ಕೂಡ್ಲಿಗಿಯಲ್ಲಿ ಭಾರತದ ಅಪರೂಪದ ಮಾನವಾಕೃತಿ ಶಿಲೆ : ಅಳಿವಿನಂಚಿನಲ್ಲಿ ಬೃಹತ್ ಶಿಲಾಯುಗದ ಗುರುತುಗಳು

ಮಾನವ ನಾಗರಿಕತೆಯ ಉಗಮದ ಹಾದಿಯಲ್ಲಿ ‘ಸಾವು’ ಎಂಬುದು ಕೇವಲ ಜೈವಿಕ ಅಂತ್ಯವಾಗಿರಲಿಲ್ಲ. ಅದು ಆದಿಮಾನವರ ನಂಬಿಕೆ, ಆಧ್ಯಾತ್ಮಿಕತೆ ಮತ್ತು ಸ್ಮರಣೆಯೊಂದಿಗಿನ ನಿಗೂಢ ಪ್ರಕ್ರಿಯೆಯಾಗಿತ್ತು. ತಮ್ಮವರ ಅಗಲಿಕೆಯ ನಂತರ ಅವರ ಸ್ಮರಣಾರ್ಥವಾಗಿ ಬೃಹತ್ ಶಿಲೆಗಳನ್ನು ನಿಲ್ಲಿಸುವ ಪರಿಪಾಠವನ್ನು ಆದಿಮ ಸಮುದಾಯಗಳು ರೂಢಿಸಿಕೊಂಡಿದ್ದವು. ಇಂತಹ ಬೃಹತ್ ಶಿಲಾಯುಗದ ಅಂತ್ಯಸಂಸ್ಕಾರ ಪದ್ಧತಿಯ ಕುರುಹಾಗಿ ರಾಜ್ಯದ ಹಲವೆಡೆ ‘ನಿಲುಸುಗಲ್ಲು’ (meಟಿhiಡಿs)ಗಳು ಕಂಡುಬರುತ್ತವೆ.
ಆದರೆ, ಈ ಶಿಲಾ ಪರಂಪರೆಯಲ್ಲೇ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಮತಿ ಗ್ರಾಮದಲ್ಲಿರುವ ಮಾನವಾಕೃತಿ ಶಿಲೆಗಳು ಅತ್ಯಂತ ವಿಶಿಷ್ಟವಾಗಿವೆ. ಮಾನವನ ತಲೆ, ಭುಜ, ಕೈಗಳು ಮತ್ತು ದೇಹದ ಆಕಾರವನ್ನು ಹೋಲುವ ಈ ಶಿಲೆಗಳು ಇತಿಹಾಸ ಪ್ರೇಮಿಗಳು ಹಾಗೂ ಸಂಶೋಧಕರ ಗಮನ ಸೆಳೆಯುತ್ತಿವೆ. ನಮ್ಮ ಪೂರ್ವಜರ ಬದುಕು, ಸಾವು, ನಂಬಿಕೆ, ಕಲಾತ್ಮಕತೆ ಮತ್ತು ಸಾಂಸ್ಕೃತಿಕ ವಿಕಾಸದ ಜೀವಂತ ಸಾಕ್ಷಿಗಳಾಗಿ ಇವು ಇಂದಿಗೂ ನಿಂತಿವೆ.
ಇತಿಹಾಸದ ಮಡಿಲಲ್ಲಿ ಕೂಡ್ಲಿಗಿ ಮತ್ತು ಕುಮತಿ
ವಿಜಯನಗರ ಜಿಲ್ಲೆಯ ಸಾಂಸ್ಕೃತಿಕ ಹಾಗೂ ಪ್ರಾಗೈತಿಹಾಸಿಕ ನಕ್ಷೆಯಲ್ಲಿ ಕೂಡ್ಲಿಗಿ ಪ್ರಮುಖ ಸ್ಥಾನ ಪಡೆದಿದೆ. ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು ಹಾಗೂ ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ಈ ನೆಲ, ಪ್ರಾಗೈತಿಹಾಸಿಕ ಅಧ್ಯಯನದಲ್ಲೂ ವಿಶಿಷ್ಟ ಮಹತ್ವ ಪಡೆದುಕೊಂಡಿದೆ.
ಹಗರಿ ನದಿಯ ದಂಡೆಯಲ್ಲಿರುವ ಕುಮತಿ ಗ್ರಾಮವು ಆದಿಮ ಸಂಸ್ಕೃತಿಯ ಅಚ್ಚರಿಯ ಪುಟಗಳನ್ನು ತೆರೆದಿಡುತ್ತದೆ. ಹಗರಿ ನದಿಯ ಜಲಾನಯನ ಪ್ರದೇಶವು ಅಂದಿನ ಮಾನವನಿಗೆ ಬದುಕಲು ಅನುಕೂಲಕರ ವಾತಾವರಣ ಒದಗಿಸಿತ್ತು ಎಂಬುದಕ್ಕೆ ಇಲ್ಲಿನ ಪುರಾತತ್ವ ಕುರುಹುಗಳು ಸಾಕ್ಷಿಯಾಗಿವೆ.
ಕೂಡ್ಲಿಗಿ ಹಾಗೂ ವಿಜಯನಗರ ಭಾಗದ ಭೌಗೋಳಿಕ ಪರಿಸರವನ್ನು ಗಮನಿಸಿದರೆ, ಬಂಡೆಗಳ ಗುಡ್ಡಗಳು ಮತ್ತು ಕುರುಚಲು ಕಾಡುಗಳು ಇಲ್ಲಿನ ಪ್ರಮುಖ ಲಕ್ಷಣಗಳಾಗಿವೆ. ಈ ಕುರುಚಲು ಕಾಡುಗಳು ಆದಿಮಾನವರಿಗೆ ಕೇವಲ ವಾಸಸ್ಥಾನವಾಗಿರದೆ, ನೈಸರ್ಗಿಕ ಕೋಟೆಯಂತೆ ರಕ್ಷಣೆ ನೀಡುತ್ತಿದ್ದವು.
ಮುಳ್ಳಿನ ಪೊದೆಗಳು, ಸಣ್ಣಪುಟ್ಟ ಮರಗಳು ಮತ್ತು ಬೃಹತ್ ಗ್ರಾನೈಟ್ ಬಂಡೆಗಳು ಕಾಡುಪ್ರಾಣಿಗಳು ಸುಲಭವಾಗಿ ವಾಸಸ್ಥಳಗಳಿಗೆ ನುಗ್ಗದಂತೆ ತಡೆಗೋಡೆಯಾಗಿ ಕೆಲಸ ಮಾಡುತ್ತಿದ್ದವು. ಗುಡ್ಡಗಳ ಮೇಲಿರುವ ಬಂಡೆಗಳು ದೂರದಿಂದಲೇ ಅಪಾಯವನ್ನು ಗಮನಿಸಲು ವೀಕ್ಷಣಾ ತಾಣಗಳಾಗಿ ನೆರವಾಗುತ್ತಿದ್ದವು. ಈ ರೀತಿಯ ಪರಿಸರವು ಆದಿಮಾನವನ ಬದುಕಿಗೆ ನಿಸರ್ಗದತ್ತವಾದ ಸುರಕ್ಷತೆ ಒದಗಿಸಿತ್ತು.
ಕುರುಚಲು ಕಾಡಿನಲ್ಲಿ ಬೇಟೆಯಾಡುವುದು ಅತ್ಯಂತ ಕಠಿಣ ಕೆಲಸವಾಗಿತ್ತು. ದಟ್ಟ ಕಾಡಿನಂತೆ ಮರೆತು ನಿಲ್ಲಲು ದೊಡ್ಡ ಮರಗಳಿರದ ಕಾರಣ, ಆದಿಮಾನವರು ವಿಶೇಷ ಬೇಟೆಗಾರಿಕೆ ಕೌಶಲ್ಯಗಳನ್ನು ಬೆಳೆಸಿಕೊಂಡಿದ್ದರು. ಮಣ್ಣು, ಒಣ ಎಲೆಗಳು ಮತ್ತು ಪೊದೆಗಳ ಬಣ್ಣಕ್ಕೆ ಹೊಂದುವಂತೆ ದೇಹವನ್ನು ಮರೆಮಾಚಿಕೊಂಡು ಪ್ರಾಣಿಗಳ ಹತ್ತಿರ ಸೇರುವ ‘ಮರೆವೇಷ’ದ ತಂತ್ರವನ್ನು ಬಳಸುತ್ತಿದ್ದರು ಎನ್ನಲಾಗಿದೆ.
