‘ಅಹಿಂದ’ ಮುಂದಿನ ದಾರಿ...?

ಇದುವರೆಗೆ ‘ಅಹಿಂದ’ ಒಂದು ಸಂಘಟನೆಯಾಗಿ ಉಳಿದಿದೆ ಹೊರತು ಚಳವಳಿಯಾಗಿ ಬೆಳೆಯಲಿಲ್ಲ, ಅದು ಚಳವಳಿಯಾಗಿದ್ದರೆ ದೊಡ್ಡ ಶಕ್ತಿಯಾಗಿರುತ್ತಿತ್ತು. ಸೈದ್ಧಾಂತಿಕವಾಗಿಯೂ ಸ್ಪಷ್ಟತೆ ಇರುತ್ತಿತ್ತು. ಅಲ್ಲದೆ 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ ಸಿದ್ದರಾಮಯ್ಯನವರನ್ನು ಅಹಿಂದ ಬೆಂಬಲಿಸುತ್ತಿತ್ತು. 2018ರ ಪರಿಸ್ಥಿತಿಯೂ ಅಷ್ಟೇ ಆಗಿತ್ತು. ಈಗ ಅಹಿಂದ ಸಮುದಾಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ವೋಟ್‌ಬ್ಯಾಂಕ್.
‘ಹಿಂದುಳಿದ ಜಾತಿಗಳ ಒಕ್ಕೂಟ’ಕ್ಕೀಗ 25 ವರ್ಷ. ಬೆಂಗಳೂರು ಅರಮನೆ ಮೈದಾನದಲ್ಲಿ ರವಿವಾರ ರಜತ ಮಹೋತ್ಸವ ನಡೆಯಿತು. ಈ ಕಾರ್ಯಕ್ರಮಕ್ಕೆ ಯಾರು ಬಂದಿದ್ದರು, ಏನು ಮಾತಾಡಿದರು, ಯಾರು ಬರಲಿಲ್ಲ ಎಂಬ ಕುತೂಹಲ ‘ಅಹಿಂದ’ ಸಮುದಾಯಗಳಿಗಿಂತ ಹೆಚ್ಚು ರಾಜಕೀಯ ವಲಯಕ್ಕಿತ್ತು. ಅದಕ್ಕೆ ಕಾರಣ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ನಾಯಕರ ನಡುವಿನ ‘ಶೀತಲ ಸಮರ’.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಅವರಿಗೆ ಆಪ್ತರಾಗಿದ್ದ ಸಚಿವರಾದ ಸತೀಶ್ ಜಾರಕಿಹೊಳಿ, ಝಮೀರ್ ಅಹ್ಮದ್ ಖಾನ್ ಮತ್ತು ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಬಂದಿರಲಿಲ್ಲ. ಆಹ್ವಾನವೇ ಇಲ್ಲದ ಮೇಲೆ ಬರುವುದು ಹೇಗೆ? ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿತ್ತಾದರೂ ಅಂತರ ಕಾಯ್ದುಕೊಂಡರು. ಅದೊಂದು ಜಾಣ್ಮೆಯ ನಡೆ. ಗುಂಪುಗಾರಿಕೆಯಿಂದ ದೂರ ಉಳಿಯುವ ತಂತ್ರ.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟ ಮೇಲೆ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಅಲ್ಲೊಂದು, ಇಲ್ಲೊಂದು ಕಾರ್ಯಕ್ರಮಗಳಲ್ಲಿ ಕಂಡರೂ, ರಾಜಕೀಯ ಭಾಷಣ ಮಾಡಿರಲಿಲ್ಲ. ಅರಮನೆ ಸಮಾವೇಶದಲ್ಲೂ ಅವರು ರಾಜಕೀಯ ಮಾತಾಡಲಿಲ್ಲ. ಆದರೆ, ‘‘ನಾನು ಮುಖ್ಯ ಮಂತ್ರಿ ಸ್ಥಾನದಿಂದ ಇಳಿದಿದ್ದರೂ ಅಹಿಂದ ಸಮುದಾಯದ ಹಕ್ಕುಗಳಿಗೆ ಹೋರಾಡುತ್ತೇನೆ. ಸಾಮಾಜಿಕ ನ್ಯಾಯಕ್ಕಾಗಿ ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ’’ ಎಂದು ಘೋಷಿಸಿದರು. ಅವರ ಮಾತುಗಳು ಎಲ್ಲರೂ ಭಾವಿಸಿರುವಷ್ಟು ಸರಳವಾಗಿಲ್ಲ. ಅದರೊಳಗೆ ಕೆಲವರಿಗೆ ಪರೋಕ್ಷ ಎಚ್ಚರಿಕೆ ಇದೆ. ಅದು ಸಂಬಂಧಪಟ್ಟವರಿಗೆ ಸುಲಭವಾಗಿ ಅರ್ಥವಾಗಲಿದೆ.
