ದೊಡ್ಡ ಜಾತಿಗಳ ಅಬ್ಬರದ ನಡುವೆ ಮಾಯವಾದ ತಬ್ಬಲಿಗಳು

ಅಸ್ಪಶ್ಯರಲ್ಲಿನ ಎರಡು ದೊಡ್ಡ ಸಮುದಾಯಗಳು ಒಳಮೀಸಲಾತಿ ಯಲ್ಲಿ ತಮ್ಮ ಪಾಲನ್ನು ಅತ್ಯಂತ ಬಲಿಷ್ಠವಾಗಿ ಡಿಮಾಂಡ್ ಮಾಡುತ್ತಿವೆ. ಹಿಂದೆಂದೂ ಈ ಮಟ್ಟದ ಬಲವರ್ಧನೆ ನಡೆದಿರಲಿಲ್ಲ. ಇದರಲ್ಲಿ ಎರಡೂ ಸಮುದಾಯಗಳ ದೊಡ್ಡ ದೊಡ್ಡ ನಾಯಕರು, ಹಿರಿಯ ಹೋರಾಟಗಾರರು, ಸಾಹಿತಿ, ಬುದ್ಧಿಜೀವಿಗಳು, ಉನ್ನತ ಆಧಿಕಾರಿ ವರ್ಗದವರು, ಮಂತ್ರಿ ಮಹೋದಯರು, ಮಾಜಿ ಮಂತ್ರಿಗಳು, ಶಾಸಕರು, ಸಂಸದರು, ಮಾಜಿಶಾಸಕರು, ಮಾಜಿಸಂಸದರು, ಉದ್ಯಮಿಗಳು ಎಲ್ಲರೂ ಸೇರಿ ತಮ್ಮ ಪಾಲನ್ನು ಕಡ್ಡಿ ಮುರಿದಂತೆ ಕೇಳುತ್ತಿದ್ದಾರೆ. ಸರಕಾರದ ಮೇಲೆ ಅಪಾರ ಒತ್ತಡ ತರುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಈ ದೊಡ್ಡ ಸಮುದಾಯಗಳು ತಮ್ಮ ಪಾಲನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಅಂತೆಯೇ ತಮ್ಮ ಜಾತಿಯ ಸಂಘಟನೆಯೇ ಇಲ್ಲದವರು, ತಮ್ಮ ಜಾತಿಯಲ್ಲಿ ಒಬ್ಬ ಪಂಚಾಯತ್ ಮೆಂಬರ್ ಕೂಡ ಇಲ್ಲದವರು, ನಾಲ್ಕನೇ ದರ್ಜೆ ಜವಾನನೂ ಇಲ್ಲದವರು, ಶಾಲೆಯ ಮುಖವನ್ನೇ ನೋಡದವರು, ಬದುಕಲು ಒಂದು ಸೂರೂ ಇಲ್ಲದವರು. ಅಸ್ಪಶ್ಯರಿಗೆ ಅಸ್ಪಶ್ಯರಾದವರು, ದನಿಯೇ ಇಲ್ಲದವರು, ವಿಳಾಸವೇ ಇಲ್ಲದವರು, ವಿಧಾನಸೌಧಕ್ಕೆ ಇರಲಿ ಒಬ್ಬ ವಿಲೇಜ್ ಪಂಚಾಯತ್ ಕಚೇರಿಗೂ ಪ್ರವೇಶ ಮಾಡಲು ಹಿಂಜರಿಯುವವರು, ಹೊಟ್ಟೆ ಪಾಡಿಗಾಗಿ ಭಿಕ್ಷೆ ಬೇಡುವವರು ತಮ್ಮ ಪಾಲನ್ನು ಯಾರ ಬಳಿ ಕೇಳಬೇಕು? ಹೇಗೆ ಕೇಳಬೇಕು..?
