ಬಸವಕಲ್ಯಾಣ: ಕಿರಾಣಿ ಅಂಗಡಿ, ಮನೆಗಳಲ್ಲೂ ಮದ್ಯ ಮಾರಾಟ ಆರೋಪ
ಅಬಕಾರಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

ಸಾಂದರ್ಭಿಕ ಚಿತ್ರ(PTI)
ಬಸವಕಲ್ಯಾಣ: ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳು ಹಾಗೂ ರಾಷ್ಟ್ರೀಯ ಹೆದ್ದಾರಿ-65ರಲ್ಲಿರುವ ಢಾಬಾ, ಕಿರಾಣಿ ಅಂಗಡಿ ಮತ್ತು ಹೋಟೆಲ್ಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿನ ಕೆಲವು ಮನೆಗಳು ಹಾಗೂ ಕಿರಾಣಿ ಅಂಗಡಿಗಳಲ್ಲಿಯೂ ಬೆಳಗಿನ ಜಾವಕ್ಕೂ ಮುನ್ನವೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ನಗರದಲ್ಲಿಯೂ ಕೆಲವು ಬಾರ್ಗಳಲ್ಲಿ ನಿಗದಿತ ಸಮಯಕ್ಕೂ ಮುನ್ನ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೆಲ ದಿನಗಳ ಹಿಂದೆ ಉಮ್ಮಾಪುರ ಮತ್ತು ರಾಮತೀರ್ಥ (ಕೆ) ಗ್ರಾಮದ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಅಕ್ರಮ ಮದ್ಯ ಮಾರಾಟದಿಂದ ಬೇಸತ್ತು, ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಗ್ರಾಮದಲ್ಲಿ ಕೂಡಲೇ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದರು. ಅಕ್ರಮ ಮದ್ಯ ಮಾರಾಟದ ಬಗ್ಗೆ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದರು.
ಶಾಸಕ ಶರಣು ಸಲಗರ ಅವರು ಯದಲಾಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಮಹಿಳೆಯರು ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಮನವಿ ಮಾಡಿದ್ದರು. ಈ ವೇಳೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಣದ ಅಗತ್ಯವಿರುವುದರಿಂದ ಅಕ್ರಮ ಮದ್ಯ ಮಾರಾಟ ತಡೆಯುತ್ತಿಲ್ಲ ಎಂದು ಆರೋಪಿಸಿದ್ದ ಶಾಸಕ ಸಲಗರ, ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ಮದ್ಯ ಮಾರಾಟ ತಡೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಶಾಸಕರ ಈ ಹೇಳಿಕೆಯಿಂದ ಗ್ರಾಮೀಣ ಭಾಗದ ಮಹಿಳೆಯರು ತಮ್ಮ ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ.
ಅಕ್ರಮ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ಹಾಳಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮದ್ಯ ಸೇವಿಸಿದ ಯುವಕರು ತಂದೆ-ತಾಯಿ ಸೇರಿದಂತೆ ಕುಟುಂಬಸ್ಥರೊಂದಿಗೆ ಪ್ರತಿನಿತ್ಯ ಜಗಳವಾಡುತ್ತಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕಡಿವಾಣ ಹಾಕುತ್ತಿಲ್ಲ ಎಂಬ ಆರೋಪವಿದೆ. ಮನೆ ಹಾಗೂ ಅಂಗಡಿಗಳಲ್ಲಿಯೇ ಸುಲಭವಾಗಿ ಮದ್ಯ ದೊರೆಯುತ್ತಿರುವುದರಿಂದ ಯುವಕರು ಮದ್ಯ ಸೇವನೆಯ ಚಟಕ್ಕೆ ಮತ್ತಷ್ಟು ಬಲಿಯಾಗುತ್ತಿದ್ದಾರೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪರವಾನಗಿ ಹೊಂದಿರುವ ಮದ್ಯದಂಗಡಿಗಳಲ್ಲಿ ನಿಗದಿತ ನಿಯಮಗಳಂತೆ ಮದ್ಯ ಸೇವನೆಗೆ ಅವಕಾಶವಿದೆ. ಆದರೆ, ನಗರದ ಒಳಭಾಗ ಮತ್ತು ಹೊರಭಾಗದಲ್ಲಿರುವ ಹಾಗೂ ರಾಷ್ಟ್ರೀಯ ಹೆದ್ದಾರಿ-65ರಲ್ಲಿರುವ ಹಲವು ಢಾಬಾಗಳಲ್ಲಿ ನಿಯಮಬಾಹಿರವಾಗಿ ಮದ್ಯ ಸೇವನೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಗುರಿ ತಲುಪಲು ಅಕ್ರಮ ಸರಬರಾಜು ಆರೋಪ
ಮದ್ಯದ ಅಕ್ರಮ ಮಾರಾಟಕ್ಕೆ ಸರಕಾರ ನಿಷೇಧ ಹೇರಿದ್ದರೂ, ಮದ್ಯದಂಗಡಿಗಳಿಗೆ ನಿಗದಿಪಡಿಸಿರುವ ಮಾರಾಟದ ಗುರಿ ತಲುಪಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಿಗೆ ಅಕ್ರಮವಾಗಿ ಮದ್ಯ ಸರಬರಾಜು ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮದ್ಯದಂಗಡಿ ಮಾಲೀಕರು ನಿತ್ಯ ಗ್ರಾಮಗಳಿಗೆ ಅಕ್ರಮವಾಗಿ ಮದ್ಯ ಪೂರೈಕೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ, ಯುವಕರ ಭವಿಷ್ಯ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಉಮ್ಮಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಬಂದ್ ಮಾಡಬೇಕೆಂದು ಗ್ರಾಮಸ್ಥರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಆದರೆ, ಗ್ರಾಮದಲ್ಲಿ ಎಂದಿನಂತೆ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ರಾತ್ರಿ 1 ಗಂಟೆಯ ಸಮಯದಲ್ಲಿಯೂ ಮನೆಗಳಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅಶಾಂತಿ ಉಂಟಾಗಿದ್ದು, ಕಳ್ಳತನದಂತಹ ಘಟನೆಗಳೂ ಹೆಚ್ಚಾಗುತ್ತಿವೆ. ಮದ್ಯ ಮಾರಾಟ ಮಾಡಬೇಕಾದರೆ ಸರಕಾರದಿಂದ ಪರವಾನಗಿ ಪಡೆದು ಮಾರಾಟ ಮಾಡಬಹುದು. ಆದರೆ, ಗ್ರಾಮದಲ್ಲಿ ಎಲ್ಲೆಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು.
-ಸಲ್ಮಾನ್,
ಉಮ್ಮಾಪುರ ಗ್ರಾಮಸ್ಥ
ಅಕ್ರಮ ಮದ್ಯ ಮಾರಾಟದ ದೂರು ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪು ಕಂಡುಬಂದಲ್ಲಿ ಸಾರ್ವಜನಿಕರು ನಮ್ಮ ಗಮನಕ್ಕೆ ತರಬೇಕು.
-ಬಸವರಾಜ್ ಜಾಮನಗೊಂಡ,
ಸಿಪಿಐ, ಅಬಕಾರಿ ಇಲಾಖೆ, ಬಸವಕಲ್ಯಾಣ
ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ಇಲ್ಲಿನ ಅಧಿಕಾರಿಗಳು ವಿಫಲರಾಗಿದ್ದಾರೆ. ದೂರು ನೀಡಿದ ಬಳಿಕ ಎರಡು ದಿನ ಮಾತ್ರ ಮದ್ಯ ಮಾರಾಟ ಬಂದ್ ಆಗಿರುತ್ತದೆ. ನಂತರ ಮತ್ತೆ ಎಂದಿನಂತೆ ಅಕ್ರಮ ಮದ್ಯ ಮಾರಾಟ ಆರಂಭವಾಗುತ್ತದೆ. ಈ ವಿಚಾರದಲ್ಲಿ ಸಂಬಂಧಿಸಿದ ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
-ಶಂಕರ್ ಫುಲೆ,
ಬಿಎಸ್ಪಿ ತಾಲೂಕು ಅಧ್ಯಕ್ಷ, ಬಸವಕಲ್ಯಾಣ
ಗ್ರಾಮೀಣ ಭಾಗದಲ್ಲಿ ಕಿರಾಣಿ ಅಂಗಡಿಗಳು ಸೇರಿದಂತೆ ಮನೆಗಳಲ್ಲಿಯೂ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಯುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಕೂಡಲೇ ಈ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಬೇಕು.
-ಧನರಾಜ್ ರಾಜೊಳೆ,
ಬಸವಕಲ್ಯಾಣ






