ಮಾದಕ ದ್ರವ್ಯ ತಡೆಗೆ ‘ಬೇಡ ಬ್ರೋ’ ಅಭಿಯಾನ

ಶಿವಮೊಗ್ಗ, ಜು.4: ಪೊಲೀಸರ ಕಠಿಣ ಕ್ರಮದ ನಡುವೆಯೂ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಸೇರಿದಂತೆ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ವತಿಯಿಂದ ‘ಬೇಡ ಬ್ರೋ’ ಅಭಿಯಾನ ಕೈಗೊಳ್ಳಲಾಗಿದೆ.
ಇಂದಿನ ಸಮಾಜವನ್ನು ಕಾಡುತ್ತಿರುವ ಅತಿದೊಡ್ಡ ಪಿಡುಗುಗಳಲ್ಲಿ ಮಾದಕ ದ್ರವ್ಯ(ಡ್ರಗ್ಸ್) ವ್ಯಸನ ಪ್ರಮುಖವಾದದ್ದು. ಯುವಜನತೆಯನ್ನು ದಾರಿ ತಪ್ಪಿಸಿ, ಅವರ ಭವಿಷ್ಯವನ್ನು ಹಾಳು ಮಾಡುತ್ತಿರುವ ಈ ಮಹಾಮಾರಿಯನ್ನು ಬೇರು ಸಹಿತ ಕಿತ್ತು ಹಾಕಲು ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಪಣ ತೊಟ್ಟಿದೆ. ಈ ನಿಟ್ಟಿನಲ್ಲಿ ’ನಶೆ ಮುಕ್ತ ಕರ್ನಾಟಕ’ ನಿರ್ಮಾಣದ ಗುರಿಯೊಂದಿಗೆ ಪೊಲೀಸ್ ಇಲಾಖೆ ಆರಂಭಿಸಿರುವ ನೂತನ ಜಾಗೃತಿ ಅಭಿಯಾನವೇ ’ಬೇಡ ಬ್ರೋ’.
ಜಿಲ್ಲೆ ಹಾಗೂ ನಗರದ ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ಮಾರಾಟ, ಸೇವನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಯುವ ಜನತೆ ಮಾದಕ ವಸ್ತುಗಳ ಸೇವನೆಗೆ ಬಲಿಯಾಗುತ್ತಿದ್ದಾರೆ. ಗಾಂಜಾ ಸೇವನೆಯಿಂದ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ ಇತ್ತೀಚೆಗೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದರಾವ್ ಬಡಾವಣೆಯಲ್ಲಿ ‘ಗಾಂಜಾ ಸೇವಿಸಬೇಡ’ ಎಂದು ಬುದ್ದಿ ಹೇಳಿದ ಅಜ್ಜಿಯನ್ನೇ ಮೊಮ್ಮಗ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಘಟನೆ ನಡೆದಿತ್ತು.
ಸ್ಥಳೀಯವಾಗಿ ಗಾಂಜಾ ಬೆಳೆಯುತ್ತಿದ್ದವರನ್ನು ಹೆಡೆಮುರಿ ಕಟ್ಟಿರುವ ಪೊಲೀಸರಿಗೆ ಹೊರ ರಾಜ್ಯಗಳಿಂದ ಅಕ್ರಮವಾಗಿ ಜಿಲ್ಲೆಗೆ ಪ್ರವೇಶಿಸುತ್ತಿರುವ ಗಾಂಜಾವನ್ನು ತಡೆಯುವುದೇ ಬಹುದೊಡ್ಡ ಸವಾಲಾಗಿದೆ. ಆಂಧ್ರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಶಿವಮೊಗ್ಗಕ್ಕೆ ಗಾಂಜಾ ರವಾನೆಯಾಗುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಪೆಡ್ಲರ್‌ಗಳ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.
ಮಾದಕ ವಸ್ತುಗಳ ವಿಚಾರ ಹಾಗೂ ಅಕ್ರಮ ಚಟುವಟಿಕೆಗಳ ವಿಚಾರದಲ್ಲಿ ಝೀರೋ ಟಾಲರೆನ್ಸ್ ಹೊಂದಿರುವ ಶಿವಮೊಗ್ಗ ಪೊಲೀಸ್ ಇಲಾಖೆ ಕಳೆದ ಆರು ತಿಂಗಳಲ್ಲಿ 1,222 ಮಂದಿಯನ್ನು ಗಾಂಜಾ ಸೇವನೆ ಟೆಸ್ಟ್‌ಗೆ ಒಳಪಡಿಸಿದೆ. ಅಲ್ಲದೆ 660 ಬಾರಿ ಏರಿಯಾ ಡಾಮಿನೇಷನ್ ನಡೆಸಿ ಗಾಂಜಾ ಸೇವನೆ ಮಾಡುವವರನ್ನು ಪತ್ತೆ ಹಚ್ಚಿದೆ.
ಅಂತರ್‌ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಮಾಸಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಬಿಡುಗಡೆ ಮಾಡಿರುವ ಕಾರ್ಯಾಚರಣೆಯ ಅಂಕಿ-ಸಂಖ್ಯೆಗಳ ಪ್ರಕಾರ 2026ರ ಜನವರಿ 1ರಿಂದ ಜೂ.26ರವರೆಗಿನ ಆರು ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಬರೋಬ್ಬರಿ 1,222 ಮಂದಿಯನ್ನು ಗಾಂಜಾ ಸೇವನೆ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 374 ಮಂದಿ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನು ಜೂ.22ರಿಂದ ಜೂ.26 ರವರೆಗೆ ನಡೆದ ವಿಶೇಷ ಕಾರ್ಯಾಚರಣೆಯ ಅವಧಿಯಲ್ಲಿಯೇ 204 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 11 ಜನ ಗಾಂಜಾ ಸೇವಿಸಿರುವುದು ಸಾಬೀತಾಗಿದೆ. ಒಟ್ಟಾರೆಯಾಗಿ 341 ಗಾಂಜಾ ಸೇವನೆ ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ವಿಶೇಷ ಕಾರ್ಯಾಚರಣೆಯಲ್ಲಿ 8 ಪ್ರಕರಣಗಳು ದಾಖಲಾಗಿವೆ.
ಮಾದಕ ವ್ಯಸನಕ್ಕೆ ತುತ್ತಾದವರನ್ನು ಕೇವಲ ಬಂಧಿಸುವುದಷ್ಟೇ ಅಲ್ಲದೆ, ಅವರಲ್ಲಿ ಪರಿವರ್ತನೆ ತರುವ ಉದ್ದೇಶದಿಂದ 141 ಜನರನ್ನು ಆಪ್ತ ಸಮಾಲೋಚನೆಗೆ ಕಳುಹಿಸಲಾಗಿದ್ದು, ವಿಶೇಷ ಅಭಿಯಾನದಡಿ 11 ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ.
24.55 ಲಕ್ಷ ರೂ. ಮೌಲ್ಯದ ಗಾಂಜಾ ವಶ: ಗಾಂಜಾ ನಿರ್ಮೂಲನಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಜನವರಿಯಿಂದ ಜೂನ್ ಅಂತ್ಯದವರೆಗೆ ಬರೋಬ್ಬರಿ 24,55,640 ರೂ. ಮೌಲ್ಯದ 59.119 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 63 ಆರೋಪಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ, ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ 102 ಹಳೇ ಆರೋಪಿಗಳನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಲಾಗಿದ್ದು, ಇದರಲ್ಲಿ ಕಳೆದ 4 ದಿನಗಳಲ್ಲೇ 17 ಜನರನ್ನು ಗುರುತಿಸಿ ಜೈಲಿಗಟ್ಟಲಾಗಿದೆ. ಕಾಡಂಚಿನ ಜಾಗಗಳಲ್ಲಿ ಗಾಂಜಾ ಪತ್ತೆ ಹಚ್ಚಲು ಹಾಗೂ ಪಬ್ಲಿಕ್ ಐ ಮೂಲಕ ಔಷಧಿ ಅಂಗಡಿಗಳ ಮೇಲೆ ನಿಗಾ ಇಡಲು ಡ್ರೋನ್ ಕ್ಯಾಮರಾಗಳನ್ನು ಬಳಸಲಾಗುತ್ತಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ಇದುವರೆಗೆ 25,827 ಜನರಿಗೆ ಗಾಂಜಾ ಕುರಿತು ಅರಿವು ಮೂಡಿಸಲಾಗಿದೆ ಎಂದು ಎಸ್ಪಿ ನಿಖಿಲ್ ಬಿ. ತಿಳಿಸಿದ್ದಾರೆ.
ಯುವಜನತೆಯೇ ಹೆಚ್ಚು
ಪೊಲೀಸ್ ಇಲಾಖೆಗೆ ಸಿಕ್ಕಿರುವ ಮಾಹಿತಿ ಪ್ರಕಾರ 17 ರಿಂದ 25 ವರ್ಷದೊಳಗಿನ ಯುವಕರು ಹೆಚ್ಚಾಗಿ ಗಾಂಜಾ ಸೇವನೆಗೆ ಒಳಗಾಗುತ್ತಿದ್ದಾರೆ ಮತ್ತು ಇವರಲ್ಲಿ ಹೆಚ್ಚು ಕೂಲಿ ಕೆಲಸ ಮಾಡುವ ವ್ಯಕ್ತಿಗಳಿದ್ದಾರೆ. ಆದರೂ ಯುವ ಸಮುದಾಯವನ್ನು ರಕ್ಷಿಸಲು ಇಲಾಖೆಯು ಕಾಲೇಜುಗಳನ್ನು ಹೆಚ್ಚಾಗಿ ಗುರಿ ಮಾಡುತ್ತಿದೆ. ಈ ಹಿಂದೆ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಪರೀಕ್ಷೆ ಮಾಡಿಸಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕಾಲೇಜುಗಳಿಗೇ ನೇರವಾಗಿ ತೆರಳಿ ಪರೀಕ್ಷಿಸಿ ಅರಿವು ಮೂಡಿಸಲಾಗುತ್ತಿದೆ. ಕಾಲೇಜುಗಳಲ್ಲಿ ನಡೆಸಿದ 484 ಜನರ ತಪಾಸಣೆಯಲ್ಲಿ 3 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಹೀಗೆ ಜಿಲ್ಲೆಯನ್ನು ಗಾಂಜಾ ಮುಕ್ತವನ್ನಾಗಿ ಮಾಡಲು ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾಹಿತಿ ನೀಡಿದ್ದಾರೆ.
‘ಬೇಡ ಬ್ರೋ’ ಒಂದು ಸ್ನೇಹಪರ ಅಸ್ತ್ರ
ಯಾರಾದರೂ ಮಾದಕ ದ್ರವ್ಯ ಸೇವಿಸಲು ಆಮಿಷವೊಡ್ಡಿದರೆ ಅಥವಾ ಒತ್ತಾಯಿಸಿದರೆ ಅತ್ಯಂತ ಸರಳವಾಗಿ ಆದರೆ ದೃಢವಾಗಿ ‘ಬೇಡ ಬ್ರೋ’ಎಂದು ಹೇಳುವ ಧೈರ್ಯವನ್ನು ಯುವಕರಲ್ಲಿ ತುಂಬುವುದು ಈ ಅಭಿಯಾನದ ಮುಖ್ಯ ಉದ್ದೇಶ. ಇದು ಕೇವಲ ನಿರಾಕರಣೆಯಲ್ಲ. ಬದಲಾಗಿ ತಮ್ಮ ಹಾಗೂ ಸ್ನೇಹಿತರ ಭವಿಷ್ಯವನ್ನು ಕಾಪಾಡಿಕೊಳ್ಳುವ ಒಂದು ಜವಾಬ್ದಾರಿಯುತ ಹೆಜ್ಜೆಯಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.
ನಶೆಮುಕ್ತ ಕರ್ನಾಟಕ/ಶಿವಮೊಗ್ಗವನ್ನು ನಿರ್ಮಿಸುವುದು ಅಭಿಯಾನದ ಉದ್ದೇಶವಾಗಿದೆ. ಮಾದಕ ವ್ಯಸನಕ್ಕೆ ಬಲಿಯಾಗುವವರಲ್ಲಿ ಯುವಜನರೇ ಹೆಚ್ಚಾಗಿದ್ದಾರೆ. ಗಾಂಜಾ ಮಾರಾಟಗಾರರು, ಸೇವಿಸುವವರ ಮೇಲೆ ಕಣ್ಣಿಡಲಾಗಿದೆ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತು ಸೇವನೆ ವಿರುದ್ಧ ಯುವಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಬೇಡ ಬ್ರೋ’ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಸಮಾಜದ ಪ್ರತಿಯೊಬ್ಬರೂ ಈ ಅಭಿಯಾನಕ್ಕೆ ಕೈಜೋಡಿಸಬೇಕು.
ನಿಖಿಲ್ ಬಿ., ಶಿವಮೊಗ್ಗ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ






