Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಾಘಾ ಜತಿನ್ ಎಂಬ ಕ್ರಾಂತಿ ಪಥದ ರೂವಾರಿ:...

ಬಾಘಾ ಜತಿನ್ ಎಂಬ ಕ್ರಾಂತಿ ಪಥದ ರೂವಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ2 Jan 2026 10:30 AM IST
share
ಬಾಘಾ ಜತಿನ್ ಎಂಬ ಕ್ರಾಂತಿ ಪಥದ ರೂವಾರಿ: ಇವರಾರೂ ಕ್ಷಮೆ ಯಾಚಿಸಲಿಲ್ಲ!
ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಧುಮುಕಿದವರು!

ಭಾಗ - 18

ಬಂಗಾಳದ ಬ್ರಿಟಿಷ್ ಗುಪ್ತಚರ ವಿಭಾಗದ ಮುಖ್ಯಸ್ಥರಾಗಿದ್ದ ಚಾರ್ಲ್ಸ್ ಟೆಗಾರ್ಟ್ ‘‘ಈ ಬಂಗಾಳದ ಕ್ರಾಂತಿಕಾರಿಗಳಷ್ಟು ನಿಸ್ವಾರ್ಥ ರಾಜಕೀಯ ಕಾರ್ಯಕರ್ತರನ್ನು ನಾನು ನೋಡಿಯೇ ಇಲ್ಲ. ಈತ ಬ್ರಿಟಿಷನಾಗಿದ್ದಿದ್ದರೆ ಟ್ರಫಾಲ್ಗರ್ ಚೌಕದ ನೆಲ್ಸನ್ ಪ್ರತಿಮೆಯ ಪಕ್ಕ ಈತನ ಪ್ರತಿಮೆ ಸ್ಥಾಪಿಸುತ್ತಿದ್ದೆವು’’ ಎಂದು ಹೇಳಿದ್ದ.

ಈತ ಪ್ರಶಂಸೆಯ ಮಾತಾಡಿದ್ದು ಭಾರತದ ಮೊದಲ ತಲೆಮಾರಿನ ಹುತಾತ್ಮ ಬಾಘಾ ಜತಿನ್ ಬಗ್ಗೆ. ಬ್ರಿಟಿಷ್ ಜೊತೆ ನೇರ ಮುಖಾಮುಖಿಯಲ್ಲಿ ಹುತಾತ್ಮರಾದ ಮೊದಲ ಕ್ರಾಂತಿಕಾರಿ ನಾಯಕ ಬಾಘಾ ಜತಿನ್.

ಬಾಘಾ ಜತಿನ್ ಡಿಸೆಂಬರ್ 7, 1879ರಂದು ನಾಡಿಯಾ ಜಿಲ್ಲೆಯ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಜತಿನ್ ತಾಯಿಯ ತವರು ಮನೆಯಲ್ಲಿ ಜೀವನ ಮುಂದುವರಿಸಿದರು. ಜತಿನ್ ತಾಯಿ ಆ ಕಾಲದ ಲೇಖಕರಾದ ಬಂಕಿಮ ಚಂದ್ರ ಚಟರ್ಜಿ ಮತ್ತಿತರರ ಕತೆ, ಲೇಖನಗಳನ್ನು ಮಗನಿಗೆ ಓದಿಸಿದ್ದರು.

