ಜನಸಾಮಾನ್ಯರಿಗೆ ಉಪದೇಶ ಮಾಡುವ ಮೊದಲು...

ಬೇರೆಯವರಿಗೆ ಉಪದೇಶ ಮಾಡುವುದು ಸುಲಭ ಆದರೆ ಅದನ್ನು ವೈಯಕ್ತಿಕವಾಗಿ ಪಾಲಿಸುವುದು ತುಂಬಾ ಕಷ್ಟ. ಅದಕ್ಕೆ ಹೇಳುವುದು ಉಪದೇಶ ಮಾಡುವವರು ತುಂಬಾ ಜಾಗೃತರಾಗಿರ ಬೇಕು.
ದೇಶದ ಪ್ರಧಾನಿ ಮೋದಿಯವರು ದೇಶದ ಜನತೆ ಮುಂದೆ ಎದುರಿಸ ಬೇಕಾದ ಆರ್ಥಿಕ ಸಂಕಷ್ಟದ ಕುರಿತಾಗಿ ಜನಸಾಮಾನ್ಯರು ದಿನನಿತ್ಯದ ಬದುಕಿನಲ್ಲಿ ವಹಿಸ ಬೇಕಾದ ಏಳು ಸೂತ್ರಗಳನ್ನು ಬಹಳ ಸುಲಭವಾಗಿ ಬೋಧಿಸಿ ಬಿಟ್ಟಿದ್ದಾರೆ. ಆದರೆ ಇದು ಜನಸಾಮಾನ್ಯರಿಗೆ ಮಾತ್ರ ಅನ್ವಯಿಸುತ್ತದೆಯೇ ಅಥವಾ ಅಧಿಕಾರದಲ್ಲಿರುವ ರಾಜಕಾರಣಿಗಳಿಗೂ ಅನ್ವಯಿಸುತ್ತದೆಯೇ ಅನ್ನುವುದನ್ನು ಮೊದಲು ಅವರು ಸ್ವಷ್ಟ ಪಡಿಸಬೇಕಾಗಿದೆ.
ಜನಸಾಮಾನ್ಯರು ಸ್ವಂತ ವಾಹನಗಳನ್ನು ಕಡಿಮೆ ಬಳಸಿ, ಸಾರ್ವಜನಿಕರು ಸಂಚರಿಸುವ ವಾಹನಗಳನ್ನು ಹೆಚ್ಚಾಗಿ ಬಳಸಿ, ವಿದೇಶಕ್ಕೆ ಹೋಗುವ ಕಾರ್ಯಕ್ರಮವಿದ್ದರೆ ಒಂದು ವರ್ಷಕ್ಕೆ ಮುಂದೂಡಿ. ಚಿನ್ನದ ಖರೀದಿ ಸದ್ಯಕ್ಕೆ ಕೈ ಬಿಡಿ... ಇಂತಹ ಕೆಲವೊಂದು ಉಚಿತ ಸಲಹೆಗಳನ್ನು ಸಾರ್ವಜನಿಕರಿಗೆ ಪ್ರಧಾನಿ ನೀಡಿದ್ದಾರೆ.
ಹಾಗಾದರೆ ನಮ್ಮ ಪ್ರಧಾನ ಮಂತ್ರಿಗಳಿಂದ ಹಿಡಿದು ಸಾಮಾನ್ಯ ಒಬ್ಬ ಶಾಸಕನವರೆಗೂ ಅಗತ್ಯ ಸರಕಾರಿ ಕೆಲಸ ಬಿಟ್ಟು ವೈಯಕ್ತಿಕ ಕೆಲಸಗಳಾದ ಮದುವೆ, ಉಪನಯನ, ನಾಗ ಮಂಡಲ ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳಿಗೆ ಆಗಮಿಸಲು ಸರಕಾರಿ ವಾಹನಗಳನ್ನು ಬಳಸುತ್ತಾರೆ. ಅಂದರೆ ಇವುಗಳಿಗೆ ಪೆಟ್ರೋಲ್, ಡೀಸೆಲ್ ಅವಶ್ಯವಿಲ್ಲವೇ? ಇವರ ಕಾರುಗಳು ಬರೀ ಗಾಳಿ ಅಥವಾ ನೀರಿನಲ್ಲಿ ಓಡಾಡುತ್ತಿವೆಯೇ?
ಸರಕಾರಿ ಕೆಲಸವಲ್ಲದ ಇತರ ಸಣ್ಣ ಕಾರ್ಯಕ್ರಮಗಳಿಗೂ ಪ್ರಧಾನ ಮಂತ್ರಿಗಳು, ಮಂತ್ರಿ ಮಾಗದರು ವಿಮಾನ, ಹೆಲಿಕಾಪ್ಟರ್‌ನಲ್ಲಿ ಬಂದು ಹೋಗುವುದು, ಅವರ ಹಿಂದೆ ಇತರ ಜನಪ್ರತಿನಿಧಿಗಳು, ಅಧಿಕಾರಿಗಳ ನೂರಾರು ಕಾರುಗಳು ಹಿಂಡು ಹಿಂಡಾಗಿ ಸರಕಾರಿ ವೆಚ್ಚದಲ್ಲಿ ಓಡಾಡುವುದೆಂದರೆ ಇದು ದೇಶದ ಆರ್ಥಿಕತೆಗೆ ಹೊರೆಯಲ್ಲವೇ? ಇದನ್ನು ಪ್ರಧಾನಿಗಳು ಮೊದಲು ತಿಳಿಸ ಬೇಕಾಗಿತ್ತು.
ಇಂತಹ ಆರ್ಥಿಕ ಸಂಕಷ್ಟ ಕಾಲದಲ್ಲಿ ನಮ್ಮ ಸಂಸದರು, ಶಾಸಕರಿಗೆ ನೀಡುವ ಸಂಬಳ, ಸಾರಿಗೆ ಭತ್ತೆ, ಪಿಂಚಣಿ ಇತ್ಯಾದಿಗಳಿಗೆ ಯಾವುದೇ ಕಡಿವಾಣ ಹಾಕುವ ಉಪದೇಶ ಪ್ರಧಾನಿಗಳ ಬಾಯಿಯಿಂದ ಬರಲೇ ಇಲ್ಲ.
ಇನ್ನು ವಿದೇಶ ಪ್ರವಾಸಗಳ ಬಗ್ಗೆ ಹೇಳುವುದಾದರೆ ಪ್ರಧಾನಿಯವರಿಂದ ಹಿಡಿದು ಮಂತ್ರಿ ಮಾಗದರ ಅನವಶ್ಯಕ ವಿದೇಶ ಪ್ರಯಾಣದ ಖರ್ಚುಗಳನ್ನು ಅವರೇ ಭರಿಸುತ್ತಿದ್ದಾರೆಯೇ? ಇದು ಜನಸಾಮಾನ್ಯರ ಹಣವಲ್ಲವೇ?
ಪ್ರಧಾನಿಯವರು ದೇಶದ ಆರ್ಥಿಕ ಸಂಕಷ್ಟದ ಕಾಲದಲ್ಲಿ ಸುಧಾರಣೆಯ ದೃಷ್ಟಿಯಿಂದ ಹೇಳಿದ ಉಪದೇಶ ಸಮಯೋಚಿತವಾದರೂ ಅದರ ಜವಾಬ್ದಾರಿಯನ್ನು ಕೇವಲ ಜನಸಾಮಾನ್ಯರ ಮೇಲೆ ಹೇರಿರುವುದು ಸರಿಯಲ್ಲ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರ ಕೊರತೆ ಬಂದಾಗ ಅವರು ಒಂದು ಹೊತ್ತಿನ ಊಟ ಬಿಡಿ ಅನ್ನುವ ಸಂದೇಶವನ್ನು ಜನರಿಗೆ ಮಾತಿನಲ್ಲಿ ಹೇಳದೆ ತಾವೇ ಒಂದು ಹೊತ್ತಿನ ಊಟ ಬಿಟ್ಟು ದೇಶಕ್ಕೆ ಮಾದರಿಯಾಗಿ ನಿಂತರು. ಆಡುವುದಕ್ಕಿಂತ ಸ್ವತಃ ಮಾಡಿ ತೋರಿಸುವುದೇ ಶ್ರೇಷ್ಠವಲ್ಲವೇ?
ಮೇರು ಸ್ಥಾನದ ನಾಯಕರು ಹೇಳುವುದು ಒಂದು ಮಾಡುವುದು ಇನ್ನೊಂದಾಗಬಾರದು. ಜನಸಾಮಾನ್ಯರಿಗೆ ಸಲಹೆಗಳನ್ನು ನೀಡುವ ಮೊದಲು ತಮ್ಮ ವರ್ತುಲದಲ್ಲಿಯೇ ಇದನ್ನು ಮೊದಲು ಪ್ರಯೋಗಿಸಬೇಕಾಗಿದೆ.
ಸದ್ಯಕ್ಕೆ ದೇಶದಲ್ಲಿ ಚುನಾವಣೆಯ ನೆಪದಲ್ಲಿ ರ್ಯಾಲಿ, ಶಂಕುಸ್ಥಾಪನೆ ಉದ್ಘಾಟನೆ ಎಲ್ಲಾ ಮುಗಿದಿದೆ. ಹಾಗಾಗಿ ಇನ್ನು ಒಂದು ವರ್ಷ ಜನಸಾಮಾನ್ಯರು ಚಂಡಿ ಒದ್ದೆ ಹೊಟ್ಟೆಗೆ ಕಟ್ಟಿ ಮಲಗಿ ಅನ್ನುವ ಸಂದೇಶ ಹೊರ ಬಂದಿದೆ ಅಷ್ಟೆ.






