ಕಳೆದ ಹದಿನೆಂಟು ದಿನಗಳ ಕುತಂತ್ರಗಳು ಸುಪ್ರೀಂ ಕಣ್ಣಿಗೆ ಕಾಣುವುದೇ?
ಇಂದು ಸುಪ್ರೀಂನಲ್ಲಿ ಬಿಹಾರ SIR ವಿಚಾರಣೆ

ಸಾಂದರ್ಭಿಕ ಚಿತ್ರ (PTI)
ಮತಪಟ್ಟಿ ಪರಿಷ್ಕರಣೆಯ ಹೆಸರಲ್ಲಿ ಚುನಾವಣಾ ಆಯೋಗವು ಬಿಹಾರದಲ್ಲಿ ನಾಗರಿಕತ್ವ ಪರಿಶೀಲನೆಯನ್ನು ಮಾಡುತ್ತಿದೆಯಷ್ಟೆ. ಅದರ ವಿಚಾರಣೆಯೂ 18 ದಿನಗಳ ನಂತರ ಇಂದು ಸುಪ್ರೀಂಕೋರ್ಟು ನಲ್ಲಿ ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಬಾಗ್ಚಿ ಅವರ ಪೀಠದ ಮುಂದೆ ಮುಂದುವರೆಯಲಿದೆ.
ಜುಲೈ 10 ರಂದು ಈ ಅಹವಾಲು ಜಸ್ಟಿಸ್ ಧುಲಿಯಾ ಮತ್ತು ಜಸ್ಟಿಸ್ ಬಾಗ್ಚಿ ಅವರ ಪೀಠದ ಮುಂದೆ ಬಂದಿತ್ತು. (ಜಸ್ಟೀಸ್ ಧುಲಿಯ ಅವರು ಆಗಸ್ಟ್ ನಲ್ಲಿ ನಿವೃತ್ತರಾಗಲಿದ್ದಾರೆ.)
ಆಗ ಇಬ್ಬರೂ ನ್ಯಾಯಾಧೀಶರೂ ಚುನಾವಣಾ ಆಯೋಗಕ್ಕೆ ಕೆಲವು ಗಂಭೀರ ಪ್ರಶ್ನೆಗಳನ್ನು ಕೇಳಿದ್ದರು. ಮತ್ತು ನ್ಯಾಯದ ದೃಷ್ಟಿಯಿಂದ ಜನರ ಬಳಿ ಸಾಮಾನ್ಯವಾಗಿ ಲಭ್ಯವಿರುವ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡುಗಳನ್ನು ಮಾನ್ಯ ಮಾಡಬೇಕೆಂದು ಸಲಹೆ ಮಾಡಿದ್ದರು. ಹಾಗೂ ಚುನಾವಣೆ ಇಷ್ಟು ಸಮೀಪವಿರುವಾಗ ಇಷ್ಟು ದೊಡ್ಡ ಪ್ರಕ್ರಿಯೆ ಅಗತ್ಯವಿತ್ತೇ? ಮತ್ತು ಚುನಾವಣಾ ಆಯೋಗಕ್ಕೆ ನಾಗರಿಕತ್ವ ಪರಿಶೀಲನೆ ಮಾಡುವ ಸಾಂವಿಧಾನಿಕ ಅಧಿಕಾರವಿದೆಯೇ ಎಂಬ ಬಗ್ಗೆ ಆಯೋಗವು ಮಾರುತ್ತರ ಸಲ್ಲಿಸಲು ಸೂಚಿಸಿತ್ತು. .
ಕಳೆದ 18 ದಿನಗಳಲ್ಲಿ ಚುನಾವಣಾ ಆಯೋಗ ಮತ್ತು ಮೋದಿ ಸರ್ಕಾರ ಸುಪ್ರೀಂನ ಯಾವ ಸಲಹೆಗಳನ್ನು ಮನ್ನಿಸಿಲ್ಲ. ಬದಲಿಗೆ ಬಡ-ದಮನಿತರ ನಾಗರಿಕತ್ವವನ್ನು ನಿರಾಕರಿಸುವ ದುಷ್ಟ ಯೋಜನೆಯನ್ನು ಅಡೆತಡೆಯಿಲ್ಲದೆ ಮುಂದುವರೆಸಿದೆ.
ಕಳೆದ 18 ದಿನಗಳಲ್ಲಿ ನಡೆದ ಬೆಳವಣಿಗೆಗಳಿವು :
1. ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಕಾನೂನು ಬಾಹಿರ Special Intensive Revision- SIR - ಕಾರ್ಯಕ್ರಮವು ಇನ್ನೂ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಗೆ ಒಳಪಟ್ಟಿದ್ದರೂ, ಸುಪ್ರೀಂ ಅದರ ಬಗ್ಗೆ ಹಲವು ಆತಂಕಗಳನ್ನು ವ್ಯಕ್ತಪಡಿಸಿದ್ದರೂ, ಚುನಾವಣಾ ಆಯೋಗ ಅರ್ಥಾತ್ ಮೋದಿ ಸರ್ಕಾರ ದೇಶಾದ್ಯಂತ SIR ಮಾಡಲು ಸಿದ್ಧರಿರಬೇಕೆಂದು ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ.
2. ಮತದಾರರ ಪರಿಶೀಲನೆಗೆ ಆಧಾರ್ ಕಾರ್ಡ್ , ರೇಷನ್ ಕಾರ್ಡ್ ಮತ್ತು ವೋಟರ್ ಕಾರ್ಡ್ ಗಳನ್ನೂ ಪರಿಗಣಿಸಬೇಕೆಂಬ ಸುಪ್ರೀಂ ಸಲಹೆಯನ್ನು ಚುನಾವಣಾ ಆಯೋಗ ಸಾರಾ ಸಗಟಾಗಿ ನಿರಾಕರಿಸಿದೆ.
(https://indianexpress.com/article/political-pulse/ec-no-aadhaar-voter-id-ration-card-revision-rolls-10141164/)
3. ತಾನು ಬಿಹಾರದಲ್ಲಿ ಮತಪಟ್ಟಿಗಳ ಯಶಸ್ವಿ Special Intensive Revision- SIR ಮಾಡಿದ್ದೇನೆ ಎಂದು ಸುಪ್ರೀಂನಲ್ಲಿ ಚುನಾವಣಾ ಆಯೋಗ ಸಾಬೀತುಪಡಿಸುವ ಅವಸರದಲ್ಲಿದೆ. ಅದಕ್ಕಾಗಿ ಎಲ್ಲಾ ವಾಮಮಾರ್ಗಗಳನ್ನು ಬಿಹಾರದಲ್ಲಿ ಅನುಸರಿಸುತ್ತಿದೆ..
4. ಆಯೋಗದ ಇತ್ತೀಚಿನ ಹೇಳಿಕೆಯ ಪ್ರಕಾರ ಶೇ. 99ರಷ್ಟು ನೋಂದಣಿ ಆಗಿಬಿಟ್ಟಿದೆ. ಆದರೆ ಈಗಾಗಲೇ ಅಜಿತ್ ಅಂಜುಮ್ ರಂತ ಸ್ವತಂತ್ರ ಯೂಟ್ಯುಬರ್ಸ್ ಗಳು ದಾಖಲೆ ಸಮೇತ ಸಾಬೀತು ಮಾಡಿರುವಂತೆ ಚುನಾವಣಾ ಸಿಬ್ಬಂದಿಗಳು (Block Level Officer- BLO) ಗಳು ಕಚೇರಿಯಲ್ಲೇ ಕೂತುಕೊಂಡು ಅರ್ಜಿ ತುಂಬಿ ಸಹಿಗಳನ್ನು ತಾವೇ ಹಾಕಿದ್ದಾರೆ.
(https://www.youtube.com/watch?v=aRWx8jwzrFU)
ಚುನಾವಣಾ ಆಯೋಗವು ಇದೇ ಕಚೇರಿ ವಿಲೇವಾರಿಯನ್ನು ಆಧರಿಸಿ ಬಿಹಾರದಲ್ಲಿ 2025 ರ ಜನವರಿಯ ನಂತರ ಹತ್ತಾರು ಲಕ್ಷ ಜನ ಸತ್ತಿದ್ದಾರೆ. ಇನ್ನು ಹತ್ತಾರು ಲಕ್ಷ ಜನ ಶಾಶ್ವತವಾಗಿ ಬೇರೆಡೆ ವಲಸೆ ಹೋಗಿದ್ದಾರೆ. ಒಂದೆರೆಡು ಲಕ್ಷ ಜನ ಪತ್ತೆಯಾಗಿಲ್ಲ ಎಂದು ಫರ್ಮಾನು ಹೊರಡಿಸಿದೆ. ಆದರೆ ಅವರ ಹೆಸರು ಮತ್ತು ವಿಳಾಸಗಳನ್ನು ಬಹಿರಂಗಗೊಳಿಸಿಲ್ಲ .
