ಪ್ರಾದೇಶಿಕ ಪಕ್ಷಗಳು ಕಿಮ್ಮತ್ತು ಕಳೆದುಕೊಳ್ಳುತ್ತಿವೆಯೇ?

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೋತ ತಕ್ಷಣ, ‘ಪ್ರಾದೇಶಿಕ ಪಕ್ಷಗಳ ಯುಗ ಮುಗಿಯಿತು. ದೇಶ ದ್ವಿಪಕ್ಷ ವ್ಯವಸ್ಥೆ ಕಡೆ ಹೊರಳುತ್ತಿದೆ’ ಎಂದು ಪ್ರಚಾರ ಮಾಡಲಾಗುತ್ತಿದೆ. ಕೇರಳ, ತಮಿಳುನಾಡು ಫಲಿತಾಂಶಗಳು ಬೇರೆಯದೇ ಸಂದೇಶ ಕಳಿಸಿದೆ. ‘ದೇಶದಲ್ಲಿ ಮೈತ್ರಿ ರಾಜಕಾರಣದ ಅಧ್ಯಾಯ ಮುಗಿದಿಲ್ಲ’ ಎಂದು ನಿರೂಪಿಸಿದೆ. ಪಶ್ಚಿಮ ಬಂಗಾಳದಲ್ಲಿ ಸೇಡಿನ ರಾಜಕಾರಣ ನಡೆಯದಿದ್ದರೆ ಟಿಎಂಸಿ ಮುಗಿಸುವುದು ಕಷ್ಟ. ಕೆಳಗೆ ಬಿದ್ದಿರುವ ಮಮತಾ ಬ್ಯಾನರ್ಜಿ ಮೈಕೊಡವಿ ಏಳಬಹುದು.
ಪಂಚ ರಾಜ್ಯಗಳ ಫಲಿತಾಂಶ ಹೊರಬಂದ ಬಳಿಕ ಪ್ರಮುಖ ಸುದ್ದಿ ವಾಹಿನಿಗಳಲ್ಲಿ ಚರ್ಚೆಯೊಂದು ಆರಂಭವಾಗಿದೆ. ‘ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಸವಕಲಾಗುತ್ತಿವೆ. ಇನ್ನೇನಿದ್ದರೂ ರಾಷ್ಟ್ರೀಯ ಪಕ್ಷಗಳ ಕಾಲ’ ಎಂಬ ವ್ಯಾಖ್ಯಾನ ನಡೆಯುತ್ತಿವೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸೋಲನ್ನೇ ಮುಂದಿಟ್ಟುಕೊಂಡು ಇಂತಹ ವಿಶ್ಲೇಷಣೆ ಮಾಡಲಾಗುತ್ತಿದೆ.
ಟಿಎಂಸಿ ಸೋಲು ಅನಿರೀಕ್ಷಿತವೇನಲ್ಲ. ನಿರೀಕ್ಷಿತವೇ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ), ಟಿಎಂಸಿ ನಡುವೆ ಇಷ್ಟೊಂದು ಅಂತರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಒಟ್ಟು 127 ಸೀಟುಗಳ ವ್ಯತ್ಯಾಸ. ಬಿಜೆಪಿ 207 ಕ್ಷೇತ್ರಗಳಲ್ಲಿ ಗೆದ್ದಿದೆ. ಟಿಎಂಸಿ ಗೆದ್ದಿರುವುದು 80 ಕ್ಷೇತ್ರ. ಮತಗಳ ವ್ಯತ್ಯಾಸ 32 ಲಕ್ಷ. 2.92 ಕೋಟಿ ಬಿಜೆಪಿಗೆ ಬಿದ್ದಿವೆ. ಟಿಎಂಸಿ ಪಡೆದಿರುವುದು 2.60 ಕೋಟಿ. ಶೇ.5.4ರಷ್ಟು ಅಂತರ. ಇದನ್ನೇ ಆಧಾರವಾಗಿಟ್ಟುಕೊಂಡು ‘ಪ್ರಾದೇಶಿಕ ಪಕ್ಷಗಳು ದುರ್ಬಲವಾಗುತ್ತಿವೆ’ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಏಕೆಂದರೆ, ಬಿಜೆಪಿ ಗೆಲುವಿನ ರಹಸ್ಯ ಬಿಡಿಸಬೇಕಾದ ಅಗತ್ಯವಿಲ್ಲ.
ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ಅಸ್ಸಾಮಿನಲ್ಲಿ ಬಿಜೆಪಿ ಗೆದ್ದಿದೆ. ತಮಿಳುನಾಡಿನಲ್ಲಿ ಆರು ದಶಕಗಳ ಡಿಎಂಕೆ, ಎಡಿಎಂಕೆ ಪಾರುಪತ್ಯವನ್ನು ಬೆಳ್ಳಿ ಪರದೆಯ ಹೀರೊ, ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆೆ ಧೂಳೀಪಟ ಮಾಡಿದೆ. ತಮಿಳುನಾಡು ಫಲಿತಾಂಶ ‘ಮೈತ್ರಿ ರಾಜಕಾರಣ ಅನಿವಾರ್ಯ’ ಎಂದು ಸಾರುತ್ತಿದೆ. ಏಕಾಂಗಿಯಾಗಿ ಚುನಾವಣೆ ಎದುರಿಸಿದ ಟಿವಿಕೆಗೆ ಅಗತ್ಯ ಬಹುಮತ ಸಿಕ್ಕಿಲ್ಲ. ಮತದಾರರು 11 ಸ್ಥಾನ ಕಡಿಮೆ ಕೊಟ್ಟಿದ್ದಾರೆ. 11 ಇರಲಿ ಅಥವಾ ಒಂದೇ ಆಗಿರಲಿ, ಅಗತ್ಯ ಸಂಖ್ಯೆ ಇರಬೇಕು. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 118 ಸ್ಥಾನ ಬೇಕು. ಹೀಗಾಗಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಐಯುಎಂಎಲ್ ಜತೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿದ್ದಾರೆ ವಿಜಯ್. ಇನ್ನೊಂದೆಡೆ ಎಡಿಎಂಕೆ ಹೋಳಾಗಿ, ಒಂದು ಬಣ ಟಿವಿಕೆ ಬೆಂಬಲಿಸಿದೆ. ತಮಿಳುನಾಡಲ್ಲಿ ಡಿಎಂಕೆ ಸ್ಥಾನ ತುಂಬಿರುವುದು ಟಿವಿಕೆ. ವಿಜಯ್ ಕೂಡಾ ದ್ರಾವಿಡ ಸಿದ್ಧಾಂತಕ್ಕೆ ಹತ್ತಿರವಿದ್ದಾರೆ.
ಕೇರಳದಲ್ಲಿ ಯುಡಿಎಫ್, ಎಲ್‌ಡಿಎಫ್ ಮಧ್ಯೆ ಅಧಿಕಾರ ಕೈ ಬದಲಾಗಿದೆ. ಅಲ್ಲಿ ಮೂರನೇ ದೊಡ್ಡ ಪಕ್ಷವಿಲ್ಲ. ಇದ್ದರೂ ಬಿಜೆಪಿ ಬಲವಾಗಿ ನೆಲೆಯೂರಿಲ್ಲ. ಕೇರಳ ಫಲಿತಾಂಶ ವಿಶ್ಲೇಷಿಸಿದರೆ ಕಾಂಗ್ರೆಸ್‌ಗೆ ಸರಕಾರ ರಚನೆಗೆ ಅಗತ್ಯ ಬೆಂಬಲ ಇಲ್ಲ. ವಿಧಾನಸಭೆಯ ಒಟ್ಟು ಬಲ 140. ಸರಳ ಬಹುಮತಕ್ಕೆ 71 ಸ್ಥಾನ ಬೇಕು. ಕಾಂಗ್ರೆಸ್ ಗೆದ್ದಿರುವುದು ಕೇವಲ 63 ಕ್ಷೇತ್ರಗಳಲ್ಲಿ. ‘ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್’ (ಐಯುಎಂಎಲ್) ಹಾಗೂ ಕೇರಳ ಕಾಂಗ್ರೆಸ್ (ಕೆ.ಸಿ.) ಬೆಂಬಲ ಕೊಟ್ಟಿವೆ. ಇವೆರಡು ಪಕ್ಷಗಳ ಜತೆ ಚುನಾವಣಾ ಪೂರ್ವ ಒಪ್ಪಂದ ಏರ್ಪಟ್ಟಿರುವುದರಿಂದ ಸಮಸ್ಯೆ ಇಲ್ಲ. ಅಲ್ಲಿ ಆಗಬೇಕಿರುವುದು ಮುಖ್ಯಮಂತ್ರಿ ನೇಮಕ ಅಷ್ಟೇ. ಕಾಂಗ್ರೆಸ್ ನಾಯಕತ್ವ ಎಷ್ಟೊಂದು ದುರ್ಬಲವಾಗಿದೆ ಎಂದರೆ, ಯುಡಿಎಫ್‌ಗೆ ಹೆಚ್ಚುಕಡಿಮೆ 2/3ರಷ್ಟು ಬಹುಮತವಿದ್ದರೂ ಮುಖ್ಯಮಂತ್ರಿ ಹೆಸರು ಅಂತಿಮಗೊಳಿಸಲು ಆಗಿಲ್ಲ.
