ವಿವಾದಕ್ಕೊಂದು ಉತ್ತರ

2024 ಮತ್ತು 2025ರ ವರ್ಷದಲ್ಲಿ ಭಾರತ-ಶ್ರೀಲಂಕಾ ಮೀನುಗಾರರ ವಿವಾದವು ತೀವ್ರ ಸ್ವರೂಪಕ್ಕೆ ತಿರುಗಿದೆ. ಇದು ಹೆಚ್ಚಿನ ದಾಖಲೆಯ ಬಂಧನಗಳು, ತೀವ್ರಗೊಂಡ ರಾಜಕೀಯ ತೊಡಗಿಸಿಕೊಳ್ಳುವಿಕೆ ಮತ್ತು ಹೆಚ್ಚುತ್ತಿರುವ ದಂಡನಾತ್ಮಕ ಕಾನೂನು ಕ್ರಮಗಳಿಂದ ಗುರುತಿಸಲ್ಪಟ್ಟಿದೆ. ಈ ಬೆಳವಣಿಗೆಗಳು ಸಮಸ್ಯೆಯ ಆಳವಾದ ಸಂಕೀರ್ಣತೆಯನ್ನು ಮಾತ್ರವಲ್ಲದೆ ಸುಸ್ಥಿರ ಮತ್ತು ರಾಜತಾಂತ್ರಿಕ ಪರಿಹಾರದ ತುರ್ತು ಅಗತ್ಯವನ್ನೂ ಕೂಡ ಪ್ರತಿಬಿಂಬಿಸುತ್ತವೆ.
2024ರಲ್ಲಿ ಶ್ರೀಲಂಕಾ 535 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಇದು ಹಿಂದಿನ ವರ್ಷಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ನವೆಂಬರ್ 2024ರ ಹೊತ್ತಿಗೆ 141 ಭಾರತೀಯ ಮೀನುಗಾರರು ಶ್ರೀಲಂಕಾದ ವಶದಲ್ಲಿದ್ದು, ಈ ಸಮಯದಲ್ಲಿ 198 ಬಾಟಮ್ ಟ್ರಾಲಿಂಗ್ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರವೃತ್ತಿ 2025ರಲ್ಲೂ ಮುಂದುವರಿಯಿತು ಮತ್ತು ಜುಲೈ ಮಧ್ಯದ ವೇಳೆಗೆ 181 ಬಂಧನಗಳು ವರದಿಯಾಗಿವೆ. ಈ ಅಂಕಿಅಂಶಗಳು ಒಂದು ದಶಕದಲ್ಲಿಯೇ ಅತ್ಯಧಿಕ ಬಂಧನ ದರವನ್ನು ಸೂಚಿಸಿದ್ದು, ಇದು 2014ರ ಗರಿಷ್ಠ 787 ಬಂಧನಗಳನ್ನು ಮೀರಿಸಿದೆ.
ಹಿನ್ನೋಟ
2024-25ರಲ್ಲಿ ಸಂಭವಿಸಿದ ಎರಡು ಘಟನೆಗಳು ಭಾರತ-ಶ್ರೀಲಂಕಾ ಕಡಲ ಸಂಬಂಧಗಳನ್ನು ಉದ್ವಿಗ್ನಗೊಳಿಸಿದೆ. ಆಗಸ್ಟ್ 1, 2024ರಂದು, ಕಚ್ಚತೀವ್ ದ್ವೀಪದ ಬಳಿ ಭಾರತೀಯ ಮೀನುಗಾರಿಕಾ ದೋಣಿ ಶ್ರೀಲಂಕಾದ ನೌಕಾಪಡೆಯ ಹಡಗಿಗೆ ಢಿಕ್ಕಿ ಹೊಡೆದು ದೋಣಿ ಮಗುಚಿಬಿದ್ದಿತು. ಇದರ ಪರಿಣಾಮವಾಗಿ ಒಬ್ಬ ಮೀನುಗಾರನ ಸಾವು, ಒಬ್ಬ ಮೀನುಗಾರ ಕಾಣೆಯಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಶ್ರೀಲಂಕಾ ಈ ಅಪಘಾತಕ್ಕೆ ಮೀನುಗಾರರ ಆಕ್ರಮಣಕಾರಿ ವರ್ತನೆಯೇ ಕಾರಣ ಎಂದು ಹೇಳಿತ್ತು. ಆದರೆ ಭಾರತ ಶ್ರೀಲಂಕಾದ ಹಂಗಾಮಿ ಹೈಕಮಿಷನರ್ ಅವರನ್ನು ಕರೆಸಿ ಔಪಚಾರಿಕವಾಗಿ ಈ ಸಾವಿಗೆ ಪ್ರತಿಭಟಿಸಿತು. ನಂತರ, ಜನವರಿ 28, 2025ರಂದು, ಶ್ರೀಲಂಕಾ ನೌಕಾಪಡೆಯು ಜಾಫ್ನಾ ಸಮುದ್ರದ ಡೆಲ್ಫ್ಟ್ ದ್ವೀಪದ ಬಳಿ 13 ಭಾರತೀಯ ಮೀನುಗಾರರನ್ನು ಹೊತ್ತೊಯ್ಯುತ್ತಿದ್ದ ಹಡಗಿನ ಮೇಲೆ ಗುಂಡು ಹಾರಿಸಿತು, ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡರು. ಭಾರತವು ಶೀಘ್ರವಾಗಿ ಪ್ರತಿಕ್ರಿಯಿಸಿದ್ದು, ವಿದೇಶಾಂಗ ಸಚಿವಾಲಯವು ಬಲವಾದ ರಾಜತಾಂತ್ರಿಕ ಪ್ರತಿಭಟನೆಯನ್ನು ಸಲ್ಲಿಸಿತು. ಜಾಫ್ನಾ ಆಸ್ಪತ್ರೆಯಲ್ಲಿ ಕಾನ್ಸುಲರ್ ಬೆಂಬಲದ ಮೂಲಕ ಗಾಯಾಳುಗಳನ್ನು ಉಪಚರಿಸಲಾಯಿತು. ಭಾರತವು ಬಲಪ್ರಯೋಗವನ್ನು ಖಂಡಿಸಿದ್ದು ಮತ್ತು ಮೀನುಗಾರರ ಮೇಲೆ ಮಾನವೀಯತೆಯಿಂದ ವರ್ತಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಲಂಕಾ ಗುಂಡು ಹಾರಿಸಿದ್ದು ಆಕಸ್ಮಿಕ ಎಂದು ಸಮರ್ಥಿಸಿಕೊಂಡಿದೆ. ಮೀನುಗಾರರು ನೌಕಾ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಮತ್ತು ಬಂದೂಕನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರು ಎಂದು ಹೇಳಿತ್ತು.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಧ್ಯಪ್ರವೇಶಿಸುವಂತೆ ಪದೇ ಪದೇ ಒತ್ತಾಯಿಸಿದ್ದರು. ಫೆಬ್ರವರಿ 2025ರಲ್ಲಿ 97 ಮೀನುಗಾರರು ಮತ್ತು 216 ದೋಣಿಗಳು ಇನ್ನೂ ಶ್ರೀಲಂಕಾದ ವಶದಲ್ಲಿದೆ ಎಂದು ಸ್ಟಾಲಿನ್ ಪತ್ರ ಬರೆಯುವ ಮೂಲಕ ಟೀಕಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ವಿವಿಧ ರಾಜಕೀಯ ಪಕ್ಷಗಳು ಟೀಕಿಸಿದ್ದವು. ಆದರೆ ಸ್ಥಳೀಯ ಶಾಸಕರು ಮತ್ತು ಸಚಿವರು ಬಂಧಿತ ಮೀನುಗಾರರಿಗೆ ಜಾಮೀನು ಪಾವತಿ ಮತ್ತು ಕಾನೂನು ನೆರವನ್ನು ವೈಯಕ್ತಿಕವಾಗಿ ನೀಡಿ ಬಿಡುಗಡೆಗೊಳಿಸಿದರು.
ಕೊಲಂಬೊದಲ್ಲಿರುವ ಭಾರತದ ಹೈಕಮಿಷನ್ ಬಂಧಿತ ಮೀನುಗಾರರ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಡಿಸೆಂಬರ್ 2024ರಲ್ಲಿ, ಪ್ರಧಾನಿ ಮೋದಿಯವರು ಈ ವಿಷಯವನ್ನು ನೇರವಾಗಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರೊಂದಿಗೆ ಪ್ರಸ್ತಾಪಿಸಿದರು, ಮೀನುಗಾರರ ವಿಷಯದಲ್ಲಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿ ವಿನಂತಿಸಿದರು. ಅಕ್ಟೋಬರ್ 2024ರಲ್ಲಿ ನಡೆದ ಮೀನುಗಾರಿಕೆಯ ಕುರಿತಾದ 6ನೇ ಜಂಟಿ ಕಾರ್ಯ ಗುಂಪು (JWG) ವರ್ಧಿತ ಸಹಕಾರದಲ್ಲಿ ಹಾಟ್‌ಲೈನ್ ಸಂವಹನ ಮತ್ತು ಬಲಪ್ರಯೋಗ ತಪ್ಪಿಸುವಿಕೆಗೆ ಕರೆ ನೀಡಲಾಯಿತು.
ಇಲ್ಲಿ ನಾವು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಏನೆಂದರೆ, ಐತಿಹಾಸಿಕವಾಗಿ ಭಾರತ ಶ್ರೀಲಂಕಾ ಮೀನುಗಾರರು ಸಾಂಪ್ರದಾಯಿಕ ಕಾನೂನಿನಂತೆ ಮುಕ್ತವಾಗಿ ಪಾಕ್ ಜಲಸಂಧಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. 1974 ಮತ್ತು 76ರ ಎರಡು ರಾಷ್ಟ್ರಗಳ ಕಡಲ ಒಪ್ಪಂದವು ಸೀಮೆಗಳನ್ನು ನಿಖರವಾಗಿ ಗುರುತಿಸಿದ್ದರಿಂದ ಮುಕ್ತ ಮೀನುಗಾರಿಕೆಯ ಅವಕಾಶವು ನಿಂತು ಹೋಯಿತು ಮತ್ತು ಈ ಮೂಲಕ ಮೀನುಗಾರರ ವಿವಾದ ಉಲ್ಬಣವಾಗಿದೆ.
ಶ್ರೀಲಂಕಾ ನ್ಯಾಯಾಂಗವು ಇತ್ತೀಚೆಗೆ ದಂಡನಾತ್ಮಕ ನಿಲುವನ್ನು ಅಳವಡಿಸಿಕೊಂಡಿದ್ದು, ಸೆಪ್ಟಂಬರ್ 2024ರಲ್ಲಿ, ನ್ಯಾಯಾಲಯಗಳು ತರುವೈಕುಲಂನ 10 ಮೀನುಗಾರರಿಗೆ ಐಏಖ 3.5 ಕೋಟಿ (ಸುಮಾರು ಭಾರತೀಯ ರೂಪಾಯಿ 1 ಕೋಟಿ) ದಂಡವನ್ನು ವಿಧಿಸಲಾಗಿದ್ದು, ಪಾವತಿ ಮಾಡದಿದ್ದಕ್ಕಾಗಿ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದವು. ಪಂಬನ್‌ನ 35 ಮೀನುಗಾರರ ಮತ್ತೊಂದು ಗುಂಪು ಐಏಖ 6.5 ಕೋಟಿ ಅಥವಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ಎದುರಿಸಿತು. ಈ ದಂಡಗಳು ಹೆಚ್ಚಾಗಿ ಭರಿಸಲು ಅಸಾಧ್ಯವಾಗಿದ್ದು, ಇದರ ಪರಿಣಾಮವಾಗಿ ದೀರ್ಘಕಾಲದ ಜೈಲು ಶಿಕ್ಷೆ ಮತ್ತು ದೋಣಿಗಳ ಶಾಶ್ವತ ನಷ್ಟವಾಗಿದೆ. ಇತ್ತೀಚಿಗೆ ಜುಲೈ ಒಂದರಂದು ಮೀನುಗಾರರ ಸಮಸ್ಯೆಯ ಕುರಿತು ಮಾತನಾಡಿದ ಶ್ರೀಲಂಕಾದ ಮೀನುಗಾರಿಕಾ ಮಂತ್ರಿ, ಶ್ರೀಲಂಕಾದ ಕಡಲಗಡಿಗಳನ್ನು ಉಲ್ಲಂಘಿಸಿ ನುಸುಳುವ ಮೀನುಗಾರರ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳಲು ತಮ್ಮ ನೌಕಾ ಸೇನೆಗೆ ಸಂಪೂರ್ಣ ಅಧಿಕಾರ ಮತ್ತು ಬೆಂಬಲವನ್ನು ನೀಡಿರುವುದಾಗಿ ಹೇಳುತ್ತಾ ಭಾರತವನ್ನು ಎಚ್ಚರಿಸಿದರು. ಕೊನೆಯ ಒಂದು ವರ್ಷದಲ್ಲಿ ನಡೆದ ಈ ಎಲ್ಲಾ ಘಟನೆಗಳು ಪ್ರಸ್ತುತ ಸಮಸ್ಯೆಯ ತೀವ್ರತೆಯನ್ನು ಸ್ಪಷ್ಟವಾಗಿ ಸಾರಿ ಹೇಳುತ್ತದೆ.
ಸಂಭಾವ್ಯ ಪರಿಹಾರಗಳು
ಭಾರತ-ಶ್ರೀಲಂಕಾ ಮೀನುಗಾರರ ವಿವಾದವನ್ನು ಪರಿಹರಿಸುವ ನೀತಿಯು ಶಿಫಾರಸುಗಳು, ಐತಿಹಾಸಿಕ ಒಪ್ಪಂದಗಳಲ್ಲಿ ಬೇರೂರಿದೆ. ಪರಿಸರ ಅವನತಿ ಮತ್ತು ಕಾರ್ಯತಂತ್ರದ ಉದ್ವಿಗ್ನತೆಗಳಿಂದ ಉಲ್ಬಣಗೊಂಡಿರುವ ಭಾರತ-ಶ್ರೀಲಂಕಾ ಮೀನುಗಾರರ ವಿವಾದವು, ಬಹು ಆಯಾಮದ ನೀತಿ ಪ್ರತಿಕ್ರಿಯೆಯನ್ನು ಬಯಸುತ್ತದೆ.
ಮೊದಲನೆಯದಾಗಿ, ಭಾರತೀಯ ಮೀನುಗಾರರು ಬಾಟಮ್ ಟ್ರಾಲಿಂಗ್ ಅನ್ನು ನಿರಂತರವಾಗಿ ಬಳಸುತ್ತಿರುವುದನ್ನು ನಿಷೇಧಿಸುವುದು ತುರ್ತು ಕಾಳಜಿಯಾಗಿದೆ. ಬಾಟಮ್ ಟ್ರಾಲರ್‌ಗಳು ಸಮುದ್ರತಳದಾದ್ಯಂತ ತೂಕದ ಬಲೆಗಳನ್ನು ಎಳೆಯುತ್ತವೆ, ವಿವೇಚನೆಯಿಲ್ಲದೆ ಸಮುದ್ರ ಜೀವಿಗಳನ್ನು ಸೆರೆಹಿಡಿಯುತ್ತವೆ ಮತ್ತು ಸಮುದ್ರತಲ ಜೀವಿಗಳ ಆವಾಸಸ್ಥಾನಗಳನ್ನು ನಾಶಮಾಡುತ್ತವೆ. ಪರಿಸರ ಮತ್ತು ಆರ್ಥಿಕ ಹಾನಿಯನ್ನು ಉಲ್ಲೇಖಿಸಿ ಶ್ರೀಲಂಕಾ ಪದೇ ಪದೇ ಅದರ ನಿಷೇಧಕ್ಕೆ ಕರೆ ನೀಡಿದೆ. ಈ ಸಮಸ್ಯೆಯನ್ನು ತಗ್ಗಿಸಲು, ಭಾರತವು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PಒಒSಙ) ಅಡಿಯಲ್ಲಿ ಉದ್ದೇಶಿತ ಸಬ್ಸಿಡಿಗಳು, ಬೈ-ಬ್ಯಾಕ್ ಯೋಜನೆಗಳು ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಬಾಟಮ್ ಟ್ರಾಲರ್‌ಗಳನ್ನು ಹಂತ ಹಂತವಾಗಿ ನಿಷೇಧಿಸಬೇಕಾಗಿದೆ. ಇದು ಲಾಂಗ್‌ಲೈನ್‌ಗಳು, ಗಿಲ್‌ನೆಟ್‌ಗಳು ಅಥವಾ ಆಳ ಸಮುದ್ರದ ಕೃಷಿಯಂತಹ ಸುಸ್ಥಿರ ವಿಧಾನಗಳನ್ನು ಅಳವಡಿಸಿಕೊಳ್ಳುವ ಮೀನುಗಾರರಿಗೆ ಶ್ರೇಣೀಕೃತ ಪ್ರೋತ್ಸಾಹಕ ವ್ಯವಸ್ಥೆಯನ್ನು ಸಹ ಪರಿಚಯಿಸ ಬೇಕಾಗಿದೆ. ಈ ಕ್ರಮವು ಪರಿಸರದ ಒತ್ತಡವನ್ನು ಕಡಿಮೆ ಮಾಡಲು, ದ್ವಿಪಕ್ಷೀಯ ವಿಶ್ವಾಸವನ್ನು ಸುಧಾರಿಸಲು ಮತ್ತು ಜಾಗತಿಕ ಸುಸ್ಥಿರ ಮೀನುಗಾರಿಕೆ ಮಾನದಂಡಗಳಿಗೆ ಅನುಗುಣವಾಗಿ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಎರಡನೆಯದಾಗಿ, ಭಾರತೀಯ ಕರಾವಳಿ ನೀರಿನಲ್ಲಿ ಮೀನುಗಳ ಸಂಖ್ಯೆಯಲ್ಲಿನ ಇಳಿಕೆ, ಮೀನುಗಾರರನ್ನು ಶ್ರೀಲಂಕಾದ ಕಡಲ ಪ್ರದೇಶದೆಡೆಗೆ ಸೆಳೆದಿದೆ. ಆಳ ಸಮುದ್ರ ಮೀನುಗಾರಿಕೆ ಒಂದು ಕಾರ್ಯಸಾಧ್ಯವಾದ ಪರ್ಯಾಯವನ್ನು ಒದಗಿಸುತ್ತಿದ್ದರೂ, ಹೆಚ್ಚಿನ ವೆಚ್ಚಗಳು ಮತ್ತು ಅರಿವಿನ ಕೊರತೆಯಿಂದಾಗಿ ಅದರ ಅಳವಡಿಕೆ ಸೀಮಿತವಾಗಿದೆ. ಈ ಪರಿವರ್ತನೆಯನ್ನು ಬೆಂಬಲಿಸಲು, ಪಾಕ್ ಕೊಲ್ಲಿಯ ಆಳ ಸಮುದ್ರ ಮೀನುಗಾರಿಕೆ ಯೋಜನೆಯನ್ನು ಹೆಚ್ಚಿದ ಆರ್ಥಿಕ ನೆರವು, ಆಧುನೀಕರಿಸಿದ ಹಡಗುಗಳು ಮತ್ತು ಸಹಕಾರಿ ಮಾಲಕತ್ವದ ಮಾದರಿಗಳೊಂದಿಗೆ ವಿಸ್ತರಿಸ ಬೇಕಾಗಿದೆ. ಹೆಚ್ಚುವರಿಯಾಗಿ, ಪೂರಕ ಆದಾಯದ ಮೂಲಗಳಾದ ಕಡಲಕಳೆ ಕೃಷಿ, ಸಮುದ್ರ ಜಾನುವಾರು ಸಾಕಣೆ ಮತ್ತು ಜಲಚರ ಸಾಕಣೆಯನ್ನು ಉತ್ತೇಜಿಸುವುದು ಪ್ರಮುಖ ಪಾತ್ರ ವಹಿಸುತ್ತದೆ. ಈ ಕ್ರಮಗಳು ಸ್ಪರ್ಧಾತ್ಮಕ ಮೀನುಗಾರಿಕೆ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಕರಾವಳಿ ಸಮುದಾಯಗಳಲ್ಲಿ ಹೆಚ್ಚಿನ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ಬೆಳೆಸಲು ಸಹಾಯ ಮಾಡುತ್ತದೆ.
ಮೂರನೆಯದಾಗಿ, ಸಮುದ್ರ ಗಡಿಗಳ ಏಕಪಕ್ಷೀಯ ರಚನೆ, ಆಗಾಗ ಬಂಧನಗಳಿಗೆ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿದೆ. ಮೀನುಗಾರಿಕೆ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಮತ್ತು ಅಕ್ರಮ ಆಕ್ರಮಣಗಳನ್ನು ತಡೆಯಲು ಸಹಾಯವಾಗುವ ವ್ಯವಸ್ಥೆ ಬೇಕಾಗಿದೆ. ಮೀನುಗಾರಿಕೆಯ ಮೇಲೆ ಭಾರತ-ಶ್ರೀಲಂಕಾ ಜಂಟಿ ಕಾರ್ಯ ಗುಂಪು (JWG) ಅಡಿಯಲ್ಲಿ ಜಂಟಿ ಮೀನುಗಾರಿಕೆ ನಿರ್ವಹಣಾ ಪ್ರಾಧಿಕಾರ (JFMA)ವನ್ನು ಸ್ಥಾಪಿಸುವುದು ಇದರ ಒಂದು ಪ್ರಮುಖ ಶಿಫಾರಸು. ಈ ಪ್ರಾಧಿಕಾರವು ಜಿಪಿಎಸ್ ಮತ್ತು ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು ನೈಜ-ಸಮಯದ ಹಡಗು ಟ್ರ್ಯಾಕಿಂಗ್ ಅನ್ನು ಸುಗಮಗೊಳಿಸಬಲ್ಲದು. ಋತುಮಾನೀತ ಮೀನುಗಾರಿಕೆ ಮತ್ತು ಜಂಟಿ ಸಂರಕ್ಷಣಾ ವಲಯಗಳನ್ನು ಅಭಿವೃದ್ಧಿಪಡಿಸುವುದು, ಜಂಟಿ ಗಸ್ತು ನಡೆಸುವುದು ಮತ್ತು ಸಮುದಾಯ ಮಟ್ಟದ ವಿವಾದ ಪರಿಹಾರ ಕಾರ್ಯವಿಧಾನಗಳನ್ನು ರಚಿಸುವುದು. ಈ ಕ್ರಮಗಳು ಪಾರದರ್ಶಕತೆಯನ್ನು ಹೆಚ್ಚಿಸುತ್ತವೆ, ಸಮುದ್ರದ ಮಧ್ಯದ ಮುಖಾಮುಖಿಗಳನ್ನು ಕಡಿಮೆ ಮಾಡುತ್ತವೆ ಮತ್ತು ಎರಡು ರಾಷ್ಟ್ರಗಳ ನಡುವೆ ಪರಸ್ಪರ ಹೊಣೆಗಾರಿಕೆಯನ್ನು ಉತ್ತೇಜಿಸುತ್ತವೆ.
