ಈ ಬಾರಿಯಾದರೂ ರಾಜ್ಯಸಭೆ, ಮೇಲ್ಮನೆ ಪ್ರವೇಶಕ್ಕೆ ಅವಕಾಶ ಕೊಡಿ

Photo Credit : PTI
ಬೆಂಗಳೂರು, ಮೇ 25: ಕರ್ನಾಟಕದಿಂದ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸಹಿತ ನಾಲ್ವರು ಸದಸ್ಯರ ಅಧಿಕಾರಾವಧಿ ಮುಕ್ತಾಯ ಹಂತಕ್ಕೆ ಬಂದಿದೆ. ಇದರ ಬೆನ್ನಲ್ಲೇ ವಿಧಾನ ಪರಿಷತ್ನ ಹಲವು ಸ್ಥಾನಗಳು ತೆರವಾಗಲಿವೆ. ಆದರೆ, ಈ ಬಾರಿಯಾದರೂ 172 ಅತಿ ಸಣ್ಣ ಹಿಂದುಳಿದ ಸಮುದಾಯಗಳಿಗೆ ರಾಜ್ಯಸಭೆ, ಪರಿಷತ್ ಪ್ರವೇಶ ಸಿಗಬೇಕೆಂಬ ಕೂಗು ಎದ್ದಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಸಭೆ, ಪರಿಷತ್ನಂತಹ ಮೇಲ್ಮನೆಗಳನ್ನು ಸೃಷ್ಟಿಸಿರುವುದೇ ಒಂದು ವಿಶೇಷ ಉದ್ದೇಶಕ್ಕಾಗಿ. ನೇರವಾಗಿ ಚುನಾವಣೆಯಲ್ಲಿ ಕೋಟ್ಯಂತರ ರೂ., ತೋಳ್ಬಲ ಮತ್ತು ಸಂಖ್ಯಾಬಲದ ಮೂಲಕ ಪ್ರಬಲ ಜಾತಿಗಳ ಅಭ್ಯರ್ಥಿಗಳ ವಿರುದ್ಧ ಹೋರಾಡಿ ಗೆಲ್ಲಲು ಸಾಧ್ಯವಾಗದಂತಹ ಅತಿ ಸಣ್ಣ ಹಿಂದುಳಿದ ಸಮುದಾಯಗಳಿಗೆ, ಬುದ್ಧಿಜೀವಿಗಳಿಗೆ ಮತ್ತು ತಜ್ಞರಿಗೆ ನೀತಿ -ನಿರೂಪಣೆಯಲ್ಲಿ ಅವಕಾಶ ಕಲ್ಪಿಸುವುದು ಇದರ ಮೂಲ ಆಶಯವಾಗಿದೆ. ಆದರೆ, ಇಂದಿನ ರಾಜಕೀಯ ಪಕ್ಷಗಳು ಈ ಮೇಲ್ಮನೆಗಳನ್ನು ಚುನಾವಣೆಯಲ್ಲಿ ಸೋತ ಪ್ರಬಲ ಜಾತಿಯ ನಾಯಕರ ‘ಪುನರ್ವಸತಿ ಕೇಂದ್ರ’ಗಳನ್ನಾಗಿ ಮಾರ್ಪಡಿಸಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.
