ಮತ್ತೊಂದು ಕೊಡಲಿಯೇಟು!

ಸ್ಥಳೀಯವಾಗಿ ಕೆಲಸ ಸಿಗಲಿ, ಪಡಿತರ, ಸಾಮಾಜಿಕ ಭದ್ರತೆ ಇವೆಲ್ಲ ಸಿಗಲಿ, ಮಕ್ಕಳಿಗೆ ಅಂಗನವಾಡಿ, ಶಾಲೆಗಳು ಗ್ರಾಮದ ಸುರಕ್ಷಿತ ವಾತಾವರಣದಲ್ಲಿಯೇ ಆಗುತ್ತಿರಲಿ ಎಂದೆಲ್ಲ ಆಶಿಸಿ ಸಾಮಾಜಿಕ ಹೋರಾಟಗಾರರು ಬಹಳ ಅಧ್ಯಯನ, ಹೋರಾಟಗಳ ಮೂಲಕ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾನೂನು ಬರುವಂತೆ ಮಾಡಿದ್ದರು. ಆದರೆ ಕೆಲಸಗಾರರಿಗೆ ಕೆಲಸ ಕೇಳುವುದು ಹಕ್ಕಾಗಿ ಸಿಕ್ಕ ಕಾನೂನಿನ ರೆಕ್ಕೆ ಪುಕ್ಕಗಳನ್ನು ಕತ್ತರಿಸುತ್ತ ಸರಕಾರವು ಆ ಹಕ್ಕನ್ನೀಗ ಕೆಲಸ ಕೊಡುವ ಸರಕಾರದ ಹಕ್ಕನ್ನಾಗಿ ಮಾಡಿಕೊಳ್ಳಹೊರಟಿದೆ.
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನಿಯಮಗಳಲ್ಲಿ ಮತ್ತೊಮ್ಮೆ ಬದಲಾವಣೆಯನ್ನು ತಂದು ಸರಕಾರ ಕಾನೂನನ್ನು ಬೇಗ ಸಾಯಿಸಲು ಮತ್ತೊಂದೇಟು ಕೊಟ್ಟಿದೆ. ಉದ್ಯೋಗ ಖಾತರಿಗಾಗಿ ಮೀಸಲಿಟ್ಟಿರುವ ಬಜೆಟ್‌ನ ಶೇ. 60 ಭಾಗವನ್ನಷ್ಟೇ ವರ್ಷದ ಮೊದಲ ಭಾಗದಲ್ಲಿ ಖರ್ಚು ಮಾಡಬೇಕೆನ್ನುವುದು ಸರಕಾರದ ಹೊಸ ನಿಯಮ. ಬೇಡಿಕೆ ಆಧಾರಿತ ಯೋಜನೆಯಾಗಿರುವಾಗ ಇದಕ್ಕೆ ಇಷ್ಟನ್ನೇ ಖರ್ಚು ಮಾಡುವುದು ಎಂದು ಖರ್ಚಿನ ಮೇಲೆ ಸರಕಾರ ಕ್ಯಾಪ್ ಹಾಕುತ್ತದಾದರೂ ಹೇಗೆ? ಎಂದು ನಾಗರಿಕ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ. ಮೊದಲನೆಯದಾಗಿ ಬಜೆಟನ್ನೇ ಕಡಿಮೆ ಇಡುವುದು, ಅವಷ್ಟೂ ಖರ್ಚಾದ ನಂತರ ಸ್ವಲ್ಪವೇ ಹೆಚ್ಚುವರಿ ಹಣದ ಬಿಡುಗಡೆ, ವರ್ಷದ ಕಡೆಯಲ್ಲಿ ಮತ್ತೂ ಬಾಕಿ ಉಳಿಸಿಕೊಳ್ಳುವುದು ಹೀಗೆ ಮಾಡುತ್ತ ಸರಕಾರವು ಉದ್ಯೋಗ ಖಾತರಿಯಲ್ಲಿ ಕೆಲಸ ಅರಸಿ ಬರುವವರನ್ನು ಬಾರದಂತೆ ಹಿಂದಕ್ಕೆ ಸರಿಸುವ ಹೊಸ ಹೊಸ ಉಪಾಯಗಳನ್ನು ಹುಡುಕಿ ಹಾಕುತ್ತಿದೆ.
ಉದ್ಯೋಗ ಖಾತರಿ ಕಾನೂನನ್ನು ಸಾಯಿಸಲು ಏನೆಲ್ಲ ಪ್ರಯತ್ನಗಳನ್ನು ಮಾಡಿದರೂ ಮತ್ತೂ ಜನರು ಅದನ್ನೇ ನಂಬಿ ಕೆಲಸ ಹುಡುಕಿ ಮುಂದೆ ಬರುತ್ತಿರುವುದು, ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಈ ವರ್ಷವಂತೂ ಒಟ್ಟೂ ಕೆಲಸ ಕೇಳಿ ಬರುವವರ ಸಂಖ್ಯೆಯ ಶೇ. 68.5 ಜನಕ್ಕೆ ಮಾತ್ರ ಕೆಲಸ ಕೊಡುವಷ್ಟು ಬಜೆಟ್ ಮಾಡಿದೆ. ಅಂದರೆ ಕಳೆದ ವರ್ಷ ಎಷ್ಟು ಜನರು ಕೆಲಸ ಪಡೆದಿದ್ದರೋ ಆ ಸಂಖ್ಯೆಯ ಶೇ. 68 ಜನಕ್ಕೆ ಮಾತ್ರ. ಅಷ್ಟು ಸಾಲದೆಂಬಂತೆ ಈಗ ಒಟ್ಟು ಬಜೆಟ್‌ನ ಶೇ. 60 ಭಾಗವನ್ನು ಮಾತ್ರ ವರ್ಷದ ಮೊದಲಾರ್ಧ ಭಾಗದಲ್ಲಿ- ಅಂದರೆ ಸೆಪ್ಟಂಬರ್‌ವರೆಗೆ ಖರ್ಚು ಮಾಡಬಹುದು. ಅಂದರೆ 86,000 ಕೋಟಿ ರೂ.ಗಳಲ್ಲಿ 51,000 ಕೋಟಿ ರೂ.ಗಳನ್ನು ಮಾತ್ರ ಸೆಪ್ಟಂಬರ್‌ವರೆಗೆ ಖರ್ಚು ಮಾಡಬೇಕು ಎಂದು ಹಣಕಾಸು ಸಚಿವಾಲಯದಿಂದ ಪಂಚಾಯತ್ ರಾಜ್ ಸಚಿವಾಲಯಕ್ಕೆ ನಿರ್ದೇಶನ ಬಂದಿರುವುದರ ಅರ್ಥವಾದರೂ ಏನು?
ಕಳೆದ ವರ್ಷದ ಬಾಕಿಯೇ 21,000 ಕೋಟಿ ರೂ. ಇವೆ. ಬಜೆಟ್‌ನಲ್ಲಿ ಅಷ್ಟನ್ನು ಕಳೆದರೆ 30,600 ಕೋಟಿ ರೂ. ಮಾತ್ರ ಈ ವರ್ಷದ ಸೆಪ್ಟಂಬರ್‌ವರೆಗೆ ಖರ್ಚು ಮಾಡಲು ಹಣ ಉಳಿದಂತಾಯಿತು. ಇದರರ್ಥವೇನು? 30,600 ಕೋಟಿ ರೂ. ಖರ್ಚು ಆಗುವವರೆಗೆ ಮಾತ್ರ ನಾವು ಕೆಲಸ ಕೊಡುತ್ತೇವೆ. ಆ ನಂತರ ಪಂಚಾಯತ್‌ಗೆ ಕೆಲಸ ಕೇಳಿ ನೀವು ಅರ್ಜಿ ಹಾಕಬೇಡಿ ಎಂದೇ? ಇತ್ತೀಚಿನ ಲೆಕ್ಕದ ಪ್ರಕಾರ ಜೂನ್ 8ರ ಹೊತ್ತಿಗೆ ಕೇಂದ್ರ ಸರಕಾರವು 24,485 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅಂದರೆ ಇನ್ನುಳಿದ ಮೂರು ತಿಂಗಳು ಖರ್ಚುಮಾಡಲು ಉಳಿದಿರುವ ಹಣವೆಂದರೆ 6,115 ಕೋಟಿ ರೂ. ಮಾತ್ರ! ಹದಿನೈದು ದಿನಗಳಲ್ಲಿ ವೇತನ ಪಾವತಿ ಆಗದಿರುವಾಗ, ಎಂದೋ ಮಾಡಿದ ಕೆಲಸಕ್ಕೆ ಎಂದೋ ವೇತನ ಪಾವತಿ ಆಗುತ್ತಿರುವಾಗ, ಇಡೀ ದೇಶದಲ್ಲಿ ಇಷ್ಟು ಹಣ ಯಾವಾಗ ಖರ್ಚಾಗುತ್ತದೆ, ಯಾವಾಗಿನಿಂದ ತಾವು ಕೆಲಸಕ್ಕೆ ಅರ್ಜಿ ಹಾಕಬಾರದು ಎಂದು ಉದ್ಯೋಗ ಅರಸಿ ಬರುವವರಿಗೆ ಗೊತ್ತಾಗುವುದಾದರೂ ಎಂತು?