ಇದಷ್ಟೇ ಅಲ್ಲದೆ ಬಲು ಮುಖ್ಯವಾಗಿ, ಬಂಧಿತ ಮೀನುಗಾರರ ಬವಣೆಗಳಾದ ದೀರ್ಘಾವಧಿಯ ಸೆರೆವಾಸಗಳು, ಭಾರೀ ದಂಡಗಳು ಮತ್ತು ದೋಣಿಗಳ ನಷ್ಟವು ಕುಟುಂಬಗಳಿಗೆ ಅಪಾರ ತೊಂದರೆಗಳನ್ನು ಮತ್ತು ರಾಜಕೀಯ ಉದ್ವಿಗ್ನತೆಯನ್ನು ಕೂಡ ಉಂಟುಮಾಡಿರುವುದು ಮಾನವ ಹಕ್ಕುಗಳ ಕಾಳಜಿಯನ್ನು ಹೆಚ್ಚಿಸಿದೆ. ಈ ಸಮಸ್ಯೆಯನ್ನು ಪರಿಹರಿಸಲು, ಬಂಧಿತ ಮೀನುಗಾರರ ನ್ಯಾಯಯುತ ಮತ್ತು ಸಹಾನುಭೂತಿಗಾಗಿ ಭಾರತ ಮತ್ತು ಶ್ರೀಲಂಕಾ ನಡುವೆ ದ್ವಿಪಕ್ಷೀಯ ಮಾನವೀಯ ಪ್ರೊಟೋಕಾಲ್ ಅನ್ನು ಮಾತುಕತೆ ಮಾಡುವುದು ಅತ್ಯಗತ್ಯ.
ಈ ಪ್ರೊಟೋಕಾಲ್‌ನ ಪ್ರಮುಖ ನಿಬಂಧನೆಗಳಲ್ಲಿ ಬಂಧನದ 48 ಗಂಟೆಗಳ ಒಳಗೆ ಕಾನ್ಸುಲರ್ ಪ್ರವೇಶ, ಮೊದಲ ಬಾರಿಗೆ ಅಪರಾಧಿಗಳಿಗೆ ತ್ವರಿತ ವಾಪಸಾತಿ ಮತ್ತು ದೋಣಿ ನಷ್ಟದ ಪ್ರಕರಣಗಳಲ್ಲಿ ಕಾನೂನು ನೆರವು ಮತ್ತು ಪರಿಹಾರಕ್ಕಾಗಿ ಕಾರ್ಯವಿಧಾನಗಳು ಸೇರಿವೆ. ಈ ಕ್ರಮಗಳನ್ನು ಜಾರಿಗೊಳಿಸುವುದರಿಂದ ಅಂತರ್‌ರಾಷ್ಟ್ರೀಯ ಕಾನೂನು ಮಾನದಂಡಗಳನ್ನು ಎತ್ತಿಹಿಡಿಯಬಹುದಾಗಿದೆ ಮತ್ತು ಕಡಲ ವಿವಾದದೊಂದಿಗೆ ಸಂಬಂಧಿಸಿದ ಮಾನವೀಯ ಸಮಸ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದಾಗಿದೆ.