ತಮಿಳುನಾಡಲ್ಲಿ ಕಾಂಗ್ರೆಸ್, ಬಿಜೆಪಿ ದ್ರಾವಿಡ ಪಕ್ಷಗಳ ಬೆಂಬಲದಲ್ಲಿ ಚುನಾವಣೆ ಎದುರಿಸಿದ್ದವು. ಡಿಎಂಕೆ ತನ್ನ ಮಿತ್ರ ಪಕ್ಷ ಕಾಂಗ್ರೆಸ್‌ಗೆ 28 ಕ್ಷೇತ ಬಿಟ್ಟುಕೊಟ್ಟಿತ್ತು. ಅದಕ್ಕೆ ಗೆಲ್ಲಲು ಸಾಧ್ಯವಾಗಿದ್ದು ಕೇವಲ ಐದು ಕಡೆ. ಪಡೆದ ಮತಗಳು ಶೇ. 3.37; ಎಡಿಎಂಕೆ ತನ್ನ ಮಿತ್ರ ಪಕ್ಷ ಬಿಜೆಪಿಗೆ 27 ಕ್ಷೇತ್ರ ಕೊಟ್ಟಿತ್ತು. ಗೆದ್ದಿದ್ದು ಬರೀ ಒಂದರಲ್ಲಿ. ಸಿಕ್ಕ ಮತಗಳ ಪ್ರಮಾಣ ಶೇ. 2.97ರಷ್ಟು. ಇಲ್ಲಿ ರಾಷ್ಟ್ರೀಯ ಪಕ್ಷಗಳು ಸ್ಥಳೀಯ ಪಕ್ಷಗಳಿಲ್ಲದೆ ರಾಜಕಾರಣ ಮಾಡಲಾಗದ ಸ್ಥಿತಿ. ಬಿಜೆಪಿ ಮತ್ತು ಕಾಂಗ್ರೆಸ್ ಸ್ವಂತ ಬಲದ ಮೇಲೆ ರಾಜಕಾರಣ ಮಾಡಲು ಇನ್ನೆಷ್ಟು ವರ್ಷ ಬೇಕೋ?
ಹೀಗಿದ್ದೂ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸೋತ ತಕ್ಷಣ, ‘ಪ್ರಾದೇಶಿಕ ಪಕ್ಷಗಳ ಯುಗ ಮುಗಿಯಿತು. ದೇಶ ದ್ವಿಪಕ್ಷ ವ್ಯವಸ್ಥೆ ಕಡೆ ಹೊರಳುತ್ತಿದೆ’ ಎಂದು ಪ್ರಚಾರ ಮಾಡಲಾಗುತ್ತಿದೆ. ಕೇರಳ, ತಮಿಳುನಾಡು ಫಲಿತಾಂಶಗಳು ಬೇರೆಯದೇ ಸಂದೇಶ ಕಳಿಸಿದೆ. ‘ದೇಶದಲ್ಲಿ ಮೈತ್ರಿ ರಾಜಕಾರಣದ ಅಧ್ಯಾಯ ಮುಗಿದಿಲ್ಲ’ ಎಂದು ನಿರೂಪಿಸಿದೆ. ಪಶ್ಚಿಮ ಬಂಗಾಳದಲ್ಲಿ ಸೇಡಿನ ರಾಜಕಾರಣ ನಡೆಯದಿದ್ದರೆ ಟಿಎಂಸಿ ಮುಗಿಸುವುದು ಕಷ್ಟ. ಕೆಳಗೆ ಬಿದ್ದಿರುವ ಮಮತಾ ಬ್ಯಾನರ್ಜಿ ಮೈಕೊಡವಿ ಏಳಬಹುದು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಎಸ್‌ಪಿ ನಾಯಕಿ ಮಾಯಾವತಿ ಜತೆ ಮಮತಾ ಅವರನ್ನು ಹೋಲಿಸಲು ಸಾಧ್ಯವಿಲ್ಲ. ಮಾಯಾವತಿ ಅವರ ಮನೋಧರ್ಮವೇ ಬೇರೆ. ಮಮತಾ ಅವರ ಮನೋಧರ್ಮವೇ ಬೇರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ‘ಸ್ಟ್ರೀಟ್ ಫೈಟರ್’. ಸುಮ್ಮನೆ ಕೂರುವವರಲ್ಲ. ಸಂಕಷ್ಟ ಬಂದಾಗಲೆಲ್ಲ ಬೀದಿಗೆ ಬಂದಿದ್ದಾರೆ. ಹೋರಾಟ ಮಾಡಿದ್ದಾರೆ. ತಾವು ಬೆಳೆದು ಬಂದ ಕಾಂಗ್ರೆಸ್ ಪಕ್ಷವನ್ನೇ ಅವರು ಬಿಟ್ಟವರಲ್ಲ. ಎಡ ಪಕ್ಷಗಳ ವಿರುದ್ಧವೂ ನಿರ್ಣಾಯಕ ಹೋರಾಟ. ಈಗಲೂ ಅಷ್ಟೇ ಅವರಿಗೆ ಅವಕಾಶ ಸಿಕ್ಕರೆ ಬಿಜೆಪಿ ನಾಯಕರನ್ನೂ ಕೆಣಕಬಲ್ಲರು. ಅದು ಬಿಜೆಪಿ ನಾಯಕರಿಗೂ ಗೊತ್ತಿರುವುದರಿಂದ ಅವರನ್ನು ರಾಜಕೀಯವಾಗಿ ಮುಗಿಸಲು ಮುಂದಾಗಬಹುದು. ಮಾಯಾವತಿ ಸದ್ಯ ತಟಸ್ಥವಾಗಿದ್ದಾರೆ. ಯಾರಿಗೋ ಅವರು ಹೆದರಿದಂತೆ ಕಾಣುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೂ ಹೊರ ಬರುವಂತೆ ತೋರುತ್ತಿಲ್ಲ.
ಮಮತಾ ಬ್ಯಾನರ್ಜಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಗೆ ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗಿರುವುದು ಒಂದೇ ದಾರಿ. ಅದು ಟಿಎಂಸಿ ಹೋಳು ಮಾಡುವುದು. ಚುನಾವಣಾ ಪ್ರಚಾರ ಭಾಷಣದಲ್ಲಿ ಹೇಳಿರುವಂತೆ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕೆದಕಿ ಜೈಲಿಗೆ ಅಟ್ಟುವುದು... ಅಧಿಕಾರದಲ್ಲಿ ಇಲ್ಲದ ಪಕ್ಷ ಒಡೆಯುವುದು ಅಧಿಕಾರದಲ್ಲಿರುವ ಪಕ್ಷಕ್ಕೆ ಸುಲಭ. ಎಎಪಿ ವಿಷಯದಲ್ಲಿ ಆಗಿದ್ದೂ ಇದೇ. ಚುನಾವಣೆ ಸೋತ ಪಕ್ಷಕ್ಕೂ ಶಾಸಕರು ಮತ್ತು ನಾಯಕರನ್ನು ಉಳಿಸಿಕೊಳ್ಳುವುದು ಕಷ್ಟ. ದುಬಾರಿ ವ್ಯವಹಾರ. ಅದಕ್ಕೆ ತಾಜಾ ಉದಾಹರಣೆ ಎಡ ಪಕ್ಷ ಮತ್ತು ಕಾಂಗ್ರೆಸ್. ಸಿಪಿಐ, ಸಿಪಿಎಂ ಪಕ್ಷಗಳ ಕಾರ್ಯಕರ್ತರು ಬಂಗಾಳದಲ್ಲಿ ಬಿಜೆಪಿಗೆ ಪಲಾಯನ ಮಾಡಿದ್ದಾರೆ. ಹೀಗಾಗಿ, ಮೊನ್ನೆ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂಗೆ ಬಿದ್ದ ಮತಗಳು ಶೇ. 4.25. ಕಾಂಗ್ರೆಸ್ ಪಾಲು ಶೇ. 2.97. ಈಗ ಮಮತಾ ಬ್ಯಾನರ್ಜಿ ತಮ್ಮ ಪಕ್ಷ ಉಳಿಸಿಕೊಳ್ಳಲು ಯಾವ ತಂತ್ರ ಅನುಸರಿಸುವರೋ?
