ಬಾಬಾಬುಡಾನ್ ದರ್ಗಾ: ಸಂಘಿ ದಾಳಿಯಿಂದ ಸತ್ಯವನ್ನು ಉಳಿಸಲು ಮತ್ತೊಂದು ಅವಕಾಶ!

ಸುಳ್ಳು-4: ಮೆಕೆಂಝಿ ದಾಖಲೆಗಳಲ್ಲೂ ಇದು ದೇವಸ್ಥಾನವಾಗಿತ್ತೆಂಬ ಉಲ್ಲೇಖಗಳಿವೆ
ಸತ್ಯ: ಕರ್ನಲ್ ಮೆಕೆಂಝಿ ಎಂಬ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿ 1782ಕ್ಕೆ ಭಾರತಕ್ಕೆ ಬಂದು 1818ರ ತನಕ ಇಡೀ ದಕ್ಷಿಣ ಭಾರತವನ್ನು ಸುತ್ತಾಡಿ ತಾನು ಕಂಡ ಭಾರತದ ಸಾಮಾಜಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿವರಗಳನ್ನು ದಾಖಲಿಸುತ್ತಾನೆ. 1821ರಲ್ಲಿ ಮೆಕೆಂಝಿ ನಿಧನನಾದ ನಂತರ ಆತನು ಸಂಗ್ರಹಿಸಿದ ದಾಖಲೆಗಳನ್ನು ಈಸ್ಟ್ ಇಂಡಿಯಾ ಕಂಪೆನಿಯು ಮೂರು ಹಡಗುಗಳಲ್ಲಿ ಬ್ರಿಟನ್‌ಗೆ ಸಾಗಿಸುತ್ತದೆ. ಸ್ಥಳೀಯ ಭಾಷೆಯಲ್ಲಿ ದಾಖಲಾಗಿದ್ದ ಒಂದಷ್ಟನ್ನು ಮದ್ರಾಸ್ ವಿಶ್ವವಿದ್ಯಾನಿಲಯದ ಗ್ರಂಥಾಲಯಗಳಲ್ಲಿ ಸಂಗ್ರಹಿಸಿಡಲಾಗಿದೆ.
ಹೀಗೆ ಲಭವಿರುವ ಸಂಗ್ರಹವನ್ನು ಆಧರಿಸಿ ಟಿ.ವಿ. ಮಹಾಲಿಂಗಂ ಎನ್ನುವವರು ‘Summary Of The Historical Manuscripts in the Mackenzie Collections’ ಎಂಬ ಶೀರ್ಷಿಕೆಯಲ್ಲಿ ಎರಡು ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಆ ನಂತರದಲ್ಲಿ ಅದರಲ್ಲಿ ಕರ್ನಾಟಕಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ‘ಕರ್ನಾಟಕದ ಕೈಫಿಯತ್ತುಗಳು’ ಎಂಬ ಶೀರ್ಷಿಕೆಯಲ್ಲಿ ಪ್ರೊ. ಎಂ.ಎಂ. ಕಲಬುರ್ಗಿಯವರು ಒಂದು ಸಮಗ್ರ ಸಂಪುಟವನ್ನು ಸಂಪಾದಿಸಿದ್ದಾರೆ.
ಈಗ ‘‘ಮೆಕೆಂಝಿಯವರು ತಮ್ಮ ದಾಖಲೆಗಳಲ್ಲಿ ಹೈದರ್ ಅಲಿಯ ಕಾಲದ ನಂತರವೇ ಈ ಸಂಸ್ಥೆಯು ಮುಸ್ಲಿಮರ ಒಡೆತನಕ್ಕೆ ಬಂದಿತೆಂದು ದಾಖಲಿಸಿದ್ದಾರೆ’’ ಎಂಬುದು ಸಂಘಪರಿವಾರದ ವಾದವಾಗಿದೆ.
