ಬಿಹಾರ: ‘ಮಹಾಘಟಬಂಧನ್’ಗೆ ಅದರ ಮಿತಿ ಮತ್ತು ದೌರ್ಬಲ್ಯಗಳೇ ಮುಳುವಾಯಿತೇ?

ತನ್ನದೇ ಬಹಳ ಭಾರವಾದ ಭರವಸೆಗಳ ಬಗ್ಗೆ ಮತದಾರರಲ್ಲಿ ವಿಶ್ವಾಸ ಮೂಡಿಸುವುದು ಸ್ವತಃ ಮಹಾಘಟಬಂಧನ್‌ಗೆ ಕಷ್ಟವಾಯಿತೆ? ಅಥವಾ ಭರವಸೆಗಳನ್ನಷ್ಟೇ ನೀಡಿ, ಅದರ ಬಗೆಗಿನ ಬಿಜೆಪಿಯ ನಿರೂಪಣೆಗಳನ್ನು ಮೀರಿಸುವ ನಿಟ್ಟಿನಲ್ಲಿ ಏನೂ ಮಾಡದೇ ಹೋದದ್ದು ಜನರ ನಂಬಿಕೆ ಕಳೆದುಕೊಳ್ಳಲು ಕಾರಣವಾಯಿತೇ?
ಬಿಹಾರದಲ್ಲಿ ಜನ ಬದಲಾವಣೆ ಬಯಸಿದ್ದಾರೆ ಎನ್ನಲಾಗಿತ್ತು, ಬದಲಾವಣೆ ಬರಲಿದೆ ಎನ್ನಲಾಯಿತು.
ಅದೇ ಬಿಹಾರದ ಜನ 20 ವರ್ಷಗಳಿಂದಲೂ ಬಿಹಾರವನ್ನು ಹಿಡಿದು ಕೂತಿರುವ ಅದೇ ನಿತೀಶ್ ಅವರನ್ನು ಮತ್ತವರ ಮಿತ್ರಪಕ್ಷ ಬಿಜೆಪಿಯನ್ನು ನೆತ್ತಿಮೇಲೇರಿಸಿಕೊಂಡಿವೆ.
ಬಿಹಾರದಲ್ಲಿ ಯಾವುದೇ ಬದಲಾವಣೆ ಬರಲಿಲ್ಲ.
ಬಿಹಾರದಲ್ಲಿ ಮಹಾಘಟಬಂಧನ್ ಹೀನಾಯ ಸೋಲು ಕಂಡಿದೆ.
ಕಳೆದ ಬಾರಿ ಗೆದ್ದಷ್ಟು ಸ್ಥಾನಗಳ ಅರ್ಧದಷ್ಟನ್ನೂ ಉಳಿಸಿಕೊಳ್ಳಲಾರದೆ ಹೋದದ್ದು ನಿಜಕ್ಕೂ ಅದಕ್ಕೆ ಅರಗಿಸಿಕೊಳ್ಳಲಾಗದ ಸ್ಥಿತಿಯಾಗಿದೆ.
ಕೇವಲ 35 ಸ್ಥಾನಗಳಿಗೆ ಕುಸಿದುಬಿದ್ದಿರುವುದು, ಬಹುಶಃ ಬಿಹಾರದಲ್ಲಿನ ಜಾತಿ ಸಮೀಕರಣ ಅದಕ್ಕೆ ಅರ್ಥವೇ ಆಗಿರದ ಒಂದು ವಿಚಿತ್ರ ಅವಸ್ಥೆಯನ್ನೇ ಸೂಚಿಸುತ್ತದೆ.
ಅದು ಎನ್‌ಡಿಎಗಿಂತ ಮೊದಲು ಪ್ರಣಾಳಿಕೆ ಬಿಡುಗಡೆ ಮಾಡಿತು. ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನೂ ಪ್ರಕಟಿಸಿತು. ಎನ್‌ಡಿಎ ಪ್ರಣಾಳಿಕೆ ಎಲ್ಲಿ? ಎಂದು ಸವಾಲು ಹಾಕಿತು. ಆದರೆ ಅಂತಿಮವಾಗಿ ಕದನಕಣದಲ್ಲಿ ಸವಾಲನ್ನೇ ಒಡ್ಡದಿರುವಷ್ಟು ದುರ್ಬಲವಾಗಿ ಕಂಡಿತು ಮತ್ತು ಸದ್ದಿಲ್ಲದೆ ಕುಸಿದು ಹೋಯಿತು.
ಹಾಗಾದರೆ ಎಲ್ಲಿ ಮಹಾಘಟಬಂಧನ್ ಎಡವಿತು?
ಇಡೀ ಮಹಾಘಟಬಂಧನ್ ವಿಚಾರ ಹಾಗಿರಲಿ, ಸ್ವತಃ ಬಿಹಾರ ರಾಜಕಾರಣದ ಹೊಸ ಭರವಸೆ ಎಂಬಂತೆ ಬಿಂಬಿತವಾಗಿದ್ದ ತೇಜಸ್ವಿ ಯಾದವ್ ಕೂಡ ಅಷ್ಟೊಂದು ದಯನೀಯ ಪ್ರದರ್ಶನ ತೋರಿಸುವಂತಾದದ್ದು ಹೇಗೆ? ಜಂಗಲ್ ರಾಜ್ ನಿರೂಪಣೆಯ ಹೊರೆಯೇ ಅದನ್ನು ಅದುಮಿಹಾಕಿತೆ? ಜಾತಿ ಸಮೀಕರಣಗಳನ್ನು ಕಂಡುಕೊಳ್ಳುವಲ್ಲಿ ಅದು ವಿಫಲವಾಯಿತೆ?
