ಜೈಲೆಂಬ ಪಂಜರದೊಳಗೆ ಕಲಾ ಹೃದಯಗಳ ಒದ್ದಾಟ

ಮಂಗಳೂರು: ‘ಒಬ್ಬ ರ‍್ಯಾಪ್ ಸಿಂಗರ್, ಇನ್ನೊಬ್ಬ ಅದ್ಭುತ ಕಲಾವಿದ, ಮತ್ತೋರ್ವ ಕಲಾ ನಿರ್ದೇಶಕ....’ ಇದು ಯಾವುದೇ ಪ್ರತಿಭಾ ಪ್ರದರ್ಶನ ಅಥವಾ ಕಲಾ ವೇದಿಕೆಯ ಬಗೆಗಿನ ವಿಮರ್ಶೆಯಲ್ಲ. ಬದಲಾಗಿ ತಿಳಿದೋ, ತಿಳಿಯದೆಯೋ ನಾನಾ ರೀತಿಯ ಆರೋಪಗಳನ್ನು ಹೊತ್ತು ಮಂಗಳೂರು ಜೈಲು ಸೇರಿರುವ ಕೆಲ ವಿಚಾರಣಾಧೀನ ಕೈದಿಗಳ ವೈಯಕ್ತಿಕ ಪರಿಚಯವಿದು.
ಮಂಗಳೂರು ಜೈಲಿಗೆ ಶುಕ್ರವಾರ ಭೇಟಿ ನೀಡಿದಾಗ ಅಧೀಕ್ಷಕರ ಕೊಠಡಿಯ ಬಳಿ ಕೆಲ ಪ್ರತಿಭೆಗಳ ಅನಾವರಣವಾಯಿತು.
ಮೂಲತಃ ಉತ್ತರ ಭಾರತದ ನಿವಾಸಿ, ಅಪರಾಧ ಪ್ರಕರಣ ವೊಂದರಲ್ಲಿ 15 ದಿನಗಳ ಹಿಂದೆ ಜೈಲು ಸೇರಿರುವ ಕೈದಿ ಅಮರ್ ಚಿತ್ರ ಕಲಾವಿದ. ತನ್ನ ಕಲಾ ಕುಂಚದ ಮೂಲಕ ಎಂತಹ ಅದ್ಭುತ ಚಿತ್ರಗಳನ್ನೂ ಬಿಡಿಸಬಲ್ಲನಂತೆ. ಗಾಂಧೀಜಿ ಸೇರಿದಂತೆ ಮಹನೀಯರ ಚಿತ್ರ ಬಿಡಿಸಲು ಅದೇನು ಅಗತ್ಯವಿದೆಯೋ ಅದನ್ನು ಕೇಳಿ ಪಡೆದು ಗೋಡೆಯಲ್ಲಿ ಚಿತ್ರವನ್ನು ಬಿಡಿಸುವಂತೆ ಆತನ ಭಾಷೆಯಲ್ಲಿಯೇ ಜೈಲು ಅಧೀಕ್ಷಕರು ಆ ಜೈಲು ಹಕ್ಕಿಗೆ ಸೂಚನೆಯನ್ನು ನೀಡಿದಾಗ, ಆತನ ಕಣ್ಣುಗಳಲ್ಲಿ ಧನ್ಯತಾ ಭಾವ.
(ಇಲ್ಲಿ ಎಲ್ಲಾ ಆರೋಪಿಗಳ ಹೆಸರನ್ನು ಬದಲಾಯಿಸಲಾಗಿದೆ)
‘ಬಂಧೀಖಾನೆಯಲ್ಲಿ ಹೃದಯ ಅಳುತ್ತಿದೆ!’