ಕೆಲವು ಮಾಧ್ಯಮಗಳು 2014ರ ಬಳಿಕದ ಬಿಜೆಪಿ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಪಕ್ಷಗಳು ಶಕ್ತಿ ಕಳೆದುಕೊಳ್ಳುತ್ತಿವೆ ಎಂದು ಹೇಳುತ್ತಿವೆ. ಒಂದೆರಡು ಮಾಧ್ಯಮಗಳು, ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಗೋಳಾಡಿವೆೆ. ಮಾಧ್ಯಮದವರ ತಲೆ ಒಳಗೆ ಏಕೆ ಈ ಆಲೋಚನೆ ಮೊಳಕೆಯೊಡೆದಿದೆ ಎಂದು ಅರ್ಥವಾಗುತ್ತಿಲ್ಲ. ನಮ್ಮ ಪ್ರಜಾಪ್ರಭುತ್ವ ಅಷ್ಟೊಂದು ದುರ್ಬಲವಲ್ಲ. ಮತದಾರರು ಅಷ್ಟೊಂದು ಅಪ್ರಬುದ್ಧರಲ್ಲ. ಅದಕ್ಕೆ ತಮಿಳುನಾಡು ಮತ್ತು ಕೇರಳ ಚುನಾವಣೆಗಳೇ ಸಾಕ್ಷಿ. ಅಷ್ಟು ಸುಲಭವಾಗಿ ದೇಶ ಏಕ ಪಕ್ಷ ಅಥವಾ ದ್ವಿಪಕ್ಷ ವ್ಯವಸ್ಥೆ ಕಡೆ ವಾಲುವುದಿಲ್ಲ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಹಾಗಂತ, ಬಿಜೆಪಿ, ಸಂಘ- ಪರಿವಾರದ ನಾಯಕರು ತಟಸ್ಥವಾಗಿರುವುದಿಲ್ಲ. ಅವರ ಅಜೆಂಡವೇ ಒಂದು ದೇಶ, ಒಂದು ಭಾಷೆ, ಒಂದು ಪಕ್ಷ- ಒಂದು ಚುನಾವಣೆ. ಅದನ್ನು ಕಾರ್ಯಗತಗೊಳಿಸಲು ತಣ್ಣಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬಹುತ್ವದ ನೆಲದಲ್ಲಿ ಇದು ಸಾಧ್ಯವಿಲ್ಲದ ಮಾತು. ದೇಶ ನಿಂತಿರುವುದೇ ಬಹು ಭಾಷೆ, ಸಂಸ್ಕೃತಿ ಮತ್ತು ಧರ್ಮಗಳ ಮೇಲೆ ಎಂಬುದನ್ನು ಮರೆಯಲಾಗದು.
2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಪ್ರಬಲವಾಗಿ ಬೀಸಿತ್ತು. ಹತ್ತು ವರ್ಷ ಅಧಿಕಾರದಲ್ಲಿದ್ದ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಆಡಳಿತ ವಿರೋಧಿ ಅಲೆ ಇತ್ತು. ಎರಡನೇ ತಲೆಮಾರಿನ ತರಂಗಾಂತರ; ಕಲ್ಲಿದ್ದಲು ಗಣಿ ಹಂಚಿಕೆ ಮತ್ತು ಏಶ್ಯನ್ ಗೇಮ್ಸ್ ಸೇರಿದಂತೆ ಅನೇಕ ಅಕ್ರಮಗಳ ಆರೋಪಗಳು ಯುಪಿಎ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷದ ಕೊರಳಿಗೆ ಸುತ್ತಿಕೊಂಡಿತ್ತು. ಸಾಲದೆಂಬಂತೆ, ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಅಣ್ಣಾ ಹಝಾರೆ ದಿಲ್ಲಿ ರಾಮಲೀಲಾ ಮೈದಾನದಲ್ಲಿ ಚಳವಳಿ ನಡೆಸಿದ್ದರು. ಈ ಚಳವಳಿಯಲ್ಲೇ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಮೊಳೆತಿದ್ದು. ಈ ಚಳವಳಿ ರಾಷ್ಟ್ರಮಟ್ಟದಲ್ಲಿ ಬಿಜೆಪಿಗೆ ಮತ್ತು ದಿಲ್ಲಿ ಹಂತದಲ್ಲಿ ಎಎಪಿಗೆ ರಾಜಕೀಯ ಲಾಭ ಮಾಡಿಕೊಟ್ಟಿತು.
ಇವೆಲ್ಲ ಅಂಶಗಳು ಪರಿಗಣಿತವಾದರೂ 2014ರಲ್ಲಿ ಬಿಜೆಪಿಗೆ ಸಿಕ್ಕಿದ್ದು ಸರಳ ಬಹುಮತ. 282 ಸೀಟುಗಳು. ಪಡೆದ ಮತಗಳು ಶೇ. 31. ಎನ್‌ಡಿಎ ಮಿತ್ರ ಪಕ್ಷಗಳು ಸೇರಿ ಗಳಿಸಿದ್ದು 336 ಸ್ಥಾನ. ಶೇ. 38.5 ಮತಗಳು. ಕಾಂಗ್ರೆಸ್ ಪಡೆದಿದ್ದು 44 ಸ್ಥಾನ. ಬಿದ್ದ ಮತಗಳು ಶೇ. 19. ಯುಪಿಎ ಮಿತ್ರ ಪಕ್ಷಗಳು ಪಡೆದ ಒಟ್ಟು ಸ್ಥಾನಗಳು 60. ಮತಗಳ ಪ್ರಮಾಣ ಶೇ.23; ಐದು ವರ್ಷದ ಬಳಿಕ ಬಿಜೆಪಿ ಬಲ ಹೆಚ್ಚಿಸಿಕೊಂಡಿತು. ಮತ ಗಳಿಕೆ ಪ್ರಮಾಣ ಏರಿತು. ಕಾಂಗ್ರೆಸ್ ಸ್ಥಾನ ಏರಿಕೆಯಾದರೂ, ಮತ ಪ್ರಮಾಣ ಹೆಚ್ಚುಕಡಿಮೆ ಅಷ್ಟೇ ಉಳಿಯಿತು. ಯುಪಿಎ ಮಿತ್ರ ಪಕ್ಷಗಳ ಸ್ಥಾನ 31 ಹೆಚ್ಚಾಯಿತು. ಮತ ಪ್ರಮಾಣವೂ ಶೇ. 4.5ರಷ್ಟು ಹೆಚ್ಚಿತು.
2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತು ಮೋದಿ ಅವರ ಗ್ರಾಫ್ ಇಳಿಯಿತು. ಬಿಜೆಪಿ ಸ್ಥಾನ 240ಕ್ಕೆ ಕುಸಿಯಿತು. ಸುಮಾರು 60 ಸೀಟು ಕಡಿಮೆಯಾಯಿತು. ಎನ್‌ಡಿಎ ಒಕ್ಕೂಟದ ಬಲವೂ ಕುಸಿಯಿತು. ಇನ್ನೊಂದೆಡೆ, ಕಾಂಗ್ರೆಸ್ ಬಲ ಎರಡು ಪಟ್ಟಾಯಿತು. ಯುಪಿಎ ಸ್ಥಾನವೂ 234ಕ್ಕೆ ಹೆಚ್ಚಳವಾಯಿತು. ಜೆಡಿಯು ಹಾಗೂ ಟಿಡಿಪಿ ಬೆಂಬಲ ಕೊಡದಿದ್ದರೆ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬರಲಾಗುತ್ತಿರಲಿಲ್ಲ. ಮಾಧ್ಯಮಗಳು ಈ ಬಗ್ಗೆ ಪ್ರಸ್ತಾಪಿಸುವುದೇ ಇಲ್ಲ. ಯಾವುದೋ ಒಂದು ರಾಜ್ಯದ ಚುನಾವಣೆ ಫಲಿತಾಂಶ ಹಿಡಿದುಕೊಂಡು ದೇಶದ ರಾಜಕೀಯ ಪರಿಸ್ಥಿತಿ ವಿಶ್ಲೇಷಿಸುತ್ತಿವೆ. ಇದು ಅವೈಜ್ಞಾನಿಕ.