ಪ್ರಾಣಿಗಳನ್ನು ಹಿಡಿಯಲು ಹಾದಿಗಳಲ್ಲಿ ಕಂದಕಗಳನ್ನು ತೋಡಿ, ಅವುಗಳನ್ನು ಒಣ ಕಡ್ಡಿ ಮತ್ತು ಎಲೆಗಳಿಂದ ಮುಚ್ಚಿ ಬಲೆಗಳನ್ನು ಸಿದ್ಧಪಡಿಸುತ್ತಿದ್ದರು. ಬಿಲ್ಲು-ಬಾಣ, ಚೂಪಾದ ಕಲ್ಲಿನ ಈಟಿಗಳು ಮತ್ತು ಕವಣೆ ಕಲ್ಲುಗಳ ಸಹಾಯದಿಂದ ದೂರದಿಂದಲೇ ಬೇಟೆಯಾಡುವ ಕಲೆ ಅವರಿಗೆ ಕರಗತವಾಗಿತ್ತು. ಗುಂಪಾಗಿ ಪ್ರಾಣಿಗಳನ್ನು ಸುತ್ತುವರಿದು ಬೇಟೆಯಾಡುವ ವಿಧಾನ ಅವರ ಸಾಂಸ್ಥಿಕ ಬುದ್ಧಿವಂತಿಕೆಯನ್ನು ತೋರಿಸುತ್ತದೆ.
‘ರಕ್ಕಸ ಕಲ್ಲು’ಗಳ ಹಿಂದಿನ ಜಾನಪದ ಕತೆ
ಸ್ಥಳೀಯ ನಿವಾಸಿಗಳು ಈ ಬೃಹತ್ ಶಿಲೆಗಳನ್ನು ಇಂದಿಗೂ ‘ರಕ್ಕಸಗಲ್ಲು’ ಎಂದೇ ಕರೆಯುತ್ತಾರೆ. ಇದರ ಹಿಂದೆ ಒಂದು ರೋಮಾಂಚಕ ಜಾನಪದ ಕತೆೆಯಿದೆ. ನುಂಕಮಲೆ ಸಿದ್ದೇಶ್ವರ ದೇವರಿಂದ ಶಾಪಗ್ರಸ್ತರಾದ ರಕ್ಕಸರು (ರಾಕ್ಷಸರು) ಇಲ್ಲೇ ಶಿಲೆಗಳಾಗಿ ನಿಂತರು ಎಂಬ ಐತಿಹ್ಯ ಇಲ್ಲಿ ತಲೆಮಾರುಗಳಿಂದ ಚಾಲ್ತಿಯಲ್ಲಿದೆ.
ಆದರೆ, ಪುರಾತತ್ವ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಇದು ಕೇವಲ ಕಾಲ್ಪನಿಕ ಕಥೆಯಲ್ಲ, ಬದಲಾಗಿ ನಮ್ಮ ಪೂರ್ವಜರ ನಂಬಿಕೆಗಳನ್ನು ಮತ್ತು ಅವರ ತಾಂತ್ರಿಕ ಜ್ಞಾನವನ್ನು ಸಾರುವ ಒಂದು ‘ಸಾಂಸ್ಕೃತಿಕ ಸ್ಮೃತಿ’. 1998ರಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಕೆ.ಪಿ. ಪುಣ್ಣಚ್ಚಾ ಅವರು ನಡೆಸಿದ ವ್ಯವಸ್ಥಿತ ಸರ್ವೇಕ್ಷಣೆಯಲ್ಲಿ, ಸ್ಥಳೀಯ ರೈತರಾದ ಕೆ.ಎಂ. ತಿಪ್ಪೇರುದ್ರಯ್ಯ ಎಂಬುವವರ ಕೃಷಿ ಜಮೀನಿನಲ್ಲಿ ಈ ಅದ್ಭುತ ಪ್ರಾಗೈತಿಹಾಸಿಕ ಶಿಲೆಗಳು ಬೆಳಕಿಗೆ ಬಂದವು. ಅಂದಿನಿಂದ ಈ ತಾಣ ಇಡೀ ವಿಶ್ವದ ಪುರಾತತ್ವ ತಜ್ಞರ ಗಮನ ಸೆಳೆಯತೊಡಗಿತು.