1895ರಲ್ಲಿ ಮೆಟ್ರಿಕ್ ಪಾಸು ಮಾಡಿದ ಜತಿನ್ ಕೋಲ್ಕತಾದ ಕಾಲೇಜಲ್ಲಿ ಬಿ.ಎ. ಓದಲು ದಾಖಲಾದರು. ಆಗ ಅವರು ಸ್ವಾಮಿ ವಿವೇಕಾನಂದರ ಸಂಪರ್ಕಕ್ಕೆ ಬಂದು ವಿವೇಕಾನಂದರ ಸ್ವತಂತ್ರ ಭಾರತದ ಕನಸನ್ನು ಆವಾಹಿಸಿಕೊಂಡರು. ಸ್ವಾಮಿ ವಿವೇಕಾನಂದ ಅವರು ಜತಿನ್‌ಗೆ ಕಾಮವಶವಾಗದೇ ಬ್ರಹ್ಮಚರ್ಯ ಸಾಧಿಸುವುದನ್ನು ಹೇಳಿಕೊಟ್ಟರು. ಹಾಗೆಯೇ ದೈಹಿಕ ದಾರ್ಢ್ಯತೆ ಬೆಳೆಸಿಕೊಳ್ಳಲು ಆಖಾಡಗಳನ್ನು ಸ್ಥಾಪಿಸಲು ಪ್ರೇರಣೆ ಕೊಟ್ಟರು. ಭಗಿನಿ ನಿವೇದಿತಾ ಜೊತೆಗೆ ಇಂತಹ ಆಖಾಡಗಳನ್ನು ಸ್ಥಾಪಿಸಲು ಜತಿನ್ ಶ್ರಮಿಸಿದರು. 1899ರಲ್ಲಿ ವಸಾಹತುಶಾಹಿ ಶಿಕ್ಷಣದ ಬಗ್ಗೆ ನಿರಾಸಕ್ತಿ ತಳೆದ ಜತಿನ್ ಪ್ರಿಂಗ್ಲ್ ಕೆನೆಡಿ ಎಂಬ ಪತ್ರಕರ್ತ- ವಕೀಲರ ಸಹಾಯಕನಾಗಿ ಕೆಲಸಕ್ಕೆ ಸೇರಿದರು. 1900ರಲ್ಲಿ ಜತಿನ್ ಇಂದುಬಾಲಾ ಬ್ಯಾನರ್ಜಿಯನ್ನು ವಿವಾಹವಾದರು. ಅವರಿಗೆ ನಾಲ್ಕು ಮಕ್ಕಳು. ಮೊದಲನೇ ಮಗ ಮೂರೇ ವರ್ಷಕ್ಕೆ ತೀರಿಕೊಂಡಾಗ ದುಃಖತಪ್ತರಾದ ಜತಿನ್ ಮಡದಿಯೊಂದಿಗೆ ಹೃಷಿಕೇಶಕ್ಕೆ ಮನಃಶಾಂತಿಗಾಗಿ ತೀರ್ಥಯಾತ್ರೆ ಹೋಗಿದ್ದರು. ಅಲ್ಲಿ ಭೋಲಾನಂದ ಗಿರಿ ಎಂಬ ಸನ್ಯಾಸಿಯ ಪರಿಚಯವಾಯಿತು. ಈ ಸಂತ ಜತಿನ್ ನ ಕ್ರಾಂತಿಕಾರಿ ಆಶಯಗಳನ್ನು ಅರಿತು ಆ ಹಾದಿಯ ಬಗ್ಗೆ ಮಾರ್ಗದರ್ಶನ ಮಾಡಿದ್ದರು.

ಅಲ್ಲಿಂದ ವಾಪಸಾದಾಗ ಜತಿನ್ ಊರಿನಲ್ಲಿ ಹುಲಿಯೊಂದು ಹಾವಳಿ ಮಾಡುತ್ತಿತ್ತು. ಅಕಸ್ಮಾತ್ ಕಾಡಿಗೆ ಹೋಗಿದ್ದ ಜತಿನ್‌ಗೆ ಈ ಹುಲಿ ಎದುರಾಗಿ ಜತಿನ್ ಬರಿಗೈಯಲ್ಲಿ ಕೇವಲ ಚಾಕು ಒಂದರಿಂದ ಆ ಹುಲಿಯನ್ನು ಕೊಂದು ಹಾಕಿದ್ದರು. ಮೈಯೆಲ್ಲಾ ರಣಗಾಯವಾಗಿದ್ದ ಜತಿನ್‌ರನ್ನು ಕೋಲ್ಕತಾದ ಸರ್ಜನ್ ಸುರೇಶ್ ಪ್ರಸಾದ ಸರ್ಬಾಧಿಕಾರಿ ಗುಣ ಪಡಿಸಿ ಆತನ ಸಾಹಸದ ಬಗ್ಗೆ ಸರಕಾರದ ಗಮನ ಸೆಳೆದರು. ಹುಲಿಯನ್ನು ಕೊಲ್ಲುವ ಉಬ್ಬಚ್ಚಿನ ಶಿಲ್ಪ ಸಹಿತದ ಬೆಳ್ಳಿಯ ಫಲಕವೊಂದನ್ನು ಬ್ರಿಟಿಷ್ ಸರಕಾರ ಜತಿನ್‌ಗೆ ಪ್ರದಾನ ಮಾಡಿತ್ತು. ಅಲ್ಲಿಂದಾಚೆಗೆ ಜತಿನ್ ಬಾಘಾ ಜತಿನ್ (ಹುಲಿ ಜತಿನ್) ಎಂದೇ ಗುರುತಿಸಲ್ಪಟ್ಟರು.