2014ರಿಂದ ನಡೆದಿರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಇಟ್ಟುಕೊಂಡು ಬಿಜೆಪಿ ಬಲವನ್ನು ತೂಗಿ ನೋಡಲಾಗುತ್ತಿದೆ. ಈ ಅವಧಿಯಲ್ಲಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಅದು ಬಿಜೆಪಿ ಹೆಣೆದಿರುವ ತಂತ್ರಕ್ಕಿಂತಲೂ ಅವರದೇ ನಾಯಕರ ಕಿತ್ತಾಟದ ಫಲ. ಕಾಂಗ್ರೆಸ್ ಪಕ್ಷದ ಗುಂಪುಗಾರಿಕೆ ಹರ್ಯಾಣದಲ್ಲಿ ಹಿನ್ನಡೆಗೆ ಕಾರಣವಾಯಿತು. ಅಲ್ಲದೆ, ಎಎಪಿ ಜತೆಗೂ ಸೀಟು ಹೊಂದಾಣಿಕೆ ಆಗಲಿಲ್ಲ. ಮಧ್ಯ ಪ್ರದೇಶದಲ್ಲಿ ಕಮಲ್‌ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಕಿತ್ತಾಟಕ್ಕೆ ಸರಕಾರ ಬಲಿಯಾಯಿತು. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಒಡೆಯಲಾಯಿತು. ದಿಲ್ಲಿಯಲ್ಲಿ ಎಎಪಿ ಸರಕಾರದ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೂಗೆಬ್ಬಿಸಲಾಯಿತು. ಅಲ್ಲದೆ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅಧಿಕೃತ ನಿವಾಸದ ನವೀಕರಣವೂ ವಿವಾದವಾಯಿತು. ಇದರಿಂದ ಅಧಿಕಾರ ಹೋಯಿತು. 70 ಸದಸ್ಯರ ದಿಲ್ಲಿ ವಿಧಾನಸಭೆಯಲ್ಲಿ ಬಿಜೆಪಿ 48, ಎಎಪಿ 22 ಸ್ಥಾನ ಗೆದ್ದಿತು. ಮತ ಪ್ರಮಾಣದಲ್ಲಿ ಶೇ. 3ರಷ್ಟು ಮಾತ್ರ ವ್ಯತ್ಯಾಸ.
ಬಿಜೆಪಿ ನಾಯಕರ ಅಪೇಕ್ಷೆಯಂತೆ, ಬಿಹಾರ ಪ್ರಯಾಸವಿಲ್ಲದೆ ಕಮಲದ ವಶವಾಗಿದೆ. ಬಿಜೆಪಿಗೆ ಜೆಡಿಯು ಜಾಗ ಬಿಟ್ಟುಕೊಟ್ಟಿದೆ. ಅಲ್ಲೀಗ ವಿರೋಧ ಪಕ್ಷವೂ ಇಲ್ಲದಂತಾಗಿದೆ. ಉತ್ತರ ಪ್ರದೇಶದ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಹಿಂದಿಕ್ಕಿದ ಸಮಾಜವಾದಿ ಪಕ್ಷ ಸುಸ್ಥಿತಿಯಲ್ಲಿದೆ. ಲೋಕಸಭೆಯಲ್ಲಿ ‘ಇಂಡಿಯಾ’ ಬ್ಲಾಕ್ ಗೆದ್ದಿದ್ದು 43 ಕ್ಷೇತ್ರ. ಉತ್ತರ ಪ್ರದೇಶದ ಒಟ್ಟು ಸ್ಥಾನ 80. ಬಿಜೆಪಿ ನೇತೃತ್ವದ ಎನ್‌ಡಿಎ 36 ಕ್ಷೇತ್ರಗಳಲ್ಲಿ ಗೆಲುವು ಪಡೆದಿದೆ.
ಉತ್ತರ ಪ್ರದೇಶದಲ್ಲಿ ‘ಪೀಡಾ’ (ಪಿಚಡಾ, ದಲಿತ, ಆದಿವಾಸಿ ಮತ್ತು ಅಲ್ಪಸಂಖ್ಯಾತ) ಸಮಾಜ ಒಗ್ಗೂಡಿಸುವ ಹೊಸ ಪ್ರಯೋಗ ನಡೆಸಿ ಅಖಿಲೇಶ್ ಯಶಸ್ವಿಯಾಗಿದ್ದಾರೆ. ಗುಜರಾತಿನಲ್ಲಿ ಮಾಧವ ಸಿನ್ಹ ಸೋಳಂಕಿ 1985ರಲ್ಲಿ ‘ಕ್ಷತ್ರೀಯ, ಹರಿಜನ, ಆದಿವಾಸಿ, ಮುಸ್ಲಿಮರನ್ನು (ಕೆಎಚ್‌ಎಎಂ)’ ಒಗ್ಗೂಡಿಸುವ ಪ್ರಯೋಗ ನಡೆಸಿದ್ದರು. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ 149 ಸ್ಥಾನ ಕಾಂಗ್ರೆಸ್ ಗೆದ್ದಿತು. ಇದಾದ ಬಳಿಕ ಇಂಥ ಪ್ರಯೋಗಕ್ಕೆ ಕೈಹಾಕಿದ್ದು ಸಮಾಜವಾದಿ ಪಕ್ಷ.
ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಯಲ್ಲಿ ಟಿಎಂಸಿ ಹಾಗೂ ಡಿಎಂಕೆ ಸೋತ ಬಳಿಕ ‘ಇಂಡಿಯಾ’ ಬ್ಲಾಕ್ ಮಿತ್ರ ಪಕ್ಷಗಳಲ್ಲಿ ಒಡಕುಂಟಾಗಿರುವುದಂತೂ ದಿಟ. ಚುನಾವಣೆಗೆ ಮುನ್ನ ಡಿಎಂಕೆ ಜತೆಗಿದ್ದ ಕಾಂಗ್ರೆಸ್, ಫಲಿತಾಂಶ ಪ್ರಕಟವಾದ ಬಳಿಕ ಟಿವಿಕೆ ಜತೆ ಕೈಜೋಡಿಸಿದೆ. ಕಾಂಗ್ರೆಸ್ ನಡೆ ‘ನಂಬಿಕೆ ದ್ರೋಹ’ ಎಂದು ಡಿಎಂಕೆ ಭಾವಿಸಿದೆ. ಅಖಿಲೇಶ್ ಅವರೂ ಕಾಂಗ್ರೆಸ್ ಕುರಿತು ಅಸಮಾಧಾನ ಹೊರ ಹಾಕಿದ್ದಾರೆ. ಇನ್ನೊಂದೆಡೆ, ಮಮತಾ ಬ್ಯಾನರ್ಜಿ ಇಂಡಿಯಾ ಬ್ಲಾಕ್ ಬಲಪಡಿಸುವ ಮಾತು ಆಡಿದ್ದಾರೆ. ಕಾಂಗ್ರೆಸ್ ಹೊರತುಪಡಿಸಿ ಪ್ರಾದೇಶಿಕ ಪಕ್ಷಗಳು ಒಟ್ಟಿಗೆ ಸೇರಲಿವೆಯೇ ಎಂಬುದು ಸ್ಪಷ್ಟವಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಸ್ಪಷ್ಟವಾದ ಚಿತ್ರಣ ಸಿಗಬಹುದು.
ಲೋಕಸಭೆ ಚುನಾವಣೆಗೆ ಇನ್ನೂ ಮೂರು ವರ್ಷ ಉಳಿದಿದೆ. ಈಗಲೇ ಮಾಧ್ಯಮಗಳು ಬಿಜೆಪಿ ಪರ ವ್ಯವಸ್ಥಿತವಾದ ಪ್ರಚಾರ ಆರಂಭಿಸಿವೆ. ಇನ್ನೊಂದೆಡೆ, ಕಾಂಗ್ರೆಸ್ ಇಡುತ್ತಿರುವ ಹೆಜ್ಜೆಗಳು ಅದರ ಮಿತ್ರ ಪಕ್ಷಗಳಿಗೆ ಇರಿಸುಮುರಿಸು ಉಂಟುಮಾಡುತ್ತಿವೆ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಯಾರ ಜತೆ ಕೈ ಜೋಡಿಸಬೇಕು. ತನ್ನ ಮಿತ್ರರು ಯಾರು? ಶತ್ರುಗಳು ಯಾರು? ಎಂದು ಖಚಿತಪಡಿಸಿಕೊಳ್ಳದಿದ್ದರೆ ಭಾರೀ ಬೆಲೆ ತೆರಬೇಕಾಗಬಹುದು. ರಾಷ್ಟ್ರೀಯ ಮಾಧ್ಯಮಗಳ ವ್ಯಾಖ್ಯಾನಗಳೇನೇ ಇರಲಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಆಶ್ರಯ ಬೇಕೇ ಬೇಕು. ಅವುಗಳ ಬೆಂಬಲವಿಲ್ಲದೆ ರಾಜಕಾರಣ ಮಾಡುವುದು ಸುಲಭವಲ್ಲ.






