ಸಂವಿಧಾನ ರಚಿಸಿದ್ದು ಅಂಬೇಡ್ಕರ್ ಅಲ್ಲವೇ? : ಮನುವಾದಿಗಳ ವಿಕೃತ ವಾದಗಳು-ಚಾರಿತ್ರಿಕ ಸತ್ಯಗಳು

ಅಂಬೇಡ್ಕರ್ ರಚಿಸಿದ ಸಂವಿಧಾನವು
ಅಂಬೇಡ್ಕರ್ ಬಯಸಿದ ಸಂವಿಧಾನವೇ?
ಇತಿಹಾಸದಲ್ಲಿ ದಾಖಲಾದ ಸತ್ಯ ದಾಖಲಾಗಿದ್ದರೂ ಮನುವಾದಿಗಳು ಮಾತ್ರ ಮತ್ತೊಮ್ಮೆ ಅಂಬೇಡ್ಕರ್ ಅವರು ಸಂವಿಧಾನದ ಕರಡನ್ನು ಬರೆಯಲಿಲ್ಲವೆಂದೂ ಅಥವಾ ಅಂಬೇಡ್ಕರ್ ಒಬ್ಬರೇ ಬರೆಯಲಿಲ್ಲವೆಂದೂ ಅರಚಾಡುತ್ತಿವೆ. ಇದೇ ಅನಾಗರಿಕ ಶಕ್ತಿಗಳೇ ಆಗಲೂ ಭಾರತ ಸಂವಿಧಾನವು ಮನುಸ್ಮತಿಯೇ ಹೊರತು ಅಂಬೇಡ್ಕರ್ ಬರೆದ ಸಂವಿಧಾನವಲ್ಲವೆಂದು ಹುಯಿಲೆಬ್ಬಿಸುತ್ತಿವೆ.
ಹಾಗೆ ನೋಡಿದರೆ ಈ ಆಕ್ಷೇಪದಲ್ಲಿಯೇ ಒಂದು ಕುತರ್ಕವಿದೆ. ಯಾವುದೇ ಪ್ರಜಾತಾಂತ್ರಿಕ ದೇಶದಲ್ಲಿ ಸಂವಿಧಾನದ ಬರಹದ ಹೊಣೆಯನ್ನು ಯಾವುದೇ ಒಬ್ಬ ವ್ಯಕ್ತಿಯ ಹೆಗಲಿಗೇರಿಸುವುದಿಲ್ಲವೆಂಬುದು ಸಾಮಾನ್ಯ ಜ್ಞಾನ. ಒಂದು ಪ್ರಜಾತಂತ್ರದಲ್ಲಿ ಆಯಾ ದೇಶದ ಎಲ್ಲಾ ಸಾಮಾಜಿಕ ಶಕ್ತಿಗಳ ಪ್ರಾತಿನಿಧಿಕ ಸಭೆಯು ಚರ್ಚಿಸಿ ತಮ್ಮ ದೇಶದ ಭವಿಷ್ಯವನ್ನು ಬರೆದುಕೊಳ್ಳುತ್ತವೆ. ಆದ್ದರಿಂದಲೇ ಯಾವ ದೇಶದಲ್ಲಿ ದಮನಿತ ಶಕ್ತಿಗಳ ರಾಜಕೀಯ ಶಕ್ತಿ ಪ್ರಬಲವಾಗಿರುತ್ತದೋ ಅಂಥಾ ದೇಶದ ಪ್ರಜಾತಂತ್ರ ಹೆಚ್ಚು ಜನಪರವಾಗಿರುತ್ತದೆ. ಯಾವ ದೇಶದಲ್ಲಿ ದಮನಿತರ ರಾಜಕೀಯ ಬಲಹೀನವಾಗಿರುತ್ತದೋ ಆ ದೇಶಗಳಲ್ಲಿ ಪ್ರಜಾತಂತ್ರವು ಹೆಸರಿಗಿದ್ದರೂ, ಸಾರದಲ್ಲಿ ಪ್ರಬಲರ ಪ್ರಜಾತಂತ್ರವಾಗಿರುತ್ತದೆ.