ಶಿವಮೊಗ್ಗದ ಆರೋಪಿ ಸೂರ್ಯ ನಾಯ್ಕ ಬಾಲ್ಯದಿಂದಲೇ ಕನ್ನಡ ಕವನ, ರ‍್ಯಾಪ್ ಹಾಡುಗಳಿಗೆ ಸಾಹಿತ್ಯ ಬರೆಯುವ ಹವ್ಯಾಸ ಹೊಂದಿರುವಾತ. ಆತ ಜೈಲಿನಲ್ಲಿದ್ದುಕೊಂಡು ಇಲ್ಲಿನ ಯಾತನೆಯನ್ನು ತನ್ನ ಕವನದ ಮೂಲಕವೇ ಹೊರಗೆಡಹಿದ್ದಾನೆ. ‘ಬಂಧೀಖಾನೆಯಲ್ಲಿ ಹೃದಯ ಅಳುತ್ತಿದೆ’ ಎಂಬ ಕವನದ ಜೊತೆಗೆ ತಾಯಿ ಮಮತೆ, ಪ್ರೀತಿಯ ವ್ಯಾಖ್ಯಾನದ ಬಗ್ಗೆ ಹೆಚ್ಚಾಗಿ ಕವನಗಳನ್ನು ಬರೆದು ಹಾಡುತ್ತೇನೆ ಎನ್ನುವ ಸೂರ್ಯ ನಾಯ್ಕ ಜಾಮೀನು ದೊರೆತರೂ ಶ್ಯೂರಿಟಿ ಸಿಗದೆ ಜೈಲಿನಲ್ಲೇ ಇರುವಂತಾಗಿದೆ.
ಆತನೇ ಹೇಳುವಂತೆ ‘ವಾಹನ ಚಾಲಕನಾಗಿದ್ದುಕೊಂಡು ಪ್ರವಾಸಿಗರನ್ನು ರಾತ್ರಿ ಹೊತ್ತು ಕರೆದೊಯ್ಯುವ ವೇಳೆ ಸಂಭವಿಸಿದ ಅಪಘಾತದಲ್ಲಿ ದರೋಡೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದು, ಕಳೆದೊಂದು ವರ್ಷದಿಂದ ಜೈಲಿನಲ್ಲಿರುವಂತಾಗಿದೆ. ಕೆಲ ಸಮಯದ ಹಿಂದೆ ಈತನಿಗೆ ಜಾಮೀನು ದೊರಕಿದ್ದರೂ, 25,000 ರೂ.ಗಳ ಶ್ಯೂರಿಟಿ ನೀಡಲು ಸಾಧ್ಯವಾಗಿಲ್ಲ.’
ಜೈಲು ಸೇರಿದ ಕೆಲ ದಿನಗಳಲ್ಲೇ ಆತನ ತಾಯಿಯೂ ಅಪಘಾತಕ್ಕೀಡಾಗಿ ಕೆಲ ಸಮಯ ಕೋಮಾದಲ್ಲಿದ್ದು ಸದ್ಯ ಚೇತರಿಸಿ ಕೊಳ್ಳುತ್ತಿರುವುದರಿಂದ ಶ್ಯೂರಿಟಿಗೆ ಸಾಧ್ಯವಾಗಿಲ್ಲ. ಇದೀಗ ಜೈಲು ಅಧೀಕ್ಷರು ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾನೆ.
ಮಾಲಿವುಡ್ ಕಲಾವಿದರಿಗೆ ಸರಿಸಾಟಿ ಈ ಆಲ್ಬಂ ಕಲಾವಿದ: ಇನ್ನೋರ್ವ ಕೇರಳ ಮೂಲದ ಕಲಾ ನಿರ್ದೇಶಕ ಮನೋಜ್ ಸುಮಾರು ಎರಡು ವರ್ಷಗಳ ಹಿಂದೆ ವಾಮಂಜೂರಿನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ. 18 ಮಂದಿ ಆರೋಪಿಗಳ ಜೊತೆ ಜೈಲು ಸೇರಿದ್ದ ಈತನ ಬಹುತೇಕ ಸಹಚರರಿಗೆ ಜಾಮೀನು ದೊರಕಿದ್ದು, ಈತನ ಜಾಮೀನು ಅರ್ಜಿಯೂ ವಿಚಾರಣೆಯ ಹಂತದಲ್ಲಿದೆ. ಹಲವು ಆಲ್ಬಂ, ಸಾಕ್ಷ್ಯ ಚಿತ್ರಗಳ ರಚನೆಯ ಜೊತೆಗೆ ನಟನೆಯನ್ನೂ ಮಾಡಿರುವ ಈತ ಮಲಯಾಳಂ ಚಿತ್ರರಂಗದ ಯಾವುದೇ ನಟರಿಗಿಂತ ಕಡಿಮೆಯೇನಿಲ್ಲ ಎಂಬಂತೆ ‘ಚೆಂಗತ್ತಿ’ ಆಲ್ಬಂ ಸಾಂಗ್‌ನಲ್ಲಿ ನಟಿಸಿದ್ದಾನೆ.
‘ಸುಮಾರು ಎರಡು ವರ್ಷದಿಂದ ಜೈಲಿನಲ್ಲಿದ್ದೇನೆ. ಜೈಲಿನಲ್ಲಿರುವ ನೋವಿನ ಜೊತೆಗೂ ಹಲವು ಪ್ರತಿಭೆಗಳು, ವಿಭಿನ್ನ ವ್ಯಕ್ತಿಚಿತ್ರಣಗಳು ಹೊಸ ಜಗತ್ತನ್ನೇ ನನಗೆ ತೋರಿಸಿದೆ, ಹೊಸ ಅನುಭವವನ್ನೂ ನೀಡಿದೆ. ನಾನು ಹಾಡು ಹಾಡುತ್ತೇನೆ. 21 ಆಲ್ಬಂ, 12 ಮಲಯಾಳಂ ಸಾಕ್ಷ್ಯ ಚಿತ್ರಗಳನ್ನು ರಚಿಸಿ ಅಭಿನಯಿಸಿದ್ದೇನೆ’ ಎಂದು ಹೇಳುವಾಗ ಮನೋಜ್ ಮುಖದಲ್ಲಿ ತಾನೊಬ್ಬ ಕಲಾವಿದನೆಂಬ ಹೆಮ್ಮೆಯ ನಗು ಮೂಡುತ್ತದೆ.
ಆಲ್ಬಂ ಸಂಗೀತ ಸಂಯೋಜಕ, ರ‍್ಯಾಪರ್ ಆಗಿರುವ ಮಂಗಳೂರಿನ ಆಸಿಫ್ ಬೆಂಗಳೂರಿನಲ್ಲಿ ಡಿಪ್ಲೊಮಾ ಮುಗಿಸಿ ಕಳೆದ ಸುಮಾರು 15 ವರ್ಷಗಳಿಂದ ರ‍್ಯಾಪರ್, ಸಂಗೀತ ಸಂಯೋಜಕನಾಗಿ ಕಾರ್ಯ ನಿರ್ವಹಿಸುತ್ತಿದ್ದವ. ಯಾವ ವೃತ್ತಿಪರ ರ್ಯಾಪರ್‌ಗಳಿಗೂ ಕಡಿಮೆ ಇಲ್ಲ ಎಂಬಂತೆ ಈತ ಹಾಡುತ್ತಾನೆ. ರ‍್ಯಾಪ್ ಹಾಡುಗಳನ್ನು ರಚಿಸುತ್ತಾನೆ. ಆತನೇ ಹೇಳುವಂತೆ ಬೆಂಗಳೂರಿನಲ್ಲಿ ಸ್ವಂತ ಸಂಗೀತ ಸ್ಟುಡಿಯೋದೊಂದಿಗೆ ಹಲವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದು, ಎನ್‌ಡಿಪಿಎಸ್ ಪ್ರಕರಣವೊಂದರಲ್ಲಿ ಹಣ ಪೂರೈಕೆ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದಾನೆ. ಜಾಮೀನು ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಅರಿವಿಲ್ಲದೇ ಮಾಡಿದ ತಪ್ಪಿಗಾಗಿ ಆದ ಶಿಕ್ಷೆ ಇದೇ ಮೊದಲು ಇದೇ ಕೊನೆ. ಸಹವಾಸ ದೋಷದಿಂದ ಈ ಸುಳಿಯೊಳಗೆ ಸಿಲುಕಿದ್ದು, ಮುಂದೆಂದೂ ಇಂತಹ ಪ್ರಮಾದಕ್ಕೆ ಗುರಿಯಾಗದಂತೆ ಎಚ್ಚರ ವಹಿಸುತ್ತೇನೆ ಎನ್ನುತ್ತಾನೆ ಆಸಿಫ್.