ತನ್ನದೇ ಬಹಳ ಭಾರವಾದ ಭರವಸೆಗಳ ಬಗ್ಗೆ ಮತದಾರರಲ್ಲಿ ವಿಶ್ವಾಸ ಮೂಡಿಸುವುದು ಸ್ವತಃ ಅದಕ್ಕೇ ಕಷ್ಟವಾಯಿತೆ? ಅಥವಾ ಭರವಸೆಗಳನ್ನಷ್ಟೇ ನೀಡಿ, ಅದರ ಬಗೆಗಿನ ಬಿಜೆಪಿಯ ನಿರೂಪಣೆಗಳನ್ನು ಮೀರಿಸುವ ನಿಟ್ಟಿನಲ್ಲಿ ಏನೂ ಮಾಡದೇ ಹೋದದ್ದು ಜನರ ನಂಬಿಕೆ ಕಳೆದುಕೊಳ್ಳಲು ಕಾರಣವಾಯಿತೇ?
ಕಡೆಗೆ ಅದರ ದುರ್ಬಲ ಪ್ರಚಾರವೂ ಅದನ್ನು ಹಿಂದಕ್ಕೆ ತಳ್ಳಿತೇ?
ಒಂದೆಡೆ ಬಿಜೆಪಿ ಮುನ್ನೆಲೆಗೆ ತಂದಿರಿಸಿದ ಜಂಗಲ್ ರಾಜ್ ಭೂತದ ನೆರಳು, ಮತ್ತೊಂದೆಡೆ ಪ್ರಮುಖ ಮಿತ್ರಪಕ್ಷಗಳೇ ಏನೂ ಬಲ ತೋರಿಸದೇ ಹೋದದ್ದು ಇಡೀ ಮೈತ್ರಿಕೂಟ ಕ್ಷೀಣಿಸುವಲ್ಲಿ ತನ್ನದೇ ಪಾಲು ನೀಡಿರುವ ಹಾಗಿದೆ.
ಬಿಹಾರ ಮತದಾರರು ಎನ್‌ಡಿಎಯ ಬೇರೆಯೇ ಬಗೆಯ ಜಾತಿ ಲೆಕ್ಕಾಚಾರ ಮತ್ತು ಅಭಿವೃದ್ಧಿ ನಿರೂಪಣೆಗೆ ಆಕರ್ಷಿತರಾದಂತೆ ಕಾಣುತ್ತಿದೆ. ಅದೇ ಹೊತ್ತಲ್ಲಿ ಮಹಾಘಟಬಂಧನ್ ತನ್ನ ಸಾಂಪ್ರದಾಯಿಕ ನೆಲೆಯನ್ನು ಮೀರಿ ಪ್ರಭಾವ ಹೆಚ್ಚಿಸಿಕೊಳ್ಳುವಲ್ಲಿ ವಿಫಲವಾಯಿತೆನ್ನಿಸುತ್ತದೆ.
ಮಹಾಘಟಬಂಧನ್ ಈ ಚುನಾವಣೆ ಎದುರಿಸುವಲ್ಲಿ ಮೊದಲು ಸೋತಿರುವುದೇ, ಆರೆಸ್ಸೆಸ್ ಬಲದ ಬಿಜೆಪಿಯ ಶಿಸ್ತುಬದ್ಧ ಕಾರ್ಯತಂತ್ರಕ್ಕೆ ಪ್ರತಿಯಾದ ಸಮರ್ಥ ತಯಾರಿ ಮಾಡಲಾರದೇ ಹೋದದ್ದು.
ತೇಜಸ್ವಿ ಯಾದವ್ ಅವರ ರಂಗಪ್ರವೇಶವೇ ಬಹಳ ತಡವಾ ದಂತಿತ್ತು. ಮಾತ್ರವಲ್ಲದೆ ಅವರ ಪ್ರಚಾರ ಕೂಡ ಅವರಿಗೇ ಬೇಕಿದ್ದ ಒಂದು ಆಳವಾದ ಒತ್ತಡದಿಂದ ಬಂದದ್ದಾಗದೆ, ಒಂದು ಬಗೆಯಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎನ್ನುವ ಮಟ್ಟಕ್ಕೇ ಉಳಿದುಹೋಯಿತೇ ಎಂತಲೂ ಅನ್ನಿಸುತ್ತದೆ. ಇದು ಸ್ಪಷ್ಟವಾಗಿ ಮಹಾಘಟಬಂಧನ್ ದುರ್ಬಲಗೊಳ್ಳಲು ದೊಡ್ಡ ಕಾರಣವಾಗಿರುವಂತಿದೆ.