ಹೀಗಾಗಿ ಒಂದು ವೇಳೆ ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆಯಬಹುದಾಗಿದ್ದರೆ ಸಂವಿಧಾನ ಸಭೆಯ ಅಗತ್ಯವೇ ಇರುತ್ತಿರಲಿಲ್ಲ. ಹಾಗೂ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಸಕಲ ಸ್ವಾತಂತ್ರ್ಯವೂ ಇದ್ದಿದ್ದರೆ, ಅಂಬೇಡ್ಕರ್ ಅವರ ಮೂಲ ಆಶಯಗಳಾದ ಪ್ರಭುತ್ವ ಸಮಾಜವಾದ ಮತ್ತು ಬುದ್ಧ ಭಾರತದ ಎಲ್ಲಾ ಅಂಶಗಳೂ ಮೂಲಭೂತ ಹಕ್ಕುಗಳಾಗಿ ಸಂವಿಧಾನಕ್ಕೆ ಸೇರ್ಪಡೆಯಾಗಿ ಬಿಡುತ್ತಿದ್ದವು. ಆದರೆ ಅಂಥ ಒಂದು ಪರಿಪೂರ್ಣ ಅಂಬೇಡ್ಕರ್ ಸಂವಿಧಾನ ಜಾರಿಯಾಗಲು ಬೇಕಾಗಿದ್ದ ಸಾಮಾಜಿಕ ಕ್ರಾಂತಿ ನಮ್ಮ ದೇಶದಲ್ಲಿ ಸಂಭವಿಸಿರಲಿಲ್ಲ.
ಹೀಗಾಗಿ ಸಂವಿಧಾನದಲ್ಲಿ ಆ ಸಂದರ್ಭ ಸಾಧ್ಯಗೊಳಿಸಿದಷ್ಟು ಅಂಬೇಡ್ಕರ್ ಮಾತ್ರ ಇದ್ದಾರೆ. ನೈಜ ಕ್ರಾಂತಿಕಾರಿ ಅಂಬೇಡ್ಕರ್ ಇನ್ನೂ ಸಂವಿಧಾನದ ಹೊರಗೇ ಉಳಿಸಲ್ಪಟ್ಟಿದ್ದಾರೆ. ಅಂಬೇಡ್ಕರ್ ಅವರ ಕ್ರಾಂತಿಕಾರಿ ಸಾಮಾಜಿಕ ಮತ್ತು ಆರ್ಥಿಕ ಕಣ್ಣೋಟಗಳನ್ನು ಒಳಗೊಳ್ಳದ ಕಾರಣಕ್ಕಾಗಿಯೇ ಇಂದು ಹಿಂದುತ್ವದ ಬ್ರಾಹ್ಮಣವಾದ ಹಾಗೂ ನರಭಕ್ಷಕ ಕಾರ್ಪೊರೇಟ್ ಬಂಡವಾಳವಾದ ಇರುವ ಸಂವಿಧಾನವನ್ನೂ ನಾಶಗೊಳಿಸುತ್ತಿವೆ.
ಅದೇನೇ ಇರಲಿ. ಭಾರತದ ಸಂವಿಧಾನ ಭಾರತದ ನಾಗರಿಕತೆಯ ಮಹಾನಡೆಯಲ್ಲಿ ಒಂದು ದೊಡ್ಡ ದಾಪುಗಾಲು ಎಂಬುದು ನಿಸ್ಸಂಶಯ. ಏಕೆಂದರೆ ಜಾತಿ, ಲಿಂಗ ಮತ್ತು ವರ್ಗ ಶ್ರೇಣೀಕರಣವನ್ನೇ ಉಸಿರಾಡುತ್ತಿದ್ದ ಭಾರತೀಯ ಸಮಾಜ ಮೊತ್ತ ಮೊದಲ ಬಾರಿಗೆ ಈ ದೇಶದಲ್ಲಿ ಹುಟ್ಟಿದ ಮನುಷ್ಯರೆಲ್ಲರೂ ಸಮಾನರು ಎಂದು ಮಾತಿಗಾದರೂ ಒಪ್ಪಿಕೊಂಡಿತು. ದಮನಿತ ಜನರಿಗೆ ಕರ್ತವ್ಯವನ್ನು ಮಾತ್ರ ಬೋಧಿಸುತ್ತಿದ್ದ ಮನುಸ್ಮತಿಯೇ ಕಾನೂನು ಮತ್ತು ಧರ್ಮವಾಗಿದ್ದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ದಮನಿತ ಜನರು ಶಾಸನಾತ್ಮಕ ಹಕ್ಕುಗಳನ್ನು ಪಡೆದರು. ಮೀಸಲಾತಿ ಹಾಗೂ ಇನ್ನಿತರ ಸಾಂವಿಧಾನಿಕ ಹಕ್ಕುಗಳಿಂದಾಗಿಯೇ ಎಪ್ಪತ್ತು