ಇದನ್ನೇ 2010ರಲ್ಲಿ ಮುಜರಾಯಿ ಕಮಿಷನರ್ ಅವರು ಒಂದು ಪುರಾವೆಯಾಗಿ ಒಪ್ಪಿಕೊಂಡಿದ್ದಾರೆ ಹಾಗೂ ದುರದೃಷ್ಟವಶಾತ್ ಕರ್ನಾಟಕ ಹೈಕೋರ್ಟ್ ಕೂಡ ತನ್ನ ನಿಲುವಿಗೆ ಇದನ್ನು ಒಂದು ಪುರಾವೆಯಾಗಿ ಒಪ್ಪಿಕೊಂಡಿದೆ.
ಆದರೆ ವಾಸ್ತವವೇನೆಂದರೆ ಕಲಬುರ್ಗಿಯವರ ಸಂಪುಟದಲ್ಲಾಗಲೀ, ಮಹಾಲಿಂಗಂ ಅವರ ಸಂಪುಟಗಳಲ್ಲಾಗಲೀ ಎಲ್ಲೂ ಕೂಡ ಬಾಬಾಬುಡಾನ್ ದರ್ಗಾದ ಬಗ್ಗೆಯಾಗಲೀ, ದತ್ತಪೀಠದ ಬಗ್ಗೆಯಾಗಲೀ ಪ್ರಸ್ತಾವವೇ ಇಲ್ಲ!
ಅಷ್ಟು ಮಾತ್ರವಲ್ಲ, ಮುಜರಾಯಿ ಕಮಿಷನರ್ ಅವರ ವರದಿಯನ್ನು ಉಲ್ಲೇಖಿಸಿ ಈ ಸಂಬಂಧ ಮುಜರಾಯಿ ಕಚೇರಿಯಲ್ಲಿರುವ ಮೆಕೆಂಝಿ ದಾಖಲೆಯನ್ನು ಒದಗಿಸಬೇಕೆಂಬ ಆರ್‌ಟಿಐ ಅರ್ಜಿಗೆ ಇಲಾಖೆಯಲ್ಲಿ ಅಂಥ ಯಾವುದೇ ದಾಖಲೆಯೂ ಇಲ್ಲವೆಂದು 2015ರ ಅಕ್ಟೊಬರ್ 15ರಂದು ಉತ್ತರಿಸಿದ್ದಾರೆ..!!
ಸುಳ್ಳು-6: 1991ರ ಕಾಯ್ದೆ ಈ ಸಂಸ್ಥೆಗೆ ಅನ್ವಯವಾಗುವುದಿಲ್ಲ.
ಸತ್ಯ: ಬಾಬರಿ ಮಸೀದಿ-ರಾಮಮಂದಿರ ವಿವಾದ ತಾರಕದಲ್ಲಿದ್ದಾಗ ಭಾರತದ ಪಾರ್ಲಿಮೆಂಟ್ ‘Places Of Worship (Special Provisons) Act-1991’ ಎಂಬ ಕಾಯ್ದೆಯನ್ನು ಜಾರಿ ಮಾಡಿದೆ. ಅದರ ಪ್ರಕಾರ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದವೊಂದನ್ನು ಹೊರತುಪಡಿಸಿ ಹಾಲಿ ಕೋರ್ಟುಗಳಲ್ಲಿರುವ ಹಾಗೂ ಮುಂದೆ ಬರಬಹುದಾದ ಧಾರ್ಮಿಕ ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪಕ್ಕೆ ಸಂಬಂಧಪಟ್ಟ ವಿವಾದಗಳನ್ನು ಈ ಕಾಯ್ದೆಯಂತೆ ಬಗೆಹರಿಸಬೇಕು.
ಈ ಕಾಯ್ದೆಯು 1947ರ ಆಗಸ್ಟ್ 15ರಂದು ಉಪಾಸನಾ ಸ್ಥಳಗಳ ಧಾರ್ಮಿಕ ಸ್ವರೂಪ ಯಾವ ರೀತಿಯಿತ್ತೋ ಅದೇ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕೆಂದು ವಿಧಿಸುತ್ತದೆ ಹಾಗೂ ಈ ಬಗ್ಗೆ 1991ರ ನಂತರದಲ್ಲಿ ದಾಖಲಾಗುವ ಯಾವುದೇ ವಿವಾದಗಳನ್ನು ಅಥವಾ ಹಾಲಿ ಕೋರ್ಟಿನಲ್ಲಿರುವ ವಿವಾದಗಳನ್ನು ಈ ಕಾಯ್ದೆಗೆ ತಕ್ಕಂತೆ ತೀರ್ಮಾನಿಸಬೇಕೆಂದು ವಿಧಿಸುತ್ತದೆ.
ಅಲ್ಲದೆ ಅಂತಹ ಉಪಾಸನಾ ಸ್ಥಳಗಳನ್ನು ಒಂದು ಧಾರ್ಮಿಕ ಸ್ವರೂಪದಿಂದ ಮತ್ತೊಂದು ಧಾರ್ಮಿಕ ಸ್ವರೂಪಕ್ಕೆ ಅಥವಾ ಒಂದೇ ಧರ್ಮದ ಒಂದು ಪಂಥದಿಂದ ಮತ್ತೊಂದು ಪಂಥಕ್ಕೆ ಧಾರ್ಮಿಕ ರೂಪಾಂತರಗೊಳಿಸುವುದು ಶಿಕ್ಷಾರ್ಹ ಅಪರಾಧ.
ಸಂಘಿಗಳು ಮುಂದಿಡುತ್ತಿರುವ ವಾದದ ಸತ್ಯಾಸತ್ಯತೆಗಳೇನೇ ಇದ್ದರೂ, ಅವರು ಕೂಡಾ 1947ರ ಆಗಸ್ಟ್ 15ರಂದು ಸದರಿ ಧಾರ್ಮಿಕ ಕೇಂದ್ರವು ಒಂದು ದರ್ಗಾ ಆಗಿತ್ತೆಂಬುದನ್ನು ಒಪ್ಪಿಕೊಳ್ಳುತ್ತಾರೆ!
ದರ್ಗಾ ಎಂದರೆ ಹಿಂದೂ-ಮುಸ್ಲಿಮರಿಬ್ಬರು ಶ್ರದ್ಧೆಯಿಂದ ನಡೆದುಕೊಳ್ಳುವ, ಶಾಖಾದ್ರಿ ಆಡಳಿತಾತ್ಮಕ ಮುಖ್ಯಸ್ಥನಾಗಿಯೂ, ಮುಜಾವರ್ ಅವರಿಂದ ನೇಮಕವಾಗುವ ಧಾರ್ಮಿಕ ವಿಧಾನಗಳನ್ನು ನಡೆಸಿಕೊಡುವ ವ್ಯವಸ್ಥೆ ಇರುವ, ಸೌಹಾರ್ದ ಕೇಂದ್ರವಾಗಿರುತ್ತದೆ.
ಬಾಬಾಬುಡಾನ್ ದರ್ಗಾದಲ್ಲಿಯೂ ಅದೇ ಪದ್ಧತಿಗಳಿತ್ತೆಂಬುದನ್ನು ಬ್ರಿಟಿಷ್ ದಾಖಲೆಗಳೂ, ಮೈಸೂರು ಸಂಸ್ಥಾನದ ಆಡಳಿತಾತ್ಮಕ ನಡಾವಳಿಗಳು, ಸಂಸ್ಥೆಯಲ್ಲಿ ಲಭ್ಯವಿರುವ ಐತಿಹಾಸಿಕ ಹಾಗೂ ಶಾಸನಾತ್ಮಕ ದಾಖಲೆಗಳೂ ಸ್ಪಷ್ಟಪಡಿಸುತ್ತವೆ.
ಹೀಗಾಗಿ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡುವುದು ಮತ್ತು ಹಿಂದೂ ಆಗಮ ಪದ್ಧತಿಯಲ್ಲಿ ಪ್ರತಿಷ್ಠಾಪನೆ, ಧೂಪ, ದೀಪ, ಅರ್ಘ್ಯ, ನೈವೇದ್ಯಗಳಂಥ ವಿಧಾನಗಳಿಗೆ ಅವಕಾಶ ಮಾಡಿಕೊಡುವುದು 1991ರ ಕಾಯ್ದೆಯ ಉಲ್ಲಂಘನೆಯಾಗುತ್ತದೆ.
ಈ ಪ್ರಕರಣಕ್ಕೆ 1991ರ ಕಾಯ್ದೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ಕೋರ್ಟಿನ ಮುಂದೆ ಅಹವಾಲುದಾರರು ಮಂಡಿಸಿರುವ ವಾದವೇನೆಂದರೆ ಇದಕ್ಕೆ ಸಂಬಂಧಪಟ್ಟ ವಿವಾದವು 1978ರಲ್ಲೇ ಇತ್ಯರ್ಥವಾಗಿತ್ತು ಎಂಬುದು.
ಆದರೆ 1978ರ ವಿವಾದವಿದ್ದದ್ದು ಸಂಸ್ಥೆಯನ್ನು ವಕ್ಫ್ ಬೋರ್ಡಿಗೆ ಸೇರಿಸುವ ಬಗ್ಗೆ ಮತ್ತು ಆ ವಿವಾದದಲ್ಲಿ ಈ ಸಂಸ್ಥೆಯ ಧಾರ್ಮಿಕ ಸ್ವರೂಪವು ದರ್ಗಾ ಎಂದೇ ಇತ್ಯರ್ಥವಾಗಿತ್ತು.
ಅಲ್ಲದೆ ಇದು ದರ್ಗಾ ಅಲ್ಲ ದೇವಸ್ಥಾನ ಎಂಬ ವಿವಾದ ಕೋರ್ಟಿನ ಮೆಟ್ಟಿಲು ಹತ್ತಿದ್ದು 2003ರಲ್ಲಿ. ಆ ಪ್ರಕರಣದಲ್ಲೇ ಹೈಕೋರ್ಟ್ ಇದು ದರ್ಗಾ ಎಂದು ತೀರ್ಮಾನಿಸಿದ್ದ 1989ರ ಮುಜರಾಯಿ ಕಮಿಷನ್‌ರ ತೀರ್ಪನ್ನು ರದ್ದು ಮಾಡಿ ಹೊಸದಾಗಿ ದಾಖಲೆಗಳನ್ನು ಪರಿಶೀಲಿಸಲು ಆದೇಶಿಸಿತ್ತು.
ಹೀಗಾಗಿ ಇದು 1991ರ ಕಾಯ್ದೆ ಜಾರಿಯಾದ ನಂತರ 2003ರಲ್ಲಿ ಹುಟ್ಟಿಕೊಂಡ ಹೊಸ ಪ್ರಕರಣವಾಗಿದ್ದು 1991ರ ಕಾಯ್ದೆಯ ಪ್ರಕಾರ 1947ರ ಆಗಸ್ಟ್ 15ರಂದು ಯಾವ ದರ್ಗಾ ಸ್ವರೂಪದಲ್ಲಿ ಬಾಬಾಬುಡಾನ್ ದರ್ಗಾ ಇತ್ತೋ, ಯಾವ್ಯಾವ ಧಾರ್ಮಿಕ ವಿಧಾನಗಳು ನಡೆಯುತ್ತಿದ್ದವೋ ಅದೇ ಸ್ವರೂಪವನ್ನು ಉಳಿಸಿಕೊಳ್ಳಬೇಕಿರುವುದು ಸರಕಾರದ ಕರ್ತವ್ಯವಾಗಿರುತ್ತದೆ.
ಅದರ ಬದಲಿಗೆ ಅಲ್ಲಿ ಹಿಂದೂ ಅರ್ಚಕರನ್ನು ನೇಮಕ ಮಾಡಿ, ಹಿಂದೂ ಆಗಮ ಪದ್ಧತಿಯ ಮೂಲಕ ಪೂಜೆಗಳನ್ನು ನಡೆಸುವುದು ಸಂಸ್ಥೆಯ ಧಾರ್ಮಿಕ ಸ್ವರೂಪವನ್ನೇ ಬದಲಿಸಿದಂತಾಗುತ್ತದೆ. ಮತ್ತದು 1991ರ ಕಾಯ್ದೆಯ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ.