ಅಂಬೇಡ್ಕರ್ ರ ಚುನಾವಣಾ ಸೋಲುಗಳು ಮತ್ತು ಸನಾತನವಾದಿ ಸಂಘಿಗಳ ಪಾತ್ರ

ಸಮತಾವಾದಿ ಅಂಬೇಡ್ಕರ್ ಅವರನ್ನು ಸನಾತನವಾದಿ ಸಂಘಪರಿವಾರ ನುಂಗಿಹಾಕಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿ ಹಲವು ಸುಳ್ಳು ಪೊಳ್ಳುಗಳನ್ನು ಹೊಸೆಯುತ್ತಾ ಬಂದಿದೆ.
ಅದರಲ್ಲಿ ಅಂಬೇಡ್ಕರ್ ಅವರು 1952 ರಲ್ಲಿ ರಾಜ್ಯ ಸಭಾ ಸದಸ್ಯರಾಗಿ ಆಯ್ಕೆಯಾಗಲು ಜನಸಂಘ ಬೆಂಬಲಿಸಿತ್ತು ಎಂಬುದು ಒಂದು. ಅದಲ್ಲದೆ 1952 ಮತ್ತು 1954 ರ ಚುನಾವಣೆಗಳಲ್ಲಿ ಕೂಡ ಹಿಂದುತ್ವವಾದಿ ಸಂಘಟನೆಗಳು ಅಂಬೇಡ್ಕರ್ ಅವರನ್ನು ಗೆಲ್ಲಿಸಲು ಪ್ರಯತ್ನಿಸಿದ್ದವು ಎಂಬುದು ಮತ್ತೊಂದು.
ಎರಡೂ ಕೂಡ ಹಸಿಸುಳ್ಳುಗಳೇ. ಶಾಸನಸಭೆಯಲ್ಲಿ ಸದಸ್ಯನೇ ಇಲ್ಲದ ಜನಸಂಘ ಅಂಬೇಡ್ಕರ್ ಗೆ ಮತಹಾಕಿದ ಕಥೆ. ಅಂಬೇಡ್ಕರ್ ಅವರು ರಾಜ್ಯ ಸಭೆಗೆ ಆಯ್ಕೆಯಾಗುವಲ್ಲಿ ಕಾಂಗ್ರೆಸ್ ಪಾತ್ರವಿತ್ತೇ ವಿನಾ ಜನಸಂಘದ್ದಲ್ಲ. ಏಕೆಂದರೆ ರಾಜ್ಯ ಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸನ ಸಭೆಗಳ ಶಾಸಕರು ಪರೋಕ್ಷವಾಗಿ ಆಯ್ಕೆ ಮಾಡುತ್ತಿದ್ದರು.
1952 ರ ಮೊದಲ ರಾಜ್ಯಸಭೆಯ ಸಾಮರ್ಥ್ಯ 219 ಸದಸ್ಯರು. ಆಗ ಮುಂಬೈ ಶಾಸನ ಸಭೆಗೆ ನಿಗದಿಯಾದ ರಾಜ್ಯ ಸಭಾ ಸದಸ್ಯರ ಸಂಖ್ಯೆ 17. ಆಗ ಮುಂಬೈ ಶಾಸನಸಭಾ ಸದಸ್ಯರ ಸಂಖ್ಯೆ 281
(https://cms.rajyasabha.nic.in/UploadedFiles/Procedure/RajyaSabhaAtWork/English/21-29/CHAPTER2.pdf)
ಅಂದರೆ ರಾಜ್ಯ ಸಭಾ ಸದಸ್ಯರಾಗಲು ಕನಿಷ್ಠ 16 ಶಾಸಕರ ಬೆಂಬಲ ಅತ್ಯಗತ್ಯ.
1951-52 ರ ಮುಂಬೈ ನಲ್ಲಿ 281 ಶಾಸನಾ ಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 269 ಸ್ಥಾನಗಳನ್ನು ಗಳಿಸಿತ್ತು. ಉಳಿದಂತೆ ಅಂಬೇಡ್ಕರ್ ಅವರ SCF-1, SP-9, ಮತ್ತು CPI -1 ಸ್ಥಾನಗಳನ್ನು ಮಾತ್ರ ಗಳಿಸಿತ್ತು.
1951-52 ರ ಮುಂಬೈ ನ ಶಾಸನಾ ಸಭಾ ಚುನಾವಣೆಯಲ್ಲಿ ಇಂದಿನ ಬಿಜೆಪಿಯ ಮೂಳ ಅವತಾರವಾದ ಭಾರತೀಯ ಜನಸಂಘ ಸ್ಪರ್ದಿಸಿದ್ದದ್ದೇ ಕೇವಲ 2 ಸ್ಥಾನಗಳಲ್ಲಿ. ಆ ಎರಡೂ ಕ್ಷೇತ್ರಗಳಲ್ಲಿ ಅದು ಒಟ್ಟು 4876 ಮತಗಳನ್ನು ಮಾತ್ರ ಪಡೆದುಕೊಂಡು ಎರಡೂ ಕಡೆ ಡಿಪಾಸಿಟ್ ಕಳೆದುಕೊಂಡು ಘನಘೋರವಾಗಿ ಸೋಲನ್ನಪ್ಪಿತ್ತು.
(https://old.eci.gov.in/files/file/4107-bombay-1951/)
ಹೀಗೆ ಒಬ್ಬ ಸದಸ್ಯರೂ ಇಲ್ಲದ ಷಾನ ಸಭೆಯಿಂದ ಅಂಬೇಡ್ಕರ್ ಅವರನ್ನು ಜನಸಂಘ ಹೇಗೆ ಗೆಲ್ಲಿಸಲು ಸಾಧ್ಯ?.
ಅಂಬೇಡ್ಕರ್ ನಾಮನಿರ್ದೇಶನವಾಗಿದ್ದರೂ ಅದನ್ನು ಆಗ ಕೇಂದ್ರದಲ್ಲಿದ್ದ ಕಾಂಗ್ರೆಸ್ ಮಾಡಿರಬೇಕು. ಅಥವಾ ಮುಂಬೈ ಶಾನಸಭೆಯಿಂದ ಆಯ್ಕೆಯಾಗಿದ್ದರೂ ಕಾಂಗ್ರೆಸ್ ಬೆಂಬಲದೊಂದಿಗೆ ಆಯ್ಕೆಯಾಗಿರಬೇಕು. ಹಾಗೆಂದು ಕಾಂಗ್ರೆಸ್ ಗೆ ಅಂಬೇಡ್ಕರ್ ಬಗ್ಗೆ ಸಕಾರಾತ್ಮಕ ಧೋರಣೆ ಇತ್ತು ಎಂದೇನೂ ಅಲ್ಲ. ಅದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸರ್ಕಾರದ ಹಲವು ನೀತಿಗಳ ಬಗ್ಗೆ ಅಂಬೇಡ್ಕರ್ ಮತ್ತು ಕಾಂಗ್ರೆಸ್ ನಡುವೆ ನಡೆದ ಚರ್ಚೆಗಳಲ್ಲಿ ಸ್ಪಷ್ಟವಾಗಿದೆ.
ಅದೇನೇ ಇದ್ದರೂ ಅಂಬೇಡ್ಕರ್ ಅವರು ರಾಜ್ಯ ಸಭೆಗೆ ಆಯ್ಕೆಯಾಗುವಲ್ಲಿ ಜನಸಂಘದ ಯಾವುದೇ ಪಾತ್ರವಿಲ್ಲ. ಬಿಜೆಪಿ ಹೇಳುತ್ತಿರುವುದು ಹಸಿ ಸುಳ್ಳು.
1952-54ರ ಲೋಕಸಭಾ ಚುನಾವಣೆಯಲ್ಲಿ ಅಂಬೇಡ್ಕರ್ ದ್ವೇಷಿಗಳ ಪಾತ್ರ:
ಇನ್ನು 1952 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮುನ್ನ ಅಂಬೇಡ್ಕರ್ ಅವರು ನೆಹರೂ ಕ್ಯಾಬಿನೆಟ್ ಗೆ ರಾಜೀನಾಮೆ ಕೊಟ್ಟು ಬಂದಿದ್ದರು. SCF ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ವಿರುದ್ಧ ಸೆಣೆಸುವುದಾಗಿ ಘೋಷಿಸಿದ್ದರು. ಹಾಗೂ RSS ಮತ್ತು ಹಿಂದೂ ಮಹಾಸಭಾ ಹಾಗೂ ಕಮ್ಯುನಿಸ್ಟರ ಜೊತೆಗೆ ಯಾವುದೇ ಮೈತ್ರಿಯಿಲ್ಲವೆಂದು ಘೋಷಿಸಿದ್ದರು. ಕೇವಲ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿಯನ್ನು ಘೋಷಿಸಿದ್ದರು. ಹೀಗಾಗಿ ಹಿಂದೂ ಮಹಾ ಸಭಾ ಆಗಲೀ, ಜನಸಂಘವಾಗಲೀ ಅಂಬೇಡ್ಕರ್ ಪರವಾಗಿ ಕೆಲಸ ಮಾಡುವ ಸಂದರ್ಭವೇ ಇರಲಿಲ್ಲ. ಬದಲಿಗೆ ಅವರಿಗೆ ಅಂಬೇಡ್ಕರ್ ಅವರ ಜೊತೆಗೆ ವೈಷಮ್ಯವೇ ಇತ್ತು.
