Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತಲೆ ಎತ್ತಬೇಕಿದೆ ಅಂಬೇಡ್ಕರ್‌ರ...

ತಲೆ ಎತ್ತಬೇಕಿದೆ ಅಂಬೇಡ್ಕರ್‌ರ ‘ಪ್ರಜಾಪ್ರಭುತ್ವ’

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ12 May 2026 12:15 PM IST
share
ತಲೆ ಎತ್ತಬೇಕಿದೆ ಅಂಬೇಡ್ಕರ್‌ರ ‘ಪ್ರಜಾಪ್ರಭುತ್ವ’

ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿ, ಅವರ ತಿಳಿವನ್ನು ಹರಳುಗಟ್ಟಿಸಿ ಪ್ರಜಾಪ್ರಭುತ್ವಕ್ಕೆ ಒಂದು ವ್ಯಾಖ್ಯಾನ ಕೊಡುತ್ತಾರೆ, ‘ರಕ್ತಪಾತವಿಲ್ಲದೆ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ’ವೇ ಪ್ರಜಾಪ್ರಭುತ್ವ ಎನ್ನುತ್ತಾರೆ ಅಂಬೇಡ್ಕರ್.

ಪ್ರತೀ ವರ್ಷವೂ ಪ್ರಜಾಪ್ರಭುತ್ವವಾದಿಗಳಲ್ಲಿ ವಿ-ಡೆಮ್ ಸಂಸ್ಥೆಯ ಡೆಮಾಕ್ರಸಿ ವರದಿಗಳು ಚರ್ಚೆಯನ್ನು ಹುಟ್ಟುಹಾಕುತ್ತವೆ. ಪ್ರಜಾಪ್ರಭುತ್ವದ ವರದಿಯಲ್ಲಿ ನಮ್ಮ ದೇಶದ ಸ್ಥಾನವೇನು ಎಂದು ಆಯಾ ದೇಶದ ಮಾಧ್ಯಮಗಳು ವರದಿ ಮಾಡುತ್ತವೆ. ಹಿಂದಿನ ವಿ-ಡೆಮ್ ವರದಿಗಳಿಗಿಂತ 2026ರ ಪ್ರಜಾಪ್ರಭುತ್ವದ ವರದಿಯು ಬಹಳ ಆತಂಕಕಾರಿಯಾಗಿದೆ. ಈ ವರದಿಯ ಶೀರ್ಷಿಕೆಯೇ ‘ಪ್ರಜಾಪ್ರಭುತ್ವದ ಯುಗ ಕೊನೆಗೊಳ್ಳುತ್ತಿದೆಯೇ?’ ಎನ್ನುವ ಪ್ರಶ್ನೆಯೊಂದಿಗೆ ಶುರುವಾಗುತ್ತದೆ. ವಿಶ್ವದ ಜನಸಂಖ್ಯೆಯ ಸುಮಾರು ಮುಕ್ಕಾಲು ಭಾಗ ಶೇ. 74ರಷ್ಟು ಆರು ಬಿಲಿಯನ್ ಜನರು ನಿರಂಕುಶ (ಸರ್ವಾಧಿಕಾರಿ) ಪ್ರಭುತ್ವದಡಿ ವಾಸಿಸುತ್ತಿದ್ದಾರೆ. ಅಂದರೆ ಜಗತ್ತಿನ ಪ್ರತೀ ನಾಲ್ಕು ಜನರಲ್ಲಿ ಮೂವರು ನಿರಂಕುಶ ಪ್ರಭುತ್ವದಡಿ ಬದುಕುತ್ತಿದ್ದಾರೆ. ಶೇ. 28ರಷ್ಟು ಅರೆ ಸರ್ವಾಧಿಕಾರಿ ದೇಶಗಳಲ್ಲಿದ್ದಾರೆ. ಶೇ. 7ರಷ್ಟು ಜನರು ಮಾತ್ರ ಉದಾರವಾದಿ ಪ್ರಜಾಪ್ರಭುತ್ವದಡಿಯಲ್ಲಿದ್ದಾರೆ. 2025ರ ಅಂತ್ಯದ ವೇಳೆಗೆ ಪ್ರಪಂಚದಲ್ಲಿ 92 ಸಂಪೂರ್ಣ ಸರ್ವಾಧಿಕಾರಿ ದೇಶಗಳಾಗಿ ರೂಪಾಂತರಗೊಂಡಿವೆ. 87 ಚುನಾಯಿತ ಸರ್ವಾಧಿಕಾರವಿರುವ ಪ್ರಜಾಪ್ರಭುತ್ವ ದೇಶಗಳಿವೆ ಎಂದು ಈ ವರದಿ ಆತಂಕವನ್ನು ಹುಟ್ಟುಹಾಕಿದೆ. ಈ ವರದಿಯಲ್ಲಿ ಭಾರತ ಕೂಡ ‘ಚುನಾಯಿತ ಸರ್ವಾಧಿಕಾರಿ’ ದೇಶಗಳ ಪಟ್ಟಿಯಲ್ಲಿದೆ. ಈ ಸಂದರ್ಭದಲ್ಲಿ ಭಾರತದಲ್ಲಿ ತಲೆ ಎತ್ತಬೇಕಿದೆ ಅಂಬೇಡ್ಕರ್‌ರ ಪ್ರಜಾಪ್ರಭುತ್ವದ ಕನಸು.

ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಬಹಳ ಆಳವಾಗಿ ಚಿಂತಿಸಿದ್ದಾರೆ. ಪ್ರಜಾಪ್ರಭುತ್ವದ ಬಗ್ಗೆ ಚರ್ಚೆ ಮಾಡುವಾಗಲೆಲ್ಲಾ ಜಾಗತಿಕ ರಾಜಕೀಯ ವಿದ್ಯಮಾನಗಳನ್ನು ಉದಾಹರಣೆಯಾಗಿ ತರುತ್ತಾರೆ. ಅಂದರೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಚಿಂತನೆ ಜಾಗತಿಕ ದಮನಕ್ಕೊಳಗಾದ ಜನಸಮುದಾಯಗಳ ಸಮತೆಯ ಕನಸಾಗಿದೆ. ಈ ಕಾರಣಕ್ಕಾಗಿ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಅರಿವನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ, ಅದನ್ನು ಜಾಗತಿಕ ಅರಿವಿನ ನೆಲೆಯಲ್ಲಿ ವಿಸ್ತರಿಸಬೇಕಿದೆ. ಇದು ಅಂಬೇಡ್ಕರ್ ಚಿಂತನೆಯನ್ನು ಜಾಗತಿಕವಾಗಿ ವಿಸ್ತರಿಸಲು ಇರುವ ಒಂದು ಬಹುಮುಖ್ಯ ಸಂದರ್ಭ ಕೂಡ. ಒಮ್ಮೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ವ್ಯಾಖ್ಯಾನವನ್ನು ವರ್ಷದ ಥೀಮ್ ಆಗಿಸಲು ಜಾಗತಿಕ ಅಂಬೇಡ್ಕರ್‌ವಾದಿ ಇಂಟಲೆಕ್ಚವಲ್ ಸಮುದಾಯ ಹಕ್ಕೊತ್ತಾಯ ಮಂಡಿಸಬೇಕಾಗಿದೆ.

ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕನಸಿನ ಬೇರುಗಳು ಬೌದ್ಧದಮ್ಮದಲ್ಲಿಯೂ ಬುದ್ಧನ ಆಶಯಗಳಲ್ಲಿಯೂ ಇವೆ. ಬುದ್ಧ ಒಮ್ಮೆ ಬಿಕ್ಕುಗಳಿಗೆ ಉಪದೇಶಿಸುವಾಗ ರಾಜ ಒಳ್ಳೆಯವನಾಗಿದ್ದರೆ, ಪ್ರಜೆಗಳೂ ಒಳ್ಳೆಯವರಾಗಿರುತ್ತಾರೆ, ರಾಜನು ಕ್ರೂರಿಯಾದರೆ, ಪ್ರಜೆಗಳೂ ನಿಧಾನಕ್ಕೆ ಕ್ರೂರಿಗಳಾಗುತ್ತಾರೆ ಎನ್ನುವುದನ್ನು ವಿಸ್ತರಿಸಿ ದೀರ್ಘವಾಗಿ ಮಾತನಾಡುತ್ತಾನೆ. ಇದರಲ್ಲಿ ಒಬ್ಬ ರಾಜ ಪ್ರಜಾಪ್ರಭುತ್ವವಾದಿಯಾಗಿರಬೇಕು ಸರ್ವಾಧಿಕಾರಿಯಾಗಿರಬಾರದು ಎನ್ನುವ ಆಶಯವಿದೆ. ಮುಂದುವರಿದು ಮಗಧ ರಾಜ್ಯದ ಅಜಾತಶತ್ರುವಿನ ಮಗ ವಿದೇಹನು ವೃಧ್ದೀನರ ಮೇಲೆ ದಾಳಿ ಮಾಡಲು ಮುಂದಾದಾಗ ಬುದ್ಧನ ಸಲಹೆಗಾಗಿ ಕಾಯುತ್ತಾನೆ. ಆಗ ಬುದ್ಧನು ‘‘ವೃದ್ಧೀನರು ಎಲ್ಲಿಯವರೆಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟು ಅದನ್ನು ಅನುಸರಿಸುತ್ತಾರೋ, ಅಲ್ಲಿಯವರೆಗೆ ಅವರ ಸಂಸ್ಥಾನಕ್ಕೆ ಯಾವ ಅಪಾಯವೂ ಇಲ್ಲ’’ ಎಂದು ಹೇಳುತ್ತಾನೆ. ಅಂದರೆ ಪರೋಕ್ಷವಾಗಿ ವಿದೇಹನಿಗೆ ನೀನು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿಲ್ಲ, ಹಾಗಾಗಿ ನಿನ್ನ ಸಂಸ್ಥಾನಕ್ಕೆ ಅಪಾಯ ತಪ್ಪಿದ್ದಲ್ಲವೆಂದು ಮನವರಿಕೆ ಮಾಡುತ್ತಾನೆ. ಇದನ್ನು ಅಂಬೇಡ್ಕರ್ ‘ಬುದ್ಧ ಮತ್ತು ಆತನ ದಮ್ಮ’ ಕೃತಿಯಲ್ಲಿ ಉಲ್ಲೇಖಿಸುತ್ತಾರೆ. ಹೀಗೆ ಬುದ್ಧನ ನೇರ ಉಪದೇಶಗಳಲ್ಲದೆ, ತರ್ಕ, ಪ್ರಯೋಗ, ಆನ್ವಯಿಕತೆಯ ಸೂತ್ರವಿರುವ ಬೌದ್ಧ ದಮ್ಮದ ವೈಜ್ಞಾನಿಕ ಮನೋಭಾವವನ್ನು ಒಳಗೊಂಡಂತೆ, ‘ಪ್ರಶ್ನಿಸದೆ, ಪರೀಕ್ಷಿಸದೆ ನಿನ್ನ ಅನುಭವಕ್ಕೆ ಬರದೆ ಯಾವುದನ್ನೂ ಒಪ್ಪಿಕೊಳ್ಳಬೇಡ, ಅಗತ್ಯಕ್ಕಿಂತ ಹೆಚ್ಚಿನದನ್ನು ಕೂಡಿಡಬೇಡ’ ಎನ್ನುವ ಮೂಲಭೂತ ತತ್ವಗಳನ್ನು ಒಳಗೊಂಡಂತೆ ಒಟ್ಟಾರೆ ಬೌದ್ಧ ದಮ್ಮದಲ್ಲಿ ಆಳವಾಗಿ ಬೇರೂರಿರುವುದೇ ಪ್ರಜಾಪ್ರಭುತ್ವ ತತ್ವವಾಗಿದೆ. ಬಾಬಾ ಸಾಹೇಬರು ಬೌದ್ಧ ದಮ್ಮ ಸ್ವೀಕರಿಸಲು ಈ ಅಂಶವೂ ಕಾರಣವಾಗಿದೆ. ಹಾಗಾಗಿ ಅಂಬೇಡ್ಕರ್ ಬೌದ್ಧ ದಮ್ಮಕ್ಕೆ ಮತಾಂತರ ಆಗುವ ಮೂಲಕ ಪ್ರಜಾಪ್ರಭುತ್ವಕ್ಕೆ ಮತಾಂತರವಾದರು ಎಂದು ಹೇಳಬಹುದು.