ಅದರಲ್ಲೂ, ರಾಜ್ಯದಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿವಿಧ ಸಮುದಾಯದವರು ರಾಜಕೀಯವಾಗಿ ಮುಂಚೂಣಿಯಲ್ಲಿವೆ. ವಿಧಾನಸಭೆ ಮತ್ತು ಲೋಕಸಭೆಯ ಶೇ.85ಕ್ಕೂ ಹೆಚ್ಚು ಸ್ಥಾನಗಳಲ್ಲಿ ಈ ಪ್ರಬಲ ಸಮುದಾಯಗಳ ಪಾಲಾಗಿವೆ. ಆದರೆ, ರಾಜ್ಯದಲ್ಲಿ ಪ್ರವರ್ಗ-1, ಪ್ರವರ್ಗ-2ಎ ಅಡಿಯಲ್ಲಿ ಬರುವ ಸವಿತಾ ಸಮಾಜ (ಕ್ಷೌರಿಕರು), ಅಗಸರು(ಮಡಿವಾಳ), ಕುಂಬಾರ, ವಿಶ್ವಕರ್ಮ, ಉಪ್ಪಾರ, ತಿಗಳ, ಗೊಲ್ಲ, ದೇವಾಡಿಗ, ನೇಕಾರ, ದರ್ಜಿ, ಮೇದಾರ, ಅಲೆಮಾರಿ, ಆದಿವಾಸಿ ಸೇರಿ ಅಂದಾಜು 172ಕ್ಕೂ ಹೆಚ್ಚು ಅತಿ ಸಣ್ಣ ಹಿಂದುಳಿದ ಜಾತಿಗಳಿವೆ. ಈ ಎಲ್ಲ 172 ಜಾತಿಗಳ ಒಟ್ಟು ಜನಸಂಖ್ಯೆ ಸೇರಿಸಿದರೆ ರಾಜ್ಯದಲ್ಲಿ ಅಂದಾಜು ಶೇ.20ರಿಂದ 25ರಷ್ಟಾಗುತ್ತದೆ. ಆದರೆ, ಶಾಸನಸಭೆಗಳಲ್ಲಿ ಇವರ ಪ್ರಾತಿನಿಧ್ಯ ಮಾತ್ರ ಶೂನ್ಯವಾಗಿದೆ. ಚುನಾವಣೆಗೆ ನಿಂತು ಗೆಲ್ಲುವ ಆರ್ಥಿಕ ಬಲವಿಲ್ಲದ, ಜನಸಂಖ್ಯೆ ಚದುರಿಹೋಗಿರುವ ಈ 172 ಹಿಂದುಳಿದ ವರ್ಗಗಳ ಜಾತಿಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಹಾಗಾಗಿ, ಮುಂಬರುವ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗಳಲ್ಲಾದರೂ ಪ್ರಬಲ ಜಾತಿಗಳ ನಾಯಕರನ್ನು ಬದಿಗಿಟ್ಟು, ತಳಮಟ್ಟದ ಸಮುದಾಯಗಳಿಗೆ ಮಣೆ ಹಾಕುವ ಧೈರ್ಯವನ್ನು ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳು ಮಾಡಬೇಕಿದೆ ಎನ್ನುವ ಒತ್ತಾಯ ಕೇಳಿಬಂದಿದೆ.
ಸಮಾಜದ ಸ್ವಾಸ್ಥ್ಯವನ್ನು ಕಾಯುವ ಬಹುಪಾಲು ಜವಾಬ್ದಾರಿಯನ್ನು ಈ ಅತಿ ಸಣ್ಣ ಸಮುದಾಯಗಳೇ ಹೊತ್ತಿವೆ. ಉದಾಹರಣೆಗೆ, ಸವಿತಾ ಸಮಾಜದಂತಹ ಶ್ರಮಿಕ ವರ್ಗಗಳು ಒದಗಿಸುವ ದೈನಂದಿನ ಸೇವೆಗಳಿಲ್ಲದೆ ಸಮಾಜದ ಸುಗಮ ಚಲನೆ ಸಾಧ್ಯವೇ ಇಲ್ಲ. ಆದರೆ, ಸಮಾಜಕ್ಕೆ ಇಷ್ಟೊಂದು ಅಗತ್ಯವಾದ ಕಾಯಕಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇಂತಹ ಸಮುದಾಯಗಳನ್ನು ರಾಜಕೀಯವಾಗಿ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನೀತಿ ನಿರೂಪಣೆಯಲ್ಲಿ ಇವರಿಗೆ ಕನಿಷ್ಠ ಪ್ರಾತಿನಿಧ್ಯವೂ ದೊರೆಯದಿರುವುದು ತೀವ್ರ ಶೋಚನೀಯ ಸಂಗತಿ. ಹಾಗಾಗಿ, ಈ ಬಾರಿಯಾದರೂ ರಾಜ್ಯಸಭೆ ಮತ್ತು ವಿಧಾನಪರಿಷತ್ಗೆ ನಮ್ಮ ಸಮುದಾಯದವರನ್ನು ಪರಿಗಣಿಸುವಂತೆ ಸವಿತಾ ಸಮಾಜದ ಮುಖಂಡರು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಅಶೋಕ ಗಸ್ತಿ ಎಂಬ ಭರವಸೆ ಮತ್ತು ನಿರಾಸೆ
ಕಳೆದ ಬಾರಿ ಭಾರತೀಯ ಜನತಾ ಪಾರ್ಟಿಯು (ಬಿಜೆಪಿ) ಅಚ್ಚರಿಯ ಬೆಳವಣಿಗೆಯಲ್ಲಿ ತಳಮಟ್ಟದ ಕಾರ್ಯಕರ್ತ, ಸವಿತಾ ಸಮಾಜದ ಹಿನ್ನೆಲೆಯಿಂದ ಬಂದಿದ್ದ ಅಶೋಕ ಗಸ್ತಿ ಅವರಿಗೆ ರಾಜ್ಯಸಭಾ ಸ್ಥಾನ ನೀಡಿ ಐತಿಹಾಸಿಕ ಸಾಮಾಜಿಕ ನ್ಯಾಯ ಮೆರೆದಿತ್ತು. ಆದರೆ, ಕೋವಿಡ್ನಿಂದಾಗಿ ಅವರು ಅಕಾಲಿಕ ಮರಣ ಹೊಂದಿದ್ದು, ಆ ಸಮುದಾಯದ ದುರದೃಷ್ಟ. ಅಶೋಕ ಗಸ್ತಿಯವರ ನಿಧನದ ನಂತರ ತೆರವಾದ ಆ ಸ್ಥಾನವನ್ನು ಮತ್ತೆ ಸವಿತಾ ಸಮಾಜಕ್ಕಾಗಲಿ, ಅಥವಾ ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಇತರ 172 ಜಾತಿಗಳಿಗಾಗಲಿ ನೀಡುವ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳಲ್ಲೂ ಕನಿಷ್ಠ ಚರ್ಚೆ ಆಗಲಿಲ್ಲ. ಆ ಸ್ಥಾನವೂ ಮತ್ತೆ ಪ್ರಬಲ ಸಮುದಾಯದ ಪಾಲಾಯಿತು ಎಂದು ಅತಿ ಸಣ್ಣ ಸಮುದಾಯದ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಖರ್ಗೆ(ಕಾಂಗ್ರೆಸ್), ಎಚ್.ಡಿ.ದೇವೇಗೌಡ (ಜೆಡಿಎಸ್), ಈರಣ್ಣ ಕಡಾಡಿ (ಬಿಜೆಪಿ) ಹಾಗೂ ನಾರಾಯಣ ಭಾಂಡಗೆ (ಬಿಜೆಪಿ) ಅವರ 6 ವರ್ಷಗಳ ಅಧಿಕಾರಾವಧಿ 2026ರ ಜೂನ್ ಅಥವಾ ಜುಲೈ ವೇಳೆಗೆ ಮುಕ್ತಾಯವಾಗಲಿದೆ. ಜತೆಗೆ, ವಿಧಾನ ಪರಿಷತ್ನ ಒಟ್ಟು 75 ಸ್ಥಾನಗಳ ಪೈಕಿ ವಿಧಾನಸಭಾ ಕೋಟಾ, ನಾಮನಿರ್ದೇಶನದಿಂದ ಭರ್ತಿಯಾಗಬೇಕಿರುವ ಹಲವು ಸ್ಥಾನಗಳು ತೆರವಾಗಲಿವೆ.