ಕೇಂದ್ರ ಸರಕಾರವು ಕಾನೂನಿನ ನಿಯಮಗಳಲ್ಲಿ ಇಂತಹ ಹೊಸ ಹೊಸ ನೀತಿಗಳನ್ನು ಜಾರಿಗೊಳಿಸುವ ಮೊದಲು ವಿಚಾರ ಮಾಡಬೇಕು, ಇಲ್ಲಿ ಜನರು ಉದ್ಯೋಗ ಕೇಳುವುದು ಉದ್ಯೋಗದಾತ ಸರಕಾರದಲ್ಲಿ ಹಣವಿದೆಯೇ, ಕೊಡುವಿರೇ ಎಂದು ಕೇಳಿ ಅಲ್ಲ, ಇದು ಕಾನೂನು. ಉದ್ಯೋಗ ಕೇಳುವುದು ಕಾನೂನಾತ್ಮಕವಾಗಿ ಅವರ ಹಕ್ಕಾಗಿದೆ. ಇಡೀ ದೇಶದಲ್ಲಿರುವ ಕಾನೂನುಗಳಲ್ಲಿ ಕೆಲಸಗಾರರಿಗೆ ಕೆಲಸ ಮಾಡುವ ಹಕ್ಕನ್ನು ಕೊಟ್ಟಿರುವ ಒಂದೇ ಕಾನೂನಿದು. ಅದನ್ನೇ ಸರಕಾರ ಉಪೇಕ್ಷೆ ಮಾಡುತ್ತದೆಂದರೆ? ತನ್ನದೇ ಕಾನೂನನ್ನು ತಾನೇ ಮುರಿಯುತ್ತ ಹೋಗುವ ಸರಕಾರ ಸಂವಿಧಾನದ ಬಗ್ಗೆ ಮಾತಾಡುವ ನೈತಿಕತೆಯನ್ನೆಲ್ಲಿ ಉಳಿಸಿಕೊಳ್ಳುತ್ತದೆ?
ಒಟ್ಟೂ ಬಜೆಟ್‌ನ ಶೇ. 60ನ್ನು ಮಾತ್ರ ಅರ್ಧ ವರ್ಷದಲ್ಲಿ ಖರ್ಚು ಮಾಡಬೇಕೆಂದು ಬಯಸುವ ಸರಕಾರ ಇಡೀ ದೇಶದಲ್ಲಿ ಕೆಲಸ ಕೇಳಿ ಬರುವ ರೀತಿ ಒಂದೇ ರೀತಿಯಾಗಿದೆ ಎಂದುಕೊಂಡಿದೆಯೇ? ಉದಾಹರಣೆಗೆ ಹೇಳ ಬೇಕೆಂದರೆ, ಕರ್ನಾಟಕದ ಬಹುಭಾಗ ಬರಗಾಲಪೀಡಿತ ಪ್ರದೇಶ. ಕರ್ನಾಟಕದ ಮಲೆನಾಡಿನಲ್ಲೇ ಜನರು ಈಗಾಗಲೇ ಶೇ. 75 ಹಾಜರಾತಿಗಳನ್ನು ಮುಗಿಸಿದ್ದಾರೆ. ಇನ್ನು ಬಿಜಾಪುರ, ಕಲಬುರಗಿಯಲ್ಲಿ ಸರಿಯಾಗಿ ಕೆಲಸ ಕೊಟ್ಟಿದ್ದರೆ ಎಷ್ಟು ಹಾಜರಾತಿ ಮುಗಿಸಿರಬಹುದು? ಆಂಧ್ರ ಪ್ರದೇಶದ ಎ.ಎಸ್ಸಾರ್ ಜಿಲ್ಲೆಯಲ್ಲಿ ಬುಡಕಟ್ಟು ಜನರು ಶೇ. 80 ಹಾಜರಾತಿಯನ್ನು ಮುಗಿಸಿಬಿಟ್ಟಿದ್ದಾರಂತೆ. ವರ್ಷದ ಉದ್ಯೋಗ ಖಾತರಿಯ ಶೇ. 55 ಕೆಲಸ ಆಗಿಬಿಟ್ಟಿದೆ ಈಗಾಗಲೇ..
