ತ್ಯಾಜ್ಯದಿಂದ ಆದಾಯ ಸೃಷ್ಟಿಸಿದ ಬೆಳಗಟ್ಟೆ ಗ್ರಾಪಂ

ಕೂಡ್ಲಿಗಿ: ತಾಲೂಕಿನ ಬೆಳಗಟ್ಟೆ ಗ್ರಾಪಂ ಗ್ರಾಮದಲ್ಲಿ ನಿರ್ಮಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ತೇವ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುತ್ತಿದ್ದು, ರೈತರು ಮತ್ತು ಸಾರ್ವಜನಿಕರಿಗೆ ವಿತರಿಸುವ ಮೂಲಕ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡುತ್ತಿದೆ. ಪ್ಲಾಸ್ಟಿಕ್ ಸೇರಿದಂತೆ ಮರುಬಳಕೆ ಸಾಧ್ಯವಾಗುವ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮರುಬಳಕೆ ಘಟಕಗಳಿಗೆ ಕಳುಹಿಸಿಕೊಟ್ಟು ತ್ಯಾಜ್ಯ ನಿರ್ವಹಣೆಯಲ್ಲಿ ಆದಾಯ ಸೃಷ್ಟಿಸಿಕೊಳ್ಳುತ್ತಿದೆ.
ಈ ಮೂಲಕ ಬೆಳಗಟ್ಟೆ ಗ್ರಾಪಂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಮಾದರಿ ಹೆಜ್ಜೆ ಇಟ್ಟಿದ್ದು, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಮೂಲಕ ಗ್ರಾಮೀಣ ಸ್ವಚ್ಛತಾ ಕ್ಷೇತ್ರದಲ್ಲಿ ಸಾಧನೆ ಮಾಡಿದೆ.
ಗ್ರಾಮದಲ್ಲಿ ಮನೆಮನೆಗೆ ತೆರಳಿ ಒಣ ಮತ್ತು ತೇವ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ವ್ಯವಸ್ಥೆ ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಗ್ರಾಪಂ ಸಿಬ್ಬಂದಿ ಹಾಗೂ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಪ್ರತಿದಿನ ತ್ಯಾಜ್ಯ ಸಂಗ್ರಹಿಸಿ ಸ್ವಚ್ಛತೆ ಕಾಪಾಡುತ್ತಿದ್ದಾರೆ.
ಸ್ವಚ್ಛತೆ ಆರೋಗ್ಯಕರ ಸಮಾಜದ ಮೊದಲ ಹೆಜ್ಜೆ ಧ್ಯೇಯವಾಕ್ಯದೊಂದಿಗೆ ಗ್ರಾಪಂ, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಕೈಗೊಂಡ ನಿರಂತರ ಪ್ರಯತ್ನಗಳು ಗ್ರಾಮವನ್ನು ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣದತ್ತ ಕೊಂಡೊಯ್ದಿವೆ.
ಎನ್‌ಆರ್‌ಎಲ್‌ಎಂ ಯೋಜನೆಯಡಿ ಅಕ್ಷರ ಸಂಜೀವಿನಿ ಒಕ್ಕೂಟವು ಗ್ರಾಪಂನೊಂದಿಗೆ ಕೈಜೋಡಿಸಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು ಗ್ರಾಮಸ್ಥರಲ್ಲಿ ಕಸ ವಿಂಗಡಣೆ, ಪರಿಸರ ಸಂರಕ್ಷಣೆ ಹಾಗೂ ಶೌಚಾಲಯ ಬಳಕೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ಸ್ವಚ್ಛ ಭಾರತ್ ಮಿಷನ್ ಯೋಜನೆ ಸಮಾಲೋಚಕ ಹನುಮಂತಪ್ಪ ಮಾರ್ಗದರ್ಶನದಲ್ಲಿ ಗ್ರಾಪಂ ವ್ಯಾಪ್ತಿಯ ಬೆಳಗಟ್ಟೆ, ಕಾಟ್ರಹಳ್ಳಿ, ನರಸಿಂಹಗಿರಿ, ಹುಲಿಕುಂಟೆ, ಸಂಕ್ಲಾಪುರ, ಅರ್ಜುನ ಚಿನ್ನನಹಳ್ಳಿ, ಯಲಿಂಗನಹಳ್ಳಿ, ಕರಡಿಹಳ್ಳಿ ಹಾಗೂ ಕೊರಚರಹಟ್ಟಿ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯುತ್ತಿವೆ.
ಘನ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ವಾಹನ ಚಾಲಕಿಯಾಗಿ ಶಿಲ್ಪಾ ಕಾರ್ಯನಿರ್ವಹಿಸುತ್ತಿದ್ದು, ಕಸ ವಿಂಗಡಣೆ ಕಾರ್ಯದಲ್ಲಿ ಮಂಜಮ್ಮ ಹಾಗೂ ಜ್ಯೋತೆಮ್ಮ ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಪಂ ಸ್ವಚ್ಛತಾ ಕಾರ್ಯಕ್ಕೆ ಸ್ಥಳೀಯರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸ್ವಚ್ಛ ಗ್ರಾಮ, ಆರೋಗ್ಯಕರ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವತ್ತ ಬೆಳಗಟ್ಟೆ ಗ್ರಾಪಂ ಮುನ್ನಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಳಗಟ್ಟೆ ಗ್ರಾಮದಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಕಾಲುವೆಗಳ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮನೆಮನೆಗೆ ಕಸ ವಿಂಗಡಣೆ, ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಹಾಗೂ ಶೌಚಾಲಯ ಬಳಕೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರ ಸಹಕಾರವೇ ಸ್ವಚ್ಛ ಗ್ರಾಮ ನಿರ್ಮಾಣ ಯಶಸ್ಸಿನ ಮೂಲವಾಗಿದೆ.
-ಕೆ.ನರಸಪ್ಪ ಇಒ,ತಾಪಂ ಕೂಡ್ಲಿಗಿ
ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ಕಡಿತ, ಕಸ ವಿಂಗಡಣೆ ಹಾಗೂ ಪರಿಸರ ಸಂರಕ್ಷಣೆ ಕುರಿತು ಗ್ರಾಮಸ್ಥರಲ್ಲಿ ಉತ್ತಮ ಅರಿವು ಮೂಡಿದ್ದು, ಇದು ಗ್ರಾಮ ಸ್ವಚ್ಛತೆಗೆ ಶಕ್ತಿ ತುಂಬಿದೆ.
-ಉಮೇಶ್ ಎಂ
ಸಹಾಯಕ ಯೋಜನಾಧಿಕಾರಿ
ಜಿಪಂ, ವಿಜಯನಗರ ಜಿಪಂ, ವಿಜಯನಗರ
ಬೆಳಗಟ್ಟೆ ಗ್ರಾಪಂ ಸದಸ್ಯರು, ಅಧಿಕಾರಿಗಳು, ಮಹಿಳಾ ಸಂಘಗಳು ಹಾಗೂ ಸಾರ್ವಜನಿಕರ ಸಮನ್ವಯದಿಂದ ಗ್ರಾಪಂ ಜಿಲ್ಲೆಯ ಮಾದರಿ ಪಂಚಾಯಿತಿಯಾಗಿ ಹೊರಹೊಮ್ಮಿದೆ. ತ್ಯಾಜ್ಯದಿಂದ ಆದಾಯ ಎಂಬ ಪರಿಕಲ್ಪನೆ ಅನುಷ್ಠಾನಗೊಳಿಸಿರುವುದು ಇತರೆ ಗ್ರಾಪಂಗಳಿಗೂ ಪ್ರೇರಣೆಯಾಗಿದೆ.
-ಕೆ. ತಿಮ್ಮಪ್ಪ, ಉಪ ಕಾರ್ಯದರ್ಶಿ
ಜಿಪಂ, ವಿಜಯನಗರ ಜಿಪಂ, ವಿಜಯನಗರ