ಕ್ರಾಂತಿಕಾರಿ ಯುವಕರ ತೊಟ್ಟಿಲಾಗಿದ್ದ ಅನುಶೀಲನ್ ಸಮಿತಿಯ ಸ್ಥಾಪಕರಲ್ಲಿ ಜತಿನ್ ಕೂಡಾ ಒಬ್ಬರು. ಬಂಗಾಳದ ಎರಡು ತಲೆಮಾರುಗಳ ಕ್ರಾಂತಿಕಾರಿಗಳನ್ನು ತಯಾರು ಮಾಡಿದ ವೇದಿಕೆ ಇದು. 1903ರಲ್ಲಿ ಅರೊಬಿಂದ ಘೋಷ್ ಸಂಪರ್ಕಕ್ಕೆ ಬಂದ ಜತಿನ್ ಅವರೊಂದಿಗೆ ಕೈಜೋಡಿಸಿ ಕೆಲಸ ಮಾಡಲು ತೀರ್ಮಾನಿಸಿದರು.

ಅಸದೃಶ ಸಂಘಟಕರಾಗಿದ್ದ ಜತಿನ್ ಅನತಿ ಕಾಲದಲ್ಲಿ ಬಂಗಾಳ, ಒಡಿಶಾಗಳಲ್ಲಿ ನೂರಾರು ಸಮಿತಿಗಳನ್ನು ಹುಟ್ಟು ಹಾಕಿ ನೂರಾರು ಯುವಕರನ್ನು ಕ್ರಾಂತಿಕಾರಿ ಚಟುವಟಿಕೆಗಳ ವ್ಯಾಪ್ತಿಗೆ ತಂದರು. ಅದೇ ವೇಳೆ ಬ್ರಿಟಿಷರ ಸೈನಿಕರಾಗಿದ್ದ ಭಾರತೀಯರನ್ನು ಈ ಹೋರಾಟಕ್ಕೆಳೆಯಬೇಕು ಎಂಬ ನಿಲುವು ಜತಿನ್‌ದಾಗಿತ್ತು.

ಆ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳು ಭಾರತೀಯರನ್ನು ಕೇವಲವಾಗಿ ನೋಡಿ ಅವಮಾನಿಸುವ ಪ್ರಸಂಗಗಳು ನಿತ್ಯದ ಘಟನೆಗಳಾಗಿದ್ದವು. ಒಂದೆರಡು ಬಾರಿ ಜತಿನ್ ಈ ಪುಂಡು ಪೋಕರಿ ಬ್ರಿಟಿಷ್ ಗುಂಪಿಗೆ ಹೊಡೆದು ಅವರ ಮೇಲೆ ಪ್ರಕರಣವೂ ದಾಖಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಜತಿನ್ ಬಗ್ಗೆ ಮೆಚ್ಚುಗೆ ಹೆಚ್ಚುತ್ತಿದ್ದಂತೆ ಬ್ರಿಟಿಷರು ಈ ಪ್ರಕರಣವನ್ನೇ ಹಿಂದೆಗೆದುಕೊಂಡರು.

