ಬಿಜೆಪಿ, ಜಾತಿಗಣತಿ ಮತ್ತು ಬಾಬಾಸಾಹೇಬರು

ಬಾಬಾ ಸಾಹೇಬರ ಮಾತಿನ ಮೂಲಕವೇ ಶುರು ಮಾಡಿಬಿಡೋಣ. ‘‘ಸಂವಿಧಾನ ಎಷ್ಟೇ ಒಳ್ಳೆಯದಾಗಿರಲಿ ಅದನ್ನು ಅನುಷ್ಠಾನಗೊಳಿಸುವ ಜನ ಕೆಟ್ಟವರಾಗಿದ್ದರೆ ಪರಿಣಾಮ ಕೆಟ್ಟದ್ದೇ ಆಗುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಒಳ್ಳೆಯವರಾಗಿದ್ದರೆ ಅದರಿಂದ ಒಳ್ಳೆಯದೇ ಆಗುತ್ತದೆ’’ ತಾವೇ ರಚಿಸಿದ ಸಂವಿಧಾನವನ್ನು ವಿಶ್ಲೇಷಿಸುವಾಗ ಅಂಬೇಡ್ಕರರು ಹೇಳಿದ ಮಾತಿದು. ಕಟ್ಟಳೆಗಳಿಗಿಂತ, ಅವುಗಳ ಅನುಷ್ಠಾನ ಎಷ್ಟು ಮುಖ್ಯ ಅನ್ನುವುದನ್ನು ಇಲ್ಲಿ ಬಾಬಾಸಾಹೇಬರು ವಿವರಿಸಿದ್ದಾರೆ. ಇದು ಜಾತಿಗಣತಿಗೂ ಅನ್ವಯಿಸುತ್ತದೆ.
ಯಾಕೆಂದರೆ, ಜಾತಿಗಣತಿಯೆಂದರೆ ಕೇವಲ ಜಾತಿಗಳಲ್ಲಿರುವ ಜನರ ಸಂಖ್ಯೆಯನ್ನು ಗಣಿಸುವುದು ಮಾತ್ರವಲ್ಲ; ಆ ಜಾತಿಗಳ ಜನರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಏನು? ಅವರಿಗೆ ಸಿಕ್ಕಿರುವ ಆರ್ಥಿಕ ಸೌಲಭ್ಯಗಳ ಮಟ್ಟ ಎಂತಹದ್ದು? ರಾಜಕೀಯವಾಗಿ ಪ್ರಾತಿನಿಧ್ಯ ಎಷ್ಟಿದೆ? ರಾಷ್ಟ್ರೀಯ ಪ್ರಗತಿಗೆ ಕೊಡುಗೆ ನೀಡುವ ಅವರ ಸಾಮರ್ಥ್ಯವನ್ನು ಎಷ್ಟರಮಟ್ಟಿಗೆ ಹೆಚ್ಚಿಸಲಾಗಿದೆ? ಸಂಪತ್ತು-ಅವಕಾಶಗಳ ಹಂಚಿಕೆಯಲ್ಲಿ ಸಮಾನತೆ ಸಾಧ್ಯವಾಗಿದೆಯೇ? ಹೀಗೆ ನಾನಾ ಆಯಾಮಗಳಿಂದ ವಿಶ್ಲೇಷಣೆಗೆ ಒಳಪಡಿಸುವುದಾಗಿರುತ್ತದೆ.