ಇವೆಲ್ಲದರ ಪರಿಣಾಮವಾಗಿ ಬಿಹಾರದಲ್ಲಿ 65-80 ಲಕ್ಷ ಜನರ ಹೆಸರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ನಿಧಾನವಾಗಿ ಅವರ ನಾಗರಿಕತ್ವವನ್ನು ನಿರಾಕರಿಸಲಾಗುತ್ತದೆ.
5. ಆದರೆ ಇದೇ ಚುನಾವಣಾ ಆಯೋಗ 2025 ರ ಜನವರಿಯಲ್ಲಿ ನಡೆಸಿದ ಮತಪಟ್ಟಿ ಪರಿಶೀಲನೆಯಲ್ಲಿ ಕೇವಲ 2 ಲಕ್ಷ ಜನರನ್ನು ಮಾತ್ರ ಸಾವು -ವಲಸೆಯ ಕಾರಣಗಳಿಂದಾಗಿ ಮತಪಟ್ಟಿಯಿಂದ ಕೈಬಿಡಲಾಗಿತ್ತು. 18 ವರ್ಷ ತುಂಬಿದ ಕಾರಣಕ್ಕಾಗಿ ಹೊಸದಾಗಿ 4 ಲಕ್ಷ ಜನರ ಸೇರ್ಪಡೆಯಾಗಿತ್ತು. ಆದರೆ 2025 ರ ನಂತರದ ಆರುತಿಂಗಳಲ್ಲಿ 65 ಲಕ್ಷ ಜನರ ಅನರ್ಹತೆ!
(https://indianexpress.com/article/political-pulse/bihar-sir-phase-1-concludes-65-lakh-voters-likely-to-be-dropped-from-draft-rolls-10149958/)
ಯಾವ ಮೋದಿ ಪವಾಡ ಸಂಭವಿಸಿ ಬಿಹಾರದಲ್ಲಿ ಕೇವಲ ಆರು ತಿಂಗಳಲ್ಲಿ ಹತ್ತು ಪಟ್ಟು ಹೆಚ್ಚು ಸಾವು ಮತ್ತು ವಲಸೆ ಸಂಭವಿಸಿರಬಹುದು ?
6. ಚುನಾವಣಾ ಆಯೋಗ ಈಗ ತಾನು ಮತಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ನಡೆಸುತ್ತಿರುವ ಕಾನೂನು ಬಾಹಿರ ನಾಗರಿಕತ್ವ ಪರಿಶೀಲನೆಗೆ ಯಾವ ಹೊಸ ಕಾರಣಗಳನ್ನೂ ಜುಲೈ 10 ರಂದು ನಡೆದ ವಿಚಾರಣೆಯಲ್ಲಿ ನೀಡಿರಲಿಲ್ಲ. ಆದರೆ ಜುಲೈ 21 ರಂದು ಸುಪ್ರೀಂ ಗೆ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಚುನಾವಣಾ ಆಯೋಗ "...ಒಂದು ಸ್ವತಂತ್ರ ಪರಿಶೀಲನೆಯ ಹಿನ್ನೆಲೆಯಲ್ಲಿ ಒಂದು ದೇಶವ್ಯಾಪಿ SIR ನ ಅಗತ್ಯವನ್ನು ಮನಗಂಡಿತು" ಎಂದು ಹೇಳಿದೆ.
ಆದರೆ ಆ ಸ್ವತಂತ್ರ ಪರಿಶೀಲನೆ ಮಾಡಿದ್ದು ಯಾರು? ಅದರಲ್ಲಿ ಏನಿದೆ? ಇತ್ಯಾದಿಗಳ ಯಾವ ವಿವರವಗಳನ್ನೂ ಅದು ಬಹಿರಂಗ ಪಡಿಸಿಲ್ಲ. ಇದೆ ದೇಶದ ಜನರ ನಾಗರಿಕತ್ವವನ್ನು ಅನುಮಾನಿಸುವಂತ ವರದಿಯನ್ನು ಯಾವುದೇ ಬಹಿರಂಗ ಚರ್ಚೆಗೆ ಒಳಪಡಿಸದೆ ಆಯೋಗ ತನ್ನಷ್ಟಕ್ಕೆ ತಾನೇ ಹೇಗೆ ಅಳವಡಿಸಿಕೊಂಡಿತು?