2005ರ ಜುಲೈ 15ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ನಡೆದ ಅಹಿಂದ ಸಮಾವೇಶವನ್ನು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಸೆಡ್ಡು ಹೊಡೆಯಲು ಸಿದ್ದರಾಮಯ್ಯ ಬಳಸಿಕೊಂಡರು. ಆಗ ಅವರ ಜೊತೆ ಸತೀಶ್ ಜಾರಕಿಹೊಳಿ, ಮಹದೇವಪ್ಪ ಒಳಗೊಂಡಂತೆ ಅನೇಕರಿದ್ದರು. ಇದಾದ ಒಂದೇ ವರ್ಷದಲ್ಲಿ ಜೆಡಿಎಸ್‌ನಿಂದ ಉಚ್ಚಾಟನೆಗೊಂಡ ಮೇಲೆ ಕಾಂಗ್ರೆಸ್ ಸೇರಿದರು. ಎಂಟು ವರ್ಷ ಮುಖ್ಯಮಂತ್ರಿ ಆಗಿ, ದೇವರಾಜ ಅರಸು ಅವರ ದಾಖಲೆ ಮುರಿದರು. ಸಿದ್ದರಾಮಯ್ಯ ಈಗ ಕಾಂಗ್ರೆಸ್ ವರಿಷ್ಠರ ಮೇಲೆ ಮುನಿಸಿಕೊಂಡಿದ್ದಾರೆ. ಅದನ್ನು ಬಹಿರಂಗವಾಗಿ ತೋರಿಸಿಕೊಳ್ಳುತ್ತಿಲ್ಲ ಅಷ್ಟೇ.
ಕಾಂಗ್ರೆಸ್ ವರಿಷ್ಠರು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕದಲಿಸಿದ ರೀತಿ ಅವರಿಗೆ ಬೇಸರ ತರಿಸಿದೆ. ಅವರ ರಾಜೀನಾಮೆಗೆ ಎರಡು ತಿಂಗಳ ಮೊದಲು, ‘‘ಮುಖ್ಯಮಂತ್ರಿ ಸ್ಥಾನದಲ್ಲಿ ನೀವೇ ಇರುತ್ತೀರಿ’’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದರಂತೆ. ಎರಡು ತಿಂಗಳಲ್ಲಿ ನಿರ್ಧಾರ ಬದಲಿಸಿ, ರಾಜೀನಾಮೆ ಕೊಡುವಂತೆ ಸೂಚಿಸಿದರಂತೆ. ಈ ಬಗ್ಗೆ ಆಪ್ತರ ಬಳಿ ಸಿದ್ದರಾಮಯ್ಯ ಅಳಲು ತೋಡಿಕೊಂಡಿದ್ದಾರೆ.
ರಾಹುಲ್ ಅವರ ತೀರ್ಮಾನ ದಿಢೀರ್ ಬದಲಾಗಲು ಹೈಕಮಾಂಡ್‌ಗೆ ಸಚಿವ ಜಾರಕಿಹೊಳಿ ತಲುಪಿಸಿದ್ದಾರೆ ಎನ್ನಲಾದ ಪತ್ರ ಪ್ರೇರಣೆ ಎಂದು ಪಕ್ಷದೊಳಗೇ ಚರ್ಚಿಸಲಾಗುತ್ತಿದೆ. ಸಿದ್ದರಾಮಯ್ಯನವರ ನಾಯಕತ್ವ ಬದಲಾವಣೆ ಬೇಡಿಕೆ ಮುಂದಿಟ್ಟುಕೊಂಡು ಶಾಸಕರ ಸಹಿಯನ್ನು ಸತೀಶ್ ಸಂಗ್ರಹಿಸಿದ್ದರು. ಆ ಜವಾಬ್ದಾರಿಯನ್ನು ಡಿ.ಕೆ. ಶಿವಕುಮಾರ್ ಕೊಟ್ಟಿದ್ದರು. ಪ್ರತಿಯಾಗಿ ಸಚಿವ ಸ್ಥಾನದ ಜತೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಭರವಸೆ ನೀಡಿದ್ದರು. ಆಮೇಲೆ ಡಿಕೆಶಿ ಹೇಳಿದಂತೆ ವರಿಷ್ಠರು ಕೇಳಲಿಲ್ಲ. ಜಾರಕಿಹೊಳಿ ಹಾದಿಗೆ ಮಾಜಿ ಮುಖ್ಯಮಂತ್ರಿ ಅಡ್ಡಿಯಾದರು. ಅಧ್ಯಕ್ಷ ಸ್ಥಾನಕ್ಕೆ ಹರಿಪ್ರಸಾದ್ ಅವರನ್ನು ಬೆಂಬಲಿಸಿದರು. ಇದರಿಂದ ಸತೀಶ್ ಮತ್ತು ಸಿದ್ದರಾಮಯ್ಯ ಸಂಬಂಧ ಹಳಸಿದೆ. ಇದು ಜಗಜ್ಜಾಹೀರಾಗಿರುವ ಸತ್ಯ.
