಅಡಗಿದ್ದ ಆ ಮೂಟೆಯೊಳಗಿನ ಕಳಂಕಗಳೆಲ್ಲಾ ಇದೀಗ ಒಂದೊಂದಾಗಿ ಬಯಲಾಗತೊಡಗಿವೆ.
ಧ್ಯೇಯ ಸಾಧನೆ ಮುಖ್ಯ- ಅದಕ್ಕಾಗಿ ಯಾವ ಮಾರ್ಗ ಅನುಸರಿಸಬೇಕಾಗಿ ಬಂದರೂ ಸರಿ ಎಂಬುದು ಸಂಘದ ಅಚಲ ನಂಬಿಕೆ. ಆದ್ದರಿಂದಲೇ ಅದು ಎಂದೂ ಯಾವುದೇ ನೈತಿಕ ಮೌಲ್ಯಕ್ಕೆ ಬದ್ಧವಾಗಿದ್ದಿಲ್ಲ. ‘ರಾಷ್ಟ್ರೀಯ ಸುಳ್ಳರ ಸಂಘ’ ಎಂದೇ ಹಲವರು ಗುರುತಿಸುವ ಈ ಸಂಘ ಮೂಲತಃ ಸ್ಥಾಪಿತವಾಗಿದ್ದು ಮೇಲ್ಜಾತಿಯ ಒಂದು ಸಣ್ಣ ವರ್ಗದ ಹಿತರಕ್ಷಿಸುವ ಸೀಮಿತ ಅಜೆಂಡಾದೊಂದಿಗೆ. ಅದಕ್ಕೆ ಧರ್ಮ, ಅಧ್ಯಾತ್ಮ, ಸಚ್ಚಾರಿತ್ರ್ಯ, ಸದಾಚಾರ, ಸನ್ನಡತೆ ಇತ್ಯಾದಿಗಳಲ್ಲಿ ಯಾವ ಆಸಕ್ತಿಯೂ ಇಲ್ಲ ಮತ್ತು ರಾಷ್ಟ್ರಹಿತ, ಸಮಾಜಹಿತಗಳೊಂದಿಗೂ ಅದಕ್ಕೆ ಯಾವುದೇ ಸಂಬಂಧ ಇಲ್ಲ. ಸಂಘವನ್ನು ಬಲ್ಲವರೆಲ್ಲರೂ ಈ ವಿಷಯವನ್ನು ಚೆನ್ನಾಗಿ ಬಲ್ಲರು. ಆದರೂ ಅದು ತನ್ನ ನೈಜ ಮುಖವನ್ನು ಅಡಗಿಸಿಡಲಿಕ್ಕಾಗಿ ಯಾವಾಗಲೂ ಧರ್ಮ, ರಾಷ್ಟ್ರೀಯವಾದ, ಸಮಾಜಸೇವೆ, ಸದಾಚಾರ ಮುಂತಾದ ಅನೇಕ ಮುಖವಾಡಗಳ ಹಿಂದೆ ಆಶ್ರಯ ಪಡೆಯುತ್ತಾ ಬಂದಿದೆ. ತನ್ನ ನೈಜ ಮುಖವನ್ನು ಸದಾ ಮುಚ್ಚಿಟ್ಟಿದೆ. ಯಾವುದೇ ಅಧಿಕೃತ ನೋಂದಾವಣಿ ಇಲ್ಲದೆ, ಸದಾ ಅನಧಿಕೃತ ಹಾಗೂ ಸಂಶಯಾಸ್ಪದವಾಗಿಯೇ ಉಳಿದಿದೆ. ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಆಂತರಿಕ ಪ್ರಜಾಸತ್ತೆಯನ್ನು ಅದು ಎಂದೂ ತನ್ನ ಹತ್ತಿರವೂ ಸುಳಿಯಲು ಬಿಟ್ಟಿಲ್ಲ. ಅವಶ್ಯಾನುಸಾರ ಹೊಸ ಹೊಸ ಬ್ರಾಂಡ್‌ಗಳನ್ನು ಸೃಷ್ಟಿಸಿ, ಅದರಡಿಯಲ್ಲಿ ತನಗೆ ಬೇಕಾದದ್ದನ್ನೆಲ್ಲ ಮಾಡಿ, ಮಾಡಿಸಿ, ಕೆಲಸ ಮುಗಿದ ಬಳಿಕ ಆ ಬ್ರಾಂಡ್ ಅನ್ನು ಅಳಿಸಿ ಬಿಡುವುದು ಈ ಸಂಘದ ಪರಿಚಿತ ಕಾರ್ಯವಿಧಾನವಾಗಿದೆ. ತಾನೇ ಸೃಷ್ಟಿಸಿ ಪೋಷಿಸಿ ಬೆಳೆಸಿದ ಯಾವುದೇ ವ್ಯಕ್ತಿ, ಸಮಿತಿ, ಸಂಸ್ಥೆ, ಪಕ್ಷ, ಚಳವಳಿ ಅಥವಾ ಹೋರಾಟದ ಬಗ್ಗೆ, ಅದು ತನ್ನದಲ್ಲ ಮತ್ತು ಅದರ ಜೊತೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಲು ಸಾಧ್ಯವಾಗುವಂತೆ ಅದು ಕಾರ್ಯನಿರ್ವಹಿಸುತ್ತಾ ಬಂದಿದೆ. ಈ ತರದ ಕರಾಳ ಸ್ವರೂಪ ಮತ್ತು ಕಳಂಕಗಳ ಅಷ್ಟೊಂದು ದೊಡ್ಡ ಹೊರೆಯನ್ನು ಹೊತ್ತು ಒಂದು ಸಂಘವು ನೂರು ವರ್ಷ ಬದುಕಿ ಉಳಿಯಿತು ಎಂಬುದು ಖಂಡಿತ ಅಭಿನಂದನಾರ್ಹ.