ಸಂಘಟನೆಯನ್ನು ಬಲಪಡಿಸುತ್ತಾ ವಿಸ್ತರಿಸುತ್ತಾ ಜತಿನ್, ದೇವ್ ಘರ್‌ನಲ್ಲಿ ಬಾಂಬು ಫ್ಯಾಕ್ಟರಿಯೊಂದನ್ನು ಸ್ಥಾಪಿಸಿದರು. ಮಣಿಕ್ ತಾಲಾದಲ್ಲಿ ಹೇಮಚಂದ್ರ ಕನುಂಗೋ ಇಂಥದ್ದೇ ಫ್ಯಾಕ್ಟರಿ ಸ್ಥಾಪಿಸಿದ್ದರು. ಆದರೆ ಜತಿನ್ ಕಾಲ ಕೂಡಿ ಬಾರದ ಭಯೋತ್ಪಾದಕ ಚಟುವಟಿಕೆಗಳಿಗೆ ಅಸಮ್ಮತಿ ತೋರಿದ್ದರು. ಬಾರಿನ್ ಘೋಷ್ ಮಾತ್ರಾ ತಮ್ಮದೇ ಹಾದಿಯನ್ನು ಹಿಡಿದು ಕ್ರಾಂತಿಕಾರಿ ಚಟುವಟಿಕೆಯಲ್ಲಿ ತೊಡಗಿದ್ದರು. ಜತಿನ್, ಜೀನಿಯಸ್ ಇರುವುದು ಸಂಘಟನೆಯನ್ನು ಕಟ್ಟಿದ ರೀತಿಯಲ್ಲಿ. ಅದು ಎಷ್ಟು ವಿಕೇಂದ್ರೀಕೃತ ಆಗಿತ್ತೆಂದರೆ, ಸ್ಥಳಿಯ ಕೇಂದ್ರಗಳು ಬಹುತೇಕ ಸ್ವಾಯತ್ತವಾಗಿದ್ದವು. ಪ್ರಕೃತಿ ವಿಕೋಪ, ಅಂಟು ಜಾಡ್ಯಗಳ ಕಾಲದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವಾಗಿತ್ತು. ಕುಂಭ ಮೇಳದಂತಹ ಸಂದರ್ಭಗಳಲ್ಲೂ ಈ ಪಡೆ ಕಾರ್ಯಶೀಲವಾಗಿರುವಂತೆ ಜತಿನ್ ನೋಡಿಕೊಂಡಿದ್ದರು. ಈ ಸಂದರ್ಭಗಳನ್ನು ಹೊಸ ಹೊಸ ಯುವಕರನ್ನು ಸಂಘಟನೆಗೆ ಸೆಳೆವ ಉಪಾಯವಾಗಿಯೂ ಜತಿನ್ ಬಳಸಿದ್ದರು.

ಮೇ 1907ರಲ್ಲಿ ಗಜೆಟ್ಟಿಯರ್ ಕೆಲಸದ ನಿಮಿತ್ತ ಶಾರ್ಟ್ ಹ್ಯಾಂಡ್ ಗುಮಾಸ್ತನಾಗಿ ಜತಿನ್ ಡಾರ್ಜಿಲಿಂಗ್‌ಗೆ ಹೋದರು. ಅಲ್ಲೂ ಜತಿನ್ ಅನುಶೀಲನ್ ಸಮಿತಿಯ ಶಾಖೆಯನ್ನು ಸ್ಥಾಪಿಸಿದ್ದರು. 1908ರಲ್ಲಿ ಅಲಿಪುರ್ ಬಾಂಬು ಪ್ರಕರಣದಲ್ಲಿ ಜತಿನ್ ಆರೋಪಿಯಾಗಿರಲಿಲ್ಲದ ಕಾರಣಕ್ಕೇ ರೂಪಾಂತರಗೊಂಡ ಸಂಘಟನೆಯ ಪೂರ್ಣ ಜವಾಬ್ದಾರಿ ಜತಿನ್ ಹೆಗಲಿಗೆ ಬಿತ್ತು. ಈ ಸಂಘಟನೆಯೇ ಜುಗಾಂತರ್ ಪಕ್ಷ. ಜುಗಾಂತರ್‌ನ ಶಾಖೆಗಳನ್ನು ಜತಿನ್ ಬಂಗಾಳ, ಬಿಹಾರ, ಒಡಿಶಾ ಮತ್ತು ಉತ್ತರಪ್ರದೇಶಗಳಿಗೆ ವಿಸ್ತರಿಸಿದರು. ಈ ಶಾಖೆಗಳ ಸದಸ್ಯರು ವಯಸ್ಕರಿಗೆ ರಾತ್ರಿ ಶಾಲೆ, ಹೋಮಿಯೋಪತಿ ಔಷಧಿ ನೀಡಿಕೆ, ಕೃಷಿ ಕೆಲಸಗಳಲ್ಲಿ ಭಾಗಿಯಾಗುವುದನ್ನು ಮಾಡುತ್ತಿದ್ದರು.

