ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರನ್ನು ಕೈ ಬಿಡಲು ನಡೆಯುತ್ತಿದೆಯೆ ಅಕ್ರಮ?

ಸಾಂದರ್ಭಿಕ ಚಿತ್ರ | Photo credit : PTI
ಬೆಂಗಳೂರು, ಅ.6: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮ್ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ಅಕ್ರಮ ನಡೆಯುತ್ತಿದೆಯೆ? ಎಂಬ ಅನುಮಾನಗಳು ಬಲವಾಗಿ ಕೇಳಿ ಬರುತ್ತಿದೆ.
ಜಯನಗರ ವಿಧಾನಸಭಾ ಕ್ಷೇತ್ರವನ್ನು ಸಚಿವ ರಾಮಲಿಂಗಾ ರೆಡ್ಡಿ ಪ್ರತಿನಿಧಿಸುತ್ತಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಜಯನಗರ ಕ್ಷೇತ್ರವನ್ನು ತಮ್ಮ ಪುತ್ರಿ ಸೌಮ್ಯಾ ರೆಡ್ಡಿಗೆ ಬಿಟ್ಟುಕೊಟ್ಟು ಅವರು ಸಮೀಪದ ಬಿ.ಟಿ.ಎಂ.ಲೇಔಟ್ ಕ್ಷೇತ್ರಕ್ಕೆ ತೆರಳಿದ್ದರು. 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸೌಮ್ಯಾರೆಡ್ಡಿ ಮೊದಲ ಬಾರಿ ಗೆಲುವು ದಾಖಲಿಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರಬಲ ಸ್ಪರ್ಧೆ ಒಡ್ಡಿದ್ದರು.
ಆದರೆ 2023ರ ಚುನಾವಣೆಯಲ್ಲಿ ಸೌಮ್ಯರೆಡ್ಡಿ ವಿರುದ್ಧ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಕೇವಲ 16ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ನಡೆಯುತ್ತಿರುವ ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಗುರುಪ್ಪನಪಾಳ್ಯ ವಾರ್ಡ್ನ 38,934 ಮುಸ್ಲಿಂ ಮತದಾರರಲ್ಲಿ 22,178 ಮಂದಿ—ಸುಮಾರು 57%—ASDDO ವರ್ಗದಲ್ಲಿ ಗುರುತಿಸಲ್ಪಟ್ಟಿದ್ದಾರೆ ಅಥವಾ ಪರಿಶೀಲನೆಗಾಗಿ ನೋಟಿಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ದಶಕಗಳಿಂದ ಇಲ್ಲಿ ನೆಲೆಸಿರುವ ಮತದಾರರಿಗೆ ಬಿಎಲ್ ಒ ಮೂಲಕ ಚುನಾವಣಾ ಆಯೋಗ ನೋಟಿಸ್ ನೀಡಿರುವುದು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನೇಕ ನಿವಾಸಿಗಳು ತಾವು ದಶಕಗಳಿಂದ ಈ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಿದ್ದರೂ, ಇದೀಗ ಹೆಸರು ಹೊಂದಾಣಿಕೆಯಾಗದಿರುವುದು, ಪೋಷಕರ ವಯಸ್ಸಿನಲ್ಲಿನ ವ್ಯತ್ಯಾಸ ಮತ್ತು progeny mapping ಸೇರಿದಂತೆ ವಿವಿಧ ಕಾರಣಗಳಿಗಾಗಿ ನೋಟಿಸ್ಗಳನ್ನು ಎದುರಿಸುತ್ತಿರುವುದಾಗಿ ಹೇಳುತ್ತಿದ್ದಾರೆ.
ಆತಂಕಕ್ಕೆ ಕಾರಣವೇನು?:
ಆತಂಕದ ಪ್ರಮುಖ ವಿಷಯವೆಂದರೆ ಈ ವ್ಯತ್ಯಾಸಗಳನ್ನು ಪರಿಹರಿಸಲು ಸಾಧ್ಯವಾಗದಿದ್ದರೆ ಈ ಮತದಾರರ ಪರಿಸ್ಥಿತಿ ಏನಾಗುತ್ತದೆ ಎಂಬುದು. ನೋಟಿಸ್ಗಳಿಗೆ ಸಂಬಂಧಿಸಿದಂತೆ ಸಹಾಯ ಪಡೆಯಲು ಪ್ರಯತ್ನಿಸಿದಾಗ ಬಿಎಲ್ಒಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮುಸ್ಲಿಮ್ ಮತದಾರರಿಗೆ ನೋಟಿಸ್ ಬರುತ್ತಿರುವುದು ಉದ್ದೇಶ ಪೂರ್ವಕವೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಹಿಂದೆ ೨೦೧೮ರ ಚುನಾವಣಾ ಫಲಿತಾಂಶ ದ ಕುರಿತು ಸಂಸದ ತೇಜಸ್ವಿ ಸೂರ್ಯ ಗುರಪ್ಪನ ಪಾಳ್ಯದ ಮುಸ್ಲಿಮ್ ಮತದಾರರನ್ನು ಉಲ್ಲೇಖಿಸಿ ಮಾಡಿದ ಟ್ವೀಟ್ ಹಾಗು ಈಗ ಅದೇ ಪ್ರದೇಶದ ಮುಸ್ಲಿಮ್ ಮತದಾರರಿಗೆ ದೊಡ್ಡ ಪ್ರಮಾಣದಲ್ಲಿ ನೋಟಿಸ್ ಬಂದಿರುವುದು ಕಾಕತಾಳೀಯವೇ ಎಂಬ ಪ್ರಶ್ನೆಯೂ ಎದುರಾಗಿದೆ.
ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್ ಏನು?
2018ರಲ್ಲಿ ನಡೆದ ಜಯನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಈ ಗೆಲುವಿನ ಬಳಿಕ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಜಯನಗರದಲ್ಲಿ ಬಿಜೆಪಿಯ ಸೋಲಿಗೆ “ಮುಸ್ಲಿಮ್ ಮತಗಳ ಸಂಪೂರ್ಣ ಕ್ರೋಢೀಕರಣ” ಕಾರಣ ಎಂದಿದ್ದರು. ಇದಕ್ಕಾಗಿ ಅವರು ವಿಶೇಷವಾಗಿ ಗುರುಪ್ಪನಪಾಳ್ಯ ವಾರ್ಡ್ನ್ನು ಉಲ್ಲೇಖಿಸಿದ್ದರು.
ತಮ್ಮ ಟ್ವೀಟ್ನಲ್ಲಿ ಸೂರ್ಯ ಅವರು ಗುರುಪ್ಪನಪಾಳ್ಯದ ಮತದಾನದ ಅಂಕಿಅಂಶಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ, ಕಾಂಗ್ರೆಸ್ಗೆ 19,560 ಮತಗಳು, ಬಿಜೆಪಿಗೆ 2,710 ಮತಗಳು ಲಭಿಸಿದ್ದವು—ಅಂದರೆ ಕಾಂಗ್ರೆಸ್ಗೆ 16,850 ಮತಗಳ ಮುನ್ನಡೆ ಇತ್ತು. ಈ ಮುಸ್ಲಿಂ ಮತಗಳ ಕ್ರೋಢೀಕರಣವೇ ಬಿಜೆಪಿಯ ಸೋಲಿಗೆ “ಏಕೈಕ ಕಾರಣ” ಎಂದು ಅವರು ವಿವರಿಸಿದ್ದರು. ಇಂತಹ ಮತಗಳ ಕ್ರೋಢೀಕರಣವನ್ನು ಎದುರಿಸಲು ಬಿಜೆಪಿ ಪರವಾಗಿ ಹಿಂದೂ ಮತಗಳ ಕ್ರೋಢೀಕರಣ ಅಗತ್ಯವಿದೆ ಎಂದೂ ಅವರು ವಾದಿಸಿದ್ದರು.
ಜಯನಗರದ ಫಲಿತಾಂಶದಲ್ಲಿ ಗುರುಪ್ಪನಪಾಳ್ಯದ ಮುಸ್ಲಿಂ ಮತದಾರರು ರಾಜಕೀಯವಾಗಿ ನಿರ್ಣಾಯಕರು ಎಂಬುದನ್ನು ಈ ಟ್ವೀಟ್ ಸ್ಪಷ್ಟವಾಗಿ ಗುರುತಿಸಿರುವುದರಿಂದ ಈಗ ನಡೆಯುತ್ತಿರುವ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್ ಏನು?
ಜಯನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ಆರೋಪ: ಸೌಮ್ಯಾ ರೆಡ್ಡಿ ದೂರು
ಜಯನಗರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಾಜಿ ಶಾಸಕಿ ಹಾಗೂ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಜಯನಗರ ಕ್ಷೇತ್ರದ ವಾರ್ಡ್ 171 (ಗುರುಪ್ಪನಪಾಳ್ಯ) ಒಂದರಲ್ಲೇ 4,327ಕ್ಕೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕ್ಷೇತ್ರಾದ್ಯಂತ ಮತದಾರರ ಹೆಸರುಗಳನ್ನು ಅಳಿಸುವಂತೆ ಕೋರಿ ಒಟ್ಟು 5,698 ಫಾರ್ಮ್-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರ ಪರವಾಗಿ ಬಿಎಲ್ಒಗಳು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿರುವ ಲೋಕೇಶ್ ಎಂಬವರ ಮನವಿಯ ಮೇರೆಗೆ ಈ ಮತದಾರರ ಹೆಸರುಗಳ ಅಳಿಸುವಿಕೆ ನಡೆದಿದೆ ಎಂದು ಸೌಮ್ಯಾ ರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ತಮ್ಮ ಬಳಿ ವೀಡಿಯೊ ಹಾಗೂ ಛಾಯಾಚಿತ್ರ ಸಾಕ್ಷ್ಯಗಳಿವೆ ಎಂದು ಅವರು ತಿಳಿಸಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದು ತನಿಖೆಯಿಂದ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆಯಲ್ಲಿ ನೈಜ ಮತದಾರರ ಹಕ್ಕುಗಳಿಗೆ ಧಕ್ಕೆಯಾಗದಂತೆ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುವುದು ಅಗತ್ಯವಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.