ಇನ್ನು, ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂದು ಮಹದೇವಪ್ಪ ಸಿಟ್ಟಾಗಿದ್ದಾರೆ. ‘ಸಿದ್ದರಾಮಯ್ಯ ಮನಸ್ಸು ಮಾಡಿದ್ದರೆ ಮಂತ್ರಿ ಸ್ಥಾನ ಕೊಡಿಸಬಹುದಿತ್ತು. ಅವರು ಮನಸ್ಸು ಮಾಡಲಿಲ್ಲ’ ಎಂಬುದು ಮಾಜಿ ಸಚಿವರ ಆರೋಪ. ಶಿವಕುಮಾರ್ ಸಂಪುಟದ ಎರಡನೇ ಕಂತಿನ ವಿಸ್ತರಣೆ ಬಳಿಕ ಸಿದ್ದರಾಮಯ್ಯ ಅವರನ್ನು ಮಹದೇವಪ್ಪ ಭೇಟಿ ಮಾಡಿಲ್ಲ. ಮಾತನಾಡಿಲ್ಲ. ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿದ್ದರಿಂದ ಸಿದ್ದರಾಮಯ್ಯ ಅಸಮಾಧಾನಗೊಂಡಿದ್ದಾರೆ. ಇದರಿಂದ ಹಿಂದುಳಿದ ಜಾತಿಗಳ ಒಕ್ಕೂಟದ ಸಮಾವೇಶಕ್ಕೆ ಮೂವರನ್ನೂ ಆಹ್ವಾನಿಸಿಲ್ಲ.
‘ಯಾರಿಲ್ಲದಿದ್ದರೂ ಅಹಿಂದ ಸಂಘಟನೆ ನಡೆಯುತ್ತದೆ’ ಎಂಬ ಸಂದೇಶ ರವಾನಿಸಲು ಸಮಾವೇಶ ನಡೆಸಲಾಗಿದೆ. ಮೂವರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ. ಅವರನ್ನು ಕರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಸಂಘಟಕರಿಗೆ ತಾಕೀತು ಮಾಡಿರಬಹುದು. ಅವರ ಜತೆ ಚರ್ಚಿಸಿಯೇ ಸಂಘಟಕರು ಆಹ್ವಾನ ಪತ್ರಿಕೆ ಮುದ್ರಿಸಿರಬಹುದು. ‘ಇದರ ಹಿಂದೆ ಸಿದ್ದರಾಮಯ್ಯನವರ ಪಾತ್ರವಿಲ್ಲ’ ಎಂಬುದನ್ನು ಅನೇಕರು ಒಪ್ಪುವುದಿಲ್ಲ.
ಸಿದ್ದರಾಮಯ್ಯನವರ ಮೇಲೆ ಜಾರಕಿಹೊಳಿ, ಮಹದೇವಪ್ಪ ನಿಷ್ಠೆ ಹೊಂದಿದ್ದವರು. ಕೆಲವು ವಿಚಾರಕ್ಕೆ ಮಧ್ಯೆ ಮಧ್ಯೆ ಮುಖ ತಿರುಗಿಸಿದರೂ ಬಹಳ ಕಾಲ ಜತೆಗಿದ್ದವರು. ಸಿದ್ದರಾಮಯ್ಯನವರೂ ಅಷ್ಟೇ ಅವರ ಮೇಲೆ ವಿಶ್ವಾಸವಿಟ್ಟಿದ್ದರು. ರಾಜೀನಾಮೆ ನೀಡುವ ಕೊನೆ ಕ್ಷಣದವರೆಗೂ ‘ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಹೇಳುತ್ತಿದ್ದ ಸಿದ್ದರಾಮಯ್ಯ, ಹೈಕಮಾಂಡ್ ಬಳಿ ಶಾಸಕರ ಸಹಿಗಳಿದ್ದ ಪತ್ರ ನೋಡುತ್ತಿದ್ದಂತೆ ತೆಪ್ಪಗೆ ರಾಜೀನಾಮೆ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮತ್ತು ಸತೀಶ್ ಅವರ ಸಂಬಂಧ ಎಷ್ಟೊಂದು ಗಾಢವಾಗಿತ್ತೆಂದರೆ, ಒಂದು ಹಂತದಲ್ಲಿ ‘‘ನನ್ನ ತಂದೆ ಬಳಿಕ ಅಹಿಂದ ಸಮುದಾಯದ ಉತ್ತರಾಧಿಕಾರಿ ಜಾರಕಿಹೊಳಿ’’ ಎಂದು ಯತೀಂದ್ರ ಸಿದ್ದರಾಮಯ್ಯ ಘೋಷಿಸಿದ್ದರು. ಈ ಮಾತನ್ನು ಅವರು ತಿಳಿದು ಆಡಿದ್ದರೋ ಅಥವಾ ತಿಳಿಯದೆ ಆಡಿದ್ದರೋ ಬಲ್ಲವರಾರು!