ಹಾಗೆಯೇ, ಕಚ್ಚತೀವ್ ದ್ವೀಪದ ಪೂರ್ಣ ಮರುಪಡೆಯುವಿಕೆ ರಾಜತಾಂತ್ರಿಕವಾಗಿ ಅಸಂಭವವಾಗಿದ್ದರೂ, ಸ್ಥಳೀಯ ಮೀನುಗಾರರ ಜೀವನೋಪಾಯದ ಕಾಳಜಿಗಳನ್ನು ಪರಿಹರಿಸಲು ಸೃಜನಶೀಲ ಪರಿಹಾರಗಳು ಸಹಾಯ ಮಾಡಬಹುದು. ಚೀನಾ ಶ್ರೀಲಂಕಾದ ಹಂಬಂಟೋಟ ಬಂದರನ್ನು ಗುತ್ತಿಗೆ ತೆಗೆದುಕೊಂಡ ಒಪ್ಪಂದದಂತೆ, ಗುತ್ತಿಗೆ ಆಧಾರಿತ ಪ್ರವೇಶ ಮಾದರಿಯನ್ನು ಅನ್ವೇಷಿಸುವುದು ಒಂದು ಸಂಭಾವ್ಯ ವಿಧಾನವಾಗಿದೆ. ಶ್ರೀಲಂಕಾದ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳುವಾಗ ಕಚ್ಚತೀವ್ ಸುತ್ತಲೂ ನಿಯಂತ್ರಿತ ಮೀನುಗಾರಿಕೆ ಮತ್ತು ಬಲೆ ಒಣಗಿಸುವ ಹಕ್ಕುಗಳನ್ನು ಅನುಮತಿಸುವಂತಹ ನಿಬಂಧನೆಗಳನ್ನು ಇದು ಒಳಗೊಂಡಿರಬಹುದು. ಹೆಚ್ಚುವರಿಯಾಗಿ, ಭಾರತೀಯ ಮೀನುಗಾರರಿಗೆ ಕಾಲೋಚಿತ ಪ್ರವೇಶ ಪರವಾನಿಗೆಗಳನ್ನು ನೀಡುವುದು. ಈ ಮೂಲಕ ರಾಜತಾಂತ್ರಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು. ಜಂಟಿ ಕಾರ್ಯ ಪಡೆಯನ್ನು ರಚಿಸಿ ಕಚ್ಚತೀವ್ ಅನ್ನು ಅದರ ನಿಯಂತ್ರಣಕ್ಕೆ ಕೊಡುವುದು ಉತ್ತಮ ಮಾರ್ಗವಾಗಿದೆ.
ಮತ್ತೊಂದು ಸಲಹೆ ಎಂದರೆ, ಮೀನುಗಾರರ ವಿವಾದವು ಕಡಲ ಭದ್ರತೆ ಮತ್ತು ಪ್ರಾದೇಶಿಕ ಸಹಕಾರದ ಮೇಲೆ ವಿಶಾಲವಾದ ಪರಿಣಾಮವನ್ನು ಬೀರಿದೆ. ವಿಶೇಷವಾಗಿ ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಚಟುವಟಿಕೆಯ ಬೆಳಕಿನಲ್ಲಿ, ಕೊಲಂಬೊ ಭದ್ರತಾ ಸಮಾವೇಶ ಮತ್ತು ಃIಒSಖಿಇಅನ ವ್ಯವಸ್ಥೆಯಲ್ಲಿ ಮೀನುಗಾರಿಕೆಯ ಆಡಳಿತವನ್ನು ಸಂಯೋಜಿಸುವುದು ಒಂದು ಕಾರ್ಯಸಾಧ್ಯ ಪರಿಹಾರವಾಗಿದೆ. ಇದರ ಕಾರ್ಯತಂತ್ರದ ಗುರಿಗಳು ನೀಲಿ ಆರ್ಥಿಕ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ಸಮುದ್ರ ಸಂರಕ್ಷಣೆ ಮತ್ತು ಜಾರಿಯಲ್ಲಿ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಮತ್ತು ಕುಶಲಕರ್ಮಿ ಮತ್ತು ಕೈಗಾರಿಕಾ ಮೀನುಗಾರಿಕೆ ಎರಡಕ್ಕೂ ಪ್ರಾದೇಶಿಕ ನಡವಳಿಕೆಯ ಸಂಹಿತೆಯನ್ನು ಅಭಿವೃದ್ಧಿಪಡಿಸುವುದು ಒಳಗೊಂಡಿರಬೇಕು. ಈ ಪ್ರಯತ್ನಗಳು ಈ ಸಮಸ್ಯೆಯನ್ನು ದ್ವಿಪಕ್ಷೀಯ ವಿವಾದದಿಂದ ಪ್ರಾದೇಶಿಕ ಸಹಯೋಗಕ್ಕಾಗಿ ಒಂದು ವೇದಿಕೆಯಾಗಿ ಉನ್ನತೀಕರಿಸುತ್ತವೆ. ಈ ಪ್ರದೇಶದಲ್ಲಿ ದೀರ್ಘಕಾಲೀನ ಸ್ಥಿರತೆ ಮತ್ತು ಸುಸ್ಥಿರತೆಯನ್ನು ಬೆಳೆಸುತ್ತವೆ.
ಭಾರತ-ಶ್ರೀಲಂಕಾ ಮೀನುಗಾರರ ವಿವಾದವು ಪ್ರತಿಕ್ರಿಯಾತ್ಮಕ ಸಂಘರ್ಷದಿಂದ ಪೂರ್ವಭಾವಿ ಸಹಯೋಗದ ಆಡಳಿತಕ್ಕೆ ಬದಲಾಗಬೇಕು. ಇದು ಕಾನೂನು ಸಾರ್ವಭೌಮತ್ವ, ಪರಿಸರ ಸುಸ್ಥಿರತೆ ಮತ್ತು ಮಾನವೀಯ ಅಗತ್ಯತೆಯ ನಡುವಿನ ಸಂಕೀರ್ಣ ಪರಸ್ಪರ ಕ್ರಿಯೆಯನ್ನು ಪರಿಹರಿಸುತ್ತದೆ. ಗಡಿ ಅಸ್ಪಷ್ಟತೆ, ಪರಿಸರ ಒತ್ತಡ, ಬಂಧನಗಳು ಮತ್ತು ಭೌಗೋಳಿಕ ರಾಜಕೀಯ ಒಳಹರಿವುಗಳಂತಹ ನಿರಂತರ ಸಮಸ್ಯೆಗಳು, ಹಿಂದೊಮ್ಮೆ ಹಂಚಿಕೊಂಡ ಮೀನುಗಾರಿಕೆ ಸ್ಥಳಗಳನ್ನು ಉದ್ವಿಗ್ನತೆ ಮತ್ತು ನಷ್ಟದ ಸ್ಥಳವಾಗಿ ಪರಿವರ್ತಿಸಿವೆ. ಆದರೂ, ಈ ತೊಂದರೆಗೊಳಗಾದ ಸಮುದ್ರ ಪ್ರದೇಶದಲ್ಲಿ ಸಹಕಾರಕ್ಕೆ ಅವಕಾಶವಿದೆ.
ನಾವಿಲ್ಲಿ ಅರ್ಥ ಮಾಡಿಕೊಳ್ಳಬೇಕಾದುದು ಏನೆಂದರೆ, ಭಾರತ ಶ್ರೀಲಂಕಾ ಮೀನುಗಾರರ ವಿಷಯವು ಕೇವಲ ಒಂದು ವಿವಾದ ಇದು ಸಮಸ್ಯೆಯಲ್ಲ, ಕೇಂದ್ರ ಸರಕಾರ ಮತ್ತು ತಮಿಳುನಾಡು ಸರಕಾರದ ಸಂಪೂರ್ಣ ಸಹಯೋಗದೊಂದಿಗೆ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಉಪಯೋಗಿಸಿದರೆ ನಾವು ಖಂಡಿತವಾಗಿಯೂ ಮೀನುಗಾರರು ಗಡಿದಾಟದಂತೆ ನೋಡಿಕೊಳ್ಳಬಹುದು. ಅಂತಿಮವಾಗಿ, ಮುಂದಿನ ಹಾದಿಯು ರಾಷ್ಟ್ರೀಯ ಹಿತಾಸಕ್ತಿಗಳನ್ನು ಮಾನವ ಘನತೆಯೊಂದಿಗೆ ಸಮನ್ವಯಗೊಳಿಸಬೇಕು, ಸಮುದ್ರ ಗಡಿಗಳು ಸಹಬಾಳ್ವೆ, ಸ್ಥಿತಿಸ್ಥಾಪಕತ್ವ ಮತ್ತು ಹಂಚಿಕೆಯ ಸಮೃದ್ಧಿಗೆ ಅಡೆತಡೆಗಳಾಗದಂತೆ ನೋಡಿಕೊಳ್ಳಬೇಕು.







