ದುಬಾರಿಯಾದ ಹೂವಿನ ಹಾರ, ಗ್ರಾಹಕರ ಜೇಬಿಗೆ ಭಾರ!
ಮಳೆ ಕೊರತೆಯಿಂದ ಹೂವಿನ ಬೆಲೆ ಏರಿಕೆ

ನಿಡಗುಂದಿ: ಮಳೆ ಕೊರತೆಯಿಂದ ಹೂವಿನ ಉತ್ಪಾದನೆ ಕುಂಠಿತಗೊಂಡ ಪರಿಣಾಮ ಹೂವುಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಭಾರವಾಗಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಹೂವಿನ ಮಾರುಕಟ್ಟೆಯಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆದರೂ, ಹೂವಿನ ಹಾರಗಳ ಬೆಲೆ ರೂ.100ರಿಂದ ರೂ.400ರವರೆಗೆ ತಲುಪಿದೆ.
ತಾಲೂಕಿನ ಸಮೀಪದ ಯಲಗೂರ, ಬೂದಿಹಾಳ, ಆಲಮಟ್ಟಿ ಹಾಗೂ ಚಂದ್ರಗಿರಿ ಸೇರಿದಂತೆ ವಿವಿಧೆಡೆ ಪ್ರಸಿದ್ಧ ದೇವಸ್ಥಾನಗಳಿರುವುದರಿಂದ ಅಮಾವಾಸ್ಯೆ ಪ್ರಯುಕ್ತ ದೇವರ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಿಶೇಷ ಪೂಜೆ ಸಲ್ಲಿಸಿ, ದೇವರಿಗೆ ಹೂವು ಅರ್ಪಿಸುವ ಸಂಪ್ರದಾಯದ ಹಿನ್ನೆಲೆಯಲ್ಲಿ ಪಟ್ಟಣದ ಹೂವಿನ ಅಂಗಡಿಗಳು ಹಾಗೂ ರಸ್ತೆಬದಿಯ ಮಳಿಗೆಗಳಲ್ಲಿ ಬೆಳಗ್ಗೆಯಿಂದಲೇ ಖರೀದಿ ಭರಾಟೆ ಕಂಡುಬಂತು.
ವಿವಿಧ ಹೂವುಗಳಿಗೆ ವಿವಿಧ ದರ: ದುಂಡುಮಲ್ಲಿಗೆ, ಸಂಪಿಗೆ, ಚೆಂಡುಹೂವು, ಸೇವಂತಿಗೆ ಹಾಗೂ ಗುಲಾಬಿ ಹೂವುಗಳಿಗೆ ಬೇಡಿಕೆ ಕಂಡುಬಂತು. ಪ್ರಸ್ತುತ ಚೆಂಡುಹೂವು ಕೆಜಿಗೆ 40ರಿಂದ 50 ರೂ., ಸೇವಂತಿಗೆ ಕೆಜಿಗೆ 60ರಿಂದ 70 ರೂ. ಹಾಗೂ ಮಲ್ಲಿಗೆ ಒಂದು ಮೊಳಕ್ಕೆ 20ರಿಂದ 30 ರೂ.ರಂತೆ ಮಾರಾಟವಾಗುತ್ತಿದೆ. ಗುಲಾಬಿ ಹಾರಗಳಿಗೆ 200ರಿಂದ 300 ರೂ. ಹಾಗೂ ವಿವಿಧ ಬಗೆಯ ಹೂವಿನ ಹಾರಗಳಿಗೆ 100ರಿಂದ 400 ರೂ.ರವರೆಗೆ ದರವಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಸಾರಿಗೆ ವೆಚ್ಚವೂ ಹೊರೆ: ಮಳೆ ಕೊರತೆಯಿಂದ ಸ್ಥಳೀಯವಾಗಿ ಹೂವಿನ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರಿಗಳು ಬೆಂಗಳೂರು, ಸೋಲಾಪುರ, ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ವಿವಿಧ ನಗರಗಳಿಂದ ಹೂವುಗಳನ್ನು ಖರೀದಿಸಿ ತರುತ್ತಿದ್ದಾರೆ. ದೂರದ ಊರುಗಳಿಂದ ಹೂವುಗಳನ್ನು ಸಾಗಿಸಲು ಹೆಚ್ಚಿನ ವೆಚ್ಚವಾಗುತ್ತಿದ್ದು, ಬೆಲೆ ಏರಿಕೆಯ ನಡುವೆಯೂ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ಸ್ಥಳೀಯವಾಗಿ ಹೂವಿನ ಉತ್ಪಾದನೆ ಸಮೃದ್ಧವಾಗಿದ್ದರೆ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ಮಳೆಯ ಅಭಾವದಿಂದ ಹೊರಗಿನ ಮಾರುಕಟ್ಟೆಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ವ್ಯಾಪಾರಿಗಳ ಖರ್ಚು ಹೆಚ್ಚಾಗಿ ಲಾಭದ ಪ್ರಮಾಣ ಕಡಿಮೆಯಾಗಿದೆ.
ಅಮಾವಾಸ್ಯೆ ಪ್ರಯುಕ್ತ ದೇವರಿಗೆ ಹೂವು ಅರ್ಪಿಸುವುದು ಸಂಪ್ರದಾಯ. ಆದರೆ ಮಳೆ ಕೊರತೆಯಿಂದ ಹೂವಿನ ಬೆಲೆ ಹೆಚ್ಚಾಗಿದೆ. ಹೂವಿನ ಹಾರಗಳ ಬೆಲೆ 100ರಿಂದ 400 ರೂ.ರವರೆಗೆ ಇರುವುದರಿಂದ ಸಾಮಾನ್ಯ ಜನರಿಗೂ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆದರೂ ದೇವರ ಪೂಜೆಗಾಗಿ ಹೂವು ಖರೀದಿಸುವುದು ಅನಿವಾರ್ಯವಾಗಿದೆ.
-ಸಿದ್ದಪ್ಪ ಪೂಜಾರಿ ಗ್ರಾಹಕ,
ಬಾಗಲಕೋಟೆ
ಮಳೆ ಕೊರತೆಯಿಂದ ಹೂವಿನ ಉತ್ಪಾದನೆ ಕಡಿಮೆಯಾಗಿದೆ. ಬೆಂಗಳೂರು, ಸೋಲಾಪುರ, ಬಾಗಲಕೋಟೆ ಹಾಗೂ ವಿಜಯಪುರದಿಂದ ಹೂವುಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ. ಸಾರಿಗೆ ವೆಚ್ಚವೂ ಹೆಚ್ಚಾಗಿದ್ದು, ಬೆಲೆ ಏರಿಕೆಯಾದರೂ ನಿರೀಕ್ಷಿತ ಲಾಭ ಸಿಗುತ್ತಿಲ್ಲ. ಸ್ಥಳೀಯವಾಗಿ ಹೂವು ಬೆಳೆದರೆ ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತಿತ್ತು.
-ಮಾಂತೇಶ್ ಹೂಗಾರ್,
ಹೂವಿನ ವ್ಯಾಪಾರಿ






