ಬಲೀಂದ್ರ ನೀಂ ದೇವನೆಮಗೆಲ್ಲ !

ಲಿಖಿತ ಕಾವ್ಯಗಳಾಚೆಗೆ, ಮಲೆನಾಡು ಮತ್ತು ಕರಾವಳಿಯ ಜಾನಪದದಲ್ಲಿ ಬಲೀಂದ್ರನು ಕೃಷಿ ಸಮೃದ್ಧಿಯ ಫಲವಂತಿಕೆಯ ದೈವ. ಹಸಲರ ಹಾಡುಗಳಲ್ಲಿ ಬಲೀಂದ್ರನು ಭೂಮಿಗೆ ಬಂದಾಗ ಅಡಿಕೆ, ಭತ್ತ, ಮೆಣಸಿನ ಪೈರುಗಳೆಲ್ಲ ಹಯನಾಗುತ್ತವೆ; ಬತ್ತು ಬರಡೆಲ್ಲ ಹೈನಾಗುತ್ತವೆ. ದೀವರ ಕೃಷಿಕರು ಕೆರೆಕಟ್ಟೆ ತುಂಬಿಸುವ ಬಲೀಂದ್ರನಿಗೆ ಪಾಯಸದ ಎಡೆ ಇಟ್ಟು ಕೃತಜ್ಞತೆ ಸಲ್ಲಿಸುತ್ತಾರೆ. ಇನ್ನು ಗೊಂಡರ ಬುಡಕಟ್ಟು ಪರಂಪರೆಯ ‘ಬಲೀಂದ್ರಜ್ಜ-ಕಲೀಂದ್ರಜ್ಜ’ರ ಕಥನವಂತೂ ಸಂಸ್ಕೃತ ಪುರಾಣದ ಚೌಕಟ್ಟನ್ನೇ ಧಿಕ್ಕರಿಸುತ್ತದೆ. ಇಲ್ಲಿ ಬಲೀಂದ್ರಜ್ಜನು ಸಕಲ ಜೀವಿಗಳಿಗೂ ಪಡಿ ಅಳೆದು ಅನ್ನ ನೀಡುವ ಶ್ರಮಜೀವಿ ಕೃಷಿಕ.
ಒಂದು ಪುರಾಣದ ಕಥೆಯು ಶತಮಾನಗಳ ಕಾಲ ಸಮಾಜದ ವಿವಿಧ ಸ್ತರಗಳಲ್ಲಿ ಸಂಚರಿಸುವಾಗ ಯಾವ ಬಗೆಯ ಪಲ್ಲಟಗಳನ್ನು ಪಡೆಯುತ್ತದೆ? ವಿಜಯಿಯೊಬ್ಬನ ಆಖ್ಯಾನವು ಪರಾಜಿತನ ನೆಲದಲ್ಲಿ ಹೇಗೆ ಮರುಹುಟ್ಟು ಪಡೆಯುತ್ತದೆ? ಆರ್ಯ-ವೈದಿಕ ಕಲ್ಪನೆಯ ‘ವಾಮನಾವತಾರ’ ಎಂಬ ಪಾವಿತ್ರ್ಯದ ಚೌಕಟ್ಟಿನಲ್ಲಿ ಅಧರ್ಮದ ಸಂಹಾರವೆಂದು ಬಿಂಬಿತವಾದ ಬಲಿಯ ಪತನವು, ನೆಲಮೂಲದ ಜನರ ಎದೆಯಾಳದಲ್ಲಿ ಅನ್ಯಾಯದ ದುರಂತವಾಗಿ ದಾಖಲಾದದ್ದು ಕನ್ನಡ ಸಂಸ್ಕೃತಿಯ ಮಹತ್ವದ ವಿದ್ಯಮಾನ. ದೀಪಾವಳಿಯು ಬೆಳಕಿನ ಸಂಭ್ರಮವೋ ಅಥವಾ ಮೂಲನಿವಾಸಿ ಅರಸನೊಬ್ಬನ ಕಗ್ಗೊಲೆಯ ನೆನಪಿನಲ್ಲಿ ಆಚರಿಸುವ ಸೂತಕವೋ ಎಂಬ ಪ್ರಶ್ನೆ ನಮ್ಮನ್ನು ಸಾಂಸ್ಕೃತಿಕ ಮುಖಾಮುಖಿಗೆ
ಪ್ರೇರೇಪಿಸುತ್ತದೆ. ಬಲಿಯ ಕಥನವು ತಳಸಮುದಾಯಗಳ ಮೌಖಿಕ ಇತಿಹಾಸ, ಜೈನ ಪ್ರಣೀತ ಲೌಕಿಕ ಕಾವ್ಯ, ಶರಣರ ವೈಚಾರಿಕತೆ, ದಾಸ ಸಾಹಿತ್ಯದ ದ್ವೈತ -ತಾತ್ವಿಕತೆ, ಬುಡಕಟ್ಟು-ಜನಪದರ ಬೇಸಾಯ ಸಂಸ್ಕೃತಿ ಹಾಗೂ ಆಧುನಿಕ ಕಾವ್ಯದ ಮಾನವತಾವಾದಿ ನೆಲೆಗಳಲ್ಲಿ ಭಿನ್ನ ಭಿನ್ನವಾಗಿಯೇ ಮೈದಾಳಿದೆ.