ಅವರ ಪ್ರಚಾರ ಭರವಸೆಗಳು ದೊಡ್ಡದಾಗಿದ್ದವು ಮತ್ತು ಬಿಹಾರದ ಜನತೆಗೆ ಬೇಕಾದವುಗಳೇ ಆಗಿದ್ದವು. ಆದರೆ ಮಹತ್ವಾಕಾಂಕ್ಷೆಯ ಆ ಭರವಸೆಗಳ ಬಗೆಗೆ ಜನರಲ್ಲಿ ವಿಶ್ವಾಸ ಮೂಡಿಸಲು ಅಗತ್ಯವಾದ ಏನನ್ನೂ ಮಾಡದೇ ಹೋದದ್ದು ದೊಡ್ಡ ಯಡವಟ್ಟಿಗೆ ಕಾರಣವಾಗಿರುವಂತಿದೆ.
ತೇಜಸ್ವಿ ಯಾದವ್ ತಮ್ಮ ಪ್ರಣಾಳಿಕೆ ಮೂಲಕ ಯುವಕರು ಮತ್ತು ಮಹಿಳೆಯರನ್ನು ಆಕರ್ಷಿಸಲು ಪ್ರಯತ್ನಿಸಿದರು. ಪ್ರತೀ ಕುಟುಂಬದ ಒಬ್ಬ ಸದಸ್ಯನಿಗೆ ಸರಕಾರಿ ಉದ್ಯೋಗ ಮತ್ತು ಮಹಿಳೆಯರಿಗೆ ತಿಂಗಳಿಗೆ 2,500 ರೂ. ನೀಡುವ ಭರವಸೆ ನೀಡಿದರು. ಆದರೆ ಅವರು ಈ ಭರವಸೆಗಳನ್ನು ಹೇಗೆ ಪೂರೈಸುತ್ತಾರೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವಲ್ಲಿ ವಿಫಲರಾದರು.
ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಪ್ರಣಾಳಿಕೆಯನ್ನು ಜನರು ಅಪ್ರಾಯೋಗಿಕ ಎಂದು ಕರೆದರು. ಬಿಹಾರ ಸಾಲದಲ್ಲಿ ಮುಳುಗುತ್ತಿದೆ ಎಂದು ಜನರು ಹೇಳಿದರು. ತೇಜಸ್ವಿ ಯಾದವ್ ಒಂದರ ನಂತರ ಒಂದರಂತೆ ಚುನಾವಣಾ ಭರವಸೆಗಳನ್ನು ನೀಡುತ್ತಿದ್ದಾರೆ, ಅದನ್ನು ಪೂರೈಸುವುದು ಕಷ್ಟ ಎಂದರು.
ಅವರಿಗಿಂತ ಮೊದಲು ಎನ್‌ಡಿಎ ತನ್ನ ಕೆಲ ಭರವಸೆಗಳನ್ನು ಜಾರಿಗೆ ತಂದಿತ್ತು. ಮುಖ್ಯಮಂತ್ರಿಗಳ ಮಹಿಳಾ ಉದ್ಯೋಗ ಯೋಜನೆಯಡಿ ‘ಜೀವಿಕಾ ದೀದಿ’ಗಳ ಖಾತೆಗಳಿಗೆ ರೂ. 10,000 ಜಮಾ ಮಾಡಿದ್ದು ದೊಡ್ಡ ನಿರ್ಧಾರವಾಗಿತ್ತು.
ಅಲ್ಲದೆ, ವೃದ್ಧಾಪ್ಯ ಪಿಂಚಣಿಯನ್ನು ರೂ. 400ರಿಂದ 1,100ಕ್ಕೆ ಹೆಚ್ಚಿಸುವ ಭರವಸೆ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಎನ್‌ಡಿಎ ಪರವಾಗಿ ಮತ ಚಲಾಯಿಸಲು ಪ್ರೇರೇಪಿಸಿತು.
ಮಹಾಘಟಬಂಧನ್ ಪ್ರಣಾಳಿಕೆ ಬಿಡುಗಡೆಯಾದಾಗ, ಅದರಲ್ಲಿ ತೇಜಸ್ವಿ ಮಾತ್ರ ಕಾಣುತ್ತಿದ್ದರು. ‘ತೇಜಸ್ವಿ ಪ್ರಾಣ್’ ಹೆಸರಿನ ಆ ಪ್ರಣಾಳಿಕೆ ಒಂದು ದೊಡ್ಡ ಬದ್ಧತೆಯ ಬಗ್ಗೆ ಮಾತಾಡಿತೆಂಬುದು ಹೌದಾದರೂ, ಅದು ಮೈತ್ರಿಕೂಟದೊಳಗೇ ಇನ್ನಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ಒನ್ ಮ್ಯಾನ್ ಶೋಗಾಗಿನ ತಯಾರಿಯಾಗಿತ್ತೇ? ಗೆದ್ದೇಬಿಟ್ಟರೆ ಮೈತ್ರಿಕೂಟದ ಹಂಗನ್ನೇ ಮೀರಿ ಸ್ಥಾಪಿತವಾಗುವ ಒಳ ಉದ್ದೇಶವೇನಾದರೂ ಇತ್ತೇ?
