ಪ್ರತಿಕೂಲ ವಾತಾವರಣದಿಂದ ಅಡಿಕೆ ಬೆಳೆಗೆ ಮತ್ತೆ ಪೆಟ್ಟು
►ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಅಡಿಕೆಗೆ ಬರ ►ಧಾರಣೆ ಸ್ಥಿರ

ಮಂಗಳೂರು : ಮಾರುಕಟ್ಟೆಯಲ್ಲಿ ಚಾಲಿ ಅಡಿಕೆಗೆ ಧಾರಣೆ ಏರುತ್ತಲೇ ಇದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಕೆ.ಜಿಗೆ 100 ರೂ. ಜಾಸ್ತಿಯಾಗಿದೆ. ಆದರೆ ಪ್ರತಿಕೂಲ ವಾತಾವರಣದಿಂದಾಗಿ ಈ ವರ್ಷವೂ ಅಡಿಕೆಯ ಫಸಲು ಕಡಿಮೆಯಾಗುವ ಸೂಚನೆ ಕಂಡು ಬಂದಿದೆ.
ಕಳೆದ ವರ್ಷ ಎಲೆ ಚುಕ್ಕೆ ರೋಗ ಮತ್ತು ಪ್ರತಿಕೂಲ ಪರಿಸ್ಥಿತಿಯಿಂದಾಗಿ ಇಳುವರಿ ಇಲ್ಲದೆ ಅಡಿಕೆ ಬೆಳೆಗಾರರು ತೊಂದರೆಗೊಳಗಾಗಿದ್ದರು. ಈಗ ಮತ್ತೆ ಅಂತದ್ದೆ ಪರಿಸ್ಥಿತಿ. ಈಗ ಬೆಳೆಗೆ ನೀರಿನ ಕೊರತೆ ಒಂದಡೆಯಾದರೆ, ಆಗಾಗ ಕಾಣಿಸಿಕೊಳ್ಳುವ ಮಳೆಯಿಂದಾಗಿ ಅಡಿಕೆ ಬೆಳೆಗೆ ಹಾನಿಯಾಗುತ್ತಿದೆ. ಸದ್ಯ ಬಹುತೇಕ ಕಡೆಗಳಲ್ಲಿ ಹಿಂಗಾರ ಅರಳುವ ಸಮಯ. ಅರಳಿದ ಅಡಿಕೆಯ ಹಿಂಗಾರಗಳು ಬಹುತೇಕ ಕೃಷಿಕರ ತೋಟಗಳಲ್ಲಿ ವಾತಾವರಣದ ಬಿಸಿಗೆ ಬೆಂದು, ಕಪ್ಪಾಗಿ ಕೆಳಗೆ ಬೀಳುತ್ತಿದೆ. ಇದರಿಂದಾಗಿ ಅಡಿಕೆ ಕೃಷಿಕ ಆಘಾತ ಅನುಭವಿಸುವಂತಾಗಿದೆ.
ಮಾರುಕಟ್ಟೆಗೆ ಅಡಿಕೆ ಧಾರಾಳವಾಗಿ ಹರಿದು ಬರುತ್ತಿಲ್ಲ. ಕಳೆದ ಬಾರಿ ಅಡಿಕೆ ಇಳುವರಿ ಕಡಿಮೆಯಾದ ಕಾರಣದಿಂದಾಗಿ ಅಡಿಕೆಗೆ ಬೇಡಿಕೆ ಕಂಡು ಬಂದಿದೆ. ಕಡಿಮೆ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ಬೆಳೆಗಾರರು ಈಗಾಗಲೇ ತಮ್ಮಲ್ಲಿರುವ ಅಡಿಕೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ.
ಚಾಲಿ ಅಡಿಕೆ ಬೆಳೆಯುವ ದ.ಕ., ಉಡುಪಿ, ಕಾಸರಗೋಡು ಈ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಡಿಕೆ ಬೆಳೆಯುವ ಬೆಳೆಗಾರರಲ್ಲಿ ಅಡಿಕೆ ದಾಸ್ತಾನು ಇದೆ. ಹೀಗಾಗಿ ಅವರಿಗೆ ಅಡಿಕೆ ಧಾರಣೆ ಏರಿಕೆ ಖುಶಿ ನೀಡಿದೆ. ಹಳೆ ಅಡಿಕೆಗೆ ಕಿಲೋ ಗ್ರಾಂಗೆ 360-510 ರೂ. ಹಾಗೂ ಹೊಸ ಅಡಿಕೆಗೆ 360-475 ರೂ. ಏರಿಕೆಯಾಗಿದ್ದರೂ ಕೆಲವು ಅಡಿಕೆ ಬೆಳೆಗಾರರು ಇನ್ನಷ್ಟು ಧಾರಣೆ ಏರಿಕೆಗೆ ಕಾಯುತ್ತಿದ್ದಾರೆ. ಆದರೂ ಕೂಲಿ ಕಾರ್ಮಿಕರ ಅಭಾವ, ಉತ್ಪಾದನೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ವರ್ಷ ಅಡಿಕೆ ಉತ್ಪಾದನೆ ಕುಂಠಿತಗೊಂಡಿತ್ತು. ಈ ಬಾರಿಯೂ ಜಾಸ್ತಿ ಇಳುವರಿ ನಿರೀಕ್ಷಿಸುವಂತಿಲ್ಲ. ಕೆಲವು ದಿನಗಳಿಂದ ಮಳೆಯೊಂದಿಗೆ ಗಾಳಿಗೆ ಸಿಲುಕಿ ಅಲ್ಲಲ್ಲಿ ಅಡಿಕೆ ಮರಗಳು ಧರಶಾಯಿಯಾಗುತ್ತಿದೆ. ಇದರಿಂದಾಗಿ ಅಡಿಕೆ ಬೆಳೆಗಾರರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಸಣ್ಣ ಅಡಿಕೆ ಗಿಡಗಳು ಪುಡಿಪುಡಿಯಾಗುತ್ತಿವೆ. ಫಲ ಕೊಡುವ ಮರಗಳು ಗಾಳಿಗೆ ಮುರಿದು ಬೀಳುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.
ಹೊರದೇಶಗಳ ಕಳಪೆ ಅಡಿಕೆಗೆ ಕಡಿವಾಣ: ಹೊರದೇಶಗಳಿಂದ ಅಡಿಕೆ ಆಮದಾಗುತ್ತಿರುವುದಕ್ಕೆ ಈಗ ಕಡಿವಾಣ ಬಿದ್ದಿದೆ. ಒಣ ಹಣ್ಣುಗಳ ಹೆಸರಲ್ಲಿ ದೇಶದೊಳಗೆ ಅಡಿಕೆ ಹರಿದು ಬರುತ್ತಿರುವುದು ಸದ್ಯ ನಿಂತಿದೆ ಎಂದು ಮೂಲಗಳು ತಿಳಿಸಿವೆ.
ಚಾಲಿ ಅಡಿಕೆ ಗರಿಷ್ಠ ಪ್ರಮಾಣದಲ್ಲಿ ಬಳಕೆಯಾಗುವ ಉತ್ತರ ಭಾರತದಲ್ಲಿ ಹೊರದೇಶಗಳಿಂದ ಹರಿದು ಬರುತ್ತಿದ್ದ ಕಳಪೆ ಗುಣಮಟ್ಟದ ಅಡಿಕೆ ಕಡಿಮೆ ಬೆಳೆಗೆ ಸಿಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಚಾಲಿ ಅಡಿಕೆಯನ್ನು ಬಿಟ್ಟು ಕಡಿಮೆ ಬೆಲೆಗೆ ದೊರೆಯುತ್ತಿದ್ದ ಅಡಿಕೆಯನ್ನು ಬಳಸುತ್ತಿದ್ದರು. ಇದರಿಂದಾಗಿ ಬೇಡಿಕೆ ಕಡಿಮೆ ಇತ್ತು. ಯಾಕೆಂದರೆ ಕರಾವಳಿಯ ಚಾಲಿ ಅಡಿಕೆ ಉತ್ತರ ಭಾರತ ತಲುಪುವಾಗ ಧಾರಣೆ ಇಲ್ಲಿನ ಧಾರಣೆಗಿಂತ ಎರಡು ಪಟ್ಟು ಜಾಸ್ತಿಯಾಗುತ್ತದೆ. ಆದರೆ ಕಳ್ಳ ಸಾಗಾಣೆ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಅಡಿಕೆಗೆ ಬೆಲೆ ಕಡಿಮೆ. ಗುಣಮಟ್ಟವೂ ಕಳಪೆಯಾಗಿದೆ. ಆದರೆ ಕಡಿಮೆ ಧಾರಣೆಯಲ್ಲಿ ಸಿಗುವ ಅಡಿಕೆ ಮುಂದೆ ನಮ್ಮ ಅಡಿಕೆಗೆ ಬೇಡಿಕೆಯೂ ಕುಸಿಯುತ್ತದೆ. ಈಗ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಿಕೆಯ ದಾಸ್ತಾನು ಕಡಿಮೆಯಾಗಿದೆ.