ವರ್ಷಗಳಲ್ಲಿ ದಲಿತ-ಹಿಂದುಳಿದ ಸಮುದಾಯಗಳ ಶೇ.10-20ರಷ್ಟು ಜನರಾದರೂ ಇತಿಹಾಸದಲ್ಲೇ ಪ್ರಥಮವಾಗಿ ಆರ್ಥಿಕ ಮೇಲ್ಚಲನೆಯನ್ನೂ ಮತ್ತು ಆ ಮೂಲಕ ರಾಜಕೀಯ ಶಕ್ತಿಯನ್ನೂ ಪಡೆಯುವಂತಾಯಿತು. ಇವೆಲ್ಲವೂ ಸಾಧ್ಯವಾದದ್ದು ಸ್ವಾತಂತ್ರ್ಯ ಹೋರಾಟದ ಧಾರೆಯಲ್ಲೇ ಇದ್ದ ದಲಿತ-ದಮನಿತ ಜನತೆಯ ಹೋರಾಟಗಳಿಂದ. ವಿಶೇಷವಾಗಿ ಅಂಬೇಡ್ಕರ್ ಮತ್ತು ಇನ್ನೂ ಕೆಲವು ದಮನಿತ ನಾಯಕರು ಗುದ್ದಾಡಿ ಒಪ್ಪಿಸಿದ ಮತ್ತು ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ.
ಆದರೆ ಅವೆಲ್ಲಕ್ಕೂ ದೊಡ್ಡ ಮಿತಿಗಳಿದ್ದದ್ದು ಕಳೆದ 75 ವರ್ಷದಲ್ಲಿ ನಮ್ಮೆಲ್ಲರ ಅನುಭವಕ್ಕೆ ಬಂದಿರುವ ಸಂಗತಿಯೇ ಆಗಿದೆ.
ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನಷ್ಟೇ ಘೋಷಿಸಿದ ಸಂವಿಧಾನ ಅಂಬೇಡ್ಕರ್ ಆಗ್ರಹಿಸಿದ್ದ ಸಾಮಾಜಿಕ ಆರ್ಥಿಕ ಸಮಾನತೆಯನ್ನು ಖಾತರಿ ಮಾಡಲಿಲ್ಲ. ಆರ್ಥಿಕ ಸಾಮಾಜಿಕ ಸಮಾನತೆಯನ್ನು ಮೂಲಭೂತ ಹಕ್ಕನ್ನಾಗಿಸಲಿಲ್ಲ. ಅಂಬೇಡ್ಕರ್ ಜೀವನ ಪೂರ್ತಿ ಜಾತಿ ನಿರ್ಮೂಲನೆಗೆ ಹೋರಾಡಿದರೂ ಸಂವಿಧಾನ ರದ್ದು ಮಾಡಿದ್ದು ಅಸ್ಪಶ್ಯತೆಯನ್ನೇ ವಿನಾ ಜಾತಿ ವ್ಯವಸ್ಥೆಯನ್ನಲ್ಲ. ಧಾರ್ಮಿಕ ನಿಷ್ಪಕ್ಷತೆಯನ್ನು ಘೋಷಿಸಿದರೂ ಭಾರತದ ಪ್ರಭುತ್ವವು ಇರುವ ಸಂವಿಧಾನದ ಮೂಲಕವಾಗಿಯೇ ಒಂದು ಅಘೋಷಿತ ಹಿಂದುತ್ವವಾದಿ ಪ್ರಭುತ್ವವಾಗುವುದನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಲಿಂಗಾಧಾರಿತ ತಾರತಮ್ಯವನ್ನು ನಿಷೇಧಿಸಿದರೂ ಮಹಿಳೆಯ ಶ್ರಮವನ್ನು ಸಂವಿಧಾನ ಗುರುತಿಸಲೇ ಇಲ್ಲ. ಸಂವಿಧಾನ ಮಾನ್ಯೀಕರಿಸಿದ ಆರ್ಥಿಕ ವ್ಯವಸ್ಥೆ ದಮನಿತ ಸಮುದಾಯಗಳ ಒಂದು ವರ್ಗಕ್ಕೆ ಚಲನೆ ತಂದಿತ್ತಾದರೂ ಸಮುದಾಯದ ಬಹುಸಂಖ್ಯಾತರನ್ನು ಇನ್ನಷ್ಟು ನಿತ್ರಾಣಗೊಳಿಸಿತು. ಹೀಗಾಗಿ ಇಂದಿನ ವಿಕೃತಿಯ ಬೀಜಗಳು ಸಹ ಸಂವಿಧಾನ ರಚನಾ ಸಭೆಯಲ್ಲೇ ಇತ್ತು ಎಂಬುದನ್ನು ಈ ಸಂದರ್ಭದಲ್ಲಿ ಮರೆಯಲಾಗದು.