ಅಹಿಂದ ನಾಯಕರು ಪರಸ್ಪರರ ಕಾಲೆಳೆಯುವುದು ಇದೇ ಮೊದಲಲ್ಲ. ಅದಕ್ಕೆ ಸುದೀರ್ಘ ಇತಿಹಾಸವೇ ಇದೆ. ದೇವರಾಜ ಅರಸು ಅವರಿಗೆ ದ್ರೋಹ ಮಾಡಿದ್ದೂ ಅಹಿಂದ ನಾಯಕರೇ. ಇಂದಿರಾ ಗಾಂಧಿ ಮತ್ತು ಅರಸು ಅವರ ನಡುವೆ ಮನಸ್ತಾಪ ಆರಂಭವಾದಾಗ ಅರಸು ಅವರ ವಿರುದ್ಧ, ಇಂದಿರಾ ಅವರ ಪರ ಮೊದಲು ಕೆಲಸ ಮಾಡಿದವರು ಆರ್. ಗುಂಡೂರಾವ್ ಮತ್ತು ಜಾಫರ್ ಶರೀಫ್. ಮುಖ್ಯಮಂತ್ರಿ ಸ್ಥಾನದ ಜತೆ ಪ್ರದೇಶ ಇಂದಿರಾ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಅರಸು ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಬಂಗಾರಪ್ಪ ಅವರನ್ನು ನೇಮಿಸಲಾಯಿತು. ಅದುವರೆಗೆ ಅರಸು ಅವರಿಗೆ ನಿಷ್ಠೆ ತೋರಿದ್ದ ಬಂಗಾರಪ್ಪ ರಾತ್ರೋರಾತ್ರಿ ಕೈಕೊಟ್ಟು ಹೋದರು. ಕೆಲವೇ ದಿನಗಳಲ್ಲಿ ಹಿಂದುಳಿದ ವರ್ಗಗಳ ಅನೇಕ ನಾಯಕರು ಒಬ್ಬೊಬ್ಬರಾಗಿ ಬಂಗಾರಪ್ಪ ಅವರನ್ನು ಹಿಂಬಾಲಿಸಿದರು. ಕೊನೆಗೆ ಅರಸು ಅವರ ಜತೆ ಉಳಿದವರು 40 ಶಾಸಕರು ಮಾತ್ರ. 1980ರ ಜನವರಿಯಲ್ಲಿ ಅರಸು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಅರಸರ ರಾಜೀನಾಮೆ ಮತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟ ಸಂದರ್ಭಗಳು ಬೇರೆ ಬೇರೆ. ಅವೆರಡನ್ನು ಹೋಲಿಕೆ ಮಾಡಲಾಗದು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರ ಹಿಡಿದಾಗ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ, ಶಿವಕುಮಾರ್ ಪೈಪೋಟಿಗಿಳಿದರು. ಆಗ ಎರಡೂವರೆ ವರ್ಷ, ಎರಡೂವರೆ ವರ್ಷ ಒಪ್ಪಂದವಾಗಿತ್ತು ಎಂದು ಹೇಳಲಾಗಿದೆ. ಹಾಗಾಗಿದ್ದಲ್ಲಿ, ಮೊದಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರೆ ಅವರಿಗಿರುವ ಗೌರವ ಇಮ್ಮಡಿಯಾಗುತಿತ್ತು. ರಾಹುಲ್ ಹೇಳಿದ ತಕ್ಷಣ ಮರು ಮಾತಾಡದೆ ಕುರ್ಚಿ ಬಿಟ್ಟು ಅವರು ಘನತೆಯಿಂದ ನಡೆದುಕೊಂಡಿದ್ದಾರೆ.
