Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭೀಮರತಿಯ ರುದ್ರನರ್ತನ

ಭೀಮರತಿಯ ರುದ್ರನರ್ತನ

ಡಾ. ಮೀನಾಕ್ಷಿ ಬಾಳಿಡಾ. ಮೀನಾಕ್ಷಿ ಬಾಳಿ14 Oct 2025 9:38 AM IST
share
ಭೀಮರತಿಯ ರುದ್ರನರ್ತನ

ಸತತ ಮಳೆಯಿಂದಾಗಿ ಭೂಮಿಯೆಲ್ಲ ಕೆಸರು, ಹುದಲಿನ ಕೊಚ್ಚೆಯಾಗಿದೆ. ಬಿತ್ತಿದ ಹೆಸರು, ಉದ್ದು, ತೊಗರೆ, ಎಳ್ಳು, ನವಣೆ, ಸೆಜ್ಜೆ, ನವಬೆಳೆಗಳಾದ ಸೋಯಾ ಮುಂತಾದವುಗಳು ಹೇಳ ಹೆಸರಿಲ್ಲದಂತೆ ಭೂಮಿಯಲ್ಲಿ ಹೂತು ಹೋಗಿವೆ. ಅಲ್ಪ ಸ್ವಲ್ಪ ಮೊಳಕೆಯೊಡೆದಿದ್ದ ಪೈರುಗಳು ಕೊಳೆತು ಹೋಗಿವೆ. ತಕ್ಕಮಟ್ಟಿಗೆ ಬೆಳೆದಿದ್ದ ಬೆಳೆಯೂ ರೋಗಗ್ರಸ್ಥವಾಗಿ ಕೆಂಪಡೆದಿದೆ. ಹೊಲದಲ್ಲಿ ಎಲ್ಲಿ ನೋಡಿದಲ್ಲಿ ನೀರೇ ನೀರು. ನುಗ್ಗಲಾಗದ ಜಮೀನಿನಲ್ಲಿಯೂ ನೀರು ನುಗ್ಗಿದ್ದು ರೈತರು ಅಕ್ಷರಶಃ ದಿವಾಳಿಯಾಗಿದ್ದಾರೆ.

‘‘ಬ್ಯಾಸಗಿ ದಿವಸಕ ಬೇವಿನ ಮರ ತಂಪ

ಭೀಮರತಿ ಎಂಬ ಹೊಳಿ ತಂಪ | ಹಡದವ್ವ

ನೀ ತಂಪ ನನ್ನ ತವರಿಗಿ ॥’’

ನಮ್ಮ ಉತ್ತರ ಕರ್ನಾಟಕದ ಅದರಲ್ಲಿಯೂ ಕಲ್ಯಾಣ ಕರ್ನಾಟಕದ ಮಂದಿಗೆ ಭೀಮಾನದಿ ಎಂದರೆ ಪಂಚಪ್ರಾಣ. ಭೀಮೆ ಇಲ್ಲಿನ ಜೀವನದಿ. ಕಲಬುರಗಿ, ವಿಜಯಪುರ, ಯಾದಗಿರಿ, ತುಸು ರಾಯಚೂರು ಜಿಲ್ಲೆಗಳಲ್ಲಿ ಈಕೆ ವಿಶಾಲ ಹರಹಿನಲ್ಲಿ ಮೈದುಂಬಿ ಹರಿಯುತ್ತಾಳೆ. ಹುಟ್ಟುವುದು ಮಹಾರಾಷ್ಟ್ರದ ಪುಣೆಯ ಬಳಿಯ ಮಹಾಬಲೇಶ್ವರ ಭೀಮಾಶಂಕರ ಜ್ಯೋತಿರ್ಲಿಂಗದ ಸನ್ನಿಧಿಯಾದರೂ ಆಕೆ ತನ್ನ ಯೌವನ ಕಳೆಯುವುದು ಕಲ್ಯಾಣ ಕರ್ನಾಟಕದಲ್ಲಿಯೇ. ಕೊನೆಗೆ ಕೃಷ್ಣವೇಣಿಯೊಂದಿಗೆ ಕೂಡಿಕೊಂಡು ಶ್ರೀಶೈಲದ ನಾಗಾರ್ಜುನ ಸಾಗರದಲ್ಲಿ ಲೀನವಾಗುತ್ತಾಳೆ. ಇಂಥ ನದಿಪಾತ್ರದಲ್ಲಿ ಕಂಡು ಬಂದ ಕೆಲವು ದೃಶ್ಯಗಳು ಹೀಗಿದ್ದವು.

ಆ ಹರೆಯದ ಹೆಣ್ಣುಮಕ್ಕಳು, ಅವರೊಂದಿಗೆ ಕಿಶೋರಿಯರು, ಬದಿಗೆ ಹಸುಗೂಸುಗಳು ದರ್ಗಾದ ಫೌಳಿಯಲ್ಲಿ ನಿರಾಧಾರವಾಗಿ ನಿಂತಿದ್ದ ನೂರಾರು ಮಹಿಳೆಯರ ಕಣ್ಣುಗಳಲ್ಲಿ ಭಯ ಮಿಶ್ರಿತ ನಿರಾಸೆ ಬಿಟ್ಟರೆ ಮತ್ತೇನೂ ಇರಲಿಲ್ಲ. ಕೊಡುವ ಒಂದು ಹೊದಿಕೆಗಾಗಿ, ಸೀರೆ, ಪುಟ್ಟ ಮಕ್ಕಳ ಬಟ್ಟೆಗಳಿಗಾಗಿ ಅವರು ಒಲ್ಲದ ಮನಸ್ಸಿನಿಂದಲೇ ಕೈ ಚಾಚುತ್ತಿದ್ದರು. ಕೆಲವರಂತೂ ಕೊಡುವ ವಸ್ತುಗಳಿಗೆ ಕೈ ಚಾಚಬಾರದಂತೆ ಬಿಮ್ಮನೆ ಬಿಗಿದು, ಆದರೆ ಸೋತವರಂತೆ ಪೇಲವವಾಗಿ ಉಸಿರು ಹಾಕುತ್ತಿದ್ದರು. ಅವರ ಸುತ್ತುವರಿದ ಗಂಡಾಳುಗಳು ಅವಡಗಚ್ಚಿ ‘‘ಮೇಡಂ ಅವರೇ ನಾವು ನೀರಾಗ ಮುಣಗಿದ ಮನಿ, ಮಾರ, ಜಾನವಾರು, ಬಾಳೆಯೆಲ್ಲಾ ಬಿಟ್ಟು ಉಟ್ಟ ಬಟ್ಟಿಮ್ಯಾಲ ಬಂದು ಕುಂತೀವಿ. ಮೂರು ದಿನಾ ಹೊತ್ತ ಆಯ್ತು. ನಮ್ಮ ಹೆಣ್ಮಕ್ಕಳಿಗಿ ಸೀರಿ ಸೈತೆ ಇರಲಾರದಕ್ ಮೈಸತೆ ತಕೋಳ್ಲಾರದೆ ಕುಂತಾರ್ರೀ. ಏನ್ಮಾಡಾದು ಮಳಿ ನಮಗ್ ವೈರಿ ಆಗ್ಯಾದರಿ’’ ಎಂದು ಖಾರವಾಗಿ ನುಡಿದರೆ ಹರೆಯದ ಹುಡುಗಿಯರು ‘‘ಮೇಡಂ ಭಾಳ ಮಂದಿ ಬರತಾರೀ. ಏನೇನೋ ಕೇಳತಾರಿ. ಫೋಟೊ ತೆಕ್ಕೋತಾರಿ. ಹಂಗೇ ಹೋಗತಾರಿ. ಆದ್ರ ಪೈಲಾ ಬಾರ್ ನೀವು ನಮ್ಮನಸಿನ ಮಾತ ತಿಳದು ಈ ಪ್ಯಾಡ್ ಕೊಟ್ಟೀರಿ ನೋಡ್ರಿ’’ ಅಂತ ಹನಿಗಣ್ಣಾದರು. ಬಟ್ಟೆ ಬರೆಯೊಂದಿಗೆ ನಾವು ಸ್ಯಾನಿಟರೀ ನ್ಯಾಪಕಿನ್ ಒಂದಷ್ಟು ಒದಗಿಸಿದ್ದೆವು. ಬಣ್ಣ ಬಣ್ಣದ ರ್ಯಾಪರ್‌ಗಳಲ್ಲಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ನೋಡಿದ ಮುದುಕನೊಬ್ಬ ಅದೇನೋ ತಿನ್ನುವ ವಸ್ತು ತನಗೂ ಬೇಕೆಂದು ಅಡ್ರಾಸಿ ಕೈಯೊಡ್ಡತೊಡಗಿದನು. ಹಿರಿಯ ಹೆಣ್ಮಕ್ಕಳು ಆತನಿಗೆ ಗದರಿಸಿ ಹಿಂದಕ್ಕೆ ಸರಿಸಿದರು. ನಾವು ಒಯ್ದ ಪದಾರ್ಥಗಳು ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದ್ದವು. ಅವರ ಕಣ್ಣುಗಳಲ್ಲಿಯ ಅಸಹಾಯಕ ಸಿಟ್ಟಂತೂ ಎದುರಿಸಲು ಆಗುತ್ತಲೇ ಇರಲಿಲ್ಲ. ಈ ದೃಶ್ಯಗಳು ಜೇವರ್ಗಿ ತಾಲೂಕಿನ ಕೂಡಿ ದರ್ಗಾದ ನೆರೆ ಸಂತ್ರಸ್ತರದವಾಗಿದ್ದವು. ಮಳೆಗೆ ತತ್ತರಿಸಿದ ಜನರ ನೋವು, ನಿರಾಸೆ, ಅವರ ಅಸಹಾಯಕ ಸೆಡವುಗಳಿಗೆ ಉತ್ತರ ಎಲ್ಲಿ? ಕಲ್ಯಾಣ ಕರ್ನಾಟಕದ ಭೀಮೆ, ಕೃಷ್ಣೆ ಮತ್ತು ಉಪನದಿಗಳ ಉಪಟಳ ಈ ಬಾರಿ ಹೇಳಲಸದಳ.

ಭೀಮೆಗೆ ಸೇರಿಕೊಳ್ಳುವ ಉಪನದಿಗಳಿಗಂತೂ ಲೆಕ್ಕವೇ ಇಲ್ಲ. ಅಮರ್ಜಾ, ಡೋಣಿ, ಬೆಣ್ಣೆತೊರೆ, ಕಾಗಿಣಾ, ಇತ್ಯಾದಿ ಕಿರಿಯ ಸಹೋದರಿಯರು ಅಲ್ಲಲ್ಲಿ ಆಕೆಯೊಂದಿಗೆ ಸೇರಿಕೊಂಡು ಫುಗಡಿ ಆಡುತ್ತಲೇ ಇರುತ್ತಾರೆ. ಇವರೆಲ್ಲರೂ ಬೇಸಿಗೆಯಲ್ಲಿ ಸೊರಗಿ ಕೈಚೆಲ್ಲಿ ದೂರ ಸರಿದರೂ ಭೀಮೆ ಮಾತ್ರ ಬೇಸಿಗೆಯಲ್ಲಿ ಕಿರುತೊರೆಯಾಗಿ ಲಾಸ್ಯವಾಡುತ್ತ ಕೊನೆಗೆ ಜನಜಾನುವಾರುಗಳ ಜೀವದಾಯಿನಿಯಾಗಿ ಮಡಿಲ ಮಕ್ಕಳ ಪೊರೆಯುತ್ತಲೇ ಇರುತ್ತಾಳೆ. ಹೇಳಿ, ಕೇಳಿ ನಮ್ಮದು ಬಿಸಿಲ ನಾಡು. ಬಿಸಿಲ ಬಾನವನ್ನುಂಡು ಪೊಗದಸ್ತಾಗಿ ಬೆಳೆದವರ ನಾಡು. ಮಳೆ ಎಂಬುದೇ ನಮಗೆ ದುಷ್ಮನ್. ಅತಿ ಕಡಿಮೆ ಮಳೆ ಬೀಳುವ ನಾಡೆಂದೇ ಹೆಸರು ಮಾಡಿದವರು ನಾವು. ಹೀಗಾಗಿ ಬೇಸಿಗೆ ಬಂತೆಂದರೆ ನಮ್ಮ ಬದುಕು ಕೆಂಡದ ಮೇಲಿನ ಹಪ್ಪಳಿನಂತೆ ಹುರುಪುಳಿಸುತ್ತಲೇ ಇರುತ್ತದೆ. ಕೆಂಡದ ಬಿಸಿಯ ಕಡೆ ತದೇಕ ಚಿತ್ತ ನೀಡದಿದ್ದರೆ ನಮ್ಮ ಬದುಕು ಸುಟ್ಟು ಕರಕಲಾಗಿ ದಿಕ್ಕಾಪಾಲಾಗುವುದರಲ್ಲಿ ದುಸರಾ ಮಾತೇ ಇಲ್ಲ. ಆದ್ದರಿಂದಲೇ ಬೇಸಿಗೆಯಲ್ಲಿ ನಮ್ಮ ನಾಡನ್ನು ಬದುಕಿಸುವ ಆಪ್ತ ಬಂಧುಗಳೆಂದರೆ ಒಂದು ಸೊಂಪಾಗಿ, ಬಲಿಷ್ಠವಾಗಿ ಬೆಳೆದಿರುವ ಬೇವಿನ ಮರಗಳು. ಇನ್ನೊಂದು ಕಿರು ತೊರೆಯಾಗಿಯಾದರೂ ಜುಳು ಜುಳ ಜುಳಕ್ಯಾಡಿ ಹರಿಯುವ ಭೀಮೆ. ಭೀಮರತಿಯ ತಂಪು ನೆಲದ ಮರೆಯ ನಿಧಾನದಂತೆ ಈ ಭಾಗದ ಹಳ್ಳಿಗಳನ್ನು ಬಿಸಿಲಿನ ತಾಪದಿಂದ ಸಂರಕ್ಷಿಸುತ್ತದೆ. ಹಗಲು ಎಷ್ಟೇ ಬಿಸಿಲಿದ್ದರೂ ರಾತ್ರಿಯಾದೊಡನೆ ಭೀಮಾನದಿ ಮ್ಯಾಲಿಂದ ಹಾದು ಬರುವ ಗಾಳಿ ದಣಿದ ಜೀವಜಾಲಕ್ಕೆ ತಂಪಿನ ಸೆರಗು ಬೀಸುತ್ತದೆ. ಮಸಾರಿ ಮಣ್ಣಿನ ಈ ನೆಲಕ್ಕೆ ಒಂದೆರಡು ಮಳೆಯಾದರೆ ಸಾಕು ಉದ್ದು, ಹೆಸರು, ಎಳ್ಳು, ತೊಗರಿ, ಹತ್ತಿ ಇತ್ಯಾದಿ ಖರೀಫ್(ಮುಂಗಾರು) ಬೆಳೆ ಭರ್ತಿ ಮನೆ ತುಂಬುತ್ತವೆ. ಇನ್ನು ರಬ್ಬಿಯಾಗಿ (ಹಿಂಗಾರು) ಜೋಳ, ಕಡಲೆ, ಗೋಧಿ, ಕುಸಬಿ, ಧಾನ್ಯಗಳು ಹಗೆವು (ಬಖಾರ, ದವಸ ಧಾನ್ಯಗಳನ್ನು ತುಂಬಿಸಿಡುವ ನೆಲಕೋಣೆಗಳು) ತುಂಬಿ ಜನರ ಮುಖಗಳು ಲಕಲಕ ಹೊಳೆಯುತ್ತವೆ. ಬೇಸಿಗೆ ಸುಡು ಬಿಸಿಲಿನಲ್ಲಿಯೂ ನಮ್ಮವರು ಧೋತ್ರ, ನೆಹರೂ ಷರ್ಟ್ ಅಂಗಿ ಮೇಲೊಂದು ಉಂಡಿ ರುಮಾರು ಇಲ್ಲವೇ ಟೊಪ್ಪಿಗೆ ಹಾಕಿ ಚರ್ಮದ ಚಪ್ಪಲಿ ತೊಟ್ಟು ಸರಭರ ಹೊಂಟರೆ ಅವರ ಠಬರೆ ಠಬರ್. ಮಲೆನಾಡಿನಲ್ಲಿಯಂತೆ ಮುಸಲಧಾರಾ ಮಳೆ ನಾವು ಕಂಡವರೇ ಅಲ್ಲ. ಅಂಥ ಮಳೆ ನಮಗೆ ಅವಶ್ಯಕತೆಯೂ ಇಲ್ಲ. ಒಂದು ಮಿತಿಯಲ್ಲಿ ಮೇಘ ಮಾರಾಯ ಸುರಿದರೆ ಸಾಕು. ಅಷ್ಟಕ್ಕೆ ನಮ್ಮ ಬೆಳೆಗಳು ವೈಯಾರದಿಂದ ಪುಟಿದೇಳುತ್ತವೆ. ಅನೇಕ ವರ್ಷಗಳುದ್ದಕ್ಕೂ ಕನಿಷ್ಠ ಮಳೆಯೂ ಆಗುವುದಿಲ್ಲ ಎಂಬುದೇ ನಮ್ಮ ಗೋಳು.

ಇದಕ್ಕೆ ಅಪವಾದ ಎಂಬಂತೆ ಈ ಸಲ ನಮ್ಮ ಮೇಲೆ ಮಳೆರಾಯನ ಆರ್ಭಟ ಶತಮಾನದ ಸೇಡು ತೀರಿಸಿಕೊಳ್ಳುವಂತೆ ರುದ್ರ ನರ್ತನಗೈಯುತ್ತಿದೆ. ತಿಂಗಳೊಪ್ಪತ್ತಿನಿಂದ ಹಿಡಿದ ಮಳೆ ಬಿಟ್ಟೇ ಇಲ್ಲ. ದಿನಬಿಟ್ಟು ದಿನ ಕೆಲವೊಮ್ಮೆ ಪ್ರತಿದಿನ, ಸಂಜೆ ಇಲ್ಲವೇ ಮುಂಜಾನೆ, ನಸುಕಿನ ಜಾವ, ಸರುಹೊತ್ತು, ನಟ್ಟಿರುಳು ಹೀಗೆ ಮುಗಿಲಿಗೆ ತೂತು ಬಿದ್ದಂತೆ ಹೊಡೆಯುತ್ತಲೇ ಇದೆ. ಅದೆಂಥ ರಣಚಂಡಿ ಮಳೆ ಎಂದರೆ ನಮ್ಮ ತಲೆಮಾರಿನವರು ಕಂಡು ಕೇಳರಿಯದ ಮಳೆ. ಸಣ್ಣ ಪುಟ್ಟ ಹೊಳೆ ಹಳ್ಳಗಳೆಲ್ಲ ಭರ್ತಿಯಾಗಿವೆ. ಎಂದೆಂದೂ ನೀರು ಕಾಣದ ಬೋರಿಂಗ್‌ಗಳು ಹ್ಯಾಂಡ್‌ಪಂಪ್ ಹೊಡೆಯದೆ ತನ್ನಷ್ಟಕ್ಕೆ ಭೋರ್ಗರೆಯುತ್ತಿವೆ. ನಮ್ಮ ಮೇಲೆ ಛತ್ರಿಯಂತೆ ನಿಂತಿರುವ ಮಹಾರಾಷ್ಟ್ರದಲ್ಲಿಯೂ ಇಂಥದ್ದೇ ಮುಸಲಧಾರಾ ಮಳೆಯಾದ್ದರಿಂದ ಅಲ್ಲಿನ ನದಿ, ಡ್ಯಾಂಗಳು ಮೇರೆ ಮೀರಿ ತುಂಬಿವೆ, ನೀರಿನ ಮಟ್ಟ ಅಪಾಯಕಾರಿ ಹಂತವನ್ನು ಮೀರಿ ಏರಿಕೆಯಾಗುತ್ತದೆ. ಮಹಾರಾಷ್ಟ್ರದ ಉಜನಿ ಡ್ಯಾಂನಿಂದ ಲಕ್ಷಾಂತರ ಕ್ಯೂಸೆಕ್ ನೀರು ತೂಬು ತೆರೆದು ನುಗ್ಗುತ್ತಿದೆ. ಪರಿಣಾಮವಾಗಿ ಭೀಮೆಯ ನದಿ ಪಾತ್ರದ ನೂರಾರು ಹಳ್ಳಿಗಳು ಅಕ್ಷರಶಃ ಜಲಾವೃತವಾಗಿದ್ದು ಜನರು ರಾತ್ರೋರಾತ್ರಿ ಮನೆ ಮಾರು ಬಿಟ್ಟು ಗುಡ್ಡ ಏರಿ ಕಡೆ ಗುಳೆ ಬರುತ್ತಿದ್ದಾರೆ. ಇದೀಗ ನಮ್ಮಲ್ಲಿ ಹಸಿಬರದ ಹದ್ದು ನಮ್ಮವರ ಬದುಕನ್ನು ಹರಿದು ತಿನ್ನುತ್ತಿದೆ. ಮೊದಲನೆಯದಾಗಿ ವಾಡಿಕೆಗಿಂತ ಹತ್ತಾರು ಪಟ್ಟು ಜಾಸ್ತಿ ಮಳೆಯನ್ನು ನಮ್ಮ ಭೂಮಿ ತಡೆದುಕೊಳ್ಳುವುದಿಲ್ಲ. ಎರೆಬಿಡಿ ಕಪ್ಪುಮಣ್ಣು ಸೊಕ್ಕಿದ ಸೂರ್ಯನನ್ನು ಭರಿಸಿಕೊಳ್ಳುತ್ತದೆ ಹೊರತು ನೆಲ ಮುಗಿಲಿಗೆ ಕಂಭ ನೆಟ್ಟಂತ ವರ್ಷಾಧಾರೆಯನ್ನಲ್ಲ. ಮಳೆ ಏನಿದ್ದರೂ ನಮಗೆ ಅಲಭ್ಯ ಲಭ್ಯ ಪ್ರೇಯಸಿಯಂತೆ ಹೂಮುತ್ತು ನೀಡಬೇಕಲ್ಲದೆ ಹಟವುಳ್ಳ ಹೊಂಬ ಗಂಡನಂತೆ ರಗಡಾಸಿ ತೆಕ್ಕೆಗೆ ಬಿದ್ದರೆ ನಮ್ಮ ಕಸುವುಳ್ಳ ಭೂರಮೆ ಆ ತೆಕ್ಕೆಗೆ ಕವುಚಿ ಬೀಳುತ್ತಾಳೆ. ಸತತ ಮಳೆಯಿಂದಾಗಿ ಭೂಮಿಯೆಲ್ಲ ಕೆಸರು, ಹುದಲಿನ ಕೊಚ್ಚೆಯಾಗಿದೆ. ಬಿತ್ತಿದ ಹೆಸರು, ಉದ್ದು, ತೊಗರೆ, ಎಳ್ಳು, ನವಣೆ, ಸೆಜ್ಜೆ, ನವಬೆಳೆಗಳಾದ ಸೋಯಾ ಮುಂತಾದವುಗಳು ಹೇಳ ಹೆಸರಿಲ್ಲದಂತೆ ಭೂಮಿಯಲ್ಲಿ ಹೂತು ಹೋಗಿವೆ. ಅಲ್ಪ ಸ್ವಲ್ಪ ಮೊಳಕೆಯೊಡೆದಿದ್ದ ಪೈರುಗಳು ಕೊಳೆತು ಹೋಗಿವೆ. ತಕ್ಕಮಟ್ಟಿಗೆ ಬೆಳೆದಿದ್ದ ಬೆಳೆಯೂ ರೋಗಗ್ರಸ್ಥವಾಗಿ ಕೆಂಪಡೆದಿದೆ. ಹೊಲದಲ್ಲಿ ಎಲ್ಲಿ ನೋಡಿದಲ್ಲಿ ನೀರೇ ನೀರು. ನುಗ್ಗಲಾಗದ ಜಮೀನಿನಲ್ಲಿಯೂ ನೀರು ನುಗ್ಗಿದ್ದು ರೈತರು ಅಕ್ಷರಶಃ ದಿವಾಳಿಯಾಗಿದ್ದಾರೆ. ಹಿಂಗಾರಿನ ಜೋಳ, ಕಡಲೆ ಬಿತ್ತುವ ಪ್ರಶ್ನೆಯೇ ಇಲ್ಲ. ಕಾರಣ ಜಮೀನೆಂಬ ಜಮೀನು ಸಾಗರವಾಗಿ ನಿಂತಿದೆ. ನೀರಲ್ಲಿ ಬಿತ್ತಲಾದೀತೆ? ಹಾಕಿದ ಲಾಗವಾಡಿಗೂ (ಖರ್ಚು) ಸಂಚಕಾರ ಬಂದಿದ್ದು ಇಡೀ ವರ್ಷದ ಬದುಕು ಶೂನ್ಯ. ಹೇಳಲು ಅವರಲ್ಲಿ ಮಾತುಗಳಿಲ್ಲ.

ಕೂಲಿ ಕಾರ್ಮಿಕರ ಬದುಕು ಇದಕ್ಕಿಂತ ಭಿನ್ನವಾಗೇನೂ ಇಲ್ಲ. ರೈತರ ಹೊಲಗದ್ದೆಗಳಲ್ಲಿ ಒಂದಾಣೆಯ ಕೆಲಸವೂ ದಕ್ಕಿಲ್ಲ. ಒಕ್ಕಲುತನ ಸಂಬಂಧಿ ಯಾವ ಕೆಲಸಗಳು ನಡೆಯುವಂತೆಯೇ ಇಲ್ಲ. ಸಿಟಿಗಳಲ್ಲಿ ಬರಬೇಕಂದರೆ ಅಲ್ಲಿಯೂ ಕೆಲಸವಿಲ್ಲ. ಎಲ್ಲ ಶ್ರಮ ಕೆಲಸಗಳನ್ನು ಮಿಷಿನ್‌ಗಳು ಕಬಳಿಸಿ ಬಿಟ್ಟಿವೆ. ಗಾರೆ ತೋಡುವ, ಕಾಂಕ್ರಿಟ್ ಹಾಕುವ, ಭಾರ ಎತ್ತುವ, ಕಸ ಗುಡಿಸುವ ಇತ್ಯಾದಿ ಬಹುತೇಕ ಶ್ರಮಿಕರ ಕೆಲಸಗಳು ದುಡಿಸಿಕೊಳ್ಳುವವರ ಕುತಂತ್ರದಿಂದಾಗಿ ಯಾಂತ್ರಿಕೃತವಾಗಿ ಬಿಟ್ಟಿವೆ. ಮಳೆ ಬರದಿದ್ದರೂ ದುಡಿಯುವವರಿಗೆ ಕಷ್ಟ ತಪ್ಪಿದ್ದಲ್ಲ. ಮಳೆ ಬಂದರೂ ಹೈರಾಣ ತಪ್ಪಿದ್ದಲ್ಲ.

ಮಳೆ ಬಾರದಿದ್ದಾಗ ಬೇಸಿಗೆಯಲ್ಲಿ ಕುಡಿಯಲು ಹನಿ ನೀರು ಬಿಡಲು ಸಿದ್ಧರಾಗದ ಮರಾಠಿಗರು ಭಯಂಕರ ಮಳೆಯಲ್ಲಿ ರಾತ್ರೋರಾತ್ರಿ ಊಹಿಸಲಾಗದಷ್ಟು ನೀರು ಹರಿಬಿಟ್ಟು ನೂರಾರು ಹಳ್ಳಿಗಳು ಜಲಹೋಮದಲ್ಲಿ ಸ್ವಾಹವಾಗುತ್ತಿದ್ದರೆ ನಮ್ಮ ನಾಯಕರು ಮಾತ್ರ ನೆರೆ ಬಂದ ಕಡೆ ಭೇಟಿ ಕೊಟ್ಟು ಅಲ್ಲಿ ಕಳೆದ ಸಮಯಕ್ಕಿಂತ ಹೆಚ್ಚು ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಮೀಡಿಯಾಗಳಲ್ಲಿ ಹರಿ ಬಿಟ್ಟಿದ್ದೇ ಬಂತು. ಕಾಳಜಿ ಕೇಂದ್ರಗಳೇನೋ ತೆರೆದಿದ್ದಾರೆ. ಅಲ್ಲಿ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಾರು ಮಾತ್ರ ನೀಡುತ್ತಾರೆ. ಅವುಗಳ ಗುಣಮಟ್ಟ ಕೇಳಬಾರದು. ಇದಿಷ್ಟು ಬಿಟ್ಟರೆ ಉಳಿದಂತೆ ಜನರ ದಿನನಿತ್ಯದ ಬದುಕಿಗೆ ಬೇಕಾದ ಬಟ್ಟೆ, ಬರೆ, ಖರ್ಚಿಗೆ ಪುಡಿಗಾಸು ಏನೆಂದರೆ ಏನೂ ಇಲ್ಲ. ರೈತರ ಗೋಳಂತೂ ಕೇಳುವಂತೆಯೇ ಇಲ್ಲ. ಮಾಡಿದ ಖರ್ಚು ಒತ್ತಟ್ಟಿಗಿರಲಿ. ನೀರು ಇಳಿದ ನಂತರ ಮುಂದೇನು?

ಹೊಳೆ ಇಳಿದ ಬಳಿಕ ಕಾಣಿಸಿಕೊಳ್ಳುವ ರೋಗ-ರುಜಿನಗಳ ನಿವಾರಣೆಗೆ ತಯಾರಿ ಇದೆಯೇ? ಸರಕಾರ ರೈತರ ಹಾನಿ ತುಂಬಿಸಿಕೊಡುವರೆ? ಉದ್ಯೋಗ ಖಾತ್ರಿ ಕೆಲಸವಾದರೂ ಇನ್ನೂರು ದಿನಕ್ಕೆ ಹೆಚ್ಚಿಸಿಯಾರೆ? ಮಕ್ಕಳ ಶಾಲೆ, ಕಾಲೇಜು ಹೀಗೆ ಯಾವ ತಯಾರಿ ಕಾಣುತ್ತಿಲ್ಲ. ನಾಯಕರು ವೈಮಾನಿಕ ನೆರೆಪ್ರದೇಶಗಳಿಗೆ ಭೇಟಿ ನೀಡಿದಷ್ಟೇ ಕಾಳಜಿಯಿಂದ ಹಸಿಬರ ಘೋಷಿಸಿ ವಿಶೇಷ ಪ್ಯಾಕೇಜ್ ಘೋಷಿಸುವಂತಾಗಲಿ. ಫಲಪ್ರದವಾದ ನಿರ್ದಿಷ್ಟ ತುರ್ತು ಪರಿಹಾರಕ್ಕಾಗಿ ಜನ ನಿರೀಕ್ಷೆಯಲ್ಲಿದ್ದಾರೆ. ಮಳೆ ನೀರಿನಲ್ಲಿ ಬೀಳುತ್ತಿರುವ ಕಣ್ಣಹನಿಗಳು ಜಲಹೋಮವಾಗದಿರಲಿ.

share
ಡಾ. ಮೀನಾಕ್ಷಿ ಬಾಳಿ
ಡಾ. ಮೀನಾಕ್ಷಿ ಬಾಳಿ
Next Story
X