ಸಾಮಾಜಿಕ ಪ್ರಜಾತಂತ್ರಕ್ಕೆ ಸಂವಿಧಾನ ರಚನಾ ಸಭೆ
ಸಿದ್ಧವಿತ್ತೇ?
ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರೂ ಒಂದಾದ ಮಾತ್ರಕ್ಕೆ ಭಾರತದ ಸಮಾಜವಾಗಲೀ ಅಥವಾ ಸಂವಿಧಾನ ರಚನಾ ಸಭೆಯ ಬಹುಪಾಲು ಸದಸ್ಯರಾಗಲಿ ರಾಜಕೀಯ ಪ್ರಜಾತಂತ್ರದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರಗಳನ್ನು ಒಪ್ಪಿಕೊಳ್ಳುವಷ್ಟು ನಾಗರಿಕರೇನೂ ಆಗಿರಲಿಲ್ಲವಲ್ಲ! ಅಂಬೇಡ್ಕರ್ ಆಶಯದ ಬುದ್ಧ ನಾಗರಿಕತೆ ಮತ್ತು ಪ್ರಬುದ್ಧ ಸಮಾಜವಾದಕ್ಕೆ ಭಾರತ ಈಗಲೇ ಸಿದ್ಧವಿಲ್ಲದಿರುವಾಗ ಆಗ ಎಷ್ಟು ಸಿದ್ಧವಿದ್ದೀತು?
ಹೀಗಾಗಿ ಸಂವಿಧಾನ ಬರೆದದ್ದು ಅಂಬೇಡ್ಕರ್ ಅವರೇ ಎನ್ನುವುದು ಎಷ್ಟು ನಿಜವೋ ಅಂಬೇಡ್ಕರ್ ಅವರ ಎಲ್ಲಾ ಕ್ರಾಂತಿಕಾರಿ ಆಶಯಗಳು ನಮ್ಮ ಸಂವಿಧಾನದೊಳಗೆ ಬರಲು ಇತರ ರಾಜಕೀಯ-ಸಾಮಾಜಿಕ ಶಕ್ತಿಗಳು ಬಿಡಲಿಲ್ಲ ಎನ್ನುವುದೂ ಅಷ್ಟೇ ನಿಜ.
ಅಂಬೇಡ್ಕರ್ ಆಗಲಿ ಅಥವಾ ಸಂವಿಧಾನ ಸಭೆಯ ಇತರ ಯಾವುದೇ ಸದಸ್ಯರಾಗಲೀ ಮುಂದಿಟ್ಟ ಪ್ರಸ್ತಾವಗಳನ್ನು ಮೊದಲು ಸಂಬಂಧಪಟ್ಟ ಉಪಸಮಿತಿಗಳು ಚರ್ಚಿಸಿ ಅಲ್ಲಿ ಅನುಮೋದನೆಗೊಂಡ ಮೇಲೆ ಒಟ್ಟಾರೆ ಸಂವಿಧಾನ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಒಮ್ಮತ ಮೂಡದಿದ್ದರೆ ಬಹುಮತದ ಮೇಲೆ ಪ್ರಸ್ತಾವಗಳು ಅಂಗೀಕಾರಗೊಳ್ಳುತ್ತಿದ್ದವು ಅಥವಾ ಬಿದ್ದುಹೋಗುತ್ತಿದ್ದವು ಅಥವಾ ತಿದ್ದುಪಡಿಯೊಂದಿಗೆ ಅನುಮೋದನೆಯಾಗುತ್ತಿದ್ದವು.
ಸಂವಿಧಾನ ರಚನಾ ಸಭೆಯ ಸದಸ್ಯರು ಅಂದಾಜು 7,500 ತಿದ್ದುಪಡಿಗಳನ್ನು ಸಭೆಯ ಮುಂದಿಟ್ಟರು. ಅದರಲ್ಲಿ 2,500 ತಿದ್ದುಪಡಿಗಳನ್ನು ಮಾತ್ರ ಸಂವಿಧಾನ ರಚನಾ ಸಭೆ ಅಂಗೀಕರಿಸಿ ಸಂವಿಧಾನದ ಭಾಗವಾಗಿಸಿತು. ಈ ಪ್ರಕ್ರಿಯೆಯಲ್ಲಿ ಸಭೆಯ ಸದಸ್ಯರು ಮುಂದಿಟ್ಟ ತಿದ್ದುಪಡಿಗಳನ್ನು ಅಂಗೀಕರಿಸಿದರೆ ಅಥವಾ ತಿರಸ್ಕರಿಸಿದರೆ ದೇಶದ ಸಾಂವಿಧಾನಿಕ ಪ್ರಜಾತಂತ್ರಕ್ಕೆ ಶಾಸನಾತ್ಮಕವಾಗಿ, ರಾಜಕೀಯವಾಗಿ ಆಗುವ ತೊಂದರೆಗಳೇನೆಂಬುದನ್ನು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಅವರು ತಮ್ಮ ಅದ್ಭುತ ಪಾಂಡಿತ್ಯ ಹಾಗೂ ಜನಪರ ಕಾಳಜಿಗಳಿಂದ ಸಾಧಾರ ಮತ್ತು ಅಧ್ಯಯನಪೂರ್ವಕವಾಗಿ ಸದಸ್ಯರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಅವರ ಈ ಪ್ರಯತ್ನದಲ್ಲಿ ಇತರ ಕೆಲವು ಜನಪರ ಶಕ್ತಿಗಳು ತಮ್ಮ ಧ್ವನಿಯನ್ನು ಕೂಡಿಸುತ್ತಿದ್ದರು. ಆದರೂ ಸಂವಿಧಾನ ಸಭೆ ಈ ದೇಶವನ್ನು ಇನ್ನಷ್ಟು ನಾಗರಿಕವಾಗಿಸುತ್ತಿದ್ದ ಹಲವು ತಿದ್ದುಪಡಿಗಳನ್ನು ತಿರಸ್ಕರಿಸಿತು ಮತ್ತು ಈ ದೇಶದ ಇಂದಿನ ದುರ್ಗತಿಗೆ ಕಾರಣವಾದ ಬೀಜಗಳನ್ನು ಬಿತ್ತುವ ಹಲವು ತಿದ್ದುಪಡಿಗಳನ್ನು ಅಂಗೀಕರಿಸಿತು.
ಹೀಗಾಗಿ ಸಂವಿಧಾನ ರಚನಾ ಸಭೆಯ ಮತ್ತು ಅದರ ಸದಸ್ಯರ ಹಿನ್ನೆಲೆಯನ್ನು ಮತ್ತು ಬಹುಪಾಲು ಸದಸ್ಯರ ಒಲವು ನಿಲುವುಗಳನ್ನು ಅರ್ಥಮಾಡಿಕೊಳ್ಳದೆ ಭಾರತದ ಸಂವಿಧಾನವನ್ನು ಸಾಧ್ಯವಾದಷ್ಟೂ ದಮನಿತರ ಪರವಾಗಿಸುವಲ್ಲಿ ಅಂಬೇಡ್ಕರ್ ಪಟ್ಟ ಬೌದ್ಧಿಕ ಮತ್ತು ರಾಜಕೀಯ ಶ್ರಮಗಳು ಅರ್ಥವಾಗುವುದಿಲ್ಲ.