ಭಾರತೀಯ ಸಂವಿಧಾನವನ್ನು, ಎಲ್ಲ ಸಾಂವಿಧಾನಿಕ ಮೌಲ್ಯಗಳನ್ನು ಮಾತ್ರವಲ್ಲ ಸಾಕ್ಷಾತ್ ಪ್ರಜಾಪ್ರಭುತ್ವವನ್ನು ಸದಾ ಕಟುವಾಗಿ ವಿರೋಧಿಸುತ್ತಲೇ ಬಂದಿರುವ ಈ ಸಂಘವು, ಅದೇ ಸಂವಿಧಾನ ಮತ್ತು ಅದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಳಸಿಕೊಂಡು ರಾಜಕೀಯ ರಂಗದಲ್ಲಿ ಯಶಸ್ಸು ಸಾಧಿಸಿ ಇದೀಗ ವ್ಯವಸ್ಥೆಯ ಮೇಲೆ ಸವಾರಿ ಮಾಡುತ್ತಿದೆ. ಇದು ಕೂಡಾ, ದೇಶದ ಜನತೆಯ ಪಾಲಿಗೆ ನಾಚಿಕೆಗೇಡಿನ ವಿಷಯವಾದರೂ ಸಂಘದ ಪಾಲಿಗೆ ಖಂಡಿತ ಅಭಿನಂದನಾರ್ಹ ಸಾಧನೆ. ‘ಬ್ರಾಹ್ಮಣ ಜಾತಿಯ ಪಕ್ಷ’, ‘ಭಾರತೀಯ ಝೂಟ್ ಪಾರ್ಟಿ’ ಎಂದೆಲ್ಲಾ ಗುರುತಿಸಲಾಗುವ ಬಿಜೆಪಿ ಎಂಬ ತನ್ನ ರಾಜಕೀಯ ಪಕ್ಷವನ್ನು ದೇಶದ ಹಲವು ರಾಜ್ಯಗಳಲ್ಲಿ ಮಾತ್ರವಲ್ಲ ಕೇಂದ್ರದಲ್ಲಿ ಕೂಡಾ ಹಲವು ಬಾರಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸುವಲ್ಲಿ ಸಂಘವು, ಯಶಸ್ವಿಯಾಗಿರುವುದು ಒಂದು ಸಂಘದ ಗಮನಾರ್ಹ ಚಮತ್ಕಾರ ಎಂಬುದನ್ನು ಸಂಘದ ವಿರೋಧಿಗಳು ಕೂಡಾ ಒಪ್ಪಿಕೊಳ್ಳಲೇ ಬೇಕು. ಬಿಜೆಪಿ ಉದಯಕಾಲದಲ್ಲಿ ಅದು ಮತ್ತದರ ಪೋಷಕ ಪರಿವಾರದವರು ರಾಜಕೀಯ ಪಕ್ಷಗಳಲ್ಲಿನ ಭ್ರಷ್ಟಾಚಾರ, ರಾಜಕಾರಣಿಗಳ ಸಡಿಲ ಚಾರಿತ್ರ್ಯ, ಅಧಿಕಾರಿಗಳ ಭ್ರಷ್ಟತೆ, ಆಡಳಿತ ವೈಫಲ್ಯ ಇತ್ಯಾದಿಗಳ ಕುರಿತು ಉದ್ದುದ್ದ ಉಪನ್ಯಾಸ ನೀಡುತ್ತಿದ್ದರು. ಶ್ರೀರಾಮನ ಮಹಿಮೆಗಳನ್ನು ವರ್ಣಿಸಿ, ನಮಗೆ ಅಧಿಕಾರ ಸಿಕ್ಕರೆ ರಾಮರಾಜ್ಯ ಸ್ಥಾಪಿಸುತ್ತೇವೆ ಎಂದು ಕನಸು ಕಾಣಿಸುತ್ತಿದ್ದರು. ಆದರೆ ಅವರಿಗೆ ಅಧಿಕಾರ ಸಿಕ್ಕಾಗ ಭ್ರಷ್ಟತೆಯಲ್ಲಿ, ಅನೈತಿಕತೆಯಲ್ಲಿ ಮತ್ತು ಜನದ್ರೋಹದ ವಿಷಯದಲ್ಲಿ ಇತರೆಲ್ಲ ಪಕ್ಷಗಳಿಗಿಂತ ನೂರು ಪಟ್ಟು ನಿಕೃಷ್ಟರು ತಾವೆಂಬುದನ್ನು ಸಾಧಿಸಿ ತೋರಿಸಿದರು. ಲಕ್ಷ ಮತ್ತು ಕೋಟಿಗಳಲ್ಲಿದ್ದ ಭ್ರಷ್ಟಾಚಾರವನ್ನು ಸಾವಿರಾರು ಮತ್ತು ಲಕ್ಷಾಂತರ ಕೋಟಿಗಳ ಮಟ್ಟಕ್ಕೇರಿಸುವ ಸಾಹಸ ಮಾಡಿದರು. ರಾಷ್ಟ್ರೀಯವಾದದ ಬೊಗಳೆ ಬಿಡುತ್ತಲೇ, ದೇಶದ ಗಡಿಗಳ ವಿಷಯದಲ್ಲಿ ರಾಜಿಮಾಡಿಕೊಂಡರು. ಧರ್ಮ, ಧಾರ್ಮಿಕ ಸ್ಥಳಗಳು, ಆರಾಧ್ಯಪುರುಷರು, ಧಾರ್ಮಿಕ ಸಂಕೇತಗಳು, ಧಾರ್ಮಿಕ ಸಭೆ, ಸಮಾರಂಭಗಳು, ಜಾತ್ರೆ, ಉತ್ಸವಗಳು ಎಲ್ಲವನ್ನೂ ಸಂಕುಚಿತ ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸುವ ತಮ್ಮ ಅಪ್ರತಿಮ ಪ್ರತಿಭೆಯನ್ನು ಅವರು ಪದೇಪದೇ ದೇಶದೆಲ್ಲೆಡೆ ಪ್ರದರ್ಶಿಸುತ್ತಲೇ ಬಂದಿದ್ದಾರೆ.
ಹಾಗೆ ನೋಡಿದರೆ, ಸಂಘದ ಸಾಧನೆಗಳು ಸಾಕಷ್ಟಿವೆ. ಭಾರತದ ದಲಿತರು ಮತ್ತು ಶೂದ್ರ ಬಹುಜನರು ಸ್ವತಃ ತಮ್ಮ ಅಸ್ಮಿತೆಯನ್ನು, ತಮ್ಮ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ಮರೆತು, ಸಹಸ್ರಮಾನಗಳ ಕಾಲ ತಮ್ಮನ್ನು ದಾಸ್ಯದಲ್ಲಿಟ್ಟ ಪೌರೋಹಿತ್ಯದ ಕಾಲಾಳುಗಳಾಗುವಂತೆ ಮಾಡುವಲ್ಲಿ ಸಂಘವು ಸಾಧಿಸಿದ ಯಶಸ್ಸನ್ನು ಮೆಚ್ಚದೆ ಇರಲು ಸಾಧ್ಯವಿಲ್ಲ. ನವಪೀಳಿಗೆಯ ಲಕ್ಷಾಂತರ ಮುಗ್ಧ ಮನಸ್ಸುಗಳಲ್ಲಿ ಮಾತ್ರವಲ್ಲ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ರಂಗಗಳಲ್ಲಿ ಮತ್ತು ಶಿಕ್ಷಕ ಸಮುದಾಯದ ಒಂದು ದೊಡ್ಡ ವಿಭಾಗದ ಮೆದುಳಲ್ಲಿ ತನ್ನ ದ್ವೇಷಪ್ರಧಾನ ಹಾಗೂ ಹಿಂಸಾ ಪ್ರಧಾನವಾದ ವಿಭಜಕ ವಿಚಾರಧಾರೆಯನ್ನು ತುರುಕುವಲ್ಲಿ ಸಂಘಕ್ಕೆ ದಕ್ಕಿರುವ ಗಣ್ಯ ಯಶಸ್ಸು ಕೂಡಾ ಗಮನಾರ್ಹ. ಎಲ್ಲ ಮಟ್ಟದ ಸರಕಾರಿ ಕಚೇರಿಗಳಲ್ಲಿ ಹಾಗೂ ಪ್ರಮುಖ ಸರಕಾರಿ ಸಂಸ್ಥೆಗಳಲ್ಲಿ ಇಂದು ಸಂಘದ ಮನುವಾದಿ ವಿಚಾರಧಾರೆಯನ್ನು ಪ್ರತಿನಿಧಿಸುವವರು ಠಳಾಯಿಸುತ್ತಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಮತ್ತು ತೀರಾ ಪ್ರತಿಕೂಲ ಸನ್ನಿವೇಶದಲ್ಲೂ ಜನರಿಗೆ ನ್ಯಾಯವನ್ನು ಒದಗಿಸುವ ಹೊಣೆಹೊತ್ತ ನ್ಯಾಯಾಂಗದಲ್ಲೂ ಮನುವಾದದ ವಿಷ ಹರಡುವಲ್ಲಿ ಸಂಘವು ಯಶಸ್ವಿಯಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ, ತಾವು ಪ್ರಜಾಸತ್ತೆ ಮತ್ತು ಸಾಂವಿಧಾನಿಕ ಮೌಲ್ಯಗಳ ರಕ್ಷಕರು ಮತ್ತು ಸಂಘ ಹಾಗೂ ಅದರ ಮನುವಾದವನ್ನು ವಿರೋಧಿಸುವವರು ಎಂದು ಹೇಳಿಕೊಳ್ಳುವ ಕಾಂಗ್ರೆಸ್‌ನಂತಹ ಹಲವು ಪ್ರಮುಖ ಪಕ್ಷಗಳ ಒಳಗೂ ದೊಡ್ಡ ಸಂಖ್ಯೆಯಲ್ಲಿ ತನ್ನ ಕಟ್ಟಾ ಅಭಿಮಾನಿಗಳನ್ನು ತುರುಕಲು ಸಂಘಕ್ಕೆ ಸಾಧ್ಯವಾಗಿದೆ. ಹಲವೊಮ್ಮೆ ಬಿಜೆಪಿಯೊಳಗಿನ ಸಂಘಿಗಳಿಗಿಂತ ಹೆಚ್ಚು ಉತ್ಸಾಹ ಮತ್ತು ಆವೇಶದೊಂದಿಗೆ ಈ ಕಾಂಗ್ರೆಸ್ ಮತ್ತಿತರ ಸೆಕ್ಯುಲರ್ ಪಕ್ಷಗಳೊಳಗಿನ ಸಂಘಿಗಳು ಸಂಘವನ್ನು ವೈಭವೀಕರಿಸುವುದು, ಸಂಘಗೀತೆಯನ್ನು ಹಾಡುವುದು, ಸಂಘದ ವಿಭಜಕ ಸಿದ್ಧಾಂತದ ಪರ ವಕಾಲತ್ತು ವಹಿಸುವುದು, ಪುರೋಹಿತರ ಕಾಲು ತೊಳೆಯುವುದು, ಅತಿಭಕ್ತರಂತೆ ನಟಿಸುವುದು ಮತ್ತು ಸಂಘದ ಅಜೆಂಡಾವನ್ನು ಅನುಷ್ಠಾನಿಸಲು ಹೆಣಗಾಡುವುದು ಕಂಡು ಬಂದಿದೆ.