ಜೈಲು ಕೇವಲ ಶಿಕ್ಷೆಯ ತಾಣವಾಗಬಾರದು. ಅವರಲ್ಲಿ ಮನಪರಿವರ್ತನೆಯ ಜೊತೆಗೆ ಅವರ ಹವ್ಯಾಸ, ಪ್ರತಿಭೆಗಳನ್ನು ಹೊರ ತರುವ ತಾಣವಾಗಿ ಬದಲಾಗಬೇಕೆಂಬುದು ನನ್ನ ಆಶಯ. ಹಾಗಾಗಿ ಕಾರಾಗೃಹ ಎಡಿಜಿಪಿಯವರ ಮಾರ್ಗದರ್ಶನ ಹಾಗೂ ಮಂಗಳೂರು ಪೊಲೀಸ್ ಆಯುಕ್ತರ ಸಹಕಾರದಲ್ಲಿ ಜೈಲಿನಲ್ಲಿ ಕಳೆದ ಹಲವು ತಿಂಗಳಿನಿಂದ ಕೈದಿಗಳಲ್ಲಿ ಮನಪರಿವರ್ತನೆಯ ಕೆಲಸ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುತ್ತಾರೆ ಮಂಗಳೂರು ಜೈಲು ಅಧೀಕ್ಷಕ ಶರಣ ಬಸಪ್ಪ.
ಮಂಗಳೂರು ಜೈಲೆಂದರೆ ಅದು ಇತರೆಲ್ಲಾ ಜೈಲುಗಳಿಂತ ವಿಭಿನ್ನ. ಇಲ್ಲಿ ಈಗಾಗಲೇ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಕೈದಿಗಳನ್ನು ಸಂಭಾಳಿಸುವ ಹೊಣೆಗಾರಿಕೆ ಒಂದೆಡೆಯಾದರೆ, ಕರ್ನಾಟಕದ ಯಾವ ಜೈಲಿನಲ್ಲಿಯೂ ಕಾಣದ ಧರ್ಮ ಆಧಾರಿತ ಜಗಳ, ಹಲ್ಲೆ, ಹೊಡೆದಾಟಗಳಿಂದ ಸದಾ ಸುದ್ದಿಯಲ್ಲಿರುತ್ತದೆ. ಕೋಮು ಸಂಘರ್ಷ, ದರೋಡೆ, ಹತ್ಯೆ ಮಾತ್ರವಲ್ಲದೆ,
ಎನ್‌ಡಿಪಿಎಸ್ (ಮಾದಕ ವಸ್ತು ಸಾಗಾಟ, ಪೂರೈಕೆ ಮತ್ತು ಸೇವನೆ) ಪ್ರಕರಣಗಳಲ್ಲಿ ಜೈಲು ಸೇರಿರುವವರ ಸಂಖ್ಯೆ ಅಧಿಕವಾಗಿದೆ. ಇವರೆಲ್ಲರ ನಡುವೆ ಸೌಹಾರ್ದವನ್ನು ಕಾಪಾಡಿಕೊಂಡು, ಇವರ ಮನಪರಿವರ್ತನೆಗಾಗಿ, ಮನೋರಂಜನೆಗಾಗಿ, ಇವರಲ್ಲಿನ ಸುಪ್ತ ಪ್ರತಿಭೆಗಳ ಅನಾವರಣಕ್ಕಾಗಿ ಜೈಲು ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯವೂ ಹೋರಾಡಬೇಕಾಗುತ್ತದೆ.






