ನಿರ್ವಹಣೆಯಿಲ್ಲದೆ ಪಾಳು ಬಿದ್ದ ಬಾಬು ಜಗಜೀವನರಾಮ್ ಭವನ

ದಾವಣಗೆರೆ : ಎಸ್.ಎಂ.ಕೃಷ್ಣ ನಗರದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ 2012ರಲ್ಲಿ ನಿರ್ಮಾಣವಾಗಿದ್ದ ಡಾ. ಬಾಬು ಜಗಜೀವನರಾಮ್ ಭವನ ನಿರ್ವಹಣೆಯಿಲ್ಲದೆ ಸಂಪೂರ್ಣವಾಗಿ ಪಾಳು ಬಿ ದ್ದಿದೆ.
ಎಚ್.ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಸಂದರ್ಭದಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಡಾ.ಬಾಬು ಜಗಜೀವನ ರಾಮ್ ಭವನ ನಿರ್ಮಾಣ ಮಾಡಿದ್ದರು. 2017ರ ಫೆಬ್ರವರಿ 19ರಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಈಗ ಸಚಿವರಾಗಿರುವ ಎಸ್.ಎಸ್. ಮಲ್ಲಿಕಾರ್ಜುನ್, ಅಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್.ಆಂಜನೇಯ ಲೋಕಾರ್ಪಣೆ ಮಾಡಿದ್ದರು. ಆದರೆ ಸಾರ್ವಜನಿಕರು ಉಪಯೋಗಿಸದೆ ಇಂದಿನವರೆಗೂ ಭವನ ಪಾಳು ಬಿದ್ದಿದೆ.
ಭವನದ ಕಿಟಕಿಗಳಿಗೆ ಹಾಕಿದ್ದ ಗಾಜುಗಳು ಸಂಪೂರ್ಣ ಪುಡಿ ಪುಡಿಯಾಗಿವೆ. ಭವನದ ಒಳಗೆ ಹಾಕಿರುವ ಸೀಲಿಂಗ್ ಕಳಚಿ ಬಿದ್ದಿದೆ, ಕಸದ ರಾಶಿ ಬಿದ್ದಿದೆ. ವೈರಿಂಗ್ ಮಾಡಿದ್ದ ಇಲೆಕ್ಟ್ರಿಕಲ್ ಪೈಪ್‌ಗಳು, ಸಣ್ಣ ಸಣ್ಣ ವಸ್ತುಗಳು ಕಳ್ಳರ ಪಾಲಾಗಿವೆ. ಭವನದ ಮೇಲೆ ಹಾಕಿರುವ ನೀರಿನ ಬೃಹತ್ ಡ್ರಮ್ ಕಳಚಿ ಬಿದ್ದಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಭವನದ ಆವರಣದಲ್ಲಿ ಲಕ್ಷಾಂತರ ರೂ. ವೆಚ್ಚದ ಜನರೇಟರ್ ತುಕ್ಕು ಹಿಡಿದು ಧೂಳು ಮೆತ್ತಿ ಮೂಲೆಗೆ ಸೇರಿದೆ. ಸಭೆ, ಸಮಾರಂಭ ನಡೆದಾಗ ಜನರು ಊಟ ಮಾಡುವ ಕೊಠಡಿ ಮತ್ತು ಅಡುಗೆ ಮನೆ ಸಂಪೂರ್ಣ ಧೂಳಿನಿಂದ ಆವೃತ್ತವಾಗಿದೆ. ಒಟ್ಟಾರೆ ಭವನ ನಿರ್ಮಾಣ ಮಾಡಿ ಉದ್ಘಾಟನಾ ಕಾರ್ಯಕ್ರಮ ನಡೆಸಿರುವುದು ಬಿಟ್ಟರೆ ಹೇಳಿಕೊಳ್ಳುವಂತಹ ಯಾವುದೇ ಸಭೆ, ಸಮಾರಂಭಗಳು ನಡೆದಿಲ್ಲ. ಸರಕಾರದ ಹಣ ಪೋಲು ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ತರಾಟೆ:
ಎ.23ರಂದು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಉಪಲೋಕಾಯುಕ್ತ ನ್ಯಾ. ಬಿ.ವೀರಪ್ಪ ಭೇಟಿ ನೀಡಿ, ಡಾ.ಬಾಬು ಜಗಜೀವನ ರಾಮ್ ಭವನದ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಯಾವ ಪುರುಷಾರ್ಥಕ್ಕೆ ಭವನ ನಿರ್ಮಿಸಿದ್ದೀರಿ. ಭವನ ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡದೆ, ಭವನ ಪಾಳು ಬಿದ್ದು ಹಾಳು ಕೊಂಪೆಯಾಗಿದೆ. ಭವನದ ಆವರಣದಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಕಸದ ರಾಶಿ, ಮದ್ಯದ ಬಾಟಲಿಗಳಿಂದ ತುಂಬಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು.
ನವೀಕರಣ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಈ ಭವನದ ಉಪಯೋಗ ಪಡೆದುಕೊಳ್ಳಲು ಉಪಲೋಕಾಯುಕ್ತ ಬಿ.ವೀರಪ್ಪಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ನಾಗರಾಜ್ ಅವರು ಎರಡು ತಿಂಗಳೊಳಗೆ ಭವನ ನವೀಕರಣಗೊಳಿಸಿ ತಹಶೀಲ್ದಾರ್ ಕಚೇರಿಯ ಉಪಯೋಗಕ್ಕೆ ನೀಡುವುದಾಗಿ ಉಪಲೋಕಾಯುಕ್ತರಿಗೆ ತಿಳಿಸಿದ್ದರು. ಆದರೆ ತಿಂಗಳಾಗುತ್ತಿದ್ದರೂ ಭವನದ ನವೀಕರಣ ಮಾಡುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಡಾ.ಬಾಬು ಜಗಜೀವನರಾಮ್ ಭವನ ನಿರ್ಮಾಣ ಮಾಡಿ ರಾಷ್ಟ್ರ ನಾಯಕನಿಗೆ ಅಪಮಾನ ಮಾಡಲಾಗಿದೆ. ಭವನ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕೂಡಲೇ ಅಧಿಕಾರಿಗಳು ಭವನ ನವೀಕರಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು.
-ಶಾಮನೂರು ಕಣ್ಣಾಳು ಅಂಜಿನಪ್ಪ, ಸದಸ್ಯರು, ಪಾಲಿಕೆ ಆಶ್ರಯ ಸಮಿತಿ.