ಅಪರೂಪದ ಪೂರ್ಣ ಪ್ರಮಾಣದ ಮಾನವಾಕೃತಿ ಶಿಲೆಗಳು
ಕುಮತಿಯ ಶಿಲೆಗಳ ನಿಜವಾದ ಮಹತ್ವ ಅವುಗಳ ಆಕಾರದಲ್ಲಿದೆ. ಇವು ಸಾಮಾನ್ಯ ಬೃಹತ್ ಕಲ್ಲುಗಳಲ್ಲ. ಇತಿಹಾಸದ ಭಾಷೆಯಲ್ಲಿ ಇವುಗಳನ್ನು ‘ಮಾನವಾಕೃತಿ’ ಶಿಲೆಗಳು ಎಂದು ಕರೆಯಲಾಗುತ್ತದೆ. ಕರ್ನಾಟಕದ ಕೊಡುಗಲ್ಲು, ಇರಬನಕಲ್ಲು ಸೇರಿದಂತೆ ಹಲವೆಡೆ ಕಂಡುಬರುವ ಶಿಲೆಗಳು ಹಕ್ಕಿಯಾಕಾರ ಅಥವಾ ಅಸ್ಪಷ್ಟ ರೂಪದಲ್ಲಿದ್ದರೆ, ಕುಮತಿಯ ಶಿಲೆಗಳು ಮಾನವನ ತಲೆ, ಭುಜ, ಕೈಗಳು ಮತ್ತು ದೇಹದ ಕೆಳಭಾಗವನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.
ಇತಿಹಾಸ ತಜ್ಞರ ಪ್ರಕಾರ, ಇಂತಹ ಪೂರ್ಣ ಪ್ರಮಾಣದ ಮಾನವಾಕೃತಿ ಶಿಲೆಗಳು ಭಾರತದ ಪ್ರಾಗೈತಿಹಾಸಿಕ ಪರಂಪರೆಯಲ್ಲಿ ಅತ್ಯಂತ ಅಪರೂಪದವು. ಇವು ಕ್ರಿ.ಪೂ. 180ರಿಂದ ಕ್ರಿ.ಶ. 200ರ ಅವಧಿಗೆ ಸೇರಿದವು ಎಂದು ಅಂದಾಜಿಸಲಾಗಿದ್ದು, ಬೃಹತ್ ಶಿಲಾಯುಗದಿಂದ ಕಬ್ಬಿಣದ ಯುಗದ ಸಂಕ್ರಾಂತಿ ಕಾಲದ ಮಾನವನ ಕಲಾತ್ಮಕ ವಿಕಾಸಕ್ಕೆ ಇವು ಸಾಕ್ಷಿಯಾಗಿವೆ.
ಅಳಿವಿನಂಚಿನಲ್ಲಿರುವ ಸಾಂಸ್ಕೃತಿಕ ಸಂಪತ್ತು
ಒಂದು ಕಾಲದಲ್ಲಿ ಕುಮತಿ ತಾಣದಲ್ಲಿ ಏಳು ಮಾನವಾಕೃತಿ ಶಿಲೆಗಳು ಸಾಲಾಗಿ ನಿಂತಿದ್ದವು ಎಂದು ಇತಿಹಾಸಕಾರರು ಹೇಳುತ್ತಾರೆ. ಆದರೆ ಇಂದು ಕೇವಲ ಎರಡು ಶಿಲೆಗಳು ಮಾತ್ರ ಅಲ್ಪಸ್ವಲ್ಪ ಸುಸ್ಥಿತಿಯಲ್ಲಿ ಉಳಿದಿವೆ. ಉಳಿದ ಐದು ಶಿಲೆಗಳು ಜನರ ಅಜ್ಞಾನ, ನಿಧಿ ಶೋಧಕರ ಉಪಟಳ, ಕೃಷಿ ಭೂಮಿಯ ವಿಸ್ತರಣೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಶವಾಗಿವೆ ಎಂಬುದು ವಿಷಾದನೀಯ. ಇದು ಕೇವಲ ಕಲ್ಲುಗಳ ನಾಶವಲ್ಲ; ನಮ್ಮ ಇತಿಹಾಸದ ಅಮೂಲ್ಯ ಪುಟವೊಂದರ ನಾಶವಾಗಿದೆ. ಈ ಸಾಂಸ್ಕೃತಿಕ ಸಂಪತ್ತನ್ನು ತಕ್ಷಣ ಸಂರಕ್ಷಿಸುವ ಅಗತ್ಯವಿದೆ.
