ಆರೋಗ್ಯ ಸಮಸ್ಯೆ ಹೊಂದಿರುವ ಕೊರಗ ಸಮುದಾಯದ ಆಶಾಕಿರಣ 'ಆರೋಗ್ಯ ಸೇತು'

ಕುಂದಾಪುರ: ಕರಾವಳಿ ಪ್ರದೇಶದ ಮೂಲ ನಿವಾಸಿಗಳಾದ ಕೊರಗ ಸಮುದಾಯ ಭಾರತ ಸರಕಾರದಿಂದ ಪ್ರಾಚೀನ ಬುಡಕಟ್ಟು ಅತೀ ದುರ್ಬಲ ಸಮುದಾಯ (ಪಿವಿಜಿಟಿ) ಎಂದು ಗುರುತಿಸಲ್ಪಟ್ಟಿದೆ. ವರ್ಷದಿಂದ ವರ್ಷಕ್ಕೆ ಈ ಅತಿಸೂಕ್ಷ್ಮ ಸಮುದಾಯದ ಜನಸಂಖ್ಯೆ ಕುಸಿತ ಕಾಣುತ್ತಿದೆ. 2011ರ ಜನಗಣತಿ ವೇಳೆಗೆ ಉಡುಪಿ, ಮಂಗಳೂರು ಹಾಗೂ ಕಾಸರಗೋಡಿನ ಕೆಲಭಾಗಗಳಲ್ಲಿದ್ದ ಕೊರಗರ ಜನಸಂಖ್ಯೆ ಸುಮಾರು 25 ಸಾವಿರದಿಂದ ಈಗ 15 ಸಾವಿರಕ್ಕೆ ಇಳಿದಿದೆ ಎಂದು ತಿಳಿದುಬಂದಿದೆ.
ಇದಕ್ಕೆ ಈ ಸಮುದಾಯ ಈಗಲೂ ಸಂಪೂರ್ಣವಾಗಿ ಸಮಾಜದ ಮುಖ್ಯವಾಹಿನಿಗೆ ಬಾರದೇ ದೂರವಿರುವುದರಿಂದ ಬಡತನ ಹಾಗೂ ತೀರಾ ಹಿಂದುಳಿದಿರುವುದು ಕಾರಣವಾದರೆ, ಇನ್ನೊಂದು ಪ್ರಮುಖ ಕಾರಣ ಅವರ ದೈಹಿಕ ಆರೋಗ್ಯ. ಅಪೌಷ್ಠಿಕತೆಯೊಂದಿಗೆ ಕೆಲವು ನಿರ್ದಿಷ್ಟ ಅನಾರೋಗ್ಯದಿಂದ ಬಳಲುತ್ತಿರುವ ಈ ಸಮುದಾಯದಲ್ಲಿ 60ರ ವಯೋಮಿತಿ ದಾಟುವವರ ಸಂಖ್ಯೆ ತೀರಾ ವಿರಳವೆನ್ನಲಾಗುತ್ತಿದೆ. ಇದರಿಂದ ಸರಕಾರಗಳು ಈ ಸಮುದಾಯದ ಅಪೌಷ್ಠಿಕತೆಯೊಂದಿಗೆ, ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಒಂದು ‘ಆರೋಗ್ಯ ಸೇತು’ ಯೋಜನೆ.
ಉಡುಪಿ ಜಿಲ್ಲೆಯಲ್ಲಿ ಹೆಚ್ಚಾಗಿ ಹಾಡಿಗಳಲ್ಲಿ ಅಥವಾ ಅದಕ್ಕೆ ಸಮೀಪದಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯವಾದ ಕೊರಗರ ಮನೆ ಬಾಗಿಲಿಗೆ ತೆರಳಿ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕಗಳ ಸೇವೆಯೇ ‘ಆರೋಗ್ಯ ಸೇತು’ ಯೋಜನೆ. ಇದೀಗ ಚಾಲನೆ ಪಡೆದಿರುವ ಈ ಯೋಜನೆಯಲ್ಲಿ ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರಾಗಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿದೆ.