ಸಮಾಜವಾದ ಮತ್ತು ಜಾತ್ಯತೀತ ವಿಚಾರಧಾರೆಗಳ ವಿರುದ್ಧ ಮಾತ್ರವಲ್ಲ ಆ ಪದಗಳ ವಿರುದ್ಧವೂ ಸಂಘವು ಬಹಿರಂಗ ಯುದ್ಧ ಘೋಷಿಸಿದೆ. ಅದು ಭಾರತದಲ್ಲಿ ಪೌರೋಹಿತ್ಯ ಮತ್ತು ವರ್ಣವ್ಯವಸ್ಥೆಯ ಜೊತೆ, ಬಂಡವಾಳಶಾಹಿತ್ವದ ರಕ್ಷಣೆ ಮತ್ತು ಪೋಷಣೆಗಾಗಿ ಅವಿರತ ಶ್ರಮಿಸುತ್ತಿರುವ ಅತಿದೊಡ್ಡ ಸಂಘಟನೆಯಾಗಿದೆ. ಎಲ್ಲ ಸರಕಾರಗಳ ಎಲ್ಲ ಧೋರಣೆಗಳು ಜನಹಿತವನ್ನು ಬಲಿಗೊಟ್ಟು ಅತಿಶ್ರೀಮಂತರು ಮತ್ತವರ ಅಮಾನುಷ ಕಾರ್ಪೊರೇಟ್ ಕಂಪೆನಿಗಳ ಪರವಾಗಿರುವಂತೆ ಮಾಡಲು ಅದು ಎಲ್ಲ ಬಗೆಯ ಆಟಗಳನ್ನು ಆಡಿದೆ. ದೇಶದ ರೈತರು, ಕಾರ್ಮಿಕರು ಮತ್ತು ಬಡ ಜನಸಾಮಾನ್ಯರ ಹಿತಾಸಕ್ತಿಗಳ ಪರವಾಗಿ ಹೋರಾಡುವ ಯಾವುದೇ ಸಂಘಟನೆಯಾಗಲಿ, ಚಳವಳಿಯಾಗಲಿ ಹೆಚ್ಚು ಕಾಲ ಬಾಳಿಕೆ ಬರದಂತೆ ಸಂಘವು ನೋಡಿಕೊಂಡಿದೆ. 140 ಕೋಟಿಗೂ ಹೆಚ್ಚು ಮಾನವರಿರುವ ನಮ್ಮ ಪ್ರಜಾಸತ್ತಾತ್ಮಕ ದೇಶದಲ್ಲಿ ಮಾನವ ಹಕ್ಕುಗಳ, ನಾಗರಿಕ ಅಧಿಕಾರಗಳ ಹಾಗೂ ಬಳಕೆದಾರರ ಪರವಾಗಿ ಮತ್ತು ಭ್ರಷ್ಟಾಚಾರ, ಅನೈತಿಕತೆ ಹಾಗೂ ಆಡಳಿತ ವೈಫಲ್ಯಗಳ ವಿರುದ್ಧ ಸೆಟೆದು ನಿಂತು ಸತತ ಹೋರಾಡುವ ಯಾವುದೇ ಬಲಾಢ್ಯ ಸಂಸ್ಥೆಯಾಗಲಿ, ಸಂಘಟನೆಯಾಗಲಿ, ಹೋರಾಟವಾಗಲಿ ಅಸ್ತಿತ್ವದಲ್ಲಿಲ್ಲ ಎಂಬುದನ್ನು ನೆನಪಿಸಿಕೊಂಡರೆ ಆಘಾತವಾಗುತ್ತದೆ. ಈ ಆಘಾತಕಾರಿ ಸನ್ನಿವೇಶದ ನಿರ್ಮಾಣದಲ್ಲಿ ಸಂಘವು ನಿರ್ಣಾಯಕ ಪಾತ್ರ ವಹಿಸಿದೆ.
ಈ ರೀತಿ ಸಂಘವು ತನ್ನ ಶತಮಾನೋತ್ಸವದ ಸಂಭ್ರಮದಲ್ಲಿರುವಾಗ ದೇಶವು ಸಂಘದಲ್ಲಿ ಗುರುತಿಸಬೇಕಾದ ವ್ಯಕ್ತ ಹಾಗೂ ಗುಪ್ತವಾದ ಸಾಧನೆ ಮತ್ತು ವಿಶೇಷತೆಗಳು ಬಹಳಷ್ಟಿವೆ. ಸಂಘದ ಕೊಡುಗೆಗಳಿಂದಾಗಿ ಸದ್ಯ ತೀವ್ರ ಸಂಕಟದಲ್ಲಿರುವ ನಮ್ಮ ದೇಶವು ಸಂಭ್ರಮಿಸುವ ಸ್ಥಿತಿಗೆ ತಲುಪಬೇಕಿದ್ದರೆ ಪ್ರಸ್ತುತ ಎಲ್ಲ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳಿಂದ ಮುಕ್ತಿ ಪಡೆಯುವ ದಾರಿ ಕಂಡುಕೊಳ್ಳಬೇಕಾದದ್ದು ಅನಿವಾರ್ಯ.