ಕುಮತಿಯ ಮಾನವಾಕೃತಿ ಶಿಲೆಗಳು ಭಾರತದ ಪ್ರಾಗೈತಿಹಾಸಿಕ ಇತಿಹಾಸದಲ್ಲೇ ಅತ್ಯಂತ ಅಪರೂಪದ ಆಸ್ತಿಗಳಾಗಿವೆ. ಈಗಾಗಲೇ ಏಳರಲ್ಲಿ ಐದು ಶಿಲೆಗಳು ನಾಶವಾಗಿರುವುದು ನಮ್ಮ ಸಾಂಸ್ಕೃತಿಕ ದುರಂತ. ಇನ್ನುಳಿದ ಎರಡು ಶಿಲೆಗಳನ್ನಾದರೂ ರಕ್ಷಿಸಲು ಸರಕಾರ ಮತ್ತು ಪುರಾತತ್ವ ಇಲಾಖೆ ತಕ್ಷಣ ಹೆಚ್ಚಿನ ಗಮನಹರಿಸಬೇಕು. ಈ ತಾಣವನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿ, ವೈಜ್ಞಾನಿಕವಾಗಿ ಬೇಲಿ ನಿರ್ಮಿಸಿ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ನಾವು ಇತಿಹಾಸವನ್ನು ಕೇವಲ ಪುಸ್ತಕಗಳಲ್ಲಿ ತೋರಿಸಬೇಕಾಗುತ್ತದೆ.
ಡಾ. ತಿಪ್ಪೇಸ್ವಾಮಿ, ನಿರ್ದೇಶಕರು,
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ, ಸಂಡೂರು
ಸಂರಕ್ಷಣೆ ನಮ್ಮ ಜವಾಬ್ದಾರಿ
ಕುಮತಿಯ ಮಾನವಾಕೃತಿ ಶಿಲೆಗಳು ಕೇವಲ ಮೂಕ ಕಲ್ಲುಗಳಲ್ಲ. ಅವು ನಮ್ಮ ಪೂರ್ವಜರ ಬದುಕು, ಸಾವು, ಆಚರಣೆ, ನಂಬಿಕೆ ಮತ್ತು ಕಲಾತ್ಮಕ ಪರಂಪರೆಯ ಜೀವಂತ ಸಾಕ್ಷಿಗಳು. ಈ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಸರಕಾರ, ಪುರಾತತ್ವ ಇಲಾಖೆ ಮತ್ತು ಸಾರ್ವಜನಿಕರು ಒಟ್ಟಾಗಿ ಈ ಐತಿಹಾಸಿಕ ತಾಣವನ್ನು ಕಾಪಾಡಬೇಕಾಗಿದೆ.
ನಮ್ಮ ನೆಲದ ಭವ್ಯ ಇತಿಹಾಸವನ್ನು ಸಾರುವ ಅಮೂಲ್ಯ ಸ್ಮಾರಕಗಳು ಹಾಗೂ ಪಾರಂಪರಿಕ ತಾಣಗಳು ಇಂದು ನಿರ್ಲಕ್ಷ್ಯಕ್ಕೊಳಗಾಗಿರುವುದು ವಿಷಾದನೀಯ. ಈ ಮಣ್ಣಿನ ಚರಿತ್ರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ಈಗಾಗಲೇ ಸದನದಲ್ಲಿ ಸರಕಾರದ ಗಮನ ಸೆಳೆಯಲಾಗಿದೆ. ಮುಂಬರುವ ದಿನಗಳಲ್ಲಿ ಸರಕಾರದ ಜೊತೆಗೂಡಿ ಈ ತಾಣಗಳ ಜೀರ್ಣೋದ್ಧಾರ ಹಾಗೂ ಸಂರಕ್ಷಣೆಗೆ ಪೂರಕವಾದ ಎಲ್ಲ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.
ಡಾ. ಶ್ರೀನಿವಾಸ್ ಎನ್.ಟಿ.,
ಶಾಸಕರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರ






