ಚನ್ನಗಿರಿಯ ‘ಯಾಂತ್ರಿಕ ಕ್ರಾಂತಿ’ ಭೀಮನೆರೆ ಗ್ರಾಮ!

ದಾವಣಗೆರೆ: ಮುಂಜಾವಿನ ಮಂಜಿನಲ್ಲಿ ಜೋಡೆತ್ತುಗಳ ಗಂಟೆಯ ಸದ್ದು, ರೈತನ ಸೀಟಿ ಹಾಡಿನೊಂದಿಗೆ ಕೃಷಿ ಚಟುವಟಿಕೆಗಳು ಆರಂಭವಾಗುತ್ತಿದ್ದ ಕಾಲವಿತ್ತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಜಾಗವನ್ನು ಯಂತ್ರಗಳು ಆಕ್ರಮಿಸಿಕೊಂಡಿವೆ. ಇದಕ್ಕೆ ಜ್ವಲಂತ ಉದಾಹರಣೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಭೀಮನೆರೆ ಗ್ರಾಮ. ಕೇವಲ 180 ಮನೆಗಳಿರುವ ಈ ಪುಟ್ಟ ಹಳ್ಳಿಯಲ್ಲಿ ಇಂದು 140ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಘರ್ಜಿಸುತ್ತಿವೆ! ಹೀಗಾಗಿಯೇ ಸುತ್ತಮುತ್ತಲಿನ ಜನ ಈ ಊರನ್ನು ಪ್ರೀತಿ ಯಿಂದ ‘ಟ್ರ್ಯಾಕ್ಟರ್ ಗ್ರಾಮ’ ಎಂದೇ ಕರೆಯುತ್ತಾರೆ.
ಇಲ್ಲಿನ ಜನರಿಗೆ ಟ್ರ್ಯಾಕ್ಟರ್ ಕೇವಲ ಕಬ್ಬಿಣದ ಯಂತ್ರವಲ್ಲ; ಅದು ಅವರ ಮನೆಯ ಮತ್ತೊಬ್ಬ ಸದಸ್ಯ, ಬದುಕಿನ ಆಧಾರಸ್ತಂಭ. ತಮಗೆ ಅನ್ನ ನೀಡುವ ಈ ಯಂತ್ರಗಳನ್ನು ರೈತರು ನಿತ್ಯವೂ ತೊಳೆದು, ಸಿಂಗರಿಸಿ ಜೀವದಂತೆ ಕಾಯ್ದುಕೊಳ್ಳುತ್ತಾರೆ.
ಗಡಿ ದಾಟಿದ ಕೃಷಿ ಸೇವೆ :
ಭೀಮನೆರೆ ಗ್ರಾಮಸ್ಥರ ಪ್ರಮುಖ ಆರ್ಥಿಕ ಮೂಲವೇ ಟ್ರ್ಯಾಕ್ಟರ್ ಉದ್ಯಮ. ಕೇವಲ ತಮ್ಮ ಸ್ವಂತ ಜಮೀನಿಗೆ ಸೀಮಿತವಾಗದ ಇಲ್ಲಿನ ಯುವಕರು, ಸುತ್ತಮುತ್ತಲಿನ ಹಳ್ಳಿಗಳ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸುತ್ತಿದ್ದಾರೆ. ಮುಂಗಾರು ಮಳೆ ಆರಂಭವಾಯಿತೆಂದರೆ ಇಲ್ಲಿನ ಚಾಲಕರಿಗೆ ಹಗಲು-ರಾತ್ರಿ ಬಿಡುವಿರುವುದಿಲ್ಲ.
ದಾವಣಗೆರೆ ಮಾತ್ರವಲ್ಲದೆ, ನೆರೆಯ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಹಲವು ಭಾಗಗಳಿಂದ ರೈತರು ಮುಂಗಡವಾಗಿ ಹಣ ಪಾವತಿಸಿ ಇಲ್ಲಿನ ಟ್ರ್ಯಾಕ್ಟರ್‌ಗಳನ್ನು ಕಾಯ್ದಿರಿಸುತ್ತಾರೆ. ಚನ್ನಗಿರಿಯ ಬಾಡಾ, ಹಿರೇಕೊಗಲೂರು, ಚಿತ್ರದುರ್ಗದ ಹೊಸದುರ್ಗ, ಹೊಳಲ್ಕೆರೆ ಹಾಗೂ ಚಿಕ್ಕಮಗಳೂರಿನ ಅಜ್ಜಂಪುರ, ಕಡೂರು ಭಾಗದ ಹತ್ತಾರು ಹಳ್ಳಿಗಳ ಹೊಲಗಳಲ್ಲಿ ಭೀಮನೆರೆಯ ಟ್ರ್ಯಾಕ್ಟರ್‌ಗಳೇ ಉಳುಮೆ ಮಾಡುತ್ತವೆ.
