ಅಂಬರ್ ಕೋಟೆ-ರಾಜಸ್ಥಾನದ ವೈಭವದ ಸಂಕೇತ

ಜೈಪುರ: ರಾಜಸ್ಥಾನದ ಇತಿಹಾಸ, ಸಂಸ್ಕೃತಿ ಹಾಗೂ ಕಲೆಗಳ ವೈಭವವನ್ನು ಪ್ರತಿಬಿಂಬಿಸುವ ಅತ್ಯಂತ ಪ್ರಮುಖ ತಾಣವೆಂದರೆ ಅಂಬರ್ ಕೋಟೆ.
ಜೈಪುರದಿಂದ ಸುಮಾರು 11 ಕಿ.ಮೀ. ದೂರದಲ್ಲಿರುವ ಈ ಕೋಟೆ ಪ್ರವಾಸಿಗರಿಗೆ ಅಚ್ಚರಿ ಮೂಡಿಸುತ್ತದೆ. ಅಂಬರ್ ಕೋಟೆಯ ಇತಿಹಾಸ, ವಾಸ್ತುಶಿಲ್ಪ ಹಾಗೂ ಅದರ ಸಾಂಸ್ಕೃತಿಕ ಮಹತ್ವ, ಆಕರ್ಷಣೆಯನ್ನು ಅದ್ಭುತವಾಗಿ ಉಳಿದುಕೊಂಡಿದೆ.
ಇತಿಹಾಸದ ಹಿನ್ನೆಲೆ: ಅಂಬರ್ ಕೋಟೆಯನ್ನು 16ನೇ ಶತಮಾನದಲ್ಲಿ ಅಂಬರ್ನ ರಾಜ ಮಾನ್ ಸಿಂಗ್ ನಿರ್ಮಿಸಿದರು. ನಂತರದ ಅವಧಿಯಲ್ಲಿ ರಾಜ ಸವಾಯಿ ಜಯಸಿಂಗ್ ಕೋಟೆಗೆ ನೂತನ ರೂಪ ನೀಡಿದರು. ರಜಪೂತ ಮನೆತನದ ಶೌರ್ಯ, ಸಾಹಸ, ಧೈರ್ಯ ಹಾಗೂ ಕಲೆಗಳ ಸಂರಕ್ಷಣೆಯ ಸಂಕೇತವಾಗಿ ಶತಮಾನಗಳಿಂದ ಈ ಕೋಟೆ ಕಂಗೊಳಿಸುತ್ತಿದೆ.
ರಜಪೂತ ಮನೆತನದ ಮಾನ್ ಸಿಂಗ್, ಭಾರ್ಮಲ್, ಭಗವಂತ್ ಸಿಂಗ್ ಇನ್ನಿತರ ರಾಜರು ಈ ಕೋಟೆಯನ್ನೇ ಶಕ್ತಿ ಕೇಂದ್ರವನ್ನಾಗಿಸಿಕೊಂಡು ಆಡಳಿತ ನಡೆಸಿದರು.
ವಾಸ್ತುಶಿಲ್ಪದ ಅದ್ಭುತ: ಅಂಬರ್ ಕೋಟೆಯ ವಾಸ್ತುಶಿಲ್ಪದಲ್ಲಿ ರಜಪೂತ ಮತ್ತು ಮೊಘಲ್ ಶೈಲಿಯ ಸಂಯೋಜನೆ ಕಾಣಸಿಗುತ್ತದೆ. ಕೆಂಪು ಕಲ್ಲು ಮತ್ತು ಬಿಳಿ ಮಾರ್ಬಲ್ ಬಳಸಿ ಕಟ್ಟಲಾದ ಈ ಕೋಟೆ ತನ್ನ ವೈಭವದಿಂದ ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕೋಟೆಯ ಒಳಗೆ ಅರಮನೆಗಳು, ದೇವಾಲಯಗಳು, ಸಭಾಂಗಣಗಳು ಹಾಗೂ ಸುಂದರ ಮೊಘಲ್ ಉದ್ಯಾನಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.
ಪ್ರಮುಖ ಆಕರ್ಷಣೆಗಳು: ಶೀಶ್ ಮಹಲ್ (ಕನ್ನಡಿ ಅರಮನೆ): ಚಿಕ್ಕ ಕನ್ನಡಿ ತುಂಡುಗಳಿಂದ ಅಲಂಕರಿಸಿರುವ ಗೋಡೆ ಮತ್ತು ಮೇಲ್ಚಾವಣಿ ಬೆಳಕಿನ ಪ್ರತಿಫಲನದಿಂದ ಆಕರ್ಷಕ ಹೊಳಪು ನೀಡುತ್ತವೆ.
ದಿವಾನ್-ಇ-ಆಮ್: ಸಾಮಾನ್ಯ ಜನರಿಂದ ರಾಜರು ಅಹವಾಲುಗಳನ್ನು ಸ್ವೀಕರಿಸುತ್ತಿದ್ದ ಸಭಾಂಗಣ.