1954 ರ ವೇಳೆಗಾಗಲೇ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮರಳುವ ಬಹಿರಂಗ ತಯಾರಿಯಲ್ಲಿದ್ದರು. ಹಿಂದೂ ಮಹಾಸಭಾದ ಸಾವರ್ಕರ್ ಹಾಗೂ RSS ನ ಮುಖ್ಯಸ್ಥ ಗೋಳ್ವಲ್ಕರ್ ಆ ದಿನಗಳಲ್ಲಿ ದಿನಬೆಳಗಾದರೆ ಅಂಬೇಡ್ಕರ್ ಅವರನ್ನು ಹಿಂದೂ ದ್ರೋಹಿ, ಧರ್ಮದ್ರೋಹಿ ಎಂದು ಜರೆಯುತ್ತಿದ್ದರು. ಹಾಗೂ ಕ್ಷಾತ್ರತೇ ಇಲ್ಲದ ಬೌದ್ಧಕ್ಕೆ ಸೇರುವುದರಿಂದ ಪ್ರಯೋಜನವಿಲ್ಲ ಎಂದು ಹೀಯಾಳಿಸುತ್ತಿದ್ದರು. ಅದಕ್ಕೆ ಪ್ರತಿಯಆಗಿ ಅಂಬೇಡ್ಕರ್ ಅವರು ತಮ್ಮ "ಪ್ರಬುದ್ಧ ಭಾರತ" ದಲ್ಲಿ ಸಾವರ್ಕರ್ ಅವರ ಹಿಂದೆ ಲಗತ್ತಿಸಲಾಗುತ್ತಿದ್ದ "ವೀರ" ಪದವನ್ನು ಲೇವಡಿ ಮಾಡಿ ಬರೆಯುತ್ತಿದ್ದರು.
ಆಸಕ್ತರು ವಿವರಗಳನ್ನು The Wire ಪತ್ರಿಕೆಯ ಈ ಲೇಖನದಲ್ಲಿ ಓದಬಹುದು : https://thewire.in/politics/rss-ambedkar-camaraderie-fictional-narratives
ಹೀಗಾಗಿ 1954 ರ ಸಂಸತ್ ಉಪಚುನಾವಣೆಯ ವೇಳೆಗೆ RSS ಮತ್ತು ಹಿಂದೂ ಮಹಾಸಭಾ ಹಾಗೂ ಭಾರತೀಯ ಜನಸಂಘಗಳು ಅಂಬೇಡ್ಕರ್ ಅವರನ್ನು ಕಾಂಗ್ರೆಸ್ಸಿನಷ್ಟೇ ದ್ವೇಷಿಸುತ್ತಿದ್ದರು.
ಆದ್ದರಿಂದ ಜನಸಂಘವು 1954 ರ ಸಂಸತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಎದುರಾಗಿ ಅಂಬೇಡ್ಕರ್ ಗೆ ಸಹಾಯ ಮಾಡಿತು ಎಂಬುದು ಕೂಡ ಹಸಿ ಸುಳ್ಳೇ . ಆ ಬಗೆಯ ಹೇಳಿಕೆಗಳ ಉಲ್ಲೇಖಗಳು ಇಂದಿನ ಬಿಜೆಪಿ -ಆರೆಸ್ಸೆಸ್ ವಾಟ್ಸಪ್ ಸುಳ್ಳು ಲೈಬ್ರರಿಯಲ್ಲಿ ಬಿಟ್ಟರೆ ಆ ದಿನದ ಹಿಂದುತ್ವ ನಾಯಕರ ಬರಹ, ಭಾಷಣ ಅಥವಾ ಹೇಳಿಕೆಗಳಲ್ಲೂ ಸಿಗುವುದಿಲ್ಲ.