ಅಂಬೇಡ್ಕರ್ ಜಾಗತಿಕವಾಗಿ ಪ್ರಜಾಪ್ರಭುತ್ವವನ್ನು ವ್ಯಾಖ್ಯಾನಿಸುವಾಗ ಆರ್ಥಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ. ಸಂವಿಧಾನ ರಚನಾ ಸಂಭೆಯಲ್ಲಿ ‘‘ರಾಜಕೀಯ ಪ್ರಜಾಪ್ರಭುತ್ವವು ಸಂವಿಧಾನದಲ್ಲಿ ಸ್ಥಾಪಿತವಾಗಿರುವುದು ಒಂದು ನಿರಂತರ ಸರ್ವಾಧಿಕಾರತ್ವ ಅಥವಾ ಯಾವುದೇ ಪ್ರತ್ಯೇಕ ಜನರ ಸಂಸ್ಥಾನವನ್ನು ಸ್ಥಾಪಿಸುವುದಲ್ಲ, ಬದಲಾಗಿ ರಾಜಕೀಯ ಪ್ರಜಾಪ್ರಭುತ್ವವನ್ನು ಸ್ಥಾಪಿಸಿದ ಮೇಲೆ, ಒಂದು ಆದರ್ಶ ಆರ್ಥಿಕ ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದು ಸಹ ನಮ್ಮ ಕನಸಾಗಿದೆ’’ ಎನ್ನುತ್ತಾರೆ. ಮುಂದುವರಿದು ‘‘ಜನರು ರಾಜಕೀಯದಲ್ಲಿ ಪ್ರವೇಶಿಸಿ ಅಧಿಕಾರವನ್ನು ಸ್ವಾಧೀನಪಡಿಸಿಕೊಳ್ಳುವುದಷ್ಟೇ ಅಲ್ಲ, ಯಾರು ಸರಕಾರದ ರಚನೆ ಮಾಡುವರೋ ಅಂಥವರ ಮುಂದೆ ಈ ಸಂವಿಧಾನ ಒಂದು ಆದರ್ಶವನ್ನು ಮುಂದಿಡುತ್ತದೆ; ಆ ಆದರ್ಶವೇ ಆರ್ಥಿಕ ಪ್ರಜಾಪ್ರಭುತ್ವ’’ ಎನ್ನುತ್ತಾರೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಚುನಾಯಿತ ಸರ್ವಾಧಿಕಾರವನ್ನು ನಿಯಂತ್ರಿಸುತ್ತಿರುವುದು ಕ್ರೋನಿಕ್ಯಾಪಿಟಲ್ ಶಕ್ತಿಗಳು. ಇದು ಭಾರತಕ್ಕೂ ಅನ್ವಯವಾಗುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯ ಅಂತರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ದೇಶದಲ್ಲಿ ಅಂಬೇಡ್ಕರ್ ಕನಸಿನ ಆರ್ಥಿಕ ಪ್ರಜಾಪ್ರಭುತ್ವ ಇದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಬಾಬಾ ಸಾಹೇಬರು ಪ್ರಜಾಪ್ರಭುತ್ವದ ಬಗ್ಗೆ ಆಳವಾಗಿ ಚಿಂತಿಸಿ, ಅವರ ತಿಳಿವನ್ನು ಹರಳುಗಟ್ಟಿಸಿ ಪ್ರಜಾಪ್ರಭುತ್ವಕ್ಕೆ ಒಂದು ವ್ಯಾಖ್ಯಾನ ಕೊಡುತ್ತಾರೆ, ‘ರಕ್ತಪಾತವಿಲ್ಲದೆ ಪಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರಕಾರದ ಒಂದು ಸ್ವರೂಪ ಮತ್ತು ಒಂದು ವಿಧಾನ’ವೇ ಪ್ರಜಾಪ್ರಭುತ್ವ ಎನ್ನುತ್ತಾರೆ. ಮುಂದುವರಿದು ವಿಶ್ಲೇಷಿಸುತ್ತಾ, ‘ಜನರ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಮೂಲಭೂತ ಬದಲಾವಣೆಗಳನ್ನು ತರುವುದಕ್ಕಾಗಿ, ಪ್ರಜಾಪ್ರಭುತ್ವವನ್ನು ನಡೆಸುತ್ತಿರುವವರಿಗೆ ಅದರಿಂದ ಸಹಾಯವಾಗುವುದಾದರೆ, ಆ ಬದಲಾವಣೆಯನ್ನು ರಕ್ತಪಾತವಿಲ್ಲದೆ ಜನರು ಒಪ್ಪಿಕೊಳ್ಳುವುದಾದರೆ, ಆಗ ಅದು ಪ್ರಜಾಪ್ರಭುತ್ವ. ಅದೇ ನಿಜವಾದ ಪರೀಕ್ಷೆ. ಬಹುಶಃ ಇದು ಅತ್ಯಂತ ಕಠಿಣವಾದ ಪರೀಕ್ಷೆ. ಅಂದರೆ ನೀವು ಒಂದು ವಸ್ತುಸಂಗತಿಯ ಗುಣಮಟ್ಟವನ್ನು ಪರೀಕ್ಷಿಸುವುದಾದರೆ, ಅದನ್ನು ಅತ್ಯಂತ ಕಠಿಣ ಪರೀಕ್ಷೆಗೆ ಒಳಪಡಿಸಬೇಕು’ ಎನ್ನುತ್ತಾರೆ. ಅಂತಿಮವಾಗಿ ಜನರ ಬದುಕಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಾಂತಿಕಾರಿ ಬದಲಾವಣೆ ಆಗದ ಹೊರತು ಅದು ಪ್ರಜಾಪ್ರಭುತ್ವ ಸರಕಾರ ಆಗಲಾರದು ಎನ್ನುತ್ತಾರೆ.

ಅಂಬೇಡ್ಕರ್ ಅವರು 1952 ಡಿಸೆಂಬರ್ 22ರಂದು ಪೂನಾದಲ್ಲಿ ಜಿಲ್ಲಾ ಕಾನೂನು ಗ್ರಂಥಾಲಯದಲ್ಲಿ ಎಲ್.ಆರ್. ಗೋಖಲೆ ಅವರ ಭಾವಚಿತ್ರ ಅನಾವರಣ ಮತ್ತು ಇಬ್ಬರು ಹಿರಿಯ ವಕೀಲರು ಗ್ರಂಥಾಲಯಕ್ಕೆ ಕೊಟ್ಟ ಪುಸ್ತಕಗಳ ಕೊಡುಗೆಯ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಇರುವ ಮೂಲಭೂತ ನಿಯಮಗಳು’ ಎನ್ನುವ ಭಾಷಣ ಮಾಡುತ್ತಾರೆ. ಇದರಲ್ಲಿ ಮೊದಲನೆಯದಾಗಿ ಸಮಾಜದಲ್ಲಿ ಕಣ್ಣಿಗೆ ರಾಚುವ ಅಸಮಾನತೆ ಇರಬಾರದು. ಎಲ್ಲಾ ಸವಲತ್ತುಗಳನ್ನು ಪಡೆದ ಆಳುವ ವರ್ಗ, ಎಲ್ಲಾ ರೀತಿಯಿಂದ ತುಳಿಯಲ್ಪಟ್ಟ ವರ್ಗವಿರಬಾರದು. ಈ ಅಂತರ ಹೆಚ್ಚಾದರೆ ಇದರ ಹೊಟ್ಟೆಯೊಳಗೆ ಹಿಂಸೆಯ ಬೀಜ ಮೊಳೆಯುತ್ತದೆ ಎನ್ನುತ್ತಾರೆ. ಎರಡನೆಯದಾಗಿ ಪ್ರಬಲ ವಿರೋಧ ಪಕ್ಷ ಇರಬೇಕು, ಆಡಳಿತ ಪಕ್ಷವನ್ನು ಕಠಿಣ ಪರೀಕ್ಷೆಗೆ ಒಳಪಡಿಸುವ ಒಂದು ಪ್ರಬಲ ವಿರೋಧ ಪಕ್ಷ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ. ಮೂರನೆಯದಾಗಿ ಆಡಳಿತ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನವಾಗಿರಬೇಕು. ನಾಲ್ಕನೆಯದು ಮತ್ತು ಅತ್ಯಂತ ಮುಖ್ಯವಾದ ಅಂಶವೇ ‘ಸಾಂವಿಧಾನಿಕ ನೈತಿಕತೆ’ ಸಂವಿಧಾನದ ಮೌಲ್ಯಗಳನ್ನು ಮೀರಿದಾಗ, ಒಂದು ಗಂಭೀರ ತಪ್ಪು ಮಾಡಿದಾಗ ಆಗುವ ವೇದನೆ ಮನುಷ್ಯನಿಗೆ ಆಗಬೇಕು. ಮುಂದೆ ಇಂತಹ ತಪ್ಪು ಮಾಡಲಾರೆ ಎನ್ನುವ ನಿರ್ಧಾರಕ್ಕೆ ಬರಬೇಕು. ಈ ಬಗೆಯ ಸಾಂವಿಧಾನಿಕ ನೈತಿಕತೆ ಜನರಲ್ಲಿ ನೆಲೆಗೊಂಡಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ.

ಕೊನೆಯ ದಿನಗಳಲ್ಲಿ ಅಂಬೇಡ್ಕರ್ ಪ್ರಜಾಪ್ರಭುತ್ವದ ಆಶಯಗಳಿಗೆ ಆತ್ಯಂತಿಕವಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಾರೆ. 1936ರಲ್ಲಿ ಅಂಬೇಡ್ಕರ್ ವರ್ಗಪ್ರಜ್ಞೆಯಲ್ಲಿ ಜಾಗತಿಕ ಕಾರ್ಮಿಕರ ಸಂಘಟನೆಯ ರಾಜಕೀಯ ಸಮೀಕರಣದ ಕನಸು ಹೊತ್ತು, ಜಾತಿ ತರತಮದ ಅಸಮಾನತೆಯ ಆಧಾರದ ಮೇಲೆ ಕಾರ್ಮಿಕರ ವಿಭಜನೆಯನ್ನು ಆಧರಿಸಿ ‘ಇಂಡಿಪೆಂಡೆಂಟ್ ಲೇಬರ್ ಪಾರ್ಟಿ’ (ಐಎಲ್‌ಪಿ) ಸ್ಥಾಪಿಸುತ್ತಾರೆ. ಮುಂದೆ ಭಾರತದ ಜಾತಿಪ್ರಜ್ಞೆಯನ್ನು ಆಧರಿಸಿ ಅಸ್ಪಶ್ಯ ದಮನಿತ ಸಮುದಾಯಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಲು 1947ರಲ್ಲಿ ಅಖಿಲ ಭಾರತ ಶೆಡ್ಯೂಲ್ಡ್ ಕಾಸ್ಟ್ಸ್ ಫೆಡರೇಶನ್ (ಎಸ್‌ಸಿಎಫ್) ಎಂಬ ರಾಜಕೀಯ ಪಕ್ಷವನ್ನೂ ಸ್ಥಾಪಿಸುತ್ತಾರೆ. ಕೊನೆಯದಾಗಿ ಸೆಪ್ಟಂಬರ್ 30, 1956ರಲ್ಲಿ ಅಂಬೇಡ್ಕರ್ ಒಂದು ರಾಷ್ಟ್ರೀಯ ಪಕ್ಷದ ನೆಲೆಯಲ್ಲಿ ಸಂವಿಧಾನವನ್ನು ಬಲಗೊಳಿಸಲು ಪ್ರಜಾಪ್ರಭುತ್ವದ ಆಶಯಗಳನ್ನು ನೆಲೆಗೊಳಿಸುವ ಕನಸು ಹೊತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಸ್ಥಾಪಿಸಿದರು. ‘‘ಭಾರತೀಯ ಸಂವಿಧಾನವನ್ನು ನಿಜವಾದ ಅರ್ಥದಲ್ಲಿ ಜಾರಿಗೊಳಿಸಲು ಈ ಪಕ್ಷವನ್ನು ಸ್ಥಾಪಿಸಲಾಗಿದೆ, ಸಮಾನತೆ, ಸ್ವಾತಂತ್ರ್ಯ ಮತ್ತು ಬಂಧುತ್ವವೇ ಅದರ ಮುಖ್ಯ ಗುರಿ’’ ಎಂದು ಅಂಬೇಡ್ಕರ್ ಹೇಳುತ್ತಾರೆ. ಆರ್‌ಪಿಐ ಪಕ್ಷಕ್ಕೆ ಆಹ್ವಾನಿಸುವಾಗ ಬರೆದ ತೆರೆದ ಪತ್ರದಲ್ಲಿ ಅಂಬೇಡ್ಕರ್ ಅವರು ಪ್ರಜಾಪ್ರಭುತ್ವದ ಬಗೆಗಿನ ತಾತ್ವಿಕ ಬಿಕ್ಕಟ್ಟುಗಳನ್ನು ತುಂಬಾ ಸೂಕ್ಷ್ಮವಾಗಿ ವಿವರಿಸುತ್ತಾರೆ. ರಾಜಸತ್ತೆಯನ್ನು ಕೊನೆಗೊಳಿಸಲೆಂದು ಪ್ರಜಾಪ್ರಭುತ್ವ ಜನ್ಮತಳೆದರೂ, ಇದೀಗ ಪ್ರಜಾಪ್ರಭುತ್ವದ ಗುರಿ ‘ಜನ ಕಲ್ಯಾಣ’ ಎನ್ನುತ್ತಾರೆ.

ಮೇಲೆ ಚರ್ಚಿಸಿದಂತೆ ಅಸಮಾನತೆ ಇರಕೂಡದು, ಪ್ರಬಲ ವಿರೋಧ ಪಕ್ಷವಿರಬೇಕು, ಕಾನೂನಿನ ಎದುರು ಸಮತೆ, ಸಾಂವಿಧಾನಿಕ ನೈತಿಕತೆ ಜತೆಗೆ ಪ್ರಜಾಪ್ರಭುತ್ವದ ಹೆಸರಲ್ಲಿ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರ ಕತ್ತು ಹಿಸುಕುವ ಕೆಲಸ ಆಗಬಾರದು ಎನ್ನುತ್ತಾರೆ. ರಾಜ್ಯಾಡಳಿತದಲ್ಲಿ ನೈತಿಕತೆ ಇರಬೇಕು, ಕಡೆಯದಾಗಿ ವಿಚಾರವಂತ ಜನಸಮುದಾಯ (Public Conscience) ಇರಬೇಕು ಎನ್ನುತ್ತಾರೆ. ಅಂದರೆ ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮಗಳು ಎಲ್ಲರಿಗೂ ಒಂದೇ ಪರಿಣಾಮ ಬೀರುವುದಿಲ್ಲ. ಮೇಲ್ಜಾತಿ ಮೇಲ್ವರ್ಗಕ್ಕೆ ಕಡಿಮೆ ಪರಿಣಾಮ ಬೀರಿದರೆ, ಕೆಳಜಾತಿ ಮತ್ತು ದಮನಿತ ಸಮುದಾಯಗಳಿಗೆ ತೀವ್ರ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ಜನರು ಮೌನತಾಳಬಾರದು. ಮಿತಿ ಮೀರಿದ ಅನ್ಯಾಯ ಅಕ್ರಮ ದೌರ್ಜನ್ಯಗಳು ನಡೆದಾಗ ವ್ಯಾಪಕವಾಗಿ ಪ್ರತಿರೋಧ ಒಡ್ಡಬೇಕು. ಸಂಘಟಿತವಾಗಿ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಬೇಕು. ಆಗ ಮಾತ್ರ ಪ್ರಜಾಪ್ರಭುತ್ವ ಜೀವಂತವಾಗಿರುತ್ತದೆ.

ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಜೋಸೆಫ್ ವಿಜಯ್ ಕಟ್ಟಿದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷದ ತಾತ್ವಿಕ ನಿಲುವು ಮತ್ತು ಪ್ರೇರಣೆ ಕ್ರಿ.ಪೂ. 2-3ನೇ ಶತಮಾನದಲ್ಲಿ ಬದುಕಿದ್ದ ತಿರುವಳುವರ್ ರಚಿಸಿದ ‘ತಿರುಕ್ಕುರುಳ್’ ಗ್ರಂಥದಲ್ಲಿ ಪ್ರಸ್ತಾಪಿಸುವ ನೈತಿಕ ರಾಜಕಾರಣಕ್ಕೆ ಬದ್ಧವಾಗಿದೆ ಎನ್ನಲಾಗಿದೆ. ಮುಂದುವರಿದು ತಮ್ಮ ಪಕ್ಷದ ಮಾರ್ಗದರ್ಶಿಗಳು ಎಂದು ಪೆರಿಯಾರ್, ಕಾಮರಾಜ್, ಡಾ.ಅಂಬೇಡ್ಕರ್, ವೇಲು ನಾಚಿಯಾರ್, ಅಂಜಲೈ ಅಮ್ಮಾಳ್ ಅವರುಗಳನ್ನು ಗುರುತಾಗಿಟ್ಟುಕೊಂಡಿದ್ದಾರೆ. ಅಂಬೇಡ್ಕರ್ ಬಗ್ಗೆ ವಿವರಿಸುತ್ತಾ ‘‘ಭಾರತಕ್ಕೆ ಸಂವಿಧಾನಾತ್ಮಕ್ಕ ಬೆನ್ನೆಲುಬು ನೀಡಿದವರು ಡಾ. ಅಂಬೇಡ್ಕರ್. ಅವರ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶ ಅಂಚಿನ ಜನರ ರಕ್ಷಣೆಯ ಕನಸು ನಮ್ಮ ಪ್ರಣಾಳಿಕೆಯಲ್ಲಿದೆ’’ ಎಂದಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಆದರೆ ಟಿವಿಕೆ ಪಕ್ಷದ ಸರಕಾರದ ನಡೆಗಳನ್ನು ಕಾದು ನೋಡಬೇಕಿದೆ.

ಜಾಗತಿಕ ಅಸಮಾನತೆಯ 2026ರ ವರದಿ ಬೆಚ್ಚಿಬೀಳಿಸುವಂತಿದೆ. ಜಾಗತಿಕ ಜನಸಂಖ್ಯೆಯ ಶೇ. 10ರಷ್ಟು ಜನರು ಗಳಿಸುತ್ತಿರುವ ಆದಾಯ ಜನಸಂಖ್ಯೆಯ ಶೇ. 90 ಜನರ ಆದಾಯಕ್ಕಿಂತ ಹೆಚ್ಚಾಗಿದೆ. ಜಗತ್ತಿನಲ್ಲಿ ಸಂಪತ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಜಗತ್ತಿನ ಶೇ. 10ರಷ್ಟು ಜನರು ಜಾಗತಿಕ ಸಂಪತ್ತಿನ ಮುಕ್ಕಾಲು ಭಾಗವನ್ನು ಹೊಂದಿದ್ದಾರೆ. ಈ ವಿವರ ನೋಡಿದರೆ ಅಂಬೇಡ್ಕರ್ ಹೇಳುವ ಆರ್ಥಿಕ ಪ್ರಜಾಪ್ರಭುತ್ವ ನೆಲಸಮವಾಗಿರುವುದು ಕಾಣುತ್ತಿದೆ. ಹೀಗೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಕನಸುಗಳನ್ನು ನೋಡುತ್ತಾ ಹೋದರೆ, ಅವರ ಕನಸಿನ ಪ್ರಜಾಪ್ರಭುತ್ವ ಇಂದು ಅಳಿವಿನಂಚಿನಲ್ಲಿದೆ. ಹಾಗಾಗಿ ಭಾರತದಲ್ಲಿ ತಲೆ ಎತ್ತಬೇಕಿದೆ ಅಂಬೇಡ್ಕರ್‌ರ ಪ್ರಜಾಪ್ರಭುತ್ವದ ಕನಸು.

Tags

AmbedkarDemocracy
share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X