ಬಜೆಟ್ ಎಂದರೆ ಬರುವ ದಿನಗಳಿಗಾಗಿ ಹಣ ಇರಿಸುವುದು. ಹೊಸ ವರ್ಷದಲ್ಲಿ ಕೆಲಸ ಸೃಷ್ಟಿಗಾಗಿ ಹಣ ಇರಿಸುವುದು. ಆದರೆ ಪ್ರತಿವರ್ಷವೂ ಬಜೆಟ್‌ನ ಶೇ. 15-20 ಹಣವು ಹಳೆಯ ಬಾಕಿಗಾಗಿಯೇ ಹೋಗುತ್ತಿರುವುದು ಉದ್ಯೋಗ ಖಾತರಿಯಲ್ಲಿ ಪದ್ಧತಿಯಾಗಿ ಹೋಗಿದೆ. ಅಷ್ಟಾದರೂ ಮರುವರ್ಷ ಬಜೆಟ್‌ನಲ್ಲಿ ಹೆಚ್ಚಿನ ಹಣ ಇರಿಸುತ್ತಿಲ್ಲ ಸರಕಾರ. ಅಷ್ಟು ಹಣ ಹಳೆಯ ಬಾಕಿಗೆ ಹೋಗುತ್ತಿರುವುದು ಗೊತ್ತಿದ್ದೂ ಖರ್ಚುಮಾಡಬೇಕಾದ ಹಣಕ್ಕೆ ಇಷ್ಟೇ ಖರ್ಚು ಮಾಡಬೇಕೆಂದು ಗೆರೆ ಹಾಕುವುದು ಎಷ್ಟು ಸರಿ?
ಕಾನೂನಿನ ಆಶಯದ ಪ್ರಕಾರ ಕೂಲಿಕಾರ ಕೆಲಸ ಕೇಳುವುದು ಅವರ ಹಕ್ಕು. ಆದರೀಗ ಇಷ್ಟೇ ಹಣ ಖರ್ಚುಮಾಡಬೇಕೆಂದು ಕ್ಯಾಪ್ ಹಾಕಿದ್ದು ಕೇಳುವವರ ಕೈಯಿಂದ ಕಸಿದು ಕೆಲಸ ಕೊಡುವವರ ಕೈಯಲ್ಲಿ ಹಕ್ಕು ಕೊಟ್ಟಂತಾಗುತ್ತದೆ.
ಈ ರೀತಿ ಇಷ್ಟಿಷ್ಟೇ ಹಣ ಖರ್ಚು ಮಾಡಬೇಕೆಂದು ಗುರಿ ಇರಿಸಿಕೊಂಡರೆ ಬಾಕಿ ಉಳಿಯುವುದಿಲ್ಲ ಎಂದು ಕೇಂದ್ರದ ಲೆಕ್ಕಾಚಾರ. ಈಗ ಕೂಲಿ ಬಾಕಿ ಇರುವುದಾದರೂ ಯಾತಕ್ಕೆ? ಕಲ್ಪನೆಗಿಂತ ಅಷ್ಟು ಹೆಚ್ಚು ಜನರು ಕೆಲಸಕ್ಕೆ ಬಂದಿರುವುದರಿಂದಲ್ಲವೇ? ಅಷ್ಟು ಜನರು ಕೆಲಸಕ್ಕೆ ಬರಬಾರದೆಂದು ನೇರವಾಗಿ ಹೇಳಿದಂತಾಯಿತಲ್ಲ ಇದು?