ಇಂಧನ ದರ ಏರಿಕೆಯ ಬಿಸಿ :
‘ಕೃಷಿ ಇಲಾಖೆಗೆ ಯಾವುದೇ ಹೊಸ ಯಂತ್ರ ಮಾರುಕಟ್ಟೆಗೆ ತಂದರೂ ಅದನ್ನು ಮೊದಲು ಖರೀದಿಸಿ ಪ್ರಯೋಗ ಮಾಡುವುದು ನಮ್ಮ ಹಳ್ಳಿಯ ವಾಡಿಕೆ. ಸದ್ಯ ಗ್ರಾಮದಲ್ಲಿ 60ಕ್ಕೂ ಹೆಚ್ಚು ಸುಧಾರಿತ ಕೂರಿಗೆ ಯಂತ್ರಗಳಿದ್ದು, ಮೆಕ್ಕೆಜೋಳ, ರಾಗಿ, ಈರುಳ್ಳಿ ಬಿತ್ತನೆಗೆ ಬಳಸಲಾಗುತ್ತಿದೆ’ ಎನ್ನುತ್ತಾರೆ ಟ್ರ್ಯಾಕ್ಟರ್ ಮಾಲಕ ಬಿ.ಸಿ. ರುದ್ರೇಶ್.
ಆದರೆ, ಈ ಯಾಂತ್ರೀಕೃತ ಯಶಸ್ಸಿನ ನಡುವೆಯೂ ಸವಾಲುಗಳು ಕಡಿಮೆಯಿಲ್ಲ. ನಿರಂತರವಾಗಿ ಏರುತ್ತಿರುವ ಡೀಸೆಲ್ ದರ ನಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಒಂದು ಎಕರೆ ಉಳುಮೆಗೆ ಕನಿಷ್ಠ 5 ಲೀಟರ್ ಇಂಧನ ಬೇಕು. ಡೀಸೆಲ್ ಬೆಲೆ ಹೆಚ್ಚಿ ರುವುದರಿಂದ ಬಾಡಿಗೆ ದರ ಏರಿಸಬೇಕಾಗುತ್ತದೆ, ಆದರೆ ದರ ಏರಿಸಿದರೆ ರೈತರು ಬೇರೆ ಊರಿನ ಟ್ರ್ಯಾಕ್ಟರ್ ಹುಡುಕುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಚಾಲಕ ಭರತ್ ಕುಮಾರ್.
ಸಿರಿಧಾನ್ಯಕ್ಕೂ ಸೈ! :
ಭೀಮನೆರೆ ಕೇವಲ ಯಂತ್ರಗಳಿಗಷ್ಟೇ ಹೆಸರಾಗಿಲ್ಲ, ಆಧುನಿಕ ತಂತ್ರಜ್ಞಾನದ ಜೊತೆಜೊತೆಗೆ ಸಾಂಪ್ರದಾಯಿಕ ಕೃಷಿಯನ್ನೂ ಇಲ್ಲಿನ ರೈತರು ಜೀವಂತವಾಗಿಟ್ಟಿದ್ದಾರೆ. ಪೌಷ್ಟಿಕಾಂಶಯುಕ್ತ ಸಿರಿಧಾನ್ಯಗಳನ್ನು (ಮಿಲೆಟ್ಸ್) ಇಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಪರಿಸರ ಸ್ನೇಹಿ ಕೃಷಿಗೂ ಗ್ರಾಮ ಮಾದರಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ಕೈಕೊಡುತ್ತಿದ್ದರೂ ನಾವು ಧೃತಿಗೆಡಲಿಲ್ಲ. ಸಾಂಪ್ರದಾಯಿಕ ಬೇಸಾಯದ ಜೊತೆಗೆ ಪರ್ಯಾಯ ಮಾರ್ಗವಾಗಿ ಯಾಂತ್ರೀಕರಣ ನಂಬಿಕೊಂಡಿದ್ದೇವೆ. ಕಷ್ಟಪಟ್ಟು ದುಡಿದರೆ ಕೃಷಿಯಲ್ಲೂ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ನಮ್ಮ ಹಳ್ಳಿಯೇ ಸಾಕ್ಷಿ.
-ವಿಕ್ರಮ್ ಪಾಟೀಲ್, ಪ್ರಗತಿಪರ ರೈತ, ಭೀಮನೆರೆ.