ವಾಸ್ತವದಲ್ಲಿ ಅಂಬೇಡ್ಕರ್ ಗೆ ಸಹಾಯ ಮಾಡುವುದು ಹಾವಿಗೆ ಹಾಲೆರೆದಂತೆ ಎಂದು ಸ್ಪಷ್ಟವಾಗಿ ಘೋಷಿಸಿದ್ದ ಹಿಂದೂ ಮಹಾ ಸಭಾದ ಹಿರಿಯ ನಾಯಕ ಹಾಗೂ ಆರೆಸ್ಸೆಸ್ ಸಂಸ್ಥಾಪಕರಲ್ಲಿ ಒಬ್ಬರಾದ ಬಿ.ಎಸ್. ಮುಂಜೆ ಅವರ ನಿಲುವೇ 1952 ಮತ್ತು 1954 ರ ಚುನಾವಣೆಯಲ್ಲಿ ಅಂಬೇಡ್ಕರ್ ಬಗ್ಗೆ ಇವುಗಳ ಅಧಿಕೃತ ಧೋರಣೆಯಾಗಿತ್ತು.
ಹೀಗಾಗಿ ಅಂಬೇಡ್ಕರ್ ಅವರಿಗೆ ಈ ಹಿಂದುತ್ವವಾದಿಗಳು ಸಹಕರಿಸಿದರು ಎಂಬುದು ಅಪ್ಪಟ ಸುಳ್ಳು.
ಇದರ ಅರ್ಥ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ರಾಜಕೀಯದ ಸಹಾನುಭೂತಿಯಿಂದ ಇತ್ತು ಎಂದೇನಲ್ಲ. ಅಂಬೇಡ್ಕರ್ ಪ್ರತಿಪಾದಿಸುತ್ತಿದ್ದ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಿ ಹಾಗೂ ಸ್ವಾಯತ್ತ ದಲಿತ ರಾಜಕಾರಣ ಮತ್ತು ಆರ್ಥಿಕ ಮತ್ತು ಸಾಮಾಜಿಕ ಪ್ರಜಾತಂತ್ರಗಳ ಪರಿಕಲ್ಪನೆಗಳು ಕಾಂಗ್ರೆಸ್ಸಿಗೆ ಯಾವತ್ತೂ ಪಥ್ಯವಿರಲಿಲ್ಲ. ಹೀಗಾಗಿಯೇ ಸಂವಿಧಾನ ಸಭೆಯ ಬಾಗಿಲಿರಲಿ ಕಿಟಕಿಯನ್ನೂ ಕೂಡ ಅಂಬೇಡ್ಕರ್ ತೆರೆಯುವುದಿಲ್ಲ ಎಂದು ಸರ್ದಾರ್ ಪಟೇಲ್ ಘೋಷಿಸಿದ್ದರು. ಮತ್ತು ಸಂವಿಧಾನ ಸಭೆಯ ಚುನಾವಣೆಯಲ್ಲಿ ಅಂಬೇಡ್ಕರ್ ಅವರು ಸೋಲುವಂತೆ ಮಾಡಲು ಹರಸಾಹಸ ಪಟ್ಟಿದ್ದರು. ವಿವರಗಳನ್ನು ಆಸಕ್ತರು ಕೆಳಗಿನ ವೆಬ್ ಲೇಖನದಲ್ಲಿ ಓದಬಹುದು
(https://frontierweekly.com/articles/vol-49/49-40/49-40-From Chandals to Namasudras.html)
ಆದರೂ ಸ್ವಾತಂತ್ರ್ಯಾನಂತರದಲ್ಲಿ ಸ್ವತಂತ್ರ ಭಾರತವು ಭಿನ್ನಾಭಿಪ್ರಾಯಗಳ ನಡುವೆಯೂ ಐಕ್ಯತೆಯಿಂದ ಸಂವಿಧಾನ ರಚಿಸುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತವೆಂಬ ದೂರಗಾಮಿ ರಾಜಕೀಯ ದೃಷ್ಟಿಯಿಂದ ಕಾಂಗ್ರೆಸ್ ನಾಯಕರೇ ಅಂಬೇಡರ್ ಅವರನ್ನು ಸಂವಿಧಾನ ಸಭೆಗೆ ಆಯ್ಕೆ ಮಾಡುತ್ತಾರೆ. ಮತ್ತು 1952 ರಲ್ಲಿ ಕೂಡ ರಾಜ್ಯಸಭೆಗೆ ಆಯ್ಕೆಯಾಗಲು ಸಹಕರಿಸುತ್ತಾರೆ.
ಅಂಬೇಡ್ಕರ್ ಅವರೂ ಕೂಡ ಬದಲಾದ ಪರಿಸ್ಥಿತಿಯಲ್ಲಿ ಎದುರಾದ ಸಂದರ್ಭದಲ್ಲಿ ಭಾವೀ ಭಾರತವನ್ನು ಇರುವ ಮಿತಿಯಲ್ಲಿ ದಲಿತ ದಮನಿತರ ಪರವಾಗಿ ರೂಪಿಸಲು ಕಾಂಗ್ರೆಸ್ ಸಹಕಾರವನ್ನು ಸ್ವೀಕರಿಸುತ್ತಾರೆ ಮತ್ತು ಸಂವಿಧಾನ ಕರಡು ರಚನಾ ಸಭೆಯ ಅಧ್ಯಕ್ಷರೂ ಆಗುತ್ತಾರೆ.
