ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರಿಗಾಗಿ 'ಬೆಂಗಳೂರು ಸಹರಿ' ನೆರವು

ಬೆಂಗಳೂರು, ಮಾ.11: ರಮಝಾನ್ ತಿಂಗಳಲ್ಲಿ ಬೆಂಗಳೂರಿನಲ್ಲಿರುವ ಹಾಸ್ಟೆಲ್, ಪಿಜಿಗಳಲ್ಲಿರುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥ ಮಹಿಳೆಯರಿಗಾಗಿ ಸಹರಿ ಸೌಲಭ್ಯವನ್ನು ಕಲ್ಪಿಸಿಕೊಡಲು ಆ್ಯಕ್ಟೀವ್ ಬೆಂಗಳೂರು ಫೌಂಡೇಶನ್ ಸಹಯೋಗದೊಂದಿಗೆ ಯುವಕರ ತಂಡವು ‘ಬೆಂಗಳೂರು ಸಹರಿ.ಇನ್ (https://bangaloresehri.in) ಅನ್ನು ಆರಂಭಿಸಿದೆ.
ಈ ವೆಬ್‌ಸೈಟ್‌ನಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಎಂದು ವಿಂಗಡಿಸಲಾಗಿದ್ದು, ಅದರಲ್ಲಿ ವಿದ್ಯಾರ್ಥಿಗಳು, ಉದ್ಯೋಗಸ್ಥ ಮಹಿಳೆಯರು ತಮ್ಮ ಸಮೀಪದಲ್ಲಿ ಎಲ್ಲಿ ಸಹರಿ ಲಭ್ಯವಿದೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ವೆಬ್‌ಸೈಟ್‌ನಲ್ಲಿ ಉಚಿತ ಹಾಗೂ ಪಾವತಿ ಮಾಡಿ ಪಡೆಯುವ ಸಹರಿ ಬಗ್ಗೆಯೂ ಮಾಹಿತಿ ಸಿಗುವಂತೆ ಮಾಡಲಾಗಿದೆ.
ಈ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಬೆಂಗಳೂರು ಸಹರಿ ಇನ್‌ನ ಸ್ವಯಂ ಸೇವಕ ಮುಹಮ್ಮದ್ ಝೈನ್ ಹಸನ್, ನಾನು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಬೇರೆ ಕಡೆಯಿಂದ ಬಂದು ಹಾಸ್ಟೆಲ್‌ನಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳು ಸಹರಿಗಾಗಿ ಎದುರಿಸುತ್ತಿರುವ ಸಮಸ್ಯೆಗಳ ಅರಿವಾಯಿತು. ಅಂದಿನಿಂದಲೇ ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂದು ಪ್ರಯತ್ನಗಳನ್ನು ಆರಂಭಿಸಿದೆವು ಎಂದರು.
ಪ್ರಾರಂಭದಲ್ಲಿ ಬಸವನಗುಡಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇರುವ ವಿದ್ಯಾರ್ಥಿಗಳಿಗೆ ಸಹರಿ ಸೌಲಭ್ಯ ಕಲ್ಪಿಸುವ ಆಲೋಚನೆ ಮಾಡಿ, ಗೂಗಲ್ ಅರ್ಜಿಗಳನ್ನು ಶೇರ್ ಮಾಡಿದೆವು. ಸುಮಾರು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಬೇಡಿಕೆ ಬಂತು. ನಾವು 2024ರಲ್ಲಿ ಆ್ಯಕ್ಟೀವ್ ಬೆಂಗಳೂರು ಫೌಂಡೇಶನ್ ಅವರೊಂದಿಗೆ ಸೇರಿ ನಮ್ಮ ವೆಬ್‌ಸೈಟ್ ಆರಂಭ ಮಾಡಿದೆವು. ಅದರಲ್ಲಿ ನಿಮ್ಮ ಸಮೀಪ ಎಲ್ಲಿ ಸಹರಿ ಲಭ್ಯವಿದೆ. ಉಚಿತವೋ ಅಥವಾ ಪಾವತಿ ಮಾಡಬೇಕೋ? ಎಂಬ ಮಾಹಿತಿ, ಸಹರಿ ಪೂರೈಸುವವರ ವಿಳಾಸ, ದೂರವಾಣಿ ಸಂಖ್ಯೆ ಎಲ್ಲವೂ ಅಳವಡಿಸಲಾಗಿದೆ ಎಂದು ಮುಹಮ್ಮದ್ ಝೈನ್ ಹಸನ್ ತಿಳಿಸಿದರು.
2024ರಲ್ಲಿ ಸುಮಾರು 5 ಲಕ್ಷ ಮಂದಿ ನಮ್ಮ ವೆಬ್‌ಸೈಟ್ ವೀಕ್ಷಿಸಿದರು. ಬೆಂಗಳೂರಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿಗೆ ಉಚಿತ ಸಹರಿ ಸೌಲಭ್ಯ ಕಲ್ಪಿಸಿಕೊಡುವಲ್ಲಿ ನಮ್ಮ ವೆಬ್‌ಸೈಟ್ ಸಹಕಾರಿಯಾಯಿತು. ಸಹರಿ ಪೂರೈಕೆದಾರರಲ್ಲಿ ಶೇ.90ರಷ್ಟು ಮಸೀದಿಗಳ ಆಡಳಿತ ಸಮಿತಿಗಳಿವೆ. ಇನ್ನುಳಿದಂತೆ ಕೆಲವು ಸಂಘ ಸಂಸ್ಥೆಗಳು ಇವೆ. ಗೂಗಲ್ ಅರ್ಜಿ ಮೂಲಕ ವೆಬ್‌ಸೈಟ್‌ಗೆ ಸಲ್ಲಿಕೆಯಾಗುವ ಮಾಹಿತಿ ಗೌಪ್ಯವಾಗಿರಿಸಲಾಗುತ್ತದೆ ಎಂದು ಅವರು ಹೇಳಿದರು.
ನಿಗದಿತ ಪ್ರದೇಶಗಳಿಗೆ ಆಯಾ ಭಾಗದ ಬಗ್ಗೆ ಹೆಚ್ಚು ಚಿರಪರಿಚಿತವಾಗಿರುವವರನ್ನೆ ನಿಯುಕ್ತಿ ಮಾಡಲಾಗುತ್ತದೆ. ಇದರಿಂದ ಸಮಯಕ್ಕೆ ಸರಿಯಾಗಿ ಸಹರಿ ಅಗತ್ಯವಿರುವವರಿಗೆ ತಲುಪುವಂತೆ ಮಾಡಲಾಗುತ್ತದೆ. ಒಂದು ಪ್ರದೇಶಕ್ಕೆ ನಿಗದಿಯಾಗುವ ತಂಡವನ್ನು ಇಡೀ ತಿಂಗಳು ಅದೇ ಭಾಗದಲ್ಲಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಹರಿಯನ್ನು ಸ್ವೀಕರಿಸುವವರಿಗೆ ಯಾವುದೆ ರೀತಿಯ ಸಮಸ್ಯೆಯಾಗಬಾರದು ಎಂದು ಆಯಾ ಮಸೀದಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಈ ಕ್ರಮ ಕೈಗೊಂಡಿದ್ದಾರೆ ಎಂದು ಮುಹಮ್ಮದ್ ಝೈನ್ ಹಸನ್ ತಿಳಿಸಿದರು.
ಬೆಂಗಳೂರು ಪೂರ್ವ ತಾಲೂಕಿನ ರಾಮಮೂರ್ತಿ ನಗರ ವಾರ್ಡ್‌ನ ಕೌದೇನಹಳ್ಳಿ ಗ್ರಾಮದಲ್ಲಿರುವ ಮಕ್ಕಾ ಮಸ್ಜಿದ್ ನಲ್ಲಿ 2007-08ರಿಂದ ಮಸೀದಿಯ ಅಧ್ಯಕ್ಷ ಶೇಕ್ ಅಬ್ದುಲ್ ಅಝೀಝ್ ಅವರ ಒತ್ತಾಸೆಯಿಂದಾಗಿ ಉಚಿತ ಸಹರಿ ಸೌಲಭ್ಯ ಆರಂಭ ಮಾಡಲಾಯಿತು. ಸುಮಾರು 18 ವರ್ಷಗಳಿಂದ ನಿರಂತರವಾಗಿ ಈ ಕೆಲಸ ನಡೆಯುತ್ತಿದೆ. ನಮ್ಮ ಮಸೀದಿಯಲ್ಲಿ ಆರಂಭಿಸಿದ ಈ ಕಾರ್ಯವು ಇಂದು ಅನೇಕ ಮಸೀದಿಗಳಿಗೆ ಪ್ರೇರಣೆ ನೀಡಿದೆ ಎಂದು ಮಕ್ಕಾ ಮಸ್ಜಿದ್ ಟ್ರಸ್ಟ್ ಕಾರ್ಯದರ್ಶಿ ಅಮ್ಜದ್ ಖಾನ್ ಎಂ. ಹೇಳಿದರು.
ನಮ್ಮ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಕಾರ್ಮಿಕರು ಇದ್ದಾರೆ. ಅಲ್ಲದೆ, ಐಟಿ ಕ್ಷೇತ್ರದಲ್ಲಿ ದುಡಿಯುವವರು ಇದ್ದಾರೆ. ನಾವು ಸಹರಿ ಸೌಲಭ್ಯ ಆರಂಭ ಮಾಡಿದಾಗ 50-70 ಮಂದಿ ಸಹರಿ ಸ್ವೀಕರಿಸಲು ಬರುತ್ತಿದ್ದರು. ಇಂದು ಸುಮಾರು 400ಕ್ಕೂ ಹೆಚ್ಚು ಮಂದಿಗೆ ಪ್ರತೀ ದಿನ ಉಚಿತವಾಗಿ ಸಹರಿ ಸೌಲಭ್ಯ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ನಮ್ಮ ಮಸೀದಿ ಆಡಳಿತ ಸಮಿತಿಯಿಂದ ಸಹರಿ ಪೂರೈಕೆ ಮಾಡುವ ಸ್ವಯಂ ಸೇವಕರಿಗೆ ಗುರುತಿನ ಚೀಟಿ ನೀಡಲಾಗಿದೆ. ಒಂದೊಂದು ಪ್ರದೇಶಕ್ಕೆ ಒಂದೊಂದು ತಂಡ ಹೋಗಿ ಪಿಜಿ, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಉಚಿತವಾಗಿ ಸಹರಿ ಪ್ಯಾಕೆಟ್‌ಗಳನ್ನು ತಲುಪಿಸುತ್ತಿದೆ. ಎರಡು ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಿದ್ದೇವೆ. ಕಳೆದ ವರ್ಷ ಸುಮಾರು 80 ವಿದ್ಯಾರ್ಥಿಗಳಿಗೆ ಸಹರಿ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಾರಿ 150ಕ್ಕೂ ಹೆಚ್ಚು ಮಂದಿಗೆ ತಲುಪಿಸುತ್ತಿದ್ದೇವೆ.
-ಸುಹೇಲ್ ಎಸ್., ಅಧ್ಯಕ್ಷರು, ಯುವ ಸಮಿತಿ, ಮಕ್ಕಾ ಮಸ್ಜಿದ್ ಟ್ರಸ್ಟ್, ಕೌದೇನಹಳ್ಳಿ.