ದಿವಾನ್-ಇ-ಖಾಸ್: ವಿಶೇಷ ಅತಿಥಿಗಳು ಮತ್ತು ಉನ್ನತಮಟ್ಟದ ಅಧಿಕಾರಿಗಳಿಗಾಗಿ ನಿರ್ಮಿಸಿರುವ ವಿಶೇಷ ಸಭಾಂಗಣ.
ಸುಖ್ ನಿವಾಸ್: ತಳ ಭಾಗದಲ್ಲಿ ನಿರಂತರವಾಗಿ ನೀರಿನ ಹರಿವು ಮೂಲಕ ಕಟ್ಟಡದೊಳಗೆ ತಂಪಾದ ವಾತಾವರಣ ಸೃಷ್ಟಿಸುವ ಅದ್ಭುತ ತಾಂತ್ರಿಕ ತಾಣ ಸುಖ್ ನಿವಾಸ್. ಬೇಸಿಗೆಯ ಸಂದರ್ಭದಲ್ಲಿ ರಾಜಮನೆತನದವರು ಈ ಕಟ್ಟಡದಲ್ಲಿ ವಾಸ್ತವ್ಯ ಹೂಡುತ್ತಿದ್ದರು.
ವಿಶ್ವ ಪರಂಪರೆ ಸ್ಥಾನ: ಅಂಬರ್ ಕೋಟೆ 2013ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟಿದೆ. ರಾಜಸ್ಥಾನದ ಭವ್ಯ ಇತಿಹಾಸ ಹಾಗೂ ವಾಸ್ತುಶಿಲ್ಪವನ್ನು ವಿಶ್ವದ ಮುಂದೆ ಪರಿಚಯಿಸುವ ಹೆಮ್ಮೆಯ ತಾಣ ಇದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಪ್ರತಿದಿನ ಸಂಜೆ ಕೋಟೆಯಲ್ಲಿ ನಡೆಯುವ ಲೈಟ್ ಆಂಡ್ ಸೌಂಡ್ ಶೋ ಪ್ರವಾಸಿಗರಿಗೆ ರಜಪೂತರ ಇತಿಹಾಸದ ನೈಜ ಅನುಭವ ನೀಡುವಂತೆ ಮಾಡುತ್ತದೆ.
ಪ್ರವಾಸಿಗರ ತಾಣ: ಪ್ರತಿವರ್ಷ ಲಕ್ಷಾಂತರ ದೇಶಿ ಹಾಗೂ ವಿದೇಶಿ ಪ್ರವಾಸಿಗರು ಅಂಬರ್ ಕೋಟೆಗೆ ಭೇಟಿ ನೀಡುತ್ತಾರೆ. ರಾಜಸ್ಥಾನದ ವೈಭವ, ಸಾಹಸಮಯ ಇತಿಹಾಸ ಹಾಗೂ ಸುಂದರ ವಾಸ್ತುಶಿಲ್ಪವನ್ನು ಒಂದೇ ಸ್ಥಳದಲ್ಲಿ ಕಾಣಲು ಸಾಧ್ಯವಾಗುವುದರಿಂದ ಅಂಬರ್ ಕೋಟೆ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಜೋಧಾ ಬಾಯಿ ಅರಮನೆ: ಅಮೇರ್ ಕೋಟೆಯೊಳಗಿನ ಜೋಧಾ ಭಾಯಿ ಅರಮನೆ ಪ್ರವಾಸಿಗರನ್ನು ತನ್ನ ವಿಶಿಷ್ಟ ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಸೊಬಗಿನಿಂದ ಸೆಳೆಯುತ್ತಿದೆ. ಈ ಅರಮನೆ ರಜಪೂತ ಹಾಗೂ ಮೊಘಲ್ ಶೈಲಿಗಳ ಸಮನ್ವಯದಿಂದ ನಿರ್ಮಿಸಲ್ಪಟ್ಟಿದೆ.
ಅಕ್ಬರ್ ಸಾಮ್ರಾಟನ ಪತ್ನಿ ಜೋಧಾ ಬಾಯಿ ಹೆಸರಿನಿಂದ ಈ ಅರಮನೆ ಪ್ರಸಿದ್ಧಿ ಪಡೆದಿದ್ದರೂ, ವಾಸ್ತವವಾಗಿ ಇದು ಅರಮನೆಯ ಮಹಾರಾಣಿಯರ ವಸತಿಗೃಹವಾಗಿತ್ತು. ಇತಿಹಾಸಕಾರರ ಪ್ರಕಾರ, ಜೋಧಾ ಬಾಯಿ ಹೆಚ್ಚಾಗಿ ಆಗ್ರಾ ಸಮೀಪದ ಫತೇಹ್ಪುರ್ ಸಿಕ್ರಿಯಲ್ಲಿಯೇ ವಾಸಿಸುತ್ತಿದ್ದರು. ಆದರೆ, ಈ ಅರಮನೆಯಲ್ಲಿ ಜೋಧಾ ಬಾಯಿ ಜನಿಸಿದ್ದರಿಂದ ಇದನ್ನು ಜೋಧಾ ಭಾಯಿ ಅರಮನೆ ಎಂದೇ ಕರೆಯಲಾಗುತ್ತದೆ.