ಆದರೆ ಸಂವಿಧಾನ ರಚನೆಯ ನಂತರ ಚುನಾವಣೆಗಳಲ್ಲಿ ಕಾಂಗ್ರೆಸ್, ಜನಸಂಘ ದಂತಾ ಯಥಾಸ್ಥಿತಿವಾದಿ ಮತ್ತು ಪ್ರತಿಗಾಮಿ ರಾಜಕೀಯ ಶಕ್ತಿಗಳನ್ನು ದೂರವಿಟ್ಟು ಪ್ರಗತಿಪರ ಶಕ್ತಿಗಳ ಜೊತೆ ಸೇರಿ ಪ್ರಗತಿಪರರ ರಾಜಕಾರಣ ಮುಂದುವರೆಸಲು ಪ್ರಯತ್ನಿಸುತ್ತಾರೆ.
ಅಂಥಾ ರಾಜಕಾರಣಕ್ಕೆ ಕಾಂಗ್ರೆಸ್ ವಿರುದ್ಧವಾಗಿದ್ದರಿಂದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲುವಂತೆ ಮಾಡುತ್ತಾರೆ.
ಇನ್ನು ಕಮ್ಯುನಿಸ್ಟರಂತೂ ಈ ದೇಶದ ದುಡಿಯುವಜನರ ಮೈತ್ರಿಗೆ ಮತ್ತು ಕ್ರಾಂತಿಗೆ ದೊಡ್ಡ ಬೆನ್ನುಲುಬಾಗಬಹುದಾಗಿದ್ದ ಅಂಬೇಡ್ಕರ್ ಅವರ ಜೊತೆ ರಾಜಕೀಯ ಅನುಸಂಧಾನದ ಪ್ರಯತ್ನವನ್ನೇ ಮಾಡಲಿಲ್ಲ. ಇದಕ್ಕೆ ಅಂಬೇಡ್ಕರ್ ಅವರಿಗಿದ್ದ ಸೈದ್ಧಾಂತಿಕ ಪೂರ್ವಗ್ರಹಕ್ಕೂ ಒಂದು ಪಾತ್ರವಿದ್ದರೂ ಭಾರತದ ಇತಿಹಾಸದಲ್ಲಿ ಈ ಮಹಾಮೈತ್ರಿ ಆಗದೆ ಇರಲು ಕಮ್ಯುನಿಸ್ಟರ ಪಾತ್ರ ದೊಡ್ಡದು.
ಈ ಹಿನ್ನೆಲೆಯಲ್ಲಿ 1952 ರ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಎಂಬುದು ಎಷ್ಟು ಸತ್ಯವೋ, ಅಷ್ಟೇ ಸತ್ಯ ಅಂಬೇಡ್ಕರ್ ಅವರ ಚುನಾವಣಾ ಸೋಲಿನಲ್ಲಿ ಹಿಂದುತ್ವವಾದಿ ಸಾವರ್ಕರ್ ಮತ್ತು ದೂರಗಾಮಿ ದೃಷ್ಟಿಯನ್ನು ಕಳೆದುಕೊಂಡಿದ್ದ ಕಮ್ಯುನಿಸ್ಟ್ ನಾಯಕ ಡಾಂಗೆ ಅವರ ಪಾತ್ರ.
ಅದೇನೇ ಇರಲಿ, ಭಾರತದ ಅತ್ಯಂತ ಪ್ರತಿಗಾಮಿ ಫ್ಯಾಶಿಸ್ಟ್ ಶಕ್ತಿಗಳಾದ ಹಿಂದೂ ಮಹಾಸಭಾ, ಆರೆಸ್ಸೆಸ್, ಮತ್ತು ಜನಸಂಘಗಳು ಅಂಬೇಡ್ಕರ್ ಗೆ ಚುನಾವಣಾ ಸಹಾಯವನ್ನೂ ಮಾಡಿರಲಿಲ್ಲ. ಅಂಬೇಡ್ಕರ್ ಅದನ್ನೂ ಕೋರಿರಲೂ ಇಲ್ಲ. ಇದು ಐತಿಹಾಸಿಕ ಸತ್ಯ.
-ಶಿವಸುಂದರ್