ಕಾಯಿಗೂ ಚುಕ್ಕೆ ರೋಗ: ಅಡಿಕೆ ಮರಗಳ ಎಲೆಗಳಿಗೆ ಚುಕ್ಕೆ ರೋಗ ಬಹುತೇಕ ಕಡೆಗಳಲ್ಲಿ ಕಂಡು ಬಂದಿದೆ. ಇದರಿಂದಾಗಿ ಅಡಿಕೆ ಮರಗಳಿಗೆ ಹಾನಿ ಒಂದಡೆಯಾದರೆ, ಅಡಿಕೆಗೂ ಚುಕ್ಕೆ ರೋಗ ಕಂಡು ಬಂದಿದೆ.
ಅಡಿಕೆಯ ಮೇಲೆ ಕಾಣಿಸಿಕೊಳ್ಳುವ ಕಪ್ಪು ಚುಕ್ಕೆ ರೋಗದಿಂದಾಗಿ ಉತ್ತಮ ಗುಣಮಟ್ಟದ ಅಡಿಕೆಗೆ ಪೆಟ್ಟು ಬಿದ್ದಿದೆ. ರೋಗ ಬಾಧಿಸಿದ ಅಡಿಕೆಯನ್ನು ಕಡಿಮೆ ಧಾರಣೆಗೆ ಮಾರಾಟ ಮಾಡಬೇಕಾದ ಸ್ಥಿತಿ ಕೃಷಿಕನಿಗೆ ಎದುರಾಗಿದೆ.
ಎಳೆಚುಕ್ಕಿ ರೋಗ ಮತ್ತು ವಾತಾವರಣ ಪೂರಕವಾಗಿಲ್ಲದ ಕಾರಣದಿಂದಾಗಿ ಕಳೆದ ವರ್ಷ ಅಡಿಕೆ ಇಳುವರಿ ಕಡಿಮೆಯಾಗಿತ್ತು. ಇದರಿಂದಾಗಿ ಅಡಿಕೆಗೆ ಈಗ ಒಳ್ಳೆಯ ಧಾರಣೆ ಇದೆ. ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ಬೇಡಿಕೆ ಇದೆ. ಆದರೆ ಅಲ್ಲಿನವರಿಗೆ ನಮ್ಮ ಪರಿಸ್ಥಿತಿ ಏನೆಂದು ಗೊತ್ತಿಲ್ಲ. ಉತ್ತಮ ಗುಣಮಟ್ಟದ ಅಡಿಕೆ ನಮ್ಮಲ್ಲಿ ಮಾರುಕಟ್ಟೆಗೆ ಹರಿದು ಬರುತ್ತಿಲ್ಲ. ಅಡಿಕೆಗೆ ಧಾರಣೆ ಸ್ಥಿರವಾಗಿರುವ ಹಿನ್ನೆಲೆಯಲ್ಲಿ ಇನ್ನಷ್ಟು ಧಾರಣೆ ಏರಲಿ ಎಂದು ಕೆಲವು ಅಡಿಕೆ ಬೆಳೆಗಾರರು ಕಾಯುತ್ತಿದ್ದಾರೆ.
-ಶಂನಾ ಖಂಡಿಗೆ, ಉಪಾಧ್ಯಕ್ಷರು ಕ್ಯಾಂಪ್ಕೊ







