ಬಳ್ಳಾರಿ: ಮಾತೃಮರಣ ತಡೆಗೆ ‘ಮಿಷನ್ ಮಮತಾ’ ಬಲ
► ಗರ್ಭಿಣಿಯರ ಮೇಲೆ ಎಐ ನಿಗಾ; 14,033 ಗರ್ಭಿಣಿಯರ ತಪಾಸಣೆ ► 68 ಗಂಭೀರ, 1,021 ಹೆಚ್ಚು ಅಪಾಯದ ಪ್ರಕರಣಗಳ ಗುರುತು

ಬೂದುಗುಪ್ಪ ಪೀರಾಸಾಬ್, ವಾರ್ತಾ ಭಾರತಿ
ಬಳ್ಳಾರಿ: ಕಳಪೆ ಗುಣಮಟ್ಟದ ಐ.ವಿ ದ್ರಾವಣ ಹಾಗೂ ಚಿಕಿತ್ಸಾ ಲೋಪದಿಂದ ಸಂಭವಿಸಿದ್ದ ಬಾಣಂತಿಯರ ಸರಣಿ ಸಾವುಗಳ ಕರಾಳ ಘಟನೆ ಮರುಕಳಿಸದಂತೆ ಬಳ್ಳಾರಿ ಜಿಲ್ಲಾಡಳಿತ, ‘ಮಿಷನ್ ಮಮತಾ’ ಯೋಜನೆಯ ಮೂಲಕ ಮಾತೃ ಸುರಕ್ಷತೆಯಲ್ಲಿ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.
ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯಾಚರಣೆಯಿಂದ ಜಿಲ್ಲೆಯಲ್ಲಿ ಮಾತೃಮರಣ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. 2024ರ ನವೆಂಬರ್ನಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಐವರು ಬಾಣಂತಿಯರು ಮೃತಪಟ್ಟಿದ್ದರು. ಅಲ್ಲದೆ, 2024ರ ಏಪ್ರಿಲ್ ನಿಂದ ಡಿಸೆಂಬರ್ ಅವಧಿಯಲ್ಲಿ ಜಿಲ್ಲೆಯಲ್ಲಿ 23 ಮಾತೃಮರಣ ಪ್ರಕರಣಗಳು ವರದಿಯಾಗಿ ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತನಿಖೆಯ ವೇಳೆ ಐ.ವಿ ದ್ರಾವಣದಲ್ಲಿ ‘ಎಂಡೋಟಾಕ್ಸಿನ್’ ಪತ್ತೆಯಾಗಿತ್ತು. ರಕ್ತಹೀನತೆ, ಅಧಿಕ ರಕ್ತದೊತ್ತಡ, ರಕ್ತದ ಅಲಭ್ಯತೆ, ವಿಳಂಬ ರೆಫರಲ್ ಹಾಗೂ ಆರಂಭಿಕ ಹಂತದಲ್ಲೇ ಅಪಾಯ ಗುರುತಿಸದಿರುವುದೇ ಸಾವುಗಳಿಗೆ ಕಾರಣ ಎಂದು ರಾಜ್ಯಮಟ್ಟದ ಆಡಿಟ್ ವರದಿ ಬೊಟ್ಟು ಮಾಡಿತ್ತು. ಈ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ, ಕಳೆದ 10 ವರ್ಷಗಳ ಮಾತೃಮರಣ ದಾಖಲೆಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ‘ಮಿಷನ್ ಮಮತಾ’ ಯೋಜನೆ ರೂಪಿಸಿತು.
ಎಐ ಆಧಾರಿತ ಟ್ರ್ಯಾಕರ್: 10 ವರ್ಷಗಳ ದತ್ತಾಂಶ ವಿಶ್ಲೇಷಣೆಯಲ್ಲಿ ಹೆರಿಗೆ ನಂತರದ ತೀವ್ರ ರಕ್ತಸ್ರಾವವೇ (ಪಿಪಿಎಚ್) ಮಾತೃಮರಣಕ್ಕೆ ಪ್ರಮುಖ ಕಾರಣ ಎಂಬುದು ದೃಢಪಟ್ಟಿತ್ತು. ಇದನ್ನು ತಡೆಯಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಮಾತೃ ಅಪಾಯ ಟ್ರ್ಯಾಕರ್’ ಅಭಿವೃದ್ಧಿಪಡಿಸಲಾಗಿದೆ. ಜಿಲ್ಲೆಯ ಐದು ತಾಲೂಕುಗಳ ಗರ್ಭಿಣಿಯರ ಆರ್ಸಿಎಚ್ ನೋಂದಣಿ ದತ್ತಾಂಶವನ್ನು ಈ ಟ್ರ್ಯಾಕರ್ ಪ್ರತಿ 15 ದಿನಗಳಿಗೊಮ್ಮೆ ವಿಶ್ಲೇಷಿಸುತ್ತದೆ. ಹಿಮೋಗ್ಲೋಬಿನ್ ಮಟ್ಟ, ಹಿಂದಿನ ಕಾಯಿಲೆಗಳು, ವಯಸ್ಸು, ಪ್ರಸವಪೂರ್ವ ತಪಾಸಣೆ ಕೊರತೆ, ಹೆರಿಗೆ ದಿನಾಂಕ ಮೀರುವಿಕೆ ಹಾಗೂ ಆರ್ಥಿಕ ದುರ್ಬಲತೆಯನ್ನು ಆಧರಿಸಿ ಗರ್ಭಿಣಿಯರನ್ನು ‘ಗಂಭೀರ’, ‘ಹೆಚ್ಚು ಅಪಾಯ’, ‘ಮಧ್ಯಮ’ ಮತ್ತು ‘ಕಡಿಮೆ ಅಪಾಯ’ ಎಂದು ನಾಲ್ಕು ಹಂತಗಳಲ್ಲಿ ವರ್ಗೀಕರಿಸಲಾಗ್ತುದೆ. 2026ರ ಸೆಪ್ಟೆಂಬರ್ 23ರ ಮೊದಲ ಮೌಲ್ಯಮಾಪನದಲ್ಲಿ 14,033 ಗರ್ಭಿಣಿಯರನ್ನು ಪರಿಶೀಲಿಸಿ, 68 ‘ಗಂಭೀರ’ ಹಾಗೂ 1,021 ‘ಹೆಚ್ಚು ಅಪಾಯ’ದ ಪ್ರಕರಣಗಳನ್ನು ನಿಖರವಾಗಿ ಪತ್ತೆಹಚ್ಚಲಾಗಿದೆ. ಇದರಿಂದ ಬಂಡ್ರಿ, ಹಚ್ಚೊಳ್ಳಿ, ತಾರಾನಗರ ಸೇರಿದಂತೆ ಅತಿ ಹೆಚ್ಚು ಅಪಾಯವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ (ಪಿಎಚ್ಸಿ) ಮೇಲೆ ವಿಶೇಷ ನಿಗಾ ಇಡಲು ಸಾಧ್ಯವಾಗಿದೆ.
ವೈದ್ಯರಿಗೆ ಹೊಣೆಗಾರಿಕೆ ನಿಗದಿ: ಟ್ರ್ಯಾಕರ್ನಲ್ಲಿ ‘ಗಂಭೀರ’ ಎಂದು ಗುರುತಿಸಲ್ಪಟ್ಟ ಗರ್ಭಿಣಿಯರನ್ನು ವೈದ್ಯಾಧಿಕಾರಿಗಳು 48 ಗಂಟೆಗಳ ಒಳಗೆ ಹಾಗೂ ‘ಹೆಚ್ಚು ಅಪಾಯ’ದಲ್ಲಿದ್ದವರನ್ನು ಒಂದು ವಾರದ ಒಳಗೆ ಖುದ್ದಾಗಿ ಸಂಪರ್ಕಿಸಿ ಅಥವಾ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಪ್ರಕರಣದ ಚಿಕಿತ್ಸೆ ಮತ್ತು ರೆಫರಲ್ ಮಾಹಿತಿಯನ್ನು ಲಿಖಿತವಾಗಿ ದಾಖಲಿಸಬೇಕು. 15 ದಿನಗಳಿಗೊಮ್ಮೆ ನಡೆಯುವ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ನೋಡಲ್ ಅಧಿಕಾರಿಗಳು ಪ್ರತಿ ಗಂಭೀರ ಪ್ರಕರಣಕ್ಕೂ ಲಿಖಿತ ವಿವರಣೆ ನೀಡಬೇಕಿರುವುದರಿಂದ ನಿರ್ಲಕ್ಷ್ಯಕ್ಕೆ ಕಡಿವಾಣ ಬಿದ್ದಿದೆ.
ತುರ್ತು ಚಿಕಿತ್ಸಾ ಸಿದ್ಧತೆ: ಬಿಮ್ಸ್ ತಜ್ಞರ ಮೂಲಕ ಜಿಲ್ಲೆಯ ಎಲ್ಲಾ ವೈದ್ಯರು ಮತ್ತು ಶುಶ್ರೂಷಕಿಯರಿಗೆ ಹೆರಿಗೆ ನಂತರದ ರಕ್ತಸ್ರಾವ ನಿಯಂತ್ರಣದ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ರಕ್ತಸ್ರಾವವನ್ನು ತಕ್ಷಣ ತಡೆಯುವ ‘ಬಾಕ್ರಿ ಬಲೂನ್’, ರೋಗಿಯನ್ನು ಸುರಕ್ಷಿತವಾಗಿ ಸಾಗಿಸಲು ‘ಆಂಟಿ-ಶಾಕ್ ಗಾರ್ಮೆಂಟ್’ ಹಾಗೂ ದೊಡ್ಡ ವ್ಯಾಸದ ಐ.ವಿ ಕ್ಯಾನುಲಾಗಳನ್ನು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಒದಗಿಸಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ರಕ್ತನಿಧಿಯನ್ನು ಕಾರ್ಯಾರಂಭಗೊಳಿಸಲಾಗಿದೆ. ತಜ್ಞರ ಕೊರತೆ ಎದುರಿಸುತ್ತಿದ್ದ ಸಂಡೂರು ತಾಲೂಕು ಆಸ್ಪತ್ರೆಗೆ ಇಬ್ಬರು ಸ್ತ್ರೀರೋಗ ತಜ್ಞರು ಹಾಗೂ ಒಬ್ಬ ಅರಿವಳಿಕೆ ತಜ್ಞರನ್ನು ನೇಮಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಪ್ರಯಾಣದ ಸಮಯ ಉಳಿಸಲು ಸಿಎಸ್ಆರ್ ಸಹಭಾಗಿತ್ವದಲ್ಲಿ ತೋರಣಗಲ್ನ ಜೆಎಸ್ಡಬ್ಲ್ಯೂ ಸಂಜೀವಿನಿ ಆಸ್ಪತ್ರೆಗೆ ನೇರ ರೆಫರಲ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹಿಂದಿನ ಕಹಿ ಘಟನೆಗಳು ಮರುಕಳಿಸದಂತೆ ತಡೆಯಲು ‘ಮಿಷನ್ ಮಮತಾ’ ಮೂಲಕ ಪ್ರತಿ ಗಂಭೀರ ಪ್ರಕರಣಕ್ಕೂ ಸ್ಪಷ್ಟ ಹೊಣೆಗಾರಿಕೆ ಮತ್ತು ತುರ್ತು ಚಿಕಿತ್ಸೆಯ ಸಿದ್ಧತೆಯನ್ನು ಖಚಿತಪಡಿಸಿದ್ದೇವೆ. ತಂತ್ರಜ್ಞಾನ, ತಜ್ಞರ ನೇಮಕ, ತರಬೇತಿ ಮತ್ತು ಸಕಾಲಿಕ ಆರೈಕೆಯ ಸಂಘಟಿತ ಪ್ರಯತ್ನದಿಂದ ಜಿಲ್ಲೆಯಲ್ಲಿ ಮಾತೃಮರಣ ಸಂಖ್ಯೆ ಗಣನೀಯವಾಗಿ ಇಳಿದಿದೆ.
<ಮುಹಮ್ಮದ್ ಹಾರೀಸ್ ಸುಮೇರ್, ಸಿಇಒ, ಜಿಪಂ, ಬಳ್ಳಾರಿ






