ಔರಾದ್: ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿಯಲ್ಲಿ ತರಕಾರಿ ಮಾರುಕಟ್ಟೆ

ಔರಾದ್: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 161ಎ ಸಮೀಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ತರಕಾರಿ ಮಾರುಕಟ್ಟೆ ಅನೈರ್ಮಲ್ಯದ ಆಗರವಾಗಿ ಮಾರ್ಪಟ್ಟಿದ್ದು, ಕೊಳೆತ ತರಕಾರಿ, ಕಸದ ರಾಶಿ ಹಾಗೂ ತ್ಯಾಜ್ಯಗಳಿಂದ ಹರಡುವ ದುರ್ವಾಸನೆಯ ನಡುವೆ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಾರುಕಟ್ಟೆಯ ರಸ್ತೆ ಬದಿಗಳಲ್ಲಿ ಕೊಳೆತ ಟೊಮೆಟೊ, ಉಳ್ಳಾಗಡ್ಡಿ(ಈರುಳ್ಳಿ) ಸೇರಿದಂತೆ ತರಕಾರಿ ತ್ಯಾಜ್ಯಗಳು ರಾಶಿಯಾಗಿ ಬಿದ್ದಿವೆ. ಚರಂಡಿಗಳು ಕಸ ಹಾಗೂ ಹೂಳಿನಿಂದ ತುಂಬಿಕೊಂಡಿದ್ದು, ಕಲ್ಮಶ ನೀರು ನಿಂತಿರುವುದರಿಂದ ಸೊಳ್ಳೆ ಹಾಗೂ ಕ್ರಿಮಿಕೀಟಗಳ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಿಗಳು ಆರೋಗ್ಯ ಸಮಸ್ಯೆಯ ಭೀತಿ ಎದುರಿಸುತ್ತಿದ್ದಾರೆ.
ತಾಲೂಕಿನ ವಿವಿಧ ಗ್ರಾಮಗಳ ರೈತರ ಜೊತೆಗೆ ನೆರೆಯ ಮಹಾರಾಷ್ಟ್ರದ ಲಾತೂರ್, ಹನೆಗಾಂವ್ ಹಾಗೂ ತೆಲಂಗಾಣದ ನಾರಾಯಣಖೇಡ್ ಭಾಗದ ರೈತರೂ ಈ ಮಾರುಕಟ್ಟೆಗೆ ತರಕಾರಿ ಮಾರಾಟಕ್ಕೆ ಆಗಮಿಸುತ್ತಾರೆ. ಅಂತರರಾಜ್ಯ ಮಟ್ಟದಲ್ಲಿ ವಹಿವಾಟು ನಡೆಯುವ ಪ್ರಮುಖ ಮಾರುಕಟ್ಟೆಯಾಗಿದ್ದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ.
ಪ್ರತಿನಿತ್ಯ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದ್ದರೂ ಮಾರುಕಟ್ಟೆಯ ಅಭಿವೃದ್ಧಿ ಕಡೆಗಣನೆಯಾಗಿದೆ ಎಂಬುದು ಸಾರ್ವಜನಿಕರ ಆರೋಪ. ಚರಂಡಿಗಳ ಸ್ವಚ್ಛತೆ ಇಲ್ಲದೆ ಅನೈರ್ಮಲ್ಯ ಹೆಚ್ಚಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯ ವ್ಯವಸ್ಥೆಯೂ ಇಲ್ಲದಿರುವುದು ರೈತರು ಮತ್ತು ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗಿದೆ.