ಬಿಜೆಪಿ ಇಷ್ಟು ದಿನ ಜಾತಿಗಣತಿಯನ್ನು ವಿರೋಧಿಸುತ್ತಿದ್ದುದೇ ಈ ಕಾರಣಗಳಿಂದಾಗಿ. ಜಾತಿವ್ಯವಸ್ಥೆಯ ಮೂಲಕ ಶ್ರೇಣೀಕೃತ ಅಸಮಾನತೆಯನ್ನು ಪ್ರತಿಪಾದಿಸುವ ಮನುಸ್ಮತಿಯನ್ನು ಅಪಾರವಾಗಿ ಆರಾಧಿಸುವ ಬಿಜೆಪಿ ಮತ್ತು ಸಂಘ ಪರಿವಾರಗಳು ಯಾವತ್ತಿದ್ದರೂ ದಲಿತಾದಿ ಶೂದ್ರರ ಪ್ರಗತಿಯನ್ನು, ಸ್ವಾವಲಂಬನೆಯನ್ನು ಬಯಸುವುದಿಲ್ಲ. ಎಲ್ಲರೂ ಸಮಾನರಾಗಿಬಿಟ್ಟರೆ, ಮನುವಿನ ವರ್ಣಾಶ್ರಮಕ್ಕೆ ಅರ್ಥವೆಲ್ಲಿ? ವರ್ಣಾಶ್ರಮಕ್ಕೆ ಅರ್ಥವಿಲ್ಲವೆಂದ ಮೇಲೆ, ಸನಾತನವಾದಕ್ಕೆ ನೆಲೆಯೆಲ್ಲಿ? ಸನಾತನವಾದಕ್ಕೆ ನೆಲೆಯಿಲ್ಲ ಎಂದಮೇಲೆ, ಧರ್ಮದ ಅಮಲಿನ ರಾಜಕಾರಣಕ್ಕೆ ಜಾಗವೆಲ್ಲಿ? ಧರ್ಮದ ಅಮಲಿನ ರಾಜಕಾರಣಕ್ಕೆ ಜಾಗವಿಲ್ಲದಿದ್ದ ಮೇಲೆ ಬಿಜೆಪಿಗೆ ರಾಜಕೀಯ ಮನ್ನಣೆ ಸಿಗುವುದಾದರೂ ಹೇಗೆ?
ಈ ಕಾರಣಗಳಿಂದಾಗಿ, ಜಾಗತೀಕರಣದ ಕಾಲದಲ್ಲಿ ಅಪ್‌ಡೇಟ್ ಆದಂತೆ ಕಂಡುಬಂದರೂ, ಬಿಜೆಪಿ ಆಂತರ್ಯದಲ್ಲಿ ಶ್ರೇಣೀಕೃತ ಅಸಮಾನತೆಯನ್ನು ಬಯಸುತ್ತದೆ. ಮೂಗಿಗೆ ತುಪ್ಪ ಸವರಿದಂತೆ ಶೂದ್ರರು, ದಲಿತರಿಗೆ ನಾಮ್‌ಕಾವಾಸ್ತೆಯ ರಾಜಕೀಯ ಹುದ್ದೆಗಳನ್ನು ನೀಡಿ, ಅವರ ಮತಗಳ ಮೂಲಕ ಆಡಳಿತಾಧಿಕಾರವನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ, ಸದ್ದಿಲ್ಲದೆ ಮೇಲ್ಜಾತಿಗಳ ಪರವಾದ ತನ್ನ ಅಜೆಂಡಾಗಳನ್ನು ಅನುಷ್ಠಾನಕ್ಕೆ ತರುವಲ್ಲಿ ನಿರತವಾಗಿದೆ. ಇಡಬ್ಲ್ಯುಎಸ್ ಕಾಯ್ದೆ ಮೂಲಕ ಮೇಲ್ಜಾತಿಗಳಿಗೆ ಮೀಸಲಾತಿ ನೀಡಿದ್ದಾಗಲಿ; ಉನ್ನತ ಹುದ್ದೆಗಳಿಗೆ ಹಿಂಬಾಗಿಲ ಪ್ರವೇಶದ ಮೂಲಕ ಮೀಸಲಾತಿಯನ್ನು ಉಲ್ಲಂಘಿಸಲು ಮುಂದಾಗಿದ್ದಾಗಲಿ; ಸರಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣಗೊಳಿಸಿ ಅಲ್ಲಿಯ ನೇಮಕಾತಿಗಳನ್ನು ಮೀಸಲಾತಿಯಿಂದ ಹೊರಗಿಟ್ಟಿದ್ದಾಗಲಿ; ಶಿಕ್ಷಣಕ್ಕೆ ಅನುದಾನವನ್ನು ಕಡಿತಗೊಳಿಸಿ ದುರ್ಬಲ ಸಮುದಾಯದ ಮಕ್ಕಳು ಸಾಕ್ಷರತೆಯಿಂದ ವಂಚಿತರಾಗುವಂತೆ ಮಾಡುತ್ತಿರುವುದಾಗಲಿ; ಶೂದ್ರ ಸಮುದಾಯಗಳ ಬಡವರ ಮಕ್ಕಳೇ ಹೆಚ್ಚಾಗಿ ಸೇರ್ಪಡೆಯಾಗುವ ಸೇನೆಯ ತಳಮಟ್ಟದ ಸಿಪಾಯಿ ನೇಮಕಾತಿಗೂ ‘ಅಗ್ನಿವೀರ್’ ಎಂಬ ಅಭದ್ರ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತಂದಿದ್ದಾಗಲಿ; ಕೃಷಿಕರನ್ನು ನಿರ್ಲಕ್ಷಿಸಿ ಬಂಡವಾಳಶಾಹಿಗಳ ಸಾಲಮನ್ನಾದ ಮೂಲಕ ಆರ್ಥಿಕ ಅಸಮಾನತೆಯನ್ನು ಸೃಷ್ಟಿಸುತ್ತಿರುವುದಾಗಲಿ; ಸಾಮಾಜಿಕ ಭದ್ರತೆಯ ಕಲ್ಯಾಣ ಕಾರ್ಯಕ್ರಮದತ್ತ ನಿರ್ಲಕ್ಷ್ಯವಹಿಸುತ್ತಿರುವುದಾಗಲಿ ಎಲ್ಲವೂ ಸಾಮಾಜಿಕ ಅಸಮಾನತೆಯತ್ತ, ಅರ್ಥಾತ್ ಶ್ರೇಣೀಕೃತ ಮನುವಾದದತ್ತ ಕೊಂಡೊಯ್ಯುವ ಪ್ರಯತ್ನಗಳು. ಮನುಸ್ಮತಿಯ ಮರುಸ್ಥಾಪನೆಯನ್ನು ಇಷ್ಟು ನಾಜೂಕಾಗಿಯೇ ಮಾಡಬೇಕೆನ್ನುವುದು ಸಂಘ ಪರಿವಾರಕ್ಕೆ ತಿಳಿದಿದೆ. ಕಳೆದ ಹತ್ತು ವರ್ಷಗಳಲ್ಲಿ ಅದನ್ನದು ವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದೆ.
ಬಿಜೆಪಿಯ ಮೂಲಕ ಸಂಘ ಪರಿವಾರ ಇಷ್ಟೆಲ್ಲ ಜಾಣತನಗಳಿಂದ ಹಿಮ್ಮುಖ ಹೆಜ್ಜೆಗಳನ್ನು ಕಿತ್ತಿಡುತ್ತಿರುವಾಗ, ಈ ಅಸಮಾನತೆಯನ್ನು ಬೆತ್ತಲಾಗಿಸುವಂತಹ ಜಾತಿಗಣತಿಯ ಬೇಡಿಕೆ ಬಂದಾಗ ಅದು ಸುಮ್ಮನಿರಲಾದೀತೆ? ಖಂಡಿತ ಇಲ್ಲ. ತನ್ನೆಲ್ಲ ಜಾಣ್ಮೆಯನ್ನು ಬಳಸಿ ಅದನ್ನು ಧಿಕ್ಕರಿಸಲು ಯತ್ನಿಸಿದ್ದು ನಿರೀಕ್ಷಿತವಾಗಿತ್ತು. ಯಾಕೆಂದರೆ, ಜಾತಿಗಣತಿ ನಡೆದು ಆಯಾ ಜಾತಿ ಸಮುದಾಯಗಳಿಗೆ ತಮ್ಮ ನೈಜ ಸ್ಥಿತಿಗತಿ ಮನವರಿಕೆಯಾದರೆ ಆಗ ತಮ್ಮ ಈ ಅಸಮಾನತೆಯ ಅಸಲಿ ಆಟ ಅರ್ಥವಾಗುತ್ತದೆ. ಮುಸ್ಲಿಮ್ ದ್ವೇಷ ಮತ್ತು ಹಿಂದುತ್ವದ ಮಂಕುಬೂದಿಯಲ್ಲಿ ಜನರನ್ನು ರಾಜಕೀಯವಾಗಿ ಯಾಮಾರಿಸುವ ತಮ್ಮ ಅಜೆಂಡಾಕ್ಕೂ ಬ್ರೇಕ್ ಬೀಳುತ್ತದೆ. ಅವಕಾಶವಂಚಿತರಾದ ದಲಿತ ಮತ್ತು ಒಬಿಸಿಗಳು ಅವಕಾಶಕ್ಕಾಗಿ ಜಾಗೃತರಾಗಿ, ಬಹುಜನ ಒಕ್ಕೂಟ ಒಗ್ಗೂಡಿದರೆ ಮೇಲ್ಜಾತಿಗಳ ಸೋಷಿಯಲ್ ಇಂಜಿನಿಯರಿಂಗ್ ದುರ್ಬಲಗೊಳ್ಳುತ್ತದೆ. ಅದು ಯಾವತ್ತಿದ್ದರೂ ತಮಗೆ ಅಪಾಯಕಾರಿ ಎಂಬುದು ಬಿಜೆಪಿಗೆ ಗೊತ್ತು. ಹಾಗಾಗಿ ಜಾತಿಗಣತಿಯನ್ನು ಅದು ಉಗ್ರವಾಗಿ ವಿರೋಧಿಸಿತು. ಎಷ್ಟರಮಟ್ಟಿಗೆಂದರೆ, ಸ್ವತಃ ನಮ್ಮ ಪ್ರಧಾನಿಗಳು ಜಾತಿಗಣತಿಯನ್ನು ಅರ್ಬನ್ ನಕ್ಸಲ್ ಹೈಪಾಥಿಸಿಸ್ ಎಂದು ಲೇವಡಿ ಮಾಡುವಷ್ಟರ ಮಟ್ಟಿಗೆ.