ವಾಸ್ತುಶಿಲ್ಪದ ವೈಶಿಷ್ಟ್ಯಗಳು: ಜೋಧಾ ಬಾಯಿ ಅರಮನೆ ರಜಪೂತ ಶೈಲಿಯ ಗಟ್ಟಿತನ ಹಾಗೂ ಮೊಘಲ್ ಶೈಲಿಯ ಸೊಗಸನ್ನು ಒಟ್ಟುಗೂಡಿಸಿದೆ. ಅರಮನೆಯೊಳಗಿನ ವಿಶಾಲ ಅಂಗಳಗಳು ಮಹಿಳೆಯರ ಸಮಾರಂಭಗಳಿಗೆ ವಿನ್ಯಾಸಗೊಳಿಸಲ್ಪಟ್ಟಿದ್ದು, ಜಾಲಿ ಕಿಟಕಿಗಳು ಮಹಿಳೆಯರಿಗೆ ಗೋಪ್ಯವಾಗಿ ಹೊರಗಿನ ದೃಶ್ಯಗಳನ್ನು ನೋಡುವ ಅನುಕೂಲ ಒದಗಿಸುತ್ತವೆ.
ಸಾಂಸ್ಕೃತಿಕ ಮಹತ್ವ: ಈ ಅರಮನೆ ಕೇವಲ ವಾಸ್ತುಶಿಲ್ಪದ ಕೌಶಲ್ಯವಲ್ಲ, ರಜಪೂತ ಹಾಗೂ ಮೊಘಲ್ ಸಾಮ್ರಾಜ್ಯಗಳ ನಡುವಿನ ಸ್ನೇಹ ಮತ್ತು ಸಾಮರಸ್ಯದ ಸಂಕೇತವೂ ಆಗಿದೆ. ಮಹಿಳೆಯರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಾಣವಾಗಿರುವುದರಿಂದ, ಇದನ್ನು ಮಧ್ಯಯುಗದ ಮಹಿಳಾ ಅರಮನೆ ವಾಸ್ತುಶಿಲ್ಪದ ವಿಶಿಷ್ಟ ಮಾದರಿ ಎಂದು ಪರಿಗಣಿಸಲಾಗುತ್ತದೆ.
ಅಕ್ಬರಿ ಮಸೀದಿ
ಆಮೇರ್ ಕೋಟೆಯ ಸಮೀಪ ರಾಜ ಭಾರ್ಮಲ್ ಅಕ್ಬರಿ ಮಸೀದಿಯನ್ನು ನಿರ್ಮಿಸಿದರು. ಜೋಧಾ ಭಾಯಿ ಅವರೊಂದಿಗೆ ಅಕ್ಬರ್ ವಿವಾಹವಾದ ಬಳಿಕ ನಮಾಝ್ಗೆ ಅನುಕೂಲ ಕಲ್ಪಿಸಲು ಈ ಮಸೀದಿಯನ್ನು ನಿರ್ಮಿಸಲಾಯಿತು. ಇದನ್ನು ಆಮೇರ್ನ ಜಾಮಾ ಮಸೀದಿ ಎಂದೂ ಕರೆಯಲಾಗುತ್ತದೆ. ಈ ಮಸೀದಿ ಕ್ರಿ.ಶ. 1569ರಲ್ಲಿ ನಿರ್ಮಾಣಗೊಂಡಿತು.
ಪ್ರವಾಸಿಗರಿಗೆ ಮಾಹಿತಿ
ಅಂಬರ್ ಕೋಟೆಗೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರಿಗಾಗಿ ಜೋಧಾ ಭಾಯಿ ಅರಮನೆ ಪ್ರಮುಖ ಆಕರ್ಷಣೆ. ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 5:30ರವರೆಗೆ ಕೋಟೆ ಸಾರ್ವಜನಿಕರಿಗೆ ತೆರೆಯಲ್ಪಟ್ಟಿರುತ್ತದೆ. ಪ್ರವೇಶ ಟಿಕೆಟ್ನಲ್ಲಿ ಈ ಅರಮನೆಯ ವೀಕ್ಷಣೆಯೂ ಒಳಗೊಂಡಿದ್ದು, ಅಕ್ಟೋಬರ್ನಿಂದ ಮಾರ್ಚ್ ವರೆಗೆ ತಂಪಾದ ಹವಾಮಾನದಲ್ಲಿ ಭೇಟಿ ನೀಡುವುದು ಅತ್ಯುತ್ತಮ.