ಕತ್ತಲಲ್ಲೇ ಮಾರುಕಟ್ಟೆ ವಹಿವಾಟು: ರಾತ್ರಿ ಮತ್ತು ನಸುಕಿನ ಜಾವ ದೂರದ ಊರುಗಳಿಂದ ತರಕಾರಿ ತುಂಬಿಕೊಂಡು ಬರುವ ರೈತರಿಗೆ ಬೆಳಕಿನ ವ್ಯವಸ್ಥೆಯ ಕೊರತೆ ಮತ್ತೊಂದು ಸಮಸ್ಯೆಯಾಗಿದೆ. ಮಾರುಕಟ್ಟೆಯಲ್ಲಿ ಸಮರ್ಪಕ ದೀಪಗಳಿಲ್ಲದೆ ರೈತರು ಕತ್ತಲಲ್ಲೇ ವಹಿವಾಟು ನಡೆಸಬೇಕಾಗಿದೆ. ಆದ್ದರಿಂದ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದು ವರ್ತಕರು ಆಗ್ರಹಿಸಿದ್ದಾರೆ.
ದುಡ್ಡು ಕೊಟ್ಟು ನೀರು ಕುಡಿಯುವ ಸ್ಥಿತಿ: ಮಾರುಕಟ್ಟೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದ ಕಾರಣ ರೈತರು ಹಾಗೂ ವರ್ತಕರು ಸ್ವಂತ ಹಣದಲ್ಲಿ ನೀರು ಖರೀದಿಸಬೇಕಾಗಿದೆ. ದೂರದ ಊರುಗಳಿಂದ ಬರುವ ರೈತರಿಗೆ ಕನಿಷ್ಠ ಸೌಲಭ್ಯಗಳಾದ ನೀರು ಮತ್ತು ಶೌಚಾಲಯದ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತರಕಾರಿ ಖರೀದಿಸಲು ಹಾಗೂ ಮಾರಲು ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಈ ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಿಗಳು ಇಲ್ಲಿನ ಅಶುಚಿತ್ವ, ಮೂಲಭೂತ ಸೌಕರ್ಯ ಕೊರತೆ ಕಂಡು ಸ್ಥಳೀಯಾಡಳಿತದ ಬಗ್ಗೆ ಅಪಹಾಸ್ಯ ಮಾಡುವಂತಹ ದುಸ್ಥಿತಿ ಇದೆ. ಶೀಘ್ರವೇ ತರಕಾರಿ ಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ವರ್ತಕರು ಒತ್ತಾಯಿಸಿದ್ದಾರೆ.
ಔರಾದ್ ತರಕಾರಿ ಮಾರುಕಟ್ಟೆಗೆ ಬರುವ ರೈತರಿಗೆ ಕುಡಿಯಲು ನೀರಿಲ್ಲ. ಹಣ ಕೊಟ್ಟು ನೀರು ಖರೀದಿಸುವ ಪರಿಸ್ಥಿತಿ ಇದೆ. ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನಾದರೂ ಮಾಡಬೇಕು.
-ಸಲೀಮ್ ಬಾಗವಾನ್
ತರಕಾರಿ ವರ್ತಕ, ನಾಗನಪಲ್ಲಿ
ಅಂತರರಾಜ್ಯ ಖ್ಯಾತಿಯ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳಿಲ್ಲದಿರುವುದು ಬೇಸರದ ಸಂಗತಿ. ದೂರದ ಊರುಗಳಿಂದ ಬರುವ ರೈತರಿಗೆ ಮೂಲಭೂತ ಸೌಕರ್ಯ ಇಲ್ಲದೆ ಇರುವುದರಿಂದ ಸಮಸ್ಯೆ ಆಗಿದೆ. ಸ್ವಚ್ಛತೆ ಇಲ್ಲದೇ ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ಸಮಸ್ಯೆಗಳು ಬಗೆಹರಿಸಬೇಕು.
-ತಾನಾಜಿ, ತರಕಾರಿ ವ್ಯಾಪಾರಿ
ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ನೈರ್ಮಲ್ಯ ಕಾಪಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳಲಾಗುವುದು.
-ಮಹೇಶ್ ಪಾಟೀಲ್
ತಹಶೀಲ್ದಾರ್, ಎಪಿಎಂಸಿ ಆಡಳಿತಾಧಿಕಾರಿತಹಶೀಲ್ದಾರ್, ಎಪಿಎಂಸಿ ಆಡಳಿತಾಧಿಕಾರಿ