ಆದರೆ ಈಗ ಬಿಜೆಪಿ ದಿಢೀರ್ ತನ್ನ ನಿಲುವು ಬದಲಿಸಿಕೊಂಡು ಕೇಂದ್ರ ಸರಕಾರದ ವತಿಯಿಂದಲೇ ಜಾತಿಗಣತಿ ನಡೆಸುವ ನಿರ್ಧಾರ ಪ್ರಕಟಿಸಿದೆ. ಇಲ್ಲೇ ಇರುವುದು ವಿಚಾರ! ಬಿಜೆಪಿ ಯಾಕಿಂತಹ ದಿಢೀರ್ ತೀರ್ಮಾನಕ್ಕೆ ಬಂತು ಅನ್ನುವುದನ್ನು, ಆರಂಭದಲ್ಲಿ ಉಲ್ಲೇಖಿಸಲಾದ ಬಾಬಾ ಸಾಹೇಬರ ಮಾತು ಸ್ಪಷ್ಟವಾಗಿ ವಿವರಿಸುತ್ತದೆ. ಒಳ್ಳೆಯ ಸಂವಿಧಾನವನ್ನೇ ಕೆಟ್ಟ ಜನರು ಕೆಟ್ಟದಾಗಿ ಅನುಷ್ಠಾನಗೊಳಿಸಲು ಸಾಧ್ಯವಿರುವಾಗ, ಜಾತಿಗಣತಿಯನ್ನು ಕೆಟ್ಟದಾಗಿ ನಡೆಸಿ, ಜಾತಿಗಣತಿಯ ಮೌಲ್ಯವನ್ನೇ ಹಾಳುಗೆಡವುವುದು ಕಷ್ಟವೇ? ಈಗ ಬಿಜೆಪಿ ಮಾಡಹೊರಟಿರುವುದು ಇದನ್ನೇ!
ಮನುವಾದಿಗಳ ಚರಿತ್ರೆಯೇ ಇಂತಹದ್ದು. ತಮ್ಮ ಹುನ್ನಾರಗಳಿಗೆ ಸರಿಕಾಣದ ಯಾವುದನ್ನೇ ಆಗಲಿ ನಖಶಿಖಾಂತ ವಿರೋಧಿಸುತ್ತಾರೆ. ಆದರೆ, ಹಾಗೆ ವಿರೋಧಿಸುತ್ತಿರುವ ಅವರ ಧ್ವನಿ ಕ್ಷೀಣಿಸಿ, ಎದುರಾಳಿ ಆಶಯ ಮೇಲುಗೈ ಸಾಧಿಸುತ್ತಿದೆ ಎನ್ನಿಸಿದಾಗ ಅಥವಾ ವಿರೋಧವನ್ನು ಮುಂದುವರಿಸುವುದರಿಂದ ತಮಗೇ ಹೆಚ್ಚು ನಷ್ಟ ಎಂದು ಮನವರಿಕೆಯಾದಾಗ, ನಿಧಾನಕ್ಕೆ ಆ ಆಶಯವನ್ನು ತಮ್ಮ ತೆಕ್ಕೆಯೊಳಗೆ ಸೆಳೆದುಕೊಂಡು, ಅದನ್ನು ಹಂತಹಂತವಾಗಿ ದುರ್ಬಲಗೊಳಿಸಿ, ಅದರ ಮೇಲೆ ತಮ್ಮ ಯಜಮಾನಿಕೆಗಳನ್ನು ಹೇರಿಬಿಡುತ್ತಾರೆ. ಬುದ್ಧನನ್ನು ದೇಶಾಂತರ ಓಡಿಸಿದವರೇ ನಂತರ ಬುದ್ಧ ವಿಷ್ಣುವಿನ ಹನ್ನೊಂದನೇ ಅವತಾರ ಎಂದು ಸೆಳೆದುಕೊಳ್ಳಲು ನೋಡಿದರು; ಮನುವಾದಿ ತರತಮ ಮತ್ತು ಮೌಢ್ಯಗಳನ್ನು ಧಿಕ್ಕರಿಸಿದ ಬಸವಣ್ಣನನ್ನು ದೇವರಾಗಿಸಿ, ಲಿಂಗಾಯತ ಚಳವಳಿಗೆ ಜಾತಿಯ ಪಟ್ಟಕಟ್ಟಿ ತಮ್ಮ ಅಂಕೆಯಲ್ಲಿರಿಸಿಕೊಂಡರು; ಹಿಂದೂಧರ್ಮದೊಳಗಿನ ಶೋಷಣೆಯನ್ನು ಧಿಕ್ಕರಿಸಿ ಸಮಾನತೆಯ ಸಂವಿಧಾನವನ್ನು ರಚಿಸಿದ ಬಾಬಾಸಾಹೇಬರ ಬಗ್ಗೆಯೂ ಈಗೀಗ ವಿಪರೀತ ಕಕ್ಕುಲಾತಿಯನ್ನು ಹರಿಬಿಡುತ್ತಿದ್ದಾರೆ.