ಇಂಥ ಒಂದು ಮೂಲ ಆಶಯಕ್ಕೇ ಧಕ್ಕೆ ತರುವಂಥ ನಿಯಮ ಹಾಕುವ ಮೊದಲು ಸರಕಾರ ಸಾರ್ವಜನಿಕ ಸಮಾಲೋಚನೆ ಹೋಗಲಿ, ಪರಿಣತರ ಜೊತೆ ಸಂವಾದ ಮಾಡಿತೇ? ರಾಜ್ಯ ಸರಕಾರಗಳೊಂದಿಗೆ ಮಾತುಕತೆ ಮಾಡಿತೇ? ಇಲ್ಲ. ಕಾನೂನನ್ನು ಲಾಗೂ ಮಾಡುವ, ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕಾದ ಪಂಚಾಯತ್‌ಗಳೊಂದಿಗೆ ಮಾತುಕತೆ ನಡೆಸಿತೇ? ಇಲ್ಲ. ಹೊಸ ಹೊಸ ನಿಯಮಗಳನ್ನು ತಂದಾಗ, ಕಾನೂನಿನ ಆಶಯವನ್ನು ಮುರಿದಾಗ ಜನರಿಗೆ ಉತ್ತರ ಹೇಳಬೇಕಾದ ಸ್ಥಾನದಲ್ಲಿ ಇರುವವರು ಅವರು. ಈಗಾಗಲೇ ಎನ್ನೆಮ್ಮೆಮ್ಮೆಸ್ ಡಿಜಿಟಲೀಕರಣದ ಕೋಟಲೆಗಳನ್ನು ಪಂಚಾಯತ್ ನೌಕರರು ಎದುರಿಸುತ್ತಿದ್ದಾರೆ. ಇಂಥದ್ದೊಂದು ಕಾನೂನನ್ನು ತರಲು ಸುದೀರ್ಘ ಹೋರಾಟ ಮಾಡಿದವರನ್ನು ಕೇಳಿತೇ? ಅದೂ ಇಲ್ಲ. ಸ್ಥಳೀಯವಾಗಿ ಕೆಲಸ ಕೊಡುವಂಥ ಕಾನೂನೊಂದು ಬೇಕು, ಆಹಾರ ಭದ್ರತೆ, ಸಾಮಾಜಿಕ ಭದ್ರತೆಗೆ ಅದೆಷ್ಟು ಸಹಕಾರಿ ಎಂದು ಅಧ್ಯಯನಗಳನ್ನು ಮಾಡಿ ಸರಕಾರಕ್ಕೆ ಒತ್ತಾಯಿಸಿದವರು ಅವರು. ಅವರ ಒತ್ತಾಯದಿಂದ ಬಂದಿರುವ ಕಾನೂನಿನ ರೆಕ್ಕೆ ಪುಕ್ಕಗಳನ್ನು ಕತ್ತರಿಸಿ ಒಗೆಯುವಾಗ, ಅವರಿಗೆ ಕೇಳುವುದು ಬೇಡ, ಕೊನೆಗೆ ಒಂದು ಮಾತು ತಿಳಿಸುವುದಾದರೂ ಸರಕಾರದ ಕರ್ತವ್ಯವಾಗಿರಬೇಕಿತ್ತು.
ಹೊಸ ಬದಲಾವಣೆಯ ನೇರ ಪರಿಣಾಮ ಬೀರುವುದು ಉದ್ಯೋಗ ಖಾತರಿಯನ್ನು ಬಲವಾಗಿ ನಂಬಿರುವ ಬರಪೀಡಿತ ಪ್ರದೇಶದ ಜನ, ಬಡತನದೊಳಗೆ ಬೇಯುತ್ತಿರುವ ಬುಡಕಟ್ಟು ಜನವರ್ಗದವರೇ ಹೊರತು ಇನ್ನಾರಲ್ಲ. ತಮ್ಮ ಹಳ್ಳಿಗಳಲ್ಲೇ ಸಿಗುವ ಕೆಲಸವನ್ನು ಬಿಟ್ಟು ದೂರದೂರಿಗೆ ವಲಸೆ ಹೋಗಲು ಇಷ್ಟು ಪ್ರಚೋದನೆ ಸಾಕಲ್ಲವೇ?