ಅದೆಲ್ಲವೂ ಹೌದೋ ಅಲ್ಲವೋ, ಆದರೆ ಮೈತ್ರಿಕೂಟದೊಳಗೇ ಒಂದು ಬಗೆಯ ಆಕ್ರಮಣಶೀಲ ಧೋರಣೆಯೊಂದು ಆ ಮೂಲಕ ವ್ಯಕ್ತವಾದ ಹಾಗಿತ್ತು. ಕಡೆಗೆ ತೇಜಸ್ವಿ ಯಾದವ್ ತಮ್ಮದೇ ರಾಘೋಪುರ ಕ್ಷೇತ್ರದಲ್ಲೇ ಒಬ್ಬಂಟಿಯಾಗಿದ್ದಂತಿತ್ತು. ಅವರ ಗೆಲುವು ಅತ್ಯಂತ ಪ್ರಯಾಸದ ಗೆಲುವಾಯಿತು.
ಹೊರಗೆ ಎಲ್ಲರೂ ಚೆಂದ ಎನ್ನುವಂತೆ ಕಂಡಿದ್ದರೂ ಒಳಗೆ ಹುಳುಕುಗಳೇ ತುಂಬಿದ್ದವೆ?
ಇದರ ಸೂಚನೆಗಳು, ಸೀಟು ಹಂಚಿಕೆಯೇ ಒಂದು ಕ್ರಮದಲ್ಲಿ ನಡೆಯದೇ ಹೋದ ರೀತಿಯಲ್ಲಿ ಬಹಳ ಢಾಳಾಗಿಯೇ ಕಂಡಿದ್ದವು.
ತಡವಾದ ಮತ್ತು ಪ್ರತಿಕ್ರಿಯಾತ್ಮಕ ಎನ್ನುವಂತಿದ್ದ ಮಹಾಘಟಬಂದನ್ ವಿಧಾನ ಎನ್‌ಡಿಎಯ ಪೂರ್ವಭಾವಿ ಮತ್ತು ಶಿಸ್ತಿನ ಕಾರ್ಯತಂತ್ರಕ್ಕೆ ಪೂರ್ತಿ ವಿರುದ್ಧವಾಗಿತ್ತು. ಕಡೆಗೆ ಅದು ಮಹಾಘಟಬಂಧನ್ ಮತದಾರರ ನಂಬಿಕೆಯನ್ನೇ ಹೊಡೆದುಹಾಕಿತು. ದೊಡ್ಡ ಪ್ರಮಾಣದ ಮತದಾನ ತಮ್ಮ ಪರವಾದ ಮತದಾನವಾಗಿದೆ ಎಂಬ ತೇಜಸ್ವಿ ನಂಬಿಕೆ ಅವರದೇ ಕ್ಷೇತ್ರದಲ್ಲೂ ಅವರ ಕೈಹಿಡಿಯಲು ಬರಲಿಲ್ಲ.
ಇನ್ನು ಸೀಟು ಹಂಚಿಕೆಯಲ್ಲಿನ ಗೊಂದಲ.
ನಾಳೆ ಮತದಾನ ಎನ್ನುವಾಗಲೂ ಮೈತ್ರಿಕೂಟದ ಪಾಲುದಾರ ಪಕ್ಷಗಳು ಸೀಟು ಹಂಚಿಕೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ. ಕಡೆಗೆ ‘‘ನೀವು ಕಣಕ್ಕಿಳಿಯಿರಿ, ನಾವೂ ಕಣಕ್ಕಿಳಿಯುತ್ತೇವೆ’’ ಎನ್ನುವ ಮಟ್ಟಕ್ಕೆ ಹೋಗಿ, ಅದನ್ನು ಫ್ರೆಂಡ್ಲಿ ಫೈಟ್ ಎಂದು ಹಾಸ್ಯಾಸ್ಪದವಾಗಿ ಕರೆದುಕೊಳ್ಳಲಾಯಿತು.
ಕಡೆಗೆ ಅವು ಖಂಡಿತವಾಗಿಯೂ ಫ್ರೆಂಡ್ಲಿಯಾಗಿರುವುದು ಸಾಧ್ಯವೇ ಇರಲಿಲ್ಲ. ಕಣದಲ್ಲಿರುವಾಗ ಎಲ್ಲರಿಗೂ ತಮ್ಮನ್ನು ಮಾತ್ರ ಸಾಬೀತುಪಡಿಸಿಕೊಳ್ಳುವ ತುರ್ತು ಇದ್ದುದು ಸಹಜವೇ ಆಗಿತ್ತು. ಅದು ಅವರವರದೇ ಮತಗಳನ್ನು ಒಡೆಯಿತು, ಕಾರ್ಯಕರ್ತರಲ್ಲಿನ ಗೊಂದಲಕ್ಕೆ ಕಾರಣವಾಯಿತು ಮತ್ತು ಆ ಮೂಲಕ ಮಹಾಘಟಬಂಧನದ ಎದೆಗೇ ಒದ್ದಹಾಗಿತ್ತು.
2020ರಲ್ಲಿ ತೇಜಸ್ವಿ ಯಾದವ್ ಅಧಿಕಾರಕ್ಕೆ ಬರಲು ಕೇವಲ 12 ಸ್ಥಾನಗಳ ಕೊರತೆ ಇತ್ತು.