ಇದರ ಮುಂದುವರಿದ ಸರಣಿಯೇ ಈ ಜಾತಿಗಣತಿ ಕಥನ. ಜಾತಿಗಣತಿಯನ್ನು ಅಪ್ರೋಪ್ರಿಯೇಟ್ ಮಾಡಿಕೊಂಡು ಅದರ ಮೂಲ ಆಶಯವನ್ನೇ ಗೌಣವಾಗಿಸಿ, ಅದನ್ನೊಂದು ಜಾತಿ ಜನಸಂಖ್ಯೆಗೆ ಸೀಮಿತಗೊಂಡ ಸೆನ್ಸಸ್ ಆಗಿಸುವುದು ಬಿಜೆಪಿಯ ಹುನ್ನಾರ. ಕಾಂಗ್ರೆಸ್‌ನ ರಾಹುಲ್ ಗಾಂಧಿ ರಾಷ್ಟ್ರಮಟ್ಟದಲ್ಲಿ ಜಾತಿಗಣತಿಯನ್ನು ಪ್ರಸ್ತಾವಿಸಿದ ನಂತರ, ಅದೊಂದು ಪೊಲಿಟಿಕಲ್ ಸ್ಟ್ರಾಟಜಿಯಾಗಿ ಬದಲಾಗಿದೆ ಮತ್ತು ಅದಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಸಿದ್ದರಾಮಯ್ಯನವರ ಸರಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಬಹಿರಂಗಪಡಿಸುವ ತಯಾರಿಯಲ್ಲಿದ್ದು, ಅದರ ನಂತರ ಜಾತಿಗಣತಿ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಚರ್ಚೆಗೆ ಈಡಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜಾತಿಗಣತಿಯನ್ನು ತಾವು ಯಥಾ ಪ್ರಕಾರ ವಿರೋಧಿಸುತ್ತಾ ಕೂತರೆ, ಈಗಾಗಲೇ ಬೇರೆಬೇರೆ ಕಾರಣಕ್ಕೆ ತಮ್ಮಿಂದ ದೂರವಾಗುತ್ತಿರುವ ಒಬಿಸಿ ಮತ್ತು ದಲಿತ ಮತಗಳು ತಮ್ಮ ಮೇಲೆ ಮತ್ತಷ್ಟು ಅಪನಂಬಿಕೆ ತಳೆಯಬಹುದು; ಇದು ರಾಜಕೀಯವಾಗಿ ಒಳ್ಳೆಯ ಬೆಳವಣಿಗೆಯಾಗಲಾರದು ಎಂಬುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಮನವರಿಕೆ ಆದಂತಿದೆ. ಕಾಂಗ್ರೆಸ್‌ನವರೋ ಅಥವಾ ಮತ್ತ್ಯಾವುದೋ ಪಕ್ಷವೋ ಜಾತಿಗಣತಿ ನಡೆಸಿ ಅಥವಾ ನಡೆಸುತ್ತೇವೆಂದು ಆಶ್ವಾಸನೆ ನೀಡಿ, ಅದು ರಾಜಕೀಯವಾಗಿ ತಮಗೆ ಮುಳುವಾಗುವ ಬದಲು, ತಮಗೆ ಮುಳುವಾಗಬಹುದಾದ ಸತ್ಯಸಂಗತಿಗಳನ್ನು ಬದಿಗಿರಿಸಿ, ಕೇವಲ ಜನಸಂಖ್ಯೆಗೆ ಸೀಮಿತವಾಗಿಸಿದ ಒಂದು ದುರ್ಬಲ ಜಾತಿಗಣತಿಯನ್ನು ತಾವೇ ನಡೆಸಿ, ಜಾತಿಗಣತಿಯ ಪರಿಣಾಮವನ್ನೇ ನಗಣ್ಯವಾಗಿಸುವುದು ಬಿಜೆಪಿ-ಸಂಘ ಪರಿವಾರದ ಯೋಜನೆ. ಜಾತಿಗಣತಿಯನ್ನು ಅನುಷ್ಠಾನಗೊಳಿಸುವವರು ಅವರೇ ಆಗಿರುವುದರಿಂದ, ತಮ್ಮ ಮೂಗಿನ ನೇರಕ್ಕೆ ಅದನ್ನು ಆಯೋಜಿಸುವುದು ಬಿಜೆಪಿಗೆ ಕಷ್ಟವೇನೂ ಆಗಲಾರದು. ಹೇಗೂ ಪಿ.ಆರ್. ಮ್ಯಾನೇಜ್‌ಮೆಂಟ್ ವಿಚಾರದಲ್ಲಿ ಮೀಡಿಯಾಗಳ ಸಹಕಾರ ಬಿಜೆಪಿಗೆ ಇದ್ದೇ ಇದೆ.
ಇದನ್ನೇ ಬಾಬಾ ಸಾಹೇಬರು ಹೇಳಿದ್ದು, ಅನುಷ್ಠಾನಗೊಳಿಸುವವರು ಕೆಟ್ಟವರಾಗಿದ್ದರೆ ಒಳ್ಳೆಯದನ್ನೂ ಕೆಟ್ಟದಾಗಿ ಮಾಡಿಮುಗಿಸಬಹುದು ಅಂತ.
ಅಂದಹಾಗೆ, ಬಿಜೆಪಿ ಹೇಳಿದಂತೆ ಜಾತಿಗಣತಿಯನ್ನು ನಡೆಸಿಯೇ ಬಿಡುತ್ತದೆಯೇ? ಎನ್ನುವುದರ ಬಗ್ಗೆಯೇ ಸಾಕಷ್ಟು ಅನುಮಾನವಿದೆ. ಪಹಲ್ಗಾಮ್ ದಾಳಿಯ ನಂತರ ಕೇಂದ್ರ ಸರಕಾರದ ಭದ್ರತಾ ವೈಫಲ್ಯದ ವಿರುದ್ಧ ಭುಗಿಲೇಳಬಹುದಾದ ಜನಾಕ್ರೋಶವನ್ನು ಡೈವರ್ಟ್ ಮಾಡಲು ಅಥವಾ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಜಾತಿಗಣತಿಯನ್ನು ಬಿಜೆಪಿ ಒಂದು ಅಸ್ತ್ರವಾಗಿ ಪ್ರಯೋಗಿಸಿದೆ ಎನ್ನುವ ವಾದಗಳನ್ನು ತಳ್ಳಿಹಾಕಲಾಗುವುದಿಲ್ಲ. ಅಕಸ್ಮಾತ್, ಈ ವಾದಗಳನ್ನೆಲ್ಲ ಹುಸಿಗೊಳಿಸುವಂತೆ ಬಿಜೆಪಿ ಜಾತಿಗಣತಿ ನಡೆಸಿದರೂ ಅದೊಂದು ದುರ್ಬಲ ಪರಿಣಾಮದ ಜಾತಿ-ಜನ-ಸಂಖ್ಯೆಯ ಗಣತಿಯಾಗಿರುತ್ತದಷ್ಟೆ!







