ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರಿಗೆ ಲೀಗಲ್ ನೋಟಿಸ್

ಬೆಂಗಳೂರು : ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನಿಯೋಜನೆ ಮೇರೆಗೆ ಇಲಾಖೆಯಲ್ಲಿ ಮುಂದುವರಿಸುವ ಮೂಲಕ ಹೈಕೋರ್ಟ್ ಮತ್ತು ರಾಜ್ಯ ಸರಕಾರದ ಆದೇಶವನ್ನು ಉಲ್ಲಂಘಿಸುತ್ತಿರುವ ಆರೋಪದ ಮೇರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಿಗೆ ಹೈಕೋರ್ಟ್ ಹಿರಿಯ ವಕೀಲ ಎಸ್.ಎ.ಎಚ್.ರಝ್ವಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ: 2011ರ ಜು.22ರಂದು ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠವು ರಿಟ್ ಅರ್ಜಿ ಸಂಖ್ಯೆ 27252/2011 (S-KAT) ರಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇತರ ಇಲಾಖೆಗಳಲ್ಲಿ ನಿಯೋಜನೆ (Deputation) ಮೇಲೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಮತ್ತು ಪ್ರಾಂಶುಪಾಲರನ್ನು ತಕ್ಷಣವೇ ಅವರ ಮೂಲ ಹುದ್ದೆಗೆ ವಾಪಸ್ ಕಳುಹಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು. ಈ ತೀರ್ಪಿನ ಅನ್ವಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯು ಪ್ರಸಕ್ತ ಸಾಲಿನ ಜು.7ರಂದು ಸರಕಾರಿ ಆದೇಶ ಸಂಖ್ಯೆ: MWD 539 ರ ಮೂಲಕ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ, ಅವರ ಮೂಲ ಹುದ್ದೆಗಳಿಗೆ ವರ್ಗಾಯಿಸುವಂತೆ ಆದೇಶಿಸಿದ್ದರು. ಆದರೆ, ಒಂದು ತಿಂಗಳು ಕಳೆದರೂ ಸಂಬಂಧಪಟ್ಟ ಸಿಬ್ಬಂದಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ನೋಟಿಸ್‌ನಲ್ಲಿ ಏನಿದೆ?: ನ್ಯಾಯಾಲಯ ಮತ್ತು ಸರಕಾರದ ಸ್ಪಷ್ಟ ಆದೇಶಗಳಿದ್ದರೂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಇನ್ನು ಕೂಡ ಬಿಡುಗಡೆ ಮಾಡದೆ ಇಲಾಖೆಯಲ್ಲೆ ಮುಂದುವರಿಸಲಾಗಿದೆ. ಇದು ಕೇವಲ ಆಡಳಿತಾತ್ಮಕ ವಿಳಂಬವಲ್ಲ, ಬದಲಿಗೆ ಹೈಕೋರ್ಟ್ ಆದೇಶದ ಉದ್ದೇಶಪೂರ್ವಕ ಉಲ್ಲಂಘನೆಯಾಗಿದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಇದು 1971ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 2(b) ಅಡಿಯಲ್ಲಿ ಸಿವಿಲ್ ನ್ಯಾಯಾಂಗ ನಿಂದನೆ (Civil Contempt) ಅಪರಾಧವಾಗುತ್ತದೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದು, ಇಲಾಖೆಯಲ್ಲಿರುವ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ತಕ್ಷಣವೇ ಬಿಡುಗಡೆ ಮಾಡಿ ಮೂಲ ಹುದ್ದೆಗೆ ವಾಪಸ್ ಕಳುಹಿಸುವಂತೆ ಆಗ್ರಹಿಸಲಾಗಿದೆ.
ಅಲ್ಲದೆ, ಬಿಡುಗಡೆ ಮಾಡಲಾದ ಸಿಬ್ಬಂದಿಯ ಸಂಪೂರ್ಣ ಪಟ್ಟಿಯನ್ನು ದಿನಾಂಕ ಸಹಿತ ಒದಗಿಸಬೇಕು. ಒಂದು ವೇಳೆ ಈ ಗಡುವಿನೊಳಗೆ ಹೈಕೋರ್ಟ್‌ನ ಆದೇಶ ಪಾಲನೆಯಾಗದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ನೇರವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ (Contempt Proceedings) ಆರಂಭಿಸಲಾಗುವುದು ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.