1908ರಲ್ಲಿ ಜತಿನ್ ನೇತೃತ್ವದಲ್ಲಿ ಹಲವಾರು ಬ್ಯಾಂಕ್ ದರೋಡೆಗಳೂ ನಡೆದವು. ಹಾಗೆಯೇ, ಜೂನ್ ಮತ್ತು ನವೆಂಬರ್‌ಗಳಲ್ಲಿ ಬಂಗಾಲದ ಲೆಫ್ಟಿನೆಂಟ್ ಗವರ್ನರ್ ಅವರ ಹತ್ಯೆಯ ಯತ್ನಗಳೂ ಆದವು. 1909ರಲ್ಲಿ ಮತ್ತು 1910ರಲ್ಲಿ ಇಬ್ಬರು ಪ್ರಮುಖ ಸರಕಾರಿ ಅಧಿಕಾರಿಗಳ ಹತ್ಯೆಗೈಯಲಾಯಿತು. ಈ ಸಂಬಂಧ ಜತಿನ್‌ರನ್ನು ಪೊಲೀಸರು ಬಂಧಿಸಿದರೂ ಸಾಕ್ಷ್ಯಾಧಾರಗಳಿಲ್ಲದೆ ಅವರು ಬಿಡುಗಡೆಗೊಂಡರು. ಬ್ರಿಟಿಷ್ ಸೈನ್ಯದ ಮುಖ್ಯವಾಗಿ ಜಾಟ್ ರೆಜಿಮೆಂಟ್‌ನಲ್ಲಿ ಕ್ರಾಂತಿಯ ಚಿಂತನೆಗಳನ್ನು ಹಬ್ಬಿಸುತ್ತಿದ್ದಾರೆ ಎಂಬ ಗುಮಾನಿ ಬ್ರಿಟಿಷರಿಗೆ ದಟ್ಟವಾಗಿತ್ತು. ಜೈಲಿನಲ್ಲಿದ್ದಾಗ ಜತಿನ್ ಬಂಧಿಗಳಾಗಿದ್ದ ಇತರ ಕ್ರಾಂತಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಘಟಿತ ಹೋರಾಟದ ನೀಲನಕ್ಷೆ ತಯಾರಿಸಿದ್ದರು. ಈ ಅವಧಿಯಲ್ಲಿ ರಾಶ್ ಬಿಹಾರಿ ಬೋಸ್ ಅವರ ಸಂಪರ್ಕ ಸಾಧಿಸಿದ ಜತಿನ್ ಸಂಘಟನೆಯನ್ನು ಪಂಜಾಬ್‌ಗೂ ವಿಸ್ತರಿಸಿದರು. ಈ ವೇಳೆಗೆ ಪ್ರವಾಹ ಪೀಡಿತರ ಪರಿಹಾರ ಕಾರ್ಯದಲ್ಲೂ ಕ್ರಾಂತಿಕಾರಿಗಳು ತೊಡಗಿಸಿಕೊಳ್ಳುವಂತೆ ಮಾರ್ಗದರ್ಶನ ಮಾಡಿದ್ದರು.