ಕೆಲವೇ ಸಾವಿರ ಮತಗಳನ್ನು ಪಡೆದಿದ್ದರೆ, ಅವರು ಅಧಿಕಾರದಲ್ಲಿರುತ್ತಿದ್ದರು. ಆದರೆ ಅದರಿಂದ ಅವರು 2025ರಲ್ಲಿ ಏನು ಕಲಿತರು? ಏನೂ ಇಲ್ಲ. ಕಲಿತಿದ್ದರೆ, ಅವರು 10-12 ಸ್ಥಾನಗಳಿಗಾಗಿ ತಮ್ಮ ನಡುವೆ ಫ್ರೆಂಡ್ಲಿ ಫೈಟ್ ಏರ್ಪಡುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ.
ಆಂತರಿಕ ಪೈಪೋಟಿಯಿಂದಾಗಿ ಪರಿಣಾಮಕಾರಿ ಮತ ವರ್ಗಾವಣೆ ಆಗದೇ ಹೋಯಿತು. ಇದರೊಂದಿಗೆ, ಬಿಹಾರದಂಥಲ್ಲಿನ ಬಹುಪಕ್ಷೀಯ ಸ್ಪರ್ಧೆಯಲ್ಲಿ ಯಾವುದು ಅತ್ಯಗತ್ಯವಾಗಿತ್ತೋ ಅಂಥ ಸಾಧ್ಯತೆಯನ್ನೇ ಮಹಾಘಟಬಂಧನ್ ಕಳೆದುಕೊಂಡಿತ್ತು. ಹಾಗಾಗಿ, ಮಹಾಘಟಬಂಧನ್ ತನ್ನನ್ನು ತಾನು ಬಲವಾದ ಪರ್ಯಾಯವಾಗಿ ಬಿಂಬಿಸಿಕೊಳ್ಳಲು ಸಾಧ್ಯವಾಗದೇ ಸೋತಿತು. ಮೈತ್ರಿಕೂಟದೊಳಗೇ ಇದ್ದ ಇಷ್ಟು ಪ್ರಮಾಣದ ಗೊಂದಲ ಅದರ ಮತದಾರರನ್ನೂ ಗೊಂದಲಕ್ಕೆ ತಳ್ಳಿತು. ಹಾಗಾಗಿ, ಆಡಳಿತ ವಿರೋಧಿ ಮತಗಳ ಸಂಭಾವ್ಯ ಒಗ್ಗೂಡಿಕೆಗೂ ಕಲ್ಲು ಬಿದ್ದಿತ್ತು.
ತೇಜಸ್ವಿ ಯಾದವ್ ಮತ್ತು ಮಹಾ ಮೈತ್ರಿಕೂಟದ ಇತರ ನಾಯಕರು ಸ್ವಲ್ಪವಾದರೂ ಜಾಗರೂಕರಾಗಿದ್ದರೆ, ಅವರು 12 ಸ್ಥಾನಗಳಿಗಾಗಿ ತಮ್ಮೊಳಗೇ ಜಗಳವಾಡುತ್ತಿರಲಿಲ್ಲ. ಆದರೆ ಎಲ್ಲ ಸೇರಿಕೊಂಡು, ಮತದಾರರು ಅಭ್ಯರ್ಥಿಯ ಬಗ್ಗೆ ಗೊಂದಲಕ್ಕೊಳಗಾಗುವ ಸ್ಥಿತಿ ತಂದಿಟ್ಟಿದ್ದರು.
ಕಡೆಗೆ ಅಶೋಕ್ ಗೆಹ್ಲೋಟ್ ಬಂದು ತೇಜಸ್ವಿ ಯಾದವ್ ಅವರನ್ನು ಮಹಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದರು. ಯಾವ ಆಟವೂ ಫಲ ಕೊಡಲಿಲ್ಲ ಮತ್ತು ಈಗ ಆಟವೇ ಮುಗಿದಿದೆ.
ಬಹುಶಃ ಮಹಾಘಟಬಂಧನ್ ಸೋಲಿನ ಬಹಳ ದೊಡ್ಡ ಕಾರಣ, ಸಮೀಕರಣಗಳನ್ನು ಗ್ರಹಿಸುವಲ್ಲಿನ ಅದರ ವಿಫಲತೆ.
ಆರ್‌ಜೆಡಿ 143 ಸ್ಥಾನಗಳಲ್ಲಿ 52 ಸ್ಥಾನಗಳಲ್ಲಿ ಯಾದವ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು.
ಆರ್‌ಜೆಡಿ ತನ್ನ ಮುಸ್ಲಿಮ್-ಯಾದವ್ ಮೈತ್ರಿ ಉಳಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಯಾದವೇತರ ಹಿಂದುಳಿದ ಮತದಾರರನ್ನು ದೂರವಿಟ್ಟಿತು. ಇದು ಇತರ ಜಾತಿಗಳಲ್ಲಿ, ಅದರಲ್ಲೂ ಇಬಿಸಿ ಮತ್ತು ದಲಿತರಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿ ಎನ್‌ಡಿಎ ಇಬಿಸಿ ಮತ್ತು ಮಹಾದಲಿತರನ್ನು ಒಂದುಗೂಡಿಸಿತು. ಅದು ಮಹಾಘಟಬಂಧನ್ ಮತಬ್ಯಾಂಕ್ ಅನ್ನು ಒಡೆಯಿತು.
ತೇಜಸ್ವಿ ಯಾದವ್ ಅವರು ಅಖಿಲೇಶ್ ಯಾದವ್ ಅವರಂತೆ ಪಿಡಿಎ ಜೊತೆ ಬಲವಾದ ಮೈತ್ರಿ ನಿರ್ಮಿಸುವಲ್ಲಿ ವಿಫಲರಾದರು.
ಇನ್ನೊಂದೆಡೆ, ಮಹಾಘಟನಬಂಧನ್ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿಯಾಗಿ ಮತ್ತು ಮುಖೇಶ್ ಸೈನಿ ಅವರನ್ನು ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದು ಮುಸ್ಲಿಮ್ ಸಮುದಾಯದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು. ಕಡೆಗೆ ಹಾನಿ ತಡೆಯಲು ತೇಜಸ್ವಿ ಯಾದವ್ ನಂತರ ಮುಸ್ಲಿಮ್ ಮತ್ತು ಇತರ ಸಮುದಾಯಗಳಿಂದ ಉಪಮುಖ್ಯಮಂತ್ರಿಗಳನ್ನು ನೇಮಿಸುವ ಪ್ರಸ್ತಾವ ಮುಂದಿಟ್ಟರಾದರೂ, ಅದು ಯಾವುದೇ ಪರಿಣಾಮ ಬೀರಲಿಲ್ಲ.
ಅಸದುದ್ದೀನ್ ಉವೈಸಿ ಅವರAIMIM ಮತ್ತೊಮ್ಮೆ ಐದು ಸ್ಥಾನಗಳನ್ನು ಗೆದ್ದಿತು. ಈ ಐದು ಸ್ಥಾನಗಳ ಜೊತೆಗೆ,AIMIM ಇತರ ಹಲವು ಸ್ಥಾನಗಳಲ್ಲಿ ಮಹಾಘಟಬಂಧನ್ ಮತಗಳನ್ನು ಒಡೆದಿದೆ.
ಇನ್ನು, ಮಹಾಘಟಬಂಧನ್ ಕಾರ್ಯತಂತ್ರ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ ಎಂಬ ನಂಬಿಕೆಯ ಮೇಲೆಯೇ ಹೆಚ್ಚು ನಿಂತಂತಿತ್ತು. ನಿತೀಶ್ ಕುಮಾರ್ ಅವರ ಬಗ್ಗೆ ಜನರೇ ಸಿಟ್ಟಾಗಿದ್ದಾರೆ ಎಂದು ಊಹಿಸಿ ಅದು ಕುಳಿತುಬಿಟ್ಟಿತ್ತು. 20 ವರ್ಷಗಳಿಂದ ಅಧಿಕಾರದಲ್ಲಿದ್ದವರನ್ನು ಜನ ಕಿತ್ತುಬಿಸಾಕುತ್ತಾರೆ ಎಂಬ ಉಡಾಫೆಯ ನಂಬಿಕೆಗೆ ಅದು ಗಟ್ಟಿಯಾಗಿ ಅಂಟಿಕೊಂಡಿತ್ತು. ಹಾಗಾಗಿಯೇ, ಜೆಡಿಯು ಮತ್ತು ಬಿಜೆಪಿ ಮತದಾರರ ಪ್ರಮುಖ ವರ್ಗಗಳನ್ನು, ಅದರಲ್ಲೂ ಮಹಿಳೆಯರು ಮತ್ತು ಯುವಕರನ್ನು ಸೆಳೆಯುವ ಯೋಜನೆಗಳನ್ನು ತಂದಾಗಲೂ ಅದೇ ಉಡಾಫೆಯಿಂದಲೇ ನೋಡಲಾಯಿತು.
ಹೀಗಿದ್ದಾಗಲೇ, ಮತದಾರರು ನಿತೀಶ್ ಕುಮಾರ್ ಅವರ ಆಡಳಿತ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಅವರು ಭರವಸೆ ನೀಡಿದ ಸಾಮಾಜಿಕ ಯೋಜನೆಗಳ ಕಾರಣಕ್ಕೆ ಮನ್ನಣೆ ನೀಡಿದ ಹಾಗೆ ಕಾಣುತ್ತದೆ.
ಆಡಳಿತ ವಿರೋಧಿ ಅಲೆ ದುರ್ಬಲಗೊಳ್ಳಲು ಅದು ಕಾರಣವಾಗಿರಬೇಕು. ಸರಕಾರವನ್ನು ಟೀಕಿಸುವುದನ್ನು ಮೀರಿ ಬಲವಾದ ಪರ್ಯಾಯವನ್ನು ನೀಡಲು ಮಹಾಘಟಬಂಧನ್ ವಿಫಲವಾಯಿತು.
ಮಹಾಘಟಬಂಧನ್ ಪಾಲಿಗೆ ದೊಡ್ಡ ಭಾರವಾದದ್ದು ಲಾಲು ಅವರ ಜಂಗಲ್ ರಾಜ್ ನೆರಳು.
ಲಾಲು ಪ್ರಸಾದ್ ಯಾದವ್ ಅವರ ಕಾಲದ ಜಂಗಲ್ ರಾಜ್ ಕಳಂಕ ದೊಡ್ಡ ಭೂತವಾಗಿ ಮಹಾಘಟಬಂಧನ್ ಅನ್ನು ಕಾಡಿತು. ಮತ್ತದು ಖಂಡಿತವಾಗಿಯೂ ಮಹಾಘಟಬಂಧನ್ ಅನ್ನು ಕೆಳಕ್ಕೆ ಎಳೆಯುತ್ತಲೇ ಇತ್ತು.
೧೯೯೦ ರಿಂದ ೨೦೦೫ರವರೆಗಿನ ಅವಧಿಯ ಬಗ್ಗೆ ಹೇಳುವ ಜಂಗಲ್ ರಾಜ್ ನಿರೂಪಣೆಯನ್ನು ಬಿಜೆಪಿ ಪ್ರಬಲ ಅಸ್ತ್ರವಾಗಿ ಬಳಸಿತು. ಲಾಲು ಅವರ ಆಡಳಿತದ ಕಾನೂನುಬಾಹಿರತೆ, ಅತಿರೇಕದ ಅಪರಾಧ ಮತ್ತು ವ್ಯವಸ್ಥಿತ ಆಡಳಿತ ವೈಫಲ್ಯಗಳ ಬಗ್ಗೆ ನೆನಪಿಸಿ ನೆನಪಿಸಿ ಮಹಾಘಟಬಂಧನ್ ಅನ್ನು ಹಣಿಯುವ ಕೆಲಸವನ್ನು ಬಿಜೆಪಿ ಮಾಡಿತು.
ಲಾಲು ಕಾಲದಲ್ಲಿ ಬಿಹಾರ ಕಾನೂನು ಸುವ್ಯವಸ್ಥೆಯಲ್ಲಿ ಕುಸಿತ ಕಂಡಿತ್ತು. ಅಪಹರಣ, ಸುಲಿಗೆ, ಜಾತಿ ಆಧಾರಿತ ಹಿಂಸಾಚಾರ ಮತ್ತು ರಾಜಕೀಯದ ಅಪರಾಧೀಕರಣ ಎಲ್ಲವೂ ಹೆಚ್ಚಾಗಿತ್ತು. ರಾಜ್ಯದ ಆರ್ಥಿಕತೆ ಸ್ಥಗಿತಗೊಂಡಿತ್ತು, ಮೂಲಸೌಕರ್ಯ ಹದಗೆಟ್ಟಿತ್ತು ಮತ್ತು ಕುಖ್ಯಾತ ಮೇವು ಹಗರಣವಂತೂ ಲಾಲು ಅವರ ಬೆನ್ನಿಗೆ ಅಂಟಿಕೊಂಡೇ ಉಳಿದ ಅತಿ ದೊಡ್ಡ ಕಳಂಕವಾಯಿತು.
ವ್ಯಾಪಕ ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗದ ಬಗ್ಗೆ ಬಿಜೆಪಿ ಜಂಗಲ್ ರಾಜ್ ನಿರೂಪಣೆ ಎತ್ತಿಕೊಂಡಾಗ, ಲಾಲು ಅವರ ಸಾಮಾಜಿಕ ನ್ಯಾಯದ ಬಗ್ಗೆ ಒತ್ತಿಹೇಳಲು ತೇಜಸ್ವಿ ಮಾಡಿದ ಯತ್ನಗಳು ಸಾಕಾಗಲಿಲ್ಲ.
ಜಂಗಲ್ ರಾಜ್ ಲೇಬಲ್‌ಗೆ ಅಂಟಿಕೊಂಡಿರುವ ನಕಾರಾತ್ಮಕ ಅರ್ಥಗಳನ್ನು ತೆಗೆದುಹಾಕಲು ತೇಜಸ್ವಿ ಹೆಣಗಾಡಬೇಕಾಯಿತು. ಮತದಾರರಿಗೆ ತೇಜಸ್ವಿಯವರ ಸಂದೇಶಗಳು ಅರ್ಥವಾಗದೇ ಹೋದವು. ಅವರು ಹಳೆಯದೆಲ್ಲವನ್ನೂ ಮೀರಿ ನಿಲ್ಲುತ್ತಾರೆಯೋ ಅಥವಾ ಅದೇ ಹಳೆಯ ಮಾದರಿಗಳನ್ನೇ ಮುಂದುವರಿಸುತ್ತಾರೆಯೋ ಎಂಬುದು ಖಚಿತವಾಗದೇ ಹೋಯಿತು.
ಹೀಗೆ ಜಂಗಲ್ ರಾಜ್ ಭೂತ ಮುಂದಿಟ್ಟುಕೊಂಡು ಹೊರಗಡೆಯಿಂದ ಬಿಜೆಪಿ ಕಾಡುತ್ತಿದ್ದಾಗ, ಒಳಗೆ ಎಲ್ಲವನ್ನೂ ನಿಭಾಯಿಸುವಲ್ಲಿನ ತೇಜಸ್ವಿ ವೈಫಲ್ಯ ಕೂಡ ಇಂದು ಅವರನ್ನು ಈ ಸ್ಥಿತಿಗೆ ತಂದಿಟ್ಟಿದೆ.
ಆರ್‌ಜೆಡಿಯೊಳಗಿನ ಆಂತರಿಕ ಗುಂಪುಗಾರಿಕೆಯನ್ನು ಅವರು ನಿಭಾಯಿಸಬೇಕಾಗಿತ್ತು. ಅದೇ ಹೊತ್ತಲ್ಲಿ ಮಿತ್ರ ಪಕ್ಷಗಳನ್ನು ಒಗ್ಗಟ್ಟಿನಿಂದ ನಿಯಂತ್ರಿಸಬೇಕಾದ ಅಗತ್ಯವೂ ಇತ್ತು. ತೇಜಸ್ವಿ ಇವೆರಡರಲ್ಲೂ ವಿಫಲರಾದರು. ಈ ಆಂತರಿಕ ಕಚ್ಚಾಟ ಮತ್ತು ಅದು ಹೊರಬರದಂತೆ ಸಂಭಾಳಿಸುವಲ್ಲಿನ ತೇಜಸ್ವಿ ವೈಫಲ್ಯ ದೊಡ್ಡ ಹೊಡೆತವಾಯಿತು.ಸ್ಥಿರ ಮತ್ತು ಶಿಸ್ತಿನ ನಾಯಕತ್ವವನ್ನು ಹೆಚ್ಚು ಹೆಚ್ಚು ಹುಡುಕುತ್ತಿದ್ದ ಮತದಾರರು ಬಹುಶಃ ಇದೇ ಕಾರಣಕ್ಕೆ ದೂರವಾದರು.
ಇನ್ನು ಮಹಾಘಟಬಂಧನ್ ಅನ್ನು ಕಾಂಗ್ರೆಸ್ ಮತ್ತು ವಿಐಪಿಯೆರಡೂ ಮುಳುಗಿಸಿಬಿಟ್ಟವೆ ಎಂಬ ಪ್ರಶ್ನೆಯೂ ಏಳುತ್ತದೆ.
ವಿಐಪಿ ಮತ್ತು ಕಾಂಗ್ರೆಸ್‌ನಂತಹ ನಿರ್ಣಾಯಕ ಮಿತ್ರಪಕ್ಷಗಳ ಪ್ರದರ್ಶನ ಅತ್ಯಂತ ಕಳಪೆಯಾಗಿದೆ. ಇದು ಮಹಾಘಟಬಂಧನ್ ಸೋಲಿಗೆ ಗಮನಾರ್ಹವಾಗಿ ಕಾರಣ.
ವಿಐಪಿ ಅಭ್ಯರ್ಥಿಗಳು ಸ್ಪರ್ಧಿಸಿದ ಎಲ್ಲಾ ಸ್ಥಾನಗಳಲ್ಲಿ ಸೋತರು. ಯಾವುದೇ ಅರ್ಥಪೂರ್ಣ ಮತ ಹಂಚಿಕೆ ಅಥವಾ ಸಾಂಸ್ಥಿಕ ಬಲ ತರುವಲ್ಲಿ ವಿಫಲರಾದರು.
ಕಾಂಗ್ರೆಸ್ ಕೂಡ ಬಿಹಾರದಲ್ಲಿ ತನ್ನ ಸೀಮಿತ ನೆಲೆಯ ಕಾರಣದಿಂದಾಗಿ ಮತದಾರರನ್ನು ಸಜ್ಜುಗೊಳಿಸಲು ಅಥವಾ ಎನ್‌ಡಿಎ ವಿರೋಧಿ ಮತಗಳನ್ನು ಸೆಳೆಯಲು ಸಾಧ್ಯವಾಗಲಿಲ್ಲ. ಈ ದುರ್ಬಲತೆ ಮೈತ್ರಿಕೂಟವನ್ನು ಬಲಗೊಳಿಸುವಲ್ಲಿ ಸೋತಿತು ಮತ್ತು ಈ ದೌರ್ಬಲ್ಯವನ್ನು ಎನ್‌ಡಿಎ ಸರಿಯಾಗಿಯೇ ಬಳಸಿಕೊಂಡಿತು.
ತನ್ನ ಮಿತ್ರಪಕ್ಷಗಳನ್ನು ಶಕ್ತಿಯಾಗಿ ಒಗ್ಗೂಡಿಸುವುದು ಮಹಾಘಟಬಂಧನ್‌ಗೆ ಸಾಧ್ಯವಾಗದೇ ಹೋಯಿತು. ಹೀಗಾಗಿ, ಅದಕ್ಕೆ ಬಿಜೆಪಿ ಅಥವಾ ಎನ್‌ಡಿಎ ಹಳ್ಳ ತೋಡಿತು ಎನ್ನುವುದಕ್ಕಿಂತ, ತನ್ನದೇ ಮಿತಿಗಳು ಮತ್ತು ದೌರ್ಬಲ್ಯದಿಂದಾಗಿ ಮಹಾಘಟಬಂಧನ್ ಸ್ವತಃ ತನ್ನ ಹಳ್ಳ ತಾನೇ ತೋಡಿಕೊಂಡಿತೇ ಎಂಬ ಪ್ರಶ್ನೆ ಉಳಿದುಬಿಡುತ್ತಿದೆ.