ಪಿಎಂ-ಜನ್‌ಮನ್ ಯೋಜನೆಯಡಿ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕಿಗೆ ಒಂದರಂತೆ ಸಂಚಾರಿ ಆರೋಗ್ಯ ಘಟಕ ಕಾರ್ಯಾಚರಿಸುತ್ತಿದೆ. ಈ ತಾಲೂಕು ವ್ಯಾಪ್ತಿಯ ದುರ್ಗಮ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಈ ಆದಿವಾಸಿ ಜನರು ಇರುವ ಪ್ರದೇಶಗಳನ್ನು ಗುರುತಿಸಿ, ಅಲ್ಲಿಗೆ ಈ ವಾಹನದ ಮೂಲಕ ತೆರಳಿ ತಪಾಸಣೆ, ಅಗತ್ಯವಿರುವ ಆರೋಗ್ಯ ಸೇವೆ ಹಾಗೂ ಆರೋಗ್ಯ ಶಿಕ್ಷಣ ನೀಡುವುದಾಗಿದೆ. ಜಿಲ್ಲೆಯಲ್ಲಿನ ಕೊರಗ ಸಮುದಾಯದವರಲ್ಲಿ ಅಗತ್ಯವುಳ್ಳ ಜನರಿಗೆ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.
ಹೀಗಿದೆ ಕಾರ್ಯನಿರ್ವಹಣೆ: ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ ಜನ್‌ಮನ್) ಯೋಜನೆಯಡಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬುಡಕಟ್ಟು ಜನಾಂಗ ಹೆಚ್ಚಿರುವ ರಾಜ್ಯದ 6 ಪ್ರಮುಖ ಜಿಲ್ಲೆಗಳಲ್ಲಿ ಯೋಜನೆಗೆ ಹೆಚ್ಚಿನ ಆದ್ಯತೆ ಹಾಗೂ ಪ್ರಾಮುಖ್ಯತೆ ನೀಡಲಾಗಿದೆ. ಮೈಸೂರು, ಚಾಮರಾಜನಗರ, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ.
ಉಡುಪಿ ಜಿಲ್ಲೆಯ ಮಟ್ಟಿಗೆ ಕೊರಗ ಸಮುದಾಯವನ್ನು ಕೇಂದ್ರೀಕರಿಸಿಕೊಂಡು ಯೋಜನೆ ಸಾಗುತ್ತಿದೆ. ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಳತ್ವದಲ್ಲಿ ಐಟಿಡಿಪಿ ಇಲಾಖೆಯ ಸಹಕಾರದೊಂದಿಗೆ ಮೊದಲ ಹಂತವಾಗಿ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವದ ಈ ಯೋಜನೆ ರೂಪುಗೊಂಡಿದ್ದು, ಕರ್ನಾಟಕ ರಾಜ್ಯದಲ್ಲಿ ‘ಆರೋಗ್ಯ ಸೇತು’ ಎಂಬ ಹೆಸರಿನಲ್ಲಿ ಯೋಜನೆಗೆ ಡಿ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಿದ್ದಾರೆ.
ಘಟಕದಿಂದ ಪ್ರಯೋಜನವೇನು?: ಕೊರಗ ಸಮುದಾಯದವರಲ್ಲಿ ಬಹುತೇಕರಿಗೆ ಅಪೌಷ್ಟಿಕತೆ ಹಾಗೂ ಬೇರೆಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಗಂಭೀರ ವಿಚಾರ. ಅವರ ಆರೋಗ್ಯ ಸುಧಾರಣೆಗೆ ಸಂಚಾರಿ ಘಟಕ ವಿಶೇಷ ಮುತುವರ್ಜಿ ವಹಿಸಲಿವೆ. ಜೊತೆಗೆ ಕೊರಗರು ಮದ್ಯ, ಇನ್ನಿತರ ಚಟಗಳಿಂದ ದೂರವಾಗಲು ಆರೋಗ್ಯ ಶಿಕ್ಷಣವನ್ನು ಸಹ ನೀಡಲಾಗುತ್ತದೆ. ಒಟ್ಟಾರೆ ಆದಿವಾಸಿಗಳ ಆರೋಗ್ಯ ಸುಧಾರಣೆಯೇ ಇದರ ಪ್ರಮುಖ ಗುರಿಯಾಗಿದೆ.
ಯಾವೆಲ್ಲ ಪ್ರದೇಶಗಳಿಗೆ ಭೇಟಿ?: ಉಡುಪಿ ಜಿಲ್ಲೆಯಲ್ಲಿ ಕೊರಗ ಸಮುದಾಯಗಳಿರುವ 280 ಹಾಡಿಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಕನಿಷ್ಠ 5 ಕಿ.ಮೀ. ದೂರವಿರುವ ಹಾಡಿಗಳನ್ನು ಈ ಘಟಕದ ವ್ಯಾಪ್ತಿಗೆ ಆಯ್ಕೆ ಮಾಡಲಾಗಿದೆ.
ಕುಂದಾಪುರ ತಾಲೂಕಿನ ರಟ್ಟಾಡಿ, ನಡಂಬೂರು, ಅಮಾಸೆಬೈಲು, ಜಡ್ಡಿನಗದ್ದೆ, ಕೆಳಸುಂಕ, ತೊಂಬಟ್ಟು, ಹಂಚಿಕಟ್ಟೆ, ಅರಸಮ್ಮಕಾನು, ಶೇಡಿಮನೆ, ಮಾಂಡಿ ಮೂರುಕೈ, ಹೆಂಗವಳ್ಳಿ.
ಉಡುಪಿ (ಬ್ರಹ್ಮಾವರ, ಕಾಪು ಸಹಿತ): ಮಟಪಾಡಿ, ಎಂಜಿ ಕಾಲನಿ, ಅಚ್ಲಾಡಿ, ರಂಗನಕೆರೆ ಎಸ್‌ಟಿ ಕಾಲನಿ, ಹಳೆಕೋಟೆ ಜೆಡ್ಡು, ಕೆಳಾರ್ಕಳಬೆಟ್ಟು, ನೇಜಾರು ನೀಡಂಬಳ್ಳಿ, ಉಚ್ಚಿಲ ಮುಳ್ಳುಗುಡ್ಡೆ, ಅದಮಾರು, ಮೂಡಬೆಟ್ಟು, ಕುಂಜಿಲ್ ಗುಡ್ಡೆ, ಬಂಡ್ಸಾಲೆ, ಕುತ್ಯಾರು ಎಸ್‌ಟಿ ಕಾಲನಿ, ಎಸ್‌ಟಿ ಕಾಲನಿ ಪಣಿಯೂರು, ದೇವೇಗೌಡ ಬಡಾವಣೆ, ಪಾದೂರು, ಎಸ್‌ಟಿ ಕಾಲನಿ 92 ಹೇರೂರು.
ಕಾರ್ಕಳ (ಹೆಬ್ರಿ ಸಹಿತ): ಸೋಮೇಶ್ವರ, ಸೀತಾನದಿ, ಮಂಡೆಗದ್ದೆ, ಕಬ್ಬಿನಾಲೆ, ಪಡುಕುಡೂರು, ಮುಟ್ಲುಪಾಡಿ, ಮುಂಡ್ಲಿ, ಶಿರ್ಲಾಲು, ನೂರಾಲುಬೆಟ್ಟು, ಗುಮ್ಮೆಟ್ಟು, ಬಾರಾಡಿ. ಬೈಂದೂರು ತಾಲೂಕಿನ ಕೆರಾಡಿ, ಹಯ್ಯಂಗಾರು, ಬೆಳ್ಳಾಲ, ಮೋಟುರ, ಉದಯನಗರ, ಮುದೂರು, ಕುಂಜ್ಞಾಡಿ, ಕಾಲ್ತೋಡು, ಉಳ್ಳೂರು, ತೂದಳ್ಳಿ, ಮುಳ್ಳಿಬೇರು ಈ ಘಟಕಗಳು ಕಾರ್ಯಾಚರಿಸುವ ಹಾಡಿಗಳಾಗಿವೆ.
ಜಿಲ್ಲೆಯಲ್ಲಿ ಕೊರಗ ಸಮುದಾಯದವರು ವಾಸವಿರುವ ಹಾಡಿಗಳಿಗೆ ಭೇಟಿ ನೀಡಿ, ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4 ಸಂಚಾರಿ ಆರೋಗ್ಯ ಘಟಕ ಕಾರ್ಯಾಚರಿಸುತ್ತಿವೆ. ಇವುಗಳ ಮೂಲಕ ತಳ ಸಮುದಾಯಕ್ಕೆ ಸುವ್ಯಸ್ಥಿತ ಆರೋಗ್ಯ ಸೇವೆ ನೀಡಲಾಗುತ್ತಿದೆ.
-ಡಾ.ಚಿದಾನಂದ ಸಂಜು, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ
ಸಂಚಾರಿ ಘಟಕದ ಸೇವೆಗಳು
ಆರೋಗ್ಯ ಸೇವೆಗಳಾದ ತಾಯಿ ಮಕ್ಕಳ ಆರೋಗ್ಯ, ಅಪೌಷ್ಟಿಕತೆ ತಪಾಸಣೆ, ಸಾಂಕ್ರಾಮಿಕ ರೋಗಗಳಾದ ಕ್ಷಯ, ಮಲೇರಿಯಾ, ಡೆಂಗ್, ಕುಷ್ಟ ರೋಗ, ಎಚ್‌ಐವಿ ಅಲ್ಲದೇ ಅಸಾಂಕ್ರಾಮಿಕ ರೋಗಗಳಾದ ರಕ್ತ ಒತ್ತಡ, ಮಧುಮೇಹ, ಕ್ಯಾನ್ಸರ್ ಮತ್ತು ಮಾನಸಿಕ ರೋಗಗಳು, ಮದ್ಯಪಾನ, ಇತರೆ ವ್ಯಸನಗಳ ಬಗ್ಗೆ, ಸಿಕಲ್ ಸೆಲ್ ರೋಗ, ಪಿಎಂ-ಜೆಎವೈ (ಆಯುಷ್ಮಾನ್) ನೋಂದಣಿ ಸೇವೆಗಳು ಇದರಲ್ಲಿ ಲಭ್ಯವಿದೆ.
ಸದ್ಯ ಈ ಘಟಕಗಳಿಗೆ ವಾಹನದ ವ್ಯವಸ್ಥೆ ಇದ್ದು ಅದರ ಮೂಲಕ ಕೊರಗ ಸಮುದಾಯದ ಹಾಡಿಗಳಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಚಾರಿ ಘಟಕದಲ್ಲಿ ತಲಾ ಒಬ್ಬರು ವೈದ್ಯರು, ಶುಶ್ರೂಷಕಿ ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಇರುತ್ತಾರೆ. ವಾರದಲ್ಲಿ ಐದು ದಿನ ಈ ಘಟಕ ಕಾರ್ಯಾಚರಿಸಲಿದ್ದು, ವಾರಕ್ಕೊಮ್ಮೆ ಹಾಡಿಯ ಮನೆಗೆ ಭೇಟಿ ನೀಡಿ, ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಂದ ಪಡೆದುಕೊಳ್ಳಲಾಗುತ್ತದೆ. ಗಂಭೀರ ಸಮಸ್ಯೆಗಳಿದ್ದರೆ ಹೆಚ್ಚಿನ ಚಿಕಿತ್ಸೆಗೂ ಅವಕಾಶ ಮಾಡಿಕೊಡಲಾಗುತ್ತದೆ.