ಇಲ್ಲಿ ಸಮಾನ ಅಂಶಗಳಿರುವುದು ಹಿಂದುಳಿದ ಸಮುದಾಯಗಳ ನಾಯಕರ ನಡೆಯಲ್ಲಿ. ಸಿದ್ದರಾಮಯ್ಯನವರ ವಿಷಯದಲ್ಲೂ ಸಹಿ ಸಂಗ್ರಹಕ್ಕೆ ಮುಂದಾದವರೂ ಈ ನಾಯಕರು. ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ಸಮುದಾಯಗಳ ಹೆಸರಲ್ಲಿ ರಾಜಕಾರಣ ಮಾಡುವ ನಾಯಕರಿಗೆ ಆ ಸಮುದಾಯಗಳ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಇದ್ದಿದ್ದರೆ ಅವರನ್ನು ‘ವೋಟ್ ಬ್ಯಾಂಕ್’ಗಳಾಗಿ ಮಾತ್ರ ನೋಡುತ್ತಿರಲಿಲ್ಲ.
ಇದುವರೆಗೆ ‘ಅಹಿಂದ’ ಒಂದು ಸಂಘಟನೆಯಾಗಿ ಉಳಿದಿದೆ ಹೊರತು ಚಳವಳಿಯಾಗಿ ಬೆಳೆಯಲಿಲ್ಲ, ಅದು ಚಳವಳಿಯಾಗಿದ್ದರೆ ದೊಡ್ಡ ಶಕ್ತಿಯಾಗಿರುತ್ತಿತ್ತು. ಸೈದ್ಧಾಂತಿಕವಾಗಿಯೂ ಸ್ಪಷ್ಟತೆ ಇರುತ್ತಿತ್ತು. ಅಲ್ಲದೆ 2008ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ ಹೆಚ್ಚು ಸ್ಥಾನ ಸಿಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷ ಸೇರಿದ ಸಿದ್ದರಾಮಯ್ಯನವರನ್ನು ಅಹಿಂದ ಬೆಂಬಲಿಸುತ್ತಿತ್ತು. 2018ರ ಪರಿಸ್ಥಿತಿಯೂ ಅಷ್ಟೇ ಆಗಿತ್ತು. ಈಗ ಅಹಿಂದ ಸಮುದಾಯ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ವೋಟ್‌ಬ್ಯಾಂಕ್. 80ರ ದಶಕದಲ್ಲಿ ಸಂಘಟಿತವಾದ ದಲಿತ ಸಮುದಾಯ ಚಳವಳಿಯಾಗಿ ರೂಪುಗೊಂಡಿತು. ರೈತ ಚಳವಳಿ ಕೂಡಾ. ಆನಂತರ ಇವೆರಡೂ ಚಳವಳಿಗಳು ಹಲವು ಹೋಳಾಗಿದ್ದು ವಿಪರ್ಯಾಸ.
ಸಿದ್ದರಾಮಯ್ಯ ಮೊನ್ನೆ ತಮ್ಮ ಭಾಷಣದಲ್ಲಿ ಜಾತಿ ಸಮೀಕ್ಷೆ ವರದಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಡೇ ಗಳಿಗೆಯಲ್ಲಿ ವರದಿ ಸ್ವೀಕರಿಸಿದ್ದಾರೆ. ಮೊದಲೇ ಅದನ್ನು ತರಿಸಿಕೊಂಡು ಜಾರಿ ಮಾಡಿದ್ದರೆ ಹೀರೊ ಆಗುತ್ತಿದ್ದರು. ದೇವರಾಜ ಅರಸು ಅವರು ಹಾವನೂರ ಆಯೋಗದ ವರದಿ ಅಂಗೀಕರಿಸಿ, ಜಾರಿಗೊಳಿಸಿದ ಸಮಯದಲ್ಲೂ ಒತ್ತಡವಿತ್ತು. ಅದನ್ನು ಲೆಕ್ಕಿಸದೆ ತೀರ್ಮಾನಿಸಿದರು. ಸಿದ್ದರಾಮಯ್ಯ ಮತ್ತೆ ಅಹಿಂದ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವ ಮಾತನಾಡಿದ್ದಾರೆ. ಅಹಿಂದದ ಮುಂದಿನ ದಾರಿ ಅಸ್ಪಷ್ಟ. ಅದು ಚಳವಳಿಯಾಗಿ ರೂಪುಗೊಳ್ಳುವುದೇ ನೋಡಬೇಕು.
(ಅಂಕಣಕಾರರು ಹಿರಿಯ ಪತ್ರಕರ್ತರು)