(https://x.com/AnjaliB_/status/1948684965614395625)
7. ತಾನು ಈಗ ನಡೆಸುತ್ತಿರುವ SIR ಕಾನೂನು ಬದ್ಧವೆಂದೂ ವಾದಿಸಲು ಚುನಾವಣಾ ಆಯೋಗ ತಾನು 2003 ರಲ್ಲೂ ಬಿಹಾರದಲ್ಲಿ ಇದೇ ಬಗೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದೇವೆಂದು ಸಮರ್ಥಿಸಿಕೊಳ್ಳುತ್ತಿದೆ. ಆದರೆ 2003 ರಲ್ಲಿ ರೂಪಿಸಿದ ಪ್ರಶ್ನೆಗಳನ್ನು, ಅದಕ್ಕಾಗಿ ನಡೆಸಿದ ಸಮಾಲೋಚನೆಯ ವಿವರಗಳನ್ನು ನೀಡಲು ಕೇಳಿದರೆ ಚುನಾವಣಾ ಆಯೋಗ ಅವುಗಳು ಲಭ್ಯವಿಲ್ಲವೆಂದು ಉತ್ತರಿಸಿದೆ.
ಮೋದಿ ಸರ್ಕಾರ ಕೇವಲ 20 ವರ್ಷಗಳಷ್ಟು ಹಿಂದಿನ ದಾಖಲೆಗಳು ಪತ್ತೆಯಿಲ್ಲವೆನ್ನುವ ಒಂದು ಸರ್ಕಾರಕ್ಕೆ ಬಡಜನರನ್ನು, ಅನಕ್ಷರಸ್ಥರನ್ನು 60-70 ವರ್ಷಗಳ ಹಿಂದಿನ ದಾಖಲೆಗಳನ್ನು ಒದಗಿಸಬೇಕೆಂದು ಕಡ್ಡಾಯ ಮಾಡುವ ನೈತಿಕತೆ ಇದೆಯೇ ?
8. ಅದೇ ರೀತಿ Reporters Collective ಎಂಬ ಜನಪರ ತನಿಖಾ ವರದಿಗಾರರ ಕೂಟವು ಎರಡು ತಿಂಗಳ ಹಿಂದೆ ಚುನಾವಣಾ ಆಯೋಗ ನಾಗರಿಕತ್ವ ಪರಿಶೀಲನೆಯ ಪ್ರಶ್ನೆ ಕೇಳಬಹುದೇ ಎಂದು ಕಾನೂನು ಇಲಾಖೆಯ ಜೊತೆ ಮಾಡಿದ ಸಮಾಲೋಚನೆಯ ದಾಖಲೆಗಳನ್ನು RTI ಮೂಲಕ ಕೇಳಿದರೆ , ಲಭ್ಯವಿಲ್ಲ ಎಂದು ಉತ್ತರಿಸಲಾಗಿದೆ.
(https://x.com/reporters_co/status/1949297265367241045)
ಇದು ಕಳೆದ ಹದಿನೆಂಟು ದಿನಗಳಲ್ಲಿ ಮೋದಿ ಸರ್ಕಾರ ಮತ್ತು ಚುನಾವಣಾ ಆಯೋಗ ಈ ದೇಶದ ನಾಗರಿಕರ ಭಿಡೆಯಿಲ್ಲದೆ ಮುಂದುವರೆಸಿರುವ ದೂರಗಾಮಿ ಕುತಂತ್ರಗಳ ವರದಿ. ನ್ಯಾಯಪೀಠದಲ್ಲಿ ನ್ಯಾಯವೇ ಕೂತಿದ್ದಾರೆ ಇಂದೇ ಬಿಹಾರದ SIR ರದ್ದಾಗಬೇಕು.
ಆದರೆ ಆಗುವುದೇ? ಬೆಂಚಿನಲ್ಲಿರುವ ಜಸ್ಟಿಸ್ ಸೂರ್ಯಕಾಂತ್ ಅವರು ಭಾರತದ ಮುಂದಿನ ಮುಖ್ಯ ನ್ಯಾಯಾಧೀಶರಾಗಲಿದ್ದಾರೆ. .
ಇದು ಈ ಈ ದೇಶದ ಮತದಾರರ ಅಕ್ರಮ ನಾಗರಿಕತ್ವ ಪರೀಕ್ಷೆ ಮಾತ್ರವಲ್ಲ. ಸುಪ್ರೀಂ ಕೋರ್ಟಿನ ನ್ಯಾಯಬದ್ಧತೆಯ ಪರೀಕ್ಷೆಯೂ ಆಗಿದೆ.
-ಶಿವಸುಂದರ್