1913ರ ಅಂತ್ಯದ ವೇಳೆಗೆ 1857ರ ಮಾದರಿಯ ಕ್ರಾಂತಿಯ ಯೋಜನೆಯನ್ನು ಜತಿನ್ ಮತ್ತು ರಾಸ್ ಬಿಹಾರಿ ಬೋಸ್-ಇಬ್ಬರೂ ಹಾಕಿಕೊಂಡರು. ಇದೇ ವೇಳೆಗೆ ಜತಿನ್ ಅನಿವಾಸಿ ಭಾರತೀಯರ ಸಂಪರ್ಕ ಸಾಧಿಸಿದರು. ಜರ್ಮನಿ ಇಂಗ್ಲೆಂಡ್‌ನ ಮೇಲೆ ದಾಳಿ ಮಾಡುವ ಸಮಯ ಸನ್ನಿಹಿತವಾಗಿದೆ, ದೊಡ್ಡ ಪ್ರಮಾಣದ ಯುದ್ಧ ಜಗತ್ತನ್ನು ಆವರಿಸಲಿದೆ ಎಂಬುದು ಜತಿನ್‌ಗೆ ಖಚಿತವಾಗಿತ್ತು.

ಅಮೆರಿಕದ ಗದ್ದರ್ ಸಂಘಟನೆ ಶಸ್ತ್ರಾಸ್ತ್ರ ಸಂಗ್ರಹದ ಕಾರ್ಯದಲ್ಲಿ ನಿರತವಾಗಿತ್ತಷ್ಟೇ ಅಲ್ಲ, ನೂರಾರು ಗದ್ದರ್ ಕಾರ್ಯಕರ್ತರು ಒಬ್ಬರಾದ ಮೇಲೆ ಒಬ್ಬರು ಭಾರತಕ್ಕೆ ಆಗಮಿಸಿದರು. ಸಿಖ್ ಸೈನಿಕರನ್ನು ಬಂಡಾಯದಲ್ಲಿ ಸೇರಿಕೊಳ್ಳುವಂತೆ ಪ್ರಚೋದಿಸಲು ವಿಶೇಷ ಯೋಜನೆ ಹಾಕಿಕೊಳ್ಳಲಾಯಿತು. ಇದರ ಭಾಗವಾಗಿ ಪಿಂಗಳೆ ಮತ್ತು ಕರ್ತಾರ್ ಸಿಂಗ್ ಸರಭ ಕಾರ್ಯನಿರತರಾದರು. ಆದರೆ ಶಸ್ತ್ರಾಸ್ತ್ರ ಸಹಿತ ಪಿಂಗಳೆ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಕರ್ತಾರ್ ಸಿಂಗ್ ಸರಭ ಮತ್ತು ಪಿಂಗಳೆ ಇಬ್ಬರನ್ನೂ ಬ್ರಿಟಿಷರು ಗಲ್ಲಿಗೇರಿಸಿದರು.

ಹೆಚ್ಚಿದ ಪೊಲೀಸ್ ತನಿಖೆಯ ಅಪಾಯ ಮನಗಂಡ ಸಂಗಾತಿಗಳು ಜತಿನ್ ಅವರನ್ನು ಸುರಕ್ಷಿತ ತಾಣದಲ್ಲಿ ಅಡಗುವಂತೆ ಕೇಳಿಕೊಂಡರು. ಒಡಿಶಾದ ಬಂದರಾಗಿದ್ದ ಬಾಲಾ ಸೋರ್ ಈ ನಿಟ್ಟಿನಲ್ಲಿ ಪ್ರಶಸ್ತವಾದ ಸ್ಥಳವಾಗಿತ್ತು. ಜರ್ಮನಿಯಿಂದ ಬರುವ ಶಸ್ತ್ರಾಸ್ತ್ರಗಳನ್ನು ಇಳಿಸಿಕೊಳ್ಳಲು ಇದು ಅನುಕೂಲಕರ ತಾಣವಾಗಿತ್ತು. ಇದಕ್ಕಾಗಿ ಜತಿನ್ ಯುನಿವರ್ಸಲ್ ಎಂಪೋರಿಯಂ ಎಂಬ ವ್ಯಾಪಾರಿ ಸಂಸ್ಥೆಯನ್ನು ನೋಂದಣಿ ಮಾಡಿ ಆರಂಭಿಸಿದರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಶಸ್ತ್ರಾಸ್ತ್ರ ಪೂರೈಕೆ ಬಗ್ಗೆ ಜತಿನ್ ವಿಸ್ತೃತ ಮಾತುಕತೆ ನಡೆಸಿದರು. ಎಪ್ರಿಲ್ 1915ರಲ್ಲಿ ಜತಿನ್ ಆಣತಿಯಂತೆ ಎಂ.ಎನ್. ರಾಯ್ ಆರ್ಥಿಕ ಮತ್ತು ಶಸ್ತ್ರಾಸ್ತ್ರ ಸಹಾಯಕ್ಕೆ ಜರ್ಮನಿಯ ಅಧಿಕಾರಸ್ಥರ ಜೊತೆ ಮಾತುಕತೆ ನಡೆಸಲು ಬಟಾವಿಯಾಕ್ಕೆ ತೆರಳಿದರು. ಆದರೆ ವಿದೇಶದಲ್ಲಿದ್ದ ಸಂಘಟನೆಗಳೊಳಗೇ ಬ್ರಿಟಿಷ್ ಮಾಹಿತಿದಾರರಿದ್ದರು. ಅವರಿಂದ ಬ್ರಿಟಿಷರಿಗೆ ಈ ಬಂಡಾಯದ ಸಂಚಿನ ಮಾಹಿತಿ ಸಿಕ್ಕಿತು. ಈ ವೇಳೆಗೆ ಮಯೂರ್ ಭಂಜ್‌ನ ಅಡಗು ತಾಣದಲ್ಲಿದ್ದ ಜತಿನ್ ಗೆ ಬ್ರಿಟಿಷ್ ಕಾರ್ಯಾಚರಣೆಯ ಸುಳಿವು ಸಿಕ್ಕಿ ಅಲ್ಲಿಂದ ಅವರು ಸ್ಥಳ ಬದಲಾಯಿಸಲು ಸನ್ನಾಹ ಮಾಡಿದರು. ಆದರೆ ಕೆಲವು ಗಂಟೆಗಳ ಕಾಲ ತಡವಾದ ಕಾರಣ, ಅಷ್ಟರೊಳಗೆ ಬ್ರಿಟಿಷ್ ಸೈನ್ಯ ಅವರನ್ನು ಸುತ್ತುವರಿದಿತ್ತು. ಜತಿನ್ ಮತ್ತು ಅವರ ಸಂಗಾತಿಗಳು ದಟ್ಟಾರಣ್ಯದಲ್ಲಿ ನಡೆದು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಬ್ರಿಟಿಷರು ಡಕಾಯಿತರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ ಕಾರಣಕ್ಕೆ ಹಳ್ಳಿಗರೂ ಇವರ ಬೆನ್ನು ಹತ್ತಿದ್ದರು. ಕುಂಭದ್ರೋಣ ಮಳೆಯಲ್ಲಿ ಜೌಗು ನೆಲ, ಕಾಡಿನಲ್ಲಿ ಈ ಕ್ರಾಂತಿಕಾರಿಗಳು ತಪ್ಪಿಸಿಕೊಳ್ಳುತ್ತಾ, ಪೊಲೀಸರಿಗೆ ಆಗಾಗ ಗುಂಡಿನ ಪ್ರತ್ಯುತ್ತರ ನೀಡುತ್ತಾ ಕೊನೆಗೆ ಚಶಾಖಂಡ ಎಂಬ ಜಾಗದಲ್ಲಿ ಮುಖಾಮುಖಿ ಹೋರಾಟಕ್ಕಿಳಿಯಬೇಕಾಯಿತು. ಚಿತ್ತಪ್ರಿಯರಾಯ್ ಚೌಧರಿ ಎಂಬ ಜತಿನ್ ಸಂಗಾತಿ ‘‘ನಾವು ಪೊಲೀಸರನ್ನು ಎದುರಿಸುತ್ತೇವೆ, ನೀವು ತಪ್ಪಿಸಿಕೊಳ್ಳಿ’’ ಎಂದರೂ ಜತಿನ್ ಒಪ್ಪಲಿಲ್ಲ. ಸುಮಾರು ಒಂದೂವರೆ ಗಂಟೆ ನಡೆದ ಗುಂಡಿನ ಚಕಮಕಿಯಲ್ಲಿ 25 ಸರಕಾರಿ ಸೈನಿಕರು ಹತರಾದರೆ, ಕ್ರಾಂತಿಕಾರಿಗಳ ಪೈಕಿ ಚೌಧರಿ ಸ್ಥಳದಲ್ಲೇ ಹುತಾತ್ಮರಾದರು. ಜತಿನ್ ಮತ್ತು ಜ್ಯೋತಿಷ್ ಪಾಲ ತೀವ್ರವಾಗಿ ಗಾಯಗೊಂಡರು. ಮನೋರಂಜನ್ ಸೇನ್ ಗುಪ್ತಾ ಮತ್ತು ನಿರೇನ್ ಪೊಲೀಸರಿಗೆ ಸೆರೆ ಸಿಕ್ಕರು. ಸೆಪ್ಟಂಬರ್ 10ರಂದು ಜತಿನ್ ಬಾಸಸೋರ್ ಆಸ್ಪತ್ರೆಯಲ್ಲಿ ಅಸು ನೀಗಿದರು. ಬಾಲಾಸೋರ್ ಕದನವೆಂದೇ ಇದು ಹೆಸರಾಗಿದೆ.

ಅಲ್ಲಿಗೆ ಬಲು ದೊಡ್ಡ ಕ್ರಾಂತಿಯ ಯೋಜನೆಯ ರೂವಾರಿಯ ಅಂತ್ಯವಾಯಿತು.

ಬಾಘಾ ಜತಿನ್ ಭಾರತದ ಸಶಸ್ತ್ರ ಸ್ವಾತಂತ್ರ್ಯ ಹೋರಾಟದ ಬಹು ಮುಖ್ಯ ಕಾಲಘಟ್ಟದಲ್ಲಿ ಅದಕ್ಕೊಂದು ಸಂಘಟನಾತ್ಮಕ ಸ್ಪಷ್ಟತೆ ನೀಡಿದವರು. ಅಂತರ್‌ರಾಷ್ಟ್ರೀಯ ಸಹಾಯ ಮತ್ತು ಸ್ಥಳೀಯ ಸನ್ನದ್ಧತೆಗಳೆರಡೂ ಅವಶ್ಯ ಹೆಣಿಗೆಗಳು ಎಂಬುದನ್ನು ಅರಿತಿದ್ದ ನಾಯಕ ಜತಿನ್.

‘‘ಒಂದೇ ಒಂದು ಬಂದರು ಅವರ ಕೈವಶವಾಗಿದ್ದರೂ ಬ್ರಿಟಿಷ್ ಆಡಳಿತ ಕೊನೆಗೊಳ್ಳುತ್ತಿತ್ತು’’ ಎಂದು ಬ್ರಿಟಿಷ್ ಅಧಿಕಾರಿಯೊಬ್ಬ ಬಾಘಾ ಜತಿನ್ ವ್ಯೆಹದ ಬಗ್ಗೆ ಹೇಳಿದ್ದು ಬಾಘಾ ಜತಿನ್ ಮತ್ತು ರಾಶ್ ಬಿಹಾರಿ ಬೋಸ್ ಅವರ ಯೋಜನೆಯ ಗುರುತ್ವವನ್ನು ಹೇಳುತ್ತದೆ.

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X