ಭಾತಂಬ್ರಾ ಗ್ರಾಮಕ್ಕಿಲ್ಲ ಬಸ್ ತಂಗುದಾಣ

ಹುಲಸೂರ್: ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದಲ್ಲಿ ಇದುವರೆಗೂ ಸಮರ್ಪಕ ಬಸ್ ತಂಗುದಾಣ ನಿರ್ಮಾಣವಾಗಿಲ್ಲ. ಪರಿಣಾಮವಾಗಿ ಪ್ರಯಾಣಿಕರು ಬಿಸಿಲು, ಮಳೆ ಎನ್ನದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾತಂಬ್ರಾ ಗ್ರಾಮವು ಹೋಬಳಿ ಮಟ್ಟದ ಗ್ರಾಮವಾಗಿದ್ದು, ಸುಮಾರು 9 ಸಾವಿರ ಜನಸಂಖ್ಯೆ ಹೊಂದಿದೆ. ಈ ಗ್ರಾಮದಿಂದ ದಿನಾಲೂ ಸಾವಿರಾರು ಸಾರ್ವಜನಿಕರು ಪ್ರಯಾಣ ಬೆಳೆಸುತ್ತಾರೆ. ಮುಖ್ಯವಾಗಿ ಈ ಗ್ರಾಮವುಭಾಲ್ಕಿ-ಬಸವಕಲ್ಯಾಣ-ಹುಲಸೂರ್ ಹಾಗೆಯೇ ಮಹಾರಾಷ್ಟ್ರಕ್ಕೂ ಕೂಡ ಸಂಪರ್ಕ ಬೆಳೆಸುವ ರಾಜ್ಯ ಹೆದ್ದಾರಿ 752ಕೆ ಈ ಗ್ರಾಮದಿಂದಲೇ ಹಾದು ಹೋಗುತ್ತದೆ. ಈ ಗ್ರಾಮದಲ್ಲಿ ಬಸ್ ನಿಲ್ದಾಣ ಇಲ್ಲದ ಕಾರಣ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಇದ್ದು, ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಪ್ರತಿ ದಿನ ಗ್ರಾಮದಿಂದ ವಿವಿಧ ಊರುಗಳಿಗೆ ತೆರಳುವ ಪ್ರಯಾಣಿಕರು ಈ ಬೇಸಿಗೆಯ ಉರಿ ಬಿಸಿಲಿನಲ್ಲಿ ಬಸ್ಸಿಗಾಗಿ ರಸ್ತೆ ಬದಿಯಲ್ಲಿ ನಿಲ್ಲುವ ದುಸ್ಥಿತಿ ಎದುರಿಸುತ್ತಿದ್ದಾರೆ. ಬೇಸಿಗೆಯಲ್ಲಿ ಸುಮಾರು ಗರಿಷ್ಠ ತಾಪಮಾನ 42 ಡಿಗ್ರಿ ತಲುಪಿದ್ದು, ಈ ಗ್ರಾಮದಲ್ಲಿ ಸಾರ್ವಜನಿಕರು ಉರಿ ಬಿಸಿಲಲ್ಲೇ ನಿಲ್ಲುವ ಅನಿವಾರ್ಯತೆ ಇದೆ. ಮಳೆಗಾಲದಲ್ಲಿಯೂ ಕೂಡ ಆಸರೆ ಇಲ್ಲದೆ ಅಕ್ಕಪಕ್ಕದ ಅಂಗಡಿಗಳೇ ಪ್ರಯಾಣಿಕರಿಗೆ ಆಸರೆಯಾಗಿವೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದ ಮೇಲಿಂದ ರಾಜ್ಯ ಹೆದ್ದಾರಿ ಹಾದು ಹೋದರೂ ಕೂಡ ಬಸ್ ನಿಲ್ದಾಣ ನಿರ್ಮಿಸಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದಲ್ಲಿ ಬಸ್ ಸಂಚಾರ ಸೌಲಭ್ಯ ಇದ್ದರೂ ಬಸ್ ತಂಗುದಾಣದ ಕೊರತೆಯಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಸಿಗುತ್ತಿಲ್ಲ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಭಾತಂಬ್ರಾ ಗ್ರಾಮಕ್ಕೆ ಬಸ್ ತಂಗುದಾಣ ನಿರ್ಮಿಸಿ ಸಾರ್ವಜನಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಭಾತಂಬ್ರಾ ಗ್ರಾಮದಿಂದ ನಾಲ್ಕು ದಿಕ್ಕುಗಳಿಗೆ ಬಸ್ ಸಂಚಾರ ಇರುವುದರಿಂದ ಎಲ್ಲ ಕಡೆಗಳಿಗೆ ತೆರಳುವ ಪ್ರಯಾಣಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದೆ. ನಮ್ಮ ಊರಿಗೆ ಬಸ್ ತಂಗುದಾಣ ನಿರ್ಮಿಸಿದರೆ ಪ್ರಯಾಣಿಕರಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ.
- ಶಿವಕುಮಾರ್ ಮುಳ್ಳೆ, ಗ್ರಾಮಸ್ಥ
ಭಾತಂಬ್ರಾ ಗ್ರಾಮಕ್ಕೆ ಬಸ್ ತಂಗುದಾಣ ಮಂಜೂರಾಗಿದೆ. ಪಿಡಿಒ ಅವರು ಶಾಲೆಯ ಹತ್ತಿರ ನಮಗೆ ಜಾಗ ತೋರಿಸಿದ್ದರು. ಅಲ್ಲಿ ವ್ಯಾಪಾರಸ್ಥರ ಬಂಡಿಗಳಿದ್ದವು. ಅವುಗಳನ್ನು ತೆರವುಗೊಳಿಸಲು ತಿಳಿಸಲಾಗಿತ್ತು. ಆದರೆ, ಸ್ಥಳೀಯರೊಬ್ಬರು ಆ ಜಾಗ ತಮ್ಮದೆಂದು ದೂರು ನೀಡಿದ್ದಾರೆ. ಆ ಸಮಸ್ಯೆ ಬಗೆಹರಿದ ತಕ್ಷಣವೇ ಬಸ್ ತಂಗುದಾಣದ ಕೆಲಸ ಪ್ರಾರಂಭ ಮಾಡುತ್ತೇವೆ.
-ಅಲ್ತಾಫ್ ಮಿಯಾ, ಪಿಡಬ್ಲ್ಯೂಡಿ ಎಇಇ, ಭಾಲ್ಕಿ