ನ್ಯಾ.ನಾಗಮೋಹನ್‌ದಾಸ್ ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಇಂತಹ 59 ಜಾತಿಗಳನ್ನು ಸೇರಿಸಿ ಪ್ರವರ್ಗ-ಂ ಅನ್ನು ಸೃಷ್ಟಿಸಿ ಇಂಥವರಿಗೆ ಒಂದು ಪರ್ಸೆಂಟ್ ಮೀಸಲಾತಿ ಕೊಟ್ಟು ಔದಾರ್ಯ ತೋರಿದ್ದಾರೆ! ಆದರೆ ಈ ನತದೃಷ್ಟರಿಗೆ ಆ ಒಂದು ಪರ್ಸೆಂಟ್ ಕೂಡ ಸಿಗಲ್ಲ ಎನ್ನುವುದು ಬಹುತೇಕ ಅನಕ್ಷರಸ್ಥರೇ ಇರುವ ಈ ತಬ್ಬಲಿ ಜಾತಿಗಳಿಗೆ ಗೊತ್ತೇ ಇಲ್ಲ !?
ಪ್ರವರ್ಗ-ಂ ನಲ್ಲಿ ಗುರುತಿಸಿರುವ ಜಾತಿಗಳು ಹಿಂದೆ 101 ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದು, ಇವರಲ್ಲಿ ಒಂದಷ್ಟು ಮುಂದಿದ್ದವರಿಗೆ ಸಾವಿರಕ್ಕೋ ಲಕ್ಷಕ್ಕೋ ಒಮ್ಮೆ ಒಬ್ಬಿಬ್ಬರಿಗೆ ಕನಿಷ್ಠ ನಾಲ್ಕನೇ ದರ್ಜೆಯ ನೌಕರಿಯೋ, ಇಂಜಿನಿಯರಿಂಗ್ ಸೀಟೋ ಸಿಕ್ಕಿಬಿಡುತ್ತಿತ್ತು. ಈಗ ಆ ಸಾಧ್ಯತೆಯೂ ಇಲ್ಲ! ನಾಗಮೋಹನ್‌ದಾಸ್ ವರದಿಯಲ್ಲಿ ಚೆನ್ನದಾಸರ್ ಮತ್ತು ಹೊಲೆಯದಾಸರ್ ರನ್ನು ಸೇರಿಸಿ 79,625 ಜನಸಂಖ್ಯೆ ಇದೆ. ಅಂತೆಯೇ ದಕ್ಕಲಿಗರ ಸಂಖ್ಯೆ ಕೇವಲ 1,364 ಇದೆ. ಮಾಚಾಲರ ಸಂಖ್ಯೆ 101 ಇದೆ. ಹಲಾಲಕೋರ್ ಸೇರಿದಂತೆ ಹತ್ತು ಸಮುದಾಯಗಳ ಸಂಖ್ಯೆ 7,296 ಇದೆ. ದಲಿತರನ್ನು ಛೇಡಿಸಲು ಬಳಸುತ್ತಿದ್ದ ‘ದೇಡ್’ ಮತ್ತಿತರ ನಾಲ್ಕು ಸಮಾನಾಂತರ ಜಾತಿ ಸಂಖ್ಯೆ ಸೇರಿ ಕೇವಲ 24 ಇದೆ! ಹೊಲೆಯದಾಸರ್ ಹೊಲೆಯ ಸಂಬಂಧಿತ ಪ್ರವರ್ಗ-ಅ ನಲ್ಲಿರಬೇಕೋ? ಅಥವಾ ಈ ಅತಿಸೂಕ್ಷ್ಮ ಜಾತಿಗಳೊಂದಿಗಿರಬೇಕೋ..? ಯೋಚಿಸಿ..?
ಬೇಡ/ಬುಡ್ಗ ಜಂಗಮರ ಜನಸಂಖ್ಯೆ 3,22,049 ಇದ್ದದ್ದನ್ನು ನ್ಯಾ.ನಾಗಮೋಹನ್‌ದಾಸ್ ಅವರು ಅತ್ಯಂತ ಕಾಳಜಿ ವಹಿಸಿ 1,44,387 ಕ್ಕೆ ಇಳಿಸಿ ಅವರನ್ನೂ ಕೂಡ ಪ್ರವರ್ಗ-ಂ ಗೆ ಸೇರಿಸಿದ್ದಾರೆ. ಇದಕ್ಕೆ ಯಾವ ಮಾನದಂಡವನ್ನು ಬಳಸಿದ್ದಾರೋ ಗೊತ್ತಿಲ್ಲ. ಬಹುತೇಕ ವೀರಶೈವರೇ ಇರುವ ಬೇಡ/ಬುಡ್ಗಜಂಗಮರು ಈ ಪ್ರವರ್ಗದಲ್ಲಿ ಕೇವಲ ಬೇಡ/ಬುಡ್ಗಜಂಗಮರಿಗಷ್ಟೇ ಅಲ್ಲ ಇಡೀ ಪ್ರವರ್ಗ-ಂ ನಲ್ಲಿರುವ ಐವತ್ತೆಂಟೂ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಾತಿಗಳು ಇಲ್ಲಿ ದಿಕ್ಕಾಪಾಲಾಗುತ್ತವೆ!
ಇದಕ್ಕೆ ಹಿನ್ನೆಲೆಯಾಗಿ 1881 ರಿಂದ ಈ ವರೆಗಿನ ಸಮೀಕ್ಷೆಗಳಲ್ಲಿ ಬೇಡ/ಬುಡ್ಗ ಜಂಗಮರ ಜನಸಂಖ್ಯಾ ಏರಿಳಿತದ ವಿವರಗಳನ್ನು ಗಮನಿಸಿ.. 1881ರಲ್ಲಿ ಕೇವಲ ‘ಬುಡಗ’ ಎಂಬ ಹೆಸರಲ್ಲಿ 326 ಮಂದಿ ಇದ್ದರು. 1901ರಲ್ಲಿ ಆಗಿನ ಹೈದರಾಬಾದ್ ಪ್ರಾಂತದಲ್ಲಿ ಕೇವಲ 3 ಜನ ದಾಖಲಾಗಿದ್ದಾರೆ. 1961 ರಲ್ಲಿ 5,141.. 1971 ರಲ್ಲಿ 13,676, ಅದರಲ್ಲಿ ಏಕದಂ 8,535 ಏರಿಕೆ. 1981ರಲ್ಲಿ 3,135, ದಢೀರ್ 10,541 ಇಳಿಕೆ. 1991ರಲ್ಲಿ 1,21,056, ಹತ್ತು ವರ್ಷಗಳಲ್ಲಿ 1,17,921 ರಷ್ಟು ಗಣನೀಯ ಏರಿಕೆ. 2001ರಲ್ಲಿ 54,873 ಇದ್ದು 66,183 ಇಳಿಕೆ. 2011ರಲ್ಲಿ 1,17,164, ಹತ್ತು ವರ್ಷಗಳಲ್ಲಿ 62,291 ಏರಿಕೆ. 2016ರಲ್ಲಿ ಕರ್ನಾಟಕ ಸರಕಾರದ ಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರ ಪ್ರಕಟಿಸಿದ ‘ಬುಡ್ಗಜಂಗಮ’ ಪುಸ್ತಕದ ಪ್ರಕಾರ ಕೇವಲ 17,383 ಜನಸಂಖ್ಯೆ ಇದೆ. (ಆಧಾರ: ಕರ್ನಾಟಕ ರಾಜ್ಯ ಬೇಡ/ ಬುಡ್ಗಜಂಗಮ್ (ಪ.ಜಾ) ಕ್ಷೇಮಾಭಿವೃದ್ಧಿ ಸಂಘ(ರಿ) ಮುಖ್ಯಮಂತ್ರಿಗಳಿಗೆ ಬರೆದ ಪತ್ರ)
ಇಲ್ಲಿ ಗಂಭೀರವಾಗಿ ಯೋಚಿಸಬೇಕಾದುದು ಬೇಡ/ಬುಡ್ಗ ಜಂಗಮರ ಹೆಸರಲ್ಲಿ ಬಲಿಷ್ಠ ವೀರಶೈವರು ಪಡೆದ ನಕಲಿ ಜಾತಿ ಸರ್ಟಿಫಿಕೇಟ್‌ಗಳ ಅವಾಂತರದ ಕುರಿತು. ಈಚೆಗೆ ಕರ್ನಾಟಕ ಹೈಕೋರ್ಟ್ ಬೇಡ/ಬುಡ್ಗ ಜಂಗಮರೇ ಬೇರೆ, ವೀರಶೈವ ಬೇಡುವ ಜಂಗಮರೇ ಬೇರೆ ಎಂಬ ಸ್ಪಷ್ಟವಾದ ತೀರ್ಪನ್ನೇ ನೀಡಿದೆ. ಕೇವಲ ಸಾವಿರಗಳಲ್ಲಿರುವ ಬೇಡ/ಬುಡ್ಗಜಂಗಮರ ಸಂಖ್ಯೆ ಲಕ್ಷ ದಾಟಿದ್ದು ವೀರಶೈವ ಬೇಡುವ ಜಂಗಮ ಹೆಸರಿನ ನಕಲಿ ಸರ್ಟಿಫಿಕೇಟ್‌ಗಳಿಂದಾಗಿ. ಇದೀಗ ಬೇಡ/ಬುಡ್ಗ ಜಂಗಮರ ವೇಶದಲ್ಲಿರುವ ವೀರಶೈವರನ್ನು ಪ್ರವರ್ಗ-ಂ ಗೆ ಸೇರಿಸಿ ಇವರೊಂದಿಗೆ ನೀವು ಪಾಲು ಪಡೆಯಿರಿ ಎಂದು ಅಸ್ಪಶ್ಯರಿಗೆ ಅಸ್ಪಶ್ಯರಾದ ದಕ್ಕಲಿಗರಿಗೆ, ಮೈಮೇಲೆ ಚಾಟಿಯಿಂದ ಹೊಡಕೊಂಡು ಭಿಕ್ಷೆಬೇಡುವ ಸಿಂದೊಳ್ಳು ದುರ್ಗಾಮುರ್ಗಿಯರಿಗೆ, ಮಲ ಬಾಚುವ ಭಂಗಿ ಹಾಲಾಲಕೋರರಿಗೆ, ಶ್ಮಶಾಣ ಕಾಯುವ ಸುಡುಗಾಡು ಸಿದ್ದರಾದಿಯಾಗಿ ಎಲ್ಲಾ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಜಾತಿಗಳಾದ ತಬ್ಬಲಿಗಳಿಗೆ ಹೇಳಿದರೆ, ಅವರ ನ್ಯಾಯಯುತ ಪಾಲು ಪಡೆಯಲು ಸಾಧ್ಯವೆ? ಆಯೋಗವೊಂದು ಒಳಮೀಸಲಾತಿ ನೀಡುವಾಗ ಕಟ್ಟಕಡೆಯ ಮತ್ತು ಈವರೆಗೂ ಪ್ರಾತಿನಿಧ್ಯವನ್ನೇ ಪಡೆಯದ ಜಾತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸಾಮಾಜಿಕ ಜವಾಬ್ದಾರಿಯಲ್ಲವೆ? ಸದರಿ ಆಯೋಗವೇ ಈ ಅಲೆಮಾರಿ ಜಾತಿಗಳ ಪ್ರಾತಿನಿಧ್ಯರಹಿತ ನಿಕರ ಅಂಕಿಅಂಶ ನೀಡಿದೆ ಆದರೆ ಇವರಿಗೆ ಪ್ರಾತಿನಿಧ್ಯ ನೀಡಬೇಕೆಂದಾಗ ತಾನು ಸಂಗ್ರಹಿಸಿದ ಅಂಕಿಅಂಶವನ್ನೇ ಮರೆತಂತಿದೆ.
ಆಯೋಗವೊಂದರ ಜವಾಬ್ದಾರಿ ಕೇವಲ ಅಂಕಿಅಂಶಗಳ ಮೇಲಾಟಗಳಲ್ಲಿ ಮುಗಿಯುವುದಿಲ್ಲ. ಅನಾಮಿಕ ಸಮುದಾಯಗಳ ಕುರಿತ ಒಳನೋಟ ಬೇಕು, ಅದೆಲ್ಲಕ್ಕಿಂತಲೂ ತಮ್ಮ ಕಣ್ಣಾಚೆಗೆ ಇರಬಹುದಾದ ನತದೃಷ್ಟರನ್ನು ನೋಡುವ ಅಂತಃಕರಣ ಬೇಕು...
ದಲಿತ ಚಳವಳಿಯ ಆರಂಭದಿಂದಲೂ ಒಳಗಿನವನಾಗಿ ಕೆಲವೊಮ್ಮೆ ಹೊರಗಿನವನಾಗಿ ಒಟ್ಟಾರೆ ನಾನೊಬ್ಬ ಚಳವಳಿಯ ಸಂಗಾತಿಯಾಗಿ, ಸಹಪಥಿಕನಾಗಿ ಜತೆಜತೆಗೆ ನಡೆದು ಬರುತ್ತಿದ್ದೇನೆ. ಅಂದು ದಲಿತ ಚಳವಳಿಯ ಭಾಷೆ ಬಾಬಾಸಾಹೇಬರ ಭಾಷೆಯಾಗಿತ್ತು. ‘‘ನಮ್ಮ ಹೋರಾಟ ಕಟ್ಟಕಡೆಯವನಿಗಾಗಿ...’’ ಎಂಬುದೇ ಅಂದಿನ ಅಘೋಷಿತ ಘೋಷವಾಕ್ಯವಾಗಿತ್ತು. ಇದೀಗ ಚಳವಳಿಯ ನಾಯಕರು ನೇರವಾಗಿ, ಸ್ಪಷ್ಟವಾಗಿ ತಮ್ಮ ತಮ್ಮ ದೊಡ್ಡಜಾತಿಗಳೊಂದಿಗೆ ಗುರುತಿಸಿಕೊಂಡು ತಮ್ಮ ಜಾತಿಗಾಗಿ bargain ಮಾಡುತ್ತಿದ್ದಾರೆ! ಒಂದು ಕಾಲದಲ್ಲಿ ದಲಿತನಲ್ಲದ ಕುಂಬಾರ ಶೇಷಗಿರಿಯಪ್ಪನ ಕೊಲೆ ಪ್ರಕರಣವನ್ನು ದಲಿತ ಸಂಘರ್ಷ ಸಮಿತಿ ತನ್ನ ಹೃದಯದಲ್ಲಿ ಹೊತ್ತು ಇಡೀ ನಾಡಿನಾದ್ಯಂತ ಹೋರಾಟ ರೂಪಿಸಿತ್ತು. ಇಂದು ತನ್ನದೇ ಜಾತಿಯ ಮಕ್ಕಳಾದ ದಕ್ಕಲಿಗರು, ಸಿಂದೊಳ್ಳು ವರದಿಯೊಂದರಿಂದ ವಂಚಿತರಾಗಿ ಧ್ವನಿಯಿಲ್ಲದ ತಬ್ಬಲಿಗಳಾಗಿ ಮೂಕವೇದನೆ ಅನುಭವಿಸುತ್ತಿದ್ದರೂ ಕಣ್ಣಿಗೆ ಕೂಡ ಕಾಣದಿರುವಂತೆ ಇರುವುದು ನಿಜಕ್ಕೂ ದುರಂತ..!! ಇನ್ನು ಸರಕಾರವಂತೂ ಇಂತಹ ನತದೃಷ್ಟರನ್ನು ಗಮನಿಸುವಂತೆಯೇ ಇಲ್ಲ. ನಾಗಮೋಹನ್‌ದಾಸ್ ವರದಿಯ ನಂತರ ಕೇವಲ ದೊಡ್ಡ ಜಾತಿಗಳ ಪಾಲುದಾರಿಕೆಯ ಚರ್ಚೆ ಸರಕಾರದ ಪಡಸಾಲೆಗಳಲ್ಲಿ ನಡೆಯುತ್ತಿದೆಯೇ ಹೊರತು ಅಲೆಮಾರಿಗಳ ಅಸಹಾಯಕರ ಕುರಿತು ಪ್ರಸ್ತಾವವೇ ಇಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲೂ ಇವರ ಬಗ್ಗೆ ಚರ್ಚೆ ಇಲ್ಲ. ಇವರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಡಾ. ಅಂಬೇಡ್ಕರ್ ಅವರೇ ಮತ್ತೊಮ್ಮೆ ಹುಟ್ಟಿಬರಬೇಕೇನೋ...?