ಬಲಿಯ ಕುರಿತಾದ ಸಾಹಿತ್ಯಕ ಚಿಂತನೆಗಳಿಗೆ ಪ್ರವೇಶಿಸುವ ಮೊದಲು, ನೆಲಮೂಲದ ಜನರ ಜೀವಂತ ಸ್ಮತಿಗಳಲ್ಲಿ ಆತ ಹೇಗೆ ಉಳಿದಿದ್ದಾನೆಂಬುದನ್ನು ಅರಿಯುವುದು ಮುಖ್ಯ. ಮನೆಗಳಲ್ಲಿ ದೀಪ ಹಚ್ಚದೆ, ಹೊಸಬಟ್ಟೆ ತೊಡದೆ, ಹಬ್ಬದೂಟವನ್ನೂ ಮಾಡದೆ ದೀಪಾವಳಿಯನ್ನು ಸೂತಕವೆಂದು ಆಚರಿಸುವ ನಮ್ಮ ಕುಟುಂಬದ ರುದ್ರಜ್ಜಿಯ ಮೌಖಿಕ ಕಥನವು ಇಲ್ಲಿ ಹೊಸ ಆಯಾಮವನ್ನು ತೆರೆದಿಡುತ್ತದೆ. ಅಜ್ಜಿಯ ಪ್ರಕಾರ, ದೀಪಾವಳಿಯ ದಿನವೇ ಅವರ ಮನೆತನದ ದನಕರುಗಳೆಲ್ಲ ಕಾಡಿನಲ್ಲಿ ಕಳೆದುಹೋದವು; ಹುಡುಕಲು ಹೋದ ಗಂಡಸರು ಮರಳಿ ಬರಲೇ ಇಲ್ಲ; ಗದ್ದೆಗಳಿಗೆ ಯಾರೋ ಬೆಂಕಿ ಹಚ್ಚಿ ಫಸಲನ್ನು ಸುಟ್ಟುಹಾಕಿದರು; ಸಂತೆಗೆ ಹೋದ ಯಜಮಾನ ಕೊಲೆಯಾದನು. ಈ ಕಥೆಯು ಕೇವಲ ಒಂದು ಕುಟುಂಬದ ಖಾಸಗಿ ದುರಂತವಲ್ಲ; ಜಾನಪದೀಯ ಸ್ಮತಿಯಲ್ಲಿ ತಲೆಮಾರುಗಳಿಂದ ಹರಿದುಬಂದಿರುವ ಸಾಮೂಹಿಕ ಆಘಾತದ ಸಂಕೇತ. ಇತಿಹಾಸದಲ್ಲಿ ಘಟಿಸಿದ ಯಾವುದೋ ಒಂದು ಆಕ್ರಮಣ, ಸುಲಿಗೆ ಮತ್ತು ವಿನಾಶದ ಕರಾಳ ನೆನಪು, ಕಾಲಕ್ರಮೇಣ ಅಜ್ಜಿಯ ಕಥೆಯಾಗಿ ರೂಪಾಂತರಗೊಂಡು, ವೈದಿಕ ಹಬ್ಬದ ಸಂಭ್ರಮವನ್ನು ಪ್ರತಿರೋಧಿಸುವ ಸೂತಕದ ಆಚರಣೆಯಾಗಿ ಗಟ್ಟಿಗೊಂಡಿದೆ.
ಕನ್ನಡದ ಲಿಖಿತ ಕಾವ್ಯ ಪರಂಪರೆಗೆ ಬಂದಾಗ ಬಲಿಯ ಉಲ್ಲೇಖವು ರಾಜಕೀಯ ಪ್ರಭುತ್ವದ ವೈಭವೀಕರಣಕ್ಕೆ ಬಳಕೆಯಾದದ್ದು ಕುತೂಹಲಕರ. ಹತ್ತನೆಯ ಶತಮಾನದ ಆದಿಕವಿ ಪಂಪನು ‘ವಿಕ್ರಮಾರ್ಜುನ ವಿಜಯ’ದಲ್ಲಿ ತನ್ನ ಆಶ್ರಯದಾತ ಚಾಳುಕ್ಯ ಅರಿಕೇಸರಿಯನ್ನು ನಾರಾಯಣನಿಗೆ ಹೋಲಿಸುತ್ತಾ, ಪುರಾಣದ ನಾರಾಯಣನಿಗಿಂತ ಅರಿಕೇಸರಿಯನ್ನೇ ಹಿರಿದಾಗಿ ನಿಲ್ಲಿಸುತ್ತಾನೆ. ಪುರಾಣದ ವಿಷ್ಣುವು ವಾಮನನಾಗಿ ಬಲಿಯ ಮುಂದೆ ‘ಜೀಯ’ ಎಂದು ಕೈಯೊಡ್ಡಿ ಭೂಮಿಯನ್ನು ಬೇಡಿದರೆ, ಅರಿಕೇಸರಿಯು ಯಾರ ಮುಂದೆಯೂ ಕೈಯೊಡ್ಡದೆ ಶತ್ರುಗಳನ್ನು ಮೆಟ್ಟಿ ಧರಿತ್ರಿಯನ್ನು ತನ್ನದಾಗಿಸಿಕೊಂಡ ‘ಉದಾತ್ತ ನಾರಾಯಣ’. ಜೈನ ಕವಿಯಾದ ಪಂಪನಿಗೆ ವೈದಿಕ ಪುರಾಣದ ತ್ರಿವಿಕ್ರಮನ ಕೃತ್ಯವು ದೈವಿಕ ಲೀಲೆಯಾಗಿ ಕಾಣದೆ, ‘ಬೇಡುವಿಕೆ’ ಎಂಬ ಕ್ಷಾತ್ರಧರ್ಮದ ದೋಷವಾಗಿ ಕಂಡಿರುವುದು ಇಲ್ಲಿನ ವೈಶಿಷ್ಟ್ಯ.
ಹನ್ನೆರಡನೆಯ ಶತಮಾನದ ವಚನ ಚಳವಳಿಯು ಪುರಾಣಗಳನ್ನು ಭಕ್ತಿ ಮತ್ತು ನೈತಿಕತೆಯ ಒರೆಗಲ್ಲಿಗೆ ಹಚ್ಚಿ ನೋಡಿತು. ‘‘ಹರಿಯ ಬೇಡುವಡೆ ಅವಗೆ ಬಲೀಂದ್ರ ದಾನವನಿಕ್ಕಿದನು...’’ ಎನ್ನುವ ಬಸವಣ್ಣನವರು, ಅನ್ಯದೈವಗಳ ಅಸಹಾಯಕತೆಯನ್ನು ಮಾರ್ಮಿಕವಾಗಿ ಚುಚ್ಚುತ್ತಾರೆ. ಇಡೀ ಜಗತ್ತಿಗೆ ಅನ್ನದಾತನಾಗಬೇಕಾದ ಪರದೈವವೇ ಮರ್ತ್ಯನ ಮುಂದೆ ಯಾಚಕನಾಗಿ ನಿಂತದ್ದು ಹರಿಯ ಅಪೂರ್ಣತೆಯನ್ನು ತೋರಿಸುತ್ತದೆ; ಆದ್ದರಿಂದ ಸ್ವಯಂಪೂರ್ಣನಾದ ಕೂಡಲಸಂಗಮದೇವನನ್ನಷ್ಟೇ ಬೇಡಬೇಕೆಂಬುದು ಅವರ ತರ್ಕ. ಇಲ್ಲಿ ವಚನಕಾರರ ಕಣ್ಣಿಗೆ ಬಲಿಯು ಹರಿಗಿಂತಲೂ ದೊಡ್ಡ ದಾತೃವಾಗಿ ಗೋಚರಿಸುತ್ತಾನೆ. ಮತ್ತೊಬ್ಬ ಶರಣ ಸಕಳೇಶ ಮಾದರಸರು, ‘‘ಬಲೀಂದ್ರನ ಸಿರಿಗಿಂದ ಅಧಿಕನಾರನೂ ಕಾಣೆನಯ್ಯಾ / ಅಂಥಾ ಸಂಪತ್ತು ಮೂರಡಿಗೆಯ್ದದು’’ ಎನ್ನುತ್ತಾ, ಅಖಂಡ ಐಶ್ವರ್ಯವೂ ವಾಮನನ ಮೂರು ಹೆಜ್ಜೆಗಳಿಗೆ ಮುಗಿದುಹೋಯಿತೆಂದು ಲೌಕಿಕ ಸಂಪತ್ತಿನ ಕ್ಷಣಿಕತೆಯನ್ನು ಬಲಿಯ ಮೂಲಕ ಎಚ್ಚರಿಸುತ್ತಾರೆ.
ಮಧ್ಯಕಾಲೀನ ಶತಕ ಸಾಹಿತ್ಯದಲ್ಲಿ ಪುಲಿಗೆರೆ ಸೋಮನಾಥನು, ಮೂರು ಲೋಕಗಳನ್ನೇ ದಾನವಾಗಿ ಕೊಟ್ಟ ಬಲಿಯು ವಾಮನನ ಮೂರನೆಯ ಹೆಜ್ಜೆಯ ಸಾಲವನ್ನು ತೀರಿಸಲಾಗದೆ ಪಾತಾಳಕ್ಕೆ ಓಡಿಹೋದನೆಂದು ಬಣ್ಣಿಸಿ, ಈ ಪುರಾಣ ಪ್ರಸಂಗವನ್ನು ‘ಸಾಲದ ಭಾರ’ವೆಂಬ ಲೌಕಿಕ ಸಂಕಷ್ಟಕ್ಕೆ ಸಮೀಕರಿಸುತ್ತಾನೆ. ಇನ್ನು ತ್ರಿಪದಿ ಕವಿ ಸರ್ವಜ್ಞನಂತೂ ದೇವರ ವಿಶ್ವಾಸಾರ್ಹತೆಯನ್ನೇ ಕಟುವಾಗಿ ಪ್ರಶ್ನಿಸುತ್ತಾ, ‘‘ಆರಾರ ನಂಬುವಡೆ ಆರಯ್ದು ನಂಬುವದು / ನಾರಾಯಣನಿಂದ ಬಲಿಕೆಟ್ಟ / ಮಿಕ್ಕವರ ನಾರು ನಂಬುವರು ಸರ್ವಜ್ಞ’’ ಎನ್ನುತ್ತಾನೆ. ಸಾಕ್ಷಾತ್ ನಾರಾಯಣನನ್ನು ನಂಬಿಯೇ ದಾನಶೂರ ಬಲಿಯು ಸರ್ವಸ್ವವನ್ನೂ ಕಳೆದುಕೊಂಡ ಮೇಲೆ ಸಾಮಾನ್ಯ ಮನುಷ್ಯರನ್ನು ನಂಬುವುದು ಹೇಗೆ ಎಂಬ ಸರ್ವಜ್ಞನ ಮಾತು, ವಾಮನನ ‘ದೈವಿಕ ಲೀಲೆ’ಯನ್ನು ಜನಸಾಮಾನ್ಯರ ದೃಷ್ಟಿಯಲ್ಲಿ ‘ಮಹಾವಂಚನೆ’ಯನ್ನಾಗಿ ಅನಾವರಣಗೊಳಿಸುತ್ತದೆ.
ಹರಿದಾಸ ಸಾಹಿತ್ಯದಲ್ಲಿ ಬಲಿಯ ಬಗೆಗಿನ ದೃಷ್ಟಿಕೋನವು ಭಕ್ತಿ ಮತ್ತು ವಿರೋಧಾಭಾಸಗಳ ಸಂಕೀರ್ಣ ನೆಲೆಯಲ್ಲಿ ಮೈದಾಳಿದೆ. ವಾದಿರಾಜರು, ವೆಂಕಟವರದಾರ್ಯರು ವಾಮನನ ಪರಾಕ್ರಮವನ್ನು ಕೊಂಡಾಡಿದರೆ, ಪುರಂದರದಾಸರು ‘‘ವಂದಿಸಿ ದಾನವ ಕೊಟ್ಟ ಬಲೀಂದ್ರನ ಬಂಧಿಸಿದಹುದಹುದೈ / ಮಂದರಧರ ಶ್ರೀ ಪುರಂದರವಿಠಲ ಮಾಡಿದ್ದೇ ಮರ್ಯಾದೈ’’ ಎಂದು ದೇವರ ದ್ವಂದ್ವ ನ್ಯಾಯವನ್ನೇ ವ್ಯಂಗ್ಯವಾಗಿ ಸವಾಲು ಮಾಡುತ್ತಾರೆ. ಈ ಪರಂಪರೆಯಲ್ಲಿ ಬಲಿಚಕ್ರವರ್ತಿಯನ್ನು ಅತ್ಯಂತ ಆಳವಾಗಿ ಮರುಚಿಂತನೆಗೆ ಒಳಪಡಿಸಿದವರು ಕನಕದಾಸರು. ಅವರ ಪಾಲಿಗೆ ಬಲಿಯು ಕೇವಲ ಅಸುರನಲ್ಲ; ಪರಮ ಭಾಗವತ ಹಾಗೂ ‘ಆತ್ಮನಿವೇದನೆ’ಯ ಸಾಕಾರಮೂರ್ತಿ. ಗುರು ಶುಕ್ರಾಚಾರ್ಯರ ಎಚ್ಚರಿಕೆಯನ್ನೂ ಮೀರಿ ಕೊಟ್ಟ ಮಾತಿಗೆ ಕಟ್ಟುಬಿದ್ದ ಬಲಿಯ ಸತ್ಯನಿಷ್ಠೆಯನ್ನು ಕೊಂಡಾಡುವ ಕನಕರು, ‘‘ಕೃಪೆಯಲ್ಲಿ ಬಲೀಂದ್ರನೆ ನೀನು’’ ಎಂದು ಆತನ ಔದಾರ್ಯವನ್ನು ಆದರ್ಶವಾಗಿಸುತ್ತಾರೆ. ಬಲಿಯ ಭಕ್ತಿಗೆ ಸೋತು ಭಗವಂತನೇ ಆತನ ದ್ವಾರಪಾಲಕನಾದನೆಂಬ ಅನುಭಾವಿಕ ಸತ್ಯವನ್ನು ಎತ್ತಿಹಿಡಿಯುತ್ತಾರೆ. ಆದರೆ ಇದೇ ಕನಕದಾಸರು ನಿಂದಾಸ್ತುತಿಯಲ್ಲಿ ದೇವರ ಕಪಟತನವನ್ನು ಬಿಡಿಸಿಡಲು ಹಿಂಜರಿಯುವುದಿಲ್ಲ. ‘‘ಪುಟನೆಗೆದ ಪಾದದಲಿ ಬಲಿಯ ತಲೆಯನು ಮೆಟ್ಟಿ ನಟನೆಯಾಡುವ ವಿದ್ಯೆಯನೆಲ್ಲಿ ಕಲಿತೆಯೊ ಕಪಟ’’ ಎಂದೂ, ‘‘ಮೋಸದಿ ಬಲಿಯ ದಾನವ ಬೇಡಿ... ಕಳ್ಳ ಕೊಕೊಕೋ ಎನ್ನಿರೊ’’ ಎಂದೂ ಹರಿಯನ್ನು ನೇರವಾಗಿ ‘ಕಳ್ಳ’ನೆಂದು ಜರಿಯುವಲ್ಲಿ, ದಮನಿತ ಭಕ್ತನಾದ ಬಲಿಯ ಪರವಾಗಿ ಅವರ ಸಾಮಾಜಿಕ ಅಂತಃಕರಣ ಮಿಡಿಯುತ್ತದೆ.
ಲಿಖಿತ ಕಾವ್ಯಗಳಾಚೆಗೆ, ಮಲೆನಾಡು ಮತ್ತು ಕರಾವಳಿಯ ಜಾನಪದದಲ್ಲಿ ಬಲೀಂದ್ರನು ಕೃಷಿ ಸಮೃದ್ಧಿಯ ಫಲವಂತಿಕೆಯ ದೈವ. ಹಸಲರ ಹಾಡುಗಳಲ್ಲಿ ಬಲೀಂದ್ರನು ಭೂಮಿಗೆ ಬಂದಾಗ ಅಡಿಕೆ, ಭತ್ತ, ಮೆಣಸಿನ ಪೈರುಗಳೆಲ್ಲ ಹಯನಾಗುತ್ತವೆ; ಬತ್ತು ಬರಡೆಲ್ಲ ಹೈನಾಗುತ್ತವೆ. ದೀವರ ಕೃಷಿಕರು ಕೆರೆಕಟ್ಟೆ ತುಂಬಿಸುವ ಬಲೀಂದ್ರನಿಗೆ ಪಾಯಸದ ಎಡೆ ಇಟ್ಟು ಕೃತಜ್ಞತೆ ಸಲ್ಲಿಸುತ್ತಾರೆ. ಇನ್ನು ಗೊಂಡರ ಬುಡಕಟ್ಟು ಪರಂಪರೆಯ ‘ಬಲೀಂದ್ರಜ್ಜ-ಕಲೀಂದ್ರಜ್ಜ’ರ ಕಥನವಂತೂ ಸಂಸ್ಕೃತ ಪುರಾಣದ ಚೌಕಟ್ಟನ್ನೇ ಧಿಕ್ಕರಿಸುತ್ತದೆ. ಇಲ್ಲಿ ಬಲೀಂದ್ರಜ್ಜನು ಸಕಲ ಜೀವಿಗಳಿಗೂ ಪಡಿ ಅಳೆದು ಅನ್ನ ನೀಡುವ ಶ್ರಮಜೀವಿ ಕೃಷಿಕ. ದುಷ್ಟ ಕಲೀಂದ್ರ
ಜ್ಜನು ಮೂರು ಗುಡ್ಡೆ ನೆಲವನ್ನು ಅಳೆಯುವ ನೆಪದಲ್ಲಿ ಮೋಸದಿಂದ ಎದೆಯನ್ನೇ ಮೆಟ್ಟಲು ಬಂದಾಗ, ಬಲೀಂದ್ರಜ್ಜನು ಈ ವಂಚಕ ಲೋಕವನ್ನು ಧಿಕ್ಕರಿಸಿ ತಾನೇ ಸ್ವಾಭಿಮಾನದಿಂದ ದೇವಲೋಕಕ್ಕೆ ತೆರಳುತ್ತಾನೆ; ವರ್ಷಕ್ಕೊಮ್ಮೆ ಸುಗ್ಗಿ ಬೆಳೆಯನ್ನು ಹರಸಲು ಮರಳಿ ಬರುವುದಾಗಿ ಸಂಕಲ್ಪಿಸುತ್ತಾನೆ. ತುಳುನಾಡಿನಲ್ಲೂ ಬಲೀಂದ್ರ ‘ಭೂಮಿಯ ಪುತ್ರ’ನಾಗಿ ನೆಲದ ಫಲವಂತಿಕೆಯ ಪ್ರತೀಕವಾಗಿದ್ದಾನೆ.
ಆಧುನಿಕ ಕಾಲದಲ್ಲಿ ಕುವೆಂಪು ಅವರು ತಮ್ಮ ‘ಬಲಿಪಾಡ್ಯಮಿ’ ಕವಿತೆಯಲ್ಲಿ ಈ ಕಥನಕ್ಕೆ ಕ್ರಾಂತಿಕಾರಿ ಆಯಾಮವನ್ನು ಒದಗಿಸಿದರು. ‘‘ದೇವತೆಗಳಾಚರಿಸೆ ರಾಕ್ಷಸರ ರೀತಿಯಲಿ / ದೇವತ್ವವನು ಹೊರೆದ ನೀಂ ದೇವನೆಮಗೆಲ್ಲ!’’ ಎಂದು ಘೋಷಿಸುವ ಕುವೆಂಪು, ಪುರಾಣದ ದೇವಾಸುರ ಕಲ್ಪನೆಯನ್ನೇ ಬುಡಮೇಲು ಮಾಡುತ್ತಾರೆ. ಹರಿಯ ಮೋಸದ ಅನ್ಯಾಯವನ್ನು ಸಹಿಸಿ ಔದಾರ್ಯ ಮೆರೆದ ಬಲಿಯೇ ನಿಜವಾದ ದೇವರು; ಇತರರ ಏಳಿಗೆಗೆ ಕರುಬಿದ ಇಂದ್ರನು ಇಂದು ಪಾಳುಗುಡಿಯಂತೆ ವಿಸ್ಮತಿಯ ಪಾತಾಳಕ್ಕೆ ಬಿದ್ದಿದ್ದರೆ, ಹರಿಯಿಂದ ತುಳಿಸಿಕೊಂಡ ಬಲಿಯು ಜನಮಾನಸದಲ್ಲಿ ನಿತ್ಯಪೂಜಿತನಾಗಿದ್ದಾನೆ ಎಂಬುದು ಅವರ ಕಾವ್ಯನ್ಯಾಯ.
ಹೀಗೆ ಅಜ್ಜಿಯ ಮೌಖಿಕ ನೆನಪಿನ ಕರಾಳ ಸೂತಕದಿಂದ ಆರಂಭವಾಗುವ ಬಲಿಯ ಅನ್ವೇಷಣೆಯು, ಪಂಪನಲ್ಲಿ ಲೌಕಿಕ ಶೌರ್ಯದ ನಿಕಷವಾಗಿ, ಶರಣರಲ್ಲಿ ದೈವಿಕ ದೌರ್ಬಲ್ಯದ ಬಯಲಾಗಿ, ಸರ್ವಜ್ಞನಲ್ಲಿ ಲೋಕನೀತಿಯಾಗಿ, ಕನಕದಾಸರಲ್ಲಿ ಭಕ್ತಿ ಮತ್ತು ನಿಂದಾಸ್ತುತಿಯ ಸಮನ್ವಯವಾಗಿ, ಜನಪದರಲ್ಲಿ ಕೃಷಿ ಸಮೃದ್ಧಿಯ ದೈವವಾಗಿ ಹಾಗೂ ಕುವೆಂಪು ಅವರಲ್ಲಿ ದಮನಿತರ ನೈತಿಕ ದೇವತ್ವವಾಗಿ ವಿಸ್ತರಿಸಿಕೊಳ್ಳುತ್ತದೆ. ಬಲಿ ಕೇವಲ ಪಾತಾಳಕ್ಕೆ ತಳ್ಳಲ್ಪಟ್ಟ ಪುರಾಣ ಪಾತ್ರವಲ್ಲ; ಆತ ಪ್ರಭುತ್ವ ಮತ್ತು ಪ್ರತಿರೋಧಗಳ ಮುಖಾಮುಖಿಯ ಶಾಶ್ವತ ಸಾಂಸ್ಕೃತಿಕ ಪ್ರತೀಕ. ಸರ್ವಸ್ವವನ್ನೂ ಅರ್ಪಿಸಿದ ಆ ಮಹೋದಾರತೆಯಲ್ಲೇ ಬಲಿಯು ಸಾವನ್ನು ಗೆದ್ದು ಜನಮಾನಸದಲ್ಲಿ ಚಿರಂಜೀವಿಯಾಗಿದ್ದಾನೆ.






